ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೬)

“ಏಕಾದಶಿ”ಗೆ ನೈಸರ್ಗಿಕ “ಬಾರಿ ಹಣ್ಣು”ಗಳು ಜೊತೆಗಿದ್ದವು. ರಸ್ತೆಯಲ್ಲಿ ಅಲ್ಲಲ್ಲಿ ಕರೆದು ಏನಾದ್ರೂ ತಿನ್ನಿ ಎನ್ನುವವರೆ ಹೆಚ್ಚು, ಆವಾಗ ಏಕಾದಶಿ ಉಪವಾಸ ಎಂದಾಕ್ಷಣ ಒಂದಿಷ್ಟು ಹಾಲು ಕೊಟ್ಟರು. ನರ್ಮದಾ ಖಂಡದ ಜನರ ಪರೋಪಕಾರ, ಆದರ.. ಆತಿಥ್ಯಗಳ ಋಣ ಸಾಕಷ್ಟಿದೆ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಬೆಳಿಗ್ಗೆ ಚಳಿಯ ಭಾದೆ ತೀವ್ರವಾಗಿತ್ತು ಆದರೂ ತಣ್ಣೀರಿನ ಸ್ನಾನ ಮಾಡಿ, 6:30 ಕ್ಕೆಲ್ಲ ಹೊರಟೆ. ರಸ್ತೆಯ ತುಂಬಾ ಇಬ್ಬನಿ ದಟ್ಟವಾಗಿ ಬಿದ್ದುಕೊಂಡಿತ್ತು, ಕೇವಲ 100 ಮೀಟರ್ ಒಳಗಿನ ದಾರಿ ಕಾಣಿಸುತ್ತಿತ್ತು. ಇಂತಹ ಸಮಯದಲ್ಲಿ ಅಪಘಾತಗಳು ಹೆಚ್ಚು. ನಾನು ಮೆಲ್ಲಗೆ ನಂದಿಯನ್ನು ಓಡಿಸತೊಡಗಿದೆ. ಇಬ್ಬನಿ ಅದೆಷ್ಟು ದಟ್ಟವಾಗಿತ್ತೆಂದರೆ.. ಹಾಕಿಕೊಂಡಿದ್ದ ಬಟ್ಟೆ ಮೇಲೆಲ್ಲಾ ತುಂತುರು ನೀರು ಬಿದ್ದು.. ಬಟ್ಟೆ ತೊಯ್ದಿದ್ದವು‌.

ಟೋಪಿ, ಸ್ವೇಟರ್ ತಂಪು ತಂಪು. ಮೋಡ ಕವಿದ ವಾತಾವರಣವಿತ್ತು, ಸೂರ್ಯ ತನ್ನ ಕರ್ತವ್ಯಕ್ಕೆ ಹಾಜರಾಗಲೇಯಿಲ್ಲ. ಸೂರ್ಯನ ಕಿರಣಗಳು ನಿಧಾನವಾಗಿ ಭೂಮಿ ತಲುಪಿದಾಗ ಸಮಯ ಮಧ್ಯಾಹ್ನ 12 ಗಂಟೆ. ರಸ್ತೆಯಲ್ಲಿ ಹೋಗುತ್ತಿದ್ದಾಗ ಹೈವೇ ಪಕ್ಕದ ಹೊಲದ ಬದುವಿನಲ್ಲಿ ಸಾಕಷ್ಟು ಬಾರಿ ಹಣ್ಣಿನ (ಬೋರೆ ಹೆಣ್ಣು)ಗಿಡಗಳಿದ್ದವು, ಮೈ ತುಂಬಾ ಬಾರಿ ಹಣ್ಣು ಹೊದ್ದುಕೊಂಡು. ನಂದಿಯನ್ನು ರಸ್ತೆ ಬದಿಗೆ ಹಾಕಿ, ಬಾರಿ ಹಣ್ಣು ಹೆಕ್ಕಿ, ಕಿತ್ತು ತಿಂದೆ. ಕೈ ತುಂಬಾ ತುಂಬಿಕೊಂಡು ತಿನ್ನುವ ಪ್ರಕೃತಿ ಸಹಜ ಹಣ್ಣುಗಳ ರುಚಿಯೇ ಬೇರೆ. ಸಿಹಿಯಾದ ಹಣ್ಣುಗಳು.

“ಏಕಾದಶಿ”ಗೆ ನೈಸರ್ಗಿಕ “ಬಾರಿ ಹಣ್ಣು”ಗಳು ಜೊತೆಗಿದ್ದವು. ರಸ್ತೆಯಲ್ಲಿ ಅಲ್ಲಲ್ಲಿ ಕರೆದು ಏನಾದ್ರೂ ತಿನ್ನಿ ಎನ್ನುವವರೆ ಹೆಚ್ಚು, ಆವಾಗ ಏಕಾದಶಿ ಉಪವಾಸ ಎಂದಾಕ್ಷಣ ಒಂದಿಷ್ಟು ಹಾಲು ಕೊಟ್ಟರು. ನರ್ಮದಾ ಖಂಡದ ಜನರ ಪರೋಪಕಾರ, ಆದರ.. ಆತಿಥ್ಯಗಳ ಋಣ ಸಾಕಷ್ಟಿದೆ. ಎಲ್ಲಾ ತಾಯಿ ನರ್ಮದೆಯ ಕೃಪೆ‌.

ನರ್ಮದಾಪುರಮ್ ಕಡೆ ಹೊರಟೆ…

ಈ ನಗರವನ್ನು ಮೊದಲು ನರ್ಮದಾಪುರ ಎಂದು ಕರೆಯಲಾಗುತ್ತಿತ್ತು, ನಂತರ ಮಾಲ್ವಾ ಸುಲ್ತಾನರ ಮೊದಲ ಆಡಳಿತಗಾರ “ಹೋಶಾಂಗ್ ಶಾ ಗೋರಿ” ನಂತರ ಹೆಸರನ್ನು ಹೋಶಂಗಾಬಾದ್ ಎಂದು ಬದಲಾಯಿಸಲಾಯಿತು . ನಗರವು ನರ್ಮದಾ ನದಿಯ ದಡದಲ್ಲಿರುವ ಸುಂದರವಾದ ಘಾಟ್‌ಗಳಿಗೆ ಹೆಸರುವಾಸಿಯಾಗಿದೆ, ಸೇಥನಿ ಘಾಟ್ ಪ್ರಮುಖ ಆಕರ್ಷಣೆಯಾಗಿದೆ.

ಮಾರ್ಚ್ 2021 ರಲ್ಲಿ ನಗರವನ್ನು ನರ್ಮದಾಪುರಂ ಎಂದು ಮರುನಾಮಕರಣ ಮಾಡಲಾಯಿತು. ಸಾಯಂಕಾಲದ ಹೊತ್ತಿಗೆ ಪವಿತ್ರ ನರ್ಮದೆಯ ನಗರ ನರ್ಮದಾಪುರಮ್’ಗೆ ಬಂದೆ‌.
ಸೇಥಾನಿ ಘಾಟ್’ನಲ್ಲಿನ ಪ್ರಾಚೀನ ನಾಗೇಶ್ವರ ಮಂದಿರ”ಕ್ಕೆ ಬಂದು ವಾಸ್ತವ್ಯ ಹೂಡಿದೆ.

ಅದೃಷ್ಟವಶಾತ್ ನನಗೆ ಮಲಗಲು ಕೊಟ್ಟ ಜಾಗ ದೇವಸ್ಥಾನದ ಮುಂಭಾಗ , ಕೂತರು ತಾಯಿ ನರ್ಮದೆಯ ಒಡಲು ಕಾಣುತ್ತೆ. ಕೇವಲ 15-18 ಮೆಟ್ಟಿಲು ಇಳಿದರೆ. ತಾಯಿ ಒಡಲಿಗೆ ಹೋಗಬಹುದು. ಇವಾಗ ಊಟ ಮುಗಿಸಿ, ಸೇಥಾನಿ ಘಾಟ್’ನಲ್ಲಿ ಕೂತಿರುವೆ‌. ತಣ್ಣನೆಯ ಗಾಳಿ ಸುಳಿಯಾಗಿ ಬಂದು ಮೈಗೆ ಅಪ್ಪುತ್ತಿದೆ. ನರ್ಮದೆಯ ಜಲ ನಿಶ್ಯಬ್ದವಾಗಿ ನಿಂತಂತೆ ಕಾಣಿಸುತ್ತದೆ ಆದರೆ ನಿತ್ಯ ಚಲನೆ ತಾಯಿ ನರ್ಮದೆಯ ಗುಣ. 2 ದಿನದಿಂದ ನರ್ಮದೆಯ ತಟ ಅಪರೂಪವಾಗಿತ್ತು, ಆದ್ದರಿಂದ ‘ಘಾಟ್’ನಲ್ಲಿ ತೃಪ್ತಿಯಾಗುವ ತನಕ ಕೂತಿರುವೆ.

ಬೆಳಿಗ್ಗೆ ಚಳಿ ಗಾಳಿ ಸುಯ್ಯನೆ ಬೀಸುತ್ತಿತ್ತು, ನರ್ಮದೆಯ ದಂಡೆಗೆ ಮಲಗಿದ್ದರಿಂದ ಚಳಿಯ ಸಲುವಾಗಿ 4 ಗಂಟೆಗೆ ಎಚ್ಚರವಾಯಿತು. ಎದ್ದವನೆ ಮೈ ತುಂಬಾ ರಗ್ಗು ಹೊದ್ದು ದಂಡೆಯಲ್ಲಿದ್ದ ಮೆಟ್ಟಿಲು ಮೇಲೆ ಕೂತೆ.

ಸುತ್ತಲೂ ಯಾರ ಓಡಾಟದ ಸುಳಿವು ಇರಲಿಲ್ಲ. ನದಿ ಅಲೆಗಳು ರಭಸದಿಂದ ದಂಡೆಗೆ ಅಪ್ಪಳಿಸುತ್ತಿದ್ದವು, ಶಾಂತವಾಗಿದ್ದ ನದಿ ಬೆಳಿಗ್ಗೆ ಲವಲವಿಕೆಯಿಂದ ಅಲೆಗಳನ್ನು ತೇಲಿಸುತ್ತಿತ್ತು. ಘಾಟ್’ನಲ್ಲಿ ದೊಡ್ಡ ದೊಡ್ಡ ಬಲ್ಬ್’ಗಳು ಬೆಳಕು ಬೀರುತ್ತಿದ್ದವು. ಅಲ್ಲಲ್ಲಿ ಮೆಲುಕು ಹಾಕುತ್ತಾ ಗೋವುಗಳು ಮಲಗಿದ್ದವು. ಶಾಂತ ವಾತಾವರಣ… ಹಾಗೇ ಕೂತವನಿಗೆ ಬೇರೆ ಜಗತ್ತಿಗೆ ಹೋದಂತಹ ಅನುಭವ.

5 ಗಂಟೆಯಾಗುತ್ತಿದ್ದಂತೆ ಬೆಳಗ್ಗಿನ ಪೂಜೆ, ಆರತಿ, ಮಂತ್ರ ಘೋಷಗಳು ಮೊಳಗಲು ಪ್ರಾರಂಭಿಸಿದವು. ಜನರು ನಿಧಾನಕ್ಕೆ ಸ್ನಾನಕ್ಕೆ ಬರತೊಡಗಿದರು. ನಾನು ಹಾಸಿಗೆ ಮಡಚಿಟ್ಟು.. ನದಿಯಲ್ಲಿ ಸ್ನಾನ ಮಾಡಿದೆ. ನದಿಯ ನೀರು ಬೆಚ್ಚಗಿದ್ದವು‌‌. ಆಮೇಲೆ ಪೂಜೆ. ಬೆಳಿಗ್ಗೆ 6 ಕ್ಕೆಲ್ಲ ಸಂಪೂರ್ಣ “ರೀಚಾರ್ಜ್” ಆದ ಅನುಭವ.

ನರ್ಮದಾಪುರಮ’ನಿಂದ ಜಿಲ್ಲಾ ಕೇಂದ್ರವಾದ “ಹರದಾ” ಕಡೆ ಪ್ರಯಾಣ ಶುರುಮಾಡಿದೆ. ಇಂದು ಇಬ್ಬನಿಯ ಸುಳಿವಿರಲಿಲ್ಲ. ಸೂರ್ಯ ಎಂದಿನಂತೆ ತನ್ನ ಕಾರ್ಯಕ್ಕೆ ಹಾಜರಾದ. “ಪುನಾಸಾ” ಡ್ಯಾಂ ಇದ್ದುದರಿಂದ ನದಿಯಿಂದ ದೂರಕ್ಕೆ ನಡೆಯುವುದು ಅನಿವಾರ್ಯವಾಗಿತ್ತು. ಸರಿ “ರಾಷ್ಟ್ರೀಯ ಹೆದ್ದಾರಿ” ಮೂಲಕ ನಂದಿ ಓಡತೊಡಗಿದ. ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ಬೃಹತ್ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸೈಕಲ್ ಓಡಿಸುವುದು ತುಂಬಾ ದುಸ್ತರ ರಸ್ತೆಗಳಿವು‌. ಲಾರಿಗಳು ಬಂದರಂತೂ ರಸ್ತೆ ಬಿಟ್ಟು ಕೆಳಗೆ ಇಳಿಯುವುದು ಅನಿವಾರ್ಯ.

ಸ್ವಲ್ಪ ದೂರ ಹೋದಮೇಲೆ.. ಕಾಡಿನಲ್ಲಿ ಹಾದುಹೋದ ರಸ್ತೆಗಿಳಿದೆ. ಅದೊಂತರ ನಿರ್ಜನ ಪ್ರದೇಶ. ಸ್ವಲ್ಪ ಶಾಂತವಾಗಿ ನಂದಿಯನ್ನು ಓಡಿಸಿದೆ. ರೋಚಕ ರಸ್ತೆಯಿದು. ಮಧ್ಯಾಹ್ನದ ಬಿಸಿಲಿನ ತಾಪಕ್ಕೆ “ಬಾಬರಿಯಾ ಬಾವು” ಎನ್ನುವ ಹಳ್ಳಿಯ ದೇವಸ್ಥಾನದಲ್ಲಿ ಕೂತಿದ್ದೆ.

‘ಬೈಕ್’ ನಲ್ಲಿ ಹೋಗುತ್ತಿದ್ದ ಊರಿನವರೊಬ್ಬರು ನನ್ನ ನೋಡಿದವರೆ ದೇವಸ್ಥಾನಕ್ಕೆ ಬಂದು, ನನ್ನ ಬಗ್ಗೆ ವಿಚಾರಿಸಿದವರೆ ತಮ್ಮ ಮನೆಗೆ ಹೋಗಿ ಊಟ ತಂದು ಕೊಟ್ಟರು. ನಾನೆಷ್ಟೇ ಬೇಡವೆಂದರೂ ಕೇಳದೆ ತಾವೆ ಊಟ ಬಡಿಸಿ ಹೊರಟು ಹೋದರು‌.

ನನಗೆ ಆಗ ಸಮಯಕ್ಕೆ ಹಸಿವಾಗಿದ್ದು ನಿಜ, ಊಟವನ್ನು ಮುಂದೆಲ್ಲಾದರೂ ಮಾಡೋಣ ಎಂದುಕೊಂಡು ದೇವಸ್ಥಾನದಲ್ಲಿ ಕೂತಾಗ ಊಟ ದಕ್ಕಿದ್ದು ಮಾತೆ ನರ್ಮದೆಯ ಕೃಪೆ.
ಸಾಯಂಕಾಲದ ಹೊತ್ತಿಗೆ ಹರದಾ ಎಂಬ ಜಿಲ್ಲಾ ಕೇಂದ್ರಕ್ಕೆ ಬಂದೆ. ರಸ್ತೆಯ ತುಂಬಾ ವಾಹನಗಳು ಇಕ್ಕಟ್ಟಾಗಿ ನಿಂತು.. “ಟ್ರಾಫಿಕ್ ಜಾಮ್” ಆಗಿತ್ತು‌. ಗದ್ದಲವು ಶುರುವಾಗಿತ್ತು.
ಕಾರಣ.‌.

“ಹರದಾ”ನಲ್ಲಿ ಪಟಾಕಿ ಫ್ಯಾಕ್ಟರಿಗೆ ಬೆಂಕಿ ಬಿದ್ದು, ಕೆಲಸ ಮಾಡುತ್ತಿದ್ದವರಲ್ಲಿ ಕೆಲವರು ಸುಟ್ಟು ಕರಕಲಾಗಿದ್ದರು, ಹಲವರು ಬೆಂಕಿಯಿಂದ ಸುಟ್ಟು ಆಸ್ಪತ್ರೆ ಸೇರಿದ್ದರು. ಸ್ಥಳ ವೀಕ್ಷಣೆಗೆ ಬಂದಂತಹ ರಾಜಕೀಯ ನಾಯಕರ ವಾಹನ ಅಡ್ಡಗಟ್ಟಿ ಧರಣಿ ಮಾಡಲಾಗುತ್ತಿತ್ತು.. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿಲಾಗುತ್ತಿತ್ತು. ವಿರೋಧ ಪಕ್ಷಗಳ ನಾಯಕರ ಕೂಗು ಆರ್ಭಟ ಜೋರಾಗಿಯೇ ಇತ್ತು.

ಗಲಿಬಿಲಿಯ ವಾತಾವರಣ..

ನಾನು ಅಲ್ಲಿಂದ ಬೇಗ ಬೇಗ “ಹರದಾ”ದಿಂದ ನಂದಿಯನ್ನು ನೂಕಿಕೊಂಡು ಹೊರಟೆ‌.‌ ಊರಿನ ಅಡ್ಡ ರಸ್ತೆಗಳನ್ನು ಬಳಸಿ, ಊರಿನಿಂದ ಹೊರಬಂದೆ. ಜನರ ರಸ್ತೆ ಪಾರು‌ ಮಾಡಲು ಸಹಾಯ ಮಾಡಿದರು. ಸುಮಾರು 10 ಕಿ. ಮೀ ಗಿಂತ ಹೆಚ್ಚು ಉದ್ದಕ್ಕೆ ವಾಹನಗಳು ನಿಂತಿದ್ದವು‌‌. ಹರದಾ” ದಾಟಿ 12 ಕಿ.ಮೀ ದೂರದ “ಕಾಂಕರಿಯಾ” ಎನ್ನುವ ಹಳ್ಳಿಗೆ ಬಂದೆ ಆವಾಗ ಸಮಯ ಸಂಜೆ 5:40.

ಸಂಜೆಯಾದ್ದರಿಂದ ಮಲಗಲು ದೇವಸ್ಥಾನ ಹುಡುಕಿಕೊಂಡು ಹೊರಟವನ ತಡೆದು…. ಊರಿನ ವ್ಯಕ್ತಿಯೊಬ್ಬರು.. ತಮ್ಮ ಮನೆಗೆ ಕರೆದುಕೊಂಡು ಬಂದು, ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಿಕೊಟ್ಟರು. ಎಲ್ಲವೂ ತಾಯಿ ನರ್ಮದೆಯ ಇಚ್ಛೆ.

ಮುಂದಿನ ಪಯಣ ನಾಳೆಗೆ

ನರ್ಮದೆ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading