“ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ ” ಕೃತಿಯ ಪರಿಚಯ

ಲೇಖಕಿ ಶ್ರೀಮತಿ ರೇವತಿ ತನ್ನ ತಾಯಿಯ ಹಾಗೂ ಅಜ್ಜಿಯ ಆರೈಕೆಯಿಂದ ಚೇತರಿಸಿಕೊಂಡಳಾದರೂ ತಮ್ಮ ಜೀವನದ ಪ್ರತೀ ಹಂತದಲ್ಲಿ ಅನುಭವಿಸುತ್ತಿದ್ದ ದೈಹಿಕ ತೊಂದರೆಗಳೊಂದಿಗೆ ಹೊರಾಡಲು ತಮ್ಮ ತಾಯಿಯ ಸಹಾಯ ಬಯಸುತ್ತಿದ್ದರು. ಈ ಕೃತಿಯ ಬಗ್ಗೆ ಹೆಚ್ ವಿ ಮೀನ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : “ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ “
ಲೇಖಕಿ: ಶ್ರೀಮತಿ ರೇವತಿ
ಪ್ರಕಾಶನ : ರೇವತಿ ಪ್ರಕಾಶನ, ಧಾರವಾಡ
ಮೊಬೈಲ್ : 9380999406
ಬೆಲೆ : 200/-

ವಿಫಲತೆಯು ನಮಗೆ ಜೀವನದ ಮಹತ್ತರ ಪಾಠಗಳನ್ನು ಕಲಿಸುತ್ತದೆ. ಸೋಲು ನಮ್ಮ ಗೆಲುವಿಗೆ ಶಕ್ತಿಯನ್ನು ತುಂಬುತ್ತದೆ. ಜೀವನದ ಏರು ಪೇರುಗಳನ್ನ ಎದುರಿಸುವ ಧೈರ್ಯವು ನಮ್ಮ ಮನಸ್ಸಿನ ಮೇಲೆ ನಿರ್ಧರಿಸುತ್ತದೆ. ನಮ್ಮಲ್ಲಿನ ನೋವುಗಳನ್ನು ಮರೆಯಲು ಆತ್ಮವಿಶ್ವಾಸ ಒಂದಿದ್ದರೆ ಸಾಕು ಹಾಗೂ ಇತರರ ಜೀವನದ ಅನುಭವಗಳು ಕೂಡ ನಮಗೆ ನಮ್ಮ ಕಷ್ಟಗಳನ್ನು ಮರೆಯುವಂತೆ ಮಾಡುತ್ತವೆ. ನಮ್ಮ ಸಂಕಟ, ದುಃಖ ಇವೆಲ್ಲವೂ ಪೂರ್ವ ನಿರ್ಧಾರವಾಗಿದ್ದು ಅದರಿಂದ ಮುಕ್ತಿ ಹೊಂದಲು ಕೇವಲ ಧ್ಯಾನದಿಂದ ಮಾತ್ರ ಸಾಧ್ಯ ಹಾಗೂ ಸಕಾರಾತ್ಮಕ ಚಿಂತನೆಗಳು ಜೀವನದ ಬಗ್ಗೆ ಉತ್ತಮ ದೃಷ್ಟಿಕೋನವನ್ನು ನೀಡುತ್ತದೆ ಎಂಬ ಜ್ಞಾನದ ಅರಿವನ್ನು ನಾನು “ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ ” ಎಂಬ ಈ ಗ್ರಂಥವನ್ನು ಓದಿ ತಿಳಿದುಕೊಂಡೆ.

“ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ” ಎಂಬ ಈ ಗ್ರಂಥವು ಲೇಖಕಿ ರೇವತಿ ಅವರ ಆತ್ಮಕಥೆಯಾಗಿದೆ.

ಬಾಲ್ಯದಿಂದಲೇ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಲೇಖಕಿ ಶ್ರೀಮತಿ ರೇವತಿ ತನ್ನ ತಾಯಿಯ ಹಾಗೂ ಅಜ್ಜಿಯ ಆರೈಕೆಯಿಂದ ಚೇತರಿಸಿಕೊಂಡಳಾದರೂ ತಮ್ಮ ಜೀವನದ ಪ್ರತೀ ಹಂತದಲ್ಲಿ ಅನುಭವಿಸುತ್ತಿದ್ದ ದೈಹಿಕ ತೊಂದರೆಗಳೊಂದಿಗೆ ಹೊರಾಡಲು ತಮ್ಮ ತಾಯಿಯ ಸಹಾಯ ಬಯಸುತ್ತಿದ್ದರು. ತನ್ನ ತಾಯಿಯವರನ್ನು ಗಾಢವಾಗಿ ಪ್ರೀತಿಸುತ್ತಿದ್ದ ರೇವತಿಯವರಿಗೆ ತನ್ನ ತಾಯಿಯವರು ಅನುಭವಿಸಿದ ಕಷ್ಟ, ಅಸಹಾಯಕತೆಗಳ ನಡುವೆಯೂ ತನ್ನ ಜೀವನದಲ್ಲಿ ಶಕ್ತಿಯನ್ನು ತುಂಬಿದ ಆ ತಾಯಿಯನ್ನು ತಮ್ಮ ಮನಸ್ಸೆಂಬ ಅರಮನೆಯಲ್ಲಿ ಬಚ್ಚಿಟ್ಟುಕೊಂಡು ಇಂದಿಗೂ ಅವರು ತಮ್ಮ ತಾಯಿಯಿಂದ ಪಡೆದ ಪ್ರೀತಿ, ಅಕ್ಕರೆ, ಕಾಳಜಿಯಿಂದ ದೂರ ಸರಿಯಲಾಗುತ್ತಿಲ್ಲ ಎಂಬ ವಿಷಯವು ‘ತಾಯಿ’ ಎಂಬ ಸ್ಥಾನಕ್ಕೆ ಸಿಕ್ಕ ಸಂಪೂರ್ಣ ಗೌರವ.

ಲೇಖಕಿ ರೇವತಿಯವರ ತಂದೆಯವರು ವೈದ್ಯರಾಗಿದ್ದು ಹೊಮಿಯೋಪತಿ ಹಾಗೂ ಅಲೋಪತಿ ಔಷಧಿಗಳನ್ನು ಕೊಡುತ್ತಿದ್ದರು. ತಂದೆಯವರಿಗೆ ಕುಡಿತದ ಚಟವಿದ್ದಕಾರಣ ರೇವತಿಯವರ ತಾಯಿಯವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬೆಳೆದು ನಿಂತ ರೇವತಿಯವರಿಗೆ ತನಗೆ ಮಲತಾಯಿ ಇದ್ದಾರೆ ಎಂಬ ವಿಷಯ ತಿಳಿದಾಗ ರೇವತಿಯವರ ತಾಯಿಯವರು ಆ ಮಲತಾಯಿಯನ್ನು ‘ದೊಡ್ಡಮ್ಮ’ ಎಂದು ಕರೆಯಬೇಕು ಹಾಗೂ ನಮ್ಮ ಆಸ್ತಿಯಲ್ಲಿ ಅವಳಿಗೂ ಪಾಲಿದೆ ಎಂದು ತನ್ನ ಮಕ್ಕಳಿಗೆ ತಿಳಿಸಿದ್ದರು. ಇದು ಆ ತಾಯಿಯ ಹೃದಯವಂತಿಕೆಯನ್ನು ಎತ್ತಿ ಹಿಡಿದಿದೆ.

ಅಣ್ಣ ತಂಗಿಯರೊಟ್ಟಿಗೆ ಬೆಳೆದ ರೇವತಿಯವರ ತಂಗಿ ನಾಲ್ಕು ವರ್ಷ ವಯಸ್ಸಿನಲ್ಲಿಯೇ ‘ಅಮ್ಮ’ ಬಂದು ತೀರಿಕೊಂಡರು. ತಂಗಿಯ ಅಗಲಿಕೆಯ ನಂತರ ರೇವತಿಯ ತಾಯಿಯವರಿಗೆ ರೇವತಿಯವರ ಮೇಲಿನ ವ್ಯಾಮೋಹ ಹೆಚ್ಚಿತು. ಹುಟ್ಟುತ್ತಲೇ ರೋಗ ರುಜಿನಗಳಿಂದ ಬಳಲುತ್ತಿದ್ದ ರೇವತಿಯವರ ಪಾದಗಳ ಮೇಲೆ ಗುಳ್ಳೆಗಳು ಕಾಣಿಸಿಕೊಂಡಾಗ ಸತತವಾಗಿ ಮೂರು ವರುಷಗಳ ಸಮಯ ತನ್ನ ತಂದೆಯವರು ಕೊಡುತ್ತಿದ್ದ ಔಷಧಿಗಳಿಂದ ಹಾಗೂ ಊಟದ ಪಥ್ಯಗಳಿಂದ ಚೇತರಿಸಿಕೊಂಡಿದ್ದ ರೇವತಿಯವರು ದಿನಗಳು ಕಳೆದಂತೆ ಮದುವೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು. ನೆಗಡಿ, ಮೈಕೈ ನೋವು, ಶಬ್ಧ ವೆಂದರೆ ಭಯ, ತಲೆ ಸಿಡಿತ, ಕಂಪನ ಹೀಗೆ ಇಂತಹ ಸಮಸ್ಯೆಗಳು ಇವರನ್ನು ಕಾಡುತ್ತಿದ್ದವು. ತಮ್ಮ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಹೋರಾಡಿದರು.

ತಂದೆಯವರ ಕುಡಿತದ ಚಟ ಹೆಚ್ಚಾಗಿ ಮೃತಪಟ್ಟರು. ಆ ಸಮಯದಲ್ಲಿ ಇವರಿಗೆ ಯಾರೂ ಸಹಾಯ ಮಾಡಲಿಲ್ಲ. ಸಂಸಾರದ ಜವಾಬ್ದಾರಿಯನ್ನು ಇವರ ತಾಯಿ ಹಾಗೂ ಅಜ್ಜಿ ಹೇಗೊ ತೂಗಿಸಿಕೊಂಡು ಹೋದರು. ಇವರ ಜೊತೆ ರೇವತಿಯವರು ಕೂಡ ಮನೆಯ ಕೆಲಸಗಳನ್ನು ಕಲಿತರು.

ಸ್ವಲ್ಪ ಮಟ್ಟಿಗೆ ಅರೋಗ್ಯದಲ್ಲಿ ಚೇತರಿಸಿಕೊಂಡ ರೇವತಿ, ತಮ್ಮ ತಾಯಿಯವರು ನೋಡಿದ ಹುಡುಗನನ್ನು ಮದುವೆಯಾಗಿ ಗಂಡನ ಮನೆಗೆ ಬಂದು ಸಂಸಾರವನ್ನು ಹೂಡಿದರು. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿನ ತಾಯಿಯಾದ ರೇವತಿಯವರು ತಮ್ಮ ಮೊದಲನೆಯ ಹೆರಿಗೆಯಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದರು. ಈ ಕಾರಣದಿಂದ ಒಂದೇ ಮಗು ಸಾಕು ಎಂಬ ನಿರ್ಧಾರ ತೆಗೆದುಕೊಂಡಿದ್ದ ಇವರು ಗಂಡನ ಇಷ್ಟದಂತೆ ಮತ್ತೊಂದು ಮಗುವಿಗೆ ಜನುಮ ನೀಡಿದರು. ಈ ಸಮಯದಲ್ಲಿ ಇವರಿಗೆ ಅನಿಸಿದ್ದು…..”ಮಕ್ಕಳನ್ನು ಹೇರುವ ಆಯ್ಕೆ ಹೇರುವವಳದೇ ಆಗಿರಬೇಕು” ಎಂದು. ಇವರ ಅನುಭವ ಪೂರ್ವಕ ಚಿಂತನೆಗಳು ಎಲ್ಲರೂ ಗಮನಿಸಬೇಕಾದ ವಿಷಯ.

ಸಮಯ ಸರಿದಂತೆ ನೋವಿನಿಂದ ಓಡಾಡುವುದಕ್ಕೂ ಕಷ್ಟಕರ ಎಂದೆನಿಸಿದಾಗ ಇವರು ಆದಷ್ಟು ಮನೆಯಲ್ಲೇ ಇರುತ್ತಿದ್ದರು. ಇದರಿಂದ ಸಂಬಂಧಿಕರ ಚುಚ್ಚು ನುಡಿಗಳಿಗೆ ಬಲಿಯಾದರು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿಕೊಂಡರೂ ಸಹ ಇವರಮೇಲೆ ಇಲ್ಲದ ಟೀಕೆಗಳು ಹರಿದಾಡಿದಾಗ ಗಂಡನ ಜಾಣ ಕಿವುಡುತನದಿಂದ ರೇವತಿಯವರು ಮೌನರಾದರು. ತಮ್ಮ ಸಮಸ್ಯೆಗಳಿಗೆ ಉತ್ತರವನ್ನು ಹುಡುಕಿದಾಗ ಇವರು ಆಧ್ಯಾತ್ಮದ ದಾರಿಯನ್ನು ಒಪ್ಪಿಕೊಂಡರು

ದಿನಗಳು ಕಳೆದಂತೆ ಇವರಿಗೆ ಅಂಗಾಗಳಲ್ಲಿ ಗೆಡ್ಡೆಗಳು ಕಾಣಿಸಿ ವಿಪರೀತ ನೋವಿನಿಂದ ಬಳಲಿದರು. ತಮ್ಮ ಇಬ್ಬರು ಮಕ್ಕಳ ಮದುವೆಯ ಸಮಾರಂಭದಲ್ಲಿ ಎಲ್ಲರಂತೆ ಓಡಾಡಿ ಆ ಹರುಷದ ಕ್ಷಣಗಳನ್ನು ಅನುಭವಿಸುವ ಸ್ಥಿತಿ ಇವರದಾಗಲಿಲ್ಲ. ಯಾವುದೇ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅಥವಾ ಪ್ರಯಾಣ ಮಾಡಲು ಅವರ ದೇಹ ಸಹಕರಿಸುತ್ತಿರಲಿಲ್ಲ. ರೇವತಿಯವರು ಅನುಭವಿಸುತ್ತಿದ್ದ ದೈಹಿಕ ಸಮಸ್ಯೆಗಳನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ಬಂಧುಗಳ ಸ್ವಾರ್ಥ ಭಾವವನ್ನು ಅರಿತರು. ತಾಯಿ ಮಕ್ಕಳ ನಡುವೆ ಬಿರುಕು ಬಿಡುವುದು ಸಾಮಾನ್ಯ. ಅಂತಹ ಸಮಯದಲ್ಲಿ ಸಂಬಂಧಗಳು ಕೂಡಿ ಇರುವುದಕ್ಕೆ ಹೊಂದಾಣಿಕೆಯ ಅವಶ್ಯಕತೆ ಇರುತ್ತದೆ ಎಂಬುದು ವಾಸ್ತವ.

“ಸಾಧಿಸಬೇಕೆಂಬ ಬಯಕೆ ಹಂಬಲ ಹೆಮ್ಮರವಾಗಿದೆ. ಅದು ಈಡೇರಿದರೆ ಈ ಜಗತ್ತು ತನ್ನ ಕೈಯಲ್ಲಿ ನನ್ನ ಮುಷ್ಟಿಯಲ್ಲಿ . ಈ ಸಮುದ್ರದಲ್ಲಿ ಈಜುವೆ, ಗಿರಿ ಪರ್ವತಗಳನ್ನು ಏರುವೆ” ಎಂದು ಇವರು ತಮ್ಮ ಮನಸ್ಸಿನಲ್ಲಿ ಬಚ್ಚಿಟ್ಟಿದ್ದ ಆಸೆಗಳನ್ನು ವ್ಯಕ್ತಪಡಿಸಿದ್ದಾರೆ.

ತನ್ನ ತಾಯಿ ಹಾಗೂ ತಾಯಿಯ ತಾಯಿ ಅಂದರೆ ಅಜ್ಜಿಯವರು ಅನುಭವಿಸಿದ ಕಷ್ಟಗಳು, ಮನುಷ್ಯನ ಗುಣ ಸ್ವಭಾವಗಳು ರೇವತಿಯವರನ್ನು ಆಧ್ಯಾತ್ಮಿಕ ದಾರಿಗೆ ಸೆಳೆಯಿತು. ತಮ್ಮ ಜೀವನವನ್ನು ಅವಲೋಕನ ಮಾಡಿಕೊಂಡು ಮಹಾತ್ಮಗಾಂಧಿಜಿಯವರ ಆತ್ಮಕಥೆ “ಸತ್ಯಾನ್ವೇಷಣೆ ” ಹಾಗೂ ಗೋರೂರು ರಾಮಸ್ವಾಮಿ ಅಯ್ಯoಗಾರ್ ರವರ ಪುಸ್ತಕಗಳನ್ನು ಓದುವ ಮೂಲಕ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುವ ಶಕ್ತಿ ದೊರಕಿತು ಹಾಗೂ ತಮ್ಮ ಆರೋಗ್ಯದ ಸಮಸ್ಯೆಗಳಿಗೆ ಧ್ಯಾನದ ಮೂಲಕ ಪರಿಹಾರವನ್ನು ಪಡೆಯುತ್ತಾ ನಿರ್ಲಿಪ್ತತೆಯ ಜೀವನವನ್ನು ಅಪ್ಪಿಕೊಂಡರು. ತಮ್ಮ ಪರಿಸ್ಥಿಗೆ ಯಾರನ್ನು ದೂರದೆ ತಮ್ಮ ಕರ್ಮ ಫಲವನ್ನು ಮೌನದಿಂದ ಸ್ವೀಕರಿಸಿ ಮಾನಸಿಕವಾಗಿ ಕುಗ್ಗಿದರೆ ದೈಹಿಕವಾಗಿಯೂ ಕುಗ್ಗಿಬಿಡುತ್ತೇವೆ ಎಂದೂ ಹಾಗೆ ಆಗಬಾರದೆಂದು ಧ್ಯಾನದ ಮೂಲಕ ದೇಹವನ್ನು ಶುದ್ಧಿಗೊಳಿಸುವಲ್ಲಿ ಸಫಲರಾದರು.

ಒಳ್ಳೆಯ ಗಂಡ, ಒಳ್ಳೆಯ ಗುಣಗಳುಳ್ಳ ಮಗ-ಸೊಸೆ, ಮಗಳು-ಅಳಿಯನಿದ್ದರೂ ಯಾವುದೇ ಸಂತೋಷ ಸಮಾರಾಧನೆ ಗಳಲ್ಲಿ ಭಾಗವಹಿಸಲಾಗದ ಇವರ ದೇಹಸ್ಥಿತಿಯಿಂದ ಇವರ ಜೀವನದಲ್ಲಿ ಸಂತೋಷವನ್ನು ಅನುಭವಿಸುವ ಭಾಗ್ಯ ಇವರದಾಗಲಿಲ್ಲ. ಅಕ್ಷಯ ತೃತೀಯ ದಿನದಂದು ಎಲ್ಲರೂ ಸಂಪತ್ತು, ಐಶ್ವರ್ಯ ವೃದ್ಧಿಯಾಗಲಿ ಎಂದು ಆಚರಿಸಿದರೆ ಇವರು ಒಳ್ಳೆಯ ಆರೋಗ್ಯ, ನೆಮ್ಮದಿ, ಭಕ್ತಿ, ಶಕ್ತಿ, ಧೈರ್ಯ, ಜ್ಞಾನ, ಆತ್ಮ ವಿಶ್ವಾಸ, ಪ್ರತಿಭೆ, ಸಾಧನೆ, ಫಲ ವೃದ್ಧಿಸಲಿ ಎಂದು ಆಶಿಸಿದರು. ವಾರಕೊಮ್ಮೆ ಮೌನವ್ರತವನ್ನು ಹಾಗೂ ಲೌಕಿಕ ಪ್ರಪಂಚದಿಂದ ದೂರ ಸರಿಯಬೇಕು ಎಂಬ ಇಚ್ಛೆಯಿಂದ ಬಣ್ಣ ಬಣ್ಣದ ಉಡುಪುಗಳನ್ನು ವಿಸರ್ಜಿಸಿ ಹಳದಿ ಸೀರೆ, ಬಟ್ಟೆಗಳನ್ನು ತೊಡುಲು ರೂಢಿಸಿಕೊಂಡರು. ‘ಅಹಂ ಬ್ರಹಾಸ್ಮಿ’ ಎಂಬ ಗುರು ಶಂಕರರ ತತ್ವಗಳನ್ನು ಪಾಲಿಸಿ ಮರಣ ಭೀತಿ ಅವರ ಮನಸ್ಸನ್ನು ಕಾಡಿದರು ಸಹ ಈ ಲೋಕದಲ್ಲಿ ನನಗಿನ್ನೂ ಬಹಳಷ್ಟು ಕೆಲಸವಿದೆ ಎಂಬ ಮನೋ ಧೈರ್ಯದಿಂದ ತನ್ನ ಪಾಲಿನ ಕರ್ತವ್ಯಗಳನ್ನು ಪಾಲಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಒಳ್ಳೆಯ ಆರೋಗ್ಯ ಹೊಂದಿದವರು ಕೂಡ ತಮ್ಮನ್ನು ಆಧ್ಯಾತ್ಮ ದಾರಿಯಲ್ಲಿ ತಮ್ಮ ಶರೀರವನ್ನು ಹಾಗೂ ಆತ್ಮವನ್ನು ಶುದ್ಧಿಯಾಗಿಟ್ಟುಕೊಳ್ಳಬೇಕು ಎಂಬ ಸಂದೇಶವು ಇವರ ಜೀವನದ ಅನುಭವಗಳಿಂದ ತಿಳಿದುಬರುತ್ತದೆ.

ಲೇಖಕಿ ರೇವತಿಯವರ ಊರಿನ ವರ್ಣನೆಯಿಂದ ಪ್ರಾರಂಭಗೊಂಡ ಈ ಕತೆಯು ಕಥೆಯಾಗದೆ ಬದುಕಿನ ಪಾಠವಾಗಿದೆ. ಕಥೆಯಲ್ಲಿ ಸಮಾಜದಲ್ಲಿನ ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಸ್ತ್ರೀಯರ ಮೇಲಿನ ದೌರ್ಜನ್ಯ, ಲಿಂಗತಾರತಮ್ಯ ಇಂತಹ ಸಮಸ್ಯೆಗಳ ಚಿತ್ರಣ ಗಮನಾರ್ಹ. ಸಂಸಾರದಲ್ಲಿ ಪೋಷಕರ ನಡತೆ, ಧೋರಣೆ, ನಿರ್ಧಾರ, ಕುಟುಂಬದಲ್ಲಿ ಹಾಗೂ ಸಮಾಜದ ಮನೋಭಾವಗಳು, ಸ್ವಾರ್ಥ ಭಾವಗಳು, ಅವಲಂಬನೆ ಇನ್ನಿತರ ಭಾವನೆಗಳಿಂದ ಬೆಸೆದ ಜೀವನ ಮಕ್ಕಳ ಮಾನಸಿಕ ವಿಕಾಸಕ್ಕೆ ಪರಿಣಾಮ ಬೀರುತ್ತದೆ ಎಂಬ ಸೂಕ್ಷ್ಮ ವಿಷಯಗಳನ್ನು ತಿಳಿಸಿದ್ದಾರೆ.

ಯಾರಿಗೂ ಕೆಟ್ಟದನ್ನು ಬಯಸದ ರೇವತಿಯವರು ತಮ್ಮ ಗತಜೀವನದಲ್ಲಿ ಘಟಿಸಿದ ಘಟನೆಗಳನ್ನು ಜೀವನದ ಆದರ್ಶಗಳನ್ನಾಗಿ ಪರಿಗಣಿಸಿ ದೇವರನ್ನು ನಂಬಿ ಧ್ಯಾನದಿಂದ ಕಂಡುಕೊಂಡ ಪರಿಹಾರಗಳು ಎಲ್ಲರ ಬದುಕಿಗೆ ಮಾರ್ಗದರ್ಶನ ಎಂದರೆ ತಪ್ಪಾಗಲಾರದು.

ಇಂತಹ ಉತ್ತಮ ಗ್ರಂಥವನ್ನು ಓದಿ ಜೀವನದ ಮೌಲ್ಯಗಳನ್ನು ನಾನು ಅರಿತುಕೊಳುವಂತೆ ಮಾಡಿದ ಲೇಖಕಿ ಶ್ರೀಮತಿ ರೇವತಿ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಮತ್ತಷ್ಟು ಇಂತಹ ಕೃತಿಗಳು ನಿಮ್ಮಿಂದ ಮೂಡಿಬರಲಿ ಎಂದು ನಿಮಗೆ ಶುಭಾಶಯಗಳನ್ನು ತಿಳಿಸಲು ಇಚ್ಚಿಸುತ್ತೇನೆ.

ನನಗೆ ಓದಲು ಈ ಗ್ರಂಥವನ್ನು ಕಳುಹಿಸಿಕೊಟ್ಟ ಶ್ರೀಮತಿ ಸರೋಜ ಗಡಾದ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.


  • ಹೆಚ್ ವಿ ಮೀನ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW