ಜಗವೇ ನಾಟಕ ರಂಗವಾದ ಈ ದಿನದ ನೆನಪಿಗೆ: ಭರತ್ ಕುಮಾರ ನಿರ್ದೇಶನದ ‘ಮೃಗತೃಷ್ಣ, ‘ ನಾಟಕದ ವಸ್ತುವಿನ್ಯಾಸ’ದ ಕುರಿತ ಅವಲೋಕನ. – ರಘುನಾಥ್ ಕೃಷ್ಣಮಾಚಾರ್, ತಪ್ಪದೆ ಮುಂದೆ ಓದಿ…
‘ ಮರೀಚಿಕೆಯ ಬೆನ್ನುಹತ್ತಿ : ಗಿರಿಜಾಶಾಸ್ತ್ರಿ. ಎಲ್ಲಾ ರಂಗ ಮಿತ್ರರಿಗೂ ಅಭಿನಂದನೆಗಳೊಂದಿಗೆ, ಅವಿನಾಶರ ಅಪೇಕ್ಷೆಯ ಮೇರೆಗೆ:
ಅಮರತ್ವಕ್ಕೆ ಹಾತೊರೆಯುವ ಮನುಷ್ಯನ ಹಂಬಲ ಆದಿಮವಾದುದು. ಈ ಅಮರತ್ವವೆನ್ನುವುದು ಭೌತಿಕ ನೆಲೆಯಲ್ಲಿಯೇ ಸಿಧ್ಧಿಸಬೇಕೆನ್ನುವ ಹಟ, ತೊಳಲಾಟ , ಹೋರಾಟವೇ ಬದುಕು, ಎನ್ನುವ ಸತ್ಯವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಡುವ , ವಸುಮತಿ ಉಡುಪ ರಚಿಸಿರುವ, ಭರತ್ ಕುಮಾರ್ ಪೊಲಿಪು ನಿರ್ದೇಶನದ ,’ಮೃಗತೃಷ್ಣಾ’. ದೇವಲೋಕದ ಸುಂದರಿ ಸುಗಂಧಿನಿ ಹಾಗೂ ಭೂಲೋಕದ ಹಸ್ತಿನಾವತಿಯ ಭೂಪಾಲನ ಮಧ್ಯೆ ಪ್ರೇಮಾಂಕುರವಾಗಿ,ಅಲಕಾನದಿಯ ತಟದಲ್ಲಿ, ಅದು ಅವರ ವಿವಾಹದಲ್ಲಿ ಪರಿಸಮಾಪ್ತಿಯಾಗುತ್ತದೆ.
ಇವರಿಬ್ಬರ ವಿವಾಹಕ್ಕೆ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸುವ ದೇವಲೋಕದ ಮಹಾಪ್ರಭು, ಅನಂತರ ಅಳಿಯನಾಗುವವನಿಗೆ ಚಿರಂಜೀವತ್ವವನ್ನು ವರವಾಗಿ ನೀಡಿ,ಮಗಳನ್ನು ” ವಿವಾಹದ ನಂತರ ದೇವಲೋಕಕ್ಕೆ ಬಂದರೆ, ಮತ್ತೆ ಮರಳಬಾರದೆನ್ನುವ ” ನಿಷ್ಠುರ ನಿಯಮದ ಮೇಲೆ ಭೂಮಿಗೆ ಕಳುಹಿಸಿಕೊಡುತ್ತಾನೆ.ತಂದೆಯಿಂದ ವರಪಡೆದ ಸಂಭ್ರಮದಿಂದ , ಭೂಮಿಗೆ ಬರುವ ಸುಗಂಧಿನಿ,ರಾಜನನ್ನು ವಿವಾಹವಾಗಿ ,ಮಕ್ಕಳ ತಾಯಿಯಾಗಿ ಸುಖದಿಂದ ಇರುತ್ತಾಳೆ. ಆದರೆ ಕಥೆ ಇಲ್ಲಿಗೆ ಮುಗಿದು ಹೋಗುವುದಿಲ್ಲ.ಇಲ್ಲಿ ಕೂಡ ರಾಜನ ಕಥೆ ಅವನ ಮಧ್ಯವಯಸ್ಸಿನ ನಂತರ ಪ್ರಾರಂಭವಾಗುತ್ತದೆ. ಬಯಸದೆ ಬಂದ ವರದ ರೂಪದ ಶಾಪದ ಅರಿವು,ತಟ್ಟುವುದು ಮಧ್ಯವಯಸ್ಸು ಕಳೆದ ನಂತರವೇ. ಇವನು ಚಿರಂಜೀವಿಯಾದರೂ ಚಿರಯೌವನಿಗನಲ್ಲ. ಬದಲಾಗಿ ನೀರಡಿಕೆಯಿಂದ ಬಾಯಿ ಬತ್ತಿದ ತನ್ನ ಮೈಮೇಲಿನ ಒಂದು ನೊಣವನ್ನೂ ಓಡಿಸಲಾರದ ನಿಶ್ಯಕ್ತ. ತನ್ನದೇ ವೈಭೋಗದ ಅರಮನೆಯಲ್ಲಿ, ದಾಸಿಯರು, ಆಳುಕಾಳುಗಳು, ಮಕ್ಕಳು ಮರಿಮಕ್ಕಳಿದ್ದರೂ, ಅನಾಥ. ಹೇಳುವವರಿಲ್ಲದ , ಕೇಳುವವರಿಲ್ಲದ ಅಸಹಾಯ ಹಣ್ಣು ಮುದುಕ. ಸಾಯಲಾರ, ಯಾಕೆಂದರೆ ಮಾವನ ಅಭಯ ಹಸ್ತವಿದೆ.

ಭರತ್ ಕುಮಾರ
ಉಲ್ಲಾಸದಿಂದ ಬದುಕಲಾರ , ಯಾಕೆಂದರೆ ಪ್ರಕೃತಿಗೆ ಅದರದೆ ಆದ ನಿಯಮವಿದೆ.ತನ್ನ ಮಲಗುವ ಕೋಣೆಯ ತುಂಬಾ ಹುಳುವಾಗಿ ವಿಲ ವಿಲ ತೆವಳುತ್ತಾನೆ.ಇದು ಕಥೆಯ ಹಂದರ. ಈ ನಾಟಕ ಅನಾವರಣಗೊಳಿಸುವ ವಿಸ್ಮಯಕ್ಕೆ ವಿಸ್ಮಯವೆ ಉತ್ತರ. ಅದರ ಹೊರತು ಮನುಷ್ಯನಿಗೆ ಬೇರೆ ಆಯ್ಕೆಗಳೇ ಇಲ್ಲ. ಅಮರತ್ವವೆನ್ನುವುದು ಭೌತಿಕ ನಲೆಯನ್ನು ದಾಟಿ, ಅಭೌತಿಕ ನೆಲೆಯಲ್ಲಿ ಸಿಧ್ದಿಸುವಂತದ್ದು.ಯಾಕೆಂದರೆ ಭೌತಿಕವೆನ್ನುವುದು ಎಂದಾದರೂ ನಾಶವಾಗಲೇಬೇಕಾಗಿದೆ. ಆದರೆ ಅದು ಭೌತಿಕನೆಲೆಯಲ್ಲಿಯೇ ಸಿಧ್ದಿಸಬೇಕೆನ್ನುವ ಮನುಷ್ಯನ ಹಠ ಅವನನ್ನು ಎಂತಹ ದಾರುಣ ಸ್ಥಿತಿಗೆ ತಳ್ಳಿಬಿಡುತ್ತದೆ ಎನ್ನುವುದನ್ನು ಈ ನಾಟಕ ತೋರಿಸಿಕೊಡುತ್ತದೆ. ದೇವಲೋಕದ ದಯದಿಂದಾಗಿ ಇಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುವ ಪ್ರಕೃತಿಧರ್ಮದಿಂದ ವಂಚಿತನಾಗಿದ್ದಾನೆ. ಅವನ ಭೌತಿಕ ದೇಹ ಸಾಯುವ, ಕೊಳೆಯುವ ಶಕ್ತಿಯನ್ನು ಕಳೆದುಕೊಂಡಿದೆ. ಆದ್ದರಿಂದಲೇ ಅವನ ಆತ್ಮ ಕೊಳೆಯಲಾರಂಭಿಸುತ್ತದೆ.
ಹುಳಹತ್ತಿದ ಅವನ ಮನಸ್ಸು ಪ್ರೇಮದಂತಹ ದಿವ್ಯತೆಯನ್ನು ತಾಳಿಕೊಳ್ಳಲಾರದು. ಆವರೆಗೆ ಅಲಕಾನದಿಯಂತೆ ಮುಕ್ತವಾಗಿ ಹರಿಯುತ್ತಿದ್ದ ಅವನ ಪ್ರೇಮ ನಿಂತು ನಾರಲು ತೊಡಗುತ್ತದೆ. ಪ್ರೇಮ ಹಿಂಸೆಯಾಗಿ ಬಂಧನದ ರೂಪ ತಾಳುತ್ತದೆ. ಈ ಬಂಧನದಿಂದ ಹಿಂಸೆಯಿಂದ , ಇಬ್ಬರೂ ಪಾರಾಗಬೇಕೆಂದರೆ,ತಮ್ಮ ಭೌತಿಕ ಸ್ವರೂಪದಿಂದ ಬಿಡುಗಡೆಹೊಂದುವುದು ಅನಿವಾರ್ಯವಾಗುತ್ತದೆ. ಸುಗಂಧಿನಿ ಮತ್ತೆ ದೇವಲೋಕಕ್ಕೆ ತೆರಳುತ್ತಾಳೆ. ರಾಜ ತನ್ನ ಮಾನವ ಶರೀರವನ್ನು ತ್ಯಜಿಸುತ್ತಾನೆ. ಆಗ ಅವರಿಬ್ಬರ ಪ್ರೇಮಕ್ಕೆ ಅಮರತ್ವದ ಮುದ್ರೆ ಬೀಳುತ್ತದೆ. ಬದುಕಿನ ಮೌಲ್ಯಗಳು ಅಮರಗೊಳ್ಳುವುದು ಸಾವಿನ ಮೂಲಕ. ಹಾಗೆಯೇ ಸಾವಿನ ಘನತೆ ಮೈದಳೆಯುವುದು ಬದುಕಿನ ಉತ್ಸಾ.ಹದಲ್ಲಿ. ಹಸಿವು,ತೃಷೆ, ಪ್ರೇಮ,ಕಾಮದ ಸುತ್ತ ಚಲನಶೀಲವಾದ, ಮನುಷ್ಯನ ಬದುಕಿನ ಜೀವನೋಲ್ಲಾಸಗಳಿಗೆ. ಎದುರಾಗಿ ಇದಾವುದೂ ಕಾಡದ ದೇವತೆಗಳ ರಸಹೀನ ಬದುಕಿನ ಚಿತ್ರಣ, ಮನುಷ್ಯನ ಬದುಕಿನ ಘನತೆಯನ್ನು ಎತ್ತಿಹಿಡಿಯುತ್ತದೆ. ಆದುದರಿಂದಲೇ ಸಾವುಳ್ಳ ಮನುಷ್ಯರಿಗೆ , ಈ ಸಾವು ಕೊನೆಯೂ ಹೌದು, ಮೊದಲೂ ಹೌದು.ಭೌತಿಕವಾಗಿ ಮನುಷ್ಯ ಅಮರನಾಗಬೇಕೆನ್ನುವ ಭ್ರಮೆಯಲ್ಲಿ, ನರಳುವ , ರೋಧಿಸುವ ಮನುಷ್ಯನ ದಾರುಣತೆ ಕಾಫ್ಕಾನ ಮೆಟಮಾರ್ಫಿಸಸ್ ನ್ನು ನೆನಪಿಗೆ ತರುತ್ತದೆ. ಮನುಷ್ಯನ ಹುಟ್ಟು, ಮತ್ತು ಸಾವುಗಳ ನಡುವೆ ಆಯ್ಕೆಗಳೇ ಇಲ್ಲದ ಸ್ವಾತಂತ್ರ್ಯಹೀನ ಅಸಹಾಯಕ ಸ್ಥಿತಿ ಮತ್ತು ಪ್ರಭುತ್ವದ ಅಧಿಕಾರದ ಅಹಂಕಾರದ ಸ್ಥಿತಿ ಇವೆರಡೂ ಇಲ್ಲಿ ಮುಖಾಮುಖಿಯಾಗಿವೆ. ಎರಡು ಅವ್ಯಕ್ತ ಸ್ಥಿತಿಗಳ ನಡುವೆ ನಿಂತ ಅಸಹಾಯಕ ಮನುಷ್ಯಇಡೀ ಜಗತ್ತನ್ನೇ ತನ್ನ ಮುಷ್ಠಿಯೊಳಗೆ ” ಇಟ್ಟುಕೊಳ್ಳಬಲ್ಲೆ” ಎನ್ನುವ ಭ್ರಮಾಧೀನ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ ಈ ನಾಟಕ.
ಮನುಷ್ಯನ ಈ ಎಲ್ಲಾ ಕ್ಷುದ್ರತೆಗಳನ್ನು ಅಸಹಾಯಕತೆಯನ್ನು, ಅದ್ಭುತವಾಗಿ ರೂಪಾಂತರಗೊಳಿಸಿರುವ ಮೋಹನ್ ಮಾರ್ನಾಡ್ ರ ಅಭಿನಯ, ಅದರಲ್ಲೂ ವೇದಿಕೆಯ ಮೇಲೆ ಹುಳದಂತೆ ತೆವಳುತ್ತಾ ನೇಪಥ್ಯದೊಳಗೆ ಸಾಗಿಬಿಡುವುದು , ನಮ್ಮೊಳಗಿನ ಅಸಹಾಯಕತೆಗೆ ನಾವೇ ಹೇಸುವಂತೆ ಮಾಡಿ ಪ್ರೇಕ್ಷಕರನ್ನು ಘೋರ ವಿಹ್ವಲತೆಗೆ ತಳ್ಳಿಬಿಡುತ್ತದೆ. ಸಾವು ಇರುವುದರಿಂದಲೇ ಬದುಕು ಚೆನ್ನ,ಕ್ಷಣಿಕವಾಗವುದರಿಂದಲೇ ಶಾಶ್ವತವಾಗುವುದು , ಅವಿನಾಶಿಯಾಗುವುದು ಎನ್ನುವ ಸಂದೇಶವನ್ನು ಸಾರುವ ಸಾಧನವಾಗಿ ಗೀತಾಶಂಕರ ಅವರ ಅಭಿನಯ ಸಾರ್ಥಕಗೊಳ್ಳುತ್ತದೆ. ಸಾವಿನ ಘನತೆಯನ್ನು ಅದರ ಜತೆಗೆ ಬದುಕಿನ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಈ ಯಶಸ್ಸಿಗೆ ಮುಖ್ಯ ಕಾರಣ ಕನ್ನಡ ಕಲಾ ಕೇಂದ್ರದವರ ಸಾಮೂಹಿಕ ಸಾಧನೆ. ದಾಸಿ, ಸಖಿಯರಿಂದ ಹಿಡಿದು, ಶಾಮಲಾ ಅವರ ಹಿನ್ನೆಲೆ ಸಂಗೀತದವರೆಗೆ, ಅರಮನೆ ದೇವಲೋಕಗಳಲ್ಲಿ ಕೂಡ ಆಡಂಬರವಿಲ್ಲದಸರಳ ಸೆಟ್ಟಿಂಗ್ ಮುಂತಾದವು ಈ ನಾಟಕದ ಇತ್ಯಾತ್ಮಕ ಅಂಶಗಳು. ಭರತ್ ಕುಮಾರ ಪೊಲಿಪು ಅವರ ನಿರ್ದೇಶನದ ನೈಪುಣ್ಯತೆಗೆ ಈ ನಾಟಕ ಸಾಕ್ಷಿಯಾಗಿದೆ. ಅಭಿನಂದನೆಗಳು.
- ಗಿರಿಜಾಶಾಸ್ತ್ರಿ
