‘ಮಳೆ ಸುರಿಯುವಾಗ ಬಂದವನು’ ಕತೆ – ಕೇಶವ ಮಳಗಿ



ಕಬ್ಬಿಣದ ಗೇಟನ್ನು ಕಿರುಗುಟ್ಟಿಸಿ, ಇಟ್ಟಿಗೆಯ ಹಾಸಿನ ಮೇಲೆ ನಡೆದಾಡಿದ ಆ ವ್ಯಕ್ತಿ ಹೊಸಿಲಿನ ಬಳಿ ಕೆಮ್ಮುತ್ತ ಎರಡು ಸಲ ಬಾಗಿಲನ್ನು ಬಡಿದ ಗುಡುಗು-ಮಿಂಚುಗಳ ಮಳೆಯ ಇರುಳು ಅನೇಕ ಅಚ್ಚರಿಯ, ವಿಸ್ಮಯವೆನ್ನುವಷ್ಟು ಹೊಸತನದ ವಿಷಯಗಳು ತೆರೆದುಕೊಂಡವು. ಆಕೆ ಅಡೆದುಕೊಳ್ಳಲಾರದಷ್ಟು ಮಾನಸಿಕ ಒತ್ತಡಕ್ಕೆ ಸಿಲುಕಿದಳು.ಮುಂದೇನಾಯಿತು ಗೇಬ್ರಿಯಲ್‌ ಗಾರ್ಸಿಯ ಮಾರ್ಕೇಸ್‌ ಅವರ ಕತೆಯನ್ನು ಕನ್ನಡಕ್ಕೆ ರೂಪಾಂತರ ಮಾಡಿದ್ದಾರೆ ಖ್ಯಾತ ಕತೆಗಾರ, ಕವಿ ಕೇಶವ ಮಳಗಿ ಅವರು.

* #ಗೇಬ್ರಿಯಲ್‌_ಗಾರ್ಸಿಯ_ಮಾರ್ಕೇಸ್‌

(Gabriel garcía márquez)

ಹಿಂದೆಲ್ಲ ಆಕೆ ಮಳೆಯನ್ನು ಆಲಿಸಲು ಕುಳಿತಾಗ ಇದೇ ರೀತಿ ಬೆಚ್ಚಿ ಬಿದ್ದಿದ್ದಾಳೆ. ಆಕೆಗೆ ಕಬ್ಬಿಣದ ಗೇಟಿನ ಕಿರುಗುಡುವಿಕೆ ಕೇಳಿಸಿತು. ಇಟ್ಟಿಗೆಯ ಹಾಸು ದಾರಿಯ ಮೇಲೆ ಮನುಷ್ಯನ ಹೆಜ್ಜೆ ಸಪ್ಪಳ ಕೇಳಿಸಿತು. ಬೂಟುಗಳು ಚರಪರ ಸಪ್ಪಳ ಮಾಡುತ್ತ ಹೊಸಿಲ ಬಳಿ ತಲುಪಿದ್ದೂ ಕೇಳಿಸಿತು. ಆತ ಬಾಗಿಲ ಚೀಲಕ ತಟ್ಟಲಿ ಎಂದು ಎಷ್ಟೋ ಇರುಳುಗಳು ಆಕೆ ಕಾದಿರುವುದುಂಟು. ಆಮೇಲೆ, ಅಂದರೆ, ಮಳೆ ಮೂಡಿಸುವ ಅಗಣಿತ ಶಬ್ದಗಳ ಒಗಟನ್ನು ಒಡೆಯುವುದು ಹೇಗೆಂದು ಅರಿತಮೇಲೆ, ಈ ಕಾಲ್ಪನಿಕ #ಅತಿಥಿ ಯಾವತ್ತೂ ಹೊಸಿಲನ್ನು ದಾಟಲಾರ, ಎಂದು ತಿಳಿದುಕೊಂಡಳು. ಜತೆಗೆ, ಆತನಿಗಾಗಿ ಕಾಯದಿರುವುದನ್ನು ರೂಢಿಸಿಕೊಂಡಳು. ಐದು ವರ್ಷಗಳ ಹಿಂದೆ, ಭಾರೀ ಮಳೆಯ ಒಂದು ಸೆಪ್ಟೆಂಬರ್‌ ಮಾಸದ ಇರುಳು, ತನ್ನ ಬದುಕಿನ ಕುರಿತು ಅವಲೋಕಿಸುವಾಗ, “ಇದು ಹೀಗೇ ಮುಂದುವರೆದರೆ, ನಾನು ಮುದುಕಿಯಾಗಿ ಕೊನೆಯಾಗುತ್ತೇನಷ್ಟೇ!” ಎಂದು ಆಕೆ ಖಚಿತ ನಿರ್ಧಾರ ತೆಗೆದುಕೊಂಡಿದ್ದಳು. ಆನಂತರ ಮಳೆಯ ಸದ್ದು ಬದಲಾದವು, ಇಟ್ಟಿಗೆಯ ಕಾಲದಾರಿಯಲ್ಲಿ ಕೇಳುತ್ತಿದ್ದ ಆ ವ್ಯಕ್ತಿಯ ಹೆಜ್ಜೆ ಸಪ್ಪಳವನ್ನು ಬೇರೆಯ ಶಬ್ದಗಳು ಆವರಿಸಿಕೊಂಡವು.

ಆತನಿಗಾಗಿ ಇನ್ನು ಮುಂದೆ ಕಾಯಬಾರದು ಎಂದು ಗಟ್ಟಿ ಮನಸ್ಸು ಮಾಡಿದ್ದು ನಿಜವಾದರೂ ಈ ಮೊದಲಿನಂತೆಯೇ ಆಗೀಗ ಗೇಟು ಕಿರುಗುಟ್ಟುತ್ತಿತ್ತು. ಹೊಸಿಲಾಚೆಗೆಯ ಹಾಸಿನ ಮೇಲೆ ಆತನ ಬೂಟುಗಳ ಸದ್ದು ಕೇಳಿಯೇ ಕೇಳಿಸಿದವು. ಆದರೇನು? ಅಷ್ಟರಲ್ಲಾಗಲೇ ಆಕೆ ಮಳೆ ಬಿಟ್ಟು ಕೊಡುವ ಉಳಿದ ಗುಟ್ಟುಗಳಲ್ಲಿ ತಲ್ಲೀನಳಾಗಿದ್ದಳು. ಅಂಥ ಸಮಯದಲ್ಲಿಯೇ ಆಕೆಗೆ ನಿಯೋಲ್‌ನ ದನಿಗಳು ಮತ್ತೆ ಕೇಳಿಸತೊಡಗಿದವು. ಹದಿನೈದರ ಪೋರನಾಗಿದ್ದ ನಿಯೋಲ್‌ ಗಿಳಿಗೆ ಆಟಪಾಠ ಕಲಿಸುತ್ತಿದ್ದ. ಜತೆಗೆ, ಕುಟುಂಬದ ಕೊನೆಯ ಹಿರೀಕ ತೀರಿಕೊಂಡ ಮೇಲೆ ಗುಜರಿ ವ್ಯಾಪಾರಿಗೆ ಮಾರಿದ್ದ ಗ್ರಾಮಾಫೋನಿನಿಂದ ಹೊಮ್ಮುತ್ತಿದ್ದ ವಿಷಾದದ ಹಾಡುಗಳೂ ಆಕೆಗೆ ಕೇಳಿಸತೊಡಗಿದ್ದವು. ಮನೆಯಲ್ಲಿ ತುಂಬಿದ್ದ ಶುದ್ಧ-ಅಂತಃಕರಣದ ಪ್ರೀತಿಪಾತ್ರ ಗತಕಾಲದ ದನಿಗಳನ್ನು ಮಳೆಯ ಶಬ್ದದ ಮೂಲಕ ತಪ್ಪಿಸಿಕೊಳ್ಳುವುದನ್ನು ಆಕೆ ಕಲಿತಿದ್ದಳು.

ಫೋಟೋ ಕೃಪೆ : PARIS review  (ಗೇಬ್ರಿಯಲ್‌ ಗಾರ್ಸಿಯ ಮಾರ್ಕೇಸ್‌)

ಆಗೀಗ ಕಬ್ಬಿಣದ ಗೇಟನ್ನು ಕಿರುಗುಟ್ಟಿಸಿ, ಇಟ್ಟಿಗೆಯ ಹಾಸಿನ ಮೇಲೆ ನಡೆದಾಡಿದ ಆ ವ್ಯಕ್ತಿ ಹೊಸಿಲಿನ ಬಳಿ ಕೆಮ್ಮುತ್ತ ಎರಡು ಸಲ ಬಾಗಿಲನ್ನು ಬಡಿದ ಗುಡುಗು-ಮಿಂಚುಗಳ ಮಳೆಯ ಇರುಳು ಅನೇಕ ಅಚ್ಚರಿಯ, ವಿಸ್ಮಯವೆನ್ನುವಷ್ಟು ಹೊಸತನದ ವಿಷಯಗಳು ತೆರೆದುಕೊಂಡವು. ಆಕೆ ಅಡೆದುಕೊಳ್ಳಲಾರದಷ್ಟು ಮಾನಸಿಕ ಒತ್ತಡಕ್ಕೆ ಸಿಲುಕಿದಳು. ತನ್ನ ಕೈಯಿಂದ ಸನ್ನೆ ಮಾಡುತ್ತ, ಅಲ್ಲಿದ್ದ ಇನ್ನೊಬ್ಬ ಹೆಂಗಸಿನತ್ತ ತಿರುಗಿ ಹೇಳಿದಳು:

“ಆತನೀಗ ಇಲ್ಲಿದ್ದಾನೆ.”

ಇನ್ನೊಬ್ಬ ಹೆಂಗಸು ಬಣ್ಣಗುಂದಿದ ಸಾಗುವಾನಿ ಫಲಕಗಳಾಚೆ ಮೊಳಕೈ ಅಂಟಿಸಿ ಕುಳಿತಿದ್ದಳು. ಶಬ್ದ ಕೇಳಿ ದೀಪದತ್ತ ಕಣ್ಣು ನೆಟ್ಟಳು. ಆಕೆಯೂ ಉದ್ವೇಗದಿಂದ ಥರಗುಟ್ಟುತ್ತಿದ್ದಳು.

“ಈ ಸರಿ ಹೊತ್ತಿನಲಿ ಯಾರಿದ್ದಾರು ಅಂತೀನಿ?”

ಆಕೆ ತನ್ನ ಪ್ರಶಾಂತ ಮುಖದಲ್ಲಿ ಎಷ್ಟೋ ವರ್ಷ ಕಾಲ ಮಾಗಿ ಹಣ್ಣಾದ ಸಾಲನ್ನು ನುಡಿದಳು:

“ಅದು ಹೆಂಗಾದರೂ ಇರಲಿ ಬಿಡು. ಅವರು ಯಾರೇ ಆದರೂ ತೊಯ್ದು ತೊಪ್ಪಡಿಯಾಗಿರುತ್ತಾರೆ!”

ಇನ್ನೊಬ್ಬ ಹೆಂಗಸು ಎದ್ದು ನಿಂತಳು. ದೀಪ ತೆಗೆದುಕೊಂಡು ಚಾವಡಿಯ ಕಡೆ ಕಣ್ಮರೆಯಾಗುವುದನ್ನು ಈಕೆ ದಿಟ್ಟಿಸುತ್ತಲೇ ಇದ್ದಳು. ಮಳೆ ಮತ್ತು ಅರೆ ಬೆಳಕಿನಲ್ಲಿ ಬೀಳುತ್ತಿದ್ದ ಮಳೆಯ ಸದ್ದು ಕತ್ತಲೆಯಿಂದಾಗಿ ಇನ್ನಷ್ಟು ಜೋರಾಗಿ ಕೇಳಿಸುತ್ತಿದೆ ಅನ್ನಿಸಿತು. ಬಳಿಕ ದೀಪ ಗೋಡೆಗೆ ಬಡಿದ ಸದ್ದು, ಚಿಲಕದ ಸಪ್ಪಳ, ಜಂಗು ತಿಂದ ಅಗಳಿಯ ಶಬ್ದ ಆಲಿಸಿತು . . . .

ಬಳಿಕ ಕತ್ತಲೆಯಲ್ಲಿನ ಧ್ವನಿಗಳನ್ನಾಕೆ ಗುರುತಿಸಿದಳು. ಆಮೇಲೆ, ಚಿರಪರಿಚಿತ ಹೆಜ್ಜೆ ಸಪ್ಪಳದೊಂದಿಗೆ ಮೊಗಸಾಲೆಯ ಗೋಡೆಯ ಮೇಲೆ ನೆರಳುಗಳು ಕಂಡವು. ನಂತರ ಎಷ್ಟೋ ವರ್ಷಗಳ ಅಭ್ಯಾಸ, ಇನ್ನಷ್ಟು ವರ್ಷಗಳ ಚಂಚಲತೆ ಮತ್ತು ವಿಷಾದಗಳಿಂದ ಕಬ್ಬಿಣದ ಬಾಗಿಲನ್ನು ತೆರೆದ ವ್ಯಕ್ತಿ ಒಳ ಬರಲು ನಿರ್ಧರಿಸಿದ್ದಾನೆ, ಅಂದುಕೊಂಡಳು.

ಇನ್ನೊಬ್ಬ ಹೆಂಗಸು ದೀಪದೊಂದಿಗೆ ಬಂದಳು. ಆಕೆಯ ಹಿಂದೆಯೇ ಆಗುಂತಕ. ಆಕೆ ದೀಪವನ್ನು ಮೇಜಿನ ಮೇಲಿಟ್ಟಳು. ಆಗಂತುಕ ಬೆಳಕನ್ನು ಹಂದಾಡಲೂ ಬಿಡದೆ ತನ್ನ ಮಳೆ ಗೊರಬು ತೆಗೆದು ಹಾಕಿದ. ಮುಖ ತಿರುಗಿಸಿ, ತಲೆ ಜಾಡಿಸಿ ಗೋಡೆಗೆ ಮಳೆ ನೀರನ್ನು ಸಿಡಿಸಿದ. ಅದಾದ ಮೇಲೆ ಆಕೆ ಆತನನ್ನು ಮೊದಲ ಬಾರಿಗೆ ನೋಡಿದಳು. ಕಣ್ಣು ನೆಟ್ಟು ದಿಟ್ಟಿಸಿದಳು. ಹಕ್ಕಿಯೊಂದನ್ನು ಪರೀಕ್ಷಿಸುವಂತೆ ಕಾಲ ಬೆರಳಿಂದ ಹಣೆಯವರೆಗೆ ತದೇಕ ನಿರುಕಿಸಿದಳು. ಕೊನೆಗೆ ಕಣ್ಣನ್ನು ದೀಪದತ್ತ ತಿರುಗಿಸಿ,

“ಏನೇ ಇರಲಿ, ಆತ ಸ್ವಲ್ಪ ಎತ್ತರಕ್ಕೆ ಇರುತ್ತಾನೆ ಎಂದು ಊಹಿಸಿಕೊಂಡಿದ್ದರೂ, ಅದು ಅವನೇ!” ಅಂದುಕೊಂಡಳು.

Istock

ಆತ ತನ್ನ ಅಂಗಿಯ #ಗುಂಡಿಗಳನ್ನು ಬಿಚ್ಚತೊಡಗಿದ. ದೀಪದ ಬೆಳಕಿನಲ್ಲಿ ಬೆಚ್ಚಗಾಗುವವನಂತೆ ಮೇಜಿನತ್ತ ವಾಲುತ್ತ ಬೂಟುಗಳನ್ನು ಕಳಚಿದ. ಇನ್ನೊಬ್ಬ ಹೆಂಗಸು ಎದ್ದು ಅಲಮಾರಿನಲ್ಲಿದ್ದ ’ಶಂಕರಿ’ಯ ಬಾಟಲನ್ನು, ಗಾಜಿನ ಲೋಟವನ್ನು ತಂದು ಮೇಜಿನ ಮೇಲಿಟ್ಟಳು. ಆತ ಬಾಟಲಿನ ತಲೆ ಎಳೆದುಕೊಂಡು, ಹಲ್ಲುಗಳಿಂದ ಮುಚ್ಚಳವನ್ನು ತಿರುಗಿಸಿ ತೆಗೆದು ಲೋಟಕ್ಕೆ ಶಂಕರಿಯನ್ನು ಸುರಿದುಕೊಂಡ. ಉಸಿರು ಬಿಗಿ ಹಿಡಿದು ತರಾತುರಿಯಲ್ಲಿ ಏರಿಸಿ ಉಸುಗರೆದ. ಇನ್ನೊಂದು ಲೋಟ ಮೇಲೆತ್ತಬೇಕು ಎನ್ನುವಾಗ ದೀಪದ ಮೇಲೆ ಬಿದ್ದ ನೆರಳು ಆತನ ಗಮನ ಸೆಳೆಯಿತು. ಆತನ ನೋಟದ ಬೆಚ್ಚಗಿನ ಭಾವವನ್ನು ಆಕೆ ಮೊದಲ ಸಲಕ್ಕೆ ಅನುಭವಿಸಿದಳು. ಇಲ್ಲಿಯವರೆಗೂ ಆತನಿಗೆ ಈ ಮನೆಯಲ್ಲಿ ಇನ್ನೊಬ್ಬ ಹೆಂಗಸಿರುವುದು ತಿಳಿದಿರಲಿಲ್ಲ ಎಂಬುದನ್ನು ಅರಿತು ಒಳಗೊಳಗೆ ಖುಷಿ ಅನುಭವಿಸಿದಳು . . .

*

ಒಂದು ಕ್ಷಣ ಆತ ಅಚಾತುರ್ಯದಿಂದೆಂಬಂತೆ ಆಕೆಯನ್ನು ಪರೀಕ್ಷಿಸಿದ. ಬೇಕೆಂದೇ ಮಾಡಿದ ಅಚಾತುರ್ಯ! ಅರೆ ಗಳಿಗೆ ಆಕೆ ಗಲಿಬಿಲಿಗೊಂಡಳು. ತಕ್ಷಣವೇ ಈ ನೋಟ ತುಂಬ ಪರಿಚಿತವಾದುದು, ನಿಯೋಲ್‌ನ ತುಂಟತನ, ಸಭ್ಯತೆಗಳು ಬೆರೆತಂಥದ್ದು ಅನ್ನಿಸಿತು. “ಕಬ್ಬಿಣದ ಬಾಗಿಲನ್ನು ತೆರೆಯುತ್ತಿದ್ದವನು ಈತನೇ ಆಗಿಲ್ಲದಿದ್ದರೂ ಕೂಡ ಈತನೇ ಆಗಿರಬಾರದೇಕೆ?” ಎಂದು ಚಿಂತಿಸಿದಳು!
ಮಧ್ಯರಾತ್ರಿಯ ವೇಳೆಗೆ ಮಳೆ ಇನ್ನಷ್ಟು ಅಬ್ಬರಿಸತೊಡಗಿತು. ಇನ್ನೊಬ್ಬ ಹೆಂಗಸು ತಾನು ಕೂತ ಕುರ್ಚಿಯನ್ನು ಬದಲಿಸಿದ್ದಳು. ಇಬ್ಬರೂ ಹೆಂಗಸರು ಆ ಪುರುಷ ದೀಪದ ಬೆಳಕಿನಲ್ಲಿ ಒಣಗಿ ಬೆಚ್ಚಗಾಗುವುದನ್ನು ಧ್ಯಾನಿಸುತ್ತ ಮೌನವಾಗಿ ಕುಳಿತಿದ್ದರು. ಪಕ್ಕದ ಬಾದಾಮಿ ಮರದ ಟೊಂಗೆಯೊಂದು ಕಿಟಕಿಗೆ ಹೊಡೆದುಕೊಳ್ಳುತ್ತಲೇ ಇತ್ತು. ಆಲಿಕಲ್ಲಿನ ಬಿರುಸು ಮಳೆಯ ಹನಿ ಆಕೆಯ ಮುಖಕ್ಕೆ ಸಿಡಿದರೂ ಆತ ತನ್ನ ಕೊನೆಯ ಶಂಕರಿ ಗುಟುಕನ್ನು ಮುಗಿಸುವವರೆಗೆ ಆಕೆ ಕದಲಲಿಲ್ಲ.

“ಅಲಮಾರಿಯಲ್ಲಿ ಏನಾದರೂ ಮಿಕ್ಕಿದೆಯ?” ಇನ್ನೊಬ್ಬ ಹೆಂಗಸಿಗೆ ಈಕೆ ತುಸು ಗಂಭೀರವಾಗಿ ಕೇಳಿದಳು. “ಇಲ್ಲೆ ಮಾರಾಯ್ತಿ, ಇದ್ದ ಬೊಗಸೆ ಅವರೆಕಾಳು ಸೋಮವಾರವಿನ್ನೂ ಖಾಲಿಯಾಯ್ತು!” ಇನ್ನೊಬ್ಬ ಹೆಂಗಸು ಅದೇ ಪಿಸುದನಿಯಲ್ಲಿ ಗಂಭೀರವಾಗಿ ಉತ್ತರಿಸಿದಳು.



ಬಳಿಕ, ತಮ್ಮ ಮಾತನ್ನು ಆ ವ್ಯಕ್ತಿ ಕೇಳಿಸಿಕೊಂಡನೇನೋ ಎಂದು ಹೆದರಿಕೆಯಲ್ಲಿ, ಇಬ್ಬರೂ ಮೇಜಿನ ಕಡೆಗೆ ನೋಡಿದರು. ಅಲ್ಲಿ ಮೇಜಾಗಲಿ, ಮನುಷ್ಯನಾಗಲಿ ಕಾಣದೆ ಬರೀ ಕತ್ತಲು ಗವ್ವನೆ ಕುಳಿತಂತಿತ್ತು. ಹೀಗಿದ್ದರೂ, ಆ ವ್ಯಕ್ತಿ ನಂದಿ ಹೋದ ದೀಪದ ಕತ್ತಲೆಯ ಪಕ್ಕದಲ್ಲಿಯೇ ಅಗೋಚರನಾಗಿ ಕುಳಿತಿದ್ದಾನೆ ಎಂದು ಇಬ್ಬರೂ ಅರಿತಿದ್ದರು. ಏಕೆಂದರೆ, ಇನ್ನೂ ಬಿರುಮಳೆ ಇರುವಾಗ ಆತ ಮನೆಯಿಂದ ಹೊರ ಹೋಗಲಾರ ಎಂದು ಅವರಿಗೆ ತಿಳಿದಿತ್ತು. ಅಲ್ಲದೆ ಅಲ್ಲಿ ಕವಿದಿದ್ದ ಕತ್ತಲೆ ಕೋಣೆಯನ್ನು ಎಷ್ಟೊಂದು ಕುಗ್ಗಿಸಿಬಿಟ್ಟಿತ್ತೆಂದರೆ ಒಂದೊಮ್ಮೆ ಆತ ಇವರು ಆಡಿದ ಮಾತನ್ನು ಕೇಳಿಸಿಕೊಂಡಿದ್ದರೆ ಅದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ!

(’ಎ ಮ್ಯಾನ್‌ ಅರೈವ್ಸ್‌ ಇನ್‌ ದಿ ರೇನ್‌’ ಕಥೆಯ ಅರೆಬರೆ ಅನುವಾದಂ!)


  • ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading