ಹದಿಹರೆಯದ ಪ್ರೀತಿಗೆ ಪ್ರೇಮಿಗಳ ದಿನ, ಅದೇ ಪ್ರೀತಿ ವಯಸ್ಸು 50 ದಾಟಿದ ಗಂಡ ಹೆಂಡತಿಯರ ನಡುವಿನ ಪ್ರೇಮ ಹೀಗಿರಬಹುದಾ? …ಕವಿಯತ್ರಿ ವಸಂತ ಗಣೇಶ್ ಅವರು ತಮ್ಮ ಕವನದ ಮೂಲಕ ಓದುಗರಿಗೆ ತಿಳಿದ್ದಾರೆ, ತಪ್ಪದೆ ಮುಂದೆ ಓದಿ…
ನನ್ನ ಕಣ್ಣಳತೆಯಲೇ ನೀನಿರಬೇಕೆಂಬ
ಆಸೆಯೀಗಿಲ್ಲ
ಕೈ ಕೈ ಹಿಡಿದು ರಸ್ತೆಯುದ್ದಕೂ ನಡೆಯುವ
ಖಯಾಲಿಯೂ ಈಗ ಉಳಿದಿಲ್ಲ
ನೀ ತರುವ ಮೊಳ ಹೂವಿಗಾಗಿ ಕಾಯುತ್ತಿದ್ದ ತಾರುಣ್ಯವೂ ಇಲ್ಲ
ಮನಸ್ಸು ಮಾಗುತ್ತಿರುವುದರ ಲಕ್ಷಣಗಳಿರಬೇಕಲ್ಲವೇ ಇವೆಲ್ಲ.
ಕನಸಿನಲೂ ನೀನೀಗ ನನ್ನ ಕಾಡುವುದಿಲ್ಲ
ಅಸಲಿಗೆ ನಿದ್ದೆಯೇ ಕನಸಾಗಿಹುದಲ್ಲ
ಅಲಂಕರಿಸಿಕೊಂಡಾಗಲೊಮ್ಮೆ ನೀ ನನ್ನತ್ತ
ನೋಡಲಿ ಎನ್ನುವ ಹಂಬಲವಿಲ್ಲ
ಏಕೆಂದರೆ ಅಲಂಕರಿಸಿಕೊಳ್ಳುವ
ತಾಳ್ಮೆಯೇ ನನ್ನಲ್ಲುಳಿದಿಲ್ಲ
ಮನಸ್ಸು ಮಾಗುತ್ತಿರುವುದರ ಲಕ್ಷಣಗಳಿರಬೇಕಲ್ಲವೇ ಇವೆಲ್ಲ.
ನನ್ನ ಮಾತುಗಳ ನೀ ಕೇಳಿಸಿಕೊಳ್ಳಲಿ
ಎಂದು ಮನ ಬಯಸುವುದಿಲ್ಲ
ಮಾತಿಲ್ಲದ ಮೌನದ ನೋಟಗಳೇ
ಹೃದಯವ ತೆರೆದಿಡುತಿವೆಯಲ್ಲ
ಏನಿಲ್ಲದೆಯೂ ಸಾಂಗತ್ಯವೇ
ನಮ್ಮ ಸಂಭ್ರಮಕೆ ಕಾರಣವಾಗಿದೆಯಲ್ಲ
ಮನಸ್ಸು ಮಾಗುತ್ತಿರುವುದರ ಲಕ್ಷಣಗಳಿರಬೇಕಲ್ಲವೇ ಇವೆಲ್ಲ.
- ವಸಂತ ಗಣೇಶ್
