ವಾಣಿ ಜಯರಾಮ್ ಎಂಬ ಗಂಧರ್ವಲೋಕದ ಫಸಲು

ವಾಣಿ ಜಯರಾಮ್ ಎಂಬ ಕಿನ್ನರಲೋಕದ ಕೋಗಿಲೆ ತನ್ನ ಕುಹೂಗೀತವನ್ನು ನಿಲ್ಲಿಸಿ ಎರಡು ವರ್ಷ ಉರುಳಿದೆ. ಆ ಕೋಕಿಲಗಾನ ತನುಮನದಲ್ಲಿ ಅನುರಣಿಸುತ್ತಲೇ ಇದೆ. ಅವರು ಅಗಲಿದಾಗ ಕೆ. ರಾಜಕುಮಾರ್ ಅವರು ಬರೆದಿದ್ದ ಲೇಖನವನ್ನು ತಪ್ಪದೆ ಮುಂದೆ ಓದಿ… 

ಕೆಲವೇ ದಿನಗಳ ಹಿಂದೆ ವಾಣಿ ಜಯರಾಮ್ ಅವರಿಗೆ ಪದ್ಮಭೂಷಣ ಪುರಸ್ಕಾರ ಘೋಷಣೆಯಾದಾಗ ಅವರ ಅಭಿಮಾನಿಯಾದ ನಾನು ಅತೀವವಾಗಿ ಸಂಭ್ರಮಿಸಿದ್ದೆ. ಆದರೆ ಅವರು ಇಹ ಬಿಟ್ಟು ತೆರಳಿದ್ದಾರೆ ಎಂಬ ಸುದ್ದಿ ಕೇಳಿ ಗರಬಡಿದಂತಾಗಿದೆ.

ವಾಣಿ ಜಯರಾಮ್ ಭಾರತೀಯ ಚಿತ್ರರಂಗ ಕಂಡ ಅತ್ಯಪರೂಪದ ಗಾಯಕಿ. ಕೊರಳಿಗೆ ಕೊಡಗಿನ ಜೇನು ಸವರಲಾಗಿದೆಯೇನೋ ಎನ್ನುವಷ್ಟು ಇನಿದನಿ. ಎಲ್ಲೂ ಇಲ್ಲದಷ್ಟು ಮಾಧುರ್ಯ ಆಕೆಯ ಗಳದಲ್ಲಿತ್ತು. ಪದಗಳನ್ನು ಪಲಕುವ ಅನನ್ಯ ಪರಿ ಮತ್ತು ಸಂಗೀತ ಸಂಯೋಜಕನ ನಿರೀಕ್ಷೆಗಿಂತ ಒಂದು ಕೈ ಮಿಗಿಲಾಗಿ ಹೊಮ್ಮಿಸುವ ಭಾವ ಅವರಿಗೆ ಅಸ್ಮಿತೆ ಒದಗಿಸಿದ್ದವು. ಕೆಲವರ ಕಂಠದಲ್ಲಿ ಕೆಲವು ನಿರ್ದಿಷ್ಟ ಪದಗಳು ನಲುಗಿ ಹೋಗುತ್ತವೆ. ಆದರೆ ವಾಣಿಯವರ ಸಿರಿಕಂಠ ದಲ್ಲಿ ಪದಗಳು ಸಚೇತನ ಗೊಂಡು, ಭಾವವನ್ನು ಆವಾಹನೆ ಮಾಡಿಕೊಂಡು ಪುಟಿದೇಳುತ್ತಿದ್ದವು. ಅವರ ಕೆಲವು ಶೀತಲ ಮಾದಕ ಗೀತೆಗಳು ಅವರಲ್ಲಿನ ಸ್ವೋಪಜ್ಞತೆಗೆ ನಿದರ್ಶನ. ಇನ್ನಮೇಲೆ ಮುತ್ತುಮಳೆಗಾಗಿ ಹೊತ್ತು ಕಾಯುವುದಿಲ್ಲ.

ಫೋಟೋ ಕೃಪೆ : google

ಕನ್ನಡದ ತಂನಂ ತಂನಂ ನನ್ನೀ ಮನಸೂ ಮಿಡಿಯುತಿದೆ ಓ ಸೋತಿದೆ ಗೀತೆಗೆ ಸಂವಾದಿ ತೆಲುಗಿನ ಗೀತೆ ವಾಣಿ ಹಾಡಿದ “ನಿಂಗಿ ನೇಲ ಒಕಟಾಯೆಲೆ”. ಇನ್ನು ತೆಲುಗು ರಾಜ್ಯಗಳಲ್ಲೂ ಬಾನೂ, ಬುವಿಯೂ ಒಂದಾಗುವ ಪ್ರಶ್ನೆಯೇ ಇಲ್ಲ. ಬೀಸದಿರು ತಂಗಾಳಿ ಕಂಪನ್ನು ಚೆಲ್ಲಾಡಿ ಎಂದರೂ ಅದು ನಮ್ಮ ಮಾತು ಕೇಳುವುದಿಲ್ಲ. ದೇವರು ಪ್ರೇಮದ ಹೊನ್ನುಡಿಯನ್ನು ನುಡಿಯುವುದಿಲ್ಲ. ಏಕೋ ಏನೋ ಸೋತೆ ನಾನು, ಬೇರೆ ಏನೋ ಆದೆ ನಾನು ಎಂದು ಮಾದಕವಾಗಿ ಯಾರೂ ಉಲಿಯುವುದಿಲ್ಲ. ಮುತ್ತಿನಹಾರ ಬೇಕೆ ಚಿನ್ನ ನಿನಗೆ ಉಡುಗೊರೆ ಎಂದು ರಮಿಸಿ ಯಾರೂ ಕೇಳುವವರಿಲ್ಲ.

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ಎಂದು ವಿಲಪಿಸುವವರಿಲ್ಲ. ಇನ್ನೆಂದೆಂದೂ ನಿನಗಾಗಿ ನಾ ಬಾಳುವೆ ಎಂದು ಭರವಸೆಯನ್ನು ಬಿತ್ತುವವರಿಲ್ಲ. “ಕಣ್ಣಿರೆಂಡಿಲುಮ್ ಒರೇ ಸ್ವರಂ ಕೈಯಿರೆಂಡಿಲುಮ್ ಒರೇ ಲಯಂ” ಎಂದು ಯಾರಿಗೆ ಯಾರು ಹೇಳುವುದೋ ತಿಳಿಯದಾಗಿದೆ. ವಾಣಿ ತಮ್ಮ ದನಿಯಲ್ಲಿ ತುಂಗೆಯನ್ನು ಶಾಂತರಸವಾಗಿ ಶ್ರಾವಣ ಮಾಸವಿರಲಿ, ಶೃಂಗಾರ ಮಾಸವಿರಲಿ ನಿರಂತರವಾಗಿ ಹರಿಸಿದವರು. ಇದೀಗ ಅವರು ಬದುಕನ್ನು ಸವಿಯಲು ಬೇಕಾದ ಸವಿನೆನಪು.

ವಾಣಿಯವರ ಗಾಯನದ ಬಗೆಗೆ ಯಾವುದೇ ತಕರಾರಿಲ್ಲ. ತಾರಾಸ್ಥಾಯಿಗೆ ಜಿಗಿಯಲು ಆರಂಭದಲ್ಲಿ ಇದ್ದ ತೊಡಕನ್ನು, ಅನಂತರ ನಿವಾರಿಸಿಕೊಂಡರು. ಜಾನಪದದಿಂದ ಜಾಜ್ ತನಕ ಆಕೆ ಹಾಡದ ವಿಶ್ವದ ಸಂಗೀತ ಪ್ರಕಾರವೇ ಇಲ್ಲ. ಸಂಕಟ ಬಂದಾಗ ವೆಂಕಟರಮಣ ಎಂದು ಸಂಗೀತ ಸಂಯೋಜಕರೆಲ್ಲ ಸಂಕೀರ್ಣ ಗೀತೆಗಳನ್ನು ಹಾಡಿಸಬೇಕಾಗಿ ಬಂದಾಗಲೆಲ್ಲ ಶರಣಾಗುತ್ತಿದ್ದುದು ಆಕೆಯ ಗಳಕ್ಕೆ. ಯಾವುದ ಮರೆಯಲಿ… ನಿನ್ನೆಯ ಮರೆಯಲೆ ಎಂಬ ಅವರ ಗೀತೆ ಯಾವುದನ್ನೂ ಮರೆಯದಂತೆ ಮಾಡಿದೆ. ಆಕೆ ಹಾದಿ, ಬೀದಿಗಳಲ್ಲಿ; ಊರು, ಕೇರಿಗಳಲ್ಲಿ ಗಾನವೆಂಬ ಗಂಧ ಚೆಲ್ಲಿದವರು. ಭಾವವೆಂಬ ಹೂವು ಅರಳಿಸಿದವರು.

ಬೆಳ್ಳಿಮೋಡವೆ ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ ಎಂಬ ನವಿರಾದ ಕನ್ನಡ ಗೀತೆಯ ಮೂಲ ತೆಲುಗಿನ ನೀಲಿ ಮೇಘಮಾ ಜಾಲಿ ಚೂಪುಮಾ ಒಕ ನಿಮಿಷಮಾಗುಮಾ. ಜಾಲಿ ಚೂಪುಮಾ ಎಂದರೆ ಕರುಣೆದೋರು ಎಂದರ್ಥ. ಆಕೆ ಆ ಎರಡು ಪದಗಳನ್ನು ಉಚ್ಚರಿಸಿರುವ ಪರಿ ಆಲಿಸಿದರೆ ಓಡುತ್ತಿರುವ ಬೆಳ್ಳಿಮೋಡವು ಸಂಮೋಹನಗೊಂಡು ಸ್ತಂಭನಗೊಳ್ಳುತ್ತದೆ! ಇದೇ ಭಾವ ಇಣುಕಿರುವ ಮತ್ತೊಂದು ಗೀತೆ ಗಮನಿಸಿ: ಪ್ರಿಯತಮಾ ಕರುಣೆಯಾ ತೋರೆಯಾ ಎಂದು ವಿರಹ ತೀರಿಸಲು ಇನಿಯನನ್ನು ಯಾಚಿಸಿ ಅಹವಾಲನ್ನು ಮಂಡಿಸಿರುವ ಪರಿ ಬೇರೆಯವರಿಗೆ ಸಾಧ್ಯವೇ ಇಲ್ಲ ಎಂಬಷ್ಟು ಅನನ್ಯ. ಬೇರಾರಿಗು ಇದು ಇಲ್ಲಂತೆ ಎಂಬ ರಾಜರತ್ನಮ್ ಅವರ ತುತ್ತೂರಿ ಕವನವನ್ನು ನೆನಪಿಸುತ್ತದೆ. ಅಲ್ಲಿ ಕಸ್ತೂರಿಯೇ ತನ್ನ ತುತ್ತೂರಿ ಊದಿಕೊಂಡ. ಆದರೆ ವಾಣಿಯವರ ಬಗ್ಗೆ ಅದನ್ನು ಇಲ್ಲಿ ಹೇಳುವುದು ಕೇಳುಗರು.

ಫೋಟೋ ಕೃಪೆ : google

ಅಸಲಿಗೆ ಈ ಕಲೈವಾಣಿ ಜಯರಾಮ್ ಎಂಬುದು ಗಂಧರ್ವಲೋಕದ ಫಸಲು! ಕೊಸರಿಗೆ ಎಂಬಂತೆ ಅರ್ಧಶತಮಾನದ ಕಾಲ ಅದು ನಮ್ಮನ್ನು ಭೂಲೋಕದಲ್ಲಿ ಅಲರಿಸಿದೆ. ಆದರೆ ಜವರಾಯ ಹೀಗೇಕೆ ನಿರ್ದಯಿಯಾದ? ಆಕೆ ಪದ್ಮಭೂಷಿತಳಾಗಿ ಸಂಭ್ರಮಿಸಬೇಕಿತ್ತು.

ಗೆಳೆಯರೊಬ್ಬರು ವಾಣಿಯವರ ಸನಿಹವಾಣಿಯ ಸಂಖ್ಯೆ ಕೊಟ್ಟಿದ್ದರು. ಕರೆ ಮಾಡಲು ಧೈರ್ಯ ಸಾಕಾಗಿರಲಿಲ್ಲ. ಈಗ ಮಾಡುವಂತೆಯೇ ಇಲ್ಲ. ಆಕೆ ಕಣ್ಣಾರೆ ಕಾಮಾಕ್ಷಿಯನ್ನು ಕಂಡಾಕೆ! ಆ ಹಾಡನ್ನು ನೆನಪಿಸಿಕೊಳ್ಳಿ. ಸಾಕ್ಷಾತ್ ಕಾಮಾಕ್ಷಿಯನ್ನು ಕಂಡು ಪುಳಕಗೊಂಡಂತಹ ಭಾವ. Happiest movement every event ಎಂದ ಅವರು ಮುಂದುವರೆದು, I welcome every smile, I welcome every smile ಎನ್ನುತ್ತಾರೆ. ಇನ್ನು ಮುಂದೆ ಯಾರಿಗಾಗಿ ತುಟಿಯರಳಿಸೋಣ? ನಗು ನೀ ನಗು ಮೋಹಕ ತುಟಿಯ ಅಂಚಿನಲಿ ಎಂದವರು ವಾಣಿ. ನಗಲಾರೆವು ಮೇಡಂ.

ನಿನ್ನ ಕೊಂಕು ನೋಟವ ಮಿಂಚು ಎನ್ನಲೇ ಎಂದು ನಮ್ಮನ್ನು ಛೇಡಿಸುವವರು ಯಾರು? ಆಕೆಯದು ಅಕ್ಷಯ ಪ್ರತಿಭೆ.

ಆಕೆ ಹಾಡಲು ಬಂದಾಗ ನಿತ್ ಮನ್ ಪ್ಯಾಸಾ, ನಿತ್ ಮನ್ ತರಸಾ ಅಷ್ಟೇ. ವಿದಾಯ ಹೇಳಿ ತೆರಳುವಾಗ ಬಹು ಮನ್ ಪ್ಯಾಸಾ, ಬಹು ಮನ್ ತರಸಾ ಎಂದು ಮಾಡಿಬಿಟ್ಟರು. ಆಕೆ ಗಾಯನಲೋಕದ ಪಪೀಹರ. ಬೋಲೇ ರೇ ಪಪೀಹರ.

ಸಿಕ್ಕಿದರೆ ಕೇಳಬೇಕೆಂದಿದ್ದೆ: ನೀವೇಕೆ ಕನ್ನಡ ಕಲಿಯಲಿಲ್ಲ ಎಂದು. ನಿಮ್ಮನ್ನು ಆದರಿಸಿ, ಮುದ್ದುಮಾಡಿ ಅವಕಾಶಗಳ ಹೆಬ್ಬಾಗಿಲನ್ನು ತೆರೆದು ಬೆಳೆಸಿದ್ದು ಕನ್ನಡ. ಅದರ ಬಗ್ಗೆ ಏಕಷ್ಟು ಉಪೇಕ್ಷೆ ಎಂದು. ಆ ಅವಕಾಶವನ್ನೇ ನೀಡದೆ ತೆರಳಿಬಿಟ್ಟಿದ್ದಾರೆ. ಆದರೂ ಅವರ ಹಾಡನ್ನೇ ಗುನುಗುತ್ತೇನೆ:

ನಯನಂ ಮಧುರಂ, ಹಸಿತಂ ಮಧುರಂ, ಮಧುರಾಧಿಪತೇ ಅಖಿಲಂ ಮಧುರಂ. ಮಧುರಂ ಮಧುರಂ.

ರಾಂಗೇನ ಹಾಲ್ಲಿಯಾಗೆ ಬಾಂಗಾರ ಕಪ್ಪತೊಟ್ಟ ರಂಗಾದ ರಂಗೇಗೌಡ ಮೆರೆದಿದ್ದಾ ಎಂದು ಬಿಳೀ ಹೆಂಡ್ತಿ ಚಿತ್ರದ ಮಾರ್ಗರೆಟ್ ಆಗಿ ತಪ್ಪಾಗಿ ಉಲಿದ ಗೀತೆ ನಿಜಕ್ಕೂ ಮುದ ನೀಡುವಂತಹುದು. ಆ ಹಾಡಿನ ಕಡೆಯಲ್ಲಿ ಈ ನೆಲದ ಭಾಷೆ ಮತ್ತು ಪರಂಪರೆ ಅರಿಯದ ಮಾಗರೇಟ್ “ಬಲ್ ಸೋಕಾಗಿ ಸೋಭ್ನಾ ಆಗೋಯ್ತು” ಎಂದು ನಿರ್ಭಿಡೆಯಾಗಿ, ಮುಗ್ಧವಾಗಿ ಹಾಡಿದ್ದು ಕೇಳಿದಾಗ ಎದ್ದ ನಗುವಿನಲೆ ಇನ್ನೂ ಮೊರೆಯುತ್ತಿದೆ. ವಾಣಿಗೆ ಇನ್ನಾರು ಸಾಟಿ?

ಕಡೆಯಲ್ಲಿ ಒಂದು ಸರಿಸಾಟಿಯಿಲ್ಲದ ಹಾಡು:
ಮೇಘಮೇ ಮೇಘಮೇ ವಾನ್ವಿಲಾ ಮೇಘಮೇ.


  • ಕೆ. ರಾಜಕುಮಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW