ಏಪ್ರಿಲ್ ೨೪,”ರಾಜ್” ಉತ್ಸವ – ಹಿರಿಯೂರು ಪ್ರಕಾಶ್



“ರಾಜ‌” ನೊಳಗೊಬ್ಬ ಮುತ್ತುರಾಜ, ಕನ್ನಡದ ಮುತ್ತಿನ ಜನುಮದಿನ.  ನವಂಬರ್ ಒಂದು, ಅಖಂಡ ಕರುನಾಡಿಗೆ ರಾಜ್ಯೋತ್ಸವವಾದರೆ, ಏಪ್ರಿಲ್ ೨೪ ಅಸಂಖ್ಯಾತ ಕನ್ನಡಿಗರ ಪಾಲಿಗೆ, ಈ ನೆಲ‌, ಜಲ‌, ನುಡಿ- ಗಡಿಯನ್ನು ಪ್ರೀತಿಸುವವರ ಪಾಲಿಗೆ ಮತ್ತೊಂದು ರಾಜ್ಯೋತ್ಸವ…”ರಾಜ್” ಉತ್ಸವ.

ವಿಶಾಲವಾದ ಆಕಾಶ ಹಾಗೂ ಸಾಗರದ ಆದಿ‌ ಅಂತ್ಯಗಳನ್ನು ಹಿಡಿದಿಡುವುದು ಹೇಗೆ ಸಾಧ್ಯವಿಲ್ಲವೋ, ಲೌಕಿಕ ಬದುಕಿನಲ್ಲಿ ಸಾಧಾರಣವಾಗಿದ್ದುಕೊಂಡೂ ಕೇವಲ ತನ್ನ ದೈತ್ಯ ಪ್ರತಿಭೆಯಿಂದ ಅಸಾಧಾರಣವಾದದ್ದನ್ನು ಸಾಧಿಸಿದ ಕೆಲವು ಮಹೋನ್ನತ ವ್ಯಕ್ತಿತ್ವಗಳ‌ ಕುರಿತಾಗಿ ಬರೆಯುವಾಗ ಎಲ್ಲಿಂದ ಆರಂಭಿಸಿ ಹೇಗೆ ಮುಕ್ತಾಯ‌ ಮಾಡಬೇಕೆಂಬ ಅಂಶ ಯೋಚನೆಗೂ ಸಿಗಲಾರದು. ವಿಸ್ಮಯವೆಂದರೆ ಅಂತಹವರ‌ ಬಗೆಗೆ ನೂರಾರು ಕೃತಿಗಳು, ವಿಡಿಯೋಗಳು ಸಂದರ್ಶನಗಳು, ಬರಹಗಳು ಈಗಾಗಲೇ ಪ್ರಕಟವಾಗಿ ಆ ವಿಚಾರಗಳೆಲ್ಲವೂ‌ ಹಳತೇನೋ ಎಂಬ‌ ಭಾವನೆ ಎಂದೂ‌ ಬರಲಿಕ್ಕೆ ಸಾಧ್ಯವಿಲ್ಲದಷ್ಟು ನಾವೀನ್ಯತೆ ಆ‌ ವ್ಯಕ್ತಿತ್ವದಲ್ಲಿದೆ, ಅವರ ಸಾಧನೆಯಲ್ಲಿದೆ ಮತ್ತು ಒಂದು ಜನಪದವನ್ನು ಸರಿಯಾದ ಸಾಮಾಜಿಕ ಮೌಲ್ಯಗಳೆಡೆಗೆ‌ ಸದ್ದಿಲ್ಲದೇ ಕೊಂಡೊಯ್ದ ಅವರ ಪ್ರಚಾರವಿಲ್ಲದ ಪರೋಕ್ಷ ಕೊಡುಗೆಯಲ್ಲಿದೆ. ಹೀಗಿದ್ದರೂ ಆ‌ ವ್ಯಕ್ತಿ “ಎನಗಿಂತ ಕಿರಿಯರಿಲ್ಲ” ಎಂಬ‌ ಬಸವಣ್ಣನವರ ಉಕ್ತಿಯನ್ನೇ ಉಸಿರಾಗಿಸಿಕೊಂಡು ಅದರಂತೆ ಬಾಳಿ ಬದುಕಿ‌ ತೋರಿದವರು. ಥಳುಕು‌ ಬಳುಕಿನ‌ ಲೋಕದಲ್ಲಿ ಬದುಕು ಕಂಡುಕೊಂಡಿದ್ದರೂ ಅದರಿಂದಾಚೆಗಿನ ಮಾನವೀಯ ಅಂತಃಕರಣ‌ ಹೊಂದಿದ್ದವರು.

ರಾಜನ‌ ಪೋಷಾಕು, ದರ್ಬಾರು, ಬಣ್ಣ‌ಬಣ್ಣದ‌ ಲೋಕ ಇವೆಲ್ಲವೂ ‌ಕೇವಲ ರಂಜಿಸಲಿಕ್ಕಷ್ಟೇ, ಅದನ್ನು ನಿಷ್ಕಾಮದಿಂದ ಮಾಡುವುದಷ್ಟೇ‌ ನಮ್ಮ‌ ಕಸುಬು ಎಂಬ ಅಮಾಯಕತನದಿಂದ‌ ಇದ್ದಿದ್ದರಿಂದಲೇ ಅವರಿಗೆ ಒಲಿದ ಅಪಾರ ಜನಪ್ರಿಯತೆಯನ್ನು ಎಂದೂ ದುರುಪಯೋಗ ಮಾಡಿಕೊಳ್ಳದೇ ಸಾಮಾನ್ಯ ಜನರೊಂದಿಗೇ ಬೆರೆತು‌ , ಜನರೊಂದಿಗೇ‌ ಬಾಳಿ‌, ಸಾಮಾನ್ಯನಂತೆಯೇ ಬದುಕು ಸವೆಸಿ ಕೊನೆಗೆ‌ ಜನರಲ್ಲಿಯೇ, ತನ್ನನ್ನು ಆರಾಧಿಸುವ ಅಭಿಮಾನಿಗಳಲ್ಲಿಯೇ ದೇವರನ್ನು‌ ಕಂಡಂತಹ ಶತಮಾನದ ಅಚ್ಚರಿಯಾಗಿ ಇಂದಿಗೂ ನಮ್ಮಲ್ಲಿ‌ ವಿಸ್ಮಯ‌ ಹುಟ್ಟಿಸುವ ‌ನಿತ್ಯ‌ವಸಂತದಂತಹಾ‌ ವ್ಯಕ್ತಿತ್ವ ಅವರದು.!

ಅವರಾರೆಂದು ಈಗಾಗಲೇ ನಿಮಗೆ ಅರ್ಥವಾಗಿರಬೇಕಲ್ಲವೇ‌ ? ಅವರೇ ಕರುನಾಡಿನ‌ ಸಾಂಸ್ಕೃತಿಕ‌ ಲೋಕದ ರಾಯಭಾರಿಯಂತೆ‌ , ಕನ್ನಡಿಗರ ಔದಾರ್ಯದ ಅಸ್ಮಿತೆಯಂತೆ , ಕನ್ನಡ ಭಾಷಾ ಶ್ರೀಮಂತಿಕೆಯ ಪ್ರತಿಬಿಂಬದಂತೆ ಇದ್ದ, ಇರುವ, ಇರಲಿರುವ ನಮ್ಮೆಲ್ಲರ ‌ಅಚ್ಚುಮೆಚ್ಚಿನ ನಟಸಾರ್ವಭೌಮ, ವರನಟ, ಕನ್ನಡ ಕಂಠೀರವ ಡಾ.ರಾಜ್‌ಕುಮಾರ್ , ಎಲ್ಲರ ನೆಚ್ಚಿನ ಅಣ್ಣಾವ್ರು !

ಡಾ.ರಾಜ್ ರನ್ನು ಕನ್ನಡಿಗರು ಕೇವಲ ಒಬ್ಬ ಜನಪ್ರಿಯ ಸಿನಿಮಾ ನಟನಂತೆ ನೋಡಿದ್ದಲ್ಲಿ ಬಹುಶಃ ಈ ಪರಿಯ ಪ್ರೀತಿಗೆ, ಆಪ್ಯಾಯತೆಗೆ ಅಥವಾ ಅಭಿಮಾನಕ್ಕೆ‌ ಅವರು‌ ಭಾಜನರಾಗುತ್ತಿರಲಿಲ್ಲ. ಡಾ. ರಾಜ್ ಅವರಲ್ಲಿ, ಅವರ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಇಡೀ ಜನಸಮೂಹ ಅಭಿಮಾನಿ ಬಳಗ ತಮ್ಮನ್ನೇ ತಾವು ಕಂಡುಕೊಂಡರು, ಅರ್ಥ ಮಾಡಿಕೊಂಡರು, ತಮ್ಮ‌ ಬಾಳಿನ‌ ಆದರ್ಶವನ್ನಾಗಿಸಿಕೊಂಡರು. ಒಬ್ಬ ಆದರ್ಶ ಪುರುಷ ಹೇಗಿರಬೇಕೆಂಬ‌ , ಒಂದು‌ ಸದ್ವಿಚಾರ- ಸದಾಚಾರ ಹಾಗೂ ಸದ್ ಮೌಲ್ಯಗಳ ಪ್ರತಿ ಬಿಂಬವನ್ನು‌ ರಾಜ್‌ಕುಮಾರ್ ರವರ‌ ಪಾತ್ರಗಳಲ್ಲಿ ಕಾಣತೊಡಗಿದರು. ಅವರಲ್ಲಿ ಒಬ್ಬ ತಂದೆ, ಅಣ್ಣ, ಮಗ, ಬಂಧು, ಸ್ನೇಹಿತ ಆಪ್ತ ಹೀಗೆ ತಮ್ಮ ಬದುಕಿನ‌ ಎಲ್ಲಾ ಭಾಂದವ್ಯಗಳ ಕೊಂಡಿಯನ್ನೂ ಕಾಣತೊಡಗಿ, ಅವರ ಚಿತ್ರಗಳನ್ನೂ, ಅವರು‌ ನಿರ್ವಹಿಸಿದ‌ ಪಾತ್ರಗಳನ್ನೂ ಕೇವಲ ತೆರೆಯ‌ ಮೇಲೆ‌ ಮನರಂಜನೆಗಾಗಿ ನೋಡದೇ ಅವೆಲ್ಲವೂ ತಮ್ಮ‌ ಬದುಕಿನ‌ ಭಾಗವೆಂಬಂತೆ ಹಾಗೂ ಅವು ತಮ್ಮ‌ ವ್ಯಕ್ತಿತ್ವಗಳನ್ನು ರೂಪಿಸಲು‌ ಬಂದಂತಹಾ ರೂಪಕಗಳಂತೆ ಸ್ವೀಕರಿಸುತ್ತಾ‌ ಹೋದರು. ಹೀಗಾಗಿಯೇ ಅಣ್ಣಾವ್ರ ಚಿತ್ರಗಳು ಮತ್ತು ಪಾತ್ರಗಳು ಜನಪದದ ಮೇಲೆ ಸಾಮಾಜಿಕವಾಗಿ ಸತ್ಪರಿಣಾಮವನ್ನು ಬೀರಲು ಸಾಧ್ಯವಾಗಿದ್ದು. ಮೇಲಾಗಿ ತಾವು‌ ನಿರ್ವಹಿಸುವ ಪಾತ್ರಗಳು ಅಥವಾ ಚಿತ್ರಕಥೆ ಎಂದಿಗೂ ಸಮಾಜದ ಸ್ವಾಸ್ಥ್ಯಕ್ಕೆ, ಜನಪದದ ಮೌಲ್ಯಗಳ ಆಶಯಕ್ಕೆ‌ ವಿರುದ್ಧವಾಗಿರದಂತೆ ನೋಡಿಕೊಳ್ಳುತ್ತಾ ಬಂದಿರುವುದೂ ಸಹಾ ಅವರಲ್ಲಿದ್ದ ಸಮಾಜಮುಖೀ ಚಿಂತನೆಯ ಪ್ರತಿರೂಪವೆಂದೇ ಹೇಳಬಹುದು.

ಫೋಟೋ ಕೃಪೆ : pinterest

ಸುಮಾರು ಐದೂವರೆ ದಶಕಗಳ ಬಣ್ಣದ ಲೋಕದಲ್ಲಿ ಬದುಕು ಸವೆಸಿ, ಕಲಾ ಸೇವೆ- ಕನ್ನಡ ಸೇವೆಯನ್ನೇ ಉಸಿರಾಗಿಸಿಕೊಂಡು ಇನ್ನೂರ ಆರು ಚಿತ್ರಗಳಲ್ಲಿ‌ , ಮುನ್ನೂರಾ ಆರು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ, ಸಾವಿರಾರು ಗೀತೆಗಳನ್ನು ಹಾಡಿ, ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದೂ, ನೂರಾರು ಪ್ರಶಸ್ತಿ ಪಾರಿತೋಷಕಗಳನ್ನು ಗಳಿಸಿ, ತಾನು ನಟಿಸಿದ ಚಿತ್ರ ಗಳ ಸಕ್ಸೆಸ್ ರೇಟ್ ಶೇ 95 ಕ್ಕಿಂತಲೂ ಹೆಚ್ಚಿಗಿದ್ದು ಸೂಪರ್ ಸ್ಟಾರ್ ಆಗಿದ್ದೂ , ಅಧಿಕಾರದ ವ್ಯಾಮೋಹಕ್ಕೆ , ಅಂತಸ್ತಿನ ವಾಂಛಲ್ಯಕ್ಕೆ , ಕೀರ್ತಿ ಶನಿಯ ತೆಕ್ಕೆಗೆ, ಆಡಂಬರದ ಐಭೋಗಕ್ಕೆ, ಐಶ್ವರ್ಯದ ಐಲಿಗೆ, ಲೌಕಿಕ ಸುಖಗಳ ಕ್ಷಣಿಕತೆಗೆ ಎಂದೆಂದೂ ದಾಸನಾಗದೇ ಇದ್ದೂ , ತನ್ನನ್ನು ನಂಬಿದವರನ್ನೂ, ಮೆಚ್ಚಿಕೊಂಡವರನ್ನೂ ಆಶ್ರಯಿಸಿದವರನ್ನೂ ಅಭಿಮಾನಿಸಿದವರನ್ನೂ, ಅವಮಾನಿಸಿದವರನ್ನೂ ಒಂದೇ ತೆರನಾಗಿ ಕಾಣುತ್ತಾ ಅವರೆಲ್ಲರಲ್ಲೂ ಒಳ್ಳೆಯದನ್ನೇ‌ ಕಾಣುತ್ತಾ ಬಂದಿರುವ ಅವರ ಜೀವನದ ಪ್ರತೀ‌ ಭಾಗವೂ ಈ ಶತಮಾನದ ಅಚ್ಚರಿಯಂತೆ ಒಮ್ಮೊಮ್ಮೆ‌ ಭಾಸವಾಗುತ್ತದೆ. ಒಂದೇ ಸಾಲಿನಲ್ಲಿ‌ ಹೇಳುವುದಾದರೆ ” ಎಲ್ಲ ಇದ್ದು ಏನೂ ಇಲ್ಲದ ಹಾಗೆ ನಗುನಗುತ್ತಾ ಬಾಳಿ ಹಾಗೆಯೇ ಇಹಲೋಕ ತ್ಯಜಿಸಿದ ಸಂತನಂತೆ , ಒಬ್ಬ ಯೋಗಿಯಂತೆ, ಒಬ್ಬ ಅವಧೂತನಂತೆ ಅಣ್ಣಾವ್ರು‌ ಸಹೃದಯರ ಕಣ್ಣಿಗೆ ಗೋಚರವಾಗುತ್ತಾರೆ. ಒಂದು ವೇಳೆ ಈ ಮಾತುಗಳಲ್ಲಿ ಸತ್ವವಿಲ್ಲದಿದ್ದಲ್ಲಿ ಅವರು ಭೌತಿಕವಾಗಿ ಗತಿಸಿ ಹದಿನೈದು ವರ್ಷಗಳಾದರೂ ಅವರ ಸಮಾಧಿಯ ಮುಂದೆ, ಸ್ಮಾರಕದ ಮುಂದೆ ಸಹಸ್ರಾರು ಜನ ಇಂದಿಗೂ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ‌ ಬರುತ್ತಿರಲಿಲ್ಲ ; ಅವರ ಜನ್ಮದಿನವನ್ನು ಒಂದು ಉತ್ಸವದಂತೆ ಆಚರಿಸುತ್ತಿರಲಿಲ್ಲ ; ಅವರ ಪುಣ್ಯತಿಥಿಯಂದು ಏನನ್ನೋ‌ ಕಳೆದುಕೊಂಡ‌ ಭಾವ ಸಾಮಾನ್ಯರಲ್ಲಿ ಸ್ಫುರಿಸುತ್ತಿರಲಿಲ್ಲ. ಒಟ್ಟಾರೆಯಾಗಿ ಅವರು ನಮ್ಮೊಡನೆಯೇ‌ ಇದ್ದಾರೆಂಬ ಅದಮ್ಯ‌ ಭಾವಕ್ಕೆ ಅಲ್ಲಿ ಆಸ್ಪದವೇ‌ ಇರುತ್ತಿರಲಿಲ್ಲ…!

ಫೋಟೋ ಕೃಪೆ : filmibit

ಡಾ. ರಾಜ್ ರನ್ನು‌ ಅವರ‌ ವ್ಯಕ್ತಿತ್ವವನ್ನೂ ನಿಜಾರ್ಥದಲ್ಲಿಯೂ ಅವರು ನಟಿಸಿದ‌ ಚಿತ್ರಗಳ ಹೆಸರಿನಿಂದಲೂ ಗುರುತಿಸಬಹುದು. ಉದಾಹರಣೆಗೆ ನಟಸಾರ್ವಭೌಮ, ಬಂಗಾರದ ಮನುಷ್ಯ, ದೇವತಾ ಮನುಷ್ಯ, ಜಗಮೆಚ್ಚಿದ ಮಗ.. ಹೀಗೆ.! ಕೇವಲ ತೆರೆಯ ಮೇಲಷ್ಟೇ ಅಲ್ಲದೇ ನಿಜ ಜೀವನದಲ್ಲೂ ಅವರು ಈ ಅಭಿದಾನಗಳಿಗೆ ಪಾತ್ರರಾಗಿದ್ದರು. ಇದೇ ಸಾಲಿನಲ್ಲಿ ಹೇಳುವುದಾದರೆ ಅವರೊಬ್ಬ ಅಪ್ಪಟ ಕನ್ನಡ ಮಣ್ಣಿನ ” ಮಣ್ಣಿನಮಗ” ನಾಗಿಯೂ ಇದ್ದರೆಂಬುದು ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ. ಹೌದು…ಕನ್ನಡ ಮಣ್ಣಿನಲ್ಲಿ‌ ಜನಿಸಿದವರೆಲ್ಲರೂ ಮಣ್ಣಿನ‌ ಮಕ್ಕಳೇ. ಆ ಬಗ್ಗೆ ಅನುಮಾನ ಬೇಡ. ಆದರೆ ಝಗಮಗಿಸುವ ಚಿತ್ರರಂಗದಂತಹಾ ಸೆಲ್ಯೂಲಾಯ್ಡ್ ಲೋಕದ ಸೂಪರ್ ಸ್ಟಾರ್ ಒಬ್ಬರನ್ನು ಮಣ್ಣಿನ ಮಗ ಎನ್ನುವುದು ಹೇಗೆ ಎಂಬ‌ ಜಿಜ್ಞಾಸೆ ಹಲವರನ್ನು ಕಾಡಬಹುದು. ಈ ಬಗ್ಗೆ ಒಂದು ಸಣ್ಣ‌ ವಿವರಣೆ.

ಡಾ. ರಾಜ್‌ಕುಮಾರ್ ಎಂಬ ಕಲಾವಿದ, ಸ್ಟಾರ್ ನಟನ ಆಂತರ್ಯದಲ್ಲಿ ಸದಾ ಜೀವಿಸುತ್ತಿದ್ದ ಹಾಗೂ ಕ್ರಿಯಾಶೀಲವಾಗಿದ್ದ ಮತ್ತೊಬ್ಬ‌ ವ್ಯಕ್ತಿಯೆಂದರೆ ಅದು ಮುತ್ತುರಾಜ್ ! ಮುತ್ತುರಾಜ್ ಎಂಬುದು ರಾಜ್ ರ ಮೂಲ ಹೆಸರು. ರಾಜ್ ಕುಮಾರ್‌ ಕೇವಲ ಥಳುಕು‌ ಬಳುಕಿನ ಬಣ್ಣದ ಲೋಕಕ್ಕೆ ಸೀಮಿತವಾದರೆ ಈ ಮುತ್ತುರಾಜ್ ಎಂಬ ವ್ಯಕ್ತಿ ಸದಾ ಅವರ ಒಳಗಿನ ಕಣ್ಣಾಗಿ ಹೃದಯವಾಗಿ ಎಲ್ಲವನ್ನೂ ಆಸ್ವಾದಿಸುತ್ತಿದ್ದ. ಅದು ಜನರೊಡನೆ ಬೆರೆಯುವ ಮನೋಭಾವವಾಗಿರಬಹುದು, ಸಹಭೋಜನವಾಗಿರಬಹುದು, ಸರಳತೆಯನ್ನೇ ಇಷ್ಟಪಡುವ ಮನಸ್ಸಾಗಿದ್ದಿರಬಹುದು, ಲೌಕಿಕ ಸುಖಕ್ಕೆ‌ ಹಣದ ವ್ಯಾಮೋಹಕ್ಕೆ ಪೂರ್ಣವಾಗಿ ಒಗ್ಗಿಸಿಕೊಳ್ಳದ ಮನಸ್ಥಿತಿಯಾಗಿರಬಹುದು, ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವ ಅಥವಾ ಹಳೆಯ ಒಡನಾಡಿಗಳನ್ನು ಗುರುತಿಸಿ ಅಪ್ಪಿಕೊಳ್ಳುವ, ಮಗುವಿನ‌ ಮುಗ್ಧತೆಯಲ್ಲಿ ಕಳೆದು ಹೋಗುವ , ನಗರಕ್ಕಿಂತ ಹಳ್ಳಿಯನ್ನು ಹೆಚ್ಚು ಇಷ್ಟಪಡುವ ಅಂಶವಾಗಿರಬಹುದು…..ಇದು ಮುತ್ತುರಾಜನನ್ನು ಸದಾ ಜೀವಂತವಾಗಿಟ್ಟಿದ್ದರ ಫಲವೇ ! ಈ ಅಂಶಗಳಿಂದ ಹೇಳುವುದಾದರೆ ಅವರ ಹೆಸರಲ್ಲಿ ಮಾತ್ರ ರಾಜ‌ನಿದ್ದನೇ‌ ಹೊರತು ಅವರ ಆಂತರ್ಯದಲ್ಲಿದ್ದುದು ಪ್ರಜೆ ಮಾತ್ರ. ಹೀಗಾಗಿಯೇ ಅವರು ಈ ಮಣ್ಣಿನ ಸೊಗಡಿನ ಅಚ್ಚಳಿಯದ ವ್ಯಕ್ತಿತ್ವದ ಮಗ.

ಫೋಟೋ ಕೃಪೆ : Pinterest

ಬಹುಶಃ ಈ ಕಾರಣಕ್ಕಾಗಿಯೇ ಡಾ. ರಾಜ್ ರವರಿಗೆ ತಮ್ಮ ಹುಟ್ಟೂರು ಗಾಜನೂರು, ಅಲ್ಲಿನ ಪರಿಸರ, ಬೆಟ್ಟ ಗುಡ್ಡ, ಹಳ್ಳಿಯ ಮನೆ, ವಾತಾವರಣ, ಕೃಷಿ ,ಅಲ್ಲಿನ ಜನ ಮಣ್ಣು ಎಲ್ಲವನ್ನೂ ಕಂಡರೆ ಪಂಚ ಪ್ರಾಣವಾಗಿದ್ದು. ಗಾಜನೂರಿಗೆ ಹೋಗುವಾಗ ಅವರು ನಟಸಾರ್ವ ಭೌಮ, ಪದ್ಮಭೂಷಣ, ವರನಟ, ದಾದಾ ಸಾಹೇಬ್ ಫಾಲ್ಕೆ ವಿಜೇತ, ಕೆಂಟಕಿ ಕರ್ನಲ್, ಕನ್ನಡ ಕಂಠೀರವ, ರಸಿಕರ ರಾಜ, ಕೋಟಿ ಕನ್ನಡಿಗರ ಆರಾಧ್ಯ ದೈವ….ಇತ್ಯಾದಿ ಬಿರುದು ಬಾವಲಿಗಳ ಸೂಪರ್ ಸ್ಟಾರ್ ಎಂಬ ಹಮ್ಮು‌ಬಿಮ್ಮುಗಳ‌ ಅವರಿಗಿಷ್ಟವಾಗದ ಹೊದಿಕೆಗಳನ್ನು ಸಂಪೂರ್ಣವಾಗಿ ಕೊಡವಿಕೊಂಡು, ಒಬ್ಬ ಅಮಾಯಕನಾಗಿ , ಮುಗ್ಧನಾಗಿ, ಮಗುವಾಗಿ ಸಂಭ್ರಮದಿಂದ ಹುಟ್ಟೂರಿಗೆ ಹೋಗಿ ಮನದಲ್ಲೇ ಕುಣಿದು ಕುಪ್ಪಳಿಸುತ್ತಿದ್ದರು, ತಾವು ಹುಟ್ಟಿ ಬೆಳೆದ ಸಣ್ಣ ಮನೆಯ ಜಗುಲಿಯ ಮೇಲೆ ಮಲಗಿ ಆನಂದಿಸುತ್ತಿದ್ದರು, ಹಳ್ಳಿಯ ಜಮೀನಿನಲ್ಲಿ ಕೃಷಿಯಲ್ಲಿ ತೊಡಗುವ ಮನಸ್ಸು ಮಾಡುತ್ತಿದ್ದರು, ಎಲ್ಲವನ್ನೂ‌ಬಿಟ್ಟು ಇಲ್ಲಿಗೇ ಬರಬೇಕೆಂಬ ಆಶೆ ತೋಡಿಕೊಳ್ಳುತ್ತಿದ್ದರು, ಆ ಮಣ್ಣನ್ನು ಅಷ್ಟು ಬಲವಾಗಿ ಹೃದಯದಿಂದ ಪ್ರೀತಿಸುತ್ತಿದ್ದರು, ಆ ಮಣ್ಣಿನ‌ ಸೊಗಡಿಗೆ, ಸೆಳೆತಕ್ಕೆ ಸಂಪೂರ್ಣವಾಗಿ ಮನಸೋತು ಶರಣಾಗಿ ಬಿಟ್ಟಿದ್ದರು.

ನಿಮಗೆ ಬಂಗಾರದ ಮನುಷ್ಯ ‌ಚಿತ್ರದ ಎರಡು ದೃಶ್ಯಗಳು‌ ನೆನಪಿರಬಹುದು. ಭೂಮಿತಾಯಿಯನ್ನು ಉದ್ದೇಶಿಸಿ‌ ” ನಿನ್ನನ್ನೇ‌ ನಂಬಿದ್ದೇನೆ ತಾಯಿ ಅನ್ನ ಕೊಟ್ಟು ಕಾಪಾಡು” ಎಂದು ಮಣ್ಣನ್ನು ಕಣ್ಣಿಗೊತ್ತಿಕೊಳ್ಳುವ ದೃಶ್ಯ ಹಾಗೂ ‌ಕೊನೆಯದಾಗಿ ಎಲ್ಲವನ್ನೂ ತ್ಯಜಿಸಿ ಹೊರಡುವಾಗ ಮಣ್ಣನ್ನು ಹಿಡಿದು ಭಾವುಕರಾಗಿ ಅಭಿನಯಿಸಿದ ಆ ದೃಶ್ಯ . ಅದು‌ ಕೇವಲ ನಟನೆಯಾಗಿರದೇ ಅವರೊಳಗೊಬ್ಬ ಮಣ್ಣನ್ನು ಪ್ರೀತಿಸುವ ಸಂವೇದಿಸುವ ವ್ಯಕ್ತಿ ಇದ್ದಿದ್ದರಿಂದಲೇ ಹೀಗೆ ಆ ದೃಶ್ಯಗಳು ಸಹಜವಾಗಿ ಬರಲು ಸಾಧ್ಯವಾಗಿದ್ದು. ಹೀಗಾಗಿ ಈ ನಾಡಿನ ಮಣ್ಣಲ್ಲಿ ಹುಟ್ಟಿ, ಇಲ್ಲಿನ ಮಣ್ಣನ್ನು ಬಹುವಾಗಿ ಪ್ರೀತಿಸುತ್ತಾ ಅದರ ಮಡಿಲಲ್ಲೇ ಉಸಿರಾಡಲು ಹೃದಯದಿಂದ ಬಯಸಿ ಅದರಂತೆ‌ ಬದುಕಿ ಬಾಳಿದ‌ ರಾಜಣ್ಣ ಕೇವಲ ಬಂಗಾರದ ಮನುಷ್ಯ, ದೇವತಾ ಮನುಷ್ಯ ಮಾತ್ರವಲ್ಲ ಅದಕ್ಕಿಂತಲೂ ಮಿಗಿಲಾಗಿ ಶ್ರಮದ ಬೆಲೆ ತಿಳಿದಿರುವುದರಿಂದಲೇ ವಾಸ್ತವವಾಗಿ ಅವರೊಬ್ಬ ” ಬೆವರಿನ ಮನುಷ್ಯ ” ಇಂತಹಾ ರಾಜಣ್ಣನನ್ನು ಮಣ್ಣಿನ‌ಮಗನಲ್ಲವೆಂದು ಹೇಗೆ‌ ಹೇಳುವುದು ??

ಫೋಟೋ ಕೃಪೆ : twitter

ಇಪ್ಪತ್ತೊಂದು ವರ್ಷಗಳ ಹಿಂದೆ ಭೀಮನ ಅಮಾವಾಸ್ಯೆಯಂದು ಕಾಡುಗಳ್ಳ ವೀರಪ್ಪನ್ ನಿಂದ ಅಪಹೃತರಾಗಿ ಕಾಡಿನಲ್ಲಿ‌ ಸಿಕ್ಕಿದ್ದನ್ನು ತಿಂದುಕೊಂಡು ನೂರೆಂಟು ದಿನಗಳ ಕಾಲ ನಿತ್ಯ ಹತ್ತಾರು ಮೈಲು ಓಡಾಡಿಕೊಂಡು ಅಪಾರ ಕಷ್ಟ‌, ನೋವು, ಸಂಕಟ ಅನುಭವಿಸಿದರೂ ಆ‌ ವಯಸ್ಸಿನಲ್ಲಿ, ಆ ಮಂಡಿ‌ನೋವಿನಲ್ಲಿ, ಮಳೆ ಬಿಸಿಲಿನಲ್ಲಿ, ಕಲ್ಲು‌ಮುಳ್ಳುಗಳಲ್ಲಿ ಅವರಿಗೆ ಇದೆಲ್ಲವೂ ಸಹಜ ಎಂಬಂತೆ ಜೀವಿಸಲು ಸಾಧ್ಯವಾಗಿದ್ದಕ್ಕೆ ಕಾರಣ – ಅವರಲ್ಲೊಬ್ಬ‌ ಮುತ್ತುರಾಜ್ ಇದ್ದುದ್ದರಿಂದಲೇ! ಅವರೊಬ್ಬ ಮಣ್ಣಿನ‌ಮಗನಾಗಿದ್ದರಿಂದಲೇ ! ಅವರಲ್ಲೊಬ್ಬ ಪರಿಪೂರ್ಣ ಯೋಗಿ , ಪರಿಪಕ್ವ‌ ಸಂತ‌ ಜೀವಂತವಾಗಿದ್ದರಿಂದಲೇ ! ಅದಿಲ್ಲದೇ ಕೇವಲ ಸೂಪರ್ ಸ್ಟಾರ್ ಎಂಬ‌ ಭ್ರಮೆಯಲ್ಲಿ ತೇಲಾಡುತ್ತಾ ಸ್ಟಾರ್ ಡಂ ಜಗತ್ತಿನಲ್ಲಿ ವಿಹರಿಸುವಂತಿದ್ದಲ್ಲಿ , ನೂರೆಂಟು ದಿನ‌ ಬಿಡಿ, ಕೇವಲ ಎಂಟೇ ದಿನಗಳಲ್ಲಿ ಆ ಕಾಡುಗಳ್ಳನ ಭಯಾನಕ ಹಿಡಿತದಲ್ಲಿ ಎದೆ ಒಡೆದು ಪ್ರಾಣ ಕಳೆದುಕೊಳ್ಳುತ್ತಿದ್ದರು.



ಮರೆಯುವ‌ ಮುನ್ನ

ಇಂದು ಡಾ. ರಾಜ್ ಭೌತಿಕವಾಗಿ ನಮ್ಮೊಡನಿಲ್ಲ ! ಆದರೆ ಅವರ ಪಾತ್ರಗಳ ಮೂಲಕ, ಆದರ್ಶಗಳ ಮೂಲಕ, ಮಾನವೀಯ ಮೌಲ್ಯಗಳ ಮೂಲಕ, ಧೀಮಂತ ಹಾಗೂ ಮಗುವಿನಂತಹ ವ್ಯಕ್ತಿತ್ವದ ಮೂಲಕ, ನಾಡು ನುಡಿಯ ಮೇಲಿದ್ದ ಅಪ್ಪಟ ಅಪರಂಜಿಯಂತಹ ಪ್ರೇಮದ ಮೂಲಕ , ಅವರ ನಾಲಗೆಯಲ್ಲಿ ಮನೆಮಾಡಿದ್ದ ಕನ್ನಡ ತಾಯಿ ಭುವನೇಶ್ವರಿ ಹೊರಡಿಸುತ್ತಿದ್ದ ಅಸ್ಖಲಿತವಾದ ಜೇನಿನಂತಹ ಮಧುರವಾದ ಕನ್ನಡ ಭಾಷೆಯ ಸವಿಯ ಮೂಲಕ, ಅಭಿಮಾನಿಗಳಲ್ಲಿ, ಜನಸಾಮಾನ್ಯರಲ್ಲಿ ಅವರು ಕಾಣುತ್ತಿದ್ದ ದೇವರ ಸ್ವರೂಪದ ಮೂಲಕ, ಅವರ ಕಪಟವಿಲ್ಲದ ಮಗುವಿನಂತಹಾ ಆ ಸಾವಿಲ್ಲದ ನಗುವಿನ ಮೂಲಕ ಅಣ್ಣಾವ್ರು ಸದಾ ಅಮರರಾಗಿಯೇ ಉಳಿದಿದ್ದಾರೆ.

ಡಾ. ರಾಜ್ ಕುಮಾರ್ ರವರ 93 ನೇ ಹುಟ್ಟುಹಬ್ಬ ದಂದು ಕರುನಾಡಿಗೆ, ಕನ್ನಡ ನಾಡು‌ನುಡಿಗೆ, ಕನ್ನಡ ಚಿತ್ರರಂಗಕ್ಕೆ ಅವರ ಅನನ್ಯ ಸಾಧನೆ‌, ಅಪೂರ್ವ ಕೊಡುಗೆಗಳನ್ನು ಸ್ಮರಿಸುತ್ತಾ ಅವರ ನಗುಮೊಗವನ್ನು ಕಣ್ತುಂಬಿಕೊಳ್ಳುತ್ತಾ ಹೃದಯದಾಳದಿಂದ , ಕನ್ನಡಪ್ರೇಮದಿಂದ ಜನ್ಮದಿನದ ಶುಭಾಶಯಗಳನ್ನು ಹೇಳೋಣ.

ಲಾಸ್ಟ್ ಪಂಚ್

ವಿನಯಕ್ಕೆ‌ ವಿದ್ವತ್ ಸ್ಥಾನ, ಹೃದಯ ವೈಶಾಲ್ಯತೆಗೆ ವಿವೇಕದ ಸ್ಥಾನ, ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವಕ್ಕೆ ಘನ ವ್ಯಕ್ತಿತ್ವದ ಸ್ಥಾನ ತಂದು ಕೊಟ್ಟ ಡಾ. ರಾಜ್ ಕುಮಾರ್ ಕನ್ನಡಮ್ಮನ ಹೆಮ್ಮೆಯ ಪುತ್ರ. ಪ್ರೀತ್ಯಾಭಿಮಾನದಿಂದ ಅಣ್ಣಾವ್ರಿಗೆ ಹುಟ್ಟುಹಬ್ಬದ ಶುಭಾಶಯಗಳು.


  • ಹಿರಿಯೂರು ಪ್ರಕಾಶ್.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW