‘ನಾನು ನಿಮ್ಮವನಲ್ಲ’ ಕವಿತೆ – ಸಂತೆಬೆನ್ನೂರು ಫೈಜ್ನಟ್ರಾಜ್



ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಪ್ರೇಮಕವಿ. ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಅಧ್ಯಾಪಕರಾಗಿದ್ದು,ಅವರ ಕಥಾವಸ್ತು ಪ್ರೇಮವಾದರೂ ಎಲ್ಲಿಯೂ ಬೇಸರ, ಏಕತಾನತೆ ಕಾಣದಂತೆ ಸೂಕ್ಷ್ಮವಾಗಿ ತಮ್ಮ ಕವನಗಳನ್ನು ಕಟ್ಟಿಕೊಡುವಲ್ಲಿ ಸದಾ ಮುಂದಾಗಿರುತ್ತಾರೆ. ಓದುಗರಿಗಾಗಿ ಅವರ ‘ನಾನು ನಿಮ್ಮವನಲ್ಲ’…

ಹಣೆಯಲಿ ಬಣ್ಣದ ಗುರುತು, ಕೊರಳ ದಾರ
ಎದೆಯ ಪದಕ ಒಂದೂ ಇಲ್ಲ
ನಡೆಯುತ್ತಿದ್ದೇನೆ ನಾಳೆಯ ಕಡೆಗೆ
ಕೈಯಲ್ಲಿಷ್ಟು ಬೀಜಗಳ ಹಿಡಿದು
ಹದ ನೆಲ ಸಿಕ್ಕರೆ ಬಿತ್ತಿ ಮುಗಿಲಿಗೆ ಮುಖ ಮಾಡಲೆಂದು…ಕ್ಷಮಿಸಿ ನಾನು ನಿಮ್ಮವನಲ್ಲ!

ತಲೆಯ ಮೇಲೆ ಟೋಪಿ
ನೆತ್ತಿ ಸಮೀಪ ಕಪ್ಪು ಚುಕ್ಕೆ
ಮೈ ತುಂಬ ಅತ್ತರು ಇಲ್ಲ
ನಡೆಯುತ್ತಿದ್ದೇನೆ ಕನಸುಗಳ ಮೂಟೆ ಹೊತ್ತು
ಎದೆ ತುಂಬಾ ಹನಿವ ಹಯನಿದೆ
ಯಾರು ಸಿಕ್ಕರೂ ಹನಿಸಿ ಸಾಗುವೆ..ಬಿಡಿ ನಾನು
ನಿಮ್ಮವನಲ್ಲ!

ಕೊರಳು ನೋಡಿ ಫಲಕವಿಲ್ಲ
ಎಡದಿ ಬಲಕೆ, ಹಣೆಯಿಂದ ಎದೆಗೆ ಕೈ
ಮುಟ್ಟಿ ಬರುವ ಸನ್ನೆಯಿಲ್ಲ
ಬರಿದೆ ಪಯಣ ಹಜ್ಜೆಗಳ ಜೊತೆ ಮುಂದೆ
ಸಿಕ್ಕಾರು ನಾಲ್ಕು ಜನ
ಮನುಷ್ಯರೆನಿಕೊಂಡಾರೆಂದು; ಮನ
ಬುದ್ಧ,ಬಸವ,ಬಾಪು- ಗಳ ಹೊತ್ತಿಲ್ಲ..ಇಸ
ವಿರದ ಹಣ್ಣ ಹುಡುಕುತ್ತಾ ನಡೆದೆ..ನಾನು ನಿಮ್ಮವನಲ್ಲ

ನಿಮ್ಮ ಕಣ್ಣಿ ಗೆ ನಾನು ಎಲ್ಲ
ಆಗಬಲ್ಲೆ; ಮನಜನೆನಿಸುವ ಕುರುಹು ನನ್ನಲಿ
ಇಲ್ಲವೆಂದೇ
ಚಿಹ್ನೆಗಳ ಸ್ಕೇಲು, ಟೇಪು ಹಿಡಿದಿದ್ದೀರಿ..ಆದರೆ
ನಾನು ನಿಮ್ಮವನಲ್ಲ!


  • ಸಂತೆಬೆನ್ನೂರು ಫೈಜ್ನಟ್ರಾಜ್ (ಪ್ರೇಮಕವಿ, ಕತೆಗಾರ, ಕನ್ನಡ ಅಧ್ಯಾಪಕರು), ಸಂತೆಬೆನ್ನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading