ಬದಕಿನ ಚೆಲುವು ಬಿಡುಗಡೆಯ ದಾರಿ

ಖ್ಯಾತ ಲೇಖಕರಾದ ಕೇಶವ ಮಳಗಿ ಅವರ ಫ್ಯುದೊರ್‌ ದೊಸ್ತೊಯೆಸ್ಕಿ ದಿ ಪೊಸೆಸ್ದ ಕಾದಂಬರಿಯ ಕನ್ನಡ ಮರುಕಥನ ‘ಆವಾಹನೆ’ ಕೃತಿಯ ಕುರಿತು ಬಗ್ಗೆ ಲೇಖಕರ ಮಾತು, ತಪ್ಪದೆ ಮುಂದೆ ಓದಿ…

ಪುಸ್ತಕ : ಆವಾಹನೆ
ಲೇಖಕರು : ಕೇಶವ ಮಳಗಿ
ಪ್ರಕಾಶನ : ಅಭಿರುಚಿ ಪ್ರಕಾಶನ
ಪುಟಗಳು : ೪೨೪
ಬೆಲೆ : ೪೫೦.೦೦

ಒಳಿತು, ಕೆಡುಕುಗಳೆಂದರೇನು? ಅವು ವ್ಯಕ್ತಿಗೆ ಸಂಬಂಧಿಸಿದ್ದವೋ, ಅಥವ ಆತ ಜೀವಿಸಿರುವ ಸಮಾಜ ರೂಪಿಸಿರುವಂಥವೊ? ಒಳ್ಳೆಯವರು, ಸಮಾಧಾನಿಗಳು, ಬದುಕಿನ ನರಕ ಸದೃಶ್ಯ ಸಂಕಟಗಳಲ್ಲಿ ಮುಳುಗಿರುವ ಸಾಮಾನ್ಯ ವ್ಯಕ್ತಿಗಳೇ ಏಕೆ ಸದಾ ಕಾಲ ಜೀವ ಹಿಂಸೆಗೆ ಸಿಲುಕುತ್ತಾರೆ. ಒಂದೆಡೆ ದುರುಳರು, ಸ್ವಾರ್ಥಿಗಳು, ಅನೈತಿಕತೆಯೇ ಬದುಕಾಗಿಸಿಕೊಂಡು ಚರಿತ್ರಹೀನರಾದ ಸಮಾಜ ಕಂಟಕರು ಯಶಸ್ಸಿನ ಮೆಟ್ಟಿಲುಗಳೇರುತ್ತ ಸುಖಸಂಪತ್ತಿನ ಜೀವನದಲ್ಲಿ ಲೋಲುಪರಾಗಿರುವಾಗ, ನಿಷ್ಪಾಪಿ ಜೀವಿಗಳೇಕೆ ಜೀವನದ ಸಣ್ಣಪುಟ್ಟ ಸುಖವನ್ನು ದಕ್ಕಿಸಿಕೊಳ್ಳುವಾಗ ಇನ್ನಿಲ್ಲದ ಸಂಕಟಗಳಿಗೆ ಸಿಲುಕುತ್ತಾರೆ?

ಬದುಕಿನ ಚೆಲುವು, ಸಾರ್ಥಕತೆ, ಪ್ರೇಮ, ಸ್ನೇಹಗಳನ್ನು ನೋಡುವ ಕಣ್ಣುಗಳನ್ನು ಕುರುಡಾಗಿಸಿ, ಅನುಭವಿಸುವ ಪಂಚೇಂದ್ರಿಯಗಳನ್ನು ಹೆಪುಗಟ್ಟಿಸುವಂತೆ ಅರಾಜಕತೆ (Nihilism-ನಿಯಲಿಸಂ) ಏಕೆ ಸಮಾಜವನ್ನು ದಳ್ಳುರಿಯಂತೆ ವ್ಯಾಪಿಸಿದೆ. ಸಮಾಜ, ಮನುಷ್ಯ ಸುಟ್ಟು ಕರಕಾದಷ್ಟು ಅರಾಜಕತೆ ಹೇಷಾರವ ಹಾಕಿ ಕುಪ್ಪಿಳಿಸುತ್ತದೆ. ಈ ದಾವಾನಲದ ಹೊಡೆತಕ್ಕೆ ಸಿಕ್ಕ ಸಮಾಜ ಜೀವಿ ಮನುಷ್ಯ ಖಿನ್ನನಾಗುತ್ತಾನೆ. ಸುತ್ತಲಿನ ಸೊಗವನ್ನು ಕಾಣುವ ಕಣ್ಣು ಕಳೆದುಕೊಂಡು ಹೊಲಸೇ ಸೊಗಸು ಎಂದು ಕುಪ್ಪಳಿಸುತ್ತಾನೆ. ಕುಣಿಯುತ್ತ ಇನ್ನಷ್ಟು ಹಿಂಸೆಯನ್ನು ಸೃಷ್ಟಿಸಿ ಹಿಂಸಾನಂದನಾಗುತ್ತಾನೆ.

ನಮ್ಮನ್ನು ಈ ನರಕದಿಂದ, ಹಿಂಸಾರತಿಯಿಂದ, ಸಾಮೂಹಿಕ ಸನ್ನಿಯಿಂದ ಪಾರುಮಾಡಬಹುದಾದುದು ಚೆಲುವು ಮತ್ತು ಪ್ರೀತಿ ಮಾತ್ರ. ಬದುಕಿನ ಚೆಲುವನ್ನು ಸ್ವೀಕರಿಸಿ, ಒಳಗಿನ ಹಿಂಸೆಯನ್ನು ಹೊರಗಟ್ಟಿದರಷ್ಟೇ ನಮ್ಮ ಜೀವ ಸಂಕಟಗಳನ್ನು ನಾವು ಎದುರಿಸಲು ಸಾಧ್ಯ. ಈ ಚೆಲುವೇ ಬದುಕನ್ನು, ಸಮಾಜವನ್ನು ರೂಪಾಂತರಿಸಬಲ್ಲ, ಕೆಡುಕನ್ನು ಬುಡಮೇಲು ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಇದರರ್ಥ ಚೆಲುವು ಅಥವ ಕಲಾಪ್ರಜ್ಞೆ ಕಷ್ಟ ಬರುವುದನ್ನು ಮುಂಗಂಡು ತಪ್ಪಿಸುತ್ತದೆ ಇಲ್ಲವೆ ನಿವಾರಿಸುತ್ತದೆ ಎಂದಲ್ಲ. ಆದರೆ ಜೀವ ಪಯಣದ ಅನಿವಾರ್ಯ ಭಾಗವಾದ ಕಷ್ಟನಷ್ಟಗಳಿಂದ ಉಂಟಾಗುವ ನೋವನ್ನು ನಮ್ಯಗೊಳಿಸುತ್ತದೆ. ಬದುಕಿನ ದಾರಿಯಲ್ಲಿ ಸಹಜವಾಗಿರುವ ಇವೆಲ್ಲವನ್ನು ನೈತಿಕತೆ, ಸಚ್ಚಾರಿತ್ರದ ಮೂಲಕ ಎದುರಿಸುತ್ತ ಅಂತಃಸತ್ವವನ್ನು ಪಡೆಯುವ ಬಗೆಯನ್ನು ಕಲಿಸುತ್ತದೆ. ಯಾತನೆಯಲ್ಲಿ ಬೆಂದ ಜೀವಿ ಅನೈತಿಕ ರಾಜ ದಾರಿ ತೋರಿಸುವ ಉಗ್ರತೆ, ವ್ಯಗ್ರತೆ, ವಿಧ್ವಂಸಕ ಹಿಂಸೆಗಳಿಗೆ ಬಲಿಯಾಗದೆ ಬದುಕು, ಸಮಾಜದ ಕುರಿತು ಆಳವಾದ ಒಳನೋಟವನ್ನು ನೀಡುತ್ತದೆ.

ಈ ರೂಪಾಂತರಕ್ಕೆ ಒಳಗಾದ ವ್ಯಕ್ತಿ ಅನುಕಂಪ, ಕರುಣೆ, ಸ್ವಾನುಭೂತಿ, ಕ್ಷಮೆ, ಪರಹಿತ ಅಂತಿಮವಾಗಿ ಮನುಷ್ಯರನ್ನು ಅವರೆಲ್ಲ ಬಲಹೀನತೆಯೊಂದಿಗೆ ಪ್ರೀತಿಸುವ, ಗೌರವಿಸುವ ಉದಾತ್ತಗುಣಗಳನ್ನು ಪಡೆದು ನಿಜವಾದ ಮನುಷ್ಯನಾಗುತ್ತಾನೆ. ಇಂಥ ವ್ಯಕ್ತಿಗಳ ಬದುಕಿನ ಕುರಿತ ಸಕಾರಾತ್ಮಕ ನಂಬಿಕೆ, ಬದುಕಿನ ಅಂತಃಸತ್ವದಲ್ಲಿ, ಕುರೂಪದ ಹಿಂದೆ ಅಡಗಿರುವ ಚೆಲುವಿನಲ್ಲಿನ ನಂಬಿಕೆಯೇ ಅವರನ್ನು ಸ್ವತಂತ್ರರನ್ನಾಗಿಸಿ ದುಃಖ, ನೋವು, ಯಾತನೆಗಳಿಂದ ಬಿಡುಗಡೆಗೊಳಿಸುತ್ತದೆ.

ತಮ್ಮ ಸುಖ, ಸ್ವಾರ್ಥ, ಕ್ಷಣಿಕ ಲೋಭಕ್ಕಾಗಿ ತಮ್ಮೊಳಗೆ, ಸಮಾಜದಲ್ಲಿ ನರಕ ಹುಟ್ಟು ಹಾಕುವವರು ಸದಾ ಅತೃಪ್ತರು, ದುಃಖಿಗಳು, ಅಸುಖಿಗಳು, ಕೊನೆಗೆ ರಾಕ್ಷಸರು ಮಾತ್ರ ಆಗಿರಬಲ್ಲರು.

(ಫ್ಯುದೊರ್‌ ದೊಸ್ತೊಯೆಸ್ಕಿ ವಿಚಾರಗಳು)


  • ಕೇಶವ ಮಳಗಿ – ಚಿಂತನಕಾರರು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading