‘ಚೌಚೌ ಬಾತ್’ ಅಂಕಣ (ಭಾಗ –೧೫)

ರಾಜಸ್ಥಾನದ ಮರುಭೂಮಿಯಲ್ಲಿ ಬೇಸಿಗಿನ ಆರ್ಭಟಕ್ಕೆ ಆ ಹುಡುಗ ಬಾಯಾರಿ ನೀರು ಕುಡಿಯಲು ಹೋದಾಗ ಶಾಲೆಯ ಶಿಕ್ಷಕ ರಕ್ತ ಬರುವಂತೆ ಹೊಡೆದ, ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’ ತಪ್ಪದೆ ಮುಂದೆ ಓದಿ …

ಮೊನ್ನೆ ತಾನೇ ಕೇವಲ ಏಳೆಂಟು ತಿಂಗಳ ಹಿಂದಷ್ಟೇ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವೈಭವೋಪೇತವಾಗಿ ಭಾರತೀಯರಾದ ನಾವೆಲ್ಲರೂ ಆಚರಿಸಿದೆವು.ಕೇಂದ್ರ ಸರ್ಕಾರದ ಆದೇಶದಂತೆ ಹರ್ ಘರ್ ತಿರಂಗಾ….. ಘರ್ ಘರ್ ತಿರಂಗಾ ಎಂದು ಮೂರು ದಿನಗಳ ಕಾಲ ಭಾರತದ ತ್ರಿವರ್ಣ ಧ್ವಜವನ್ನು ಮನೆಯ ಮೇಲೆ ಸಡಗರದಿಂದ ಹಾರಿಸಿದೆವು. ಅಂದಿನ ದಿನ ಭ್ರಾತೃತ್ವದ ನಾಡು, ಸಹಬಾಳ್ವೆಯ ಬೀಡು, ಸಮಾನತೆಯ ಆಗರ, ಜಗಕ್ಕೆ ಮಾದರಿ ಈ ನಮ್ಮ ಭಾರತ ಎಂದು ಎದೆಯುಬ್ಬಿಸಿ ಉದ್ದುದ್ದ ಭಾಷಣ ಮಾಡಿದೆವು. ನಕ್ಕು ನಲಿದೆವು. ನಮ್ಮೆಲ್ಲರ ಎಲ್ಲೆ ಮೀರಿದ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಆದರೆ ಇದೇ ಸಮಯದಲ್ಲಿ ಅಂದರೆ ಆಗಸ್ಟ್ 13ನೇ ತಾರೀಖು ಅಹಮದಾಬಾದ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಅಸು ನೀಗಿದ ಮುಗ್ಧ ಬಾಲಕ ಇಂದ್ರ ಕುಮಾರ್ ಮೇಘ್ವಾಲ್ ನ ತಂದೆ ತಾಯಿಯ ನೋವಿನ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಅವರ ನೋವು, ಯಾತನೆ, ಆಕ್ರಂದನ ಭಾರತ ಮಾತೆಗಲ್ಲದೆ ಯಾವ ಮೇಲ್ಜಾತಿಯ ಜನರ ಕಿವಿಗೂ ತಲುಪಲೇ ಇಲ್ಲ. ಏಕೆಂದರೆ ಆ ಬಾಲಕ ದಲಿತನಾಗಿದ್ದ.

ಹಾಗಾದರೆ ಆ ಬಾಲಕ ದಲಿತನಾಗಿ ಹುಟ್ಟಿದ್ದು ತಪ್ಪೇ ?

ಹೌದು ದಲಿತನಾಗಿ ಹುಟ್ಟಿದ್ದು ಆ ಬಾಲಕನ ತಪ್ಪು ಎನ್ನುತ್ತದೆ ಇಂದಿನ ಸಮಾಜ. ಹಾಗಾದರೆ ದಲಿತರ ಮಕ್ಕಳ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಕೇಳಿದರೆ…. ಇಲ್ಲ ಎಂದು ತನ್ನ ದುಷ್ಕೃತ್ಯದ ಮೂಲಕ ನಿರೂಪಿಸಿಯೇ ಬಿಟ್ಟ ರಾಜಸ್ಥಾನದ ಶಿಕ್ಷಕ ಚೈಲ್ ಸಿಂಗ್.

ಘಟನೆಯ ಹಿನ್ನೆಲೆ…….

ರಾಜಸ್ಥಾನದ ಜಿಲೋರ್ ಜಿಲ್ಲೆಯ ಸುರಾನ ಗ್ರಾಮದ ರಜಪೂತ ಸಮುದಾಯಕ್ಕೆ ಸೇರಿದ ಚೈಲ್ ಸಿಂಗ್ ಸರಸ್ವತಿ ವಿದ್ಯಾಮಂದಿರ ಎಂಬ ಖಾಸಗಿ ಶಾಲೆ ನಡೆಸುತ್ತಿದ್ದ. ಆತ ಅಲ್ಲಿ ಶಿಕ್ಷಕನು ಹೌದು.

ದಲಿತ ಜನಾಂಗಕ್ಕೆ ಸೇರಿದ ಪಾವನಿ ದೇವಿ ಮತ್ತು ದೇವರಾಂ ಮೇಘ್ವಾಲ್ ದಂಪತಿಯ ಮೂರನೇ ಮಗನೇ ಇಂದ್ರ ಕುಮಾರ್. ದೇವರಾಂ ಆರ್ಥಿಕವಾಗಿ ಹಿಂದುಳಿದಿದ್ದರು ತನ್ನ ಕಿರಿ ಮಗ ಒಬ್ಬನಾದರೂ ಕಾನ್ವೆಂಟ್ ನಲ್ಲಿ ಓದಿ ಒಳ್ಳೆಯ ವಿದ್ಯಾಭ್ಯಾಸ ಪಡೆಯಲಿ ಎಂಬ ಆಶಯ ಹೊತ್ತು ಸರಸ್ವತಿ ವಿದ್ಯಾಮಂದಿರಕ್ಕೆ ದಾಖಲು ಮಾಡಿದ್ದ. ತನ್ನ ಮಗ ಮುಂದೆ ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ. ಆದರೆ ನಡೆದದ್ದೇನು.

 

ನುಚ್ಚು ನೂರಾದ ಕನಸು

ರಾಜಸ್ಥಾನದ ಮರುಭೂಮಿ ಎಂದರೆ ಅಲ್ಲಿನ ರಣ ಬಿಸಿಲಿನ ಅಬ್ಬರ ಕೇಳಬೇಕೇ…… ವರ್ಷದ ಎಲ್ಲಾ ಕಾಲದಲ್ಲಿಯೂ ಬಿಸಿಲು ತನ್ನ ರುದ್ರನರ್ತನವನ್ನು ಮಾಡುತ್ತಲೇ ಇರುತ್ತದೆ. ಅಲ್ಲಿನ ಜನರು ಸಹ ಆ ರಣ ಬಿಸಿಲಿನ ಝಳಕ್ಕೆ ಒಗ್ಗಿ ಹೋಗಿರುತ್ತಾರೆ. ಆದರೆ ಚಿಕ್ಕ ಮಕ್ಕಳು ಬಿಸಿಲಿನ ಬೇಗೆಗೆ, ಬಾಯಾರಿಕೆಗೆ ತತ್ತರಿಸಿ ಹೋಗುತ್ತಾರೆ. ಸಹಜ ವೆಂಬಂತೆ ಒಣಗಿಹೋದ ಗಂಟಲಿನ ಪಸೆಯನ್ನು ನೆನೆಸಿಕೊಳ್ಳಲು ನೀರಿಗಾಗಿ ತವಕಿಸುತ್ತಾರೆ.

ಅಂದು ಜುಲೈ 22ರ ಮಧ್ಯಾನ್ಹದ ಸಮಯ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕ ಇಂದ್ರಕುಮಾರ್ ಗೆ ವಿಪರೀತ ಬಾಯಾರಿಕೆಯಾಗುತ್ತದೆ. ಶಾಲೆಯ ಅಂಗಳದಲ್ಲಿ ಕುಡಿಯುವ ನೀರು ಇರಿಸಿದ್ದ ಮಣ್ಣಿನ ಮಡಿಕೆ ಕಣ್ಣಿಗೆ ಬೀಳುತ್ತದೆ. ಹಿಂದೆ ಮುಂದೆ ಯೋಚಿಸದೆ ಮುಗ್ಧ ಅಮಾಯಕ ಬಾಲಕ ಮಣ್ಣಿನ ಮಡಿಕೆಗೆ ಕೈ ಹಾಕಿಯೇ ಬಿಡುತ್ತಾನೆ. ಅದೇ ಅವನು ಮಾಡಿದ ದೊಡ್ಡ ತಪ್ಪು. ಮಡಿಕೆಯಿಂದ ನೀರು ತೆಗೆದುಕೊಂಡು ಗಟಗಟನೆ ಕುಡಿದು ಬಿಡುತ್ತಾನೆ. ಪಾಪ ಅದೆಷ್ಟು ದಾಹವಾಗಿತ್ತೋ ಏನೋ, ಕುಡಿದ ನೀರು ಗಂಟಲಾಳಕ್ಕೆ ಇಳಿಯುವಷ್ಟರಲ್ಲಿ ಅದೆಲ್ಲಿಂದ ಬಂದನೋ ಶಿಕ್ಷಕ ಚೈಲ್ ಸಿಂಗ್ ಬಂದವನೇ ಅವನ ಜಾತಿಯನ್ನು ನಿಂದಿಸುತ್ತಾ ಅವನ ಕಪಾಳಕ್ಕೆ ಹೊಡೆದುಬಿಟ್ಟ. ಹೊಡೆತದ ರಭಸಕ್ಕೆ ಬಾಲಕನ ಕಿವಿಯಿಂದ ರಕ್ತ ಸುರಿಯ ತೊಡಗಿತು. ಅಲ್ಲಿಗೂ ಬಿಡದೆ ಅವನನ್ನು ಹಿಗ್ಗಾಮುಗ್ಗ ಥಳಿಸಿಯೇ ಬಿಟ್ಟ. ಬಾಲಕ ಪ್ರಜ್ಞಾ ಹೀನನಾದ. ಮಗನ ಬಗ್ಗೆ ನೂರೆಂಟು ಕನಸು ಕಂಡಿದ್ದ ಅಪ್ಪ ಅಮ್ಮನ ಕನಸು ನುಚ್ಚುನೂರಾಗಿತ್ತು.

ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಅಲ್ಲಿ ಇಲ್ಲಿ ಸುತ್ತಿ ಕೊನೆಗೆ ಗುಜರಾತ್ ನ ಅಹಮದಾ ಬಾದ್ ನ ಸರ್ಕಾರಿ ಆಸ್ಪತ್ರೆಗೆ ಇಂದ್ರ ಕುಮಾರ್ ನನ್ನು ಕರೆತರುವ ವೇಳೆಗೆ ಆತನ ದೇಹದ ಬಲಭಾಗ ಭಾಗಶಃ ನಿಷ್ಕ್ರಿಯವಾಗಿತ್ತು. ಕಿವಿಯಲ್ಲಿ ರಕ್ತಸ್ರಾವ ಆಗುತ್ತಲೇ ಇತ್ತು. ಪ್ರಜ್ಞಾ ಹೀನನಾದ ಬಾಲಕ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಎರಡು-ಮೂರು ವಾರಗಳ ಕಾಲ ಆಸ್ಪತ್ರೆಯಲ್ಲೇ ನರಳುತ್ತಾ ಮತ್ತೆಂದೂ ಬಾರದ ಲೋಕಕ್ಕೆ ಸ್ವಾತಂತ್ರದ ಅಮೃತ ಮಹೋತ್ಸವದ ಮುನ್ನಾ ದಿನವೇ ಪಯಣ ಬೆಳೆಸಿದ್ದ.

ಗುರು ಬ್ರಹ್ಮ….. ಗುರು ವಿಷ್ಣು ….ಗುರು ದೇವೋ ಮಹೇಶ್ವರಃ…. ಎಂದು ಗುರುವನ್ನು ಹಾಡಿ ಹೊಗಳುತ್ತೇವೆ , ನಮಿಸುತ್ತೇವೆ. ಮೊದಲ ಗುರು ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡಿರುವ ಭವ್ಯ ಭಾರತ ನಮ್ಮ ದೇಶ. ಆದರೆ ಅಂತಹ ಪವಿತ್ರ ಸ್ಥಾನಕ್ಕೆ ಇಂದು ಮಸಿ ಬಳಿದಿದ್ದಾನೆ ಶಿಕ್ಷಕ ಚೈಲ್ ಸಿಂಗ್. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಒಬ್ಬ ದಲಿತ ಬಾಲಕನಿಗೆ ನೀರು ಕುಡಿಯಲು ಸ್ವಾತಂತ್ರ್ಯ ಇಲ್ಲವೆಂದ ಮೇಲೆ ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ ? ಯಾರಿಗೆ ಬಂದಿದೆ ಸ್ವಾತಂತ್ರ್ಯ ಎಂದು ದಲಿತ ಕವಿಯೊಬ್ಬ ನೊಂದು ಕೇಳುವುದರಲ್ಲಿ ಅರ್ಥವಿದೆ.

21ನೇ ಶತಮಾನಕ್ಕೆ ಕಾಲಿಟ್ಟಿರುವ ಭಾರತ ಪ್ರಗತಿಪರ ದೇಶ, ಜಗತ್ತಿಗೆ ಮಾದರಿ ಎಂದು ಬಿಂಬಿಸಿಕೊಳ್ಳುತ್ತಿರುವ ಭಾರತದಲ್ಲಿ ಕೇವಲ ಕುಡಿಯುವ ನೀರಿಗಾಗಿ ದಲಿತ ಬಾಲಕನ ಹತ್ಯೆ ನಡೆದಿದೆ ಎಂದರೆ ಅದೆಷ್ಟು ನಾಚಿಕೆಗೇಡು. ಚಂದ್ರನ ಅಂಗಳದಲ್ಲಿ ಕಾಲಿಟ್ಟಿರುವ ನಾವು ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಅಸ್ಪೃಶ್ಯತೆ ಯನ್ನು ಆಚರಿಸುತ್ತಿದ್ದೇವೆಂದರೆ ಅದೆಂತಹ ಮೃಗೀಯ ವರ್ತನೆ. ಈ ಬಗ್ಗೆ ಯಾರೂ ಏನನ್ನೂ ಏಕೆ ಮಾತನಾಡುತ್ತಿಲ್ಲ. ಎತ್ತ ಸಾಗುತ್ತಿದೆ ಭಾರತ ? ಏನಾಗುತ್ತಿದೆ ಭಾರತ ? ಕೋಮು ದಳ್ಳುರಿಗೆ ಸಿಲುಕಿ ಇನ್ನೂ ಅದೆಷ್ಟು ಅಮಾಯಕ ಜೀವಿಗಳ ಬಲಿಯಾಗಬೇಕೋ……

ಸರಿಸುಮಾರು ನೂರು ವರ್ಷಗಳ ಹಿಂದೆ ಇಂತಹುದೇ ಅಪಮಾನಕ್ಕೆ ಬಾಬು ಜಗಜೀವನ್ ರಾಮ್ ಗುರಿಯಾಗಿದ್ದರಂತೆ. ಮಣ್ಣಿನ ಮಡಿಕೆಯಲ್ಲಿ ಸವರ್ಣೀಯರಿಗಾಗಿ ಇರಿಸಿದ್ದ ನೀರನ್ನು ಕುಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದರಂತೆ. ಪವಾಡ ಸದೃಶವಾಗಿ ಪ್ರಾಣಪಾಯದಿಂದ ಪಾರಾಗಿದ್ದರಂತೆ. ಈ ವಿಚಾರವನ್ನು ಸ್ವತಃ ಅವರ ಪುತ್ರಿ ಮೀರಾ ಕುಮಾರ್ ತುಂಬಾ ನೋವಿನಿಂದ ಟ್ವೀಟ್ ನ ಮೂಲಕ ಹಂಚಿಕೊಂಡಿದ್ದಾರೆ. ಅಂದರೆ ಸುಮಾರು ನೂರು ವರ್ಷಗಳ ಹಿಂದಿನ ದಲಿತರ ಸ್ಥಿತಿ ಇಂದಿಗೂ ಮುಂದುವರೆದಿದೆ ಎಂದರೆ ಎಲ್ಲಿದೆ ಸಮಾನತೆ ? ಎಲ್ಲಿದೆ ಭ್ರಾತೃತ್ವ ? ಎಲ್ಲಿದೆ ಮಾನವೀಯತೆ ?ಪ್ರತಿಯೊಬ್ಬ ಭಾರತೀಯನು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಿದೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading