ನಮಗೆಲ್ಲ ಮನುಷ್ಯರು ಓಡಾಡುವುದು ಗೊತ್ತು. ಆದರೆ ಶಿವಲಿಂಗ ಓಡಾಡುವುದು ಜಾಗ ಬದಲಾಯಿಸುವುದು ನಿಮಗೆ ಗೊತ್ತಾ? ಅಂತಹ ಒಂದು ವಿಸ್ಮಯ ಶಿವಲಿಂಗದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಲೇಖಕಿ ವಸಂತ ಗಣೇಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
1623ನೆಯ ಇಸವಿಯಿಂದ ಈ ಶಿವಲಿಂಗ ಓಡಾಡಲು ಆರಂಭಿಸಿದೆ ಎನ್ನುತ್ತಾರೆ. ಅಂದಿನಿಂದ ಇಂದಿನವರೆಗೆ ಈ ಶಿವಲಿಂಗವು ಆಗ ಇದ್ದ ಜಾಗದಿಂದ 300 ಕಿಲೋಮೀಟರ್ ಮುಂದಕ್ಕೆ ಚಲಿಸಿದೆಯಂತೆ. ಇದು ಇರುವುದು ಭಾರತ ದೇಶದಿಂದ 8000 ಕಿಲೋಮೀಟರ್ ದೂರದ ಐರ್ಲೆಂಡ್‌ನ ಕೌಂಟಿ ಮೀತ್ ಎನ್ನುವಲ್ಲಿ.
ಐರ್ಲೆಂಡ್‌ನ ಜನರು ಇದನ್ನು “ತೂಯತ್ತಾ ದಾನಂ” ಎನ್ನುತ್ತಾರೆ. “ತೂಯತ್ತಾ ದಾನಂ” ಎನ್ನುವುದರ ಅರ್ಥ ನಡೆದಾಡುವ ದೇವರು ಎಂದು. ಈ ಶಿವಲಿಂಗಕ್ಕೆ ವಾರಕ್ಕೆ ಒಮ್ಮೆ ಪೂಜೆ ಕೂಡಾ ನಡೆಯುತ್ತದೆಯಂತೆ. ಈ ಶಿವಲಿಂಗವು ನಾಲ್ಕು ಅಡಿ ಎತ್ತರವಿದ್ದು ದಿನವೂ ಬೆಳೆಯುತ್ತಲೇ ಇದೆ ಎನ್ನುತ್ತಾರೆ. ಈ ಶಿವಲಿಂಗವನ್ನು ಪ್ರತಿಷ್ಟಾಪನೆ ಮಾಡಿದ್ದು ಮೌಂಟ್ ಕೆನ್ನೆತ್ ಎನ್ನುವ ಪ್ರದೇಶದಲ್ಲಿ. ಆದರೆ ಈಗ ಅದು ಇರುವುದು ಕೌಂಟಿ ಮೀತ್ ಎನ್ನುವಲ್ಲಿ. ಅಂದರೆ ಮೌಂಟ್ ಕೆನ್ನೆತ್ ನಿಂದಾ 300 ಕಿಲೋಮೀಟರ್ ದೂರಕ್ಕೆ ಚಲಿಸಿದೆ.
ಈ ಶಿವಲಿಂಗಕ್ಕೆ ಬಳಸಿರುವ ಕಲ್ಲು ಮತ್ತು ಶ್ರೀ ರಾಮಚಂದ್ರ ಪ್ರಭು ಸಮುದ್ರಕ್ಕೆ ರಾಮ ಸೇತುವೆ ಕಟ್ಟಲು ಬಳಸಿರುವ ಕಲ್ಲಿಗೂ ಬಹಳಷ್ಟು ಸಾಮ್ಯತೆ ಇದೆ. (ಸುಮಾರು 98% ಹೋಲುತ್ತದೆಯಂತೆ). ಇದರ ಬಗ್ಗೆ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಈ ಶಿವಲಿಂಗವು ಭೂಮಿಯ ಒಳಗೆ ಸುಮಾರು 2 ಕಿಲೋಮೀಟರ್ ನಷ್ಟು ಆಳದ ವರೆಗೂ ಹೋಗಿದೆ ಎನ್ನುತ್ತಾರೆ. ಈ ಶಿವಲಿಂಗವು ಭಾರತದ ಕಡೆಗೆ ಚಲಿಸುತ್ತಿದೆ ಎಂದು ಐರ್ಲೆಂಡ್ ದೇಶದ ಭೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರಂತೆ.
ಈ ಕಲ್ಲಿನ ಕುರಿತಾಗಿ ಐರ್ಲೆಂಡ್ ದೇಶದ “Pre Christor Gaclic” ಎನ್ನುವ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಈ ಶಿವಲಿಂಗವು ಸುಮಾರು 5500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.

ಐರ್ಲೆಂಡ್ ದೇಶದ ಒಂದು ಹಳೆಯ ಪುಸ್ತಕದಲ್ಲಿ ಭಾರತದ ಕೆಲವು ದೇವಾಲಯಗಳ ಪುರಾವೆಯನ್ನು ಉಲ್ಲೇಖಿಸಲಾಗಿದ್ದು ಅದೇ ಪುಸ್ತಕದಲ್ಲಿ ಈ ಶಿವಲಿಂಗದ ಕುರಿತೂ ಉಲ್ಲೇಖವಿದೆ ಎನ್ನಲಾಗಿದೆ.
1641 ರಲ್ಲಿ ಐರ್ಲೆಂಡ್ ದೇಶದಲ್ಲಿ ರೆಬೆಲಿಯನ್ ವಾರ್ ನಡೆಯುತ್ತದೆ. ಅದು ನಡೆದದ್ದು ಈ ಶಿವಲಿಂಗ ಇರುವ ಪ್ರದೇಶದಲ್ಲಿಯೇ ಎನ್ನುತ್ತಾರೆ. ಆಗ ಐರ್ಲೆಂಡ್ ದೇಶ ಸಂಪೂರ್ಣವಾಗಿ ನಾಶವಾದರೂ ಈ ಶಿವಲಿಂಗಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಅಂದಿನ ಐರ್ಲೆಂಡ್ ದೇಶದ ಲೀಡರ್ ಕಿಂಗ್ ಚಾರ್ಲ್ಸ್ ಈ ಶಿವಲಿಂಗಕ್ಕೆ ದೇವಾಲಯವನ್ನು ಕಟ್ಟಿಸಲು ಪ್ರಯತ್ನಿಸುತ್ತಾರಾದರೂ ದೇವಾಲಯದ ಮೇಲ್ಚಾವಣಿ ಎಷ್ಟು ಬಾರಿ ಕಟ್ಟಿದರೂ ನಿಲ್ಲುವುದಿಲ್ಲವಂತೆ. ಹಾಗಾಗಿ ದೇವಾಲಯ ನಿರ್ಮಾಣವಾಗಲಿಲ್ಲ ಎನ್ನುತ್ತಾರೆ.
ಐರ್ಲೆಂಡ್ ದೇಶದಲ್ಲಿ ವಾಸಿಸುವ ಭಾರತೀಯರಿಗೆ ಇದು ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ಭಾರತೀಯರು ಸಹ ಭೇಟಿ ನೀಡುತ್ತಾರೆ. ಈಗ ಈ ಶಿವಲಿಂಗ ಇರುವ ಪ್ರದೇಶ ಭೂಕಂಪ ಸಂಭವಿಸುವ ಪ್ರದೇಶವಾಗಿರುವ ಕಾರಣಕ್ಕೆ ವಾರದಲ್ಲಿ ಒಂದು ದಿನ ಅಥವಾ ತಿಂಗಳಿಗೆ ಒಂದು ದಿನ ಭಕ್ತರನ್ನು ಬಿಡುತ್ತಾರಂತೆ. ಶಿವಲಿಂಗ ಸಂಸ್ಥಾನ ಭಾಗ 2 ಎನ್ನುವ ಪುಸ್ತಕದಲ್ಲಿ ಇರುವ ಉಲ್ಲೇಖದ ಪ್ರಕಾರ ಈ ಶಿವಲಿಂಗವನ್ನು ಪ್ರತಿಷ್ಟಾಪಿಸಿದ್ದು ಕಶ್ಯಪ ಮುನಿಗಳು ಎನ್ನುತ್ತಾರೆ.
ಇದು ನೋಡಲು ಶಿವಲಿಂಗವನ್ನು ಹೋಲುತ್ತದೆ ಎನ್ನುವವರೂ ಇದ್ದಾರೆ. ಹಾಗೂ ಇದನ್ನು ಶಿವಲಿಂಗ ಎಂದು ಪೂಜಿಸುವವರೂ ಇದ್ದಾರೆ, ಹಾಗೆಯೇ ಇದು ಶಿವಲಿಂಗವಲ್ಲ, ಬರೀ ಕಲ್ಲು ಎಂದು ಹೇಳುವವರೂ ಇದ್ದಾರೆ. ಇದು ಕನಿಷ್ಠ 5500 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.
ಐರ್ಲೆಂಡ್ ನಲ್ಲಿ ಇದನ್ನು “ಲಿಯಾ ಫೈಲ್” ( ಐರಿಶ್ ಉಚ್ಚಾರಣೆ) ಅಂದರೆ ಸ್ಟೋನ್ ಆಫ್ ಡೆಸ್ಟಿನಿ (ಅದೃಷ್ಟದ ಕಲ್ಲು) ಎನ್ನುತ್ತಾರೆ. ಇದು ಇರುವುದು ಐರ್ಲೆಂಡ್‌ನ ಕೌಂಟಿ ಮೀತ್‌ನಲ್ಲಿರುವ ತಾರಾ ಬೆಟ್ಟದ ಮೇಲೆ. ನೋಡಲು ಇದು ಒಂದು ಉದ್ದವಾದ ಕಲ್ಲಿನಂತೆ ಕಾಣುತ್ತದೆ. ಈ ಕಲ್ಲು 500 AD ವರೆಗೆ ಐರ್ಲೆಂಡ್‌ನ ಹಲವಾರು ರಾಜರುಗಳ ಪಟ್ಟಾಭಿಷೇಕಕ್ಕೆ ಸಾಕ್ಷಿಯಾದ ಶಿಲೆ ಎನ್ನುತ್ತಾರೆ. ಇದನ್ನು ತಾರಾ ಪಟ್ಟಾಭಿಷೇಕದ ಕಲ್ಲು ಎಂದೂ ಕರೆಯುತ್ತಾರೆ.
ಲಿಯಾ ಫೈಲ್ (ಡೆಸ್ಟಿನಿ ಕಲ್ಲು) ಎಂದು ಕರೆಯಲ್ಪಡುವ ನಿಗೂಢ ಕಲ್ಲಿನ ಕುರಿತಾಗಿ 1632-1636 AD ನಡುವೆ ಫ್ರಾನ್ಸಿಸ್ಕನ್ ಸನ್ಯಾಸಿಗಳು ಬರೆದ “ದಿ ಅನ್ನಲ್ಸ್ ಆಫ್ ದಿ ಫೋರ್ ಮಾಸ್ಟರ್ಸ್” ನಲ್ಲಿ ದಾಖಲೆಯಿದೆ ಎನ್ನಲಾಗಿದೆ.
- ವಸಂತ ಗಣೇಶ್
