ಮನಸ್ಸಿನ ಪಿಸುಮಾತು – (ಭಾಗ-೪)

ರಕ್ತಸಿಕ್ತವಾದ ಅನೇಕ ಯುದ್ಧಗಳ ಎದುರಿಸಿ, ನೋವುಗಳನ್ನು ಸಹಿಸಿಕೊಂಡು ಹೋರಾಡಿ ಸಾಧನೆಯ ಶಿಖರವನ್ನು ಏರಿ ಜಯಶಾಲಿಗಳಾಗಿ ಬಾಳಿ ಬದುಕಿ ಚರಿತ್ರೆ ನಿರ್ಮಿಸುತ್ತಿದ್ದ ಚರಿತ್ರೆಯ ಹಿನ್ನೆಲೆಯುಳ್ಳ ಮನುಷ್ಯರ ಜನ್ಮ ನಮ್ಮದು. ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…

ಹಿಂದಿನ ಕಾಲದಲ್ಲಿ ಸಾಧನೆ ಮಾಡಲು ಬೇಕಾದ ಯೋಗ್ಯತೆಯನ್ನು ಬುದ್ಧಿವಂತಿಕೆ, ದೈಹಿಕ ಕ್ಷಮತೆ ಹಾಗು ಗುಣ ನಡತೆಗಳ ಆಧಾರದ ಮೇಲೆ ಅರ್ಹತೆ ಸಂಪಾದಿಸುವಂತಿತ್ತು. ಅನೇಕ ಯುದ್ಧಗಳು ಇದನ್ನು ಸಾಬೀತುಪಡಿಸಿಕೊಂಡೇ ನಿರ್ಧಾರವಾಗುತ್ತಿತ್ತು. ಯೋಗ್ಯತೆಯ ಅನುಸಾರವಾಗಿ ಸೋಲು ಗೆಲುವುಗಳು ನಿರ್ಧಾರವಾಗುತ್ತಿದ್ದವು.

ಕಾಲ ಕಳೆದಂತೆ ಯುದ್ಧಗಳ ಬದಲು, ರಕ್ತದೋಕುಳಿ ಹರಿಸಿ ಗೆಲ್ಲುವು – ಸೋಲುಗಳು ನಿರ್ಧಾರವಾಗುವುದು ಬೇಡವೆಂದು ಶರಣಾಗಿ, ಸಾಮಂತರಾಗಿ ಉಳಿದು, ಕಪ್ಪುಕಾಣಿಕೆಗಳನ್ನು ಅರ್ಪಿಸಿ ಬೆಳೆದ ರಾಜ ವಂಶಸ್ಥರ ಅನೇಕ ಕಥೆಗಳು ನಮಗೆ ತಿಳಿದೇ ಇರುತ್ತದೆ.

ಆಗಿನ ಆ ಶರಣಾಗತಿ ಪರಂಪರೆ ಇಂದಿನ ಕಾಲದಲ್ಲಿ ಹಣವನ್ನು ಹೊಂದಿದ್ದರೆ ಸಾಕು ಅವನೇ ಈ ಪ್ರಪಂಚದಲ್ಲಿ ರಾಜ ಅನ್ನುವ ಮಟ್ಟಕ್ಕೆ ಬಂದು ನಿಂತಿದೆ. ಇಂದು ಬುದ್ದಿವಂತಿಕೆ, ದೈಹಿಕ ಕ್ಷಮತೆ ಹಾಗು ಗುಣ ನಡತೆಗಳು ಹೇಗೆ ಇದ್ದರೂ ಸರಿ ಹಣವೊಂದಿದ್ದರೆ ಸಾಕು. ಅವನೇ ಉತ್ತಮನು ಹಾಗು ಸಮಾಜದಲ್ಲಿ ಅವನು ಎಷ್ಟೇ ಕೆಟ್ಟವನಾದರೂ ಅವುಗಳೆಲ್ಲ ಲೆಕ್ಕಕ್ಕೆ ಬಾರದ ಹಾಗೆ ಮಾಡಿ ತಾನು ಸರ್ವೋತ್ತಮನಾಗಿ ಪರಿಗಣಿಸಲ್ಪಡುತ್ತಾನೆ.

ಹಣವಿಲ್ಲದವ ತೃಣಕ್ಕೆ ಸಮಾನ ಅನ್ನುವ ಹಾಗೆ ಕೈಯಲ್ಲಿ ಹಣವಿಲ್ಲದೆ ಎಷ್ಟೇ ನ್ಯಾಯ – ನೀತಿ, ಧರ್ಮ – ಸಂಸ್ಕಾರಗಳನ್ನು ಹೊಂದಿದ್ದರೂ, ಪಾಲಿಸಿಕೊಂಡು ಹೋದರೂ ಅದು ಈ ಪ್ರಪಂಚದ ದೃಷ್ಟಿಗೆ ಬೀಳಲ್ಲ ಬಿದ್ದರೂ ಬೆಳಕಿಗೆ ಬರಲ್ಲ. ಬಂದರೂ ಅಲ್ಲೊಬ್ಬರು ಇಲ್ಲೊಬ್ಬರು ಅನ್ನುವ ಹಾಗೆ ಅಷ್ಟೇ. ಯಾಕೆಂದರೆ ಇಂದಿನ ಕಾಲದಲ್ಲಿ ಒಳ್ಳೆಯದನ್ನು ಅಳೆಯುವ ಅಳತೆಗೊಲು ಅನ್ನೋದು ಕೇವಲ ನಮ್ಮಲ್ಲಿನ ಹೇರಳವಾದ ಹಣದಿಂದ ಮಾತ್ರ.

ಪ್ರತಿಯೊಂದು ಲೆಕ್ಕಾಚಾರವೂ ಹಣದ ಮೇಲೆಯೇ ಸಾಗುವ ಕಾಲವಿದು. ನಮ್ಮೊಂದಿಗೆ ಎಂತಹ ಗುಣ – ವ್ಯಕ್ತಿತ್ವವುಳ್ಳ ಆತ್ಮೀಯರು ಇದ್ದಾರೆ ಅನ್ನುವುದಕ್ಕಿಂತ, ನಮ್ಮೊಂದಿಗೆ ನಮಗೆ ಬೇಕಾದುದನ್ನು ಕೊಡಿಸುವ, ಬೇಕಾದ ಕಡೆ ಕರೆದೊಯ್ಯುವ, ನಮಗಾಗಿ ಹಣವನ್ನು ವ್ಯಯಿಸುವವರು ಯಾರಿದ್ದಾರೆ ಅಂತ ಆಲೋಚಿಸುವ ಕಾಲದಲ್ಲಿ ನಾವಿದ್ದೇವೆ. ನಮ್ಮ ಮೇಲೆ ಯಾಕೆ ವ್ಯಯಿಸುತ್ತಾರೆ, ಯಾವ ಕಾರಣಕ್ಕಾಗಿ ಅಥವಾ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಯಾವ ಮಟ್ಟಕ್ಕೆ ಎದುರಿಸಬೇಕಾಗಬಹುದು ಅಂತ ಸ್ವಲ್ಪವೂ ಆಲೋಚಿಸದೆ ಮುನ್ನುಗ್ಗುವ ಕುರುಡಾದ ಬದುಕು ನಮ್ಮದಾಗಿದೆ.

ಎಲ್ಲದಕ್ಕೂ ಒಂದು ಇತಿ – ಮಿತಿ ಇರಲೇಬೇಕು ಅಂತ ಯಾರು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅದು ಎಷ್ಟು ನಿಜ ಅನ್ನೋದು ಸ್ವಂತ ಅನುಭವಕ್ಕೆ ಬರುವವರೆಗೂ ಯಾರಿಗೆ ಎಷ್ಟೇ ಹೇಳಿದರೂ ಪ್ರಯೋಜನವಿಲ್ಲ. ಕಣ್ಣಿಗೆ ಕಾಣುವುದೆಲ್ಲ ಒಳ್ಳೆಯದಾಗಿಯೇ ಇರುತ್ತೆ ಆದರೆ ಎಲ್ಲಾ ಕಾಲಕ್ಕೂ ಅದು ಹಾಗೆಯೇ ಉಳಿಯುತ್ತೆ ಅಂತ ಹೇಳಲಿಕ್ಕಾಗದು. ಇತಿ – ಮಿತಿಯಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ತೋರಿದ ಅಕ್ಕರೆ, ಕಾಳಜಿ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಸಿಗಲ್ಲ. ಇತಿ – ಮಿತಿ ಇಲ್ಲದೆ ಹಣ ವ್ಯಯಿಸುವ ಜನರಿಗೆ ಎಲ್ಲಿಲ್ಲದ ಗೌರವಾದರಗಳು ಸಿಗುತ್ತವೆ,
ಇದುವೇ ಇಂದಿನ ಪ್ರಪಂಚದಲ್ಲಿ ಒಪ್ಪಲೇಬೇಕಾದ ಸತ್ಯ ಹಾಗು ಬದುಕಲು ತಿಳಿಯಲೇಬೇಕಾದ ಲೆಕ್ಕಾಚಾರ….

ಹಿಂದಿನ ಸಂಚಿಕೆಗಳು :


  • ಚಂದನ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading