ಯಾಲಕ್ಕಿ ಪರಿಮಳ ಜೊತೆ ಬ್ಯಾಡಗಿ ಮೆಣಸಿನಕಾಯಿ ಘಾಟಿನ ಲೇಖನಗಳ ಗುಚ್ಛ. ಸಂತರ ನಾಡು, ಯಾಲಕ್ಕಿ ಕಂಪಿನ “ಹಾವೇರಿ” ಜಿಲ್ಲೆಯ ಭಾಷಾ ಸೊಗಡು ಕೇಳಲು ಗಡುಸು ಅನಿಸಿದರೂ, ಹೃದಯಾಂತರಾಳದಿಂದ ಬರುವ ನಿಷ್ಕಲ್ಮಶ, ಕಪಟರಹಿತ ನುಡಿ. “ಹಾವೇರಿಯಾಂವ್” ಆ ನೆಲದ ಸೊಗಡನ್ನಿಟ್ಟುಕೊಂಡು ಶ್ರೀಮಾಲತೇಶ ಅಂಗೂರ ಅವರು ಬರೆದಂತಹ ಪುಸ್ತಕ .
ಇಂತಹ ಗಂಡು, ಗಡಸು ಭಾಷೆಯಲ್ಲಿ ಸಂಪೂರ್ಣ ಪುಸ್ತಕ ಬರೆದವರನ್ನು ನಾನು ನೋಡಿಲ್ಲ, ಓದಿಲ್ಲ. ಉತ್ತರ ಕರ್ನಾಟಕ ಹೊರತುಪಡಿಸಿ ಇನ್ನುಳಿದ ಪ್ರಾದೇಶಿಕ ಜನರಿಗೆ ಅಷ್ಟು ಸುಲಭವಾಗಿ ಅರ್ಥವಾಗದ ” ವೈವಿಧ್ಯ ಭಾಷೆ” ಎಂದು ಯಾರೂ ಪ್ರಯತ್ನಿಸಿಲ್ಲ ಅನಿಸುತ್ತೆ. ನನ್ನ ನಂಬಿಕೆಯನ್ನು ಹುಸಿಯಾಗಿಸಿದ್ದು ಮತ್ತು ವೈಶಿಷ್ಟ್ಯತೆಯನ್ನ ತನ್ನೊಳಗೆ ಹುದುಗಿಸಿಕೊಂಡ ಪುಸ್ತಕ. ಲೇಖಕ, ಪತ್ರಕರ್ತ ಮತ್ತು ಹವ್ಯಾಸಿ ಛಾಯಾಗ್ರಾಹಕರಾದ ಹಿರಿಯ ಶ್ರೀಮಾಲತೇಶ ಅಂಗೂರ [ Malatesh Angur ]ಅವರ ಲೇಖನಿಯಿಂದ ಹಸ್ತಕ್ಕಿಳಿದ “ಹಾವೇರಿಯಾಂವ್” ಎನ್ನುವ ಪುಸ್ತಕ.

ತನ್ನ ಹೆಸರಿನಿಂದಲೇ ಸೆಳೆಯುವ ” ಹಾವೇರಿಯಾಂವ್” ಜವಾರಿ ಭಾಷೆಯಲ್ಲಿರುವ ಛಾಟಿಯೇಟಿನ, ಸಾಮಾಜಿಕ ಕಳಕಳಿಯ ಬರಹಗಳ ಸಂಗ್ರಹ.
ಬರಹಗಳ ತುಂಬಾ ಓಡಾಡುವ, ಲೇಖಕರ ಲೇಖನಿಯಿಂದಿಳಿದ “ಪಾಟೀಲ ಕಾಕಾ(ಕಾಕಾ)”, “ಬಸಣ್ಣ”(ಬಸ್ಯಾ) ನಮ್ಮ ಹಾವೇರಿಯ ಪ್ರತಿನಿಧಿಗಳಂತೆ ಗೋಚರಿಸುತ್ತಾರೆ. ವಿವಿಧ ಪ್ರಚಲಿತ ವಿದ್ಯಮಾನಗಳನ್ನ ವಿಶೇಷವಾಗಿ ವಿಶ್ಲೇಷಣೆ, ವಿಡಂಬನೆ, ಗೇಲಿ, ಟೀಕೆ ಮಾಡುತ್ತಾ, ಜನಸಾಮಾನ್ಯನ ಆಕ್ರೋಶ ಹೊರಹಾಕುತ್ತಾ ಸಾಗಿದ್ದಾರೆ. ಅಲ್ಲಲ್ಲಿ “ಮುಟ್ಟಿ ನೋಡಿಕೊಳ್ಳುವಂತೆ” ತಮ್ಮ ಲೇಖನದ ಕತ್ತಿಯನ್ನ ಬೀಸಿದ್ದಾರೆ. ಬರಹಗಳು ತುಂಬಾ ವಿಶೇಷ ವಿಡಂಬನಾ ಶೈಲಿಯನ್ನು ತಮ್ಮದಾಗಿಸಿಕೊಂಡಿರುವ ಲೇಖಕರು, ಹೊಸ ಬರಹ ಶೈಲಿಗೆ ಬುನಾದಿ ಹಾಕಿದ್ದಾರೆ. “ಹೀಗೂ ಬರಿಯಬಹುದು” ಅಂತ ಸೂಕ್ಷ್ಮವಾಗಿ ಗುನುಗಿದ್ದಾರೆ.
ಹಾವೇರಿಯ ಆಡುಮಾತಿನಲ್ಲಿ ಛಡಿಯೇಟು ಬೀಸಿದರೆ ಬೆತ್ತಲಾಗುವುದು ದಿಟ ಎಂಬುದನ್ನು ಸಾಕ್ಷೀಕರಿಸಿದ ಬರಹಗಳಿವು. ಲೇಖಕರು ತಮ್ಮ “ಲೇಖನಿ”ಯನ್ನ ಯಾರಿಗೂ.. ಎಲ್ಲಿಯೂ “ಒತ್ತೇ” ಇಡದೆ, “ಬಿಡೇ” ಇಲ್ಲದೆ ಜಡಿದು ಬರೆದದ್ದು ವಿಶಿಷ್ಠ ಗುಣ. ಇದು ಕೇವಲ ಕೆಲವೆ ಲೇಖಕರಲ್ಲಿ ಕಂಡುಬರುವಂತ ಧಾಡಸಿತನ.
ಹಣ, ಹೆಂಡಕ್ಕೆ ಓಟು ಹಾಕುವ ಜನಸಾಮಾನ್ಯ, ಗೋಸುಂಬೆ ರಾಜಕಾರಣಿ, ಪಕ್ಷಾಂತರಿ, ಸರ್ಕಾರದ ವೈಖರಿ, ಪಕ್ಷಗಳಲ್ಲಿ ತಿಕ್ಕಾಟ, ಹಣಬಾಕ ವೈದ್ಯ, ಭ್ರಷ್ಟ ಅಧಿಕಾರಿ, ನಕಲಿ ಕಾವಿಧಾರಿ, ಪೊಳ್ಳು ಹೋರಾಟಗಾರರು, ಕಪಟ ಸಾಹಿತಿ, ಪುಡಾರಿಗಳು, ಹೇಳಿದ್ದನ್ನೆ ಹೇಳಿ ಅರಚಾಡುವ ನ್ಯೂಸ್ ಚಾನಲ್ಗಳನ್ನ, ಯಡಿಯೂರಪ್ಪ, ಕುಮಾರಸ್ವಾಮಿ, ಕೊನೆಗೆ ಪ್ರಧಾನಿ ಮೋದಿಯವರನ್ನೂ ಬಿಡದೇ ತಮ್ಮ ಲೇಖನಿ ಜಳಪಿಸಿ, ಜಾಡಿಸಿದ್ದಾರೆ. ಜನಸಾಮಾನ್ಯನ ಮನಸ್ಸಿನ ಮಾತುಗಳಿಗೆ ಧನಿಯಾಗಿದ್ದು ವಿಶೇಷ ಲಕ್ಷಣ. ಜಗತ್ತನ್ನು ವಿಶ್ಲೇಷಣೆ ಮಾಡುವ ಪರಿ ಅಚ್ಚರಿ ತರುವುದು ದಿಟ.
ಮೋದಿ “ಇ- ಮೇಲ್ ಮತ್ತು ಡಿಜಿಟಲ್ ಕ್ಯಾಮೆರಾ ಬರುವ ಮೊದಲೇ ಇ-ಮೇಲ್ ಬಳಸಿದ್ದೇನೆ, “ಅಡ್ವಾಣಿ ಫೋಟೋ ಡಿಜಿಟಲ್ ಕ್ಯಾಮೆರದಲ್ಲಿ ಸೆರೆಹಿಡಿದಿದ್ದೆ” ಅನ್ನೋ ಮಾತನ್ನ ಮೂದಲಿಸಿ, ಸಾಮಾನ್ಯ ಜ್ಞಾನವೂ ಇಲ್ಲದ, ಸುಳ್ಳಿನ ಸೌದ ಕಟ್ಟೋರು ಅಂತ ಗೇಲಿ ಮಾಡಿದ್ದು ನಿಷ್ಠುರ ಬರಹಕ್ಕೆ ಸಾಕ್ಷಿ.

ಯಾವ ಪಕ್ಷಕ್ಕೂ, ನಿಲುವುಗಳಿಗೂ ಅಂಟಿಕೊಳ್ಳದೆ ಬರೆಯುತ್ತಾ ಮುಂದಡಿಯಿಟ್ಟಿದ್ದಾರೆ. ಪ್ರಬುದ್ಧ ಬರಹಗಾರ, ಸಾಮಾಜಿಕ ಜವಾಬ್ದಾರಿಯ ಪತ್ರಕರ್ತ, ಪ್ರಜ್ಞಾವಂತ, ಸಾಹಿತ್ಯಗಾರ, ಮೇಷ್ಟ್ರು, ಚಾಲಾಕಿ ವ್ಯಕ್ತಿ, ಸೂಕ್ಷ್ಮ ಕಣ್ಣುಗಳ ಬುದ್ಧಿವಂತರಾಗಿ ವಿವಿಧ ಆಯಾಮಗಳನ್ನ ಒಳಗೊಂಡ ಲೇಖನಗಳನ್ನು ಕೆತ್ತಿ ಕೈಗಿಟ್ಟಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ದೇವಸ್ಥಾನ ಕಟ್ಟುವ ಕಾರ್ಯ ಮೂರ್ಖತನದ್ದು ಎಂದು ಟೀಕಿಸಿ, ಮೊದಲು ಮೂಲ ಸೌಕರ್ಯಗಳನ್ನು, ಔಷಧಿ, ನರ್ಸ, ವೈದ್ಯರನ್ನ ನೇಮಿಸಿರಿ ಅಂತಾ ಸರ್ಕಾರಕ್ಕೆ “ಮುಜುಗರ” ತರುವಂತೆ ಆರ್ಭಟಿಸಿದ್ದಾರೆ. ಚುನಾವಣೆಗಳು ಹತ್ತಿರ ಬಂದಾಗ, ರಾಜಕಾರಣಿಗಳ ಮಳ್ಳ ಆಶ್ವಾಸನೆಗಳು, ಮನೆ ಮುಂದೆ ರೈಲು ಬಿಟ್ಟಂತೆ ಅಂತಾ ಜನರನ್ನ ಎಚ್ಚರಿಸಿ, ರಾಜಕಾರಣಿ ಆರಿಸುವಲ್ಲಿ ಎಡವದಿರಿ ಅಂತಾ ಕಿವಿಮಾತು ಹೇಳಿದ್ದಾರೆ.
ಮಂಡ್ಯದ ಚುನಾವಣೆ ಸಮಯದಲ್ಲಿ ಸುಮಲತಾ ಅಂಬರೀಷ್, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮುಂತಾದವರ ಬಗ್ಗೇನೆ ಅರಚಾಡಿದ 24×7 ವಾಹಿನಿಗಳನ್ನ ಟೀಕಿಸಿದ್ದು, ಇಷ್ಟುದ್ದ ಗಡ್ಡ, ಜಡೆ, ಗುಢಾಣದಂತ ಹೊಟ್ಟೆಯ ನಕಲಿ ಜ್ಯೋತಿಷಿಗಳನ್ನ ಜವಾರಿ ಭಾಷೆಯಲ್ಲಿ ತೊಳೆಯದೆ ಬಿಟ್ಟಿಲ್ಲ.
ಪ್ರಸ್ತುತ ವಿದ್ಯಮಾನ, ಸಂದರ್ಭಗಳನ್ನ ವಿಡಂಬನೆ ಮಾಡಲು, ಓರೆಗೆ ಹಚ್ಚಲು ಹಾವೇರಿ ಜನಮಾನಸದಿಂದ ಆಡುಮಾತು, ಗಾದೆಮಾತುಗಳನ್ನ ಹೆಕ್ಕಿ, ತಲವಾರ್ ನಂತೆ ಬಳಸಿದ್ದು ಲೇಖಕರ ಸೂಕ್ಷ್ಮ ಮತಿಗೆ ಹಿಡಿದ ಕೈಗನ್ನಡಿ.
“ಬರೋದು ಮೂರು ಕಾಸು, ಕ್ವಾಣಿ ತುಂಬಾ ಹಾಸು
ಅಜ್ಜಿಗೆ ಅರಿವೆ ಚಿಂತಿಯಾದರ, ಮೊಮ್ಮಗಳಿಗೆ ಮಿಂ… ಚಿಂತಿ
ಹಣ್ಣೆಲಿ ಉದುರ ಮುಂದ, ಚಿಗರೆಲಿ ನಗ್ತಿತಂತ
ಬಾಯಾಗ ಬೆಣ್ಣಿ, ಬಗಲಾಗ ಡೊಣ್ಣಿ
ಮಳಿಗಾಲ್ದಾಗ ಛತ್ರಿ ಬಿಡಬಾರದು, ಚಳಿಗಾಲದಾಗ ಹೆಂಡ್ತಿ ಬಿಡಬಾರದು
ಸುಂಕದರ ಮುಂದ ಸುಖ-ದುಖ ಹೆಳ್ಕೋಬಾರದು
ಉಂಡ್ ಉರಿಲೇ ಮೂಳಾ ಅಂದ್ರ ನಾ ಉಪವಾಸ ಉರೇಂವಾ
ಗಾಳಿ ಬಿಟ್ಟಾಗ ತೂರಿಕೂ, ಎಲೆಕ್ಷನ್ ಬಂದಾಗ ಮಾರಿಕೋ
ಯೋಗಿ ಪಡದದ್ದು ಯೋಗಿಗೆ, ಜೋಗಿ ಪಡದದ್ದು ಜೋಗಿಗೆ”
ಮುಂತಾದ ಹತ್ತಾರು ಆಡುಮಾತಿನ ಪ್ರಾದೇಶಿಕ “ಗಾದೆ ಮಾತು”, ನಾಣ್ಣುಡಿಗಳನ್ನ ಹದವಾಗಿ ಬಳಸಿ, ಬಿಸಿ ಮುಟ್ಟಿಸಿ, ಹಲವರ ಜನ್ಮ ಜಾಲಾಡಿದ್ದಾರೆ.ಯಾರಿಗೂ ಮುಲಾಜಿಲ್ಲದೆ “ಲೇಖನಿ ಝಳಪಿಸಿ” ಹಲವರ ಮನಸ್ಥಿತಿಯ ಲಾಡಿ ಸಡಿಲಿಸಿ, ಬಟ್ಟೆ ಕಳೆದು ಬೆತ್ತಲಾಗಿಸಿದ್ದಾರೆ. ಖಬರಗೇಡಿ ರಾಜಕಾರಣಿಗಳಿಗೆ ಇವರ ಬರಹದಿಂದ ಸಣ್ಣಗೆ ಚಳಿ ಬರುವುದಂತೂ ಪಕ್ಕಾ. ಎಲ್ಲರೂ ಪಡ್ಚಾ… ನಿಷ್ಠುರ ಬರಹಗಳು. ಆದರೆ ಎಲ್ಲೂ ವಿಷಯಾಂತರ, ದುರುದ್ದೇಷ ಎನಿಸಲ್ಲ. ತನ್ನದೆ ಚೌಕಟ್ಟನ್ನು ಮೀರಿ ಬರೆಸಿಕೊಂಡ ಸಭ್ಯ ಲೇಖನಗಳಿವು.

“ಹಾವೇರಿಯಾಂವ್” ಪುಸ್ತಕದಿಂದ ಆಡು ಮಾತು, ಗಾದೆಮಾತುಗಳನ್ನ ಆರಿಸಿ ಪ್ರಕಟಿಸಿದರೆ ” ಹಾವೇರಿ ಹೈದನ ಹೊತ್ತಿಗೆ” (ಗಾದೆಮಾತುಗಳ ಸಂಗ್ರಹ) ಎಂದು ಮತ್ತೊಂದು ಪುಸ್ತಕ ಪ್ರಕಟಿಸಬಹುದು. ಲೇಖಕರು ಈ ವಿಚಾರ ಮಾಡಲಿ ಎಂದು ಆಶಿಸುವೆ. ರಾಣೇಬೆನ್ನೂರಿನ ಖ್ಯಾತ ಚಿತ್ರಕಲಾವಿದ ನಾಮದೇವ ಕಾಗದಗಾರ ಬಿಡಿಸಿದ ಅಪರೂಪದ ವ್ಯಂಗ್ಯಚಿತ್ರಗಳು ಲೇಖನಗಳಿಗೆ ಕಳಸವಿಟ್ಟಂತಾಗಿವೆ.
“ಹಾವೇರಿಯಾಂವ್” ವಿಶಿಷ್ಠ ಆಡುಭಾಷೆಯ ಬರಹಗಳ ಗುಚ್ಚ. ತನ್ನದೆ ಆದ ನವ್ಯ ಶೈಲಿ ಹುಟ್ಟುಹಾಕಿದ ಪುಸ್ತಕ. ಹಾವೇರಿಯ ಮಣ್ಣಿನ ಪರಿಮಳ ಸೂಸುವ ಅಪರೂಪದ ಬರಹ ಜಗತ್ತು. ಯಾಲಕ್ಕಿ ಕಂಪು ಜೊತೆ ಬ್ಯಾಡಗಿ ಮೆಣಸಿನಕಾಯಿ ಘಾಟು ಹೊಂದಿರುವ ಲೇಖನಗಳ ಸರಮಾಲೆ. ಹಾವೇರಿ ಭಾಷೆಯ ಸೊಗಡು, ಸೌಂದರ್ಯ ಸವಿಯಲು. ಹೊಸ ಶೈಲಿಯ ರುಚಿ ಅನುಭವಿಸಲು ಪ್ರತಿಯೊಬ್ಬ “ಸಾಹಿತ್ಯ ಪ್ರೇಮಿ”, ಕನ್ನಡಿಗ ಓದಬೇಕಾದ ಪುಸ್ತಕವಿದು.
ಒಮ್ಮೇ ಓದಿ, ಅನುಭವ ಹಂಚಿಕೊಳ್ಳಿ. ನಮ್ಮ ಭಾಷೆಯನ್ನ ಬಳಸುವುದು, ಬೆಳೆಸುವುದು ನಮ್ಮದೇ ಜವಾಬ್ದಾರಿ.
ಪುಸ್ತಕ ಖರೀದಿಗೆ ಸಂಪರ್ಕ:
೯೪೪೮೦೨೯೪೧೭ ಅಥವಾ ೯೪೮೧೭೪೯೪೪೦ ನಂಬರಿಗೆ ಕರೆ ಮಾಡಿ ಖರೀದಿಸಬಹುದು. ಪೋಸ್ಟ್ ಮೂಲಕ ನೀವಿದ್ದಲ್ಲಿಗೆ ಬರುತ್ತದೆ.
- ಡಾ.ಪ್ರಕಾಶ ಬಾರ್ಕಿ, ಕಾಗಿನೆಲೆ.
