ಸತ್ಯವಾಣಿ ವಚನಗಳ ಸಂಕಲನ

ಬಯಕೆಯ ತಣಿಯದೆ ಕಂಡ ಕಂಡಲ್ಲಿ ಉಂಡಾಡಿ ತಿಂಬುವ ಜಾಯಮಾನ ನಮ್ಮದಲ್ಲವಯ್ಯ…ಕವಿಯತ್ರಿ ವಾಣಿ ಭಂಡಾರಿ ಅವರ ಲೇಖನದಲ್ಲಿ ಮೂಡಿದ ಸತ್ಯವಾಣಿ ವಚನಗಳ ಸಂಕಲನವನ್ನು ತಪ್ಪದೆ ಓದಿ…

ವಚನ-೧

ಆಡಿಸುವವ ನೀನಾಗಿರಲು ಕೈಯೊಳಡಗಿಹ ಬುಗುರಿ ಕಂಡು ಬೇಡದ್ಹೇಗಿರಲಿ ದೇವಾ!.
ಬೆಡಗಿನಾಟವ ನೋಡಲು ಬಾಡಿಗೆ ಮನೆಯೊಳು ನಿಂದಿರೊ ಹುಲುಮನ ಈ ಸತ್ಯವಾಣಿ!!.

ವಚನ -೨

ಕಬ್ಬದ ಸೊಗವು ಎಲ್ಲೆಲ್ಲೂ ಹಬ್ಬಿದೊಡೆ ಹಬ್ಬದ್ವಾತಾವರಣ ಮನದೊಳು ಕಾಣಾ!.
ಸುಗ್ಗಿಯ ಸೊಗದಂತೆ ಕಬ್ಬಗಣ್ ಮೈ ಮನ ಪುಳಕಗೊಳಿಪುದು ಸತ್ಯವಾಣಿ!!.

ವಚನ-೩

ನಾನರುಹಿದ ಸತ್ಯ ಸಹಿಸದೆ ಅಡಿಗಡಿಗೆ ಹೊಡೆದೊಡೆದರು ಬೆಡಗಿನಲಿ,,
ಒಡೆದೊಡೆದು ಚೂರಾಗಿದೆ ಶರಣೆಯ ಒಳಮನವು,,
ಕರಿ ಮನವನೆಂತೂ,, ಸರಿಪಡಿಸಲಾರದೆ ದೂರ ಸರಿದಿರುವೆನಯ್ಯ,
ಅವರಿದ್ದಂತೆ ಇರಲಿ ಈ ಜಗದೊಳು!!
ಮೋಹಪಾಶದಿಂ ಹೊರಬಂದು ಶುದ್ಧೋದಕದಲಿ ಮಿಂದು ನಿಂದಿರುವೆ ನೋಡಾ ಸತ್ಯವಾಣಿ!!

ವಚನ-೪

ಇರುಳಿನಲ್ಲಿ ಬೆಳಕನ್ನು ಹುಡುಕುವ ಕುರುಡಿ ನಾನು,,!
ತಾಮಸವೆ ತುಂಬಿದ ಎನ್ನ ಮನದೊಳಗೆ ಸಾತ್ವಿಕ ಸತ್ವವೆಲ್ಲಿ ಸಿಗುವುದು,,,,!
ಇರುಳಾದರೇನು? ಹಗಲಾದರೇನು?
ಕಣ್ಣೀಲ್ಲದ ಗಾವಿಲಳು ನಾನು
ಮತ್ತೇನೇನೋ ಬಯಸಿ ಮನದೊಳಗೇಕೆ ಬೇಯಲಯ್ಯ ಸತ್ಯವಾಣಿ!!.

ವಚನ-೫

ಶುದ್ಧೋದಕದ ಘನವರಿವು ಶುದ್ಧಿ
ವೇಳೆಯೊಳಷ್ಟೆ ಬೆಲೆ ತಿಳಿಪುದು!
ಬದ್ದತೆಯಿರದ ಹಿತಶತ್ರು ಹಚ್ಚಿದ ಬೆಂಕಿಯೊಳು ಬೆಂದವರಿಗಷ್ಟೆ ನೋವಿರ್ಪುದು!.
ಶುದ್ಧಮನವಿರದವರ ಸಂಗಡ ಎಳ್ಳಷ್ಟು ಹಿತ ಬೇಡವೆಂದಳು ನೋಡಾ ಸತ್ಯವಾಣಿ!!.

ವಚನ-೬

ಬಯಸಿದ್ದು ಸಿಗದಿದ್ದರೇನಂತೆ ಭಂಡ
ಬೀಳುವ ಹೀನ ಕುಲವಲ್ಲವಯ್ಯ!.
ಬಯಕೆಯ ತಣಿಯದೆ ಕಂಡ ಕಂಡಲ್ಲಿ ಉಂಡಾಡಿ ತಿಂಬುವ ಜಾಯಮಾನ ನಮ್ಮದಲ್ಲವಯ್ಯ!.
ಭಂಡಬಿದ್ದು ಉಂಡರಸರಂತೆ ಕೊಂಡಾಡಿಸಿಕೊಂಡು
ಹಿಗ್ಗುವವರ ಕಂಡರಾಗದು ಶಿವಭಕ್ತರಿಗಯ್ಯ,
ಈ ಸತ್ಯ ತಿಳಿದು ನೋಡಾ ಸತ್ಯವಾಣಿ.

ವಚನ-೭

ಎನ್ನ ಸಾಧನೆಯ ಶಿಖರವರಿಯದ ಮಂಕುಮನಗಳು ಬಿಂಕದೊಳಗೆ ದಂಡೆತ್ತಿ ಧಾವಿಸಿದರೆ ಶಿವಧ್ಯಾನದಲಿ‌ ಮುಳುಗಿಹ ಎನಗೆ ಹರಿಯೇ ಕಾವಲಯ್ಯ,
ಬಂಡುಕೋರರು ಬೆಂಡಾಗಿ ಬತ್ತಳಿಕೆಯೊಳ್ ಅಸ್ತ್ರ ಕರ ಪಿಡಿಯದೆ ಪೋದರಯ್ಯ, ಶಿವಭಕ್ತರ ತಲೆಕಾಯ್ವ
ಪರಂಜ್ಯೋತಿಯ ಶಿವಲೀಲೆ ನೋಡಾ ಸತ್ಯವಾಣಿ.

ವಚನ-೮

ಜಗವಿದ್ದಂತೆ ಇಹುದು ನಾನೇ ಸರಿಯಿಲ್ಲವೆಂದೆಣಿಸಿದರೂ ತಪ್ಪಾಗುವುದು
ಕಾಣಾ!.ಸರಿ ತಪ್ಪು ಧರ್ಮಕರ್ಮಗಳ ಜಿಜ್ಞಾಸೆಯೊಳು ಹುಯ್ದಕ್ಕಿ ಬೇಯದಿದ್ದರೆ ತುತ್ತನ್ನ ತಿನ್ನಲು ಸಾಧ್ಯವಿಹುದೇನಯ್ಯ!.
ಅವರವರ ಕರ್ಮ ಕ್ಕನುಗುಣವಾಗಿ ಫಲ ದೊರೆಯುವುದ ನೋಡಿ ಕಲಿತು ಸಾಗುವುದುತ್ತಮ ನೋಡಾ ಸತ್ಯವಾಣಿ!!.

ವಚನ-೯

ಅಡಿಗಡಿಗೆ ನಡೆಯುತಾ ಸಾಗಲು‌ ಗಡಿಗಡಿಗೆ ಬಂದು ಕಾಲಡರಿ ಬೀಳಿಸಲು ನೋಡುವರಯ್ಯ ಹಿಸುಣಲೋಭಿಗಳು!.
ಕರ್ಣದೊಳು ಕಾದ ಸೀಸವ ಕಾಸಿಡುವಂತೆ ಚೂಪು ನುಡಿಯಾಡಿ ದಿಕ್ಕತಪ್ಪಿಸುವಂತೆ ಹುನ್ನಾರ ಮಾಡುವರಯ್ಯ!.
ಇಂತವರ ಬೆಡಗು ನೋಡಿ ನಡುಗದೆ ನಿಂತವರೇ ಜೀವನಾನುಭವಿಗಳು ನೋಡಾ ಸತ್ಯವಾಣಿ!!.

ವಚನ-೧೦

ಪಾಪಿ ವಿಚಾರವಂ ಪದೆ ಪದೆ ಬಡಬಡಿಸಿ ಹಲುಬಿದೆಡೆ ಸೂತಕಂ ಸುತ್ತುವುದಂತೆ ಕಾಣಾ!.
ಮಾಡದ ಪಾಪವಂ ಆಡಿ ದುಶ್ಕರ್ಮಿಗಳ ಪಾಪ ಕಳೆದೋಗೆಯಲು ಬಾರದಯ್ಯ!.
ಮಾಡದಿದ್ದ ಪಾಪವಂ ಆಡಿ ನಮ್ಮೀ ಪಾಪ ಕರ್ಮವಂ ಹೆಚ್ಚಿ ಪೆಚ್ಚು ಮೋರೆಯಲಿ ವ್ಯಥೆ ಪಡುವ ಬದಲು ಸುಮ್ಮನಿರುವುದೇ ವಾಸಿ ನೋಡಾ ಸತ್ಯವಾಣಿ!!


  • ವಾಣಿ ಭಂಡಾರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading