ನಾಡಿನ ಖ್ಯಾತ ಸಾಹಿತಿಗಳಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ಕನ್ನಡ ವಿವೇಕ ಪರಂಪರೆ ಮತ್ತು ಪ್ರಭುತ್ವ’ ಕೃತಿಯ ಕುರಿತು ಡಾ.ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕನ್ನಡ ವಿವೇಕ ಪರಂಪರೆ ಮತ್ತು ಪ್ರಭುತ್ವ
ಲೇಖಕರು : ನರಹಳ್ಳಿ ಬಾಲಸುಬ್ರಹ್ಮಣ್ಯ
ಕನ್ನಡ ಸಾಹಿತ್ಯ ಅಧ್ಯಯನ ಮಾಡುವವರೆ ಅಲ್ಪಸಂಖ್ಯಾತರಾಗುತ್ತಿರುವ ಈ ವಿಷಮ ಸಂದರ್ಭದಲ್ಲಿ , ಕನ್ನಡ ಸಾಹಿತ್ಯದಲ್ಲಿ ಹುದುಗಿರುವ ವಿವೇಕ ಪ್ರಜ್ಞೆಯನ್ನು ಮತ್ತು ಪ್ರಭುತ್ವದ ಜೊತೆಗೆ ಕವಿಗಳ ಸಂಬಂಧಾಂತರಗಳನ್ನು ಅನಾವರಣ ಮಾಡುವ ಮೂಲಕ, ಅದರ ಅಧ್ಯಯನದ ಅವಶ್ಯಕತೆಯನ್ನು ಮನದಟ್ಟು ಮಾಡಿಸುವಲ್ಲಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ರಚಿಸಿದ , ಈ ಕಿರುಹೊತ್ತಿಗೆ ಕನ್ನಡದ ವಿವೇಕ ಪ್ರಜ್ಞೆಯನ್ನು ಉದ್ದೀಪಿಸುವಲ್ಲಿ ಸಮರ್ಥವಾದ ಒಂದು ಕೈ ಪಿಡಿ, ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಲ್ಲ.
ಅವರ ಕೃತಿಯು ಪ್ರಾರಂಭವಾಗುವುದೇ ಕರ್ನಾಟಕ ಸರ್ಕಾರ ತನ್ನ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಬಸವಣ್ಣನವರ ” ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ” ಎನ್ನುವ ಪ್ರಸಿದ್ಧವಾದ ವಚನವನ್ನು ಉಲ್ಲೇಖಿಸುವ ಮೂಲಕ. ಇದರಲ್ಲಿನ ಪ್ರತಿಯೊಂದು ಮೌಲ್ಯವೂ ಇಂದಿಗೂ ಹೇಗೆ ಪ್ರಸ್ತುತ ಎಂದು ವಿವರಿಸಿದ್ದಾರೆ. ಸ್ವತಃ ಬಸವಣ್ಣನವರೆ ” ಆನು ಈ ಬಿಜ್ಜಳಂಗೆ ಅಂಜುವೆನೆ” ಎಂದು ದಿಟ್ಟವಾಗಿ ನುಡಿದಿದ್ದಾರೆ. ಇಂತಹ ಧೈರ್ಯ ಇಂದು ಅವರ ಅನುಯಾಯಿಗಳಲ್ಲೇ ಮಾಯವಾಗಿರುವುದು ವಿಷಾದದ ಸಂಗತಿ.ಇದಕ್ಕಿಂತ ಭಿನ್ನವಾಗಿ ಪರಸ್ಪರ ಪೂರಕವಾಗಿದ್ದ ,ಕನ್ನಡದ ಮೊದಲ ಲಾಕ್ಷಣಿಕ ಕವಿರಾಜಮಾರ್ಗಕಾರ ಮತ್ತು ನೃಪತುಂಗನ ನಡುವೆ ಇದ್ದ ಸಂಬಂಧವನ್ನು ಉಲ್ಲೇಖಿಸಿದ್ದಾರೆ.

ಅವನು ಪ್ರಸಿದ್ಧವಾದ “ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಂ ಪರವಿಚಾರಮುಮಂ” ಎಂಬುದನ್ನು ಉಲ್ಲೇಖ ಮಾಡಿ ಇಂದು, ಅಂದಿನ ಕನ್ನಡಿಗರ ಈ ವಿಶಾಲ ಮನೋಭಾವ ಕಾಣೆಯಾಗುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಇಂದು ಭಿನ್ನ ಮತಗಳ ಕುರಿತ ಅಸಹನೆ ವ್ಯಕ್ತವಾಗುತ್ತಿರುವುದು ಈ ಕನ್ನಡದ ವಿವೇಕ ಪ್ರಜ್ಞೆಗೆ ವಿರುದ್ಧವಾಗಿದೆ. ಆದ್ದರಿಂದ ಸಂವಾದವೇ ಮಾಯವಾಗಿದೆ. ವಿವೇಕ ಭಾವಾವೇಶ ಮೀರಿದ ಸಮಚಿಂತನೆ. ಅದನ್ನು ರೂಢಿಸಿಕೊಳ್ಳಬೇಕಾದ ಅಗತ್ಯವನ್ನು ಅಡಿಗರ ಮಾತುಗಳನ್ನು ಉದ್ಧರಿಸುವ ಸಮರ್ಥಿಸಿಕೊಂಡಿದ್ದಾರೆ .ಅಂದಿಗಿಂತ ಇಂದು ಹೆಚ್ಚಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಪಂಪ ನಿರ್ಭಿಡೆಯಿಂದ “ಪೆರರೀವುದೇಂ ಪೆರರಿಂದಪ್ಪುದೇಂ” ಎಂದು ಸವಾಲು ಹಾಕಿದ್ದಲ್ಲದೆ, ಆರಸರ್ ಅವಿವೇಕಿಗಳ್” ಎಂದು ಕರೆಯಲು ಅವನು ಹಿಂಜರಿಯುವುದಿಲ್ಲ . ಅಂದು ಪಂಪ ತೋರಿಸಿದ ಸ್ವಾಯತ್ತತೆ ಇಂದಿನ ಜನಾಂಗಕ್ಕೆ ಮಾದರಿ . ಆಧುನಿಕ ಸಂದರ್ಭದಲ್ಲಿ ಕುವೆಂಪು ಇದನ್ನೇ ಕವಿಗಳಿಗೆ ಅರಸುಗಿರಸುಗಳ ಋಣವಿಲ್ಲ “, ಎಂದಿರುವುದು , ಕನ್ನಡ ಸಾಹಿತ್ಯದಲ್ಲಿನ ಸಾತತ್ಯವನ್ನು ಎತ್ತಿ ತೋರಿಸುತ್ತದೆ.
ಅತಿ ಭೋಗದ ನಿರರ್ಥಕತೆಯನ್ನು ಕುವೆಂಪು ಎತ್ತಿ ಹಿಡಿದು ಸರಳತೆಯನ್ನು ಅಳವಡಿಸಿ ಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿರುವುದು ಗಾಂಧಿಯವರ ಸರಳ ಜೀವನದ ಪರಿಕಲ್ಪನೆಯನ್ನು ನೆನಪಿಗೆ ತರುತ್ತದೆ.

ಪಂಪಭಾರತದಲ್ಲಿ ತನ್ನ ಕಥಾನಾಯಕನಾದ ಅರ್ಜುನನಿಗೆ ಬದಲಾಗಿ, ಸೂತಸುತನೆನಿಸಿಕೊಂಡ ಕರ್ಣನ ಜೋಳದ ಪಾಳಿ,ತ್ಯಾಗದ ಪ್ರತಿನಿಧಿಯಾದ ಅವನ ವ್ಯಕ್ತಿತ್ವಕ್ಕೆ ಮಾರು ಹೋಗಿ ” ನೆನೆವೊಡೆ ಕರ್ಣನಂ ನೆನೆಯ” ಎಂದು ಹಾಡಿ ಹೊಗಳಿದ್ದಾನೆ. ಇಂತಹ ಜೀವಪರ ಮೌಲ್ಯಗಳ ಪ್ರತಿಪಾದಿಸಿದ ಪಂಪ.ಆದ್ದರಿಂದಲೇ ನಾಗರಾಜನೆಂಬ ‘ಪಸರಿಪ ಕನ್ನಡಕ್ಕೊಡೆಯನೊರ್ವನೆ ಪಂಪನಾವಗಂ’ ಎಂದು ಕೊಂಡಾಡಿದ್ದಾರೆ.
ಹೀಗೆ ಪಂಪನಿಂದ ಮೊದಲ್ಗೊಂಡು ಕುವೆಂಪುವರೆಗೆ ಅಡಿಗರು, ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರಗಳ ಮೂಲಕ ,ಕನ್ನಡ ಪರಂಪರೆಯಲ್ಲಿ ಪ್ರಕಟವಾಗಿರುವ ವಿವೇಕ ಪ್ರಜ್ಞೆಯನ್ನು ಗುರುತಿಸಿ ಅದರ ಮಹತ್ವವನ್ನು ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾಗಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಇದನ್ನು ಬರೆದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಅಭಿನಂದನೆ. ಪ್ರಕಟಿಸಿದ ಮತ್ತು ಇದನ್ನು ಕಳುಹಿಸಿಕೊಡುವ ಮೂಲಕ ಓದಲು ಅವಕಾಶ ಮಾಡಿಕೊಟ್ಟ ಗೆಳೆಯರಾದ ಅಭಿನವದ ರವಿಕುಮಾರ್ ನರಸಿಂಹ ಮೂರ್ತಿ ಅವರಿಗೆ ಕೃತಜ್ಞತೆಗಳು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
