ದೇವರ ಗುಡ್ಡ ದೇವಾಲಯದಲ್ಲಿನ ಮಾಂತ್ರಿಕ ಕಲ್ಲಿನ ಮಹಿಮೆ

ರಾಣಿಬೆನ್ನೂರಿನ ದೇವರ ಗುಡ್ಡ ದೇವಾಲಯದಲ್ಲಿನ ಮಾಂತ್ರಿಕ ಕಲ್ಲು ಗುಂಡುಗಳ ಮಹಿಮೆಯ ಕುರಿತು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ರಾಣಿಬೆನ್ನೂರಿನ ದೇವರ ಗುಡ್ಡ, ದೇವರ ಗುಡ್ಡದ ಮಾಂತ್ರಿಕ ಕಲ್ಲು ಗುಂಡುಗಳು. ದೇವರ ಮಹಿಮೆಯಾ? ಮನೋವಿಜ್ಞಾನವಾ? ಹಾಗಾದರೆ ದೇವಾಲಯಗಳು ಭಕ್ತಿ ಜ್ಞಾನ ವಿಜ್ಞಾನಗಳ ಸಂಗಮವೆ?.

ರಾಣಿಬೆನ್ನೂರು ಸಮೀಪದ ದೇವರ ಗುಡ್ಡದ ಮೈಲಾರೇಶ್ವರ ದೇವರಿಗೆ ಭಕ್ತರು ನಾಡಿನಾದ್ಯಂತ ಲಕ್ಷಾಂತರ ಜನರಿದ್ದಾರೆ. ಅಲ್ಲಿನ ಕಾರಣಿಕರ ಹೇಳಿಕೆ, ವರ್ಷದ ಮಳೆ-ಬೆಳೆಯ ಭವಿಷ್ಯವಾಣಿ ಅಂತಲೇ ಭಕ್ತರು ಭಾವಿಸಿದ್ದಾರೆ. ಸುಮಾರು 22 ವರ್ಷದ ಹಿಂದೆ ಇಲ್ಲಿಗೆ ಹೋಗಿದ್ದೆ ದೇವಾಲಯದ ಒಳ ಹೋಗುವ ಮೊದಲು ಮರದ ಕಲ್ಲು ಕಟ್ಟೆಯ ಮೇಲೆ ಸಾಲಾಗಿ ಜೋಡಿಸಿಟ್ಟಿದ್ದ ವಿವಿಧ ಗಾತ್ರದ ಕಲ್ಲು ಗುಂಡುಗಳನ್ನು ನೋಡಿದ್ದೆ.

ಫೋಟೋ ಕೃಪೆ : ಅಂತರ್ಜಾಲ

ಬಹಶಃ ಪೂಜೆಗಾಗಿ ಇಟ್ಟಿರುವ ಕಲ್ಲು ಗುಂಡುಗಳಂತ ಬಾವಿಸಿಕೊಂಡಿದ್ದೆ. ದೇವರ ಪೂಜೆ ಮತ್ತು ದರ್ಶನದ ನಂತರ ಹೊರ ಬಂದಾಗ ಈ ಕಲ್ಲು ಗುಂಡುಗಳ ಸಮೀಪ ಕುಳಿತ ಮಹಿಳೆಗೆ ಕೇಳಿದೆ ಇದಾವ ದೇವರುಗಳು? ಅಂತ. ಆಗ ಆಕೆ ಹೇಳಿದ್ದು

“ಇವು ದೇವರ ಪವಾಡದ ಕಲ್ಲುಗಳು, ನಿಮ್ಮ ಮನಸ್ಸಲ್ಲಿ ಯಾವುದಾದರೂ ಒಂದು ಪ್ರಶ್ನೆ ಇದ್ದರೆ ಅದು ಈಡೇರುವುದಾದರೆ ಸುಲಭವಾಗಿ ಎದ್ದು ಬಾ ಅಂದುಕೊಂಡು ಪ್ರಾರ್ಥನೆ ಮಾಡಿ ಈ ಸಣ್ಣ ಕಲ್ಲು ಗುಂಡನ್ನು ನಮಸ್ಕರಿಸಿ ಎತ್ತಿ. ನಿಮ್ಮ ಕೆಲಸ ಈಡೇರುವುದಾದರೆ ನೀವು ಈ ಕಲ್ಲು ಎತ್ತುತ್ತೀರಿ, ಅದೇ ನಿಮ್ಮ ಬಯಕೆ ಪ್ರಾರ್ಥನೆ ಈಡೇರುವುದಿಲ್ಲವಾದರೆ ಈ ಸಣ್ಣ ಗುಂಡುಕಲ್ಲು ಕೂಡ ನಿಮಗೆ ಎತ್ತಲು ಸಾಧ್ಯವಾಗುವುದೇ ಇಲ್ಲ. ಇದೇ ರೀತಿ ಈ ದೊಡ್ಡ ಗುಂಡುಕಲ್ಲು ನೀವು ಬಯಸಿದ್ದು ಈಡೇರುವುದಾದರೆ ಹೂವು ಎತ್ತಿದ೦ಗೆ ಎದ್ದು ಬರುತ್ತೆ ಬೇಕಾದರೆ ಪರೀಕ್ಷಿಸಿ” ಅಂದರು. ಸರಿ ಅಂತ ಒಂದು ಪ್ರಯೋಗ ಮಾಡಿದೆ. ಮನಸ್ಸಿನಲ್ಲಿಯೇ ನನ್ನ ಭವಿಷ್ಯದ ಬಗ್ಗೆ ಪ್ರಶ್ನೆ ಒಂದನ್ನ ಮಾಡಿಕೊಂಡೆ ಅದು ಈಡೇರುವುದಾದರೆ ಈ ದೊಡ್ಡ ಕಲ್ಲು ಗುಂಡು (ಸುಮಾರು 40 ಕೇಜಿ ಭಾರ) ಎದ್ದು ಬರಲಿ ಎಂದು ಎತ್ತಿದೆ ಹಗುರವಾಗಿ ಕಲ್ಲು ಗುಂಡು ಎತ್ತಿಟ್ಟೆ ಅಂದರೆ ನನ್ನ ಮನೋಭಿಲಾಷೆ ಈಡೇರುವ ಭರವಸೆಯ ನೈತಿಕ ಧೈಯ೯ ಸಿಕ್ಕಿತು.

ಫೋಟೋ ಕೃಪೆ : ಅಂತರ್ಜಾಲ

ಇನ್ನೊಂದು ನನ್ನ ಪ್ರಶ್ನೆ ಸಣ್ಣ ಗುಂಡುಕಲ್ಲು ಮೇಲೆ ಇರಿಸಿ ಅದನ್ನು ಎತ್ತಲು ಹೋದೆ ಆದರೆ ಏನಾಶ್ವಯ೯!… ಕೇವಲ 10 ಕೆಜಿ ಮಾತ್ರ ಭಾರವಿರುವ ಆ ಸಣ್ಣ ಕಲ್ಲು ಗುಂಡು ಕೂಡ ಎತ್ತಲಾಗಲಿಲ್ಲ. ಅಂದರೆ ನಾನು ಕೇಳಿದ ಪ್ರಶ್ನೆ ಈಡೇರುವುದಿಲ್ಲ ಎಂಬ ಸಂದೇಶವಿದು. ಈ 22 ವರ್ಷದಲ್ಲಿ ನನ್ನ ನಿಜ ಜೀವನದಲ್ಲಿ ನನ್ನ ಈ ಪ್ರಶ್ನೆಗೆ ಉತ್ತರ ಸಿಕ್ಕಿದಂತೆ ಆದ ಅನುಭವಗಳ ಈ ಕಲ್ಲಿನ ಮಹಿಮೆ ಸತ್ಯ ಎನ್ನಿಸುತ್ತದೆ.

ಇದನ್ನು ಆಧುನಿಕ ಮನೋಶಾಸ್ತ್ರದಲ್ಲಿ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಾರೆ. ಇದು ಒಂದು ರೀತಿ ಹಿಪ್ನೋಟಿಸಂ ಅಂತಾರೆ. ಅದೇನೆ ಇರಲಿ ಒಪ್ಪುವುದು ಬಿಡುವುದು ಅವರವರ ಭಾವನೆಗೆ ಬಿಟ್ಟುಬಿಡೋಣ. ಆದರೆ ಪುರಾತನ ದೇವಾಲಯಗಳು ಭಕ್ತಿಯ ಕೇಂದ್ರಗಳು ಮಾತ್ರವಲ್ಲ ಜ್ಞಾನ – ವಿಜ್ಞಾನಗಳ ಸಂಗಮವೂ ಹೌದು.

ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪರೀಕ್ಷೆ ಮಾಡಿ ನೋಡಿ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading