‘ಹಳ್ಳಿ ಹೊಕ್ಕಿತು ಕರೋನಾ’ ನೈಜ್ಯ ಕತೆ – ಡಾ. ಪ್ರಕಾಶ ಬಾರ್ಕಿ



ಮಾಸ್ಕ್ ಹಾಕದೆ ಇರುವುದು,ಅದಕ್ಕೆ ಪೊಲೀಸ್ ರು ದಂಡ ಕಟ್ಟಲು ಬಂದಾಗ ಕಾಟಾಚಾರಕ್ಕೆ ಮಾಸ್ಕ್ ಏರಿದುವುದು, ಮನೆಯಲ್ಲಿ ಕೂತವರಿಗೆ ಕರೋನ ಹೇಗೆ ಬಂತು? ಎಂದು ಪ್ರಶ್ನೆ ಮಾಡುವುದು, ಈ ಎಲ್ಲ ನಿರ್ಲಕ್ಷ್ಯಕ್ಕೆ ಉತ್ತರ ಇಲ್ಲಿದೆ. ಡಾ.ಪ್ರಕಾಶ್ ಬಾರ್ಕಿ ಅವರ ಬಳಿ ಬಂದ ರೋಗಿಯ ಕತೆಯನ್ನೊಮ್ಮೆ ಓದಿ…

ಒಂದೇ ಸಮನೆ.. ಮೊಬೈಲ್ ರಿಂಗಣಿಸುತಿತ್ತು. ನಿದ್ದೆಯಿಂದ ಹೊರಬಂದು ಆ ಕಡೆಯ ಧ್ವನಿಗೆ ಕಿವಿಯಾದೆ. ಮಾತನಾಡುವವನ ಧ್ವನಿಯಲ್ಲಿ ಧಾವಂತ, ಗಾಬರಿ ತುಳುಕುತ್ತಿತ್ತು. “ಸರ್, ನಮ್ಮವ್ವಗ ಅರಾಮ ಇಲ್ಲ!! ಸುಸ್ತು ಅದಾರ. ಕರ್ಕೊಂಡು ಬರ್ತಿದಿವಿ ನಿಮ್ಮ ಹತ್ತಿರ….” ಮಾತು ತುಂಡಾಗಿ ಮೊಬೈಲ್ ತೆಪ್ಪಗಾಯ್ತು.

ನನ್ನೆಡೆಗೆ ಬಂದ ಆ ತಾಯಿಯ ವಯಸ್ಸು ಸರಿ ಸುಮಾರು ೬೫ ವರ್ಷ. ಜ್ವರ ವಾರದ ಹಿಂದೆ ಬಂದಿತ್ತು, ಬೆಳಗಿನಿಂದ ಸುಸ್ತು ಎನ್ನುತ್ತಾ ಮಲಗಿದ್ದಳಂತೆ. ನನಗೆ ಪೋನಾಯಿಸಿದ ಮಗ, ದೂರದ 50 ಕ್ಕಿಂತ ಕಡಿಮೆ ಮನೆಯಿರುವ ಹಳ್ಳಿಯಿಂದ ನನ್ನೆಡೆಗೆ ತಾಯಿ ಜೊತೆ ಬಂದಿದ್ದ.

ಅವಳನ್ನು ಪರೀಕ್ಷಿಸಲಾಗಿ… ತಿಳಿದಿದ್ದಿಷ್ಟೆ…

ಆ ತಾಯಿ ಮನೆ ಬಿಟ್ಟು ಹೊರಗೆ ಎಲ್ಲೂ ಹೋಗಲ್ಲ. ವಾರದ ಹಿಂದೆ “#ಜ್ವರ ” ಕಾಣಿಸಿಕೊಂಡಿತ್ತು. ಅಲ್ಲಿಯೇ ಊರಿನ “ಬೀಡಿ ಅಂಗಡಿ”( ಗೂಡಂಗಡಿ) ಯಿಂದ ಜ್ವರದ ಮಾತ್ರೆ ತರಿಸಿ ಒಂದೇರಡು ದಿನ ತೆಗೆದುಕೊಂಡಿದ್ದಳಂತೆ. (ಹಳ್ಳಿಯ ಚಿಕ್ಕ ಅಂಗಡಿಗಳಲ್ಲಿ ಈಗಲೂ ಮಾತ್ರೆ ಮಾರುವರು,ಇದು ಕಾನುನೂ ಬಾಹಿರ!!)

ವಾರದ ಹಿಂದೆಯೇ ಅಡಗಿ ಹೋದ ಜ್ವರ ಮತ್ತೆ ಇವಳ ತಂಟೆಗೆ ಬಂದಿರಲಿಲ್ಲ. ಸುಸ್ತು ಮಾತ್ರ ನಿರಂತರವಿತ್ತು. ಸುಸ್ತಿಗೆ ಯಾವ ವೈದ್ಯರನ್ನೂ ಭೇಟಿಯಾಗಿಲ್ಲ.

ಇವತ್ತು ಬೆಳಗ್ಗಿನಿಂದ ಸುಸ್ತು ಹೆಚ್ಚಾಗಿದೆ, ನಡೆದರೂ ಏದುಸಿರು, ಮತ್ತೇ ಮತ್ತೇ ಮಲಗತೊಡಗಿದಾಗ. ನನಗೆ ಅವರ ಮಗ ಕಾಲ್ ಮಾಡಿದ್ದು.

ಅವರ ಮಗನಿಗೆ ಮತ್ತು ಜೊತೆಗಾರರಿಗೆ ಮಾಸ್ಕ್ ಹಾಕುವಂತೆ ಗದರಿಸಿ, ನನ್ನ ಕಾಯಕಕ್ಕಿಳಿದೆ.

  • ಏದುಸಿರು ಸ್ವಲ್ಪ ಇದೆ.
  • ಧಾರಾಕಾರ ಸುಸ್ತು.
  • ರಕ್ತದೊತ್ತಡ ಹೆಚ್ಚಿದೆ.
  • ಜ್ವರ ನಾಪತ್ತೆ. ಕೆಮ್ಮು ಇಲ್ಲ.
  • ಹೃದಯ ಬಡಿತವೂ ಹೆಚ್ಚು.

#Pulse_oximeter ನ್ನು ತೋರು ಬೆರಳಿಗೆ ಹಾಕಿ ನೋಡಿದಾಗ, ಅವಳ ದೇಹದಲ್ಲಿ ಆಕ್ಸಿಜನ್ ಪ್ರಮಾಣ ತೀವ್ರವಾಗಿ ಕುಸಿದಿದೆ. ಕೇವಲ ೭೨ % .(೯೪ % ಗಿಂತ ಹೆಚ್ಚಿರಬೇಕು)

(Happy hypoxia or silent hypoxia)

ಕೂಡಲೇ ಅವರ ಮಗನನ್ನು ಕರೆದು ತಿಳಿಸಿದೆ, “ನಿಮ್ಮ ತಾಯಿಗೆ ಕೂಡಲೇ ಆಕ್ಸಿಜನ್ ಬೇಕು, ರಕ್ತ ಪರೀಕ್ಷೆ, ಎದೆಯ ಸಿ.ಟಿ ಸ್ಕ್ಯಾನಿಂಗ್ ಅವಶ್ಯಕವಿದೆ ” ಜಿಲ್ಲಾ ಆಸ್ಪತ್ರೆಗೆ ಹೋಗಲು ತಿಳಿಸಿದೆ. ಆತ ಮುಂದೆ ಹೋಗಲೊಲ್ಲ. ಚಿಕಿತ್ಸೆ ಏನಾದರೂ ಇಲ್ಲಿಯೆ ಕೊಡಿ ಎಂದು ದುಂಬಾಲು ಬಿದ್ದ. ಕೊನೆಗೆ ನನ್ನೊಳಗಿನ ಚಿಕಿತ್ಸಕ ಆಗಲೇ ಪತ್ತೆಹಚ್ಚಿದ್ದ ರೋಗ “ಕರೋನಾ”, ಕರೋನಾ ಇರುವ ಸಂಶಯ ದಟ್ಟವಾಗಿದೆ ಎಂದು, ಕರೆದುಕೊಂಡು ಹೋಗಲು ತಿಳಿಸಿದೆ‌.



ಆತನ ಮುಖ ಕಪ್ಪಿಟ್ಟಿತು. “ನಮ್ಮವ್ವ ಹೊರಗ ಹೋಗಲ್ರಿ, ಅದೆಂಗ್ ಕರೋನಾ ಬರ್ತೇತಿ?? ಅಂತ ನನ್ನೆಡೆಗೆ ಬೇಸರ, ಅನುಮಾನ ಎಸೆದು ಹೊರನಡೆದ. ಅವಳನ್ನು ಎದೆ ಕೆಳಗೆ ಮಾಡಿ ಮಲಗಿ ಹೋಗಲು (Prone position) ತಿಳಿಸಿದೆ.

ಆ ಸಮಯಕ್ಕೆ ಆತನಿಗೆ ಬೇರೆ ದಾರಿ ಕಾಣದೆ, ಜಿಲ್ಲಾಸ್ಪತ್ರೆಗೆ ಹೊರಟ.

ಫೋಟೋ ಕೃಪೆ : The New York Times

ಜಿಲ್ಲಾಸ್ಪತ್ರೆ ತಲುಪಿದ ತಕ್ಷಣ, ಆಕ್ಸಿಜನ್ ನೀಡಲಾಗಿದೆ. ಸಿಟಿ ಸ್ಕ್ಯಾನಿಂಗಲ್ಲಿ “ಕರೋನಾ” ಪುಪ್ಪುಸ ಹೊಕ್ಕು ಉಸಿರುಗಟ್ಟಿಸಿದ್ದು ದೃಢವಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಕಾರಣ ಒಂದು ಜೀವ ಉಳಿದಂತಾಗಿದೆ.

ನಿಮ್ಮೆಲ್ಲರ ಮೆದುಳಿನಲ್ಲಿ ಕರೋನಾ ಹೇಗೆ ಬಂದಿತು? ಅನ್ನೋ ಸಂಶಯ ಸುಳಿದಿರಬಹುದು.

ವಾರದ ಹಿಂದೆಯೆ ಆ ತಾಯಿ ಮನೆ ಬಾಗಿಲಿಗೆ ಬಂದ ತರಕಾರಿ ವ್ಯಾಪಾರಿಯಿಂದ, ತರಕಾರಿ ಕೊಂಡಿದ್ದಳು. ಮಾಸ್ಕ್ ಇಬ್ಬರೂ ಹಾಕಿರಲಿಲ್ಲ.

ಫೋಟೋ ಕೃಪೆ :  Deccan Herald

ಆ ತಾಯಿಯ ಮನೆಯ ಜನ ಹೊರಗೆ ಹೋಗುವಾಗ ಮಾಸ್ಕ್ ಹಾಕುತ್ತಿರಲಿಲ್ಲ. ಪೋಲಿಸರು ಕಂಡಾಗ ದಂಡಕ್ಕೆ ಬೆದರಿ ಟವೆಲ್ ಸುತ್ತಿ ಕೊಳ್ಳುತ್ತಿದ್ದರು.

ಬೆಂಗಳೂರಿನಿಂದ ಬಂದಿಳಿದಿದ್ದ ಸಂಬಂಧಿಕ, ಮನೆಗೆ ಬಂದು ಆತಿಥ್ಯ ಸ್ವೀಕರಿಸಿ ನಡೆದಿದ್ದ. ಇವಾಗ ನಿಮ್ಮ ಸಂಶಯ ಬಗೆಹರಿದಿರಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿರುವ ವ್ಯಕ್ತಿ, ಕರೋನಾ ಕಾಯಿಲೆ ಬಂದಿದ್ದರೂ ಹೆಚ್ಙಿನ ಲಕ್ಷಣಗಳು ಗೋಚರಿಸದಿದ್ದಾಗ ,(Asymptomatic patient), ಅಲಕ್ಷಿಸಿ ಊರಿಂದ ಊರಿಗೆ, ಮನೆಯಿಂದ ಮನೆಗೆ ಓಡಾಡಿ, ಕಾಯಿಲೆ ಹಂಚುವರು. (Super Spreader)

ವಯಸ್ಸಾದವರೂ, ರೋಗನಿರೋಧಕ ಶಕ್ತಿ ಕಡಿಮೆಯಿರುವವರು ಕಾಯಿಲೆ ಅಂಟಿಸಿಕೊಂಡು ತೀವ್ರವಾಗಿ ಭಾದಿಸಲ್ಪಡುತ್ತಾರೆ. ಮನೆಯವರ ಅಲಕ್ಷ್ಯ, ಹೊರಗೊದಾಗ ಮಾಸ್ಕ್ ಧರಿಸದೆ ಇರುವುದು ಅಥವಾ ಕಾಟಾಚಾರಕ್ಕೆ ಮಾಸ್ಕ್ ಧರಿಸುವುದು, ಪರ ಊರಿನವರ ಸಂಪರ್ಕ, ಗುಂಪಿನಲ್ಲಿ ಓಡಾಡುವುದು, ಲಾಕ್ ಡೌನ್ ಇದ್ದರೂ ನಿಯಮ ಉಲ್ಲಂಘಿಸಿ “ನನಗೇನಾಗಲ್ಲಾ!!! ಕರೋನಾ ಸುಳ್ಳು” ಎಂದು ಉಢಾಪೆ ತೋರುವುದು.



ಇಂತವೆಲ್ಲ ಕಾರಣಗಳಿಂದ ನೀವು ಕರೋನಾ ಸೋಂಕಿತರಾಗಿ, ಹೆಚ್ಚು ಬಳಲದೆ ಮೇಲೆದ್ದು, ಮನೆಯೊಳಗಿನ ವಯಸ್ಸಾದ ತಂದೆ, ತಾಯಿ, ಅಜ್ಜ, ಅಜ್ಜಿ, ಮಕ್ಕಳಿಗೆ ಯಥೇಚ್ಙವಾಗಿ ಸೋಂಕು ಹಂಚುವುದು ಯಾವ ನ್ಯಾಯ.???

ವ್ಯವಸ್ಥೆಯನ್ನು ದೂರುವ ಮೊದಲು ನಾವು “ಜವಾಬ್ದಾರಿ”ಯುತರಾಗೋಣ.

ನಮ್ಮ ಹಳ್ಳಿ ಬೆಂಗಳೂರಾಗದಿರಲಿ..!!!!!!!

ಇವಾಗ ಬಂದಿರೋದು ಕರೋನಾ ೨ ನೇ ಅಲೆಯಂತೆ (ಕೆಲವರ ಪ್ರಕಾರ ೩ ನೇ ಅಲೆ).ಕರೋನಾ ವೈರಸ್ ತನ್ನೊಳಗೆ ಬದಲಾಗಿದೆ (mutation), ಮೊದಲು ತೋರುತ್ತಿದ್ದ ಕಾಯಿಲೆ ಗುಣಲಕ್ಷಣಗಳು ಬದಲಾಗಿವೆ. ಕಾಯಿಲೆಯ ಗಂಭೀರತೆ ಹೆಚ್ಚಿದೆ.

ನಿಮಗಾಗಲಿ, ಮನೆಯಲ್ಲಿನ ಹಿರಿಯರಿಗಾಗಲಿ ಆರೋಗ್ಯ ಹದಗೆಟ್ಟಾಗ ನಿಮ್ಮ ವೈದ್ಯರಿಗೆ ಪೋನಾಯಿಸಿ. ಸ್ವಯಂ ಚಿಕಿತ್ಸೆ ಅಪಾಯಕಾರಿ. ಇಷ್ಟೂದ್ದ ಬರೆದಿದ್ದು ನಿಮ್ಮನ್ನ ಹೆದರಿಸಲಲ್ಲ. ಎಚ್ಚರಿಕೆಯಿಂದಿರಿ, ನಿಯಮಗಳನ್ನು ಪಾಲಿಸಿ ಎಂದು ತಿಳಿಸಲಷ್ಟೆ.

ಮುನ್ನೆಚ್ಚರಿಕೆ ಮತ್ತು ಮನೋ ಧೈರ್ಯವಿದ್ದರೆ ಕರೋನಾ ನಿಮ್ಮ ಕೂದಲನ್ನು ಸೊಂಕಿಸಲಾರದು.

ಕೆಮ್ಮಿದ್ದೆಲ್ಲಾ ಕರೋನವಲ್ಲ!!!!

 

  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW