ಡಾ.ಪ್ರಕಾಶ ಬಾರ್ಕಿ ಅವರು ಇತ್ತೀಚಿಗೆ ಕಾಶಿ ಪ್ರವಾಸ ಮಾಡಿ ಬಂದಿದ್ದಾರೆ. ಅಲ್ಲಿನ ರೋಚಕ ಅನುಭವಗಳನ್ನುಸಂಚಿಕೆರೂಪದಲ್ಲಿ ಓದುಗರ ಮುಂದಿಡುತ್ತಿದ್ದಾರೆ. ಓದಿ , ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ…
“ಸುಬಹ್-ಏ-ಬನಾರಸ್”. Subah-e-Banaras
ಕಾಶಿಯಲ್ಲಿ ಪ್ರವಾಸಿಗರ, ಆಧ್ಯಾತ್ಮಿಕ ಜೀವಿಗಳ, ಗಂಗೆ, ಘಾಟ್’ ಜನ ಜೀವನದ ಬೆಳಗು ಆರಂಭವಾಗುವುದೆ “ಅಸ್ಸಿ ಘಾಟ್”ನ “#ಸುಬಹ್_ಏ_ಬನಾರಸ್“ನಿಂದ.
ಕತ್ತಲನ್ನು ಮಗುಚಿ ಹಾಕಲು, ಮೈ ಕೊರೆಯುವ ಚುಮು ಚುಮು ಚಳಿ ಸೀಳಿ ಬೆಳಗು ನುಗ್ಗುವ ಸಮಯ ಬೆಳಗಿನ 5 ರ ಹೊತ್ತಿಗೆ ನಡೆಯುವ ವಿಶಿಷ್ಟ ಪೂಜಾ ಕೈಂಕರ್ಯ ನೋಡಲು, ಗಂಗೆಯ ದಿನದಾರಂಭ ಸಂಭ್ರಮಿಸಲು ಸಣ್ಣಗೆ ನಡಗುತ್ತಲೆ ಹಲ್ಲು ಕಟಕಟಿಸುತ್ತಾ “ಅಸ್ಸಿ ಘಾಟ್”ಗೆ ನುಗ್ಗತೊಡಗಿದೆ.
“ಅಸ್ಸಿ ಘಾಟ್’ನಲ್ಲಿ “ಸುಬಹ್-ಏ-ಬನಾರಸ್” ಎನ್ನುವುದು ಇತ್ತೀಚೆಗೆ 2014 ರಿಂದ “ಉತ್ತರ ಪ್ರದೇಶ ಸರ್ಕಾರ”ದಿಂದ ಆರಂಭವಾದ ಕಾರ್ಯಕ್ರಮ… ಪ್ರವಾಸಿಗರನ್ನು ಆಕರ್ಷಿಸಲು ರೂಪಿಸಿದ ಯೋಜನೆ….
(ನಿತ್ಯ ಗಂಗೆಗೆ ಬೆಳಗಿನ ವಿಶೇಷ ಪೂಜೆ, ಸಂಗೀತ ಕಾರ್ಯಕ್ರಮ, ಯೋಗ ತರಬೇತಿಗಳ ಕಾರ್ಯಾಗಾರ)
ಬೆಳಕು ಗಂಗೆಯ ಒಡಲು ತಾಗುವ ಮುನ್ನವೆ ಪ್ರಾರಂಭವಾಗುವ ವಿಶಿಷ್ಟ ಪೂಜಾ ವಿಧಿವಿಧಾನಗಳು. ವೇದ, ಮಂತ್ರ ಘೋಷಗಳ ದೈವಿಕ ಅಲೆ ನಿಸರ್ಗದಲ್ಲಿ ತೇಲುತ್ತವೆ. ಗಂಗೆಯಲ್ಲಿ ಮಿಂದೆದ್ದು ಮಾಂಸ ಖಂಡ ಕೊರೆಯುವ ಚಳಿ ಸಾವರಿಸಿಕೊಂಡ ನಮ್ಮ ಹೃದಯಾಂತರದಿಂದ ಭಕ್ತಿ, ಕುತೂಹಲ, ನೆಮ್ಮದಿ ಚಿಮ್ಮುತ್ತಿರುತ್ತೆ. ದಿವ್ಯ ಧ್ಯಾನಸ್ಥ ಕ್ಷಣಗಳವು. ಮೋಡಿ ಮಾಡುವ ನಿಸರ್ಗದಲ್ಲಿ ಧನ್ಯತೆಯ ಅನುಭವ.
ಪೂಜೆ ಮುಗಿಯಲು ಕ್ಷಣಗಣನೆ ಆರಂಭವಾಗುತ್ತಲೆ ಕತ್ತಲು ಕಳಚಿಕೊಂಡು ಬೆಳಗು ವಿಜಯ ಪತಾಕೆಯೊಂದಿಗೆ ಮುಗುಳ್ನಗೆ ಬೀರುತ್ತಿರುತ್ತೆ. ಗಂಗೆಯ ಬೆನ್ನೇರಿದ ದಟ್ಟ “ಇಬ್ಬನಿ” ತನ್ನ ಮೈ ತೂಕ ಇಳಿಸಿಕೊಂಡು ಸಪೂರವಾಗುತ್ತೆ.
ಇಬ್ಬನಿ- ಬೆಳಕಿನಾಟದ ಸ್ವರ್ಗೀಯ ಕ್ಷಣಗಳ ವೈಭವ ಜೊತೆ ಜೊತೆಗೆ ರೋಮಾಂಚಕ ಸಂಗೀತ, #ಯೋಗ, ಧ್ಯಾನ ಪ್ರಾಣಾಯಾಮ, ಆಧ್ಯಾತ್ಮಿಕ ಜೀವಿಗಳ ಒಡನಾಟ, ಬಿಸಿ ಹಬೆಯಾಡುವ ಮಸಾಲಾ ಚಹಾ ಪ್ರಕೃತಿಯ ಭವ್ಯ ಬದುಕಿನಂತೆ ಭಾಸವಾಗುತ್ತೆ.
ತಣ್ಣನೆಯ ತಿಳಿ ಗಾಳಿ ಗಂಗೆಯ ಮೈದಡವಿ ನಮ್ಮ ಮೈ ಮನಸ್ಸನ್ನು ಮುದ್ದು ಮಗುವಿನಂತೆ ಅಪ್ಪಿಕೊಳ್ಳುತ್ತೆ.
ಬೆಳಗಿನ ರಮ್ಯತೆ ಆಸ್ವಾದಿಸುತ್ತಾ ಪುಳಕಗೊಂಡು ಬೆಚ್ಚಗೆ ಬಳಕುತ್ತಾ ಹರಿಯುವ ಗಂಗೆ, ಆಗಸದ ಅಂಚಿನಿಂದ ಮೈ ಮುರಿದೆಳುವ ಸೂರ್ಯ, ಗಂಗೆಯಲ್ಲಿ ಪ್ರತಿಬಿಂಬ ಕಂಡು ಆಹ್ಲಾದದ ನಗೆ ಸೂಸುವಾ…
ಈ ಭವ್ಯ ನಿಸರ್ಗದಾಟವ ಅನುಭವಿಸುವ ನಾವು ಭಾವುಕರಾಗಿ ಮೂಕವಿಸ್ಮಿತರಾಗುತ್ತೆವೆ.
ನಂತರ….
ಚಿಕ್ಕ ಮಧ್ಯಮ ಬೋಟುಗಳನ್ನೇರಿ ಎಲ್ಲಾ ಘಾಟ್’ಗಳನ್ನು ಕಣ್ತುಂಬಿಕೊಳ್ಳಲು, ಹಳೆಯ ಕಟ್ಟಡಗಳ ಪಿಸುಮಾತಿಗೆ ಕಿವಿಗೊಡಲು, ಮುಂಜಾವ ಸೌಂದರ್ಯ ಇನ್ನಷ್ಟು ಕಣ್ತುಂಬಿಕೊಳ್ಳಲು.. “ಬೋಟ ರೈಡ್” ಹೊರಡುವುದು. “#ಅಸ್ಸಿ_ಘಾಟ್” ನಿಂದ.. “ದಶಾಶ್ವಮೇಧ ಘಾಟ್” ವರೆಗೆ ತೇಲುವ ಪಯಣ. ಸುಮಾರು 2 ತಾಸು ಗಂಗೆಯ ಒಡಲಿನಲ್ಲಿ ತೇಲಾಟ.
ಭದ್ರ ಬುನಾದಿಗಳಲ್ಲಿ ಕಾಲೂರಿ ನಿಂತ ಶತಮಾನ ಮೀರಿದ ಕಟ್ಟಡಗಳ ಗಂಭೀರತೆ , ಆಗಾಗ ಕಣ್ಣು ಮಿಟುಕಿಸುವ ಕಾಂಕ್ರೀಟ್ ಕಾಡು, ನಳನಳಿಸುವ ಘಾಟ್’ಗಳ ತಟ, ಕಾವಿದಾರಿಗಳ ಓಡಾಟ, ಸದಾ ಧ್ಯಾನಸ್ಥ ಶಿವಲಿಂಗಗಳು, ಜ್ವಾಲೆಯ ಕೆನ್ನಾಲಿಗೆಗೆ ಧಗಧಗಿಸುವ “ಮಣಿಕರ್ಣಿಕಾ ಘಾಟ್”, “ಹರಿಶ್ಚಂದ್ರ ಘಾಟ್”.
ಕರ್ಣ ಪರದೆ ಅಪ್ಪಿಳಿಸುವ ಗಂಟೆ, ಜಾಗಟೆ, ಶಂಖಗಳ ನಿನಾದ. ಮೂಗಿಗಡರುವ ಗಂಧ ಧೂಪದ ಸುವಾಸನೆ. ಕೈ ಬೆರಳು ತಾಗಿ ಮೈ ನರನಾಡಿಗಳಲ್ಲಿ ತಣ್ಣನೆಯ ಅಲೆ ಹರಿಸುವ ಗಂಗೆಯ ಅಲೆಗಳು. ಪರಿಸರದ ತುಂಬ ಮನ ತಣಿಸುವ ಸೌಂದರ್ಯದ ಮೌನ ಯಾನ.
ಬೆಳಗೆಂದರೆ ಹೀಗಿರಬೇಕೆಂದು ಉದಾಹರಣೆ ನೀಡುವಂತಿರುವ “ಸುಬಹ-ಏ-ಬನಾರಸ್”
ಮತ್ತೆ..ಮತ್ತೇ…#ವಾರಣಾಸಿ.
- ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
