ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೫)

“ಇಂದಿರಾ ಸಾಗರ ಡ್ಯಾಮ್” ಭಾರತದಲ್ಲಿಯೇ ಅತೀ ದೊಡ್ಠ ಡ್ಯಾಮ್. ಈ ಡ್ಯಾಮ್ ನಿರ್ಮಾಣ ಮಾಡಿದ್ದರಿಂದ, ತಾಯಿ ನರ್ಮದೆಯ ತಟ ಯಾರಿಗೂ ದೊರಕದು. ಆದ್ದರಿಂದ ಕಾಡು ಮೇಡು, ಹೈವೇ ಸುತ್ತಿಕೊಂಡು ಹೋಗುವುದು ಅನಿವಾರ್ಯ. ಇದೇ ಅನಿವಾರ್ಯದಿಂದಲೇ ಹೈವೇ ಹಿಡಿದಿದ್ದು. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಬೆಳಿಗ್ಗೆ ಚಳಿ ಸ್ವಲ್ಪ ಕಡಿಮೆ ಇದ್ದರೆ ಸಾಕು, ಪರಿಕ್ರಮವಾಸಿಗಳ ಕಾರ್ಯಗಳು ಗರಿಗೆದರುತ್ತವೆ. ಸ್ನಾನಕ್ಕೆ ಓಡುವ ಧಾವಂತ, ಪೂಜೆ ಮಾಡುವಾಗ ಗಿಲಿಬಿಲಿ, ತಾ ಮುಂದು ನೀ ಮುಂದು ಎಂದು ಕತ್ತಲಿನಲ್ಲಿಯೆ ಮುಂದಿನ ಪಯಣದ ಹಾದಿ ಹಿಡಿಯುವುದು. ನನಗೆ ಸೈಕಲ್ ಇರುವುದರಿಂದ ಪಾದಯಾತ್ರಿಗಳ ಗದ್ದಲ ಶಾಂತವಾದಂತೆ, ನಾನು ಆರಾಮಾಗಿ ನನ್ನ ಕೆಲಸ ಮುಗಿಸಿಕೊಂಡು ಚೂರು ಬೆಳಕು ಮೈಮೇಲೆ ಎಳೆದುಕೊಂಡು ಹೊರಡುವೆ‌.

ನಂದಿಯನ್ನು ಓಡಿಸಲು ಶುರುಮಾಡಿ ಕೇವಲ 3 ಕಿ.ಮೀ ಅಂತರದೊಳಗೆ ಪಾದಯಾತ್ರಿಗಳನ್ನು ಹಿಂದೆ ನೂಕಿ ರಭಸದಿಂದ ಮುಂದೋಡುವುದು ನನ್ನ ಚಾಳಿ. ಇಂದು ಆಗಿದ್ದು ಅದೆ….
ಬೆಳಿಗ್ಗೆ 6:30 ಕ್ಕೆಲ್ಲ ನಂದಿಯನ್ನು ರಸ್ತೆಗಿಳಿಸಿದೆ, ಪಟೇಲ್ ಮೆಡಿಕಲ್’ನವರು ಚಹಾ ಕೊಟ್ಟರು. ಹಾಲು ಹಾಕದೆ ಮಾಡಿದ ಕಪ್ಪು ಚಹಾ. ಇದು ಮಧ್ಯಪ್ರದೇಶದಲ್ಲಿ ಹೆಚ್ಚು ಬಳಸುವ ಚಹಾ. ಅದನ್ನೆ ಹೀರಿ ಹೊರಟೆ.

2 ಕಿ. ಮೀ ಸಾಗಿದ್ದ ಪಾದಯಾತ್ರಿಗಳನ್ನು ಹಿಂದಿಕ್ಕಿ ನಂದಿ ಓಡಿದ. ಚಳಿಯಿಂದ ಕೈ ಕಾಲ್ಬೇರಳು ಜೋಮು ಹಿಡಿದ ಅನುಭವ ಶುರುವಾಯಿತು. ಆದರೂ ಬಿಸಿಲನ್ನು ಬಯಸಿ ಮುಂದುವರೆದೆ. ಬಿಸಿಲಿನ ತೀವ್ರತೆ ಹೆಚ್ಚಾದಂತೆ ಜೋಮು ಮಾಯವಾಯಿತು‌.

ಇದು ಕಚ್ಚಾ ರಸ್ತೆಯಲ್ಲ ಆದರೆ ಅದರಂತೆ ಇರುವ ಹುರುಕು ರಸ್ತೆ, ಅಲ್ಲಲ್ಲಿ ಮೊದಲ ಮಳೆಗೆ ಕಿತ್ತೋಗಿ ವರ್ಷವಾಯಿತು, ಗುಂಡಿಗಳಿಗೆ ಡಾಂಬರು ಸುರುವಿ ತೇಪೆ ಕಾರ್ಯ ಮಾಡಿದ್ದು ಅರ್ಧಂಬರ್ಧ. ಇಂತಹ ರಸ್ತೆಯಲ್ಲಿ ನಾವೆಷ್ಟೇ ತುಳಿದರೂ ಸೈಕಲ್ ಓಡುವ ವೇಗ ಕಡಿಮೆಯೇ.

“ಭೀಲಾಯಿ” ಊರು ಬಿಟ್ಟು ದೂರ ದೂರ ಹೋದರು ಏರು ರಸ್ತೆಗಳು.. ಕಾಡು.. ನಡುವೆ ಕಾಣುವ ಚಿಕ್ಕ ಚಿಕ್ಕ ಊರುಗಳು. ಅಪರೂಪಕ್ಕೆ ಓಡೋಡಿ ಬರುವ ದೊಡ್ಡ ವಾಹನಗಳು.
“ಭೀಲಾಯಿ”ಯಿಂದ 22 ಕಿ.ಮೀ ದೂರದ ಹಳ್ಳಿಯೊಂದರನ್ನು ಪಾರು ಮಾಡಿ ಓಡುತ್ತಿದ್ದವನನ್ನು.. ಒಬ್ಬ ವ್ಯಕ್ತಿ ಮನೆಯೊಳಗಿಂದ ಹೊರಗೆ ಬಂದು ನನ್ನ ತಡೆದು ನಿಲ್ಲಿಸಿದ.
“ಪ್ರಭು.. ಬನ್ನಿ ಉಪಹಾರ ಸೇವಿಸಿ” ಎಂದ.

ತಿರಸ್ಕಾರ ಮಾಡದೆ ಅವರ ಮನೆಗೆ ಹೋದರೆ.. ಆಲೂ ಬೋಂಡಾ, ಚಹಾ ಕೊಟ್ಟು ಸತ್ಕರಿಸಿದರು. ಅಮರಕಂಟಕ್’ನಿಂದ ಜಬಲ್ಪುರ್ ಹೋಗುವ ದಾರಿ ಬೃಹತ್ ಕಾಡು, ಬೆಟ್ಟ, ಚಿಕ್ಕಪುಟ್ಟ ಹಳ್ಳಿಗಳನ್ನು ಹೊಂದಿರುವುದರಿಂದ ಆಶ್ರಮಗಳು, ದೊಡ್ಡ ದೇವಸ್ಥಾನಗಳು ಕಡಿಮೆಯೆ. ಹೀಗಾಗಿ ಇಲ್ಲಿ “ಗೃಹಸ್ಥ ಸೇವಾ” ಜಾಸ್ತಿ. ಅಂದರೆ ಜನರು ತಮ್ಮ ತಮ್ಮ ಮನೆಗೆ ಅವರ ಶಕ್ತ್ಯಾನುಸಾರ ಪರಿಕ್ರಮವಾಸಿಗಳನ್ನು ಕರೆದು ಸತ್ಕರಿಸುವ ಸಂಸ್ಕೃತಿ.

ಉಪಹಾರ ಸೇವಿಸಿ.. ಒಂದು ಬೃಹತ್ ಕಾಡನ್ನು ದಾಟುವತ್ತ ಹೊರಟೆ. ಇಲ್ಲಿ ಘಾಟ್ ಪ್ರಾರಂಭವಾದರೆ ಮುಗೀತು‌. ಮೈಕೈ ನೋವು ಪಕ್ಕಾ. ಇಂದು ಆಗಿದ್ದು ಅದೇ‌. “ಭೀಲಾಯಿ”ಯಿಂದ “ಲಖನದೌನ್” ಊರಿನವರೆಗೂ ಕಿತ್ತೋದ ರಸ್ತೆ ಮತ್ತು ಘಾಟ್ ನನ್ನ ಮತ್ತು ನಂದಿಯನ್ನು ಹುರಿದು ಮುಕ್ಕಿದವು.

ಲಖನ ದೌನ್’ನ ರಾಮ ಮಂದಿರದಲ್ಲಿ ಊಟಕ್ಕೆ ಹೋದೆ. ಉರಿಬಿಸಿಲು ಕಾಯುತ್ತಿತ್ತು. ಅಲ್ಲಿ ಮಜ್ಜಿಗೆ ಸಾರಿನ ಜೊತೆಗಿನ ಊಟ ಮಾಡಿ.. ಹಾಗೇ ವಿಶ್ರಮಿಸುವ ಅಂತ ಮಲಗಿದರೆ.. ನಿದ್ದೆ ಎಳೆದೊಯ್ದಿತ್ತು. ಫೋನ್ ರಿಂಗಣಿಸಿದಾಗ ದಡ್ಡ್ ಅಂತ್ ಎಚ್ಚರವಾಯಿತು. ಸಮಯ ನೋಡಿದರೆ ಸರಿ ಸುಮಾರು ಒಂದು ತಾಸು ನಿದ್ರೆ ಮಾಡಿದ್ದೆ. ಮುಖ ತೊಳೆದುಕೊಂಡವನೆ.. ನಂದಿಯನ್ನು ಜಬಲ್ಪುರದ ಕಡೆ ನಡೆಸತೊಡಗಿದೆ.

ಇಲ್ಲಿ NH 44 ಮೂಲಕ “ಜಬಲ್ಪುರ” ಕಡೆ ಹೊರಟೆ. ಸುತ್ತಲೂ ಕಾಂಕ್ರೀಟ್ ಕಾಡು, ಹಳ್ಳಿಗಳನ್ನು ಬಗೆದು ಹೈವೇ ನಿರ್ಮಿಸಿದ್ದಾರೆ. ರಸ್ತೆ ಯಂತೂ ಹಾವಿನ ಮೇಲ್ಮೈಯಂತೆ ನುಣುಪು‌. ನಂದಿಯ ನಾಗಾಲೋಟಕ್ಕೆ ಹೇಳಿ ಮಾಡಿಸಿದಂತ ರಸ್ತೆ. ಹೈವೇ ಮಧ್ಯ ಕಾಡು ಹತ್ತಿದರೂ.. ವನ್ಯಪ್ರಾಣಿಗಳು ನಾಪತ್ತೆ. ಹೊಗೆ ಉಗುಳಿಕೊಂಡು ಓಡುವ ಬೃಹತ್ ವಾಹನಗಳದ್ದೆ ಕಾರುಬಾರು.

ನರ್ಮದಾ ನದಿಗೆ ಒಟ್ಟು ಕಟ್ಟಲಾದ ಡ್ಯಾಮ್’ಗಳ ಸಂಖ್ಯೆ 30‌.

“ಇಂದಿರಾ ಸಾಗರ ಡ್ಯಾಮ್” ಭಾರತದಲ್ಲಿಯೇ ಅತೀ ದೊಡ್ಠ ಡ್ಯಾಮ್. ಈ ಡ್ಯಾಮ್ ನಿರ್ಮಾಣ ಮಾಡಿದ್ದರಿಂದ, ತಾಯಿ ನರ್ಮದೆಯ ತಟ ಯಾರಿಗೂ ದೊರಕದು. ಆದ್ದರಿಂದ ಕಾಡು ಮೇಡು, ಹೈವೇ ಸುತ್ತಿಕೊಂಡು ಹೋಗುವುದು ಅನಿವಾರ್ಯ. ಇದೇ ಅನಿವಾರ್ಯದಿಂದಲೇ ಹೈವೇ ಹಿಡಿದಿದ್ದು. ಇಂದು ಒಟ್ಟು ಕ್ರಮಿಸಿದ ದೂರ 118 ಕಿ.ಮೀ‌ ತಾಯಿ ನರ್ಮದೆಯ ದರ್ಶನ ಇಲ್ಲವೆಂದಮೇಲೆ ಓಡುವುದೊಂದೆ ಕೆಲಸ.. ಅವಳ ನೆನೆಯುತ್ತಾ‌.

ಸಾಯಂಕಾಲದ ಸಮಯಕ್ಕೆ “ನರಸಿಂಗಪುರ” ಜಿಲ್ಲೆಯ “ಡೊಕರಘಾಟ್” ಊರಿಗೆ ಬಂದೆ, ಇಲ್ಲಿನ ಪ್ರಾಚೀನ ಮಂದಿರ “ಶ್ರೀ ದುಲ್ಹಾದೇವ ಮಹಾರಾಜ”ರ ದೇವಸ್ಥಾನಕ್ಕೆ ಬಂದೆ. ಇದೊಂದು ಜಾಗೃತ ಸ್ಥಳವಾಗಿದ್ದು. ಹೈವೇ ನಿರ್ಮಾಣ ಮಾಡುವಾಗ ಈ ಮಂದಿರದ ಗರ್ಭಗುಡಿಯನ್ನು ಸಂಪೂರ್ಣ ಅಗೆಯಲಾಗಲಿಲ್ಲವಂತೆ, ಜೆಸಿಬಿಗಳೆ ಕೆಟ್ಟು ನಿಂತಿದ್ದರಿಂದ. ಮುಂದಿನ ಕಾರ್ಯ ಸ್ಥಗಿತಗೊಳಿಸಿ. ಹೈವೆಯನ್ನೆ ಎತ್ತರಕ್ಕೆ ಏರಿಸಿ ಮಂದಿರವನ್ನು ಯಥಾವತ್ತು ಇರಿಸಲಾಗಿದೆ‌.

ಇಂದಿನ ತಂಗುದಾಣ “ಡೊಕರಘಾಟ್’ನ ಶ್ರೀ ದುಲ್ಹಾದೇವ ಮಹಾರಾಜ ದೇವಸ್ಥಾನ.

ಮಾತೆ ನರ್ಮದೆಯಿಂದ ಬಹು ದೂರಕ್ಕೆ ಪಯಣಿಸುವುದು ಇನ್ನೂ ಜಾರಿಯಲ್ಲಿದೆ ಕಾರಣ ಡ್ಯಾಮ್. ಇನ್ನೂ 150 ಕಿ.ಮಿ ಆದರೂ ನಡೆಯಬೇಕು ಆವಾಗಲೆ ಡ್ಯಾಂ ಪರಿಧಿಯನ್ನು ಮೀರಿ, ನದಿಯ ದಡಕ್ಕೆ ಹೋಗಬಹುದು… ಮುಂದೊಂದು ಡ್ಯಾಮ್ ಸಿಗುವ ಮೊದಲೆ.

ಬೆಳಿಗ್ಗೆ ಸಂಪೂರ್ಣ ಕತ್ತಲು ಸರಿದು ಬೆಳಕು ಇನ್ನೇನೂ ಬೀಳಬೇಕು ಅನ್ನುವಷ್ಟರಲ್ಲಿ ನಂದಿಯನ್ನು ರಸ್ತೆಗಿಳಿಸಿದ್ದೆ. ಜಿಲ್ಲಾ ಕೇಂದ್ರವಾದ “ನರಸಿಂಹಪುರ”(ನರಸಿಂಗಪುರ)ದವರೆಗೂ ಹೈವೇ ಇದ್ದುದರಿಂದ ನಂದಿಯ ವೇಗ ಹೆಚ್ಚಿಸಿಕೊಂಡು ಓಡುತ್ತಿದ್ದ ಆದರೆ ನರಸಿಂಗಪುರ ದಾಟಿ “ಪಿಪರಿಯಾ” ಕಡೆ ಹೋಗುವ ರಸ್ತೆಗಿಳಿದಾಗ ವೇಗ ತನ್ನಿಂದ ತಾನೇ ತಗ್ಗಿ ಹೋಯಿತು ಏಕೇಂದರೆ ರಸ್ತೆ ಹಾಗಿದೆ.

ಜಿಲ್ಲೆಯಾದರೂ ರಸ್ತೆಗಳು ಇಕ್ಕಟ್ಟಾಗಿವೆ, ರಸ್ತೆಗಳ ಗುಣಮಟ್ಟ ತೀರಾ ಕಳಪೆ. ನರಸಿಂಗಪುರದಿಂದ ಪಿಪರಿಯಾ ಕಡೆಗಿನ ಮಾರ್ಗದಲ್ಲಿ ಕೇವಲ 45 ಕಿ.ಮೀ ಅಂತರದಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ. ಇನ್ನೂ ಬೆಲ್ಲದ ಗಾಣಗಳು ತುಂಬಾ ಇವೆ. ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು ರಸ್ತೆ ಪಕ್ಕ ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಂತಿವೆ, ಕಬ್ಬು ಹೊತ್ತು ಬರುವ ಲಾರಿಗಳಿಗಂತೂ ಪುರಸೋತ್ತಿರಲಿಲ್ಲ.

ಇನ್ನೂ…

ಚಕ್ಕಡಿಗಳನ್ನು ಏರ್ರಾಬಿರ್ರಿ ತುಂಬಿಕೊಂಡು ಬೆಲ್ಲದ ಗಾಣಗಳಿಗೆ ಕಬ್ಬು ಸಾಗಿಸುವುದು ಇನ್ನೊಂದು ಸಾಹಸ. 10 ಕಿ.ಮೀ ಗಟ್ಟಲೆ ಟ್ರ್ಯಾಕ್ಟರ್’ಗಳು ಸಾಲುಗಟ್ಟಿದ್ದವು. ಲಾರಿ, ಟ್ರ್ಯಾಕ್ಟರ್, ಚಕ್ಕಡಿ, ಬಸ್ಸು ಇವುಗಳ ಚಲನೆ ವಿಪರೀತ ಇದ್ದುದರಿಂದ ರಸ್ತೆಯ ತುಂಬಾ ಧೂಳು. ಕಿ.ಮೀ ಗಟ್ಟಲೆ “ಸಾಲುಗಟ್ಟಿ”ಟ್ರಾಫಿಕ್ ಜಾಮ್” ಆಗುತ್ತಿದ್ದದು ಇಲ್ಲಿ ಸಹಜ. ಎಲ್ಲವನ್ನೂ ದಾಟಿ, ನುಗ್ಗಿ ಸಾಗುವುದು ಸಾಹಹವೆ ಸರಿ.

This slideshow requires JavaScript.

 

ಒಂದು ಬೆಲ್ಲದ ಗಾಣಕ್ಕೆ ಹೊಕ್ಕು ಸ್ವಲ್ಪ ಹೊತ್ತು ಅಲ್ಲಿಯೇ ಕೂತಿದ್ದೆ. ಆಲೆಮನೆಯ ಘಮ ಇನ್ನೂ ನೆನಪಿದೆ. ಬಿಸಿ ಬಿಸಿಯಾಗಿ ತಯಾರಾಗುವ ಬೆಲ್ಲದ ರುಚಿ ಸ್ವಾದಿಷ್ಟ. ಬೆಲ್ಲದ ಗಾಣಕ್ಕೆ ಹೋಗಿ ಬೆಲ್ಲ ಖರೀದಿಸಿದರೆ ಉತ್ತಮ… ಅದು ಶುದ್ಧವಾಗಿರುತ್ತೆ. ಇನ್ನೂ ಕಲಬೆರಕೆ ಆಗುವ ಮೊದಲ ರುಚಿಯೇ ಬೇರೆ.

ಬೆಲ್ಲದ ಗಾಣದಲ್ಲಿ ಕೂತು, ಬೆಲ್ಲ ತಿಂದು ಹೊರಟೆ. ಮಧ್ಯಾಹ್ನದ ಬಿರು ಬಿಸಿಲಿನ ಧಗೆಗೆ ಸೈಕಲ್ ಓಡಿಸುವುದು ದುಸ್ತರ. ಇಲ್ಲಿನ ಬಿಸಿಲಿನ ತೀವ್ರತೆಗೆ ರಸ್ತೆಯ ಬಿಸಿ ಹೊಗೆ ಉಗುಳುತ್ತಿರುತ್ತೆ.
ಮೈ ಚರ್ಮ ಚುರುಗುಟ್ಟಿಸುವ ಬಿಸಿಯಿದು. ಆದ್ದರಿಂದ.

“ಗಡಾರವಾರ”ದ “ಶನಿ ಮಂದಿರ”ದಲ್ಲಿ ಭೋಜನ ಮುಗಿಸಿ, ಬಿಸಿಲು ಇಳಿಮುಖ ಆಗುವವರೆಗೆ ದೇವಸ್ಥಾನದಲ್ಲಿದ್ದು ಆಮೇಲೆ ಹೊರಟೆ. ಮತ್ತದೆ ರಸ್ತೆ. ಸಾಯಂಕಾಲದ ಸಮಯಕ್ಕೆ “ನರಸಿಂಗಪುರ ಜಿಲ್ಲೆಯ” “ಬನಖೇಡಿ” ಊರಿಗೆ ಬಂದೆ.. ಅಲ್ಲಿನ ದುರ್ಗಾ ಮಾತಾ ಮಂದಿರದಲ್ಲಿ ಉಳಿದುಕೊಂಡಿರುವೆ.

ಮುಂದಿನ ಪಯಣ ನಾಳೆಗೆ..

ನರ್ಮದೇ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading