ಅ…ಅ…ಅಮೆರಿಕಾ ನೋಡಾ (ಭಾಗ-೧)

‘ಹಸುವಿನಿ ಹಿಂದೆ ಕರು’ ಎನ್ನುವುದು ಈಗ ಬದಲಾಗಿ ಮಕ್ಕಳ ವ್ಯಾಮೋಹ ನಮ್ಮನ್ನು ಅಮೆರಿಕಾಗೆ ಹೊರಡುವಂತೆ ಮಾಡಿತು. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…

‘ದೇಶ ಸುತ್ತು, ಕೋಶ ಓದು” ಅದರಿಂದ ಅರಿವು ಬೆಳೆಯುತ್ತದೆ ಎನ್ನುತ್ತದೆ ಉಕ್ತಿ. ಕೋಶ ಓದುವುದು ಸರಿ, ದೇಶ ಸುತ್ತು ಎನ್ನುವುದಕ್ಕೆ ವ್ಯತಿರಿಕ್ತವಾಗಿ ವಿದೇಶ ಪ್ರವಾಸ ಮಾಡಬೇಕು ಎಂಬ ವ್ಯಾಮೋಹ ನನಗೆ ಇರಲಿಲ್ಲ. ಅದರಲ್ಲೂ ಪ್ರವಾಸ ಎಂದರೆ ಚಿಕ್ಕಂದಿನಿಂದ ದೇಹಾಲಸ್ಯದ ಕಾರಣ ಪ್ರವಾಸ ಎಂದರೆ ಹೌಹಾರುತ್ತಿದ್ದೆ. ಹಾಗಾಗಿ ನಮ್ಮ ದೇಶ, ನಮ್ಮ ನೆರೆ ರಾಜ್ಯಗಳನ್ನೇ ಸರಿಯಾಗಿ ನೋಡದವಳು ನಾನು. ‘ಹಸುವಿನಿ ಹಿಂದೆ ಕರು’ ಎನ್ನುವುದು ಈಗ ಬದಲಾಗಿ ಮಕ್ಕಳ ವ್ಯಾಮೋಹ ನಮ್ಮನ್ನು ಅಮೆರಿಕಾಗೆ ಹೊರಡುವಂತೆ ಮಾಡಿತು.

ಭೂಮಿಯ ಮೇಲಿನ ನಮ್ಮ ಬದುಕಿನ ಪಯಣವೇ ಒಂದು ಪ್ರವಾಸದಂತೆ. ಸೂರ್ಯೋದಯದಿಂದ ಸೂರ್ಯಾಸ್ತದ ಅವಧಿಯಲ್ಲಿ ಮನುಷ್ಯನನ್ನು ಒಳಗೊಂಡಂತೆ ಪ್ರಾಣಿ ಸಂಕುಲ ತನ್ನ ವಾಸಸ್ಥಾನದಿಂದ ಹೊರಬಂದು ಹೊಟ್ಟೆ ಬಟ್ಟೆಗೆ ಸಂಪಾದಿಸುವುದು ಪ್ರಧಾನವಾಗಿತ್ತು. ಆದರೆ ಮಾನವ ಇತಿಹಾಸ ವಿಕಸನವಾಗುತ್ತ ಹೋದಂತೆ ಮನುಷ್ಯನ ಜೀವನ ಶೈಲಿ ಸುಧಾರಿಸುತ್ತಾ ಹೋಯಿತು. ಸುಧಾರಿತ ವಸತಿ, ವಸ್ತ್ರದ ಜೊತೆಗೆ ಕುಟುಂಬ ವ್ಯವಸ್ಥೆ, ಸಮಾಜ ವ್ಯವಸ್ಥೆ ಜಾರಿಯಾದವು. ಶಿಕ್ಷಣ, ಉದ್ಯೋಗದ ಜೊತೆಗೆ ಸಮಾಜ ನಾಗರೀಕವಾಗ ತೊಡಗಿ ಸಮ್ರಾಜ್ಯಗಳು, ದೇಶಗಳು ಅಸ್ಥಿತ್ವಕ್ಕೆ ಬಂದವು.

ಭಾಷೆ, ಆಚಾರ-ವೈಚಾರಿಕತೆ, ಸಂಸ್ಕೃತಿ, ಜೀವನ ಶೈಲಿ ದೇಶದಿಂದ ದೇಶಕ್ಕೆ ಭಿನ್ನವಾದರೂ ತಂತ್ರಜ್ಞಾನದ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಹಾಗೂ ಪ್ರಗತಿಯಿಂದ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರವು ಜಾಗತಿಕವಾಗಿ ಒಗ್ಗೂಡಿದೆ. ಇದರ ಪರಿಣಾಮವಾಗಿ ಯಾವುದೇ ದೇಶದ ನಾಗರಿಕ ತನ್ನ ಇಚ್ಛೆಯ ದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಇಂದಿನ ದಿನಗಳಲ್ಲಿ ವಿದೇಶ ಸಂಚಾರ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ.

ನಾಲ್ಕು ವರ್ಷಗಳ ಹಿಂದೆ ನನ್ನ ದೊಡ್ಡ ಮಗ ವಿನೀತ್, ಮತ್ತೆರಡು ವರ್ಷಗಳ ನಂತರ ಚಿಕ್ಕ ಮಗ ಸಂಜೀತ್ ಒಬ್ಬರ ನಂತರ ಮತ್ತೊಬ್ಬರು ಎಂ.ಎಸ್ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ಹೋಗಬೇಕೆಂದು ಆಸೆ ಪಟ್ಟರು. ಮಕ್ಕಳ ಇಚ್ಛೆಯನ್ನು ಪೂರೈಸುವುದಷ್ಟೇ ನಮ್ಮ ಆಯ್ಕೆಯಾಯಿತು. ಈಗ ದೊಡ್ಡವನು ಎಂ.ಎಸ್ ಬಳಿಕ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರೆ, ಇದೇ ಮೇನಲ್ಲಿ ಚಿಕ್ಕ ಮಗ ಎಂ. ಎಸ್ ಪೂರ್ಣಗೊಳಿಸಲಿರುವ.

ದೊಡ್ಡ ಮಗನ Graduate day ಸಂದರ್ಭದಲ್ಲಿ ಪ್ರಪಂಚ ಆಗಿನ್ನೂ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರಿಂದ, VISA ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಎರಡು ವರ್ಷಕ್ಕೆ ಸಂಜೀತ್ Graduate day ಗೆ ಹೋಗುವ ಎಂದು ಆಗ ಕೈಚೆಲ್ಲಿದ್ದೆವು. ಈ ಬಾರಿ ವಿನೀತ್‌ ವರ್ಷ ಮೊದಲೇ VISA ಪ್ರಕ್ರಿಯೆಗೆ ಮುನ್ನುಡಿ ಹಾಡಿದ. ಕಳೆದ ಜೂನ್ ತಿಂಗಳಿನಲ್ಲಿ VISA application ಹಾಕಿಸಿದ. ಜನವರಿ ತಿಂಗಳಲ್ಲಿ ಅಮೆರಿಕಾ ದೂತವಾಸದ ಮೂಲಕ VISA ದೊರಕಿತು.

ಸರ್ಕಾರಿ ಉದ್ಯೋಗಿಯಾದ ನನಗೆ VISA ಪಡೆಯಲು ಹಾಗೂ ವಿದೇಶ ಪ್ರವಾಸ ಕೈಗೊಳ್ಳಲು ಬಹಳಷ್ಟು ಷರತ್ತುಗಳನ್ವಯ ಅನುಮತಿ ಪಡೆಯಬೇಕು. ನಮ್ಮ ಇಲಾಖೆಯಿಂದ ಅನುಮತಿ ಪಡೆಯಲು ಬಹಳಷ್ಟು ಶಿಷ್ಟಾಚಾರ ಪಾಲಿಸಬೇಕು. VISA ಪಡೆಯಲು ಸಂದರ್ಶನ ಸಮಯದಲ್ಲಿ ಸಂದರ್ಶಕರೊಡನೆ ಸಂವಹನ ನಡೆಸುವುದು ಪ್ರಮುಖವಾದ ಹಂತ. ನಾವು ಸ್ವದೇಶಕ್ಕೆ ಹಿಂದಿರುಗಿ ಬರುತ್ತೇವೆ ಎಂವುದನ್ನು ಖಾತ್ರಿಪಡಿಸುವುದು ಮುಖ್ಯವಾಗುತ್ತದೆ. ನಾವು ನೀಡುವ ಮಾಹಿತಿಗಳು ಬಹುತೇಕ ಸಂದರ್ಶಕರ ಬಳಿ ಇದ್ದೇ ಇರುತ್ತದೆ. ವಿಶ್ವಾಸದಿಂದ ಅವರೊಡನೆ ಮಾತನಾಡುವುದು ಮುಖ್ಯವಾಗುತ್ತದೆ.

ನಮಗೆ VISA ಪಡೆಯುವಾಗ ಬಯೋಮೆಟ್ರಿ ಅಂದರೆ ನಮ್ಮ ಬೆರಳಚ್ಚು ಹಾಗೂ ಫೋಟೋ ಪಡೆದುಕೊಳ್ಳುತ್ತಾರೆ ನಂತರ ಸಂದರ್ಶನ. ನಮ್ಮ ಮುಂದೆ ಸಂದರ್ಶನ ಎದುರಿಸಿದ ಹಲವರಿಗೆ VISA ನಿರಾಕರಣೆಯಾಗಿದ್ದು ಆತಂಕವಾಗಿತ್ತು. ಮಕ್ಕಳು ಸಂಭಾವ್ಯ ಪ್ರಶ್ನೋತ್ತರಗಳ ಕುರಿತು ಹೇಳಿದ್ದರೂ ಯಾವ ಮಾಹಿತಿ ಕೇಳುವರೋ ಎಂಬ ಕುತೂಹಲವಿತ್ತು.

ಬೆಳಗ್ಗೆ 8.45 ಕ್ಕೆ ನಮ್ಮ ಸಂದರ್ಶನವಿತ್ತು. ಮೊಬೈಲ್ ಫೋನ್‌ಗಳನ್ನು ಚಿಕ್ಕ ಮಗನ ಕೈಲಿತ್ತು ಸರದಿಯಲ್ಲಿ ನಿಂತೆವು. ಎರಡು ಸುತ್ತುಗಳ ಪರಿಶೀಲನೆ ಬಳಿಕ ಬಳಿಕ ಸಂದರ್ಶನ ಪ್ರಕ್ರಿಯೆ ಕಡೆ ಸಾಗುವ ಸಾಲಿನಲ್ಲಿ ನಿಂತೆವು. ನಮ್ಮ ಸಂದರ್ಶನ ಮಾಡಿದ ಸಂದರ್ಶಕ ನಮ್ಮ ಮುಂದಿನ ಇಬ್ಬರಿಗೆ VISA ನಿರಾಕರಿಸಿದ್ದರು.

“Good morning officer” ಎಂದು ಅವರತ್ತ ನೋಡಿದೆವು. ಆತ ಕೂಡ ‘ good morning to both of you ” ಎಂದು ಮುಗುಳ್ನಕ್ಕರು.

 

“ಅಮೇರಿಕಾ ಪ್ರವಾಸ ಏಕೆ ಮಾಡಬೇಕೆಂದಿರುವಿರಿ?” ಎಂಬ ಪ್ರಶ್ನೆ ಬಂತು. ಈ ಪ್ರಶ್ನೆ ನಿರೀಕ್ಷಿಸಿದ್ದ ನಾನು ” ಮಗನ ಗ್ಯಾಜ್ಯಯೇಟ್ ಸಮಾರಂಭದಲ್ಲಿ ಪಾಲ್ಗೊಳ್ಳಲು” ಎಂದೆ.

“ಮಗನ ಹೆಸರೇನು? ಎಲ್ಲಿ ವ್ಯಾಸಂಗ ಮಾಡುತ್ತಿರುವ”? ಎಂಬ ಪ್ರಶ್ನೆ ಹಾಕಿದರು.

ನಾನು ನಮ್ಮವರಿಗೆ ಮಾತನಾಡಲು ಬಿಡದೆ, ಚಿಕ್ಕ ಮಗನ ಹೆಸರನ್ನು ಹೇಳಿ, ಅದರ ಜೊತೆಯಲ್ಲಿಯೇ ದೊಡ್ಡ ಮಗನ ವಿವರವನ್ನು ಹೇಳಿದೆ. ಅವನು ವಿದ್ಯಾರ್ಥಿಗಳಿಗೆ ನೀಡುವ ವಿಸ್ತರಿಸಿದ VISA ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಂದೆ.

ನನ್ನ ದೀರ್ಘ ವಿವರಣೆಯನ್ನು ನಿರೀಕ್ಷೆ ಮಾಡಿರಲಿಲ್ಲವೇನೋ, ಆತನ ಮುಖದಲ್ಲಿ ಸಣ್ಣದೊಂದು ನಗು ಹಾದು ಹೋಯಿತು. ” ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ” ಎಂದರು.

ಶಿಕಾಗೋದಲ್ಲಿನ ಅವನು ನಿರ್ವಹಿಸುತ್ತಿದ್ದ ಕಂಪನಿಯ ಹೆಸರು ಹೇಳಿದೆ. ಆ ಬಳಿಕ “ನೀವಿಬ್ಬರು ಏನು ಕೆಲಸ ಮಾಡುತ್ತಿರುವಿರಿ”? ಎಂದರು. ನಮ್ಮಿಬ್ಬರ ವೃತ್ತಿಯನ್ನು ಹೇಳಿದೆ. ” ನೀವು ಯಾವ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವಿರಿ”? ಎಂದರು.

” ರಾಜ್ಯ ಸರ್ಕಾರದ ಪದವಿ ಪೂರ್ವ ಕಾಲೇಜು”ಎಂದೆ.

ಆತ ಸ್ವಲ್ಪ ಹೊತ್ತು ಕಂಪ್ಯೂಟರ್‌ನಲ್ಲಿ ಪರಿಶೀಲನೆಯಲ್ಲಿ ಮೌನವಾಗಿ ತೊಡಗಿಕೊಂಡರು.. ನನಗೋ ಇವರು ಹೆಚ್ಚಿನ ಮಾಹಿತಿ ಕೇಳಿಲ್ಲ, documents ಏನನ್ನು ಕೇಳುತ್ತಿಲ್ಲವಲ್ಲ ಎಂದು ಚಿಂತಿಸುವಂತಾಯಿತು. ಹೃದಯ ಬಡಿತ ನನಗೇ ಕೇಳಿಸುವಂತಾಯಿತು. ಅರ್ಧ ನಿಮಿಷದ ಬಳಿಕ ನಮ್ಮ ಪಾಸ್‌ಪೋರ್ಟ್‌ಗಳನ್ನು ತಮ್ಮಲ್ಲಿಯೇ ಇರಿಸಿಕೊಂಡು, ” ನಿಮ್ಮ VISA approval ಮಾಡುತ್ತಿರುವೆ, congratulations ” ಎಂದರು.

ಸಂದರ್ಶಕರಿಗೆ ಧನ್ಯವಾದಗಳನ್ನು ತಿಳಿಸಿ, ಸಮಾಧಾನದ ನಿಟ್ಟುಸಿರಿಡುತ್ತ ಹೊರಬಂದೆವು. ನಮ್ಮವರು ‘ಇನ್ನೂ ಹೆಚ್ಚು ಕೇಳಿದ್ರೆ ನೀನು ಅವರಿಗೆ ಪಾಠ ಮಾಡ್ತಿದ್ದೆ ಎನಿಸಿ ಹೆಚ್ಚು ಪ್ರಶ್ನೆ ಕೇಳಲಿಲ್ಲ ನೋಡು’ ಎಂದು ಕಾಲೆಳೆದರು. ಅಮೆರಿಕಾ ಪ್ರವಾಸಕ್ಕೆ ಅಗತ್ಯವಾಗಿ ಬೇಕಿದ್ದ ಮೊದಲ ಹಂತವನ್ನು ದಾಟಿದೆವು.

ವೀಸಾ ಅನುಮೋದನೆ ನಂತರ ವಿನೀತ್ ಒಂದು ವಾರದಲ್ಲೇ ಬೆಂಗಳೂರಿನಿಂದ ಅಮೆರಿಕಾಕ್ಕೆ, ಅಮೆರಿಕಾದಿಂದ ಬೆಂಗಳೂರಿಗೆ ನಮ್ಮ ಟಿಕೆಟ್ ಕಾಯ್ದಿರಿಸಿದ. ವೀಸಾ ಪಡೆದದ್ದು ಮೊದಲ ಹಂತವಾದರೆ, ನಮ್ಮ ಇಲಾಖೆಯ ಅನುಮತಿ ಪಡೆಯುವುದು ಎರಡನೇ ಹಂತ. ಇಲಾಖೆಯನುಸಾರ ಎಲ್ಲ ಮಾಹಿತಿಗಳನ್ನು ಒದಗಿಸಿ ಇಲಾಖೆಯ ಹಂತವೂ ಸುಸೂತ್ರವಾಗಿ ಆಯಿತು. ಇದರ ಜೊತೆಗೆ ವಿದೇಶ ಪ್ರವಾಸದ ನೆಪದಲ್ಲಿ ಒಂದಷ್ಟು ಶಾಪಿಂಗ್ ಮಾಡಿದೆವು. ಶಾಪಿಂಗ್ ಮಾಡಲು ಸುಲಭವಾಗುವಂತೆ SBI Travel card ನ್ನು ಪಡೆದುಕೊಂಡೆ.

ಒಂದು ವಾರ ಮೊದಲು, ಅಮ್ಮ, ಅತ್ತೆಯವರನ್ನು ನೋಡಿಕೊಂಡು ಅವರ ಆಶೀರ್ವಾದ ಪಡೆದು ಬಂದೆವು. ನನ್ನ ಅಜ್ಜಿಯವರ ಊರಿಗೆ ಹೋಗಿ ಸೋದರ ಮಾವಂದಿರ ಆಶೀರ್ವಾದ ಪಡೆದು, ನಮ್ಮವರ ಸೋದರ ಮಾವನ ಮನೆಗೂ ಹೋಗಿ ಬಂದೆವು.

ಹೊರಡುವ ದಿನ ಸನ್ನಿಹಿತವಾಗುತ್ತಿದ್ದಂತೆ, ಐದು ವಾರಗಳ ಕಾಲ ಮನೆ ಬೀಗ ಹಾಕುವುದಾ? ದೂಳು ತುಂಬಿದ ಮನೆಯೊಳಗೆ ಕಾಲಿಡುವುದು ಹೇಗೆ? ಎಂಬ ಪ್ರಶ್ನೆ ಎದುರಾಯಿತು. ನಮ್ಮ ಎದುರು ಮನೆಯವರೊಡನೆ ಮಾತನಾಡಿ, ಅವರ ಸಮ್ಮುಖದಲ್ಲಿ ನಮ್ಮ ಸೆಕ್ಯೂರಿಟಿಯವನು ದಿನಕ್ಕೊಮ್ಮೆ ಕಸ ತೆಗೆದು, ಎರಡು ದಿನಗಳಿಗೊಮ್ಮೆ ನೆಲ ಒರೆಸಲು ಒಪ್ಪಿಸಿದೆವು.

ಏಪ್ರಿಲ್ 17 ರ ರಾತ್ರಿ 1.15 ಕ್ಕೆ ನಮ್ಮ ಪ್ರವಾಸವಿದ್ದರೂ ಏಪ್ರಿಲ್ 16 ರ ರಾತ್ರಿ ಏಳಕ್ಕೇ ಮನೆ ಬಿಡಬೇಕಿತ್ತು. ಬೆಳಗಿನಿಂದ ಸ್ನೇಹಿತರು, ಸಹೋದ್ಯೋಗಿಗಳು ಕರೆ ಮಾಡಿ ಪ್ರವಾಸಕ್ಕೆ ಶುಭ ಕೋರಿದರು. ಅಂದು ಮಧ್ಯಾಹ್ನ ಶುರುವಾದ ಮಳೆ ಸಂಜೆಯಾದರೂ ಕಡಿಮೆ ಆಗಿರಲಿಲ್ಲ. ನಾಲ್ಕು ದೊಡ್ಡ ಹಾಗೂ ಎರಡು ಚಿಕ್ಕ ಸೂಟ್‌ಕೇಸ್‌ಗಳೊಂದಿಗೆ ಏರ್‌ಪೋರ್ಟ‌ಗೆ ಹೋಗಲು ದೊಡ್ಡ ವಾಹನವೇ ಬೇಕಿತ್ತು. ಸಂಜೆ 5.30 ರಿಂದ ಕ್ಯಾಬ್‌ಗೆ ಪ್ರಯತ್ನಿಸಿದರೂ 7.00 ಗಂಟೆಯವರೆಗೆ ಕ್ಯಾಬ್ ಸಿಗಲಿಲ್ಲ. ನಮ್ಮ ಲಗೇಜಿನದೇ ದೊಡ್ಡ ಸಮಸ್ಯೆ ಎನ್ನುವಂತಾಯಿತು. ಇಬ್ಬರೂ ಒಂದೊಂದು ಕ್ಯಾಬ್ ಮಾಡಿಕೊಂಡು ಹೋಗುವ ಎನ್ನುವಾಗ, ದೊಡ್ಡ ಕ್ಯಾಬ್ ಬುಕ್ಕಾಯಿತು.

ಬಿರುಸಾದ ಮಳೆಯಲ್ಲಿ ಕ್ಯಾಬ್ ಡ್ರೈವರ್ ನಿಧಾನಗತಿಯಲ್ಲಿ ಚಾಲನೆ ಮಾಡತೊಡಗಿದ್ದ. ಏರ್‌ಪೋರ್ಟ್ ತಲುಪುವ ಸಮಯ ರಾತ್ರಿ 9.00 ದಾಟುವಂತೆ ತೋರಿತು. ನಮ್ಮವರು ಹತ್ತು ಕಿ.ಮೀ ಆದರೂ ಕಾರಿನ ವೇಗ ಏರಿಸದ ಚಾಲಕನಿಗೆ, ” ದಿನವೂ ಇಷ್ಟೇ ನಿಧಾನವಾಗಿ ಹೋಗೋದಾ? ನಾವು ಏರ್‌ಪೋರ್ಟ್ ತಲುಪಿದ ಹಾಗೆ ಇವತ್ತು” ಎಂದರು. ಅವನಿಗೆ ಇರುಸುಮುರುಸಾಯಿತು ಎಂದು ತೋರುತ್ತೆ, ವೇಗ ಹೆಚ್ಚಿಸತೊಡಗಿದೆ.

ಗಾಬರಿಯಾದ ನಾನು ” ಸ್ವಲ್ಪ ಸ್ಪೀಡ್ ಕಡಿಮೆ ಮಾಡಪ್ಪ.. ನಿಮ್ಮ comfort speed maintain ಮಾಡಿ” ಎಂದೆ. ಯಲಹಂಕ ನಂತರ ಸಂಚಾರ ದಟ್ಟಣೆ ಜೊತೆಗೆ ಮಳೆಯೂ ಕಡಿಮೆಯಾಗುತ್ತ ಬಂದಿದ್ದು ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು. ಮಾರ್ಗ ಮಧ್ಯೆ ಆತ್ಮೀಯರ ಶುಭಾಶಯಗಳು ಮಾರ್ಗದ ಆತಂಕವನ್ನು ಕಡಿಮೆ ಮಾಡಿದವು. ಫೋಟೋ ಎಲ್ಲ ಕಡೆ ತಗೋಳಿ ಎಂಬ ಮಾತು ಕೇಳಿ ಅಲ್ಲಿಯೇ ಒಂದು ಫೋಟೋ ತೆಗೆದುಕೊಂಡದ್ದಾಯಿತು.

ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ಪೋರ್ಟ್ ಟರ್ಮಿನಲ್ -2ನ್ನು ತಲುಪಿದಾಗ ರಾತ್ರಿ 8.50. ಒಳಪ್ರವೇಶಿಸಿದೊಡನೆ ಚೆಕ್ ಇನ್ ಲಗೇಜುಗಳನ್ನು ಕೊಟ್ಟು ಬೋರ್ಡಿಂಗ್ ಪಾಸ್ ಪಡೆದು ಇಮಿಗ್ರೇಷನ್ ಸಾಲಿನಲ್ಲಿ ನಿಂತೆವು. ಇದು ನನ್ನ ಮೊದಲ ವಿದೇಶ ಪ್ರವಾಸವಾದ್ದರಿಂದ ನಮ್ಮವರನ್ನು ಹಿಂಬಾಲಿಸಿದೆ. ನಮ್ಮವರೇ ಮೊದಲು ಪ್ರವಾಸದ ಉದ್ದೇಶ ಹೇಳಿದ್ದರಿಂದ ನಾನು ಪಾಸ್‌ಪೋರ್ಟ್ ಅಧಿಕಾರಿ ಕೈಗಿತ್ತು, ಸ್ಟ್ಯಾಂಪ್ ಪಡೆದೆ.

ಇಷ್ಟು ಮುಗಿಯುವ ಹೊತ್ತಿಗೆ 9.45 ದಾಟಿತ್ತು. ಮನೆಯಿಂದ ಹೊಟ್ಟೆಗೆ ಏನನ್ನೂ ಹಾಕದೆ ಹೊರಟಿದ್ದೀರಿ ಎಂದು ನೆನಪಿಸತೊಡಗಿತು. ಲಾಂಜ್‌ನಲ್ಲಿ ಊಟ ಮುಗಿಸೋದು ಎಂದುಕೊಂಡಿದ್ದೆವು. ಅದರಂತೆ ಅಲ್ಲಿ ಹೋದವರು ಹೌಹಾರಿದೆವು. ಅಂದು ವಿಪರೀತ ಜನಸಂದಣಿ, ಇಪ್ಪತ್ತು ನಿಮಿಷ ಸಾಲಿನಲ್ಲಿ ನಿಂತರೂ ಒಂದಿಂಚೂ ಕದಲಲಿಲ್ಲ. ನಮ್ಮವರು ಹೋಗಿ ವಿಚಾರಿಸಿದಾಗ ಲಾಂಜ್‌ನಲ್ಲಿ ಟೇಬಲ್ ಖಾಲಿ ಇಲ್ಲ, ತುಂಬಾ ಜನಸಂದಣಿ ಇದೆಯೆಂದು.

ಹಸಿವಿಗೆ ತಾಳ್ಮೆ ಕಡಿಮೆ, ನಂತರ ವೆಜ್ ರೆಸ್ಟೋರೆಂಟ್ ಹುಡುಕುತ್ತ ಹೊರಟೆವು. ‘ಬಾಂಬೆ ಬ್ರಾಸೆರಿ’ ಒಂದು ಕಾಫಿ ಆರ್ಡರ್ ಮಾಡಿ, ವೆಜ್ ಬಿರಿಯಾನಿ ತಿಂದೆವು. ಅದಕ್ಕಾಗಿ ತೆತ್ತದ್ದು 1170 ರೂ ಅಷ್ಟೇ. ಹೋಟೆಲ್ ಒಳಾಂಗಣವನ್ನು ವಿಶಿಷ್ಟ ಚಿತ್ರಗಳಿಂದ ಅಲಂಕರಿಸಿದ ಮಡಿಕೆಗಳನ್ನು ಜೋಡಿಸಿದ್ದು ಆಕರ್ಷಕವಾಗಿತ್ತು.

ಹೊಟ್ಟೆ ಶಾಂತವಾದ ಬಳಿಕ ಏರ್ಪೋರ್ಟ್ ಸೊಬಗನ್ನು ಕಣ್ತುಂಬಿಕೊಂಡು ಹಲವು ಚಿತ್ರಗಳನ್ನು ತೆಗೆದುಕೊಂಡೆವು. ನಮ್ಮ ವಿಮಾನ ಅರ್ಧ ಗಂಟೆ ತಡ ಎಂದು ಕೇಳಿ ಸಮಾಧಾನದಿಂದ ಓಡಾಡಿದೆವು. ಏರ್ ಫ್ರಾನ್ಸ್ ವಿಮಾನಕ್ಕೆ ಬೋರ್ಡಿಂಗ್ ಮಾಡಬಹುದು ಎಂಬ ಸಂದೇಶ ಬಂದ ನಂತರ ಅತ್ತ ಮುಖ ಮಾಡಿದೆವು.

ಮುಂದುವರೆಯುವುದು…


  • ಕಮಲಾಕ್ಷಿ ಸಿ ಆರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading