ಪಕ್ಕಾ ನಮ್ಮ ಬೆಂಗಳೂರಿನ ಬಫೆ ರೀತಿಯ ಖಾದ್ಯಗಳು ಅಮೇರಿಕಾದ ಉಡ್‌ಲ್ಯಾಂಡ್ಸ್ ನಲ್ಲಿದ್ದವು. ಅಲ್ಲಿಯ ವಿಶೇಷತೆಯೆಂದರೆ ಒಮ್ಮೆ ತೆಗೆದುಕೊಂಡ ತಟ್ಟೆಯಲ್ಲಿ ಮತ್ತೆ ಬಡಿಸಿಕೊಳ್ಳುವಂತಿಲ್ಲ. ಅದೆಷ್ಟು ತಟ್ಟೆಗಳನ್ನು ಒಬ್ಬರಿಗಾಗಿ ಇಡಬೇಕೋ ಎನಿಸಿತು. ನಾಶ್ವೆಲ್‌ನಲ್ಲಿ ಶಾಪಿಂಗ್ ಸೆಂಟರ್ ಹಾಗೂ ತಪ್ಪಿದ ಗುಹಾಂತರ ಅವರ ಅನುಭವದ ಬಗ್ಗೆ ಲೇಖಕಿ ಕಮಲಾಕ್ಷಿ ಸಿ ಆರ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಚಿಕ್ಕ ಮಗ ಸಂಜೀತನ ಗ್ರಾಜ್ಯೂಯೇಷನ್ ದಿನ ಹತ್ತಿರ ಬರಲಾರಂಭಿಸಿತು. ಹೊಸ ಸೂಟ್ ಕೊಡಿಸಲು ಅವನನ್ನು ಕರೆದುಕೊಂಡು ಹೋಗೋದೇ ಒಂದು ರೀತಿಯಲ್ಲಿ ಸವಾಲು. ಅವನನ್ನು ಒಪ್ಪಿಸೋದು ಮತ್ತೂ ಸವಾಲಿನ ಕೆಲಸ. ಕೇಳಿದಾಗಲೆಲ್ಲ, ನಾಳೆ ಹೋಗುವಾ ಎಂದು ಮುಂದಕ್ಕೆ ಹಾಕಿ ಬಿಡುತ್ತಿದ್ದ.
ವಿನೀತ್ ಪಾರ್ಕಿಗೆ ಹೋಗುವ ಎಂದು ನಮ್ಮಿಬ್ಬರನ್ನು ಕರೆದೊಯ್ದ. ಪಾರ್ಕಿಗೆ ಎಂದವನು ಹೊರಟಿದ್ದು ನಗರದಿಂದ ಸಬ್ ಅರ್ಬ್ಸ್ ( ನಗರದ ಹೊರವಲಯಕ್ಕೆ) ಕಡೆಗೆ. ನಗರದಿಂದ ಸ್ವಲ್ಪ ದೂರ ಹೊರಟರೆ ಸಾಕು, ಸಣ್ಣ ತೊರೆ, ಹಸಿರಿನ ಮಧ್ಯೆ ಇರುವ ಮನೆಗಳನ್ನು ನೋಡಲೇ ಚೆನ್ನ. ದೂರ ಬೆಟ್ಟದಲ್ಲಿ ಪುಟ್ಟ ಮನೆ ಇರಬೇಕು, ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು.. ಹಾಡು ನೆನಪಾಗುವಂತೆ ಮಾಡುತ್ತಿದ್ದವು. ಇಪ್ಪತ್ತು ನಿಮಿಷವಾದರೂ ಪಾರ್ಕು ಸಿಗದಾಗ ಕೇಳಿದೆ.
“ಪಾರ್ಕಿಗೆ ಇಷ್ಟು ದೂರವಾ ಮಗನೆ?”
” ಪಾರ್ಕಿಗಲ್ಲಮ್ಮ. ಸಂಜೂಗೆ ಮೊಬೈಲ್ ತಗೊಳೋಣ ಅಂತ ಕರೆದುಕೊಂಡು ಬಂದೆ” ಎಂದ.
” ಸಂಜೂನು ಕರೆದುಕೊಂಡು ಬರಬಹುದಿತ್ತಲ್ಲ..ಅವನಿಲ್ಲದೆ ತಗೊಳ್ಳೋದಾ?” ಎಂದೆ.
” ಅವನಿಗೆ ಆರು ತಿಂಗಳಿಂದ ಹೇಳ್ತಾ ಇದ್ದೀನಿ. ಏನು ಅರ್ಜೆಂಟು? ತಗೊಂಡರಾಯ್ತು ಅಂತಾನೆ ಇದ್ದಾನೆ. ಗ್ಯಾಜ್ಯುಯೇಷನ್ ಡೇಗೆ ನನ್ನ ಕಡೆಯಿಂದ ಗಿಫ್ಟ್ ಅವನಿಗೆ” ಎಂದ.
ಅಣ್ಣ ತಮ್ಮನಿಗೆ ಉಡುಗೊರೆ ಕೊಡೋದು ಸಂತಸ ತರದೆ ಇರುವುದೆ? ಕರೆದೊಯ್ದದ್ದು ಆ್ಯಪಲ್ ಫೋನ್ ಸೆಂಟರಿಗೆ. ಹೊಸ ವರ್ಷನ್ ಫೋನ್ ಗಿಫ್ಟ್ ಪ್ಯಾಕ್ ಮಾಡಿಸಿಕೊಂಡು ಅಲ್ಲಿಯೇ ಕಾಫಿ ಕುಡಿದು ಮನೆಯ ದಾರಿ ಹಿಡಿದೆವು.

ಮನೆಗೆ ಬಂದು ಫೋನಿನ ಕವರ್ ಕೈಗಿತ್ತೊಡನೆ ಬಂದ ಮೊದಲ ಪ್ರತಿಕ್ರಿಯೆ “ಈಗ ಅವಸರವೇನಿತ್ತು? ಫೋನ್ ಇತ್ತಲ್ಲೋ. ನೋಡಮ್ಮಾ.. ದುಡ್ಡು ವೇಸ್ಟ್ ಮಾಡ್ತಾನೆ” ಎಂದ.
“ಕೆಲ ದಿನಗಳಿಂದ ಬ್ಯಾಟರಿ ಸರಿಯಾಗಿ ಚಾರ್ಜ್ ಆಗ್ತಾ ಇಲ್ಲ. ಅವನಿಗೆ ನನ್ನ ಕಾರ್ಡ್ ಕೊಟ್ಟಿದ್ದರೂ ಬಳಸಲ್ಲ. ಅದಕ್ಕೆ ಅವನಿಗೆ ಹೇಳದೆ ತರೋಣ ಎಂದದ್ದು” ಎಂದ. ಮಕ್ಕಳ ಮಾತು ಕೇಳಿ ಮನತುಂಬಿ ಬಂತು, ಅದೇಕೋ ನನಗರಿಯದೆ ಕಣ್ಣಂಚು ಒದ್ದೆಯಾಯ್ತು.
ನಂತರದ ವಾರಾಂತ್ಯ ಕೆಂಟಕಿ ನಗರಕ್ಕೆ ಸಮೀಪವಿರುವ ಮೊಮ್ಮತ್ ಕೇವ್ಸ್ ( Mommath caves) ನೋಡುವುದಿತ್ತು. ವಿಶ್ವದ ದೊಡ್ಡ ಗುಹೆ ಇದು ಎಂದು ಹೇಳಲಾಗುತ್ತದೆ. ಆ ಶನಿವಾರ ಸಿಕ್ಕಾಪಟ್ಟೆ ಮಳೆಯಿಂದಾಗಿ ಅಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಅಂದು ವಿನೀತ್ ಬೆಳಗ್ಗೆಯೇ ಹೇಳಿದ, ಮೊಮ್ಮತ್ ಕೇವ್ಸ್ ಹೋಗಕ್ಕಾಗಲ್ಲ.. ಲೈಟಾಗಿ ತಿಂಡಿ ಮಾಡಮ್ಮ. ಮಧ್ಯಾಹ್ನ ಉಡ್‌ಲ್ಯಾಂಡ್ಸ್‌ಗೆ ಬಫೆ ಇದೆ. ಊಟ ಮುಗಿಸಿ, ಆಮೇಲೆ ಶಾಪಿಂಗ್ ಹೋಗೋಣ ಅಂತ. ಅದರಂತೆ ಉಪ್ಪಿಟ್ಟು ತಿಂಡಿ ನೆಪಕ್ಕೆ ಮಾಡಿ ಉಡ್‌ಲ್ಯಾಂಡ್ಸ್‌ಗೆ ಹೋದೆವು. ಭಾರತೀಯರೇ ಹೆಚ್ಚಾಗಿ ಬರಬಹುದು ಎಂದುಕೊಂಡಿದ್ದೆ. ಆದ್ರೆ ಅಲ್ಲಿ ಅಮೆರಿಕನ್ನರೇ ಹೆಚ್ಚಿದ್ದದ್ದು ಕಂಡು ನಮ್ಮ ಶೈಲಿಯ ಆಹಾರ ಪ್ರಭಾವ ಬೀರಿದೆ ಎಂದು ಖುಷಿಯಾಯ್ತು.

ಅಂದು ನಾನು ಕಾರಿನಿಂದ ಇಳಿಯುವಾಗ ಗಮನಿಸಿದ ವಿಷಯವೆಂದರೆ ನಾನು ಮನೆಯೊಳಗೆ ಹಾಕುವ ಪಾದರಕ್ಷೆ ಹಾಕಿಕೊಂಡು ಹೋಗಿದ್ದು. ಮಕ್ಕಳು, ಇವರು ನಕ್ಕರು.. ‘ ಉಳಿದವರಿಗೆಲ್ಲ ಹೇಳ್ತೀಯ.. ತರಾತುರಿಯಲ್ಲಿ ಹೊರಡಬಾರದು. ಈಗ ನೀವು ಮಾಡಿದ್ದೇನೊ’ ಅಂತ. ರೆಸ್ಟೋರೆಂಟಿನಲ್ಲಿ ಖಾದ್ಯಗಳನ್ನು ಬಡಿಸಿಕೊಳ್ಳಲು ಹೋಗುವಾಗಲೂ ಉಳಿದವರು ನನ್ನ ಕಾಲನ್ನೇ ನೋಡುತ್ತಿರುವರೇನೋ ಎನಿಸುತ್ತಿತ್ತು. ಉಡ್‌ಲ್ಯಾಂಡ್ಸ್ ಮಗನ ಮನೆಯಿಂದ ಹದಿನೈದು ನಿಮಿಷ ದೂರವಷ್ಟೇ. ಊಟ ಮುಗಿಸಿ ಮತ್ತೆ ಮನೆಗೆ ಹೋಗಿ ಬರೋಣ ಎಂದು ಮಗ ಸಮಾಧಾನಿಸಿ, ತಾನೆ ನನಗೆ ಬೇಕಿದ್ದನ್ನು ಬಡಿಸಿಕೊಂಡು ಬರುತ್ತಿದ್ದ.
ಅಂದು ಒಳ್ಳೆಯ ಊಟ ಮಾಡಿದೆವು. ಮಸಾಲೆ ದೋಸೆ, ಉದ್ದಿನ ವಡೆ, ಬಿಸಿಬೇಳೆ ಬಾತ್, ಪೊಂಗಲ್, ಸೂಪು, ಮಂಚೂರಿಗಳು, ಎರಡು ರೀತಿಯ ಬಾತ್, ರೈತಾ, ಖಾರ ಬೂಂದಿ ರೈತಾ, ಅನ್ನ ರಸಂ, ರೋಟಿ, ಕರಿಗಳು.. ಸಿಹಿ, ಕೇಕು, ಅಬ್ಬಾಬ್ಬಾ..ಹಣ್ಣು, ತರಕಾರಿಗಳ ಸಲಾಡ್. ಪಕ್ಕಾ ನಮ್ಮ ಬೆಂಗಳೂರಿನ ಬಫೆ ರೀತಿಯ ಖಾದ್ಯಗಳು. ಇಲ್ಲಿ ಒಮ್ಮೆ ತೆಗೆದುಕೊಂಡ ತಟ್ಟೆಯಲ್ಲಿ ಮತ್ತೆ ಬಡಿಸಿಕೊಳ್ಳುವಂತಿಲ್ಲ. ಅದೆಷ್ಟು ತಟ್ಟೆಗಳನ್ನು ಒಬ್ಬರಿಗಾಗಿ ಇಡಬೇಕೋ ಎನಿಸಿತು.

ಊಟದ ಬಳಿಕ ಮನೆಗೆ ಹೋಗಿ ಪಾದರಕ್ಷೆ ಬದಲಿಸಿ ಶಾಪಿಂಗ್ ಹೊರಟೆವು. ಚಿಕ್ಕವನು ಸೂಟು ಖರೀದಿಸಲು ಐದಾರು ಮಾಲ್ ಸುತ್ತಿಸಿದ. ಒಂದೊಂದನ್ನು ಹಾಕಿ ನೋಡಿ ನಾಲ್ಕಾರು ಫೋಟೋ ತೆಗದು ಅಪ್ಪ, ಅಣ್ಣನಿಗೆ ತೋರಿಸಿ ಇಷ್ಟವಾದ ಮೇಲೆ ಗಾಢನೀಲಿ ಬಣ್ಣದ ಸೂಟು ಫೈನಲ್ ಮಾಡಿದಾಗ ಉಸ್ಸಪ್ಪ ಅಂದಿದ್ದಾಯ್ತು. ಹಿಂದಿನ ದಿನವೂ ಸೇರಿದಂತೆ ಅದಕ್ಕಾಗಿ ಎರಡು ದಿನ ಸುತ್ತಾಡಿಸಿದ.. ಇದರಿಂದ ನಾಶ್ವೆಲ್‌ನ್ನು ಪೂರ್ಣವಾಗಿ ನೋಡುವ ಹಾಗಾಯ್ತು.
ಮನೆಗೆ ಹಿಂದಿರುಗುವಾಗ ಒಂದು ಮೈದಾನದಲ್ಲಿ ಬಟ್ಟೆಗಳ ಜೋಡಿಸಿಕೊಂಡು ಕುಳಿತಿದ್ದರು. ಇಲ್ಲಿ ಜರ್ಕೀನ್ಸ್ ಏನಾದ್ರೂ ಸಿಗಬಹುದು ನೋಡೋಣ್ವಾ ಎಂದೆ. ” ಅದು ನಿರ್ಗತಿಕರಿಗೆ ಕೊಡಲು ಇಟ್ಟುಕೊಂಡಿದ್ದಾರೆ. ಪಕ್ಕದಲ್ಲೇ ನೋಡು ಊಟ ಕೂಡ ಕೊಡ್ತಾ ಇದ್ದಾರೆ. ನಾವು ನಮ್ಮಲ್ಲಿನ ವಸ್ತುಗಳನ್ನು ಈ ಸಂಸ್ಥೆಗಳಿಗೆ ಕೊಟ್ಟರೆ ಅವರು ತಲುಪಿಸ್ತಾರೆ. ಆದರೆ ನಾವು ಕೂಡ ಈ ಸಂಸ್ಥೆಗೆ ಹಣ ಕೊಡಬೇಕು. ಆಗ ಮಾತ್ರ ನಮ್ಮ ಬಟ್ಟೆ, ವಸ್ತುಗಳನ್ನು ತಗೊಂಡು ಇಂತವರಿಗೆ ತಲುಪಿಸ್ತಾರೆ” ಎಂದು ವಿವರಿಸಿದರು. ದೂರದ ದೇಶ ಎಲ್ಲರೂ ಸಿರಿವಂತರೆ ಎಂಬುದು ಕಲ್ಪನೆಗಷ್ಟೆ ಎನಿಸಿತು. ಅಲ್ಲಿಯೂ ಬಸ್ಸು, ಪಾರ್ಕುಗಳಲ್ಲಿ ಮನೆಗಳಿಲ್ಲದೆ ರಾತ್ರಿ ಕಳೆಯುವರುಂಟು.
ಉಳಿದದ್ದು ಭಾನುವಾರ ಮಾತ್ರ. ಮಾರನೇ ದಿನ ಸಂಜೀತ್ ವೂಸ್ಟರ್‌ಗೆ ಹೋಗುವುದಿತ್ತು. ಹಾಗಾಗಿ ನೀವು ಮೂವರು ಹೋಗಿ ಬನ್ನಿ. ನಾನು ಒಂದು ವಾರಕ್ಕೆ ಬೇಕಾಗುವಷ್ಟು ಪ್ಯಾಕ್ ಮಾಡಿಕೋಬೇಕಲ್ಲ, ಇನ್ನೂ ಒಂದಷ್ಟು ಕಾಲ ಇಲ್ಲೇ ಇರ‌್ತೀನಲ್ಲ. ಹೋಗಿ ಬರ‌್ತೀವಂತೆ” ಎಂದ.

ಬೆಳಗ್ಗೆ ಮಳೆ.. ಮಧ್ಯಾಹ್ನದ ಮೇಲೆ ಬಿಸಿಲು ಎಂದು ಮುನ್ಸೂಚನೆಯಿಂದ ತಿಳಿಯಿತು. ಅದರಂತೆ ಭಾನುವಾರ ಬೆಳಗ್ಗೆ ಹನ್ನೆರಡಕ್ಕೆ ಅಲ್ಲಿಂದ ಹೊರಟೆವು. ಒಂದೂ ಮುಕ್ಕಾಲು ಗಂಟೆ ಪ್ರಯಾಣವಷ್ಟೇ. ಅಂದು ಅದೇಕೋ ಮಾರ್ಗದಲ್ಲಿ ಸ್ವಲ್ಪ ಸಂಚಾರ ದಟ್ಟಣೆ, ಹೀಗಾಗಿ ಹೋಗಿ ತಲುಪಿದಾಗ ಎರಡು ಗಂಟೆ ದಾಟಿತ್ತು. ಹೊರಗಿನ ಫಲಕದ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತ, ಅಲ್ಲಿ ಇಲ್ಲಿ ನೋಡುತ್ತ ನಿಂತು ಒಳಹೋದಾಗ ಎರಡೂ ಇಪ್ಪತ್ತು. ಅಲ್ಲಿ ಭಾನುವಾರ ಗುಹೆಯೊಳಗೆ ಪ್ರವೇಶಿಲು ಎರಡೂವರೆಗೆ ಕೊನೆಯ ಬಸ್.. ಟಿಕೆಟ್ ಕೊಡುವುದು ಎರಡು ಹದಿನೈದಕ್ಕೆ ಕೊನೆ. ಗುಹೆಯೊಳಗೆ ಪ್ರವಾಸ ಮಾಡಬೇಕಿಂದಿದ್ದ ನನಗೆ ಅಳುಬರುವುದೊಂದೆ ಬಾಕಿ. ‘ಬೆಳಗ್ಗೆ ಬೇಗನೆ ಹೊರಡಿ ಎಂದಿದ್ದೆ.. ನೀವು ಜಿಮ್ ಹೋಗಿ ತಡವಾಗಿ ಬಂದ್ರಿ’ ಎಂದು ನಮ್ಮವರ ಮೇಲೆ ಕೋಪ ಬಂತು.
ಗುಹೆಯೊಳಗೆ ಹೋಗಲಾಗದಿದ್ದರೂ ಗುಹೆಯ ಸುತ್ತ ಇರುವ ಕಣಿವೆ ಹಾಗೂ ನದಿಯ ದಡದಲ್ಲಿ ಅಂದು ನಾಲ್ಕೂವರೆವರೆಗೆ ಟ್ರಕ್ಕಿಂಗ್ ಮಾಡಿದೆವು. ನಮ್ಮಂತೆ ಗುಹೆಯೊಳಗೆ ಪ್ರವೇಶದಿಂದ ವಂಚಿತರಾದ ಇಪ್ಪತ್ತಕ್ಕೂ ಹೆಚ್ಚು ಪ್ರವಾಸಿಗರು ನಮ್ಮ ಅಲ್ಲಿದ್ದರು. ದಟ್ಟವಾದ ಅರಣ್ಯ, ನದಿಯ ಕಲರವ ಇವೆಲ್ಲವೂ ಮುದ ನೀಡಿದೆವು. ತಗ್ಗು ದಿಟ್ಟುಗಳಲ್ಲಿ ಹತ್ತಿ ಇಳಿದು ಮನದಣಿಯೇ ನಡೆದಾಡಿದೆವು. ಐದು ಗಂಟೆಯ ಹೊತ್ತಿಗೆ ಅಲ್ಲಿಂದ ಹೊರೆಟೆವು.

ಮಾರ್ಗಮಧ್ಯೆ ಕೆಂಟಕಿಯಲ್ಲಿ ಮಗ IHOP restaurantಗೆ ಕರೆದೊಯ್ದ. ಹಠ ಮಾಡಿ, sweet pan cake ತರಿಸಿದ. ಅದು ನಮ್ಮಲ್ಲಿನ ಮೆಂತ್ಯ ದೋಸೆಯ ರುಚಿಯನ್ನು ಹೋಲುವಂತಿತ್ತು. ಚಟ್ನಿಯ ಬದಲು ನೇರಳೆ ಹಣ್ಣಿನ ತಳುವಾದ ಜಾಮನ್ನು ಹಾಕಿಕೊಂಡು ತಿನ್ನಬೇಕಿತ್ತು, ಒಂಥರಾ ಚೆನ್ನಾಗಿತ್ತು. ಅದನ್ನು ತಿನ್ನುವಾಗ ಸಂಜೀತನಿಗೆ ಫೋನ್ ಮಾಡಿ, IHOPನಲ್ಲಿ ಇರುವುದನ್ನು ಹೇಳಿದ. ಅವನು ತಕ್ಷಣ ಹೇಳಿದ್ದು, “ಅವರೇನೂ ಬೇಡ ಅಂತಾರೆ, ಸ್ವೀಟ್ ಪ್ಯಾನ್ ಕೇಕ್ ಕೊಡಿಸೋ ರುಚಿ ನೋಡಲಿ” ಅಂತ. ಜೋರಾಗಿಯೇ ನಗು ಉಕ್ಕಿ ಬಂತು.. ಅದರ ರುಚಿ ನೋಡ್ತಾ ಇದ್ದೀವಿ ಕಂದ ಎಂದಾಗ ಅವನಿಗೂ ನಗು. ಇಬ್ಬರೂ ಅರ್ಧ ಲೀಟರ್ ಇರುವ ಕಾಫಿಯ ಲೋಟ ಹಿಡಿದು ಕಾರಿನಲ್ಲಿ ಕುಳಿತೆವು.

ಮಾರ್ಗ ಮಧ್ಯೆ ಕೃಷಿ ಭೂಮಿ, ಅಲ್ಲಲ್ಲಿ ಹುಲ್ಲುಗಾವಲು, ಅಲ್ಲಿ ಹಸುಗಳು ಮೇಯುತ್ತಿದ್ದವು ಕಣ್ಣಿಗೆ ಬಿದ್ದವು. ಒಂದು ಕಡೆ ಆಕಾಶದಲ್ಲಿ ವೃತ್ತಾಕಾರದ ಕಾಮನ ಬಿಲ್ಲಿನ ಬಣ್ಣಗಳು ಚದುರಿದಂತೆ ಕಂಡಿತು. ಇನ್ನೂ ಮುಂದಕ್ಕೆ ಸಾಗುತ್ತ ನಾಶ್ವೆಲ್ ಸಮೀಪಿಸುವಾಗ ಮೋಡದೊಳಗೆ ಸಾಗುತ್ತಿರುವಂತೆ ಭಾಸವಾಯಿತು. ನೋಡ ನೋಡುತ್ತಿರುವಂತೆ ಮಳೆ ಧೋ ಎಂದು ಸುರಿಯತೊಡಗಿತು. ಮಧ್ಯೆ ಮಳೆ ಕಾಟ ಕೊಡಲಿಲ್ಲ ಎಂಬ ಸಮಾಧಾನದಿಂದ ಮನೆ ಸೇರಿದೆವು.
ಮುಂದುವರೆಯುವುದು…
ಹಿಂದಿನ ಸಂಚಿಕೆಗಳು :
- ಅ…ಅ…ಅಮೆರಿಕಾ ನೋಡಾ (ಭಾಗ-೧)
- ಅ…ಅ…ಅಮೆರಿಕಾ ನೋಡಾ (ಭಾಗ-೨)
- ಅ…ಅ…ಅಮೆರಿಕಾ ನೋಡಾ (ಭಾಗ-೩)
- ಅ…ಅ…ಅಮೆರಿಕಾ ನೋಡಾ (ಭಾಗ-೪)
- ಅ…ಅ…ಅಮೆರಿಕಾ ನೋಡಾ (ಭಾಗ-೫)
- ಅ…ಅ…ಅಮೆರಿಕಾ ನೋಡಾ (ಭಾಗ-೬)
- ಅ…ಅ…ಅಮೆರಿಕಾ ನೋಡಾ (ಭಾಗ-೭)
- ಅ…ಅ…ಅಮೆರಿಕಾ ನೋಡಾ (ಭಾಗ-೮)
- ಅ…ಅ…ಅಮೆರಿಕಾ ನೋಡಾ (ಭಾಗ-೯)
- ಕಮಲಾಕ್ಷಿ ಸಿ ಆರ್
