ಶಿವರಾಮ ಕಾರಂತರ “ಕನ್ಯಾಬಲಿ”

ಶಿವರಾಮ ಕಾರಂತರ “ಕನ್ಯಾಬಲಿ” ಎಂಬ ಸ್ತ್ರೀ ಸಂಕಥನದ ಮಹೋನ್ನತ ಕಾದಂಬರಿ. ವಿಜ್ಞಾನಿ, ಲೇಖಕರು ಪ್ರಸನ್ನ ಸಂತೇಕಡೂರು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಇತ್ತೀಚೆಗೆ ಖ್ಯಾತ ವಿಮರ್ಶಕಿ ಎಂ.ಎಸ್. ಆಶಾದೇವಿಯವರ “ನಡುವೆ ಸುಳಿವ ಆತ್ಮ” ಎಂಬ ಸ್ತ್ರೀ ಸಂಕಥನದ ಚಹರೆಗಳ ಕೃತಿಯನ್ನ ಓದುತ್ತಿದ್ದೆ. ಅದರಲ್ಲಿ ಶಿವರಾಮ ಕಾರಂತರ ಕಾದಂಬರಿಗಳ ಸ್ತ್ರೀಲೋಕ ಎಂಬ ಅಧ್ಯಯನ ಮೊದಲಿಗೆ ಇರುವುದರಿಂದ ಅದನ್ನ ಓದುತ್ತಿದ್ದೆ. ಅಲ್ಲಿ ಆಶಾದೇವಿಯವರು ಕಾರಂತರ “ಕನ್ಯಾಬಲಿ” ಕಾದಂಬರಿಯ ಬಗ್ಗೆ ತುಂಬಾ ಚೆನ್ನಾಗಿ ಪ್ರಸ್ತಾಪ ಮಾಡಿದ್ದಾರೆ. ಆ ಕಾದಂಬರಿಯ ಬಗ್ಗೆ ನನಗೆ ಕುತೂಹಲ ಹೆಚ್ಚಾಯಿತು. ನನ್ನ ಹತ್ತಿರವೇ ಆ ಕಾದಂಬರಿ ಇದ್ದರೂ ಓದಿರಲಿಲ್ಲ. ತಕ್ಷಣವೇ ಆ ಕಾದಂಬರಿಯನ್ನ ಓದಲು ಆರಂಭಿಸಿದೆ.

ಈ ಕಾದಂಬರಿ ೧೯೩೦ರಲ್ಲಿ ಪ್ರಕಟವಾಗಿರುವುದು. ಕಾರಂತರೂ ಆ ಕಾಲಕ್ಕೆ ತುಂಬಾ ವಿಧವಾ ವಿವಾಹದಂತಹ ಕ್ರಾಂತಿಕಾರಕ ವಿಷಯವನ್ನು ಇಟ್ಟುಕೊಂಡು ಬರೆದಿರುವ ಕಾದಂಬರಿ. ಅದರಲ್ಲೂ ಬಾಲವಿಧವೆಯ ಕತೆ. ಎಂ.ಕೆ. ಇಂದಿರಾರವರ ಫಣಿಯಮ್ಮ ಕಾದಂಬರಿಯನ್ನು ಓದಿರುವ ನನಗೆ ಈ ಕಾದಂಬರಿ ಆ ಕಾದಂಬರಿಗಿಂತ ಸ್ತ್ರೀ ಸ್ವಾತಂತ್ರ್ಯ ಮತ್ತು ವಿಮೋಚನೆಯನ್ನ ಚೆನ್ನಾಗಿ ಚಿತ್ರಿಸಿದೆ ಎಂದು ಅನಿಸಿತು. ಕಾರಂತರ ಈ ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಮನ್ನಣೆಯನ್ನ ಏಕೆ ಪಡೆದಿಲ್ಲ ಎಂಬುದೇ ದೊಡ್ಡ ಯಕ್ಷಪ್ರಶ್ನೆ. ಈ ಕಾದಂಬರಿಯ ಪಾತ್ರ ಶ್ರೀ ರಾಮಾಯಣದ ರಾಮನನ್ನ, ಶಾಸ್ತ್ರಗಳನ್ನ ನಿರ್ಮಿಸಿರುವ ಪುರುಷ ಸಮಾಜವನ್ನ ಕೂಡ ಪ್ರಶ್ನೆ ಮಾಡುತ್ತದೆ.

ಇತ್ತೀಚೆಗೆ ಲೇಖಕಿ ಮಾಲಿನಿ ಗುರು ಪ್ರಸನ್ನ ಅವರು ಎಂ.ಕೆ. ಇಂದಿರಾ ಅವರ ಬಗ್ಗೆ ಬರೆದ ಹಳೆಯ ಲೇಖನವೊಂದನ್ನ ಫೇಸ್ಬುಕ್ ಅಲ್ಲಿ ನೋಡಿದೆ. ಅದರಲ್ಲಿ ಅವರು ಇಂದಿರಾರವರ ಪ್ರಖ್ಯಾತ ಕಾದಂಬರಿಗಳಾದ “ಗೆಜ್ಜೆಪೂಜೆ” ಮತ್ತು “ಸದಾನಂದ” ಕಾದಂಬರಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಗೆಜ್ಜೆಪೂಜೆ ಕಾದಂಬರಿಯ ವಸ್ತು ಎಲ್ಲರಿಗೂ ತಿಳಿದಂತೆ ವೇಶ್ಯೆ ಮತ್ತು ಅವಳ ಮಗಳ ಬದುಕಿನ ಚಿತ್ರಣದ ಕತೆ. ಸದಾನಂದ ಕಾದಂಬರಿ ವಿಧವಾ ಮರು ವಿವಾಹಕ್ಕೆ ಸಂಬಂಧ ಪಟ್ಟಿರುವುದು ಎಂದು ಓದಿದೆ. ನಾನು ಈ ಕಾದಂಬರಿಯನ್ನ ಓದಿಲ್ಲ. ಮಾಲಿನಿಯವರ ಲೇಖನ ಓದಿದ ಮೇಲೆ ಕಾರಂತರ ಕನ್ಯಾಬಲಿ ಕಾದಂಬರಿ ಒಂದರಲ್ಲಿಯೇ ಇಂದಿರಾರವರ ಮೂರು ಪ್ರಖ್ಯಾತ ಕಾದಂಬರಿಗಳ ವಸ್ತು ಇದೆಯಲ್ಲ ಎಂದು ಅಚ್ಚರಿಯಾಯಿತು. ಈ ಕಾದಂಬರಿಗಳು ೧೯೫೦ ರ ನಂತರ ಪ್ರಕಟವಾಗಿರುವುದು ಎಂದು ಅನಿಸುತ್ತೆ. ಇಂದಿರಾರವರ ಬರಹಗಳಿಗೂ ಕನ್ಯಾಬಲಿ ಕಾದಂಬರಿ ಸ್ಪೂರ್ತಿಯಾಗಿರಬಹುದು, ಅಥವಾ ಇಲ್ಲದಿರಬಹದು. ಆದರೆ, ಕನ್ಯಾಬಲಿ ಕಾದಂಬರಿ ಸ್ತ್ರೀವಾದಿ ಹಿನ್ನೆಲೆಯಲ್ಲಿ ನೋಡಿದರೆ ಒಂದು ಅತ್ಯುತ್ತಮ ಕಾದಂಬರಿಯಾಗಿ ಹೆಚ್ಚು ಜನ ಮನ್ನಣೆ ಪಡೆಯಬೇಕಿತ್ತು. ಆದರೆ ಅದಕ್ಕೆ ಸಿಗಬೇಕಾಗಿದ್ದ ಮನ್ನಣೆ ಸಿಕ್ಕಿಲ್ಲ ಎಂದು ಅನಿಸುತ್ತದೆ.

 

ಇತ್ತೀಚೆಗೆ ಹಿರಿಯ ಲೇಖಕಿ ಶ್ರೀಮತಿ ಎಚ್. ಎಸ್. ಅವರು ಬರೆದಿರುವ “ಸ್ತ್ರೀವಾದೀ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂದರ್ಭ” ಎಂಬ ಕೃತಿಯಲ್ಲಿ ಕಾರಂತರ ಮರಳಿ ಮಣ್ಣಿಗೆ ಮತ್ತು ಸರಸಮ್ಮನ ಸಮಾಧಿ ಕೃತಿಗಳನ್ನು ಆಯ್ಕೆ ಮಾಡಿಕೊಂಡು ವಿಮರ್ಶೆ ಮಾಡಿದ್ದಾರೆ. ಅವರು ಕೂಡ ಕನ್ಯಾಬಲಿ ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ವಿಮರ್ಶೆ ಮಾಡಿದ್ದರೇ ಅವರಿಗೆ ಕಾರಂತರ ಸ್ತ್ರೀವಾದಿ ಸಂವೇದನೆಯ ಬಗ್ಗೆ ಹೆಚ್ಚು ಹೊಳಹು ಸಿಗುತಿತ್ತು ಎಂದು ಅನಿಸುತ್ತದೆ.


  • ಪ್ರಸನ್ನ ಸಂತೇಕಡೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW