ವಿದೇಶ ಪ್ರಯಾಣ ಮಾಡಿ ಬೆಂಗಳೂರನ್ನು ಸ್ಪರ್ಶಿಸುವಾಗ ಅದೇನೋ ಪುಳಕ. ನೆಲವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡೆ. ಲೇಖಕಿ ಕಮಲಾಕ್ಷಿ ಸಿ ಆರ್ ಅವರ ಅಮೆರಿಕಾ ಪ್ರವಾಸ ಕಥನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಮೇರಿಕಾ ಪ್ರವಾಸ ಕಥನ ಬರಹ ಯಾಕೆ ಪೂರ್ಣ ಮಾಡಿಲ್ಲ? ಹಲವಾರು ಆಪ್ತರಿಂದ ಪ್ರಶ್ನೆ ಬಂದ ಮೇಲೆ ಬರೆಯತೊಡಗಿದೆ. ಹೆಚ್ಚೇನೂ ಬರೆಯಲು ಇಲ್ಲ ಎಂದಲ್ಲ, ಮನಸ್ಸು ಹಿಂದೇಟು ಹಾಕಿತ್ತು ಅಷ್ಟೇ.
ನ್ಯೂಯಾರ್ಕ್ ವೀಕ್ಷಣೆಯ ಮೂರನೆಯ ದಿನವದು. ಅಂದು ಮಧ್ಯಾಹ್ನ ನ್ಯೂಯಾರ್ಕ್ ನಗರದ ರಾಕ್‌ಫೆಲ್ಲರ್ ಕೇಂದ್ರದಲ್ಲಿರುವ ರಾಕ್ ಅಬ್ಸರ್ವರ್ವೇಷನ್ ಡೆಕ್ ಕಡೆ ಹೊರಟೆವು. ಎಂಪೈರ್ ಸ್ಟೇಟ್ ಕಟ್ಟಡದಲ್ಲಿ 103 ಅಂತಸ್ತುಗಳಿದ್ದರೆ ಇಲ್ಲಿ 70 ಅಂತಸ್ತುಗಳಿವೆ. ಎಂಪೈರ್ ಸ್ಟೇಟ್ ಅಬ್ಸರ್ವರ್ವೇಷನ್ ಡೆಕ್‌ನಿಂದ ನ್ಯೂಯಾರ್ಕ್ ನಗರದ ರಾತ್ರಿಯ ಸೊಬಗನ್ನು ಕಣ್ತುಂಬಿಕೊಂಡರೆ, ರಾಕ್ ಫೆಲ್ಲರ್ ಕೆಂದ್ರದಿಂದ ಹಗಲಿನ ನ್ಯೂಯಾರ್ಕ್ skyline ಸೊಬಗನ್ನು ಸವಿದೆ.

ಮೇಲೆರುವ ಮುನ್ನ ಎರಡನೆಯ ಅಂತಸ್ತಿನಲ್ಲಿ ರಾಕ್‌ಫೆಲ್ಲರ್ ಕಟ್ಟಡದ ಪುಟ್ಟ ಪ್ರತಿರೂಪ ಆಕರ್ಷಿಸುತ್ತದೆ. ಅಲ್ಲಿಂದ ಸೆಕ್ಯೂರಿಟಿ ಪರಿಶೀಲನೆ ಬಳಿಕ ಲಿಫ್ಟಿನಲ್ಲಿ 67 ನೇ ಅಂತಸ್ತಿಗೆ ಹೋದೆವು. ಕಟ್ಟಡದ ನಾಲ್ಕು ಬದಿಗಳಿಂದ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಒಂದೆಡೆ ನದಿ, ಸಮುದ್ರ ಅವುಗಳಿಗೆ ಪೈಪೋಟಿ ನೀಡುವ ಗಗನ ಚುಂಬಿ ಕಟ್ಟಡಗಳು ಮನ ಸೆಳೆಯುತ್ತವೆ. ಅಲ್ಲೊಂದು ರೆಸ್ಟೋರೆಂಟ್ ಕೂಡ ಇದೆ. ಫೋಟೋ ತೆಗೆದುಕೊಳ್ಳಲು ಜಾಗ ಹುಡುಕುವುದು, ಹಿಡಿಯುವುದು ಎರಡೂ ಸವಾಲು, ಅಷ್ಟರ ಮಟ್ಟಿಗೆ ಜನಜಂಗುಳಿ.
ಮಕ್ಕಳಿಬ್ಬರು ಕೆಲವು ಕಡೆ ಸುಂದರ ಫೋಟೋಗಳನ್ನು ಸೆರೆಹಿಡಿದು ಕೊಟ್ಟರು. ವಾತಾವರಣ ತಿಳಿಯಾಗಿದ್ದ ದಿನಗಳಲ್ಲಿ ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ಅಲ್ಲಿಂದ ವೀಕ್ಷಿಸಬಹುದಂತೆ.
ಎಂಪೈರ್ ಕಟ್ಟಡದ ಮೇಲೆ ಹೋದಾಗ ಹೆದರಿದ್ದೆ. ಆದರೆ ರಾಕ್‌ಫೆಲ್ಲರ್ ಕಟ್ಟಡದ ಕಾರಿಡಾರ್ ಅಲ್ಲಿಗಿಂತ ಸ್ವಲ್ಪ ಸ್ಥಳಾವಕಾಶವಿದ್ದು, ಎತ್ತರದ ಗಾಜಿನ ಫಲಕವನ್ನು ಅಳವಡಿಸಲಾಗಿದೆ. ಹಾಗಾಗಿ ಸ್ವಲ್ಪ ನಿರ್ಬೀತಿಯಿಂದ ಓಡಾಡುತ್ತ ನ್ಯೂಯಾರ್ಕ್ ನಗರವನ್ನು ನೋಡಿದೆ. ಅಲ್ಲಿಂದ ೬೯ನೇ ಅಂತಸ್ತಿಗೆ ಹೋದೆವು. ಅಲ್ಲಿಂದ ನ್ಯೂಯಾರ್ಕ್ ದೃಶ್ಯ ಇನ್ನಷ್ಟು ಚೆನ್ನಾಗಿತ್ತು. ಅಲ್ಲಿ ಏರುವ ಹಲಗೆಬನಾನಾ ಕಾಂಕ್ರಿಟ್ beam ವ್ಯವಸ್ಥೆ ಇದೆ. ಅದರಲ್ಲಿ ಕುಳಿತು ಇನ್ನಷ್ಟು ಮೇಲಿನ ದೃಶ್ಯ ನೋಡುವ ಅವಕಾಶವಿದೆ. ಮೇಲೆ ಕೆಳಗೆ ಚಲಿಸುವುದನ್ನು ನೋಡಲೇ ಭಯವೆನಿಸಿತು. “ಮಗ ಅದರಲ್ಲಿ ಕೂರೋಣ್ವಾ ಅಮ್ಮ?” ಎಂದಾಗ, “ನೀವು ಹೋಗಿ, ನಾನಂತೂ ಅದರಲ್ಲಿ ಕೂರೋದಿಲ್ಲ” ಎಂದು ಸರಿಸಿ ಬಿಟ್ಟೆ.
70 ನೇ ಅಂತಸ್ತಿಗೆ ಹೋಗಲಿಲ್ಲ. ಅಲ್ಲಿಂದ ನ್ಯೂಯಾರ್ಕ್ ನಗರದ 360° ಪನೊರಮಾ ಚಿತ್ರವನ್ನು ಸೆರೆಹಿಡಿಯಬಹುದಂತೆ. ಅದಕ್ಕೆ ಸೀಮಿತ ಸೀಟುಗಳು ಮಾತ್ರ ಇದ್ದಿದ್ದರಿಂದ ಆ ದಿನಕ್ಕೆ ಲಭ್ಯವಾಗಲಿಲ್ಲ. ಹೀಗೆ ಒಂದು ಅಂತಸ್ತಿನಿಂದ ಮತ್ತೊಂದು ಅಂತಸ್ತಿಗೆ ವಿಭಿನ್ನ ಅನುಭವ ನೀಡುವ ಕಟ್ಟಡವಿದು. ಕೆಲ ಸಮಯ ಅಲ್ಲಿ ಸುತ್ತಾಡಿ ಕೆಳಗಿಳಿದು ಬಂದೆವು.
ಹಣ್ಣಿನ ರಸ ಸೇವಿಸಿ, ಬನಾನಾ ಫಡ್ಡಿಂಗ್ ತೆಗೆದುಕೊಂಡೆವು. ಮೂರು ದಿನಗಳಿಂದ ಓಡಾಡಿ ನ್ಯೂಯಾರ್ಕ್ ರಸ್ತೆಗಳು ಪರಿಚಯವಾದವು. ಅಂದು ಕೂಡ ಟೈಮ್ ಸ್ಕ್ವೇರ್ ವಿಹರಿಸಿದೆವು. ಅಲ್ಲಿ ಮಾತ್ರ ಸಂಜೆಯಾಗುತ್ತಿದ್ದಂತೆ ಜನ ಜಂಗುಳಿ ಕಡಿಮೆಯಾಗದು. ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಜಾಹಿರಾತು ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ತಾಣವದು ಎನಿಸಿತು. ಅಲ್ಲಿಂದ ಹೊರಟು ಹೋಟೆಲಿಗೆ ಹಿಂದಿರುಗಿದೆವು.

ನಾನೇಕೆ ಬರಹವನ್ನು ಪೂರ್ಣಗೊಳಿಸಲಿಲ್ಲ? ಇದಕ್ಕೆ ಕಾರಣ ಇಲ್ಲಿದೆ. ಪ್ರವಾಸ ಹೋಗುವಾಗ ಇನ್ನಿಲ್ಲದ ಸಂಭ್ರಮ. ಹಿಂದಿರುಗುವಾಗ ಆದ ಬೇಸರವನ್ನು ಬರೆಯುವುದೇ? ಬೇಡವೇ? ಎಂಬ ಜಿಜ್ಞಾಸೆಯಲ್ಲಿ ಇದು ಪೂರ್ಣವಾಗದೇ ಉಳಿದಿತ್ತು. ಪ್ರತಿ ಪ್ರಾರಂಭಕ್ಕೂ ಅಂತ್ಯ ಇದ್ದೇ ಇರುವುದು. ಪ್ರವಾಸಕ್ಕೂ, ಬರಹಕ್ಕೂ ಕೂಡ.
ನ್ಯೂಯಾರ್ಕ್‌ನಿಂದ ಬೆಂಗಳೂರಿಗೆ ಹಿಂದಿರುಗುವುದು ಎಂದು ನಿರ್ಧಾರವಾಗಿತ್ತು. ಅಂದು ರಾತ್ರಿ ಹೋಟೆಲಿಗೆ ಹಿಂದಿರುಗಿ ಲಗೇಜನ್ನು ಪ್ಯಾಕ್ ಮಾಡಿಕೊಂಡೆವು. ಅಂದು ಮಧ್ಯಾಹ್ನ ನಾವು ಪ್ಯಾರಿಸ್ ವಿಮಾನವನ್ನೂ ಆದಾದ ಒಂದು ಗಂಟೆಯ ಬಳಿಕ ಮಕ್ಕಳು ನಾಶ್ವೆಲ್ ವಿಮಾನ ಏರುವುದೆಂದು ನಿಗದಿಯಾಗಿತ್ತು. ಪಪ್ಪಾ, ಅಮ್ಮಾ ಎಂದು ಕರೆಯುತ್ತ ತಿಂಗಳಿಗೂ ಹೆಚ್ಚು ಸಮಯ ನಮ್ಮೊಂದಿಗಿದ್ದ ಮಕ್ಕಳನ್ನು ಅಲ್ಲಿ ಬಿಟ್ಟು ಹೊರಡಬೇಕಲ್ಲ ಎಂದು ನನಗಾಗಲೆ ಬೇಸರ ಶುರುವಾಗಿತ್ತು. ನಾನು, ನಮ್ಮವರು ತೋರಗೊಡದೆ ನಗುವ ಯತ್ನ ಮಾಡಿದ್ದೆವಷ್ಟೆ.
ಬೆಳಗ್ಗೆ ತಿಂಡಿ ಮುಗಿಸಿದ ನಂತರ ಮತ್ತೊಮ್ಮೆ ಲಗೇಜನ್ನು ಪರಿಶೀಲಿಸಿಕೊಂಡೆವು. ನನ್ನ ಮನದಲ್ಲಿ ಭತ್ತ ಕುಟ್ಟಲಾರಂಭಿಸಿತ್ತು. ಮಗ ಹೋಟೆಲಲ್ಲಿ ಕೂರೋದಕ್ಕಿಂತ ಇಲ್ಲೇ ತರಿಸುವೆ ಎಂದು ರೂಮಿಗೆ ಊಟ ತರಿಸಿದ. ನಮ್ಮವರು ತಟ್ಟೆಗಳಿಗೆ ಬಡಿಸಿಕೊಟ್ಟು, ಊಟ ಮಾಡಿ ಎಂದರು. ತಟ್ಟೆ ಕೈಗೆತ್ತಿಕೊಂಡರೂ ತುತ್ತು ತೆಗೆದುಕೊಳ್ಳಲಾಗದೆ ಚಡಪಡಿಸಿದೆ. ಕಣ್ಣೀರು ನಾನಿನ್ನು ಅಡಗಿರಲಾರೆ ಎಂದು ಧುಮುಕಿಯೇ ಬಿಟ್ಟಿತು. ಅದನ್ನರಿತ ನಮ್ಮವರು ಮಕ್ಕಳ ಮುಂದಿರದೆ ಡ್ರೆಸ್ಸಿಂಗ್ ರೂಮಿನತ್ತ ಹೋಗಿ ನಿಂತರು. ಮಕ್ಕಳಿಬ್ಬರು ಇಕ್ಕೆಲಗಳಲ್ಲಿ ಬಂದು ಕುಳಿತು, ” ಏನಮ್ಮಾ ನೀನು? ಇಷ್ಟು ಖುಷಿಯಾಗಿ ಕಾಲ ಕಳೆದಿದ್ದೀವಿ. ಈಗೇನು ವೀಸಾ ಇದೆ. ಯಾವಾಗ ಬೇಕಾದ್ರೂ ಬರಬಹುದು. ನಾವು ಆರಾಮಿದ್ದೀವಿ, ನೀನು ನೋಡ್ದೆ ತಾನೆ. ನಮ್ಮಿಬ್ಬರನ್ನು ಬೆಂಗಳೂರಿನಿಂದ ಕಳಿಸುವಾಗ ಇಷ್ಟು ಅತ್ತಿರಲಿಲ್ಲ, ಈಗ ಹೀಗೆ ಅಳ್ತೀಯಲ್ಲ” ಎಂದು ಸಮಾಧಾನ ಪಡಿಸತೊಡಗಿದರು. ಆ ಅಳುವಿನ ಜೊತೆ ಮಕ್ಕಳ ಮಾತು ಕೇಳಿ ನಗುವ ಯತ್ನ ಮಾಡಿದೆ.
ಮನೆಯವರು ಹೊರಬಂದು, ” ನಿಮ್ಮಮ್ಮ ಇಲ್ಲೇ ಇರಲಿ ಇನ್ನೊಂದಷ್ಟು ದಿನ. ಇಟ್ಕೊಳ್ರೋ ? ಆಗುತ್ತಾ? ಆಗಲ್ಲ ಅಲ್ವಾ? ಊಟ ಮಾಡು ನಡಿ. ಏಳ್ರಪ್ಪ ನೀವೂನು. ಆಮೇಲೆ ಲೇಟಾದ್ರೆ ಗಾಬರಿಯಾಗುತ್ತೆ. ಇದೇನು ನಮ್ಮೂರ?” ಎಂದು ತಿಳಿಗೊಳಿಸಲು ಯತ್ನಿಸಿದರು. ಅವರತ್ತ ನೋಡಿದೆ, ಅವರ ನೋಟ ಮತ್ತೆಲ್ಲೋ ಇತ್ತು. ” ಐದ ವಾರ ಒಟ್ಟಿಗೆ ಇದ್ವಲ್ಲ, ಮತ್ತೆ ಹೀಗೆ ಇನ್ಯಾವಗಲೋ. ಅಲ್ಲಿವರೆಗೂ ನೀವಿಲ್ಲಿ, ನಾವಲ್ಲಿ ಅಂತ ಬೇಜಾರಾಯ್ತು ಅಷ್ಟೆ” ಎಂದು ಮಕ್ಕಳಿಗೆ ಸಮಜಾಯಿಷಿ ನೀಡಿದೆ.

ಊಟ ಮಾಡಿ, ಒಂದಷ್ಟು ಹೊತ್ತು ಕುಳಿತು ಹೊರಡಲು ಸಿದ್ಧವಾದೆವು. ಹೊರಡುವ ಮುನ್ನ ಒಂದು ಗ್ರೂಪ್ ಫೋಟೋ ತೆಗೆದುಕೊಂಡು ವಿಮಾನ ನಿಲ್ದಾಣದ ಕಡೆ ಮುಖ ಮಾಡಿದೆವು. ಅಂದು ರಸ್ತೆ ತುಸು ಹೆಚ್ಚೇ ಸಂಚಾರವಿತ್ತು. ಮಕ್ಕಳು ನಮ್ಮನ್ನು ಚೆಕ್ ಇನ್ ಆಗುವಲ್ಲಿ ಬಿಟ್ಟು ಅವರು ಹೋಗಬೇಕಿದ್ದ ಕಡೆ ಹೊರಟರು. ಅಲ್ಲಿನ ವಿಮಾನ ನಿಲ್ದಾಣ ನಮ್ಮ ಬೆಂಗಳೂರಿನಷ್ಟು ವಿಸ್ತಾರವಾಗಿಲ್ಲ. ಚೆಕ್ ಇನ್ ಪ್ರಕ್ರಿಯೆ, ಸೆಕ್ಯೂರಿಟಿ ಚೆಕ್ ಮುಗಿಸಿಕೊಂಡು ಪ್ಯಾರಿಸ್ ವಿಮಾನ ಹತ್ತುವ ಕಡೆ ಹೋದಾಗ ಇನ್ನೂ ಅರ್ಧ ಗಂಟೆ ಸಮಯವಿತ್ತು. ಅತ್ತ ಮಕ್ಕಳು ಕೂಡ ಅವರ ವಿಮಾನ ಹತ್ತುವ ಕಡೆ ತಲುಪಿದ್ದರು.
ಮಕ್ಕಳಿಗೆ ಅಲ್ಲಿಂದ ಎರಡು ಗಂಟೆ ಪ್ರಯಾಣ. ಮನೆ ತಲುಪಿದ ವಿಷಯವನ್ನು ಮೆಸೇಜ್ ಮಾಡಿ ತಿಳಿಸಿದ್ದರು. ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಬಿಡುವಿತ್ತು. ಅಷ್ಟರಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿಕೊಂಡು ವಿಮಾನ ಹತ್ತುವ ಕಡೆ ಹೋಗಿ ಕುಳಿತೆವು. ಪ್ಯಾರಿಸ್‌ನಿಂದ ಹೊರಟ ವಿಮಾನದಲ್ಲಿ ಶೇ ೧೦೦ ಆಸನಗಳು ಭರ್ತಿಯಾಗಿದ್ದವು. ಈ ಕಡೆಯಿಂದ ಆರಾಮವಾಗಿ ಪ್ರಯಾಣಿಸಿದ್ದೆವು. ಆ ಕಡೆಯಿಂದ ಹೆಚ್ಚು ಪ್ರಯಾಣಿಕರಿಂದ ಗಿಜಿಗುಡುವಂತಿತ್ತು. ಬೆಂಗಳೂರು ತಲುಪುವಷ್ಟರಲ್ಲಿ ನಾನು ಒಂದು ಸಿನಿಮಾ ನೋಡಿದೆ, ವಿಡಿಯೋ ಗೇಮ್ ಆಡಿದೆ.
ನಮ್ಮ ಭಾರತ ದೇಶವನ್ನು ಪ್ರವೇಶಿಸಿದಾಗ ರಾತ್ರಿಯಾಗಿತ್ತು. ಬೆಂಗಳೂರು ತಲುಪಿದಾಗ ರಾತ್ರಿ ಹನ್ನೊಂದು ದಾಟಿತ್ತು. ಯಶಸ್ವೀ ವಿದೇಶ ಪ್ರಯಾಣ ಮಾಡಿ ಬೆಂಗಳೂರನ್ನು ಸ್ಪರ್ಶಿಸುವಾಗ ಅದೇನೋ ಪುಳಕ. ನೆಲವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡೆ.
ನ್ಯೂಯಾರ್ಕ್ ಪ್ರವಾಸ ಕಥನ ಪೂರ್ಣವಾಯಿತು.
ಹಿಂದಿನ ಸಂಚಿಕೆಗಳು :
- ಅ…ಅ…ಅಮೆರಿಕಾ ನೋಡಾ (ಭಾಗ-೧)
- ಅ…ಅ…ಅಮೆರಿಕಾ ನೋಡಾ (ಭಾಗ-೨)
- ಅ…ಅ…ಅಮೆರಿಕಾ ನೋಡಾ (ಭಾಗ-೩)
- ಅ…ಅ…ಅಮೆರಿಕಾ ನೋಡಾ (ಭಾಗ-೪)
- ಅ…ಅ…ಅಮೆರಿಕಾ ನೋಡಾ (ಭಾಗ-೫)
- ಅ…ಅ…ಅಮೆರಿಕಾ ನೋಡಾ (ಭಾಗ-೬)
- ಅ…ಅ…ಅಮೆರಿಕಾ ನೋಡಾ (ಭಾಗ-೭)
- ಅ…ಅ…ಅಮೆರಿಕಾ ನೋಡಾ (ಭಾಗ-೮)
- ಅ…ಅ…ಅಮೆರಿಕಾ ನೋಡಾ (ಭಾಗ-೯)
- ಅ…ಅ…ಅಮೆರಿಕಾ ನೋಡಾ (ಭಾಗ-೧೦)
- ಅ…ಅ…ಅಮೆರಿಕಾ ನೋಡಾ (ಭಾಗ-೧೧)
- ಅ…ಅ…ಅಮೆರಿಕಾ ನೋಡಾ (ಭಾಗ-೧೨)
- ಅ…ಅ…ಅಮೆರಿಕಾ ನೋಡಾ (ಭಾಗ-೧೩)
- ಅ…ಅ…ಅಮೆರಿಕಾ ನೋಡಾ (ಭಾಗ-೧೪)
- ಕಮಲಾಕ್ಷಿ ಸಿ ಆರ್
