ಏಪ್ರಿಲ್ ೨೩, ಅಂದರೆ ಇಂದು ಮಹಾನ್ ನಾಟಕಕಾರನೆಂದು ಹೆಸರಾದ ವಿಲಿಯಂ ಷೇಕ್ಸ್ ಪಿಯರ್ ಅವರ ಹುಟ್ಟಿದ ದಿನವೂ ಹೌದು, ಮರಣಿಸಿದ ದಿನವೂ ಹೌದು. ಅವರ ಜೀವನದ ಕುರಿತು ಲೇಖಕಿ ವಸಂತ ಗಣೇಶ್ ಅವರು ಓದುಗರಿಗೆ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಮುಂದೆ ಓದಿ.
ಮ್ಯಾಕ್ ಬೆತ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್, ಒಥೆಲ್ಲೋ, ಮರ್ಚೆಂಟ್ ಅಫ್ ವೆನಿಸ್, ರೋಮಿಯೋ ಜೂಲಿಯೆಟ್ ಈ ಹೆಸರುಗಳನ್ನು ಕೇಳಿದ ಕೂಡಲೇ ನೆನಪಾಗುವುದು ವಿಲಿಯಂ ಷೇಕ್ಸ್ ಪಿಯರ್ ಎನ್ನುವ ಮಹಾನ್ ನಾಟಕಕಾರ.

ಫೋಟೋ ಕೃಪೆ : thought co
ಸುಮಾರು ವರ್ಷಗಳ ಹಿಂದೆ ಗತಿಸಿದ ಇಂಗ್ಲೆಂಡ್ ನ ಒಬ್ಬ ನಾಟಕಕಾರನ ಹೆಸರು ಇಂದಿಗೂ ಪ್ರಪಂಚದಾದ್ಯಂತ ಚಾಲ್ತಿಯಲ್ಲಿ ಇದೆ ಎಂದರೆ ಅದಕ್ಕೆ ಆತನ ಬರವಣಿಗೆಲ್ಲಿ ಇರುವ ಶಕ್ತಿ ಎಂದರೆ ತಪ್ಪಲ್ಲ. ಇಂಗ್ಲೆಂಡ್ ನ ರಾಷ್ಟ್ರೀಯ ಕವಿ ಎಂದೇ ಹೆಸರಾದ ಈತ ನಾಟಕ ರಚನೆ ಮಾಡಿದ್ದೇ ಅಲ್ಲದೆ ನಟ ಕೂಡಾ ಆಗಿದ್ದರು. ಅವರೊಬ್ಬ ಸಾರ್ವಕಾಲಿಕ ಶ್ರೇಷ್ಠ ನಾಟಕಕಾರ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ.
ಷೇಕ್ಸ್ ಪಿಯರ್, ವಿಲಿಯಂ ಷೇಕ್ಸ್ ಪಿಯರ್ ಎನ್ನುವ ಹೆಸರಿನ ಈತ ಹುಟ್ಟಿದ್ದು ಏಪ್ರಿಲ್ ೨೩,೧೫೬೪ ರಲ್ಲಿ ಹಾಗೂ ಸತ್ತದ್ದೂ ಏಪ್ರಿಲ್ ೨೩, ೧೬೧೬ ರಲ್ಲಿ ಜಾನ್ ಷೇಕ್ಸ್ ಪಿಯರ್ ಅವರ ಮೂರನೇ ಮಗುವಾಗಿ ಜನಿಸಿದರು. ಇಬ್ಬರು ಅಕ್ಕಂದಿರು ಹಾಗೂ ಮೂವರು ತಮ್ಮಂದಿರ ನಡುವೆ ಬೆಳೆದ ಷೇಕ್ಸ್ ಪಿಯರ್ ನ ಬಾಲ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲ ವೆನ್ನಬಹುದು. ಹುಟ್ಟೂರು ಸ್ರ್ಟಾಟ್ ಫೋರ್ಡ್ ನ ಕಿಂಗ್ಸ್ ನ್ಯೂ ಶಾಲೆಯಲ್ಲಿ ಓದು ಆರಂಭಿಸಿದರು. ಇವರ ಶಿಕ್ಷಣದ ಬಗ್ಗೆ ಕೂಡಾ ಹೆಚ್ಚಿನ ಮಾಹಿತಿ ತಿಳಿದಿಲ್ಲದ ಕಾರಣಕ್ಕೆ ಷೇಕ್ಸ್ ಪಿಯರ್ ಎನ್ನುವ ವ್ಯಕ್ತಿ ನಿಜವಾಗಲೂ ಇದ್ದರೇ ಇಲ್ಲವೇ ಎನ್ನುವ ಶಂಕೆ ಕೂಡಾ ವ್ಯಕ್ತವಾಗುತ್ತದೆ. ಹಾಗೆ ಇವರ ಕೃತಿಗಳ ಬಗ್ಗೆ ಕೂಡಾ ಶಂಕೆ ವ್ಯಕ್ತವಾಗಿದೆ.

ಫೋಟೋ ಕೃಪೆ : zoarflores.weebly (ಜಾನ್ ಷೇಕ್ಸ್ ಪಿಯರ್ ಮತ್ತು ಹೆಂಡತಿಯ ಅನ್ ಹ್ಯಾಥ್ ವೇ )
೧೫೮೨ ರ ನವೆಂಬರ್ ೨೮ ರಲ್ಲಿ ಅನ್ ಹ್ಯಾಥ್ ವೇ ಅವರನ್ನು ವಿವಾಹವಾದರು. ಇವರ ಮೊದಲ ಮಗಳು ಸುಸನ್ನ ಹಾಗೂ ನಂತರ ಹ್ಯಾಮ್ನೆಟ್ ಮತ್ತು ಜುಡಿತ್ ಎನ್ನುವ ಅವಳಿ ಮಕ್ಕಳು ಜನಿಸಿದರು. ಆದರೆ ೧೧ ರ ವಯಸ್ಸಿನಲ್ಲಿ ಹ್ಯಾಮ್ನೆಟ್ ಸಾವನ್ನಪ್ಪುತ್ತಾರೆ.
ಅವಳಿ ಮಕ್ಕಳ ಜನನದ ನಂತರ ೭ ವರ್ಷಗಳ ಕಾಲ ಷೇಕ್ಸ್ ಪಿಯರ್ ಎಲ್ಲಿದ್ದರು ಎನ್ನುವುದು ತಿಳಿದು ಬಂದಿಲ್ಲ. ನಂತರ ೧೫೮೦ ರ ದಶಕದ ಮಧ್ಯಭಾಗದಲ್ಲಿ ಲಂಡನ್ಗೆ ಬಂದು ಅಲ್ಲಿನ ಚಿತ್ರ ಮಂದಿರಗಳಲ್ಲಿ ಕುದುರೆ ಕಾಯುವ ಕೆಲಸ ಮಾಡಿದ್ದರು ಎನ್ನಲಾಗಿದೆ. ೧೫೯೦ ರ ದಶಕದ ಆರಂಭದ ವೇಳೆಗೆ ಲಂಡನ್ ನ ನಾಟಕ ಕಂಪನಿ ಲಾರ್ಡ್ ಚೇಂಬರ್ಲೆನ್ಸ್ ಮೆನ್ ನಲ್ಲಿ ಪಾಲುದಾರರಾಗಿ ಸೇರಿದ್ದರು. ಮುಂದೆ ೧೬೦೩ ರಲ್ಲಿ ಕಿಂಗ್ ಜೇಮ್ಸ್ ೧ ರ ಪಟ್ಟಾಭಿಷಕದ ನಂತರ ನಾಟಕ ಕಂಪನಿ ಕಿಂಗ್ಸ್ ಮೆನ್ ಎಂದು ಹೆಸರು ಬದಲಾಯಿಸಿಕೊಂಡಿತು.
೧೫೯೨ ರ ವೇಳೆಗೆ ಷೇಕ್ಸ್ ಪಿಯರ್ ನಟ ಹಾಗೂ ನಾಟಕಕಾರರಾಗಿ ಹೆಸರು ಮಾಡಿದ್ದರು. ೧೫೯೭ ರ ವೇಳೆಗೆ ಅವರ ೩೭ ನಾಟಕಗಳಲ್ಲಿ ೧೫ ಆಗಲೇ ಬರೆದು ಮುಗಿದಿದ್ದರು. ಅದೇ ಸಮಯದಲ್ಲಿ ಸ್ರ್ಟಾಟ್ ಫೋರ್ಡ್ ನಲ್ಲಿ ದೊಡ್ಡ ಮನೆ ಒಂದನ್ನು ಖರೀದಿಸಿದ ದಾಖಲೆ ಇದೆ.

(ಷೇಕ್ಸ್ ಪಿಯರ್ ಹುಟ್ಟಿದ ಮನೆ )
ಲಂಡನ್ ಹಾಗೂ ಸ್ರ್ಟಾಟ್ ಫೋರ್ಡ್ ನ ನಡುವೆ ನಾಲ್ಕು ದಿನಗಳ ದಾರಿ ಇದ್ದ ಕಾರಣದಿಂದ ಹೆಚ್ಚಿನ ಸಮಯವನ್ನು ಲಂಡನ್ ನಲ್ಲಿ ಕಳೆದಿರಬಹುದು ಹಾಗೂ ಲೆಂಟನ್ ಅವಧಿಯಲ್ಲಿ ೪೦ ದಿನಗಳ ಕಾಲ ಚಿತ್ರ ಮಂದಿರಗಳನ್ನು ಮುಚ್ಚಿದಾಗ ವರ್ಷಕ್ಕೊಮ್ಮೆ ಮನೆಗೆ ಬರುತ್ತಿದ್ದಿರಬಹುದು ಎಂದು ನಂಬಲಾಗಿದೆ. ೧೫೯೯ ರ ವೇಳೆಗೆ ಷೇಕ್ಸ್ ಪಿಯರ್ ಕೆಲವು ಪಾಲುದಾರರ ಜೊತೆ ಸೇರಿ ಥೇಮ್ಸ್ ನದಿಯ ದಡದಲ್ಲಿ ತಮ್ಮದೇ ಆದ ಗ್ಲೋಬ್ ಥಿಯೇಟರ್ ಎನ್ನುವ ರಂಗ ಮಂದಿರ ನಿರ್ಮಾಣ ಮಾಡಿದರು. ಮತ್ತೊಂದು ಎಷ್ಟೇಟ್ ಕೂಡಾ ಖರೀದಿಸಿದ ಷೇಕ್ಸ್ ಪಿಯರ್ ಕಲಾವಿದನ ಜೊತೆ ಜೊತೆಗೆ ಉದ್ಯಮಿ ಕೂಡಾ ಆಗಿದ್ದರು.
ಷೇಕ್ಸ್ ಪಿಯರ್ ಮೊದ ಮೊದಲು ಅಂದಿನ ಸಾಂಪ್ರದಾಯಿಕ. ಶೈಲಿಯಲ್ಲಿ ನಾಟಕಗಳನ್ನು ಬರೆದರು. ಆದರೆ ಇವರ ಕಥಾ ವಸ್ತುಗಳು, ನುಡಿಗಟ್ಟುಗಳು ವಿಶೇಷವಾಗಿ ಇರುತ್ತಿದ್ದವು. ೧೫೯೦ ರಿಂದ ೧೬೧೩ ರ ವರೆಗೆ ೩೭ ನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಇರುವ ಹೆಚ್ಚಿನ ವಿಷಯಗಳು ಇತಿಹಾಸ, ಸಾಮಾಜಿಕ, ಹಾಸ್ಯ ಹಾಗೂ ದುರಂತ.
೧೬೦೦ ರ ನಂತರ ಬರೆದ ಹ್ಯಾಮ್ಲೆಟ್, ಒಥೆಲ್ಲೊ, ಕಿಂಗ್ ಲಿಯರ್, ಮತ್ತು ಮ್ಯಾಕ್ ಬೆತ್ ಗಳು ದುರಂತ ನಾಟಕಗಳು ಆದರೂ ಅವು ಈ ಕಾಲಕ್ಕೂ ಪ್ರಸ್ತುತ ಹಾಗೂ ಸಾರ್ವತ್ರಿಕ ಎನಿಸುತ್ತವೆ.
ಷೇಕ್ಸ್ ಪಿಯರ್ ೧೫೪ ಸಾನೆಟ್ ಗಳನ್ನು ಬರೆದಿದ್ದಾರೆ. ಅವು ” ನಾನು ನಿನ್ನನ್ನು ಬೇಸಿಗೆಯ ದಿನಕ್ಕೆ ಹೋಲಿಸಬೇಕೆ”? ಮತ್ತು ” ನನ್ನ ಪ್ರೇಯಸಿಯ ಕಣ್ಣುಗಳು ಸೂರ್ಯನಂತೆಯೇ ಇಲ್ಲ” ಎನ್ನುವ ಶೇಷಿಕೆಯಲ್ಲಿವೆ. ಷೇಕ್ಸ್ ಪಿಯರ್ ರಂಗಭೂಮಿಯಲ್ಲಿ ಯಶಸ್ವಿ ಆಗಲು ಪ್ರಯತ್ನಿಸಿದ ಕಾರಣಕ್ಕೆ ಕವಿ ಆಗಲು ಬಯಸಿದ್ದರು. ೧೫೯೨ – ೯೪ ರ ವರೆಗೆ ಪ್ಲೇಗ್ ಹೆಚ್ಚಾಗಿ ನಾಟಕಗಳು ನಡೆಯದೆ ಹೋದಾಗ ಕವನಗಳನ್ನು ಹೆಚ್ಚಾಗಿ ಬರೆದಿದ್ದಾರೆ. “ಶುಕ್ರ ಮತ್ತು ಅಡೋನಿಸ್ ೧೫೯೩ ಮತ್ತು “ರೇಪ್ ಆಫ್ ಲುಕ್ರೀಸ್”. ಇಷ್ಟೆಲ್ಲ ಬರವಣಿಗೆಯ ಮೂಲಕ ಇಂದಿಗೂ ಪ್ರಪಂಚದಾದ್ಯಂತ ಹೆಸರಾಗಿರುವ ಷೇಕ್ಸ್ ಪಿಯರ್ ಅವರ ಪೋಷಕರು ಹಾಗೂ ಪತ್ನಿ ಎಲ್ಲರೂ ಅನಕ್ಷರಸ್ಥರಾಗಿದ್ದರು.
ಷೇಕ್ಸ್ ಪಿಯರ್ ಸತ್ತ ಎಷ್ಟೋ ವರ್ಷಗಳ ನಂತರ ಅವರ ಅಸ್ತಿತ್ವದ ಕುರಿತು ಹಲವಾರು ಪ್ರಶ್ನೆಗಳು ಏಳುತ್ತವೆ. ಆದರೆ ಅವರೊಂದಿಗೆ ನಾಟಕ ರಂಗದಲ್ಲಿ ಕೆಲಸ ಮಾಡಿದ್ದ ಸಮಕಾಲೀನರೊಡನೆ ಇದ್ದ ಸಂಬಂಧಗಳು ಅವರ ಅಸ್ತಿತ್ವಕ್ಕೆ ದಾಖಲೆ ನೀಡುತ್ತವೆ.
ಈಗ ಸಾರ್ವಕಾಲಿಕ ನಾಟಕಕಾರ ಎಂದು ಹೆಸರಾಗಿರುವ ಈತನ ನಾಟಕದ ಪ್ರತಿಭೆ ೧೯ ನೇಯ ಶತಮಾನದವರೆಗೂ ಗುರುತಿಸಲಾಗಿಲ್ಲ ಎನ್ನುವುದು ವಿಷಾದಕರ.
- ವಸಂತ ಗಣೇಶ (ಲೇಖಕರು, ಚಿಂತಕರು)
