‘ದಿ ಪೀಪಲ್ ಆನ್ ದಿ ಬ್ರಿಡ್ಜ್’ ಕವನ

ಹಿರೋಶಿಗೆ ಉಟಗಾವ ೧೯ ನೇ ಶತಮಾನದ ಒಬ್ಬ ಜಪಾನೀ ಚಿತ್ರ ಕಲಾವಿದ. ಅವನ ವುಡ್ ಪ್ರಿಂಟ್ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿತ್ತು. ವ್ಯಾನ್ಗೋಗ್ ಎಂಬ ಫ್ರೆಂಚ್ ಕಲಾವಿದ ಹಿರೋಶಿಗೆ ವುಡ್ ಪ್ರಿಂಟ್ ನಲ್ಲಿ ರಚಿಸಿದ ಚಿತ್ರವನ್ನು ಆಧರಿಸಿ ಕ್ಯಾನ್ವಾಸಿನ ಮೇಲೆ ರಚಿಸಿದ ಚಿತ್ರ ” ಬ್ರಿಡ್ಜ್ ಇನ್ ರೈನ್” …ವಿಸ್ಲಾವ ಸಿಂಬೋರ್ಸ್ಕ ಅವರ ಕವಿತೆಯನ್ನು ಮೇಗರವಳ್ಳಿ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ, ತಪ್ಪದೆ ಮುಂದೆ ಓದಿ…

ಮೂಲ : ವಿಸ್ಲಾವ ಸಿಂಬೋರ್ಸ್ಕ

ಒಂದು ವಿಲಕ್ಷಣ ಗ್ರಹ, ಅದರಮೇಲಿರುವವರೂ ಕೂಡವಿಲಕ್ಷಣ ಜನ.
ಅವರೆಲ್ಲರೂ ಕಾಲದ ಮಿತಿಗೆ ಒಳಪಟ್ಟವರು, ಆದರದನ್ನವರು ಒಪ್ಪುವುದಿಲ್ಲ.
ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಅವರದೇ ವಿಧಾನವಿದೆ
ಅವರು ಚಿಕ್ಕ ಚಿಕ್ಕ ಚಿತ್ರಗಳನ್ನು ಬಿಡಿಸುತ್ತಾರೆ, ಉದಾಹರಣೆಗೆ ಇದು:
ಮೊದಲ ನೋಟಕ್ಕೆ ವಿಶೇಷವೇನೂ ಇಲ್ಲ.

ನೀವು ನೋಡುವುದೇನೆಂದರೆ ಹರಿವ ನೀರು
ಮತ್ತು ಅದರ ಒಂದು ದಡ.
ಮತ್ತು ಒಂದು ಪುಟ್ಟ ದೋಣಿ ಕಷ್ಟಪಟ್ಟು ಪ್ರವಾಹದ ವಿರುದ್ಧ ಸಾಗುತ್ತಿರುತ್ತದೆ
ಮತ್ತು ಒಂದು ಸೇತುವೆ ಹರಿವ ನೀರಿನ ಮೇಲೆ
ಮತ್ತು ಜನ ಅದರ ಮೇಲೆ.

ಕಪ್ಪು ಮೋಡ ಈಗಷ್ಟೇ ಮಳೆ ಸುರಿಸಲು ಆರಂಭಿಸಿರುವುದರಿಂದ
ಅವರೆಲ್ಲರೂ ನಡಿಗೆಯ ವೇಗ ಹೆಚ್ಚಿಸಿಕೊಳ್ಳುತ್ತಿರುವಂತಿದೆ.
ವಿಷಯವೇನೆಂದರೆ, ಅಂಥದ್ದೇನೂ ನಡೆಯುವುದಿಲ್ಲ
ಮೋಡ ತನ್ನಬಣ್ಣವನ್ನಾಗಲೀ, ಆಕಾರವನ್ನಾಗಲೀ ಬದಲಿಸುವುದಿಲ್ಲ.

ದೋಣಿ ಚಲಿಸದೆಯೇ ಯಾನ ಮಾಡುತ್ತದೆ
ಸೇತುವೆಯ ಮೇಲಿನ ಜನ ಈಗ ಓಡುತ್ತಿದ್ದಾರೆ
ಮೊದಲು ಎಲ್ಲಿ ಓಡುತ್ತಿದ್ದರೋ ಅಲ್ಲಿಯೇ.

ಈ ಕ್ಷಣದಲ್ಲಿ ಪ್ರತಿಕ್ರಿಯಿಸದೇ ಇರುವುದು ಕಷ್ಟ
ಯಾವುದೇ ರೀತಿಯಲ್ಲೂ ಅಮಾಯಕವಾದುದಲ್ಲ ಈ ಚಿತ್ರ.
ಕಾಲ ಇಲ್ಲಿ ನಿಲ್ಲಿಸಲ್ಪಟ್ಟಿದೆ
ಇನ್ನು ಮುಂದೆ ಕಾಲದ ನಿಯಮಗಳ ಪಾಲನೆ ಇಲ್ಲ
ಘಟಿಸುವ ಘಟನೆಗಳ ಮೇಲಿನ ಅದರ ಪ್ರಭಾವದಿಂದ
ಅದನ್ನು ವಿಮುಕ್ಟಿಗೊಳಿಸಲಾಗಿದೆ.

ಅದನ್ನು ಅಲಕ್ಷಿಸಲಾಗಿದೆ ಮತ್ತು ಅವಮಾನಿಸಲಾಗಿದೆ.
ಹಿರೋಷಿಗೆ ಉಟಾವ ನ (ಬಹಳ ಹಿಂದೆ ಸತ್ತು ಹೋದ ಜಪಾನೀ ಚಿತ್ರ ಕಲಾವಿದ)
ಕ್ರಾಂತಿಕಾರಕ ಕಲೆಯಿಂದಾಗಿ
ಕಾಲ ಎಡವಿ ಬಿದ್ದಿತು ಕೆಳಗೆ.

ಇದು ಹುಚ್ಚು ಕುಣಿತವಾದೀತು-
ವಿಚಿತ್ರ ಆಕಾರವೊಂದನ್ನು ಕೇವಲಒಂದೆರಡು ಆಕಾಶ ಗಂಗೆಗಳ ಜತೆ ತೂಗಿದಂತೆ.
ಏನೇ ಇರಲಿ ಕೊನೆಯದಾಗಿ ದಾಖಲೆಗಾಗಿ
ಒಂದು ಅಭಿಪ್ರಾಯವನ್ನು ಸೇರಿಸೋಣ:
ತಲೆಮಾರುಗಳಿಂದ ಈ ಚಿತ್ರವನ್ನು ಕುರಿತು
ಉನ್ನತ ಮಟ್ಟದಲ್ಲಿ ಯೋಚಿಸುವುದು
ಸರಿಯಾದ ಮಾದರಿಯೆಂದು ತಿಳಿಯಲ್ಪಟ್ಟಿದೆ-
ಪರವಶಗೊಳಿಸಲು ಮತ್ತು ಕನಿಕರಿಸಲು.

ಕೆಲವರಿದ್ದಾರೆ, ಅವರಿಗಿದೂ ಸಮಾಧಾನವಿಲ್ಲ
ಅವ್ರು ಎಲ್ಲಿಯವರೆಗೆ ಹೋಗುತ್ತಾರೆಂದರೆ
ಬೀಳುವ ಮಳೆಯ ಸದ್ದನ್ನಾಲಿಸುತ್ತಾರೆ
ಹಿಂಗತ್ತು ಮತ್ತು ಬೆನ್ನಿನ ಮೇಲೆ ಬೀಳುವ
ಹನಿಗಳ ತಂಪನ್ನು ಅನುಭವಿಸುತ್ತಾರೆ.

ಅವರು ಸೇತುವೆಯ ಕಡೆ ನೋಡುತ್ತಾರೆ
ಅದರ ಮೇಲಿನ ಜನರ ಕಡೆ ನೋಡುತ್ತಾರೆ-
ತಮ್ಮನ್ನೇ ತಾವು ಅಲ್ಲಿ ಕಂಡೆವೆಂಬಂತೆ.

ಎಂದೆಂದಿಗೂ ಮುಗಿಯದ ಅದೇ ಪಂದ್ಯಗಳ ಓಟ ಓಡುತ್ತಾರೆ
ಅದೇ ಮುಗಿವಿಲ್ಲದ ಎಂದೆಂದೆಂದಿಗೂ ಮುಗಿಸಲಾಗದೇ ಉಳಿದ ದೂರದ ಹಾದಿಗುಂಟ.
ಮತ್ತವರಿಗೆ ಧೈರ್ಯವಿದೆ ನಂಬಲು
ಇದೇ ನಿಜವೆಂದು.


  • ಕನ್ನಡಕ್ಕೆ: ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading