ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ MIT ಎಂದರೆ ಅದೇನೋ ಸೆಳೆತ. ವಿಶಾಲವಾದ ಆವರಣ, ಹಸಿರು ಹೊದಿಕೆ, ಅರಳಿ ನಿಂತ ಹೂಗಳು ಅದರ ಮುಂದಿನ ಚಾಲ್ಸ್ ನದಿ MITಯನ್ನು ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿಸಿವೆ ಎಂದರೆ ಅತಿಶಯೋಕ್ತಿಯಲ್ಲ.ಲೇಖಕಿ ಕಮಲಾಕ್ಷಿ ಸಿ ಆರ್ ಅವರ ಅಮೆರಿಕಾ ಪ್ರವಾಸ ಕಥನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಂಜೀತನ graduation day ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾಸ್ಟನ್ ಹಿಂದಿರುಗಿದ ಮರು ದಿನವು ಅದೇ ಗುಂಗಿನಲ್ಲಿದ್ದೆ. ಮೇ ಹದಿನಾರರ ಬೆಳಗ್ಗೆ ‘ಬಾಸ್ಟನ್‌ನಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ.. ಅಲ್ಲಿ ನೋಡಲು ಒಂದು ದಿನದಲ್ಲಿ ಸಾಧ್ಯವಾಗದು, Maximum try ಮಾಡುವ’ ಎಂದು ಮಗ ಅವಸರಿಸಿದ. ವಿನೀತ್ ಅಂದು ಮೂರು ಗಂಟೆಯವರೆಗೆ ಕೆಲಸ ಮಾಡಬೇಕಿತ್ತು. ಹಾಗಾಗಿ ಅಲ್ಲಿಯವರೆಗೆ ಚಿಕ್ಕ ಮಗರಾಯನ ಸುಪರ್ದಿಯಲ್ಲಿ ಬಾಸ್ಟನ್ ನೋಡಲು ಹೊರಟೆವು. ಸಂಜೀತ್‌ಗೂ ಬಾಸ್ಟನ್ ಚಿರಪರಿಚಿತವೇ ಆಗಿತ್ತು.
ತಿಂಡಿಗೆಂದು ಹೋಟೆಲಲ್ಲಿ ಕಾರ್ನ್ ಫ್ಲೇಕ್ಸ್, ನ್ಯೂಟ್ರಿ ಚಾಕಲೇಟು, ಬಿಸ್ಕತ್ತು ಮತ್ತು ಕಾಫೀ, ಟೀ ಹಾಗೂ ಹಾಲು ಅಷ್ಟು ಸರಿಯಾಗಲಿಲ್ಲ. ರೂಮಿನ ಸಮೀಪ ದಿ ಹಾನೆಸ್ಟ್ ಹೋಟೆಲಿತ್ತು. ಹತ್ತು ನಿಮಿಷದ ದಾರಿಯಷ್ಟೇ..ಅಲ್ಲಿ ಹತ್ತೂವರೆಗೆಲ್ಲ ನಾರ್ಥ್ ಇಂಡಿಯನ್ ಊಟ ಸಿದ್ಧವಿತ್ತು. ಸ್ಟಾರ್ಟರ್ ಜೊತೆಗೆ ನಾವಿಬ್ಬರು ಊಟ ತೆಗೆದುಕೊಂಡರೆ ಸಂಜೀತ್ ಪೂರಿ ಚನ್ನಾ ಮಸಾಲ ತೆಗೆದುಕೊಂಡ. ಸ್ವಾದಿಷ್ಟವಾದ ಊಟ ಮಾಡಿ ಅಲ್ಲಿಂದ ಕ್ಯಾಬ್ ಹಿಡಿದು MIT ವಿಶ್ವವಿದ್ಯಾಲಯದ ಕಡೆ ಹೊರಟ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ MIT ಎಂದರೆ ಅದೇನೋ ಸೆಳೆತ. ವಿಶಾಲವಾದ ಆವರಣ, ಹಸಿರು ಹೊದಿಕೆ, ಅರಳಿ ನಿಂತ ಹೂಗಳು ಅದರ ಮುಂದಿನ ಚಾಲ್ಸ್ ನದಿ MITಯನ್ನು ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿಸಿವೆ ಎಂದರೆ ಅತಿಶಯೋಕ್ತಿಯಲ್ಲ.
ಬಾಸ್ಟನ್ನಿಗೆ ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಗಳಾದ ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ MIT ವಿಶ್ವವಿದ್ಯಾಲಯಗಳನ್ನು ಹೊಂದಿರುವ ಖ್ಯಾತಿಯಿದೆ. ವಿದ್ಯಾರ್ಥಿಸ್ನೇಹಿ ಕ್ಯಾಂಪಸ್ ನೋಡಿದೊಡನೆ ವಿದ್ಯಾರ್ಥಿಗಳು ಮನಸೋಲುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿಯೇ ಅಲ್ಲಿ ಪ್ರವೇಶ ಪಡೆಯಲು ಮುಗಿ ಬೀಳುವರು ಎನಿಸಿತು.

ಅಲ್ಲಿ ನಾವು ಭೇಟಿ ನೀಡಿದ ಹಿಂದಿನ ದಿನ, ಯಾವುದೋ ಕಾರ್ಯಕ್ರಮ ನಡೆದಿದ್ದರಿಂದ ಅಂದು ವೇದಿಕೆಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. MIT ಶ್ವೇತ ವರ್ಣದ ಪಾರಂಪರಿಕ ಕಟ್ಟಡ, ಗಿಡ ಮರಗಳು, ಅರಳಿ ನಿಂತ ಹೂಗಳೊಡನೆ ಇಲ್ಲಿರುವ ಗೋಳಾಕೃತಿ ಇದರ ಪ್ರಮುಖ ಆಕರ್ಷಣೆ. ಶ್ವೇತ ಹೂಗಳಿಗೆ ಮನಸೋತು ಹಲವು ಫೋಟೋ ತೆಗೆಸಿಕೊಂಡೆ. ಆವರಣದಲ್ಲಿ ಜೋಡಿ ಬಾತುಕೋಳಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಅವುಗಳ ಹಿಂದೆ ಹೋಗಿ ನನ್ನತ್ತ ನೋಡುವಂತೆ ಮಾಡಲು ಯತ್ನಿಸಿದ್ದು ಫಲ ನೀಡಲಿಲ್ಲ. ಆದರೂ ಬಿಡದೆ ಅವುಗಳೊಡನೆ ಫೋಟೋ ತೆಗೆದುಕೊಂಡೆ. ನೋಡುಗರಿಗೆ ಬಾತು ಕೋಳಿಗಳನ್ನು ನಾನೇ ವಿಹಾರಕ್ಕೆ ಕರೆತಂದಂತೆ ಇದೆ ಎನಿಸಿತು.
ಅಲ್ಲಿಂದ ಮುಂದೆ ನದಿ ತೀರಕ್ಕೆ ಹೋಗಿ ನಿಂತೆವು. ನದಿ ತೀರವು ಹಲವು ಕಥಾಹಂದರಗಳನ್ನು ತಲೆಯಲ್ಲಿ ಚಿಗುರಿಸಿದವು. ನದಿಯ ತೀರದಲ್ಲಿ ನಿಂತು, ಓಡಾಡಿ ಸಾಕೆನಿಸಿದಾಗ ಅಲ್ಲಲ್ಲಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ನದಿಯಲ್ಲಿ ಜಲಕ್ರೀಡೆ, ದೋಣಿ ವಿಹಾರವೂ ಇವೆ ಅಲ್ಲದೆ ಮೀನುಗಾರಿಕೆ ಕೂಡ ನಡೆಯುತ್ತಿದೆ. ಇದೇ ಚಾಲ್ಸ್ ನದಿಗೆ ಅಡ್ಡಲಾಗಿ SALT ಅಂಡ್ PEPPER ಸೇತುವೆಯಿದೆ. ಈ ನದಿಗೆ ಇರುವ ಸಮಾನಾಂತರವಿರುವ ಎರಡು ಸೇತುವೆಗಳ ತುದಿಗಳಲ್ಲಿವೆ. ಉಪ್ಪು ಮತ್ತು ಮೆಣಸಿನ ಪುಡಿ ಹಾಕುವ ಡಬ್ಬಿಗಳನ್ನು ಹೋಲುವ ಈ ನಾಲ್ಕು ಸ್ತಂಭಗಳನ್ನು ಹೊಂದಿರುವ ಈ ಸೇತುವೆಗಳನ್ನು Salt and pepper bridge ಎಂದು ಹೆಸರಿಸಲಾಗಿದೆ. ಬಿಸಲಿನಲ್ಲಿ ಮುಕ್ಕಾಲು ಕಿ.ಮೀ ಸಾಗಿದ ಬಳಿಕ ಸೇತುವೆ ಮೇಲೆ 2,035 ಅಡಿಗಳಷ್ಟು ದಾಟಿ ಇನ್ನೊಂದು ಅಂತ್ಯವನ್ನು ತಲುಪಿದೆವು. ಸೇತುವೆಯ ಮಧ್ಯಭಾಗದಲ್ಲಿ ನಿಂತಾಗ ಬಾಸ್ಟನ್ನಿನ ಸೌಂದರ್ಯ ಕಣ್ಣ ಮುಂದೆ ತೆರೆದುಕೊಂಡು ಅಬ್ಬಾ ಎನಿಸುವಂತೆ ಮಾಡಿತು.

SALT AND PEPPER ಸೇತುವೆ ಬಳಿಕ ಅದರ ಪಕ್ಕದಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ಹೋದೆವು. ಇಟ್ಟು ತೊಟ್ಟರೆ ಪುಟ್ಟಕ್ಕ ಚೆಂದ ಎನ್ನುವಂತೆ, ಆ ಉದ್ಯಾನವನವು ಪುಟ್ಟ ಕೊಳ, ಟುಲಿಪ್ ಹೂಗಿಡಗಳಿಂದ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಲ್ಲಿ ಅಮೆರಿಕಾದ ಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಪ್ರತಿಮೆಯಿದೆ. ಕುದುರೆ ಸವಾರಿ ಮಾಡುತ್ತಿರುವ ಕಪ್ಪು ಬಣ್ಣದ ಪ್ರತಿಮೆಗೆ ಅದರ ಸುತ್ತ ಟುಲಿಪ್ ಹೂಗಳು ಮೆರುಗು ನೀಡಿವೆ. ಅಲ್ಲಿ ಫೋಟೋ ತೆಗೆದುಕೊಳ್ಳದೆ ಯಾರು ಇರಲಾರರು. ಅದರ ಎದುರು ನಿಂತು ನೋಡಿದರೆ ಪ್ರತಿಮೆಯ ಹಿಂದೆ ಬಾಸ್ಟನ್ನಿನ ಗಗನ ಚುಂಬಿಗಳ ನೋಟ ಮನಮೋಹಕವಾಗಿ ಕಾಣಿಸುತ್ತಿತ್ತು. ಅದು ಬೇಸಿಗೆ ಸಮಯವಾದ್ದರಿಂದ ಉದ್ಯಾನವನ ಜನಸಂದಣಿಯಿತ್ತು. ಅಲ್ಲದೆ ಪದವಿ ದಿನದ ಬಳಿಕ ಅನೇಕ ವಿದ್ಯಾರ್ಥಿಗಳು ತಮ್ಮ ಪದವಿ ಪೋಷಾಕು ಹಾಗೂ ಪದವಿ ಪತ್ರಗಳೊಡನೆ ಫೋಟೋ ಸೆಷನ್ ಮಾಡಿಕೊಳ್ಳುತ್ತ ನೋಡಗರ ಗಮನ ಸೆಳೆಯುತ್ತಿದ್ದರು.
ಕಾಲ್ನಡಿಗೆಯಲ್ಲಿ ಓಡಾಡಿ ಆಯಾಸವೆನಿಸಿತು, ಅಲ್ಲದೆ ಅಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ಕುಳಿತುಕೊಳ್ಳಬೇಕೆನಿಸಿತು. ನಂತರ ನಮ್ಮನ್ನು ಅಲ್ಲಿನ ಬರ್ಕಲಿ ರಸ್ತೆ, ನ್ಯೂಬೆರ್ರಿ ರಸ್ತೆಗಳಲ್ಲಿ ಕರೆದೊಯ್ದ. ಅದು ಸ್ವಲ್ಪ ಹಳೆಯದಾದ ರಸ್ತೆಯಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಪುಟ್ಟ ಶಾಪಿಂಗ್ ಕೆಂದ್ರಗಳಿದ್ದವು. ಕಟ್ಟಡಗಳು ಪಾರಂಪರಿಕವಾಗಿದ್ದು ಮನಸೆಳೆದವು. ರಸ್ತೆಯ ಒಂದು ಬದಿಯಲ್ಲಿ ಭಾರತದ ಆಭರಣಗಳನ್ನು ಮಾರಾಟಕ್ಕಿಟ್ಟಿದ್ದರು. ಅಲ್ಲಿ ಅಸಲಿ ಹರಳುಗಳು ಎಂದು ಹಲವು ಹರಳಿನ ಉಂಗುರಗಳನ್ನು, ಕಿವಿಯ ಓಲೆಗಳನ್ನು ಕೊಳ್ಳುವಂತೆ ಅಲ್ಲಿದ್ದ ಯುವತಿ ವಿಶೇಷವಾಗಿ ಕೂಗುತ್ತಿದ್ದಳು. ಆಕೆ ಸುರದ್ರೂಪಿಯಾಗಿದ್ದ ಯುವತಿ ನನ್ನನ್ನು ನೋಡಿ ಹಿಂದಿಯಲ್ಲಿ ಮಾತನಾಡಿಸಿ, ತಾನು “ಇಲ್ಲಿ ಓದುತ್ತಿರುವೆ.. ಶುಕ್ರವಾರ ಹಾಗೂ ಶನಿವಾರ ಇಲ್ಲಿ ಕೆಲಸ
ಮಾಡುವೆ.. ಕೈಗಿಷ್ಟು ಹಣ ಸಿಗುತ್ತೆ” ಎಂದಳು. ಆಕೆ ಆಂದ್ರಪ್ರದೇಶದ ಯುವತಿ ಎಂದು ಮಾತನಾಡಿಸಿದಾಗ ತಿಳಿಯಿತು. ನಾನು ಒಂದು ಸರವನ್ನು ತೆಗೆದುಕೊಂಡೆ.

ಮುಂದೆ ಸಾಗುತ್ತಿರುವಾಗ ಚರ್ಚ್ ಮುಂದೆ ಆ ದಿನ ಭಾರತೀಯರ ಸಂಗೀತ ಕಛೇರಿ ಆಯೋಜನೆ ಕುರಿತ ಬೋರ್ಡ್ ನೋಡಿ ಅದೇನೋ ಪುಳಕ. ಕುನಾಲ್ ಗುಂಜ್, ರವಿ ಚಾರಿ ಹಾಗೂ ಅಮಿತ್ ಕವ್ತೇಕರ್ ಅವರುಗಳ ಕಛೇರಿಯು ಇಮ್ಯಾನ್ಯುಯೆಲ್ ಚರ್ಚಿನಲ್ಲಿ ನಡೆಯಲಿತ್ತು. ಫೋಟೋ ತೆಗೆಯುತ್ತಿದ್ದದ್ದು ನೋಡಿ ಮಗ ಕಾಲೆಳೆದ..” ನೋಡ್ತಿಯಾಮ್ಮ..”. ಹೂ ಎನ್ನಲಾಗದೆ.. ನಕ್ಕೆ.
ಅಷ್ಟು ಹೊತ್ತಿಗಾಲೆ ನಾಲ್ಕು ಗಂಟೆ ದಾಟಿತ್ತು. ವಿನೀತನ ಫೋನ್ ” ಎಲ್ಲಿದ್ದೀರಾ.. ಎಲ್ಲಿಗೆ ಬರಲಿ?” ಎಂದು. “ಲಿಂಟ್ ಚಾಕೊಲೇಟ್ ಕಾರ್ನರ್ ಹತ್ತಿರವಿದೆ.. ಅಲ್ಲಿ ಐಸ್ ಕ್ರೀಮ್ ತಿಂತಾ ಇರ‌್ತೀವಿ ಅಲ್ಲಿಗೆ ಬಾ” ಎಂದ. ಲಿಂಟ್ ಚಾಕೊಲೇಟ್ ಮಳಿಗೆಗೆ ಹೋದೊಡನೆ ಅಲ್ಲಿ ಚಾಕೊಲೇಟ್ ಡಬ್ಬಿ ಹಿಡಿದಿದ್ದವನು ಭಾರತೀಯರು ಎಂದು ತಿಳಿದಾಗ, ಡಬ್ಬಿ ಪಕ್ಕಕ್ಕಿಟ್ಟು ನಮ್ಮ ಎದರು ಬಂದು ನಿಂತು ಎರಡು ಕೈ ಜೋಡಿಸಿ ” ನಮಸ್ತೆ..ನಮಸ್ತೇ.. ” ಎಂದ ಸ್ವಾಗತಿಸಿದ. ಚಾಕೊಲೇಟ್ ವಿಧಗಳನ್ನು ಪರಿಚಯಿಸಿದ. ಒಂದಷ್ಟು ಚಾಕೊಲೇಟ್ ಪ್ಯಾಕ್ ಮಾಡಿಸಿ, ಬಾಳೆಹಣ್ಣಿನ ಐಸ್ ಕ್ರೀಮ್ ತೆಗೆದುಕೊಂಡೆವು. ಆ ಸಮಯಕ್ಕೆ ವಿನೀತ್ ಅಲ್ಲಿಗೆ ಕಾರು ತಂದು ನಮ್ಮನ್ನು ಹತ್ತಿಸಿಕೊಂಡ.
ಅಲ್ಲಿನ ರಸ್ತೆಗಳಲ್ಲಿ ಓಡಾಡಿಸಿದ ನಂತರ ಸಮುದ್ರತೀರಕ್ಕೆ ಹೋದವು. ನದಿ ಸಮುದ್ರವನ್ನು ಸೇರುವದು. ಮರಳಿನಲ್ಲಿ ಓಡಾಡಿ, ಕಪ್ಪೆ ಚಿಪ್ಪು, ಶಂಕು ಆರಿಸಿಕೊಂಡೆ. ನಮ್ಮವರು ” ಕಸ್ಟಮ್ಸ್ ನಿನ್ನ ಹಿಡಿದ್ರೆ ಗೊತ್ತಿಲ್ಲ ನೋಡು..ನೀನು ಯಾರು ಅಂತ ಗೊತ್ತಿಲ್ಲ” ಎಂದು ರೇಗಿಸಿದರು. ಆದರೂ ಅವನ್ನು ಆರಿಸಿಕೊಳ್ಳುವುದನ್ನು ಬಿಡಲಿಲ್ಲ. ಪಾದ ಮಾತ್ರ ಮುಳುಗುವಷ್ಟು ನೆನೆಸಿಕೊಂಡು ಮತ್ತೆ ಮರಳಿನ ಮೇಲೆ ಓಡಾಡಿ ಬಾಸ್ಟನ್ ನಗರದತ್ತ ಹೊರಟೆವು.

ಬಾಸ್ಟನ್ನಿನ Queecy marketಗೆ ಹೋದೆವು. ಪ್ರವಾಸಿಗರು ಅಪೇಕ್ಷೆ ಪಡುವ ಉಡುಗೊರೆ ಕೊಡಬಹುದಾದ ವಸ್ತುಗಳು, ಚಾಟ್ಸ್ ಅಂಗಡಿಗಳು ಇದ್ದವು. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಎರಡೂ ಇದ್ದಿದ್ದರಿಂದ ಹೆಚ್ಚು ಹೊತ್ತು ಇರಲಾಗಲಿಲ್ಲ. ಏನೂ ಕೊಳ್ಳದೆ ಒಂದು ಸುತ್ತು ಹಾಕಿ ಹೊರಬಂದೆವು.
ಹಗಲಿನ ಬಾಸ್ಟನ್ ರಾತ್ರಿಯ ಬಾಸ್ಟನ್‌ಗಿಂತ ವಿಭಿನ್ನ. ಆಗಸದ ನಕ್ಷತ್ರಗಳೆಲ್ಲ ಕಟ್ಟಡಗಳ ಮೇಲೆ ಉದುರಿಬಿದ್ದಂತೆ ಮಿನುಗುತ್ತವೆ. ಬಂದರು ಪ್ರದೇಶದಲ್ಲಿ ಸಂಗೀತ ಕಛೇರಿಗಳು, ರೆಸ್ಟೋರೆಂಟ್‌ಗಳು ರಾರಾಜಿಸುತ್ತಿದ್ದವು. ಅವುಗಳನ್ನು ದಾಟಿ ಮುಂದೆ ಸಾಗಿದಾಗ ಕಂಡ ದೃಶ್ಯ ಮೂಕವಿಸ್ಮಿತರನ್ನಾಗಿಸಿತು. ಅದು ಧರೆಗಿಳಿದ ತಾರಾಲೋಕವೇನೋ ಎನಿಸುವ ಭ್ರಮಾಲೋಕಕ್ಕೆ ಕರೆದೊಯ್ಯವುದು. ದೀಪಾವಳಿ ಹಬ್ಬದ ಬೆಳಕಿನ ಉಂಡೆಗಳನ್ನು ಚಿಮ್ಮಿಸುರುವರೇನೋ ಎನಿಸುವಂತಿತ್ತು. ಅಲ್ಲಿ ಹಲವು ವಿಕಲ್ಪಗಳಲ್ಲಿ ಫೋಟೋ ತೆಗೆದುಕೊಂಡು ಹೊರಟೆವು.
ಬಂದರಿನ ಇನ್ನೊಂದು ಭಾಗದ ಕಡೆ ಕರೆದೊಯ್ಯಲೆಂದು ಮೂರು ಸುತ್ತು ತಿರುಗಿದರೂ ಕಾರು ಪಾರ್ಕ್ ಮಾಡಲು ಸ್ಥಳವೇ ಸಿಗಲಿಲ್ಲ. ಅಂದು ಶುಕ್ರವಾರ ಕಾರ್ ಪಾರ್ಕಿಂಗ್ ಸಿಗುವುದು ದುರ್ಲಭವಾಯಿತು. ಹಿಂದೊಮ್ಮೆ ಮಕ್ಕಳಿಬ್ಬರಿಗೆ ಬರೋಬ್ಬರಿ ಒಂದು ಗಂಟೆ ತಿರುಗಿದರೂ ಪಾರ್ಕಿಂಗ್ ಸಿಗದೆ ಹಿಂದಿರುಗಿದ್ದರಂತೆ.
ರೂಮಿಗೆ ಹೋಗುವಾಗ ಮಾರ್ಗ ಮಧ್ಯೆ ಸಮುದ್ರದ ಮತ್ತೊಂದು ತೀರ ಸಿಕ್ಕಿತು. ಅಲ್ಲಿಯೂ ಒಂದಷ್ಟು ಹೊತ್ತು ವೀಕ್ಷಿಸಿದೆವು. ಮತ್ತೆ ಹಾನೆಸ್ಟ್ ಹೋಟೆಲಿನಲ್ಲಿ ರಾತ್ರಿಯೂಟ ಮುಗಿಸಿ ಹೋಟೆಲಿನತ್ತ ಹೊರಟೆವು. ಮರುದಿನ ಪ್ರಯಾಣ ಬೆಳೆಸಲಿರುವ ನ್ಯೂಯಾರ್ಕ್ ಬಗ್ಗೆ ಕುತೂಹಲ ಹೆಚ್ಚಾಯಿತು.
ಮುಂದುವರೆಯುವುದು…
ಹಿಂದಿನ ಸಂಚಿಕೆಗಳು :
- ಅ…ಅ…ಅಮೆರಿಕಾ ನೋಡಾ (ಭಾಗ-೧)
- ಅ…ಅ…ಅಮೆರಿಕಾ ನೋಡಾ (ಭಾಗ-೨)
- ಅ…ಅ…ಅಮೆರಿಕಾ ನೋಡಾ (ಭಾಗ-೩)
- ಅ…ಅ…ಅಮೆರಿಕಾ ನೋಡಾ (ಭಾಗ-೪)
- ಅ…ಅ…ಅಮೆರಿಕಾ ನೋಡಾ (ಭಾಗ-೫)
- ಅ…ಅ…ಅಮೆರಿಕಾ ನೋಡಾ (ಭಾಗ-೬)
- ಅ…ಅ…ಅಮೆರಿಕಾ ನೋಡಾ (ಭಾಗ-೭)
- ಅ…ಅ…ಅಮೆರಿಕಾ ನೋಡಾ (ಭಾಗ-೮)
- ಅ…ಅ…ಅಮೆರಿಕಾ ನೋಡಾ (ಭಾಗ-೯)
- ಅ…ಅ…ಅಮೆರಿಕಾ ನೋಡಾ (ಭಾಗ-೧೦)
- ಅ…ಅ…ಅಮೆರಿಕಾ ನೋಡಾ (ಭಾಗ-೧೧)
- ಕಮಲಾಕ್ಷಿ ಸಿ ಆರ್
