ಸುತ್ತ ನಾವು ಆಸೆಯ ಬಲೆಗಳನ್ನು ಕಟ್ಟಿಕೊಂಡು ಹೊರಬರಲಾಗದೆ ಬಲೆಗೆ ಸಿಲುಕಿದ ಮೀನಿನಂತೆ ವ್ಯರ್ಥ ಒದ್ದಾಟದಲ್ಲಿ ನಮ್ಮ ಬದುಕಿನ ಸಹಜ ಸುಖ ಸಂತೋಷಗಳಿಗೆ ಎರವಾಗಿ ಬಿಡುತ್ತೇವೆ.ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಸಾವಿಲ್ಲದ ಮನೆಯ ಸಾಸಿವೆ” ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
‘ಸಾವಿಲ್ಲದ ಮನೆಯ ಸಾಸಿವೆ’ ಕಿಸಾಗೋತಮಿ ನಾಟಕ… ಅದರ ಗೀತ ರೂಪಕವನ್ನು ನಮ್ಮ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಂದ ಶಾಲಾ ವಾರ್ಷಿಕೋತ್ಸವಕ್ಕಾಗಿ ರಂಗದ ಮೇಲೆ ಪ್ರಯೋಗಿಸಿದ್ದೆವು.
ಶಿವರಾಮ ಕಾರಂತರ ಆ ನಾಟಕವನ್ನು ನಮ್ಮ ವಿದ್ಯಾರ್ಥಿನಿಯರು ಬಹಳ ಹೃದಯಸ್ಪರ್ಶಿಯಾಗಿ ಅಭಿನಯಿಸಿದ್ದರು.ನಾನು ಮತ್ತು ನನ್ನ ಸಹೋದ್ಯೋಗಿ ಗೆಳತಿಯೊಬ್ಬಳು ಕಂಠದಾನ ನೀಡಿದ್ದೆವು. ಪ್ರೇಕ್ಷಕರೆಲ್ಲರೂ ಮೂಕರಾಗಿದ್ದರು. ಸ್ವತ: ನಮ್ಮ ಕಂಬನಿಯನ್ನೂ ನಿಯಂತ್ರಿಸಿಕೊಳ್ಳಲಾಗಲಿಲ್ಲ ಅಂದು!

*
‘ಜಾತಸ್ಯ ಮರಣಂ ಧ್ರುವಂ’ ಎಂಬ ಮಾತಿದೆ.’ ಹುಟ್ಟಿದವನಿಗೆ ಮರಣ ತಪ್ಪದು’ ಎಂಬಂತೆ ಕ್ಷಣ ಕ್ಷಣವೂ ಮರಣ ಮುಖಿಗಳಾಗುತ್ತಿರುವ ನಾವು ಶಾಶ್ವತತೆಯ ಭ್ರಮೆಯಲ್ಲಿಯೇ ಬದುಕಿ ಬಿಡುತ್ತೇವೆ. ಒಂದು ಕ್ಷಣವಾದರೂ ಬದುಕಿನ ಅನಿಶ್ಚಿತತೆಯ ಬಗ್ಗೆ ಈ ಬುದ್ಧಿಜೀವಿ ಮಾನವ ಚಿಂತಿಸಿದ್ದರೆ….ಆ ಅನಂತದಾಹದಿಂದ ಹೊರಗುಳಿದು ಸಹಜೀವಿಗಳನ್ನು ಪ್ರೀತಿ,ಕರುಣೆ, ವಾತ್ಸಲ್ಯದಿಂದ ನೋಡುತ್ತಿದ್ದನೇನೊ .ಆದರೆ ಬಸವಣ್ಣನವರ ವಚನ ‘ಹಬ್ಬಕ್ಕೆ ತಂದ ಹರಕೆಯ ಕುರಿ ಬಾಗಿಲಿಗೆ ಕಟ್ಟಿದ ತೋರಣವ ಮೇಯ್ದಿತ್ತು ನೋಡಾ….’ ಎಂಬ ವಿಡಂಬನೆಗೆ ಮಾನವರಾದ ನಾವು ಹೊರತಾಗಿಲ್ಲಗಿರುವುದು ಒಂದು ಮೌಢ್ಯವೋ,ಬದುಕಿನ ವ್ಯಂಗ್ಯವೋ ನಾವೇ ನಿರ್ಧರಿಸಿ ಕೊಳ್ಳಬೇಕಿದೆ.
ತೋರಣದ ಹಸಿರನ್ನು ಅದು ತನ್ನ ಒಡಲ ಪೋಷಣೆಗಾಗಿ ಮೆಲ್ಲುತ್ತಿದೆ. ಆದರೆ ಅದನ್ನು ತಂದಿರುವುದು ಹಾರೈಕೆಗೆ ಬಲಿಕೊಡಲಿಕ್ಕಾಗಿಯೇ…ಹಾಗೆಯೇ ನಾವೂ ಸಹ…ಹೊಂಚು ಹಾಕುತ್ತಿರುವ ಸಾವಿನ ನೆರಳಲ್ಲಿ ಜೀವಿಸುತ್ತಿರುವ ಅಮಾಯಕತೆ.
ಒಡಲು ಸಾವಿನ ಹೊಲವೇ ಆಗಿರುವಾಗ, ದಿನದಿನವೂ ಸಾವು ಅದನ್ನು ಮೇಯುತ್ತಾ ಸಾಗಿರುವುದನ್ನು ನಾವು ನಮ್ಮಬದುಕಿನ ಸ್ಥಿತ್ಯಂತರಗಳಲ್ಲಿ ಅನುಭವಿಸುತ್ತಲೇ ಸಾಗಿರುವಾಗಲೇ ಇದರ ಸುತ್ತ ನಾವು ಆಸೆಯ ಬಲೆಗಳನ್ನು ಕಟ್ಟಿಕೊಂಡು ಹೊರಬರಲಾಗದೆ ಬಲೆಗೆ ಸಿಲುಕಿದ ಮೀನಿನಂತೆ ವ್ಯರ್ಥ ಒದ್ದಾಟದಲ್ಲಿ ನಮ್ಮ ಬದುಕಿನ ಸಹಜ ಸುಖಸಂತೋಷಗಳಿಗೆ ಎರವಾಗಿ ಬಿಡುತ್ತೇವೆ. ಸೌಂದರ್ಯದ ಸೆಲೆಯಾದ ಭೂಮಿಯ ರಮ್ಯ ದೃಶ್ಯಗಳಿಗೆ ಕುರುಡಾಗಿ ಬಿಡುತ್ತೇವೆ.ಕಣ್ಣಿಗೆ ಪಟ್ಟಿ ಕಟ್ಟಿಸಿಕೊಂಡ ಕುದುರೆಯಂತೆ ನಿರ್ದಿಷ್ಟ ಪಥದಲ್ಲಿ ಮಾತ್ರ ಅದರ ದೃಷ್ಟಿಕೇಂದ್ರೀಕೃತವಾಗಿರುವಂತೆ ಸೀಮಿತ ಉದ್ದೇಶಗಳಿಗಾಗಿ ನಮ್ಮೊಳಗೆ ಹುದುಗಿರುವ ಅಪಾರ ಚೈತನ್ಯವನ್ನು ನಿರ್ಲಕ್ಷಿಸಿಬಿಡುತ್ತೇವೆ.
ಅಂತಿಮ ಶಯ್ಯೆಯಲ್ಲಿರುವಾಗಲೇ ನಾವು ಮಾಡಬಹುದಾಗಿದ್ದ ಸಾಧನೆಗಳ ಬಗೆಗೆ ಜ್ಞಾನೋದಯವಾಗುವುದು. ‘ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ’ ಎಂಬಂತೆ
ತಾನು ಮಾಡಬಹುದಾಗಿದ್ದ ಕೆಲಸಗಳ ಪಟ್ಟಿಯನ್ನು ಹೇಳಿಕೊಂಡೇನು ಪ್ರಯೋಜನ….? ದಾಸರ ನುಡಿಯಂತೆ,
‘ಅಟ್ಟಡಿಗೆ ಉಣಲಿಲ್ಲ,ಇಷ್ಟದರುಶನವಿಲ್ಲ
ಕೊಟ್ಟ ಸಾಲವನ್ನು ಕೇಳಲಿಲ್ಲ
ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಬಿಡಲಿಲ್ಲ ಅಷ್ಟರೊಳು ಪುರಂದರ ವಿಠ್ಠಲೆನ್ನು ಮನವೇ,’… ಎಂಬ ಸತ್ಯ ಸಾಕ್ಷಾತ್ಕಾರವಾಗುವುದು. ಉಸಿರಾಟಕ್ಕೆ ಹೆಣಗುವಾಗ ಜೀವನದ ಮೌಲ್ಯದ ಅರಿವಾಗುವುದು.
ಮನುಷ್ಯ ಸಾಮರ್ಥ್ಯ ಹಾಗೂ ಅವನ ಆಲೋಚನಾ ಶಕ್ತಿಯಿಂದ ಸಾಧಿಸಲಾಗದೆ ಇರುವುದು ಏನಿದೆ ಎಂಬ ಸತ್ಯ ಸತ್ಕಾಲದಲ್ಲಿ ಮನದಟ್ಟಾದರೆ ಬಾಳು ಅರ್ಥವಂತಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯತ್ವದಲ್ಲಿ ಗೌರವ ಹಾಗೂ ಜೀವನ ಪ್ರೇಮವಿಲ್ಲದಿರುವ ಎಲ್ಲರ ಬಾಳೂ ಹೀಗೇ ವ್ಯರ್ಥವಾಗುವುದೊಂದು ದುರಂತ!
*
‘ಗೌರವಿಸು ಜೀವನವ ಗೌರವಿಸು ಚೇತನವ
ಆರದೋ ಜಗವೆಂದು ಭೇದವೆಣಿಸದಿರು
ಹೋರುವುದೆ ಜೀವನ ಸಮೃದ್ಧಿಗೋಸುಗ
ನಿನಗೆ ದಾರಿಯಾತ್ಮೋನ್ನತಿಗೆ ||ಮಂಕುತಿಮ್ಮ||’
ಎಂಬ ಡಿ.ವಿ.ಜಿಯವರ ಕಗ್ಗದ ಕಿವಿಮಾತಿನಲ್ಲಿ ಎಂತಹ ಅರ್ಥ ಹುದುಗಿದೆ ನೋಡಿ.

*
‘ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ಹೆಂಡತಿಯನ್ನು ಹೊಗಳುತ್ತಾ ತಿರುಗಿದರು ಪುರಂದರದಾಸರು. ಅವಳು ಮಾಡಿದ್ದೇನು…. ಅಂತ:ಕರಣದಿಂದ ಆ ಬೇಡ ಬ್ರಾಹ್ಮಣನ ಮಗನ ಉಪನ್ಯಾಸಕ್ಕೆ ತನ್ನ ತವರಿನ ಬಳುವಳಿಯಾಗಿ ವಜ್ರದ ಮೂಗುತಿಯನ್ನು ದಾನ ಮಾಡಿದ್ದು. ಆಗಿನ ಕಾಲದಲ್ಲೇ ,’ನವಕೋಟಿ’ ಸಂಪತ್ತಿಗೆ ಒಡೆಯರಾಗಿದ್ದ ಶ್ರೀನಿವಾಸ ನಾಯಕರಿಗೆ ಸಿರಿಯಲ್ಲಿ ಅದೆಂತಹ ವ್ಯಾಮೋಹ!
ಕಿಲುಬು ಕಾಸನ್ನೂ ದಾನಮಾಡದ ಆ ಜಿಪುಣಾಗ್ರೇಸರ,ತನ್ನ ಹೆಂಡತಿ ತನ್ನ ದಾನ ಗುಣದಿಂದ ದೇವರೊಲುಮೆಗೆ ಪಾತ್ರವಾಗಿದ್ದು ಆತನ ಕಣ್ತೆರೆಸಲು ಕಾರಣವಾಯಿತು.ಭಗವಂತನೇ ಭಿಕ್ಷೆಗೆ ಬಂದಾಗಲೂ ಆತನನ್ನು ಗುರುತಿಸಲಾಗದ ತನ್ನ ಸಂಪತ್ತಿನ ಮೋಹಕ್ಕೆ ಹೇಸಿ ತನ್ನೆಲ್ಲಾ ಅಷ್ಟೈಶ್ವರ್ಯವನ್ನೂ ಬಡಬಗ್ಗರಿಗೆ ದಾನಮಾಡಿ ಪುರಂದರ ವಿಠ್ಠಲನ ಸಾಕ್ಷಾತ್ಕಾರ ಕ್ಕಾಗಿ ಹಂಬಲಿಸಿ ಊರೂರು ಆಲೆಯತೊಡಗಿದರಲ್ಲ. ಏಕೆಂದರೆ ‘ ಸಿರಿತನ ಭೋಗ ಭಾಗ್ಯಗಳೆಲ್ಲವೂ ಭಗವಂತನ ಕೃಪಾಕಟಾಕ್ಷದ ಮುಂದೆ ತೃಣ ಸಮಾನ’ ಎಂಬ ಸತ್ಯ ಮನದಟ್ಟಾಗಿದ್ದೇ ಈ ಪರಿವರ್ತನೆಗೆ ಕಾರಣವಲ್ಲವೇ….?
‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠ್ಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ….’ ಅಧ್ಯಾತ್ಮದ ಸವಿಯೆದುರು ಮತ್ತಾವ ಭೋಗಭಾಗ್ಯದ ಸವಿ ಸಾಟಿಯಾಗಬಲ್ಲದು….
*
ಕಪಿಲವಸ್ತುವಿನ ಶುದ್ಧೋಧನ, ಮಾಯಾದೇವಿಯರ ಮಗ ಯುವರಾಜ ಸಿದ್ಧಾರ್ಥನೂ ಹೀಗೆ ಮನುಜ ಜನ್ಮದ ಹುಟ್ಟು ಸಾವುಗಳ ರಹಸ್ಯವನ್ನು ಭೇದಿಸಲು ಸರ್ವಸಂಪನ್ನವಾಗಿದ್ದ ತನ್ನ ರಾಜ್ಯ, ಕೋಶ ಮಡದಿ ಮಗನನ್ನು ತೊರೆಯಲಿಲ್ಲವೇ….?
ನಾವು ಮಾತ್ರ ‘ಸಿಂಬಳದ ನೊಣದಂತೆ ‘ ಲೌಕಿಕ ಆಶೆ ಆಮಿಷಗಳಿಗೆ ಬದುಕನ್ನೇ ಬಲಿ ಕೊಟ್ಟು ರೋಗದ ಗೂಡಾಗಿರುವ ಶರೀರದ ಭಾರವನ್ನು ಹೊರಲಾರದೆ ಹೊತ್ತು ಪೋಷಿಸುತ್ತಾ ಬದುಕುವುದು ಭೂಮಿಗೆ ಭಾರ ಅನ್ನಕ್ಕೆ ದಂಡ,ಕೊನೆಗೆ ಕುಲಕ್ಕೂ ಕುಠಾರಪ್ರಾಯ!
*
ಬಾಲ್ಯದ ಎಳೆತನದಲ್ಲಿ ಸಾವಿನ ಮನೆಗೆ ಹೋಗಿ ಅಲ್ಲಿನ ದೃಶ್ಯಗಳನ್ನು ಕಂಡಾಗ ಇಡೀ ದಿನ ಅತ್ತು ಅತ್ತು ಊಟ ಬಿಟ್ಟು ತಲೆನೋವಲ್ಲಿ ನರಳುತ್ತಿದ್ದೆ.ಅಯ್ಯೋ ಅವರನ್ನು ಮಣ್ಣಿನಡಿಯಲ್ಲಿ ಹೂಳುತ್ತಾರಂತೆ. ಮತ್ತೆಂದೂ ಅವರು ನಮ್ಮ ನಡುವೆ ಬರಲಾರರು.
ಇಲ್ಲವಾದರೆ ಸುಟ್ಟು ಭಸ್ಮ ಮಾಡುತ್ತಾರಂತೆ.ನಮ್ಮ ಸರ್ವಸ್ವವೂ ಆಗಿದ್ದ ಜೀವ ಕೊನೆಗೆ ಬದುಕಿನ ಹಿಂಸೆಯನ್ನು ಸಹಿಸಲಾರದೆ ,ಭಗವಂತನ ಪಾದ ಸೇರಲು ತವಕಿಸುವಾಗ
‘ಈ ಬದುಕು ಇಷ್ಟೇನಾ’ಎನಿಸಿದ್ದಿದೆ. ಆಸರೆಯಿಲ್ಲದೆ ಹೇಗಪ್ಪಾ ಈ ಪ್ರಪಂಚದಲ್ಲಿ ಬಾಳುವುದು ಎನಿಸಿ ಮನಸ್ಸು ಅಸ್ವಸ್ಥವಾಗುತ್ತಿತ್ತು.
ಪ್ರೀತಿಯ ಆಲದ ನೆರಳಿನಲ್ಲಿ ನಿಶ್ಚಿಂತವಾಗಿದ್ದಾಗ ಅನಿರೀಕ್ಷಿತ ಆಘಾತದಂತೆ ಬುಡಸಹಿತ ಉರುಳಿದ ಬೃಹತ್ ವೃಕ್ಷದಲ್ಲಿ ಆಸರೆ ಪಡೆದಿದ್ದ ಅಮಾಯಕ ಜೀವಿಗಳಿಗೆ ಪರ್ಯಾಯ ನೆಲೆ ಒದಗಿಸುವ ತುರ್ತಿನಲ್ಲಿ ತನ್ನದೆಲ್ಲವನ್ನೂ ನಿರ್ಲಕ್ಷಿಸಿ ಸಹಾಯಹಸ್ತ ಚಾಚುವುದರಲ್ಲಿ ಆಸರೆಯಲ್ಲಿದ್ದವಳು ಆಸರೆಯಾಗುರುವ ಪ್ರಕ್ರಿಯೆಯಲ್ಲಿ ಕಳೆದುಕೊಂಡ ಅಮೂಲ್ಯ ಜೀವದ ಬಗ್ಗೆ ಚಿಂತಿಸಲೂ ವ್ಯವಧಾನವಿಲ್ಲದೆ ಬಾಳಿನ ಭೋರ್ಗರೆವ ಸಾಗರಕ್ಕೆ ಧುಮುಕುವ ಸಾಮರ್ಥ್ಯ ಬಂದುದು ಆತ್ಮಶಕ್ತಿಯ ಫಲವೇ ಆಗಿದೆ.ತನ್ನವರ ಬಾಳಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕಿಂಚಿತ್ತಾದರೂ ವರ್ಗಾಯಿಸುವ ಶ್ರಮ ವಹಿಸಿದರೆ ನಾವು ಭೂಮಿಯಿಂದ ಪಡೆದ, ಸಂಬಂಧಗಳಿಂದ ಪಡೆದ ಅನ್ನಋಣ, ಜನ್ಮಋಣ, ಪ್ರೀತಿ, ಸ್ನೇಹ ಋಣ…ಇತ್ಯಾದಿಗಳನ್ನು ಸಂದಾಯ ಮಾಡಿ ತೆರಳುವ ಕನಿಷ್ಠ ತೃಪ್ತಿಯಾದರೂ ದೊರೆಯುತ್ತದೆ.ಇದೇ ಸಾವಿನ ಹೆಡೆಯ ನೆರಳಿನಲ್ಲಿ ಬದುಕುತ್ತಿರುವ ಮನುಷ್ಯನ ಆದ್ಯತೆಯಾದರೆ ಬದುಕು ಹಗುರಾಗಬಹುದು.
‘ಚಿಂತ್ಯಾಕ ಮಾಡುತೀ ಚಿನ್ಮಯನಿದ್ದಾನೆ’ ಎಂಬ ಭರವಸೆಯಂತೆ, ಮೃಣ್ಮಯತೆಯಲ್ಲಿ,ಚಿನ್ಮಯತೆಯನ್ನು ಸಮೀಕರಿಸಿ ಬಾಳನ್ನು ಅರ್ಥಪೂರ್ಣಗೊಳಿಸಿಕೊಳ್ಳುವ ಪ್ರಯತ್ನ ಸಾಧುವಲ್ಲವೇ….
ಬೇಂದ್ರೆ ಹೇಳಿದಂತೆ,
‘ನಾನಿರುವಾಗ ಸಾವು ನನ್ನ ಬಳಿ ಸುಳಿಯುವುದಿಲ್ಲ
ಅದು ಬರುವಾಗ ನಾನೇ ಇರುವುದಿಲ್ಲ’
ನಾನೇಕೆ ಹೆದರಬೇಕು…ಅಲ್ವಾ?

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕವಿಯತ್ರಿ, ಕೊಡಗು
