ತುರ್ಕಿಯ ಮಹಾಕವಿ – ನಾಜೀ಼ಮ್ ಹಿಕ್ಮತ್ (1902-1963) ಅವರ ಅನುವಾದಿತ ‘ನನ್ನ ಹಾಡು’ನ್ನು ಕವಿ ಕೇಶವ ಮಳಗಿ ಅವರು ಸುಂದವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಂದೆ ಓದಿ…
ಬುವಿಯ ಮೇಲಿನ ಇರುವೆಗಳಂತೆ
ಸಮುದ್ರದ ಮೀನುಗಳಂತೆ
ಗಾಳಿಯಲ್ಲಿನ ಹಕ್ಕಿಗಳಂತೆ,
ಯಾರು ಎಣಿಕೆಗೆ ಅತೀತರೋ;
ಯಾರು ಪುಕ್ಕಲರು, ಎದೆಗಾರರು
ಮೂಢರು, ದಾರ್ಶನಿಕರು
ಮಗುವಿನ ಮುಗ್ಧತೆಯನೇ ಮೈದಾಳಿರುವರೋ;
ಯಾರು ಕೆಡಹುವರೋ,
ಯಾರು ಕಟ್ಟುವರೋ,
ಅಂಥವರ ಸಾಹಸಗಾಥೆಗಳನಷ್ಟೇ
ಹಾಡುವವು ನನ್ನ ಕವನ.
ಉಳಿದುವೆಲ್ಲ ಹಾಳು ಹರಟೆ.
*
ಪ್ರೀತಿ ನಿರಪೇಕ್ಷ
ಮಂಡಿಯೂರಿ :
ಬುವಿ,
ಹುಲ್ಲಿನೆಸೆಳು,
ಕೀಟಲೋಕ,
ನೀಲಿ ನರಗಳಲಿ ಅರಳುತಿರುವ ಕಾಂಡಗಳ
ದಿಟ್ಟಿಸುವೆ.
ನನ್ನೊಲವೇ, ನೀನು ಗಂಧವತಿಯ ಚೈತ್ರಪಲ್ಲವ,
ನಾನು ನಿನ್ನನೇ ನಿರುಕಿಸುತಲಿರುವೆ.
ಅಂಗತ್ತ ಮಲಗಿ :
ಆಗಸವ ದಿಟ್ಟಿಸುವೆ,
ಮರದ ಟಿಸಿಲುಗಳ,
ರೆಕ್ಕಿ ಬಿಚ್ಚಿದ ಬೆಳ್ಳಕ್ಕಿಗಳ,
ಎಚ್ಚರದ ಕಣಸುಗಳ ಕಾಣುವೆ.
ನನ್ನೊಲವೇ, ನೀನು ವಸಂತದ ಆಗಸ,
ನಾನು ನಿನ್ನನೇ ನಿರುಕಿಸುತಲಿರುವೆ.
ಸಂದಣಿಯ ನಡುವೆ ನುಗ್ಗುವೆ :
ನಾನು ಜನರನ್ನು,
ಅವರ ದುಡಿಮೆ,
ಯೋಚನೆ,
ಹೋರಾಟಗಳನು ಪ್ರೀತಿಸುವೆ.
ನನ್ನ ಸಂಘರ್ಷಗಳಲಿ ನೀನೂ ಭಾಗೀ.
ನಾನು ನಿನ್ನನು ಪ್ರೀತಿಸುವೆ.
*
ನೋವು, ನರಳಾಟ ಕೊನೆಯಾಗುವುದು.
ಬೆಚ್ಚಗಿನ ಬೇಸಿಗೆಯ ಬೈಗಿನಂತೆ ;
ದಟ್ಟ ಹಸಿರು ಕೊಂಬೆಗಳಿಂದ
ಒಡಮೂಡುವಂತೆ
ಶಮನ ಸುಳಿವುದು
ನಿಧಾನವಾಗಿ.
*
#ಭರವಸೆ
ಕವಿತೆಗಳ ಬರೆಯುವೆ
ಎಲ್ಲೂ ಪ್ರಕಟವಾಗುತ್ತಿಲ್ಲ,
ಒಂದೊಮ್ಮೆ ಆಗೇ ಆಗುವವು.
ಶುಭ ಸಮಾಚಾರವನು ಹೊತ್ತ
ಪತ್ರವನು ಕಾಯುತಿರುವೆ
ತಲುಪುವ ಕಾಲಕ್ಕೆ ನಾನು ಸತ್ತೇ ಹೋಗಿರಬಹುದು,
ಇರಲಿ, ಪತ್ರ ಬರುವುದಂತೂ ಖಚಿತ.
ಲೋಕ, ಹಣದಿಂದ, ಸರ್ಕಾರಗಳಿಂದಲ್ಲದೆ
ಜನರಿಂದ ಆಳಿಕೆಗೊಳಗಾಗುವುದು ಒಂದು ದಿನ.
ಇನ್ನೂ ನೂರುವರ್ಷಗಳಾದರೂ ಆಗಬಹುದೇನೊ,
ಇದ್ದರೂ ಹಾಗಾಗುವುದು ನಿಶ್ಚಿತ.
*
ವೈನಾಗಿ ನಿನ್ನನು ಆರೈಕೆ ಮಾಡಿಕೋ
ತಪ್ಪದೇ ಓಲೆಗಳ ಬರೆಯುತಿರು.
ನನ್ನ ಪಡಿಪಾಟಲುಗಳ ಬಗೆಗೆ
ಬಹಳ ತಲೆಕೆಡಿಸಿಕೊಳ್ಳಬೇಡ,
ಮರೆತುಬಿಡು ಅವನ್ನೆಲ್ಲ,
ಆದರೆ, ಮರೆಯದಿರು ನನ್ನನು!
*
ಒಂದು ಕಾಲದವರೆಗೆ
ನಿನ್ನ ನೆನಪಲ್ಲಿ ಉಳಿವೆ.
ಆದರೆ, ನನ್ನ ಜನಮಾನಸದಲ್ಲಿ
ಅನಂತಕಾಲದವರೆಗೆ.
*
#ಪಯಣ
ಕದಗಳನು ತೆರೆಯುತ್ತೇವೆ,
ಮುಚ್ಚುತ್ತೇವೆ,
ಬಾಗಿಲುಗಳ ಹಾದು ಹೋಗುತ್ತೇವೆ,
ಕೊನೆಗೆ ನಮ್ಮ ಏಕೈಕ ಪಯಣದ
ಅಂಚು ತಲುಪುತ್ತೇವೆ-
ನಗರಗಳಿಲ್ಲ,
ಬಂದರುಗಳೂ ಇಲ್ಲ.
ರೈಲು ಹಳಿ ತಪ್ಪುವುದು,
ಹಡಗು ಮುಳುಗುವುದು
ವಿಮಾನ ಸ್ಫೋಟಗೊಳ್ಳುವುದು
ಮಂಜಿನ ಮೇಲೆ ಮೂಡಿಸಿದ ನಕಾಶೆ ಕರಗಿ ಹೋಗುವುದು.
ಆದರೂ, ಒಂದೊಮ್ಮೆ
ಮಗುದೊಮ್ಮೆ ಈ ಪಯಣ ಆರಂಭಿಸಬಹುದಾದರೆ
ನಾನು ಮರಳಿ ಪಯಣ ಕೈಗೊಳ್ಳುವೆ.
- ಕನ್ನಡಕ್ಕೆ ಅನುವಾದ : ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು), ಬೆಂಗಳೂರು.
