ಅ…ಅ…ಅಮೆರಿಕಾ ನೋಡಾ (ಭಾಗ-೧೩)

ಮಗ ವಿನೀತ್ ಡ್ರೈವಿಂಗ್ ಸೀಟಲ್ಲಿ ಕುಳಿತರೆ ಇನ್ನೊಬ್ಬ ಮಗ ಸಂಜೀತ್ ಅವನೊಡನೆ ಪಕ್ಕದ ಸೀಟ್ ನಲ್ಲಿ ಕುಳಿತ. ನಮ್ಮವರು ‘ ನೋಡಿದ್ಯಾ..ನಮ್ಮನ್ನ ಹಿಂದಕ್ಕೆ ಹಾಕಿಬಿಟ್ರು ಮಕ್ಕಳು’ ಎಂದದ್ದು ಸಂಜೀತನಿಗೆ ಕೇಳಿಸಿಯೇ ಬಿಟ್ಟಿತ್ತು. ಲೇಖಕಿ ಕಮಲಾಕ್ಷಿ ಸಿ ಆರ್ ಅವರ ಅಮೆರಿಕಾ ಪ್ರವಾಸ ಕಥನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬಾಸ್ಟನ್ ಕಡೆಯಿಂದ ನ್ಯೂಯಾರ್ಕ್ ಮಾರ್ಗದ ಪ್ರಯಾಣ ಆರಾಮವಾಗಿತ್ತು. ಬೆಳಗ್ಗೆ ಏಳು ಗಂಟೆಗೆಲ್ಲ ಸಿದ್ಧವಾಗಿ ಲಗೇಜಿನೊಂದಿಗೆ ಬಾಸ್ಟನ್‌ನಿಂದ ಹೊರಟೆವು. ಅಂದು ಬೆಳಗಿನ ಉಪಹಾರವಾಗಿ ನಮಗೆ ಸಿಕ್ಕಿದ್ದು ಡ್ರೈಫ್ರೂಟ್ಸ್ ಚಾಕೋಲೇಟ್, ಬಿಸ್ಕತ್ತು ಜೊತೆಗೆ ಕಾಫಿ ಅಷ್ಟೇ.

ವಿನೀತ್ ಡ್ರೈವಿಂಗ್ ಸೀಟಲ್ಲಿ ಕುಳಿತರೆ ಸಂಜೀತ್ ಅವನೊಡನೆ ಮುಂದಿನ ಸಾಲಿನಲ್ಲಿ ಕುಳಿತ. ನಮ್ಮವರು ‘ ನೋಡಿದ್ಯಾ..ನಮ್ಮನ್ನ ಹಿಂದಕ್ಕೆ ಹಾಕಿಬಿಟ್ರು ಮಕ್ಕಳು’ ಎಂದದ್ದು ಸಂಜೀತನಿಗೆ ಕೇಳಿಸಿಯೇ ಬಿಟ್ಟಿತ್ತು. “ನೀವಿಬ್ರೂ ಆರಾಮಾಗಿ ಕೂತ್ಕೊಳ್ಳಿ ಅಂತ ಹಿಂದಕ್ಕೆ ಬಿಟ್ಟೆ ಪಪ್ಪಾ. ಸೀನರಿ ನೋಡಿ ಎಂಜಾಯ್ ಮಾಡಿ. ಬೇಕಾದರೆ ನೀವೆ ಇಲ್ಲಿ ಬನ್ನಿ. ಅಲ್ಲಾದ್ರೆ ನಿದ್ದೆನೂ ಮಾಡಬಹುದಲ್ವಾ? ಇವತ್ತು ಜಾಸ್ತಿ ಓಡಾಡೋಕಿದೆ, ನೋಡೋದಕ್ಕಿದೆ” ಎಂದ.

ಆ ಮಾತಿಗೆ ನಮ್ಮವರು ಮಗನ ವಿವರಣೆಗೆ ಉಕ್ಕಿ ಬಂದ ನಗುವನ್ನು ತಡೆದು “ತಮಾಷೆಗೆ ಹೇಳಿದ್ನಪ್ಪ.. ನೀನು ನಿಮ್ಮಣ್ಣನ ಜೊತೆನೆ ಕೂತ್ಕೋ. ಅದೇ ಸರಿ” ಎಂದರು. ನಾಲ್ಕೂವರೆ ಗಂಟೆ ಪ್ರಯಾಣ (215 ಮೈಲಿಗಳ ದೂರ). ಸುಗಮವಾದ ಸಂಚಾರಕ್ಕೆ ಅನುವು ಮಾಡಿಕೊಡುವ ರಸ್ತೆಗಳು, ಇಕ್ಕೆಲಗಳಲ್ಲಿ ಕಣ್ಮನ ತುಂಬುವ ಹಸಿರು ಪ್ರಯಾಣ ಬೇಸರವೆನಿಸಲಿಲ್ಲ. ಬಾಸ್ಟನ್ ಹಾಗೂ ನ್ಯೂಯಾರ್ಕ್ ನಗರಗಳು ಸಮುದ್ರ ಕಿನಾರೆಯಲ್ಲೇ ಇರುವುದರಿಂದ ನಡುನಡುವೆ ನದಿ ಇಲ್ಲವೇ ಸಮುದ್ರ ಸಿಗುತ್ತಿತ್ತು. ಮಧ್ಯೆ ಹಲವು ನಗರಗಳು, ಪುಟ್ಟ ಬಂದರುಗಳು ಸಿಕ್ಕಾಗ ಅವುಗಳ ಬಗ್ಗೆ ವಿನೀತ್ ವಿವರಿಸುತ್ತಿದ್ದ. ಅವನ ವಿವರಣೆ ಕೇಳುತ್ತ ಮಕ್ಕಳು ಎಷ್ಟೆಲ್ಲ ತಿಳಿದುಕೊಂಡಿದ್ದಾರೆ ಎಂದೆನಿಸುತ್ತಿತ್ತು.

ನಡುವೆ ಮಳೆ, ಜೊತೆಗೆ ಮಂಜು ಕವಿದು ಹತ್ತು ಅಡಿಗಿಂತ ಮುಂದೆ ಏನೂ ಕಾಣದಂತಹ ಸ್ಥಿತಿಯಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷ ಪ್ರಯಾಣ ಮಾಡಿದೆವು. ಅದು ನಮ್ಮಿಬ್ಬರಿಗೆ ಹೊಸದಾದ ಅನುಭವ ನೀಡಿತ್ತು. ಅಂದು ಶನಿವಾರವಾದ್ದರಿಂದ ರಸ್ತೆಯಲ್ಲಿ ಸಂಚಾರ ಹೆಚ್ಚಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕಾರುಗಳು ಪೆರೇಡ್ ಹೊರಟಂತೆ ಒಂದರ ಹಿಂದೊಂದು ಚಲಿಸುತ್ತಿದ್ದವು. ಹತ್ತು ಗಂಟೆ ದಾಟಿದ ಮೇಲೆ, ಹೊಟ್ಟೆಗೊಂದಿಷ್ಟು ಇಂಧನ ಬೇಕೆನಿಸಿತು. ಸಂಜೀತ್ ಅದರ ಬೇಟೆ ಶುರು ಮಾಡಿದ. ಅರ್ಧ ಗಂಟೆ ಹುಡುಕಿದ ಮೇಲೆ ಮಿಡ್ಲ್ ಟೌನ್ ಬಳಿ ಇಪ್ಪತ್ತು ಮೈಲಿ ದೂರದಲ್ಲಿ ಉಡುಪಿ ಭವನ್ ಎಂಬ ಹೋಟೆಲ್ ಇದೆ ಎಂದ. ಅಲ್ಲಿ ಹನ್ನೊಂದು ಗಂಟೆಯಿಂದ ಸಸ್ಯಾಹಾರ ಊಟ ಮಾತ್ರ ದೊರೆಯುವುದು ಎಂದು ತಿಳಿದಾಗ ಖುಷಿಯೂ ಆಯ್ತು.

ಉಡುಪಿ ಭವನ ಎಂದೊಡನೆ ನಮ್ಮ ಕರ್ನಾಟಕ ಬಿಟ್ಟರೆ ಇನ್ನಾವ ಸ್ಥಳದವರು ಆ ಹೆಸರು ಇಡಲು ಸಾಧ್ಯ? ಎಂದು ಸಮಾಧಾನದಿಂದ ಊಟ ಮಾಡುವ ಎಂದು ಅತ್ತ ಹೊರಟೆವು. ನಾವು ಕಾರು ನಿಲ್ಲಿಸುವುದಕ್ಕೂ ಹೋಟೆಲ್ ತೆರೆಯುವುದಕ್ಕೂ ಒಂದೇ ಆಯಿತು. ಊಟವೂ ಸಮೃದ್ಧವಾದ ದಕ್ಷಿಣ ಭಾರತದ ಸ್ವಾದಿಷ್ಟವಾದ ಊಟ ಮಾಡಿ ಸಂತೃಪ್ತಿಯಾಯಿತು. ಅಲ್ಲಿನ ಪ್ರಕೃತಿ ಸೌಂದರ್ಯವೂ ಆಹಾ ಎನ್ನುವಂತಿತ್ತು.

ಹಾಡು ಕೇಳುತ್ತ ಹರಟುತ್ತ ಕಾರು ನ್ಯೂಯಾರ್ಕ್ ಸಮೀಪಿಸಿದ್ದು ಅರಿವಿಗೆ ಬರಲಿಲ್ಲ. ನ್ಯೂಯಾರ್ಕ್ ಸಮೀಪಿಸುತ್ತಿದ್ದಂತೆ ಅದು ಮಾಯಾನಗರಿ ಎಂಬ ಪರಿಚಯವನ್ನು ಮಾಡಿ ಕೊಡತೊಡಗಿತು. ಕಾರುಗಳ ಭರಾಟೆ, ವೈಭವೋಪೇತವಾಗಿ ತಲೆ ಎತ್ತಿ ನಿಂತ ಕಟ್ಟಡಗಳು, ನದಿ, ಸಮುದ್ರ ಇವೆಲ್ಲವೂ ವಿಶ್ವವನ್ನೇ ತನ್ನ ಕಪಿ ಮುಷ್ಟಿಗೆ ತೆಗೆದುಕೊಂಡಿವೆಯಲ್ಲ ಎನಿಸಿತು. ತಡೆಯಿಲ್ಲದ ಸಂಚಾರಕ್ಕೆ ಮೇಲ್ ಸೇತುವೆಗಳು, ಸುರಂಗ ರಸ್ತೆಗಳು, ಮೆಟ್ರೋ ರೈಲು ಎಲ್ಲ ಅನುಕೂಲಗಳಿವೆ. ನ್ಯೂಯಾರ್ಕ್ ನಿಂದ ನ್ಯೂ ಜೆರ್ಸಿಯನ್ನು ಸೇರಿಸುವ ಸೇತವೆಗಳಂತೂ ಚಿತ್ತಾಕರ್ಷಕವಾಗಿವೆ. ಒಂದೆಡೆ ನದಿ, ಮತ್ತೊದೆಡೆ ಸಮುದ್ರ ಎರಡನ್ನೂ ಸೇತುವೆಗಳ ಮೇಲಿನಿಂದ ನೋಡಿ ಕಣ್ತುಂಬಿಕೊಳ್ಳ ಬಹುದು. ನೋಡ ನೋಡುತ್ತಿದ್ದಂತೆ ಮಗ ಕಾಯ್ದಿರಿಸಿದ್ದ ನ್ಯೂ ಜೆರ್ಸಿಯ ಹೋಟೆಲ್ ಬಂದೇ ಬಿಟ್ಟಿತು.

ಅಚ್ಚುಕಟ್ಟಾದ ಕೊಠಡಿ, ಸ್ವಚ್ಛತೆಗೆ ಆದ್ಯತೆ ಇದೆ ಎಂದು ನೋಡಿದೊಡನೆ ತಿಳಿಯಿತು. ಕೊಠಡಿಗೆ ಹೋದವರೆ ಲಗೇಜನ್ನು ಇರಿಸಿ ಅರ್ಧ ಗಂಟೆಯಲ್ಲಿ ಸಿದ್ಧವಾದೆವು. ಮೊದಲು ಹೋದದ್ದು ನ್ಯೂ ಜೆರ್ಸಿಯ ಲಿಬರ್ಟಿ ಪಾರ್ಕಿನ ಕಡೆಗೆ. ಮೂರು ದಿನಗಳಲ್ಲಿ ಒಟ್ಟು ಐದು ತಾಣಗಳಿಗಾಗಿ ಮುಂಗಡ ಪಾವತಿ ಮಾಡಿ ಬುಕ್ಕಿಂಗ್ ಮಾಡಿಕೊಂಡಿದ್ದ. ಮತ್ತಷ್ಟು ಉಚಿತವಾಗಿ ನೋಡುವಂತವು. ಲಿಬರ್ಟಿ ಪಾರ್ಕಿನ ಕಡೆಯಿಂದ ನಿಂತು ನೋಡಿದರೆ, ಸಮುದ್ರ ಅದರಾಚೆ ನ್ಯೂಯಾರ್ಕ್ ಕಟ್ಟಡಗಳ ನೋಟ ಕಣ್ಣಿಗೆ ಹಬ್ಬ. ಅದನ್ನು ನ್ಯೂಯಾರ್ಕ್ ಕಡೆಯಿಂದ ನೋಡಲು ಸಿಗದು. ದೂರದಲ್ಲಿ ಸ್ಟಾಚ್ಯೂ ಆಫ್ ಲಿಬರ್ಟಿ ಕೂಡ ಗೋಚರಿಸುತ್ತಿತ್ತು.‌. ಅದನ್ನು ಮರುದಿನಕ್ಕಾಗಿ ಬುಕ್ಕಿಂಗ್ ಮಾಡಲಾಗಿತ್ತು.

ಲಿಬರ್ಟಿ ಪಾರ್ಕಿನಲ್ಲಿ ಒಂದಷ್ಟು ಓಡಾಡಿ ಮ್ಯಾನ್ ಹ್ಯಾಟನ್ ಕಡೆ ಹೊರಟೆವು. ನ್ಯೂಜೆರ್ಸಿಯಲ್ಲಿ ಮಾರ್ಗ ಮಧ್ಯೆ ಒಂದು ರಸ್ತೆಯಲ್ಲಿ ಪ್ರತಿ ಐವತ್ತು ಮೀಟರಿಗೂ ಒಂದೊಂದು ಸಂಚಾರಿ ದೀಪಗಳಿದ್ದವು. ಅವು ನೋಡಲು ಸಾಲು ದೀಪಗಳನ್ನು ಹಚ್ಚಿ ಇಟ್ಟಂತೆ ತೋರುತ್ತಿದ್ದವು. ಅಲ್ಲಿ ಶಾಲೆ ಮತ್ತು ಪಾರ್ಕು ಇರೋದ್ರಿಂದ ಅಷ್ಟು ಸಂಚಾರಿ ದೀಪಗಳನ್ನು ಅಳವಡಿಸಿದ್ದರು. ಒಂದೆರಡು ಕಿ.ಮೀ ಹೋಗುವುದರಲ್ಲಿ ಕಾರು ಸುರಂಗ ಮಾರ್ಗ ಪ್ರವೇಶಿಸಿತು.

ಹಾಗೆ ಸಾಗ್ತಾ ಇರೋವಾಗ, ” ಈಗ ಸುರಂಗ ಮಾರ್ಗದಲ್ಲಿ ಯಾಕೆ ಹೋಗ್ತಾ ಇದ್ದೀವಿ ಗೊತ್ತಾ? ಇದರ ಮೇಲೆ ನದಿ ಹರೀತಾ ಇದೆ. ನದಿ ಸಮುದ್ರನಾ ಸೇರೋ ಜಾಗ ಇದು. ಭಯ ಆಗ್ತಾ ಇದೆಯಾ ಅಮ್ಮ?” ಎಂದು ನನ್ನತ್ತ ನೋಡಿದ. ಮುಖದಲ್ಲಿ ಇದ್ದ ನಗುವನ್ನು ಗ್ರಹಿಸಿದ ನಾನು, “ನಿತ್ಯ ಸಾವಿರಾರು ಜನ ಓಡಾಡ್ತಾ ಇದ್ದಾರಲ್ಲ. ನಾನೇಕೆ ಹೆದರ‌್ಲಿ” ಎಂದರೂ, ‘ನಿನ್ನ ಭಯವನ್ನು ನಾನು ಬಲ್ಲೆ’ ಎಂಬಂತಿತ್ತು ಅವನ ಮುಖ ಭಾವ.

ನ್ಯೂಯಾರ್ಕ್ ಅಂತೂ ಕಾಂಕ್ರೀಟ್ ಕಾಡಿಗೆ ಉಪಮೆಯೇ ಎನ್ನುವಂತಿದೆ. ಇದೊಂದು ದ್ವೀಪ ನಗರ. ಹಾಗಾಗಿ ಅಗಲವಾಗಿ ವಿಸ್ತರಿಸಲು ಸಾಧ್ಯವಿರದಿದ್ದರೂ ಆಕಾಶಕ್ಕೆ ಛಾವಣಿಗಳನ್ನು ಹಾಕಿದ್ದಾರೆ. ನಮ್ಮ ಗಂಗಾವತಿ ಪ್ರಾಣೇಶ್ ಅವರು ಹೇಳುವ ‘ ಬೆಂಗಳೂರಿನಲ್ಲಿ ನಾಯಿಗಳು ಮೇಲಿನಿಂದ ಕೆಳಕ್ಕೆ ಬಾಲ ಆಡಿಸುತ್ತವೆ’ ಎಂಬ ಮಾತು ನೆನಪಿಗೆ ಬಂದು, ಇಲ್ಲಿ ಕಟ್ಟಡಗಳನ್ನು ಭೂಮಿಯ ಆಳಕ್ಕೆ, ಆಕಾಶದ ಕಡೆಗೆ ವಿಸ್ತರಿಸುವರಲ್ಲ ಎನಿಸಿತು.

ನ್ಯೂಯಾರ್ಕ್ ನಗರದಲ್ಲಿ ನೋಡಬೇಕಾದ ಬಹಳಷ್ಟು ತಾಣಗಳಿವೆ. ಎತ್ತರದ ಕಟ್ಟಡಗಳನ್ನು ನೋಡುತ್ತ ಸಾಗಿದೆವು. ಮೊದಲು ಹೋಗಿದ್ದು ವಾಲ್ ಸ್ಟ್ರೀಟ್ ‌ನಲ್ಲಿರುವ ಅದೃಷ್ಟ ತರುವುದು ಎಂದು ನಂಬಲಾಗುವ ಕಂಚಿನ ಬಸವನ ( Charging bull) ಬಳಿ. ಈ ಬಸವನು ಅಮೇರಿಕನ್ನರು ಭಾವಿಸುವಂತೆ ಆರ್ಥಿಕ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಇದು 11 ಅಡಿ ಎತ್ತರ, 16 ಅಡಿ ಉದ್ದವಿದ್ದು ಈ ಮೂರ್ತಿಯನ್ನು 1987 ರಲ್ಲಾದ ಶೇರು ಮಾರುಕಟ್ಟೆಯ ಕುಸಿತದ ನಂತರ ಸ್ಥಾಪಿಸಲಾಗಿದೆ. ಜನರು ಸಾಲಾಗಿ ನಿಂತು ಬಸವನ ಜೊತೆ ಫೋಟೋ ತೆಗೆಸಿಕೊಳ್ಳುವರು. ಅಲ್ಲದೆ ಅದರ ವೃಷಣಗಳನ್ನು ಮುಟ್ಟುವುದು ಅದೃಷ್ಟ ತರುವುದು ಎಂಬ ಪ್ರತೀತಿ ಅಮೇರಿಕನ್ನರಲ್ಲಿದೆ.

ಇದಾದ ಬಳಿಕ ನಾವು ಹೋದದ್ದು ನ್ಯೂಯಾರ್ಕಿನ ಪ್ರಸಿದ್ಧ ತಾಣ ಎಂಪೈರ್ ಸ್ಟೇಟ್ ಬಿಲ್ಡಿಂಗ್ ವೀಕ್ಷಣೆಗೆ. ಅದಕ್ಕೆ ರಾತ್ರಿಯ ವೇಳೆಯೇ ಹೆಚ್ಚು ಸೂಕ್ತ. ಆ ಕಟ್ಟಡ ವೀಕ್ಷಣೆ ಎನ್ನುವುದಕ್ಕಿಂದ ಆ ಕಟ್ಟಡದ ಮೇಲಿನಿಂದ ನ್ಯೂಯಾರ್ಕ್ ನಗರವನ್ನು ವೀಕ್ಷಣೆ ಮಾಡುವುದಕ್ಕೆ ಎನ್ನುವುದೇ ಹೆಚ್ಚು ಸೂಕ್ತ. ರಕ್ಷಣೆಗಾಗಿ ನಮ್ಮ ತಪಾಸಣೆ ನಡೆಸಿದ ಬಳಿಕ ನಮ್ಮನ್ನು ಮೇಲಕ್ಕೆ ಹೋಗಲು ಬಿಟ್ಟರು. ಕೆಳ ಮಹಡಿಗಳಲ್ಲಿ ಹಳೆಯ ನ್ಯೂಯಾರ್ಕ್ ನಗರದ ಕಪ್ಪು ಬಿಳುಪು ಕಟ್ಟಡಗಳು ಮನ ಸೆಳೆಯುತ್ತವೆ. ಬಳಿಕ ಲಿಫ್ಟಿನಲ್ಲಿ ಎಂಭತ್ತಾರನೇ ಮಹಡಿಗೆ ಹೋದೆವು. ಅಬ್ಬಾ ಅಲ್ಲಿ ಕಂಡ ದೃಶ್ಯವಂತೂ ನಿಬ್ಬೆರಗಾಗಿಸುವಂತಹದ್ದು.

ಊಫ್! 102 ಅಂತಸ್ತುಗಳ, ಛಾವಣಿಯೂ ಸೇರಿದಂತೆ 1454 ಅಡಿ ಎತ್ತರದ ಗಗನಚುಂಬಿ ಕಟ್ಟಡವದು. ನ್ಯೂಯಾರ್ಕ್ ನಗರಕ್ಕೆ ಇದ್ದಂತಹ ‘ಎಂಪೈರ್ ಸ್ಟೇಟ್’ ಎಂಬ ಹೆಸರನ್ನು ಈ ಕಟ್ಟಡಕ್ಕೆ ಇಡಲಾಗಿದೆ. ಇದನ್ನು ಶ್ರೆವ್, ಲ್ಯಾಂಬ್ ಹಾಗೂ ಹಾರ್ಮನ್ ಎಂಬುವರು ವಿನ್ಯಾಸಮಾಡಿದವರು. ಪ್ರಸ್ತುತ ನ್ಯೂಯಾರ್ಕ್ ನಗರದ ಎಂಟನೇ ಅತಿ ಎತ್ತರದ ಕಟ್ಟಡವಾಗಿದೆ. ಇಲ್ಲಿನ 86 ಮತ್ತು 102 ನೇ ಮಹಡಿಯಿಂದ ನ್ಯೂಯಾರ್ಕ್ ನಗರವನ್ನು ವೀಕ್ಷಿಸಬಹುದಾಗಿದೆ.

ಎಂಪೈರ್ ಸ್ಟೇಟ್ ಕಟ್ಟಡದ 86 ನೇ ಅಂತಸ್ತಿನಲ್ಲಿ ಕಟ್ಟಡದ ಸುತ್ತ ಸುಮಾರು ಐದಾರು ಅಡಿಗಳ ಅವಕಾಶವಿದ್ದು ಬದಿಗೆ ಸಿಮೆಂಟಿನ ಅದರ ಮೇಲೆ ಗಾಜು ನಂತರ ಕಬ್ಬಿಣದ ಸರಳುಗಳ ಆವರಣವಿದೆ. ಅಲ್ಲಿನ ಜನ ಸಂದಣಿ ಮೈಮರೆತು ನ್ಯೂಯಾರ್ಕ್ ನಗರವನ್ನು ನೋಡುತ್ತಿತ್ತು. ಆಗಸದ ತಾರೆಗಳೆಲ್ಲ ಧರೆಗಿಳಿದು ಜಗಮಗಿಸುತ್ತಿದ್ದವು. ನಗರದೆಲ್ಲೆಡೆ ಲಕ್ಷದೀಪೋತ್ಸವ ಮಾಡುವಂತೆ ದೀಪಗಳ ಬೆಳಕು ಕೋರೈಸುತ್ತ, ಕಟ್ಟಡಗಳನ್ನು ಬೆಳಗುತ್ತಿದ್ದವು. ನ್ಯೂಯಾರ್ಕ್ ನಗರ ದೀಪವೆಂದು ಅಲ್ಲಿಂದಲೇ ಗೋಚರವಾಗುವುದು. ಇಷ್ಟು ಸಣ್ಣ ವಿಸ್ತೀರ್ಣದ ತಾಣ ಎನಿಸಿತು. ಇದೇ.. ಈ ಮಾಯೆಯೇ ಜನರನ್ನ ತನ್ನತ್ತ ಸೆಳೆದಿರುವುದು. ಶಿಕ್ಷಣ, ಉದ್ಯೋಗ ಜೊತೆಗೆ ಮಾಯಾಲೋಕವೇ ಯುವ ಶಕ್ತಿಯನ್ನು ತನ್ನತ್ತ ಸೆಳೆದಿರುವುದು ಎನಿಸಿತ್ತು.
ನಾವು ಕೂಡ ಹಲವೆಡೆ ನಿಂತು, ಕುಳಿತು ಹಲವು ವಿಕಲ್ಪಗಳಲ್ಲಿ ಫೋಟೋ ತೆಗೆದುಕೊಂಡು ಒಂದಷ್ಟು ಓಡಾಡಿದೆವು. ಕಿಂಗ್‌ಕಾಂಗ್ ಚಲನಚಿತ್ರ ಅಲ್ಲಿಯೇ ಚಿತ್ರೀಕರಣವಾಗಿದ್ದರಿಂದ ಗೊರಿಲ್ಲ ಪ್ರತಿಕೃತಿಯೂ ಇದೆ. ಅದನ್ನೂ ಮಾತನಾಡಿಸಿ ಕೆಳಗಿಳಿದು ಬಂದೆವು.

ಎಂಪೈರ್ ಸ್ಟೇಟ್ ಬಿಲ್ಡಿಂಗ್ ‌ನಿಂದ ಹೊರಟದ್ದು Time square ಕಡೆಗೆ. ನಾವಿರುವುದು ಜಾಹೀರಾತು ಜಗತ್ತು ಎನ್ನುವುದಕ್ಕೆ ಸಾಕ್ಷಿಯಾಗಿತ್ತು ಅದು. ಎತ್ತ ನೋಡಿದರೂ ಜಾಹಿರಾತುಗಳ ಸುರಿಮಳೆ, ಅದನ್ನು ನೋಡಲು ಜನಜಾತ್ರೆಯಂತೆ ಸೇರಿ, ಬೆರಗಿನಿಂದ ಕಣ್ತುಂಬಿಕೊಳ್ಳುತ್ತಿದ್ದರು. ಜಾಹಿರಾತು ಜಗತ್ತು ಒಂಥರಾ ಚಮತ್ಕಾರೀ ಜಗತ್ತಿನಂತೆ ಕಂಗೊಳಿಸುತ್ತಿತ್ತು.

ರಾತ್ರಿಯೂಟಕ್ಕೆ ಪಿಜ್ಜಾ ತಿನ್ನಬೇಕು ಎಂದು ಸಂಜೀತನ ಇಚ್ಛೆ( ಆಜ್ಞೆ) ಆಗಿತ್ತು. ಅಲ್ಲಿನ ವಿಶೇಷವಾದವುಗಳ ರುಚಿ ನೋಡಬೇಕು ಎನ್ನುವುದು ಅವನ ಅಭಿಮತ. ಅದರಂತೆ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟ್‌ನಲ್ಲಿ ಸ್ಪೈಡರ್ ಮ್ಯಾನ್ ಚಿತ್ರದ ನಾಯಕ ಚಿತ್ರದಲ್ಲಿ ಡೆಲಿವರಿ ಹುಡುಕನಾಗಿ ನಿರ್ವಹಿಸಿದ್ದ ಎನ್ನುವ ಕಾರಣಕ್ಕೆ ಅದು ಜನಪ್ರಿಯವಾಗಿತ್ತು. ಆ ಪಿಝೆರಿಯಾದ ಬಳಿ ಹೋದರೆ ಅಲ್ಲಿ ಐವತ್ತು ಮೀ ಉದ್ದದ ಸಾಲಿತ್ತು. ನಮ್ಮನ್ನು ಒಂದು ಕಡೆ ಕೂರಿಸಿ ಅಣ್ಣ ತಮ್ಮ ಇಬ್ಬರೂ ಹೇಗೋ ಪಿಜ್ಜಾ ತಂದರು. ಆ ಪಿಜ್ಜಾ ದೊಡ್ಡ ಕೊಳಗವನ್ನು ಮುಚ್ಚುವ ತಟ್ಟೆಯಷ್ಟು ದೊಡ್ಡದಿತ್ತು. ಎರಡು ತುಂಡು ಮುಗಿಸುವುದರಲ್ಲಿ ಸಾಕುಸಾಕಾಯಿತು. ಬಿಸಿ ಬಿಸಿಯಾದ ಪಿಜ್ಜಾ ರುಚಿಕರವೂ ಆಗಿತ್ತು. ಬಳಿಕ ಬಾಳೆಹಣ್ಣು ತಿಂದು ನೀರು ಕುಡಿದಾಗ ತೃಪ್ತ ಭಾವ.

ಆ ದಿನ ರಾತ್ರಿ ಕಾರನ್ನು ವಾಪಾಸು ಕೊಡುವುದು ಎಂದು ಮೊದಲೇ ನಿರ್ಧಾರವಾಗಿತ್ತು. ನಾಲ್ಕು ದಿನಗಳ ಕಾಲ ನಮ್ಮನ್ನು ತಿರುಗಾಡಿಸಿದ ಕಾರನ್ನು ಅವರು ಸೂಚಿಸಿದಲ್ಲಿಗೆ ಹೋಗಿ ಕಾರು ನಿಲ್ಲಿಸಿ ಕೀ ಹಾಕಿ ಹೊರಟೆವು. ಕಾರು ಪಾರ್ಕಿಂಗ್ ಅಲ್ಲಿ ಸಮಸ್ಯೆಯಿಂದಾಗಿ ನಾಲ್ಕು ದಿನಗಳಿಗಷ್ಟೇ ಅದನ್ನು ಪಡೆಯಲಾಗಿತ್ತು. ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ರೂಮಿನತ್ತ ಹೊರಟಾಗ ಆ ದಿನ ಸಾರ್ಥಕವೆನಿಸಿತ್ತು.

ಮುಂದುವರೆಯುವುದು…

ಹಿಂದಿನ ಸಂಚಿಕೆಗಳು :


  • ಕಮಲಾಕ್ಷಿ ಸಿ ಆರ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading