ಅ…ಅ…ಅಮೆರಿಕಾ ನೋಡಾ (ಭಾಗ-೧೪)

ಎಂಪೈರ್ ಸ್ಟೇಟ್ ಬಿಲ್ಡಿಂಗ್ ನ 86 ನೇ ಮಹಡಿಯಲ್ಲಿ ನಿಂತು ಜಗಮಗಿಸುತ್ತಿದ್ದ ನ್ಯೂಯಾರ್ಕ್ ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡದ್ದು, ಬ್ಯಾಟರಿ ಪಾರ್ಕಿನಲ್ಲಿ ಓಡಾಡಿದ್ದು, ಸಮುದ್ರ ತೀರದಲ್ಲಿ ನಿಂತದ್ದು, ಟೈಮ್ಸ್ ಸ್ಕ್ವೇರ್ ನಲ್ಲಿನ ಬಣ್ಣದ ಜಗತ್ತು ಎಲ್ಲವೂ ಕನಸಿನಲ್ಲಿ ಕಂಡಂತೆ ಭಾಸವಾಗುತ್ತಿತ್ತು. ಸಂತೋಷದ ಕಾರಣವೋ, ನಡೆದಾಡಿ ಆಯಾಸವಾಗಿದ್ದ ಕಾರಣವೋ ಆ ರಾತ್ರಿ ನಿದ್ರಾದೇವಿ ಬಹು ಬೇಗನೆ ಅಪ್ಪಿಕೊಂಡಿದ್ದಳು. ಲೇಖಕಿ ಕಮಲಾಕ್ಷಿ ಸಿ ಆರ್ ಅವರ ಅಮೆರಿಕಾ ಪ್ರವಾಸ ಕಥನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮರು ದಿನವಂತೂ ಬಹಳಷ್ಟು ನೋಡಲಿದೆ ಎಂದಿದ್ದರಿಂದ ಬೇಗನೆದ್ದು ಏಳೂವರೆಗೆಲ್ಲಾ ಬೆಳಗಿನ ಉಪಾಹಾರಕ್ಕೆ ಹೋದೆವು. ಶಿಕಾಗೋ ಹಾಗೂ ಬಾಸ್ಟನ್ ಗಳಿಗಿಂತ ನ್ಯೂಜೆರ್ಸಿಯಲ್ಲಿನ ರಮಾಡ ಹೋಟೆಲ್ಲಿನ ವ್ಯವಸ್ಥೆ ನಮಗೊಪ್ಪುವಂತಿತ್ತು. ಅಂದು ಭಾನುವಾರವಾದ್ದರಿಂದ ಬಹಳಷ್ಟು ಭಾರತೀಯರು ಅದರಲ್ಲೂ ಕನ್ನಡಿಗರು ಸಿಕ್ಕರು. ಕನ್ನಡಿಗರು ನಮ್ಮೊಡನೆ ಮಾತನಾಡಿದ್ದು ಆಪ್ತ ಭಾವ ಮೂಡಿಸಿತ್ತು. ಸ್ಯಾಂಡ್‌ವಿಚ್, ಸ್ವೀಟ್ ದೋಸೆ, ಕಾರ್ನ್ ‌ಫ್ಲೇಕ್ಸ್, ಹಲವು ವಿಧಗಳ ಬಿಸ್ಕತ್, ಕಾಫಿ, ಜ್ಯೂಸ್, ಹೀಗೆ ಎಲ್ಲವೂ ಇದ್ದವು.

ತಿಂಡಿ ಬಳಿಕ ಒಂಬತ್ತು ಗಂಟೆಗೆಲ್ಲ ಬ್ಯಾಟರಿ ಪಾರ್ಕಿನ ಕಡೆ ಹೊರಟೆವು. ಅಲ್ಲಿಂದ ಲಿಬರ್ಟಿ ಆಫ್ ಸ್ಟಾಚ್ಯು ವೀಕ್ಷಿಸುವುದು ಮೊದಲ ಕಾರ್ಯಕ್ರಮ. ಅಲ್ಲಿಯೂ ಮೊದಲೇ ಕಾಯ್ದಿರಿಸಿದ್ದ ಟಿಕೆಟ್ ತೋರಿಸಿ, ಸೆಕ್ಯೂರಿಟಿ ತಪಾಸಣೆ ಬಳಿಕ ಫೆರ್ರಿ ( ಚಿಕ್ಕ ಹಡಗು ಅಥವಾ ದೊಡ್ಡ ದೋಣಿ)ಗಾಗಿ ಕಾಯುತ್ತ ನಿಂತೆವು. ಸಾಗರದ ಹಿನ್ನೆಲೆಯಲ್ಲಿ ಬೆಂಕಿ ಪಟ್ಟಣಗಳನ್ನು ಜೋಡಿಸಿದಂತೆ ತಲೆ ಎತ್ತಿ ನಿಂತಿರುವ ಕಾಂಕ್ರಿಟ್ ಕಾಡನ್ನು ನೋಡುವುದೇ ಚೆನ್ನ. ಮಕ್ಕಳು ಅಲ್ಲಿಂದಲೇ ಕಟ್ಟಡಗಳ ವಿವರ ನೀಡತೊಡಗಿದ್ದರು. ಇಪ್ಪತ್ತು ನಿಮಿಷ ಕಳೆಯುವಷ್ಟರಲ್ಲಿ ಫೆರ್ರಿ ಆಗಮನವಾಯಿತು. ಮೂರು ಮಹಡಿಗಳ ಫೆರ್ರಿ ಅದು. ಮಕ್ಕಳು ಮೇಲಿನ ಮಹಡಿಗೆ ಕರೆದೊಯ್ದು ಮುಂಭಾಗದ ಅಂಚಿನ ಆಸನ ಹಿಡಿದರು.

ಪ್ರವಾಸಿಗರ ಮುಖದಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು. ವಿದೇಶಿಯರ ಗಮನ ನನ್ನ ಉಡುಪಿನ ಮೇಲೆ ಬಿದ್ದದ್ದು ನನ್ನ ಮಕ್ಕಳಿಗೆ ರೇಗಿತ್ತು. ” ಅಮ್ಮಾ‌.. ಇವತ್ತೇ ಇಷ್ಟು ಟ್ರೆಡಿಷನಲ್ ಆಗಿ ಬರಬೇಕಿತ್ತಾ? ಏನಮ್ಮಾ ನೀನು? ಸ್ವಲ್ಪ ಮಾಡ್ ಡ್ರೆಸ್ ಹಾಕಬೇಕಿತ್ತು. ನಿನ್ನೆನೂ ಹಾಗೆ ಮಾಡ್ದೆ” ಎಂದ ವಿನೀತ್. “ಇಡೀ ದಿನ ಓಡಾಡೋದಿತ್ತಲ್ಲ, ಈ ತರ ಡ್ರೆಸ್ ಹಾಕಿದ್ರೆ ನನಗೆ ಡ್ರೆಸ್ ಮೇಲೆ conscious ಆಗಲ್ಲ.. ಫ್ರೀ ಆಗಿ ಓಡಾಡಬಹುದಲ್ಲ ಅಂತ” ಎಂದು ನನ್ನ ಸ್ಪಷ್ಟೀಕರಣ ಕೊಟ್ಟೆ.

” ನಿನ್ನಿಷ್ಟ.. ಆದ್ರೂ ಇವತ್ತು ಪ್ಯಾಂಟ್ ಷರ್ಟ್ ಹಾಕಿದ್ರೆ ಕಂಫರ್ಟ್ ಇರೋದು. ಹೋಗಲಿ ಬಿಡಮ್ಮ” ಎಂದ ಸಂಜೀತ್.

ಫೆರ್ರಿಯಲ್ಲಿ ಏನಿಲ್ಲವೆಂದರೂ 600 – 700 ಪ್ರವಾಸಿಗರಿದ್ದರು. ಫೆರ್ರಿ ಮೊದಲು ಹೊರಟಿದ್ದು ಎಲ್ಲಿಸ್ ದ್ವೀಪದ ಕಡೆಗೆ. ಈ ಎಲ್ಲಿಸ್ ದ್ವೀಪವು 1892 ರಿಂದ 1954 ರವರೆಗೆ ಅಮೆರಿಕದ ಪ್ರಮುಖ ವಲಸೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ‘ಹೊಸ ಪ್ರಪಂಚಕ್ಕೆ ದ್ವಾರ’ ಎಂದು ಕರೆಯಲ್ಪಟ್ಟಿತ್ತು. ನ್ಯೂಜೆರ್ಸಿಯಿಂ 1300 ಅಡಿ ಹಾಗೂ ನ್ಯೂಯಾರ್ಕ್‌ನಿಂದ ದೂರವಿದೆ. ವಲಸೆ ಬಂದವರಿಗೆ ಆರೋಗ್ಯ ತಪಾಸಣೆ, ಚಿಕಿತ್ಸಾ ಕೇಂದ್ರವಾಗಿ ನಿರ್ವಹಿಸುತ್ತಿದ್ದ ತಾಣವದು. ವಲಸಿಗರ ಕುರಿತ ಅದ್ಭುತವಾದ ಸಂಗ್ರಹಾಲಯವಿದ್ದು ದ್ವೀಪವೂ ಸುಂದರವಾಗಿದೆ.
ಎಲ್ಲಿಸ್ ದ್ವೀಪದಿಂದ ಲಿಬರ್ಟಿ ಪಾರ್ಕ್ ಕಡೆಗೆ ಹದಿನೈದು ನಿಮಿಷಗಳ ಮತ್ತೆ ಹದಿನೈದು ನಿಮಿಷಗಳ ಫೆರ್ರಿ ಪಯಣ. ದೂರದಿಂದಲೇ ಲಿಬರ್ಟಿ ಆಫ್ ಸ್ಟಾಚ್ಯೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಪ್ರವಾಸಿಗರ ಚಿತ್ತವನ್ನು ನ್ಯೂಯಾರ್ಕ್ ನಗರ ಹಾಗೂ ಪ್ರತಿಮೆಯತ್ತಲೇ ನೆಟ್ಟಿರುತ್ತದೆ. ಲಿಬರ್ಟಿ ಪಾರ್ಕ್ ಬರುತ್ತಿದ್ದಂತೆ ಫೆರ್ರಿಯಿಂದ ಇಳಿಯಲೇ ಇಪ್ಪತ್ತು ನಿಮಿಷ ಬೇಕಾಯಿತು. ಇಳಿಯುವ ಮುನ್ನ ವಿದೇಶೀ ವೃದ್ಧ ದಂಪತಿಗಳು ನನ್ನತ್ತಲೇ ನೋಡುತ್ತಿದ್ದರು. ಮುಗುಳ್ನಕ್ಕು ಅವರತ್ತ ಪ್ರಶ್ನಾರ್ಥಕವಾಗಿ ನೋಡಿದಾಗ, ಆ ವೃದ್ಧ ” ಮೈ ವೈಫ್ ಲೈಕ್ಡ್ ಯುವರ್ ಡ್ರೆಸ್, ಸ್ಪೆಷಲಿ ಇಟ್ ಸೂಟ್ಸ್ ಯೂ” ಎಂದಾಗ ಪ್ರಸನ್ನಳಾಗಿ ಅವರಿಗೆ ಧನ್ಯವಾದ ಅರ್ಪಿಸಿದೆ. ನಾನು ಸಲ್ವಾರ್ ಹಾಕಿದ್ದಕ್ಕೆ ಆಕ್ಷೇಪಸಿದ್ದ ಮಕ್ಕಳಿಗೆ ನಗು ಉಕ್ಕಿ ಬಂದು,

”ಅಮ್ಮನಿಗೆ ಎರಡು ಕೋಡು ಬಂತು ಕಣೋ” ಎಂದು ಚಿಕ್ಕವ ತನ್ನಣ್ಣನಿಗೆ ಹೇಳಿದ. ಸ್ವಾತಂತ್ರ್ಯ ಪ್ರತಿನಿಧಿಯಾಗಿ ಲಿಬರ್ಟಿ ಆಫ್ ಸ್ಟಾಚ್ಯು ಪ್ರತಿಮೆಯ ಹಿಂದಿನಿಂದ ಪ್ರವೇಶದ್ವಾರ ಕಲ್ಪಿಸಲಾಗಿದೆ. ಆಕರ್ಷಕವಾದ ಉದ್ಯಾನವನ, ಎಲ್ಲರ ಗಮನವೂ ಆ ಸ್ವಾತಂತ್ರ್ಯದ ಮಹತ್ವ ಸಾರುವ ಆ ಪ್ರತಿಮೆಯ ಸುತ್ತಲೇ.. ಅದರಲ್ಲೂ ಮುಂಭಾಗದ ಪ್ರದೇಶದಲ್ಲಿ ದಟ್ಟಣೆ ಹೆಚ್ಚು. ನೆಲದಿಂದ ಜ್ವಾಲೆಯ ತುದಿಯವರೆಗೆ ಒಟ್ಟು 305 ಮೀ.1 ಇಂಚು ಎತ್ತರವಿರುವ ಈ ಪ್ರತಿಮೆಯ ಮುಂದೆ ಮನುಷ್ಯ ಕುಬ್ಜನಾಗಿ ಬಿಡುವ ಎನಿಸಿತು. ಬಲಗೈಲಿ ದೀವಟಿಗೆಯನ್ನು, ಎಡಗೈಲಿ (ಸ್ವಾತಂತ್ರ್ಯ ಘೋಷಣೆಯಾದ ದಿನಾಂಕ) ಜುಲೈ 4, 1776 ಹಿಂದಿರುವ ಹೊತ್ತಿಗೆಯು ನಿರೀಕ್ಷೆಯ ಬೆಳಕು ಮತ್ತು ಭರವಸೆಯನ್ನು ನೀಡುತ್ತದೆ. ಈ ಪ್ರತಿಮೆ ಪ್ರತಿ ವರ್ಷ ಸುಮಾರು 600 ಬಾರಿ ಮಿಂಚು,ಸಿಡಲನ್ನು ತಡೆದುಕೊಳ್ಳುವುದಂತೆ. ತೀವ್ರವಾದ ಗಾಳಿಯಲ್ಲಿ ದೀವಟಿಕೆಯು 5 ಇಂಚುಗಳಷ್ಟು ಅಕ್ಕ ಪಕ್ಕ ಚಲಿಸುವುದಂತೆ!

ಲಿಬರ್ಟಿ ಪಾರ್ಕಿನಲ್ಲಿ ನಡೆದಾಡುವಾಗ ರೋಮಾಂಚನವಾಗುತ್ತಿತ್ತು. ಲಂಬವಾಗಿ ತಲೆ ಎತ್ತಿ ನೋಡಿದರೂ ತುದಿಯನ್ನು ನೋಡಲು ಪ್ರಯಾಸ ಪಡಬೇಕಿತ್ತು. ದ್ವೀಪವಾಗಿರುವುದರಿಂದ ಸಹಜವಾಗಿ ತಂಪಾದ ಗಾಳಿ ಬೀಸುತ್ತಿತ್ತು. ಆ ಗಾಳಿಯ ತೀವ್ರತೆಗೆ ದುಪ್ಪಟವನ್ನು ಹಿಡಿಯುವುದು ನನಗೆ ಸವಾಲಾಗಿತ್ತು. ಹಲವಾರು ರೀತಿಯಲ್ಲಿ ಪ್ರತಿಮೆಯನ್ನು ಕೆಂದ್ರವಾಗಿರಿಸಿಕೊಂಡು ಫೋಟೋಗಳನ್ನು ತೆಗೆದುಕೊಂಡೆವು. ಅಲ್ಲಿಯೇ ಸ್ಟಚ್ಯೂ ಆಫ್ ಲಿಬರ್ಟಿ ಮ್ಯೂಸಿಯಂ ಪಾರ್ಕ್ ಕೂಡ ಇದ್ದು ಲಿಬರ್ಟಿ ಪಾರ್ಕಿನ ಹಾಗೂ ಪ್ರತಿಮೆ ಅನಾವರಣದ ಕುರಿತ ಅದ್ಬುತವಾದ ಫೋಟೋ ಹಾಗೂ ಮಾಹಿತಿಗಳು ಲಭ್ಯವಿವೆ.

WTC ಮನವ ಕಾಡುವ ವಿಧ್ವಂಸಕ ಕೃತ್ಯ ಉದ್ಯಾನವನದಲ್ಲಿ ನಡೆದಾಡಿ, ಸ್ವಾತಂತ್ರ್ಯ ದೇವಿಯನ್ನು ಕಣ್ತುಂಬಿಕೊಂಡು ಫೆರ್ರಿಯ ಮೂಲಕ ನ್ಯೂಯಾರ್ಕ್ ನಗರವನ್ನು ತಲುಪಿದೆವು. ನ್ಯೂಯಾರ್ಕ್ ನಗರದಲ್ಲಿ ಶರವಣ ಭವನ ಹೋಟೆಲಿನಲ್ಲಿ ಊಟಕ್ಕೆ ಹೋದೆವು. ಅಲ್ಲಿ ದಕ್ಷಿಣ ಭಾರತೀಯರಿಗಿಂತ ವಿದೇಶಿಯರು ಕೂಡ ಬಹಳಷ್ಟು ಇದ್ದದ್ದು ಖುಷಿ ನೀಡಿತು. ಬಳಿಕ, WTC ವೀಕ್ಷಣೆಗೆ ಹೊರಟೆವು. 2001 ರ ಸೆಪ್ಟೆಂಬರ್ 11 ರಂದು ಉಗ್ರರ ದಾಳಿಯಲ್ಲಿ ನಾಶವಾದ ಅವಳಿ ಕಟ್ಟಡಗಳಿದ್ದ ಜಾಗದಲ್ಲಿ ಕಾರಂಜಿ ಕೊಳವನ್ನು ನಿರ್ಮಿಸಲಾಗಿದೆ. ಆ ಕೊಳದ ಸುತ್ತ ಗ್ರಾನೈಟ್ ಆವರಣ ನಿರ್ಮಿಸಿದ್ದು ಅದರ ಮೇಲೆ ದುರಂತದಲ್ಲಿ ಮಡಿದ ಮೂರು ಸಾವಿರಕ್ಕೂ ಹೆಚ್ಚು ಜನರ ಹೆಸರುಗಳನ್ನು ಕೊರೆಸಲಾಗಿದೆ. ಇಂದಿಗೂ ಅವರ ಸಂಬಂಧಿಕರು ಅವರ ಹೆಸರಿನ ಮೇಲೆ ಗುಲಾಬಿ ಹೂವನಿಟ್ಟು ಪ್ರಾರ್ಥಿಸುವುದನ್ನು ನೋಡಿದರೆ ಎಂತಹ ಕಲ್ಲು ಹೃದಯಿಯ ಮನಸ್ಸು ಆರ್ದ್ರವಾಗುತ್ತದೆ. ಅಲ್ಲಿ ಅದೆಷ್ಟೋ ಭಾರತೀಯರ ಹೆಸರುಗಳು ಇವೆ, ಅಲ್ಲಿರುವಷ್ಟೂ ಸಮಯ ಮನಸ್ಸು ಭಾರವಾಗುತ್ತದೆ.

ಅವಳಿ ಕಟ್ಟಡಗಳ ದುರಂತದ ಬಳಿಕ ಅದೇ ಜಾಗದಲ್ಲಿ 1776 ಅಡಿ ಎತ್ತರವಿರುವ ಒಂದು ವಿಶ್ವ ವಾಣಿಜ್ಯ ಕೇಂದ್ರದ ( one world trade center) ಕಟ್ಟಡವನ್ನುಪೂರ್ಣಗೊಳಿಸಲಾಗಿದೆ. ಇದು ನ್ಯೂಯಾರ್ಕ್ ನಗರದ ಅತಿ ಎತ್ತರದ ಹಾಗು ಅಮೆರಿಕಾದಲ್ಲಿ ಮೂರನೇ ಅತಿ ಎತ್ತರದ ಕಟ್ಟಡವಾಗಿದೆ. ಅಲ್ಲಿಯೇ WTC ವಸ್ತು ಸಂಗ್ರಹಾಲಯವಿದ್ದು ಅದನ್ನು ಮುಂಗಡ ಟಿಕೆಟ್ ಕಾಯ್ದಿರಿಸಿ ನೋಡಬೇಕು. ಅವಳಿ ಕಟ್ಟಡಗಳ ದುರಂತ ನಂತರದ ರಕ್ಷಣಾ ಕಾರ್ಚಾರಣೆ ಕಾರ್ಯ ಲಭ್ಯವಾದ ಕಟ್ಟಡಗಳ ಅವಶೇಷಗಳು ಎಲ್ಲವನ್ನು ಇಲ್ಲಿ ವೀಕ್ಷಿಸಬಹುದು. ಈ ಕುರಿತ ಸಾಕ್ಷ್ಯ ಚಿತ್ರವಿದ್ದು, ಆ ಸಮಯದಲ್ಲಿ ಕಾರ್ಯೋನ್ಮಖರಾದವರ ಸಂದರ್ಶನಗಳು, ರಕ್ಷಣಾ ಕಾರ್ಯಗಳ ವಿಡಿಯೋ ಎಲ್ಲವನ್ನು ಚಿತ್ರಿಸಲಾಗಿದೆ. ವಸ್ತು ಸಂಗ್ರಹಾಲಯದಲ್ಲಿರುವ ಅವಶೇಷಗಳು, ರಕ್ಷಣಾ ತಂಡದವರು ಬಳಸಿದ ಸಲಕರಣೆಗಳು ಅವುಗಳನ್ನೆಲ್ಲ ನೋಡುವಾಗ ನಮಗರಿವಿಲ್ಲದಂತೆ ಕಣ್ತುಂಬಿ ಬರುತ್ತದೆ.

ವಸ್ತು ಸಂಗ್ರಹಾಲಯದಿಂದ ಹೊರಬಂದರೂ ಯಾರೋ ಸುಳಿದಾಡಿದ ಹಾಗೆ, ಕಟ್ಟಡಗಳ ಮೇಲಿನಿಂದ ಜಿಗಿದವರ, ನರಳಿದವರ ನೋವಿನ ಧ್ವನಿ ಆರ್ತವಾಗಿ ಕೇಳುವಂತೆ ಭಾಸವಾಗುತ್ತಿತ್ತು. ಹದಿನೈದರಿಂದ ಇಪ್ಪತ್ತು ನಿಮಿಷ ಮಾತೇ ಬೇಡವೆನಿಸಿ,ಮೌನಕ್ಕೆ ಜಾರುವಂತಾಯಿತು.

ಮಕ್ಕಳು ‘ಅಮ್ಮಾ… ಇದೆಲ್ಲ ಮುಗಿದ ಕಥೆ. ಇಲ್ಲಿರುವವರ ಸಂಬಂಧಿಕರ ಪರಿಸ್ಥಿತಿ ಹೇಗಿರಬೇಕು. ಬಾ.. ಇನ್ನೂ ಎರಡು ಕಡೆ ಹೋಗೋದಿದೆ’ ಎಂದು ಅಲ್ಲಿಂದ ಒಂದು ಸಣ್ಣ ದ್ವೀಪದ ಉದ್ಯಾನಕ್ಕೆ ಕರೆದೊಯ್ದರು.

ಲಿಟಲ್ ಐಲ್ಯಾಂಡ್ ಮತ್ತು ಟೈಟಾನಿಕ್ ಹಡಗು ಅದರ ಹೆಸರು ಲಿಟಲ್ ಐಲ್ಯಾಂಡ್. ಈ ದ್ವೀಪವು ಹಡ್ಸನ್ ನದಿಯಿಂದ ಆವೃತವಾಗಿದೆ. ಟುಲಿಪ್ ಹೂಗಳನ್ನು ಹೋಲುವ ಸ್ತಂಭಗಳ ಮೇಲೆ ಈ ಪಾರ್ಕನ್ನು ನಿರ್ಮಾಣ ಮಾಡಲಾಗಿದೆ. ಹೊರಗಿನಿಂದ ನೋಡಲು ಸಾಮಾನ್ಯವಾಗಿ ಕಾಣುವುದು. ಒಳಗೆ ಪ್ರವೇಸಿದಾಗ ಆ ಎರಡೂವರೆ ಎಕರೆ ಪ್ರದೇಶದಲ್ಲಿ ತೂಗಾಡುವ ಟುಲಿಪ್ ಹೂಗಳ ಮೇಲೆ ಕಲಾತ್ಮಕವಾಗಿ ಉದ್ಯಾನವನ್ನು ನಿರ್ಮಾಣ ಮಾಡಿರುವ ತಂತ್ರಜ್ಞಾನ ಮನಸೆಳೆಯುತ್ತದೆ. ಉದ್ಯಾನದ ಮೂಲೆತಳನ್ನು ವಿಭಿನ್ನ ಸಸ್ಯಗಳಿಂದ ವಿನ್ಯಾಸಗೊಳಿಸಲಾಗಿದ್ದು ಪ್ರತಿ ಮೂಲೆಯಿಂದಲೂ ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿಯ ನಗರಗಳ ಸೌಂದರ್ಯ ಮನಮೋಹಕವಾಗಿ ಕಾಣಿಸುತ್ತದೆ. ಸೂರ್ಯಾಸ್ತ ಸಮೀಪಿಸುತ್ತಿದ್ದ ಆ ಸಂಜೆಯಲ್ಲಿ ತಿಳಿಯಾದ ಬೆಳಕಿನಲ್ಲಿ, ನದಿ ಹಾಗೂ ಸಮುದ್ರದ ನೀರು ಹೊನ್ನಿನ ಬಣ್ಣದಲ್ಲಿ ಹೊಳೆಯುತ್ತಿತ್ತು. ಅಲ್ಲಿ ಫೋಟೋ ಶೂಟ್‌ಗಾಗಿ ಹಂಬಲಿಸುವವರ ನಡುವೆ ನಾವೂ ಫೋಟೋ ತೆಗೆದುಕೊಂಡು, ಕೆಲ ನಿಮಿಷ ಕುಲಕಿತು ಆಸ್ವಾದಿಸಿದೆವು.

ಈ ಲಿಟಲ್ ಐಲ್ಯಾಂಡ್ ಟೈಟಾನಿಕ್ ಹಡಗಿನ ದುರಂತಕ್ಕೂ ಒಂದು ನೇರ ಸಂಬಂಧವಿದೆ. ಆ ಹಡಗು ಮುಳಗುವ ಸಮಯದಲ್ಲಿ ರಕ್ಷಿಸಲ್ಪಟ್ಟ ಜನರನ್ನು ದೋಣಿಗಳ ಮೂಲಕ ಮೊದಲು ತಲುಪಿಸಿದ್ದು ಈ ಲಿಟಲ್ ಐಲ್ಯಾಂಡ್ ತಾಣಕ್ಕೆ. ಹಾಗಾಗಿ ಮ್ಯಾನ್ ಹ್ಯಾಟನ್ ನಲ್ಲಿ ಇರುವ ಈ ಉದ್ಯಾನವನಕ್ಕೆ ಟೈಟಾನಿಕ್ ಪಾರ್ಕ್ ಎಂದು ಕೂಡ ಕರೆಯಲಾಗುವುದು. ಘಟ್ಟ ಪ್ರದೇಶಗಳಲ್ಲಿನ ತಿರುವು ಸಂಚಾರದಂತೆ ಈ ಉದ್ಯಾನ ಕೂಡ ಕಿರಿದಾದ ಮಾರ್ಗಗಳನ್ನು ಹತ್ತಿ ಪುಟ್ಟ ಬೆಟ್ಟ ತಲುಪಿದ ಭಾವ ಮೂಡಿಸುತ್ತದೆ. ಈ ಸೇರುವೆಯ ವಿಶೇಷವೆಂದರೆ ಇಲ್ಲಿಂದ ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿ ಎರಡೂ ನಗರಗಳ ನೋಟವನ್ನು ಆಸ್ವಾದಿಸಲು ಸಾಧ್ಯ. ಸಂಜೆಯ ಸೂರ್ಯನ ಬೆಳಕು ಇರುವಂತೆಯೇ ಬ್ರೂಕ್ಲಿನ್‌ ಸೇತುವೆಯನ್ನು ನೋಡಲು ಹೊರಟೆವು.

ಬ್ರೂಕ್ಲಿನ್ ತೂಗು ಸೇತುವೆ

ಬ್ರೂಕ್ಲಿನ್ ಸೇತುವೆಯ ನೋಟ ಹಾಗೂ ಸೇತುವೆಯ ಮೇಲಿನ ನಡಿಗೆ ಹೊಸದೊಂದು ಪ್ರಪಂಚಕ್ಕೆ ಹೋದಂತಾಗುತ್ತದೆ. ಸೇತುವೆಯಿಂದ ಒಂದೆರಡು ಕಿ.ಮೀ ದೂರವಿರುವಂತೆಯೇ ಅದರ ಹಿನ್ನೆಲೆಯಲ್ಲಿ ಫೋಟೋ ತೆಗೆದುಕೊಳ್ಳುವವರು ಕಾಣ ಸಿಗುತ್ತಾರೆ. ಆ ತೂಗು ಸೇತುವೆ ಇಲ್ಲೇ ಪಕ್ಕದಲ್ಲಿ ಇರುವುದೇನೋ ಎನಿಸುತ್ತದೆ. ಆದರೆ ಅದನ್ನು ಸಮೀಪಿಸಲು ಹೋದಾಗಲೇ ದೂರದ ಅರಿವಾಗುವುದು. ಜನರಿದ್ದು ಫೋಟೋದಲ್ಲಿ ನಾವಷ್ಟೇ ಇರುವಂತೆ ಫೋಟೋ ತೆಗೆದುಕೊಳ್ಳಲು ಕಾಯುತ್ತಾರೆ. ಅದರಂತೆ ನಾವು ಕೂಡ ಅಂತಹ ಫೋಟೋಗಳನ್ನು ತೆಗೆದುಕೊಂಡದ್ದು ವಿಶೇಷವಾಗಿತ್ತು. ದಾರಿಯ ಇಕ್ಕೆಲಗಳಲ್ಲಿ ಪುಟ್ಟ ಹೋಟೆಲುಗಳು, ವ್ಯಾಪಾರ ಮಳಿಗೆಗಳ ನಡುವೆ ತೂಗು ಸೇತುವೆಯ ನೋಟ ವಿಹಂಗಮವಾಗಿ ಕಾಣುತ್ತದೆ. ಬ್ರೂಕ್ಲಿನ್ ನಿಂದ ನ್ಯೂಯಾರ್ಕ್ ಸಂಪರ್ಕಿಸುವ ವಿಶ್ವದ ಮೊದಲ ಉದ್ದದ ಸೇತುವೆಯಾಗಿ 1883 ರಲ್ಲಿ ಬಳಕೆಗೆ ಸಿದ್ಧವಾಗಿತ್ತಂತೆ. ಅಂತಹ ಸೇತುವೆಯ ಮೇಲೆ ನಡೆದಾಡಿದೆ ಎನ್ನುವುದು ಪುಳಕವನ್ನೀಯುತ್ತದೆ. ದೂರದಲ್ಲಿ ನೋಡುವಾಗ ನದಿಯೇ ಕಾಣಿಸಲಿಲ್ಲ. ಆದರೆ, ಹತ್ತಿರ ಹೋದಂತೆ ನದಿ, ಸೇತುವೆಯ ಪೂರ್ಣ ನೋಟ ಬೆರಗು ಮೂಡಿಸಿತು.
ಆ ಸೇತುವೆಗೆ ಹೊಂದಿಕೊಂಡಂತೆ ಪಕ್ಕದಲ್ಲಿ ಮರದ ದಬ್ಬೆಗಳನ್ನು ಕಬ್ಬಿಣದ ಸಲಾಕೆಗಳ ಮೇಲೆ ಜೋಡಿಸಿ ಪ್ರವಾಸಿಗರಿಗೆ ಕಾಲು ದಾರಿ ನಿರ್ಮಿಸಲಾಗಿದೆ. ಸೇತುವೆಯ ಎರಡೂ ದ್ವಾರಗಳನ್ನು ಅಲ್ಲಿಂದ ನೋಡುವುದೇ ಸೊಗಸು. ಸ್ವಲ್ಪ ದೂರ ಟಾರ್ ಹಾಕಿರುವ ರಸ್ತೆ ಇದ್ದು ಅದರ ಮೇಲೆ ನಡೆಯುತ್ತ ಸರಾಗವಾಗಿ ನ್ಯೂಯಾರ್ಕ್ ನಗರದ ನೋಟವನ್ನು ಕಣ್ತುಂಬಿಕೊಳ್ಳತೊಡಗಿದೆ. ಯಾವಾಗ ಮರದ ದಬ್ಬೆಗಳು ಸಿಕ್ಕವೋ ಅಲ್ಲಿಂದ ಅದೇನೋ ಅವ್ಯಕ್ತ ಭಯ. ಆ ದಬ್ಬೆಗಳೋ ಕಾಲಿಟ್ಟ ಕಡೆ ಡೊಂಕಾದಂತೆ ಭಾಸವಾಗುತ್ತ ಭಯ ಹುಟ್ಟಿಸಿದವು. ಹಿಂದಕ್ಕೆ ಹೋಗಲಾರದ, ಮುಂದಡಿ ಇಡಲಾರದ ತ್ರಿಶಂಕು ಸ್ಥಿತಿ ನನ್ನದಾಗಿತ್ತು.

ವಿನೀತ್ ನನ್ನ ಮುಖ ಭಾವದಿಂದ ಸ್ಥಿತಿ ಅರಿತು ಕೈ ಹಿಡಿದು ಮುಂದಕ್ಕೆ ಕರೆದೊಯ್ದ. ಆಗಾಗ್ಗೆ ಸಮಾಧಾನಿಸುತ್ತ, “ನಿತ್ಯ ಸಾವಿರಾರು ಜನ ಇದನ್ನು ನೋಡೋಕೆ ಅಂತ ಇಲ್ಲಿ ಬರ‌್ತಾರೆ. ಯಾವ ಅಪಾಯವೂ ಇಲ್ಲಮ್ಮ” ಎಂದು ಮಧ್ಯೆ ಫೋಟೋಗಳನ್ನು ತೆಗೆಯುತ್ತಿದ್ದ. ಅಕಸ್ಮಾತ್ ದಬ್ಬೆ ಮುರಿದರೆ ಎಷ್ಟು ಅಡಿ ಕೆಳಗೆ ಬೀಳಬಹುದು ಎಂದು ನನ್ನ ಕಣ್ಣುಗಳು ಅಂದಾಜಿಸುತ್ತಿದ್ದವು. ಹೇಳಿದರೆ ಅಲ್ಲಿ ಅಪಹಾಸ್ಯಕ್ಕೀಡಾಗುವೆನೋ ಎಂದು ಭಯವನ್ನು ಅದುಮಿಟ್ಟು ನಗುವ ಯತ್ನ ಮಾಡಿದೆ.

ಇಕ್ಕೆಲಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ನಡೆಯುತ್ತಿದ್ದರೆ, ಅಲ್ಲಿಯೂ ಹೊಸದಾಗಿ ಪದವಿ ಪಡೆದವರು ತಮ್ಮ ಗೌನು ಧರಿಸಿ ಹಲವು ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುವುದನ್ನು ನೋಡಲು ಮುದ ನೀಡುತ್ತಿತ್ತು. ಕಟ್ಟಡಗಳಿಂದ ಹೊಮ್ಮುವ ದೀಪಗಳ ಬೆಳಕು ವಿಶೇಷವಾದ ಕಾಂತಿಯನ್ನು ನೀಡಿತ್ತು. ನ್ಯೂಯಾರ್ಕ್ ನಗರದಲ್ಲಿ ನಿತ್ಯ ದೀಪಾವಳಿ ಎನಿಸಿತ್ತು. ಸೇತುವೆಯ ಮಧ್ಯಭಾಗದಲ್ಲಿ ನಿಂತು ನೋಡಿದರೆ ಆಗಸವೇ ಕೆಳಗೆ ಬಿದ್ದಿದೆಯೇನೋ ಎನ್ನುವ ಭಾವ ಮೂಡುವುದು. ಬ್ರೂಕ್ಲಿನ್ ತೂಗು ಸೇತುವೆಯು ತಂತ್ರಜ್ಞಾನದ ಹಾಗೂ ವಾಸ್ತು ಶಿಲ್ಪದ ಪ್ರತೀಕವಾಗಿ ಪ್ರವಾಸಿಗರನ್ನು ಸೆಳೆಯುವುದು.

ಅಂದು ಬೆಳಗಿನಿಂದ ರಾತ್ರಿ ಬ್ರೂಕ್ಲಿನ್ ತೂಗು ಸೇತುವೆಯವರೆಗೆ ಒಟ್ಟಾರೆ ನಡೆದದ್ದು ಒಟ್ಟು ಹನ್ನೆರಡು ಕಿ.ಮೀಗಳು! ಅಬ್ಬಾ.‌. ಆಯಾಸ ಮಾತ್ರ ಕಾಡಿಸಲೇ ಇಲ್ಲ. ಪಾಪ್ ಕಾರ್ನ್, ಕಿತ್ತಳೆ ರಸ, ಬಾಳೆ ಹಣ್ಣಿನ ಐಸ್ ಕ್ರೀಂ, ಒಮ್ಮೆ ಕಾಫಿ ಹೀರಿದ್ದು. ರಾತ್ರಿ ಮತ್ತದೇ ಪಿಜ್ಜಾ ತಿಂದು ಮೆಟ್ರೋ ಮೂಲಕ ಹೋಟೆಲಿನತ್ತ ಹೊರಟೆವು.

ಮುಂದುವರೆಯುವುದು

ಹಿಂದಿನ ಸಂಚಿಕೆಗಳು :


  • ಕಮಲಾಕ್ಷಿ ಸಿ ಆರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW