ಸಂದು ಹೋದರೂ ಎಂದೂ ನಂದದ ನಂದಾದೀಪಗಳು

ಡಾ. ಹೆಚ್. ಆರ್. ವಿಶ್ವಾಸ ಅವರ “ಸಂದು ಹೋದ ಸಾತ್ವಿಕರು” ಎಂಬ ಪುಸ್ತಕ ತ್ರಿಗುಣಗಳಲ್ಲಿ ಒಂದಾದ ಸತ್ವಗುಣವು ಅತೀ ಸೂಕ್ಷ್ಮ ಗುಣವಾಗಿದ್ದು ಎಲ್ಲರೂ ಇದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸರಳ ಮತ್ತು ಸುಂದರ. ಲೇಖಕಿ ಆತ್ಮ ಜಿ ಎಸ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಸಂದುಹೋದ ಸಾತ್ವಿಕರು
ಲೇಖಕರು : ಡಾ. ಹೆಚ್. ಆರ್. ವಿಶ್ವಾಸ
ಪ್ರಕಾಶಕರು : ಸಾಹಿತ್ಯ ಸಿಂಧು ಪ್ರಕಾಶನ
ಬೆಲೆ : 100
ಸಂಪರ್ಕ : 9449036277

ಕೆಲವರು ತಮ್ಮ ಮಾತುಗಾರಿಕೆ, ಹಾವಭಾವ ಇತ್ಯಾದಿಗಳಿಂದ ಎದುರಿರುವವರನ್ನು ಸೂಜಿಗಲ್ಲಿನಂತೆ ಸೆಳೆದರೆ, ಇನ್ನೂ ಕೆಲವರು ತಮ್ಮಲ್ಲಿರುವ ಕೆಲವೇ ಒಳ್ಳೆಯ ಗುಣಗಳಿಂದ ಇತರರನ್ನು ಪ್ರಭಾವಿಸಬಲ್ಲರು. ಇವರು ಸಾರ್ವಜನಿಕರ ಜೊತೆ ಸಂಪರ್ಕ ಹೊಂದಿದವರಾಗಿಯೂ ಎಲೆ ಮರೆಯ ಕಾಯಿಯಂತಿರುತ್ತಾರೆ, ಬೀರಬೇಕಾದಲ್ಲಿ ತಮ್ಮ ಪ್ರಭಾವ ಬೀರಿ ಸದ್ದಿಲ್ಲದೆ ತೆರೆಯ ಹಿಂದೆ ಸರಿಯುವ ಗುಣ ಉಳ್ಳವರಾಗಿರುತ್ತಾರೆ. ಈಗೀಗ ಇಂತಹ ವ್ಯಕ್ತಿಗಳು ವಿರಳವಾದರೂ, ಇಂಥವರೂ ನಮ್ಮ ನಡುವೆ ಇದ್ದರು ಎಂದರೆ ಅಚ್ಚರಿ ಪಡುವ ಅಗತ್ಯವಿಲ್ಲ.

ಈ ರೀತಿಯ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳನ್ನು ಹತ್ತಿರದಿಂದ ನೋಡಿ, ಅಂಥವರ ಮೇರುಗುಣಗಳ ಅನಾವರಣಗೊಳಿಸಿದ್ದು “ಸಂದು ಹೋದ ಸಾತ್ವಿಕರು” ಎಂಬ ಪುಸ್ತಕ ತ್ರಿಗುಣಗಳಲ್ಲಿ ಒಂದಾದ ಸತ್ವಗುಣವು ಅತೀ ಸೂಕ್ಷ್ಮ ಗುಣವಾಗಿದ್ದು ಎಲ್ಲರೂ ಇದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸರಳ ಮತ್ತು ಸುಂದರ. ಅಂಥಹ ಗುಣಗಳಿಂದಲೇ ಇತರರನ್ನು ಪ್ರೇರೇಪಿಸಿದ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದಾರೆ. ಅಂಥವರ ಒಡನಾಟವಿದ್ದ 14 ವ್ಯಕ್ತಿಗಳ ಪರಿಚಯಾತ್ಮಕ ಬರಹದ ಹೊತ್ತಿಗೆ ” ಸಂದು ಹೋದ ಸಾತ್ವಿಕರು”. ವಿದ್ಯಾರ್ಥಿ ದೆಸೆಯಿಂದಲೇ ಸಂಘಪರಿವಾರದಲ್ಲಿ ತೊಡಗಿಸಿಕೊಂಡಿದ್ದ ಡಾ. ಹೆಚ್. ಆರ್. ವಿಶ್ವಾಸ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ರಾ.ಸ್ವ.ಸಂಘ ಎಂದರೇ ಶಿಸ್ತು, ಶಿಸ್ತು ಎಂದರೆ ರಾ.ಸ್ವ.ಸಂಘ _ ಇದು ಜನ ಸಾಮಾನ್ಯರಲ್ಲಿ ಇರುವ ಅಭಿಪ್ರಾಯ. ಸಮಾಜದಲ್ಲಿ ನಮ್ಮೊಡನೆ ಇದ್ದು ಒಂದಷ್ಟು ಬದಲಾವಣೆ ಮಾಡಲು ಶಿಸ್ತು ಅಗತ್ಯ. ಇದು ಬೌತಿಕ ಮತ್ತು ಮಾನಸಿಕ ಭಾವಕ್ಕೂ ಅನ್ವಯ. ಇದರ ಅರ್ಥ ಸರಿಯಾಗಿ ಅನ್ವಯವಾಗುವುದು ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾಗಿದ್ದ ಸಾನಂದ ಗಣೇಶ ಅವರ ಮಾತಿನಲ್ಲಿ ಎಲ್ಲಿತ್ತೋ ಅಲ್ಲೇ, ಹೇಗಿತ್ತೋ ಹಾಗೆ. ಲೇಖಕರು ಮೊದಲ ಬಾರಿಗೆ ಸಂಘದ ಕೇಶವಕೃಪಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಿನಪತ್ರಿಕೆಯನ್ನು ಓದಿ ಯಥಾಸ್ಥಾನದಲ್ಲಿಇಡದೆ ಇದ್ದಾಗ ಸಾನಂದರು ಇವರಿಗೆ ಹೇಳಿದ ಮಾತನ್ನು ಹೇಳುತ್ತಾರೆ. ಇಂಥಹ ಅನುಭವಾತ್ಮಕ ಘಟನೆಗಳನ್ನು ಲೇಖಕರು ವಿವರಿಸಿದ್ದಾರೆ.

ಲೋಕದ ಹಿತಕ್ಕಾಗಿ ಸ್ಥಿತಪ್ರಜ್ಞತೆಯನ್ನು ಮೆರೆದ ರಾಮಚಂದ್ರ ಅಡಿಗರು, ಸರಳತೆಯೇ ಬದುಕು ಎಂದು ಪ್ರತಿಪಾದಿಸಿ ಅದರಂತೆಯೇ ಬದುಕಿದ ವಿಕ್ರಮ ಪತ್ರಿಕೆಯ ಸಂಪಾದಕರಾಗಿದ್ದ ಬೆ. ಸು. ನಾ. ಮಲ್ಯ, ಸಂಸ್ಕೃತ ಕಲಿತು ಇತರರಿಗೆ ಕಲಿಸಿದ ಮೀರಾ ಕಾಮತ್, ಮೊದಲಾದ ವ್ಯಕ್ತಿಗಳ ಆತ್ಮೀಯ ಒಡನಾಟದ ಅನುಭವ ಈ ಪುಸ್ತಕದಲ್ಲಿದೆ. ಇಲ್ಲಿನ ಬರಹಗಳಷ್ಟೇ ಸತ್ವಯುತವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹರಲ್ಲಿ ಒಬ್ಬರಾದ ಮುಕುಂದ ಅವರ ಮುನ್ನುಡಿಯಿದೆ.

ಲೇಖಕರು ಸಂಘದ ಜೊತೆ ತಮ್ಮ ಒಡನಾಟವನ್ನು ತಿಳಿಸುತ್ತಾ ತಾವೂ ಇವರೆಲ್ಲರ ಜೊತೆ ಬೆರೆತು ಕಲಿತ ಗುಣಗಳನ್ನು ಸಹಜವಾಗಿ ಬರೆಯುತ್ತಾ ಹೋಗಿದ್ದಾರೆ. ಪ್ರತಿಯೊಬ್ಬರ ಕುರಿತು ಓದುತ್ತಾ ಹೋದಂತೆ ನಾವು ಇವರೊಡನೆ ಒಡನಾಡಿದೆವೋ ಎಂಬಂತೆ ಭಾಸವಾಗುತ್ತದೆ. ಇಲ್ಲಿರುವ ಎಲ್ಲಾ ಸಾತ್ವಿಕರು ಸಂದು ಹೋದರೂ ಎಂದೂ ನಂದದ ನಂದಾದೀಪದಂತೆ ಒಡನಾಡಿದವರ ಮನದಲ್ಲಿ ಸ್ಥಾಯಿಯಾಗಿ ಉಳಿದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇತರರಿಗೆ ಮಾರ್ಗದರ್ಶಿಯಾಗಿ ಪ್ರೇರಣೆ ನೀಡುವಂಥ ವ್ಯಕ್ತಿಗಳು ವಿರಳವಾಗಿರುವ ಇಂದಿನ ದಿನಗಳಲ್ಲಿ ಯಾರನ್ನು ಅನುಸರಿಸಲಿ ಎಂಬ ಗೊಂದಲವೇ ಹೆಚ್ಚು. ಹಾಗಾಗಿ ಇಲ್ಲಿರುವ ಎಲ್ಲರ ಬದುಕಿನಲ್ಲಿ ಕಾಣಬರುವ ಸಾತ್ವಿಕ ಗುಣವನ್ನು ನಾವು ಅಳವಡಿಸಿಕೊಂಡಲ್ಲಿ ಬದುಕಿಗೊಂದು ಸಾರ್ಥಕತೆ.


  • ಆತ್ಮ ಜಿ ಎಸ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW