ಅನಾವರಣ ಹನಿಯೊಡೆಯುತಿದೆ

ಲೇಖಕಿ ಜಯಲಕ್ಷ್ಮಿ ಪಾಟೀಲ್ ಅವರ ‘ಹನಿಯೊಡೆಯುತಿದೆ’ ಕೃತಿಯಲ್ಲಿ ಒಟ್ಟು ನಲವತ್ತು ಕವನಗಳಿವೆ. ಈ ಸಂಕಲನದಲ್ಲಿ ಹತಾಶ, ನೋವು, ಹಿಂಸೆ, ತಲ್ಲಣ, ನಿರೀಕ್ಷೆ, ವಿಷಾದ, ವ್ಯಂಗ್ಯ, ಮನುಷ್ಯನ ಸಣ್ಣತನ,ಆಕ್ರೋಶಗಳೆಲ್ಲರ ಸಂಕೀರ್ಣ ಭಾವಕೋಶಗಳು ಇಲ್ಲಿ ಎಳೆಎಳೆಯಾಗಿ ಅನಾವರಣಗೊಂಡಿವೆ. ಈ ಕೃತಿಯ ಕುರಿತು ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಹನಿಯೊಡೆಯುತಿದೆ
ಲೇಖಕರು : ಜಯಲಕ್ಷ್ಮಿ ಪಾಟೀಲ್
ಪ್ರಕಾರ : ಕವನ ಸಂಕಲನ

ಹಿರಿಯ ಸಹೋದರಿಯಂತಿರುವ ಜಯಲಕ್ಷ್ಮಿ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಎರಡು ಕೃತಿಗಳನ್ನು ಕಿರಿಯ ಕತೆಗಾರ ಮಿತ್ರ ಅನಿಲ್ ಗುನ್ನಾಪುರ ಅವರ ಕೈಯಲ್ಲಿ ಓದಲು ಕೊಟ್ಟು ಕಳಿಸಿದ್ದರು. ಅನಿಲ್ ಈಗ ಕೆಲವು ದಿನಗಳ ಹಿಂದೆಯಷ್ಟೇ ಅವುಗಳನ್ನು ನನಗೆ ತಲುಪಿಸಿದಾಗ ಕಾರ್ಯಗಳ ಒತ್ತಡದಲ್ಲಿ ಓದುವುದು ವಿಳಂಭವಾಯಿತು. ಆ ಎರಡು ಕೃತಿಗಳಲ್ಲಿ ಅವರ ಕವನ ಸಂಕಲನವನ್ನು ಓದಿ ನಾನು ಅನುಭವಿಸಿದ ಅನುಭೂತಿಯನ್ನು ತಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಈಗಾಗಲೇ ಸಿನಿಮಾ, ಕನ್ನಡ ರಂಗಭೂಮಿ, ಕಿರುತೆರೆ ಅಭಿನೇತ್ರಿಯಾಗಿ ಜೊತೆಗೆ ಕವಿ, ಕಾದಂಬರಿಗಾರ್ತಿಯಾಗಿರುವ ಜಯಲಕ್ಷ್ಮಿ ಪಾಟೀಲ್ ಅವರ “ಹನಿಯೊಡೆಯುತಿದೆ” ಕವನ ಸಂಕಲನದ ಕಾವ್ಯಗಳನ್ನು ಕುರಿತು ‘ಇವು ಅಪ್ಪಟ ಹೆಣ್ಣಿನ ಕವಿತೆಗಳು. ಇದು ಮಿತಿಯಲ್ಲ, ಬೇಲಿಯೂ ಅಲ್ಲ.ಇದೇ ಈ ಸಂಕಲನದ ವಿಶೇಷ ಶಕ್ತಿ ಮತ್ತು ಸೌಂದರ್ಯ. ಹೆಣ್ಣಿನ ಅಪರಿಮಿತೆಯನ್ನು ಹೆಣ್ಣು ತಾನೇ ಕಾಣಲು ಉದ್ಯುಕ್ತವಾದ ಜೀವಕೋಶದ ಧಾತು ಇಲ್ಲಿನ ಕವಿತೆಗಳಲ್ಲಿ ಮಿಡಿಯುತ್ತದೆ. ಈ ಕವಿತೆಗಳು ಹೆಣ್ಣಿನ ಕಾವ್ಯದ ಅನನ್ಯತೆಯನ್ನು ಎತ್ತಿ ಹಿಡಿಯುವಂತೆಯೇ ಅವರೊಳಗೆ ಇನ್ನೂ ಅಡಗಿರುವ ಕಾವ್ಯದ ದಿಕ್ಸೂಚಿಯೂ ಆಗಿದೆ’ ಎಂಬ ಖ್ಯಾತ ವಿಮರ್ಶಕಿಯರಾದ ಡಾ. ಎಂ.ಎಸ್. ಆಶಾದೇವಿಯವರ ಬೆನ್ನುಡಿಯ ಮಾತುಗಳು ಇಲ್ಲಿನ ಕವನಗಳ ವಿಶಿಷ್ಟ ವ್ಯಾಖ್ಯಾನದಂತಿವೆ. ಆ ಕಾರಣದಿಂದಲೇ ಇಲ್ಲಿನ ಕಾವ್ಯಗಳನ್ನು ಓದುತ್ತಾ ಹೋದಂತೆ ಹೆಣ್ಣಿನ ಮನೋವ್ಯಾಪಾರದ ಅಂತರ್ಗತ ಸಂವೇದನೆಗಳು, ಮನಸಿನಾಳದ ತುಮುಲ, ಭಾವತುಡಿತ ದರ್ಶಿಸುವಂತೆ ಮಾಡಿ ಆ ವಿಶಿಷ್ಟ ಅನುಭೂತಿ ಸಹಜವಾಗಿ ಆಗುತ್ತದೆ.

ಇಲ್ಲಿನ ಬಹುತೇಕ ಕವನಗಳ ಮಹಿಳಾ ಸಂವೇದನೆ,ವಿಡಂಬನೆ ಮತ್ತು ಶೋಷಿತ ಮಹಿಳಾ ಧ್ವನಿಶಕ್ತಿಯಾಗಿ ಅನುರಣನಿಸುತ್ತವೆ. ಜೊತೆಗೆ ಇಲ್ಲಿನ ಹೆಚ್ಚಿನ ಕವನಗಳು ಮಹಿಳೆಯರ ಮೇಲೆ ಅಹಮಿಕೆಯ ಗತ್ತಿನಲ್ಲಿ, ರೂಢಿಗತ ಸಂಪ್ರದಾಯಗಳ ನೆಪದಲ್ಲಿ ನಡೆಯುತ್ತಿರುವ ಅನ್ಯಾಯ, ಶೋಷಣೆ, ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಯ ದೊಂದಿಯಾಗಿ ಉರಿಯುತ್ತಿವೆ. ಕೆಲವೊಮ್ಮೆ ಹಿರಿಯರ ಆದರ್ಶ, ಮಾದರಿ ನಡೆ ಮರೆತ ಹತಾಶೆಯ ಭಾವಗಳ ನಂದುತ್ತಿರುವ ಮಿಣುಕು ಬೆಳಕಾಗಿ ಗೋಚರಿಸುತ್ತವೆ. ಸ್ತ್ರೀಪರ ಕಾಳಜಿ, ಕಳಕಳಿಯ ಇಲ್ಲಿನ ಕಾವ್ಯಗಳನ್ನು ಸಹಜವಾಗಿ ಸಹೃದಯರು ಮೆಚ್ಚದೆ ಇರಲಾರರು . ಯಾಕೆಂದರೆ ಕನ್ನಡದ ಲಾಕ್ಷಣಿಕಾರರಲ್ಲಿ ಒಬ್ಬರಾದ ಭಾಮಹ “ವಿಧವಿಧವಾದ ಬಹುರೂಪಿಯಾದ ಕಾವ್ಯವನ್ನು ವಿಶ್ವಪುರುಷನಿಗೆ ಹೋಲಿಸುವುದು ಎಷ್ಟು ನ್ಯಾಯ? ಅದನ್ನು ಓದುಗರು ನಿರ್ಧರಿಸಲಿ”ಎಂದು ಹೇಳಿದ್ದಾನೆ. ಹಾಗೆಯೇ ಜಯಲಕ್ಷ್ಮಿ ಪಾಟೀಲ್ ಅವರ ಕಾವ್ಯಗಳನ್ನು ಓದುತ್ತಾ ಹೋದಂತೆ ಕವಿಯ ಆಶಯವನ್ನು ಮತ್ತು ಯಾವುದೇ ಸಿದ್ಧಪ್ರಕಾರಕ್ಕೆ ಬೆನ್ನು ಹತ್ತದೆ ಜೊತೆಗೆ ರೂಢಿಗತ ಕಾವ್ಯ ಸಂಪ್ರದಾಯಕ್ಕೆ ಸೀಮಿತವಾಗದೆ ತಮ್ಮದೆ ಶೈಲಿಯನ್ನು ರೂಢಿಸಿಕೊಂಡು ಓದುಗರಿಗೆ ಆಪ್ತವಾಗುತ್ತಾ ಹೋಗುತ್ತಾರೆ. ಆ ಕಾರಣದಿಂದ ಬರುವ ದಿನಗಳಲ್ಲಿ ಈ ಕವಿಯಿಂದ ಇನ್ನಷ್ಟು ಸಶಕ್ತ ಕವನಗಳನ್ನು ಖಂಡಿತವಾಗಿ ಸಹೃದಯರು ನಿರೀಕ್ಷಿಸಬಹುದು.

ಒಟ್ಟು ನಲವತ್ತು ಕವನಗಳ ಈ ಸಂಕಲನದ ಕವನಗಳಲ್ಲಿ ಹತಾಶೆ, ನೋವು, ಹಿಂಸೆ, ತಲ್ಲಣ, ನಿರೀಕ್ಷೆ, ವಿಷಾದ, ವ್ಯಂಗ್ಯ, ಮನುಷ್ಯನ ಸಣ್ಣತನ, ಆಕ್ರೋಶಗಳೆಲ್ಲರ ಸಂಕೀರ್ಣ ಭಾವಕೋಶಗಳು ಇಲ್ಲಿ ಎಳೆಎಳೆಯಾಗಿ ಅನಾವರಣಗೊಂಡಿವೆ. ಓದುಗ ಒಂದೊಂದು ಕವನವನ್ನು ಓದುತ್ತಾ ಓದುತ್ತಾ ಭಿನ್ನ ಅನುಭೂತಿಗೆ ಒಳಗಾಗುತ್ತಾನೆ. ಓದುಗನಲ್ಲಿ ಅಂಥ ಭಾವ ಪಲ್ಲಟಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಸ್ಥಾಯಿಭಾವ ಮೂಡಿಸಿದರೆ, ಮತ್ತೊಮ್ಮೆ ಸಂಚಾರಿ ಭಾವಗಳಿಗೆ ಮುಕ್ತವಾಗುತ್ತವೆ.

ಕಳೆದುಕೊಂಡಿದ್ದೇನೆ ನಿಜ ಚಹರೆ
ಮುಖವಾಡಗಳ ರಾಶಿಯಲಿ
ಒಬ್ಬೊಬ್ಬ ವ್ಯಕ್ತಿಯಿದಿರು ಒಂದೊಂದು ವೇಷ
ಒಂದೊಂದು ಪ್ರಸಂಗಕ್ಕೊಂದೊಂದು ಭಾಷೆ
ಹತ್ತು ಹಲವಾರು ಮುಖಗಳು ನನ್ನ ಮೆದುಳಿನ
ಪದರು ಪದರಿನಲಿ ಒಮ್ಮೊಮ್ಮೆ
ಕಪಾಟಿನ್ನು ಓರಣಗೊಳಿಸಲು ಹಿರಿದೆಳೆದಂತೆ
ಬಟ್ಟೆಗಳನ್ನು ಹರಡಿಕೊಳ್ಳುತ್ತೇನೆ ನನ್ನಿದಿರು
ಬಗೆಬಗೆಯ ಮುಖಗಳು
ಯಾರ್ಯಾರ ಮುಂದೆ ಯಾವ್ಯಾವ ಮುಖವಾಡ
ಧರಿಸಿದ್ದೆನೆಂಬುದು ನನಗಷ್ಟೆ ಗೊತ್ತು
ತೊಟ್ಟ ಒಳ ಉಡುಪಿನ ಬಣ್ಣ ಅವರವರಿಗಷ್ಟೆ ಗೊತ್ತಿರುವಂತೆ ..

ಎಂಬ ‘ನಿರ್ವಾಣ’ ಕಾವ್ಯದ ಸಾಲುಗಳು ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸಮಯಕ್ಕನುಸಾರವಾಗಿ ಬದಲಾಗುವ ಮಾತಿನ ವರಸೆ, ಗಂಟೆಗೊಮ್ಮೆ, ದಿನಕ್ಕೊಂದೊಂದು ಹಾಕಿಕೊಳ್ಳುವ ಛದ್ಮವೇಷಗಳನ್ನು ಹೇಳುವುದರೊಂದಿಗೆ ಮನುಷ್ಯನ ಇಂದಿನ ಮನಸ್ಥಿತಿಯನ್ನು ಅನಾವರಣಗೊಳಿಸುವ ಮತ್ತು ಮನುಷ್ಯನ ವ್ಯಕ್ತಿತ್ವವನ್ನು ವಿಡಂಬಿಸುವ ಕವಿತೆಯಾಗಿ ಸೆಳೆಯುತ್ತದೆ.

ಮನುಷ್ಯನ ಹೃದಯದಲ್ಲಿ ಮನೆ ಮಾಡಿರುವ ಎದುರಿನ ವ್ಯಕ್ತಿಗೆ ಬಣ್ಣವೆರಚುವ ಸ್ವಭಾವವನ್ನು ತೋರಿಸುತ್ತ ಮನುಷ್ಯನ ಒಳಮುಖಗಳನ್ನು ಬಯಲು ಮಾಡುತ್ತದೆ.

ನಿಮ್ಮ ಸ್ವಚ್ಛ ಪಾರದರ್ಶಕ ಕನ್ನಡಕ
ಎತ್ತಿಡುವ ಸಮಯವಿದು ಬಾಪು
ಬಣ್ಣಬಣ್ಣದ ಕನ್ನಡಕಗಳು ಈಗ
ಎಲ್ಲವೂ ಈಸ್ಟಮನ್ ಕಲರ್
ನಿಮ್ಮ ಕೋಲನ್ನೂ ಎತ್ತಿಡುವ ತಾಕಿತ್ತಿಲ್ಲದ
ನಾವು ಹತ್ತಿ ಮಾತಲ್ಲಿ ತೂಗುತ್ತಿದ್ದೇವೆ
ನೀವಿನ್ನೂ ಚಲಾವಣೆಯಲ್ಲಿದ್ದಿರಿ ನೋಟಾಗಿ
ಮೋಟು ಗೋಡೆ ಹಾರಲಾರದ ನಾವು
ನೋಟಿನಲ್ಲಿ ಸಹಿಸಲಾರೆವು ನಾವು

ಗಾಂಧಿ ತತ್ವಗಳನ್ನು ಈಗಾಗಲೇ ಗಾಳಿಗೆ ತೂರಿರುವ ನಾವುಗಳು ಅವರ ಕೋಲನ್ನು ಎತ್ತುವಂಥ ಸಾಮರ್ಥ್ಯ ಇಲ್ಲದಿದ್ದರೂ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಅವರ ಮಾದರಿ ನಡೆ , ಆದರ್ಶಗಳನ್ನು ಕೇವಲ ನಾಲಿಗೆ ಮೇಲೆ ಇಟ್ಟುಕೊಂಡು ನಡೆಯುವಂಥ ಆಷಾಢಭೂತಿತನವನ್ನು ‘ನಾವು ಮತ್ತು ಗಾಂಧಿ’ ಕಾವ್ಯದಲ್ಲಿ ಕಾಣಬಹುದು.

ಮನುಷ್ಯನು ಕೇವಲ ಬಾಯಿಮಾತಿನಲ್ಲಿ ಬುದ್ಧ,ಬಸವ,ಗಾಂಧಿ ಅವರ ಆಚಾರ, ವಿಚಾರಗಳನ್ನು ಬೋಧಿಸುತ್ತಿದ್ದಾನೆ ಹೊರತು ಅವುಗಳ ಪಾಲನೆಯನ್ನು ಸ್ವತಃ ಮಾಡದೆ ಡಾಂಭಿಕತೆಯ ಸೋಗಿನಲ್ಲಿ ಇದ್ದಾನೆ ಎಂಬು ವುದನ್ನು ತುಂಬಾ ಮಾರ್ಮಿಕವಾಗಿ ತಮ್ಮ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ಹೂವೆ ಅಂದರು ನಿನ್ನ ಹಲ್ಲುಬಿಟ್ಟೆ ನೀನು
ಹೆಡೆಮುರುಗಿ ಕಟ್ಟಿದಾಗ ಕಣ್ಕಣ್ಣ ಬಿಟ್ಟೆ
ಹೆಣ್ಣೆ ಹೆಡೆಮುರುಗಿ ಕಟ್ಟಿದಾಗ ಕಣ್ಕಣ್ಣ ಬಿಟ್ಟೆ
ಹೊನ್ನು ಅಂದರು ನಿನ್ನ ಹಿಗ್ಗಿಬಿಟ್ಟೆ ನೀನು
ಹೊಸ್ತಿಲ ಸೆರೆ ಕಂಡು ಗೋಳಿಟ್ಟೆ
ಹೆಣ್ಣೆಹೊಸ್ತಿಲ ಸೆರೆ ಕಂಡು ಗೋಳಿಟ್ಟೆ…

ತಲೆತಲಾಂತರದಿಂದಲೂ ಅನೂಚಾನವಾಗಿ ಮಹಿಳೆಯ ಮೇಲೆ ನಡೆದುಕೊಂಡು ಬಂದಿರುವ ಶೋಷಣೆ, ದಬ್ಬಾಳಿಕೆ, ದೌರ್ಜನ್ಯವನ್ನು ತನ್ನದೆ ವಿಶಿಷ್ಟ ಬಗೆಯಲ್ಲಿ ಕಟ್ಟಿಕೊಡುವ ಕವಿತೆಯಾಗಿ ‘ಕಟ್ಟೇಯ ಒಡೆಯುತ’ ಕಾವ್ಯವು ಮನಸನ್ನು ಕಾಡುತ್ತದೆ. ಅನುಗಾಲದಿಂದಲೂ ನಡೆದುಕೊಂಡ ಬಂದ ಪದ್ದತಿ, ರೂಢಿಗತ ಸಂಪ್ರದಾಯ, ಹೆಣ್ಣಿಗೆ ವಿಧಿಸಿರುವ ಕಟ್ಟಳೆಗಳನ್ನು ಒಡೆಯದಿದ್ದರೆ ಬದುಕು ಯಾವ ರೀತಿ ಕಷ್ಟಕರವಾಗುವುದೆಂಬ ಆಶಯವನ್ನು ಶೀರ್ಷಿಕೆಯೇ ಧ್ವನಿಸುತ್ತದೆ.

ನೀವು ಉಸಿರಾಡುವ ಗಾಳಿ ಕಲುಷಿತಗೊಂಡಿದ್ದು
ನನ್ನಿಂದ ಎನ್ನುವುದಾದಾರೆ ಹೇಳಿ
ನೀವು ಕುಡಿಯುವ ನೀರು ಕೊಚ್ಚೆಯಾಗಿದ್ದು
ನನ್ನಿಂದ ಎನ್ನುವದಾದರೆ ಹೇಳಿ
ನಿಮ್ಮ ಕಲ್ಪನೆಗಳಿಗೆ ಹೊಣೆ ನಾನಲ್ಲ
ನಿಮ್ಮ ಹಿತ್ತಾಳೆ ಕಿವಿ ಸದ್ದೂ ನಾನಲ್ಲ
ನಿಮ್ಮ ನೋಟದ ಮಿತಿಯೂ ನಾನಲ್ಲ
ನೀವಂದುಕೊಂಡಂತೆ ನಾನಿರಬೇಕಿಲ್ಲ.

‘ಹೇಳಿ’ ಕವನದ ಈ ಸಾಲುಗಳು ಯಾವುದೆ ಅನಾಚಾರ, ಕೆಟ್ಟ ಕೃತಿಗಳಿಗೆ ಹೆಣ್ಣನ್ನೇ ಜವಾಬ್ದಾರಳನ್ನಾಗಿ ಮಾಡುವ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣು ಧ್ವನಿ ಎತ್ತಿದಾಗ ಮಾತ್ರ ಅವಳ ಶೋಷಣೆಗೆ ಕೊನೆ ಎಂದು ಧ್ವನಿಸುವಂತಿವೆ. ಜೊತೆಗೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಂಧ ರೀತಿ ರಿವಾಜುಗಳಿಗೆ ತನ್ನ ಕತ್ತು ಕೊಡಬೇಕಾಗಿಲ್ಲ ಎಂಬುವುದನ್ನು ಸೂಚ್ಯವಾಗಿ ಹೇಳುವಂತಿದೆ.

ಅಗಿಯು ಗಿಡವಾಗಬೇಕು ಹೂ ಹಣ್ಣು ಬಿಡಬೇಕು
ಅಗೆಯುತ್ತಿರುತ್ತೇನೆ ಪಾತಿಯನ್ನು ಹಸನು ಮಾಡಲು
ನೆಟ್ಟ ಸಸಿಯೇ ಕಾಣದಂತೆ ಕಸ ಆವರಿಸೆ
ಸುತ್ತಲೂ ತರಿಯದೆ ಪೊರೆದೇನು ಹೇಗೆ
ಕಸ ತೆಗೆವ ಭರದಲ್ಲಿ ಬೇರಿಗೆ ಕುರುಪಿಯ ಅಲುಗು
ಜೀವರಸ ಜಿನುಗಿ ಕಣ್ಣ ಹನಿಯಾಗಿ ಮಣ್ಣು ಹಸಿಯಾಗಿ
ಇಲ್ಲ ನಿನ್ನ ನೋಯಿಸಲಲ್ಲ ಈ ಆಯುಧ
ಇಲ್ಲಿ ಸಲ್ಲದ್ದನ್ನು ನಿವಾರಿಸಲು ಈ ಯುದ್ಧ

ಮೇಲಿನ ‘ಬೆಳೆ’ ಕವನದ ಈ ಸಾಲುಗಳು ಅಷ್ಟೇ. ಮನುಷ್ಯ ಯಾವುದನ್ನು ಬಯಸುವುದಿಲ್ಲವೋ ಅಂತವೇ ಜೀವನದಲ್ಲಿ ಘಟಿಸುವುದು. ಹೊಟ್ಟೆಯ ತುತ್ತಿಗೆ ಬೇಕಾಗುವ ಬೆಳೆಯನ್ನು ಬೆಳೆಯಲು ಪ್ರಯತ್ನಿಸಲು ಅದರೊಂದಿಗೆ ಬೇಡವಾದ ಕಸವೇ ಹೆಚ್ಚು ಬೆಳೆದಾಗ ಅದನ್ನು ಸಹಜವಾಗಿ ತೆಗೆಯಬೇಕಾದಾಗ ಅಂತಹ ವೇಳೆಯಲ್ಲಿ ಸಹಜವಾಗಿ ಕುರುಪಿಯ ಚೂಪು ಬೆಳೆಯ ಬೇರಿಗೆ ತಾಗಲು ಸ್ವಾಭಾವಿಕವಾಗಿ ದುಃಖವಾಗುತ್ತದೆ.ಹಾಗೆಯೇ ಕೆಲವೊಮ್ಮೆ ಬೇಡವಾದವರನ್ನು ದೂರ ಸರಿಸುವಾಗ ನಮ್ಮವರಿಗೆ ಏಟು ಕೊಡುವಂಥ ಪ್ರಸಂಗ ಬಂದಾಗ ಆಗುವ ಸಂಕಟದ ಚಿತ್ರಣ ಇಲ್ಲಿ ಹೃದ್ಯವಾಗಿ ಬಂದಿದೆ.

ಇವಳ ಮನ ಹೊತ್ತಿ ಉರಿಯತೊಡಗಿದೆ
ಅವಳ ಮನದ ತುಂಬಾ ಬೆಳಕು
ಇಲ್ಲಿ ಬೆಂಕಿ ಇಟ್ಟು
ಅಲ್ಲಿ ಬೆಳಕ ಮೀಯುತ್ತಿದ್ದಾನೆ ಅವನು
ಇವಳ ಮನದ ಅಗ್ನಿಕುಂಡದ ಝಳದಲ್ಲಿ
ಅವಳು ತನ್ನ ಚಳಿ ಕಾಯಿಸಿಕೊಳ್ಳುತ್ತಿದ್ದಳು
ಅಕ್ಕ ಎಂದೆ
ಅವಳು ಸವತಿಯಾದಳು
ಗಂಡನೆಂಬ ಈ ಪರಪುರುಷನ
ಒಡನಾಟದಲ್ಲಿ ನಾನೀಗ ಜಾರಿಣಿ

‘ಇವಳು- ಅವಳು’ ಕವನದ ಈ ಸಾಲುಗಳು ಪುರುಷ ಅಹಮಿಕೆಯ ಶೋಷಣೆಯನ್ನು ಎಳೆಎಳೆಯಾಗಿ ಚಿತ್ರಿಸಿದೆ.ಮನೆಯಲ್ಲಿ ಸಹಧರ್ಮಿಣಿ ಇದ್ದರೂ ಪುರುಷಪ್ರೇರಿತ ಸಮಾಜದಲ್ಲಿ ಅವಳು ಯಾವ ರೀತಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾಳೆಂದು ಅನಾವರಣಗೊಳಿಸುವ ಪರಿ ನಿಜಕ್ಕೂ ಅನನ್ಯ.

‘ನೆಲ ಸೋಕದ ಕನಸು’ ಕಾವ್ಯದ ಈ ಕೆಳಗಿನ ಸಾಲುಗಳು ಮನುಷ್ಯನ ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟ ಕೋಟಲೆಗಳನ್ನು ಬದಿಗೆ ಸರಿಸಿ ಸಾಗಬೇಕೆನ್ನುವ ಅದಮ್ಯ ಉತ್ಸಾಹಕ್ಕೆ ಪ್ರೇರಣೆಯಾಗುವ ಸಾಲುಗಳಾಗಿ ಸಶಕ್ತವೆನಿಸುತ್ತವೆ.

ಆಸರೆ ಬಯಸುವ ಮನಸು
ಜೀಕುವುದು ಅನವರತ ಕನಸು
ಕನಸುಗಳನ್ನು ಕೊಲ್ಲುವ ಮೊನಚು
ಶರಗಳನ್ನು ಹೂಡುವನು ಕಾಲ
ಕಾಲನನ್ನು ಕಾಲಲ್ಲಿ ಮೆಟ್ಟಿ ಕುಣಿಸಬೇಕು
ನೆಲ ಸೋಕದ ನನ್ನ ಹೆಜ್ಜೆಗಳ ತಾಳ
ಗೆಜ್ಜೆಗಳ ಝೇಂಕಾರ ಮುಗಿಲು ಮುಟ್ಟಬೇಕು.
ಅವನು ಅವಳು
ಸರಸ ಸಲ್ಲಾಪ ಕೀಟಲೆ
ಹುಸಿಮುನಿಸು ರಮಿಸು
ಚರ್ಚೆ ವಾದ ವಿವಾದ
ನಗು ಹಾಡು ಹರಿವು
ತನ್ಮಯತೆಯಿಂದ ಜೀವ
ಮಂತ್ರವೆಂಬಂತೆ ಉಲಿದಳು
ನನ್ನ ದೇವರೆ…

‘ಅವಳ ದೇವರು’ ಕವನದ ಈ ಮೇಲಿನ ಸಾಲುಗಳು ಮಹಿಳೆ ಸಪ್ಪಪದಿ ತುಳಿದು ಬಂದ ನಂತರ ತನ್ನ ಗಂಡನನ್ನು ಅದೆಷ್ಟು ಕಾಯಾ, ವಾಚಾ,ಮನಸಾ ಒಪ್ಪಿಕೊಂಡು ದೇವರೆಂದು ಪೂಜಿಸಿದರೂ ಆತನ ನಿರ್ಲಕ್ಷತೆಗೆ ಕಾರಣಳಾಗುವ ಹೆಣ್ಣಿನ ಚಿತ್ರಣ ಮನ ಮಿಡಿಯುತ್ತದೆ.

ಹರೆಯದ ಹೆಂಗಳೆಗೆ
ಒಳಗೂ ಸೋನೆ ಮಳೆ
ಮನದ ತುಂಬಾ ಬಣ್ಣ
ಬಣ್ಣದ ಹೂ ಚಿಟ್ಟೆ
ನಡುಮನೆಯಿಂದ ಮನೆಯಂಗಳ
ಓಣಿ ತುಂಬೆಲ್ಲ ಹರಡಿ ಪರಿಮಳ
ಗುಲ್ಲೋಗುಲ್ಲು ಎಲ್ಲೆಲ್ಲೂ

‘ಸಂಭ್ರಮ’ ಕವನದ ಈ ಸಾಲುಗಳು ವಯಸ್ಸಿಗೆ ಬಂದ ಹೆಣ್ಣು ಮಗಳೊಬ್ಬಳ ಮನಸಿನಲ್ಲಾಗುವ ಸಡಗರ, ಸಂಭ್ರಮಗಳ ರೀತಿಯನ್ನು ತುಂಬಾ ಚೇತೋಹಾರಿಯಾಗಿ ಚಿತ್ರಿಸುವ ಸಾಲುಗಳಾಗಿ ಮನ ಸೆಳೆಯುತ್ತವೆ.

ಹೆಣ್ಣೆಂದರು ಜರಿದರು
ಹೆಣ್ಣೆಂದರು ಕೊಂಡಾಡಿದರು
ಹೆಣ್ಣೆಂದರು ಆಸೆ ಪಟ್ಟರು
ಹೆಣ್ಣೆಂದರು ಕೊಂಡರು ಮಾರಿದರು
ಹೊನ್ನು ಮಣ್ಣುಗಳ ಸಾಲಲ್ಲಿ ನಿಲ್ಲಿಸಿ
ಬೇಕು ಬೇಕೆನ್ನುತಲೇ ಬೇಡವಾದುದೆಂದರು

‘ಮಾಯೆ’ಕಾವ್ಯದ ಈ ಸಾಲುಗಳು ಹೆಣ್ಣಿನ ಶೋಷಣೆಯ ವಿಭಿನ್ನ ಮುಖಗಳನ್ನು ಅನಾವರಣಗೊಳಿಸುತ್ತದೆ. ಆರಂಭದಿಂದ ಕೊನೆವರೆಗೂ ಅವಳನ್ನು ತನ್ನ ವಾಂಛಲ್ಯದ ಕಣ್ಣಿನಲ್ಲಿಯೇ ಕಾಣುವ ಪುರುಷ ಸಮಾಜದಲ್ಲಿ ಕೊನೆಗೆ ಅವಳು ಮನುಷ್ಯಳೆಂಬ ಸತ್ಯವನ್ನು ಮರೆತು ಹೊನ್ನು, ಮಣ್ಣುಗಳ ನಿರ್ಜೀವ ವಸ್ತುಗಳ ಸಾಲಿನಲ್ಲಿ ನಿಲ್ಲಿಸುವ ಸಮಾಜದ ಘೋರ ಅಮಾನವೀಯ ಮುಖವನ್ನು ತೆರೆದಿಡುತ್ತದೆ.

ಹುಚ್ಚು ನದಿಗಳಿವು
ಓಡಿಯೇ ಓಡುತ್ತವೆ
ಸಾಗರದೆಡೆಗೆ!
ಮುಂದುವೆರದೂ
ಸಾಗರ ಸೇರಿದೊಡನೆ ನಿಃಸ್ವಾದ
ಸ್ವಂತಿಕೆ ಮತ್ತು ಇರುವಿಕೆ
ಎರಡೂ ಶಿವನ ಪಾದ!

‘ಜೀವನದಿ’ಯ ಈ ಸಾಲುಗಳು ನದಿಗಳು ತಾವು ಹರಿಯುವ ದಾರಿಯುದ್ದಕ್ಕೂ ಅನೇಕ ಜೀವರಾಸದಿಗಳಿಗೆ ಜೀವದಾಯಿನಿಯಾಗಿ ಹರಿದರೂ ಕೊನೆಗೆ ಕಡಲ ಕೂಡಿ ಸಂಗಮವಾದರೂ ತನ್ನತನ ಕಳೆದುಕೊಳುವ ಬದುಕಿನ ನಶ್ವರತೆ, ಕೃತಕತೆಯನ್ನು ನೆನಪಿಸುತ್ತದೆ.

‘ಯಾರ ಮನೆಯ ಮಗಳು’ ಕವನದ ಈ ಕೆಳಗಿನ ಸಾಲುಗಳು ಕೂಡಾ ಮಹಿಳೆಯ ಬದುಕಿನ ಪರಿಸ್ಥಿತಿ, ಮನಸ್ಥಿತಿಯ ದ್ವಂದ್ವಗಳನ್ನು ಚಿತ್ರಿಸಿದ ರೀತಿ ಪ್ರತಿಸ್ಪಂದನೆಯ ಮನಸ್ಸನು ಆರ್ದ್ರಗೊಳಿಸುತ್ತದೆ. ಬಂದಂಥ ದಂದುಗಗಳನ್ನು ಸಹಿಸಿಕೊಂಡು ಬದುಕು ಸಾಗಿಸಿದರೆ ಸದ್ಗುಣಿಯೆಂದರೆ ಅದೇ ಪರರ ನಡೆಯನ್ನು ಪ್ರಶ್ನಿಸಿದರೆ ಜಾರಿಣಿಯ ಪಟ್ಟಗಟ್ಟುವ ಹೇಯ ಸಮಾಜದ ಕರಾಳ ಮುಖವನ್ನು ಪ್ರತಿನಿಧಿಸುತ್ತದೆ.

ನೀ ಯಾರ ಮನೆಯ ಮಗಳೆ ಅಕ್ಕಾ
ನೀ ಯಾರ ಮನೆಯ ಮಗಳೆ ಅಕ್ಕಾ
ಸೊಲ್ಲೆತ್ತಿ ಬದುಕಿದರೆ ನೀ ಸಾದ್ವಿಯೇ ಅಕ್ಕಾ
ಸೊಲ್ಲೆತ್ತಿ ಸಿಡಿದರೆ ನೀ ಸೂಳೆಯೆ
ಸಾದ್ವಿ ಸೂಳೆಯಾ ಜಟಾಪಟಿಯಲಿ ಹೆಣ್ಣು ಜನ್ಮವಿದು
ನೋಡು ಬೆಪ್ಪಾಯಿತೇ ಕೇಳು ಬೆಪ್ಪಾಯಿತೆ..
ಯಾರ ಮನೆಯ ಮಗಳು

ಒಟ್ಟಾರೆ ಈ ಕವನ ಸಂಕಲನದಲ್ಲಿನ ಹೃದ್ಯ ಹಾಗೂ ಮನಸಿಗೆ ಹತ್ತಿರವಾಗುವ ಭಾವ ತೀವೃತೆ, ವಿಡಂಬನೆ, ಮಹಿಳಾ ಸಬಲೀಕರಣದ ಮಹತ್ತನ್ನು ಹೇಳುವ ಸಾಲುಗಳ ಮಾಂತ್ರಿಕತೆ ಓದುಗರ ಮನದಾಳಕ್ಕಿಳಿಯುವಲ್ಲಿ ಯಶಸ್ವಿಯಾಗುತ್ತವೆ. ಜೊತೆಗೆ ಅರ್ಥಪೂರ್ಣ ಹಾಗೂ ವಿಶಿಷ್ಟ ಕಾವ್ಯಗಳ ಮೂಲಕ ಭರವಸೆಯನ್ನು ಮೂಡಿಸುತ್ತಾರೆ. ಕನ್ನಡ ಓದುಗರು ಅವರಿಂದ ಇನ್ನಷ್ಟು ಗಟ್ಟಿ ಕಾವ್ಯಗಳನ್ನು ನಿರೀಕ್ಷಿಸಬಹುದು. ಹನಿಯೊಡೆಯುತಿದೆ… ಓದಿಲ್ಲವಾದರೆ ಓದಿ.. ಮನದಲ್ಲಿ ತಣ್ಣನೆಯ ಮಂಜಿನ ಹನಿಗಳು ತನ್ನಿಂದ ತಾನೆ ಹನಿಯೊಡೆಯುತ್ತವೆ.
ಹಿರಿಯ ಸೋದರಿ ಜಯಲಕ್ಷ್ಮಿ ಪಾಟೀಲ್ ಅವರಿಗೆ ಅಭಿನಂದಿಸುತ್ತ ಸ್ತ್ರೀ ಪರ ಧೋರಣೆಯ ಇನ್ನಷ್ಟು ಕಾವ್ಯಗಳು ಹನಿಯೊಡೆಯಲಿ.


  • ಮಲ್ಲಿಕಾರ್ಜುನ ಶೆಲ್ಲಿಕೇರಿ – ಬಾಗಲಕೋಟೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW