“ಕಪಿಲೆ ಕಂಡ ಕಥೆಗಳು” ಕೃತಿ ಪರಿಚಯ

ನದಿಗಳು ಎಲ್ಲಾ ಕಸ ಕಡ್ಡಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಸೌಮ್ಯವಾಗಿ ಹರಿಯುತ್ತಾಳೆ. ಹಾಗೆ ಹೆಣ್ಣು ಕೂಡಾ ಹೊಗಳಿಕೆ ತೆಗಳಿಕೆ ಎಲ್ಲವನ್ನು ತನ್ನ ಒಡಲಿನಲ್ಲಿ ಹಾಕಿಕೊಂಡಿರುತ್ತಾಳೆ. ಹೆಣ್ಣು ತನ್ನ ತಾಳ್ಮೆ ಕಳೆದುಕೊಂಡಾಗ ತನ್ನ ರೌದ್ರರೂಪ ತೋರಿಸುತ್ತಾಳೆ. ನದಿಯೂ ಹಾಗೆ ಎನ್ನುತ್ತಾ ಕುಸುಮಾ ಆಯರಹಳ್ಳಿ ಅವರ “ಕಪಿಲೆ ಕಂಡ ಕಥೆಗಳು” ಕುರಿತು ಕೆಪಿಸಿಎಲ್ ನಿವೃತ್ತ ಅಧಿಕಾರಿ ದೇವರಾಜ ಚಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಲೇಖಕಿ ಕುಸುಮಾ ಆಯರಹಳ್ಳಿ ಇವರ ಹೆಸರು ಕೇಳಿದರೇನೇ ಚೆಂದ.  ಇಷ್ಟವಿಲ್ಲದ ಹೊಗಳಿಕೆ ಅವರಿಗೆ ಆಗಿ ಬರುವುದಿಲ್ಲ ಅಂತ ಗೊತ್ತಾಗಿದ್ದು ಅವರ ಚಂದನವಾಹಿನಿಯ ಅವರ ಸಂದರ್ಶನ ನೋಡಿದಾಗ. ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ  ಕೆಲಸದಲ್ಲಿ ನಿರತರಾಗಿದ್ದ ಮಹಿಳೆಯರ ಜೊತೆಗಿನ ಫೋಟೋ ಮತ್ತು ಮಾತುಕತೆಯಿಂದ ಅವರ ಸರಳತೆ ನೋಡಿದೆ.  ಲೇಖಕಿಯವರ ಮಾತುಗಾರಿಕೆ, ಭಾಷೆಯಲ್ಲಿನ ಹಿಡಿತ, ವಿಷಯ ಸಂಗ್ರಹ ತಿಳಿದಿದ್ದು ಬುಕ್ ಬ್ರಹ್ಮ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ನಡೆಸಿಕೊಟ್ಟ ಕಾರ್ಯಕ್ರಮ.

ಅವರ ಲೇಖನಗಳು ಸಾಮಾಜಿಕ ಕಳಕಳಿ ಕುರಿತಾಗಿರುತ್ತದೆ. ಅವರ ಕುರಿತು ಹೇಳುತ್ತಾ ಹೋದರೆ ಸಾಕಷ್ಟು ವಿಷಯಗಳಿವೆ, ನಾನು ಈ ರೀತಿ ಹೇಳ್ತಾ ಹೋದರೆ ಮೇಡಂ ಇವ ಏನಪ್ಪಾ ಪುಸ್ತಕದ ಬಗ್ಗೆ ಪ್ರತೀಕ್ರಿಯೆ ಕೊಡುತ್ತಾನೆ ಅಂದುಕೊಂಡಿದ್ದರೆ, ನನ್ನನ್ನು ಹೊಗಳುವುದರಲ್ಲಿ ನಿರತನಾಗಿದ್ದಾನೆ ಎಂದು ಮುನಿಸು ತೋರಬಹುದು.

ಇನ್ನು ಪುಸ್ತಕ ಸಿಕ್ಕಿದ್ದು ಅವರು ಮೈಸೂರಿನ ಮಾತುಕತೆ ಕಾರ್ಯಗಾರದಲ್ಲಿ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಅವರು ಭಾಗವಹಿಸಿದ್ದಾಗ. ಅವರ ವೈಯುಕ್ತಿಕ ಭೇಟಿ ಅದೇ ಮೊದಲು. ನಾನು ಒಬ್ಬ ಸದಸ್ಯನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.

ಕಾದಂಬರಿ ರಚಿಸುವ ಕುರಿತು ಮಾತನಾಡುವಾಗ ಹೆಸರಾಂತ ಲೇಖಕರಾದ ಶ್ರೀಯುತ ಎಸ್ ಎಲ್ ಭೈರಪ್ಪನವರನ್ನು ನೆನಪಿಸಿಕೊಂಡಿದ್ದು ನಮಗೆ ಆದ ಖುಷಿ. ಅವರ ಕುರಿತು ಒಂದೆರಡು ಮಾತು ಆಡಿದರು.

ಕುಸುಮಾ ಆಯರಹಳ್ಳಿ ಅವರ ಕಾದಂಬರಿ ಬರೆಯುವ ಕುರಿತು ನುಡಿದದ್ದು ಹೀಗಿತ್ತು. ಹಿಂದಿನ ಸಂಪನ್ಮೂಲ ವ್ಯಕ್ತಿ ಶ್ರೀ ಸ್ವಾಮಿ ಕಥೇ ಬರೆಯುವುದರ ಕುರಿತು ಹೇಳಿದ್ದನ್ನು ಉದಹರಿಸುತ್ತಾ, ಅವರು ಹೇಳಿದ್ದ ಮಾತುಗಳನ್ನು ಅನುಸರಿಸಿ. ಅವರ ಮಾತಿನಂತೆ ಅದೇ ವಿಷಯಗಳನ್ನು ಲಂಬಿಸಿದರೆ ಒಂದು ಸಣ್ಣ ಕಾದಂಬರಿಯಾಗುತ್ತದೆ. ಆದರೆ ಕಾದಂಬರಿ ಬರೆಯುವಾಗ ಅಲ್ಲಿ ಬರುವ ಸ್ಥಳಗಳನ್ನು ನಿಮ್ಮ ಮನಸ್ಸಿನಲ್ಲಿ ತಂದುಕೊಳ್ಳಬೇಕು ಮತ್ತು ಅಲ್ಲಿಯ ಪಾತ್ರಗಳ ಒಳ ಹೊಕ್ಕಿದರೆ ಕಾದಂಬರಿ ತನ್ನ ನೈಜತೆ ಯನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.

ಕುಸುಮಾ ಆಯರಹಳ್ಳಿ ಅವರು ಟಿ.ಎನ್. ಸೀತಾರಾಮ್ ಇವರ ಸೀರಿಯಲ್ ನಲ್ಲಿ ಸಂಭಾಷಣೆಕಾರರಾಗಿದ್ದು, ಟಿವಿಯಲ್ಲಿ ಕೆಲಸ ಮಾಡಿದ್ದು ಇತ್ಯಾದಿ ವಿಷಯಗಳು ತಿಳಿದದ್ದು. ಗೌರೀಶ್ ಅಕ್ಕಿ ಸ್ಟುಡಿಯೋ ಸಂದರ್ಶನದಲ್ಲಿ.

” ಕಪಿಲೆ ಕಂಡ ಕಥೆಗಳು “ಎನ್ನುವ ಪುಸ್ತಕದ ಹೆಸರೇ ಚಂದ.ಕಪಿಲೆಯೇ ಒಂದು ಹೆಣ್ಣು. ಸಾಮಾನ್ಯವಾಗಿ ಎಲ್ಲಾ ನದಿಗಳ ಹೆಸರು ಹೆಣ್ಣಿನ ಹೆಸರಾಗಿದೆ. ಲೇಖಕಿಯೇ ಹೇಳಿರುವಂತೆ ನದಿಗಳು ತಮ್ಮ ಸುತ್ತಮುತ್ತಲಿನ ಪರಿಸರ,ಹಳ್ಳಿಗಳ ಆಗೂ ಹೋಗುಗಳನ್ನು ನೋಡುತ್ತಾ ತನ್ನ ದಾರಿಯನ್ನು ಮುಂದುವರಿಸುತ್ತಾಳೆ . ಕಪಿಲೆಯೋ ನಮ್ಮ ಹಿಂದಿನದ್ದು, ಹೀಗಿನದ್ದು ಎಲ್ಲವನ್ನು ಕಂಡಿರುತ್ತಾಳೆ.

ಹೀಗಾಗಿ ಪುಸ್ತಕದ ಹೆಸರು “ನಾನು ಕಂಡ ಕಥೆ” ಗಳಿಗಿಂತ “ಕಪಿಲೆ ಕಂಡ ಕಥೆಗಳು” ಶ್ರೇಷ್ಠ ಎಂದು, ಲೇಖಕಿಯು ಅದೇ ಹೆಸರು ಸೂಕ್ತವಾಗಿದೆ ಎಂದು ಇಟ್ಟಿದ್ದಾರೇನು? ಕಾರಣ ನದಿಗಳು ಜನರ ಹೊಗಳಿಕೆ ತೆಗಳಿಕೆ ಎಲ್ಲವನ್ನು ತನ್ನಲ್ಲಿ ಇಟ್ಟುಕೊಂಡು ಸೌಮ್ಯವಾಗಿ ಒಂದು ಹೆಣ್ಣಿನಂತೆ ಇರುತ್ತಾಳೆ. ತನ್ನ ತೀರದ ಜನರಿಗೆ ಕುಡಿಯಲು ನೀರು,ಬೆಳೆಗಳಿಗೆ ನೀರು, ಧನಕರುಗಳಿಗೆ ನೀರು ಕೊಡುತ್ತಾ, ಎಲ್ಲಾ ಕಸ ಕಡ್ಡಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಹರಿಯುತ್ತಾಳೆ.

ಹೆಣ್ಣಿನಂತೆ ತನ್ನ ಬುಡಕ್ಕೆ ಹಾನಿಯಾದಾಗ ನದಿಯು ಸಹ ಮಳೆಗಾಲದಲ್ಲಿ ಬೋರ್ಗರೆಯುತ್ತಾ ತನ್ನ ರೌದ್ರ ರೂಪವನ್ನು ತೋರಿಸುತ್ತಾಳೆ.ಹೀಗಾಗಿ ಮಹಿಳಾ ಲೇಖಕಿಯರ ಬರಹ ಹೆಚ್ಚು ಇಷ್ಟವಾಗುತ್ತದೆ.

“ಶಂಕರ ಟೀ ಸ್ಟಾಲ್” ಕಥೆ 

ಶಂಕರ ಟೀ ಸ್ಟಾಲ್ ಕಥೆಯ ಕುರಿತು ಹೇಳುವುದಾದರೆ, ಶಂಕರನಂತ ಸಾಮಾನ್ಯ ಜನರು,ಜೀವನ ಸಾಗಿಸುವುದಕ್ಕೆ ಮನೆ ಕೆಲಸ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಹಾಯಕರಾಗಿ ದುಡಿಯುವುದು,ಕಾಫಿ ಟೀ ಅಂಗಡಿ ಇಟ್ಟುಕೊಳ್ಳುವುದು,ಇತ್ಯಾದಿ ಅವರ ದಿನ ನಿತ್ಯದ ಬದುಕು.

ಶಂಕರ ಮದುವೆಯಾದ ಹೊಸತರಲ್ಲಿ ಅವನ ಜೀವನಕ್ಕಾಗಿ ಅವರ ಮಾವನವರು ಒಂದು ಅಂಗಡಿಯನ್ನು ಇಟ್ಟುಕೊಡುತ್ತಾರೆ. ಈಗಿನ ದಿನಗಳಲ್ಲಿ ಮೇಲಿನ ಎಲ್ಲಾ ಕ್ಷೇತ್ರದಲ್ಲಿ ಪೈಪೋಟಿ ಇರುತ್ತದೆ. ಶಂಕರನಿಗೆ ಈ ಪೈಪೋಟಿಯೇ ತನ್ನ ದುಡಿಮೆಗೆ ಕಲ್ಲು ಹಾಕುತ್ತದೆ. ಅಂಗಡಿಯನ್ನು ಮುಚ್ಚ ಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಆದ್ದರಿಂದ ಶಂಕರ ನಿರಾಶನಾಗಿ ಕುಂತಿರುವಾಗ ಒಬ್ಬ ಪರಿಚಯಸ್ತ, ಒಂದು ದೊಡ್ಡ ಮನೆಯಲ್ಲಿ ಕೆಲಸ ಹುಡುಕಿ ಕೊಡುತ್ತಾನೆ. ಎಲ್ಲಾ ಚೆನ್ನಾಗಿರುವಾಗ ಸಾಮಾನ್ಯವಾಗಿ ನಡೆಯುವಂತೆ ಇಲ್ಲೂ ಕಳ್ಳತನದ ಅಪವಾದ ಶಂಕರನನ್ನು ಘಾಶಿಗೊಳಿಸುತ್ತದೆ. ಅದನ್ನು ಸಹಿಸಲಾಗದೆ ಕೆಲಸ ಬಿಡುವ ಸ್ಥಿತಿಗೆ ಬಂದುಬಿಡುತ್ತಾನೆ. ಲೇಖಕಿಯವರು ಅವನನ್ನು ಹಾಗೆ ಬಿಡದೆ ಮತ್ತೊಂದು ಕಡೆ ಟೀ ಅಂಗಡಿ ಪ್ರಾರಂಭಿಸಲು ಕಥಾ ನಾಯಕನನ್ನು ಬಡಿದೆಬ್ಬಿಸುತ್ತಾರೆ.

ಟೀ ಮಾಡುವವರು ಸಾಕಷ್ಟು ಕೈ ಚಳಕ ತೋರಿಸಿ ಗಿರಾಕಿಗಳನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಶಂಕರನು ಅದೇ ಟ್ರಿಕ್ಸ್ ಉಪಯೋಗಿಸುತ್ತಾನೆ. ಆದ್ದರಿಂದ ಸಾಕಷ್ಟು ಗಿರಾಕಿಗಳು ಟೀ ಅಂಗಡಿಗೆ ಬಂದು ಒಳ್ಳೆಯ ಆದಾಯವನ್ನೇ ಕೊಡುತ್ತಾರೆ. ಓದುಗರು ಸದ್ಯ ಎಂದು ನೆಮ್ಮದಿಪಟ್ಟುಕೊಳ್ಳುವಷ್ಟರಲ್ಲಿ, ಲೇಖಕಿಯವರು ಕಥಾ ನಾಯಕನ ಕೈಚಳಕಕ್ಕೆ ಬ್ರೇಕ್ ಹಾಕುತ್ತಾರೆ.

ಅಚಾನಕ್ಕಾಗಿ ಶಂಕರನಿಗೆ ಬಿಸಿ ಎಣ್ಣೆ ಮತ್ತು ಟೀ ಸುರಿದು ಮೈಯೆಲ್ಲಾ ಗಾಯವಾಗುತ್ತದೆ. ಶಂಕರನ ಸುಟ್ಟ ಗಾಯದಿಂದ ಟಿ ಸ್ಟಾಲ್ ಕಥೆ ಅಂತ್ಯವಾಗುತ್ತದೆ. ಓದುಗನು ತನ್ನ ಸಮಾಧಾನಕ್ಕೆ ಅಂತ್ಯವನ್ನು ಸುಖಾಂತ್ಯ ಮಾಡಬಹುದು. ಹೇಗೆಂದರೆ ಅವರ ಪರಿಚಯದ ಡಾಕ್ಟರ್,ಶಂಕರನಿಗೆ ಉಪಚಾರ ಮಾಡುತ್ತಾನೆಂದು ಓದುಗರು ತಿಳಿದುಕೊಂಡು ಸಂತೋಷಪಡುವುದು.

ಈ ಕಥೆ ಸಾಮಾನ್ಯನ ಬದುಕು ಇಷ್ಟೇ ಎಂದು ತೋರಿಸುತ್ತದೆ.

“ಇದ್ದಂಗಿರಲಾರದೆ” ಕಥೆ

ಕಥೆ ಓದಿದಾಗ ಇದ್ದಂಗಿರಲಾರದೆ ಇರುವೆ ಬಿಟ್ಟುಕೊಂಡ ಎನ್ನುವ ಗಾದೆ ನೆನಪಾಯಿತು. ಇರುವೆ ಕಚ್ಚುತ್ತೆ ಅಂತ ಏನು ಸಾಧನೆ ಮಾಡದೆ ಸುಮ್ಮನೆ ಕೂರಲು ಆಗುತ್ತಾ?ಬಡವ
ಆದರೆನಂತೆ.ಕನಸುಗಳನ್ನು ಕಾಣುವುದು ತಪ್ಪ?

ಮಗನನ್ನು ಇಂಗ್ಲಿಷ್ ಶಾಲೆಯಲ್ಲಿ ಓದಿಸಿದರೆ ಮುಂದೊಂದು ದಿನ ಸಾಹೇಬ ಆಗಬಹುದು ಅನ್ನುವ ಕನಸನ್ನು ನನಸು ಮಾಡಲು ಹೊರಟ ತಾಯಿಯ ಕಥೆ. ಅಪ್ಪ ಹಾಕಿದ ಆಲದ ಮರಕ್ಕೆ ನೇತು ಹಾಕಿಕೊಂಡಿರಬೇಕಾ ಅನ್ನುವ ಗಾದೆಯಂತೆ,ಯಾವುದೋ ಗಿಮಿಕ್ ಉಪಯೋಗಿಸಿ ಅಡ್ಡದಾರಿಲಿ ದುಡ್ಡು ಮಾಡಲು ಹೋರಾಟ ತಾಯಿ. ಮಗುವಿನ ತಂದೆ ಕೂಡ ಹೆಂಡತಿಗೆ ಹೆದರಿ ಅಡ್ಡ ದಾರಿಗೆ ಸಹಕರಿಸುತ್ತಾನೆ. ಇವರ ಉಪಾಯದಿಂದ ಪಂಚಾಯಿತಿ ಸದಸ್ಯನೊಬ್ಬ ಬಲೆಗೆ ಬೀಳುತ್ತಾನೆ. ದಂಪತಿಗಳು ಹಳ್ಳಿಯವರನ್ನು ನ್ಯಾಯ ಕೇಳಿದಾಗ, ನ್ಯಾಯ ಕೊಡಿಸುವವರು ವಿಚಾರ ಮಾಡಿ ಆ ಪಂಚಾಯಿತಿ ಸದಸ್ಯನಿಗೆ ದಂಡವನ್ನು ವಿಧಿಸುತ್ತಾರೆ.

ಪಂಚಾಯಿತಿ ಸದಸ್ಯ ದುಡ್ಡು ಕಳೆದುಕೊಳ್ಳುತ್ತಾನೆ.ಕಥೆಯಲ್ಲಿ ಹೇಳುವಂತೆ ಹಳ್ಳಿಯಲ್ಲಿ ನ್ಯಾಯ ಕೋಡಿಸುವವರು ಇದ್ದರು. ಈ ರೀತಿ ಸುಳ್ಳು ಮೋಸಕ್ಕೆ ಬಗ್ಗದೇ ತಮ್ಮ ಚಿಂತನೆಯಿಂದ ನ್ಯಾಯ ಒದಗಿಸುತ್ತಾರೆ.

ವಸೂಲಿಯಾದ ಹಣವನ್ನು ಇಂತಹ ದಂಪತಿಗಳಿಗೆ ಕೊಡಿಸಿದರೆ ಅನ್ಯಾಯಕ್ಕೆ ಒತ್ತು ನೀಡಿದಂತೆ ಆಗುತ್ತದೆ ಅಂತ ತಿಳಿದು, ದಂಡದ ರೂಪದಲ್ಲಿ ಬಂದ ಹಣವನ್ನು ಹಳ್ಳಿಯ ಉಪಯೋಗಕ್ಕೆ ಎತ್ತಿಟ್ಟುಕೊಳ್ಳುತ್ತಾರೆ. ಇಂತಹ ಕಥೆ ಹೇಳುವ ಮೂಲಕ: ಲೇಖಕಿ ಕೊಡುವ ಸಂದೇಶ ಏನು ಅಂದರೆ, ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು ಗಾದೆಯನ್ನು ನೆನಪಿಸುತ್ತಾರೆ.

ಆಸೆ ಪಡಬೇಕು ನಿಜ, ಅದನ್ನು ಈಡೇರಿಸಿಕೊಳ್ಳಲು ಅಡ್ಡದಾರಿ ಹಿಡಿಯಬಾರದು ಎನ್ನುವ ಸಂದೇಶವನ್ನು ಹಳ್ಳಿಯ ಯಜಮಾನರು ಕೊಡುತ್ತಾರೆ. ಆದ್ದರಿಂದ ನ್ಯಾಯ ಕೊಡಿಸುವವರು ಎಲ್ಲಾ ರೀತಿಯ ಆಯಾಮ ಹುಡುಕಿ ಒಳ್ಳೆಯ ತೀರ್ಮಾನ ಕೊಡಬೇಕು. ಒಟ್ಟಿನಲ್ಲಿ ಹೇಳುವುದಾದರೆ ಕಪಿಲೆ ಕಂಡ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಮನಸ್ಸಿಗೆ ಹಿತ ಕೊಡುವುದಂತೂ ನಿಜ. ಲೇಖಕಿಯವರಿಂದ ಇನ್ನೂ ಹೆಚ್ಚಿನ ಸಾಹಿತ್ಯ ಹೊರಬರಲೆಂದು ಹಾರೈಸೋಣ.


  • ದೇವರಾಜ ಚಾರ್ – ನಿವೃತ್ತ ಕೆಪಿಸಿಎಲ್ ಇಂಜೀನಿಯರ್, ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading