ಶ್ರೀ ಶಿವಾಜಿ ಸಾವಂತ್ ಅವರು 1980ರಲ್ಲಿ ಬರೆದ ಮರಾಠಿ ಕಥೆಯನ್ನು ಚಲನಚಿತ್ರ ರೂಪದಲ್ಲಿ ಇದೇ ಫೆಬ್ರವರಿ ತಿಂಗಳ 14ನೇ ತಾರೀಕಿನಂದು ಬಿಡುಗಡೆಗೊಂಡ ಹಿಂದಿ ಚಲನಚಿತ್ರ ‘ಛಾವ’ (ಸಿಂಹದ ಮರಿ)ಇಡೀ ಭಾರತದ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಈ ಸಿನಿಮಾದ ಕುರಿತು ಲೇಖಕಿ, ಕವಿಯತ್ರಿ ಹೆಚ್.ವಿ. ಮೀನ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಚಲನಚಿತ್ರ : ‘ಛಾವ’ 14 ಫೆಬ್ರವರಿ 2025
ಚಿತ್ರಕಥೆ : ರಿಷಿ ವೀರಮಣಿ
ನಿರ್ದೇಶಕರು : ಲಕ್ಷ್ಮಣ್ ಉಟೇಕರ್
ಪಾತ್ರದಲ್ಲಿ : ವಿಕ್ಕಿ ಕೌಶಲ್, ಅಕ್ಷಯ್ ಖನ್ನ, ರಶ್ಮಿಕಾ ಮಂದಣ್ಣ,ಅಶುತೋಷ್ ರಾಣ, ಬಾಲಾಜಿ ಮನೋಹರ್
ಸಂಗೀತ : ಎ. ಆರ್. ರೆಹಮಾನ್
ನಿರ್ಮಾಪಕರು : ಮ್ಯಾಡಾಕ್ ಫಿಲ್ಮ್ಸ್ ನ ದಿನೇಶ್ ವಿಜಯ್ ಛಾಯಾಗ್ರಾಹಣ : ಸೌರಭ್ ಗೋಸ್ವಾಮಿ
‘ಛಾವ’ ಚಿತ್ರದ ಪ್ರತೀ ಸನ್ನಿವೇಶಗಳು ನನ್ನ ಆತ್ಮದಲ್ಲಿ ದೇಶಾಭಿಮಾನ ಎಂಬ ಪ್ರೀತಿಯನ್ನು ತುಂಬುತ್ತಾ ಭಾರತಾಂಬೆಯ ರಕ್ಷಣೆಗಾಗಿ ಹೋರಾಡಿ ವೀರ ಮರಣ ಹೊಂದಿದವರ ಬಗ್ಗೆ ಗೌರವದಿಂದ, ಹೆಮ್ಮೆಯಿಂದ ತಲೆಬಾಗುವಂತೆ ಮಾಡಿ ದೇಶಕ್ಕಾಗಿ ನಾನು ಮಾಡಬೇಕಾದ ನನ್ನ ಕರ್ತವ್ಯಗಳ ಅಲೆಗಳನ್ನು ಸೃಷ್ಟಿಸಿತು.
ಶ್ರೀ ಶಿವಾಜಿ ಸಾವಂತ್ ಅವರು 1980ರಲ್ಲಿ ಬರೆದ ಮರಾಠಿ ಕಥೆಯನ್ನು ಚಲನಚಿತ್ರ ರೂಪದಲ್ಲಿ ಇದೇ ಫೆಬ್ರವರಿ ತಿಂಗಳ 14ನೇ ತಾರೀಕಿನಂದು ಬಿಡುಗಡೆಗೊಂಡ ಹಿಂದಿ ಚಲನಚಿತ್ರ ‘ಛಾವ’ (ಸಿಂಹದ ಮರಿ) ಇಡೀ ಭಾರತದ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ.

ಫೋಟೋ ಕೃಪೆ :google
ಈ ಚಿತ್ರವು ಎರಡನೇ ಮರಾಠ ಚಕ್ರವರ್ತಿಯಾದ ಮಹಾರಾಜ ಛತ್ರಪತಿ ಸಂಬಾಜಿ( ಶಂಭುರಾಜೆ ಅಥವಾ ಸಂಭಾಜಿ ರಾಜೇ ಶಿವಾಜಿರಾಜೇ ಭೋಸ್ಲೆ )ಮಹಾರಾಜನ ಜೀವನದ ಸಾಧನೆಗಳು ಹಾಗೂ ಮೊಘಲರ ವಿರುದ್ಧ ಗರ್ವದಿಂದ ತಲೆ ಎತ್ತಿ ನಿಂತು ಮರಾಠ ಸಾಮ್ರಾಜ್ಯಕ್ಕಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜನ ಪುತ್ರನ ಕಥೆ ಇದಾಗಿದೆ.
ಛತ್ರಪತಿ ಶಿವಾಜಿ ಮಹಾರಾಜನ ಸಾವಿನ ನಂತರ ಮರಾಠ ಪ್ರಾಂತ್ಯವು ಮೊಘಲರ ಸಂಘರ್ಷಣೆಗೆ ತುತ್ತಾಗಿ ಅನೇಕ ರೀತಿಯ ಸಂಕಷ್ಟಗಳಿಗೆ ಸಿಲುಕಿ ಅಪಾರ ಸಂಪತ್ತನ್ನು ಕಳೆದುಕೊಂಡ ಮರಾಠ ಸಾಮ್ರಾಜ್ಯವನ್ನು ಮತ್ತೆ ಗಟ್ಟಿಗೊಳಿಸಲು ತನ್ನನ್ನು ಪರಿಪೂರ್ಣವಾಗಿ ಅರ್ಪಿಸಿಕೊಂಡು ಧೈರ್ಯದಿಂದ ಹೊರಾಡಿದ ಸಂಬಾಜಿ ಮಹಾರಾಜನ ಜೀವನದ ಕಥೆಯನ್ನು ಹೃದಯಕ್ಕೆ ತಟ್ಟುವಂತೆ ಚಿತ್ರಿಸಿದ್ದಾರೆ. ದೇಶಾಭಿಮಾನದ ಕೊರತೆಯುಳ್ಳ ಇಂದಿನ ಯುವಜನತೆಗೆ ನಮ್ಮ ಪೂರ್ವಜರ ಹೋರಾಟ, ತ್ಯಾಗ, ಬಲಿದಾನಗಳ ಬಗ್ಗೆ ಬೆಳಕನ್ನು ಚೆಲ್ಲಿ ಪ್ರತಿಯೊಬ್ಬರ ಮನದಲ್ಲೂ ನಮ್ಮ ದೇಶದ ಬಗ್ಗೆ ಗೌರವ, ಪ್ರೀತಿ ಹಾಗೂ ಭಕ್ತಿಯ ಕಿಚ್ಚನ್ನು ಮೂಡಿಸುವಲ್ಲಿ ಚಿತ್ರ ತಂಡದವರು ಸಫಲರಾಗಿದ್ದಾರೆ.
ಭಾರತದ ಎಲ್ಲಾ ಭಾಷೆಗಳಲ್ಲೂ ಇಂತಹ ನಮ್ಮ ದೇಶದ ಇತಿಹಾಸದ ನೈಜ ಘಟನೆಯ ಆಧಾರಿತ ಚಿತ್ರಗಳು ಮೂಡಿಬಂದರೆ ನಮ್ಮ ದೇಶದ ಪೂರ್ವಜರ, ಶಕ್ತಿಶಾಲಿ ರಾಜರ, ವೀರಯೋಧರ ತ್ಯಾಗಗಳ ಸಲುವಾಗಿ ನಮಗೆ ದೊರಕಿದ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡುತ್ತದೆ. ನಮ್ಮ ದೇಶ ಸುಭದ್ರವಾಗಿದ್ದರೆ ಮುಂದಿನ ಪೀಳಿಗೆಯ ಜೀವನವೂ ಕೂಡ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ ಎಂಬ ವಿಚಾರಗಳಿಂದ ಎಲ್ಲರೂ ಒಗ್ಗಟ್ಟಿನಿಂದ ಸಹಬಾಳ್ವೆಯನ್ನು ಗೌರವಿಸಬೇಕಾಗಿದೆ.

ಫೋಟೋ ಕೃಪೆ :google
ನಟ ವಿಕ್ಕಿ ಕೌಶಲ್ ಅವರ ನಟನೆ ಅದ್ಭುತವಾಗಿದ್ದು, ಅವರೇ ಸ್ವತಃ ಛತ್ರಪತಿ ಸಂಭಾಜಿಯಂತೆ ಪಾತ್ರದಲ್ಲಿ ಜೀವ ತುಂಬಿದ್ದಾರೆ. ಅಕ್ಷಯ್ ಖನ್ನ ಅವರು ಔರಂಗಜೇಬ್ ಅವರ ಪಾತ್ರದಲ್ಲಿ ಪಾತ್ರಕ್ಕೆ ನ್ಯಾಯವನ್ನು ತುಂಬಿದ್ದಾರೆ. ವಸ್ತ್ರ ವಿನ್ಯಾಸ, ಆಭರಣಗಳು, ಸ್ಥಳ, ಸೌಂಡ್ ಎಫೆಕ್ಟ್ಸ್ ಹಾಗೂ ದೃಶ್ಯಗಳಂತೂ ನೈಜತೆಯನ್ನು ಹೊಂದಿದ್ದು ರೋಮಾಂಚನದಿಂದ ನಮ್ಮ ಗಮನದ ಏಕಾಗ್ರತೆಯನ್ನು ತನ್ನಕಡೆ ಸೆಳೆದು ಸೆರೆಹಿಡಿದಿದೆ. ಕನ್ನಡ ಖ್ಯಾತ ಚಿತ್ರನಟರಾದ ಬಾಲಾಜಿ ಮನೋಹರ್ ಅವರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬುದು ನಮ್ಮೆಲ್ಲರ ಹೆಮ್ಮೆಯ ವಿಷಯ.
ಒಂದು ವಿಶೇಷವೇನೆಂದರೆ ಸಾಮಾನ್ಯವಾಗಿ ಮಕ್ಕಳು ಪ್ರಾಣಿಗಳ ಅಥವಾ ಮಕ್ಕಳ ಚಲನಚಿತ್ರಳನ್ನು ನೋಡಲು ಚಿತ್ರಮಂದಿರಕ್ಕೆ ಬರುತ್ತಾರೆ. ಆದರೇ…. ಈ ಐತಿಹಾಸಿಕ ಕಥೆಯ ಚಿತ್ರವನ್ನು ನೋಡಲು ಅನೇಕರು ತಮ್ಮ ಮಕ್ಕಳನ್ನು ಕೂಡ ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿದ್ದರು. ಚಿತ್ರಮಂದಿರ ಹೌಸ್ ಫುಲ್ ಆಗಿತ್ತು. ಮಕ್ಕಳಲ್ಲಿ ನಮ್ಮ ದೇಶದ ಶೌರ್ಯ ರಾಜರ, ವೀರ ದೇಶಭಕ್ತರ ಜೀವನದ ಬಗ್ಗೆ ಅರಿತುಕೊಳ್ಳುವ ಕುತೂಹಲವನ್ನು ಮೂಡಿಸಿದ ‘ಛಾವ’ ಚಿತ್ರದವರೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.
‘ಛಾವ’ ಚಿತ್ರವನ್ನು ಎಲ್ಲರೂ ಪರಿವಾರದ ಸಮೇತ ಹೋಗಿ ನೋಡಿಬನ್ನಿ. ಕೊನೆಯದಾಗಿ…..”ಒಗ್ಗಟ್ಟಿನಲ್ಲಿ ಬಲವಿದೆ”
ಜೈ ಭಾರತ ಮಾತೆ ಜೈ ಜಗದಂಬೆ ಜೈ ಭುವನೇಶ್ವರಿ.
- ಹೆಚ್.ವಿ. ಮೀನ – ಬೆಂಗಳೂರು.
