ಜನಪ್ರಿಯ ಲೇಖಕಿ ಎ.ಪಿ.ಮಾಲತಿ ಅವರು ಬರೆದ ‘ನೂಪುರಗಾನ’ ಸುಂದರ ಸಾಮಾಜಿಕ ಕಾದಂಬರಿಯಾಗಿದ್ದು, ಸಾಮಾನ್ಯ ಹೆಣ್ಣಿನ ಮನದ ತಲ್ಲಣಗಳನ್ನು ಇಲ್ಲಿ ಲೇಖಕಿ ಕಟ್ಟಿ ಕೊಟ್ಟ ರೀತಿ ಅತ್ಯಂತ ಸಹಜ- ಸುಂದರವಾಗಿದೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ನೂಪುರಗಾನ
ಲೇಖಕರು: ಎ.ಪಿ.ಮಾಲತಿ
ಪ್ರಕಾಶನ : ಓಂ ಶಕ್ತಿ ಪ್ರಕಾಶನ, ಬೆಂಗಳೂರು
ಮುದ್ರಣದ ವರ್ಷ:೧೯೮೬ ಮತ್ತು ೨೦೧೦
ಬೆಲೆ: ರೂ. ೭೦
ಪುಟ:೧೩೪
ಸಂಸ್ಕಾರದ ನೆರಳಿನಲ್ಲಿ ಬೆಳೆದ ಗಾಯತ್ರಿ ಚಿಕ್ಕಂದಿನಿಂದಲೂ ಸಂಗೀತ ಹಾಗೂ ನೃತ್ಯವನ್ನು ಕಲಿತವಳು. ನೃತ್ಯದೆಡೆ ಅವಳ ಆಸಕ್ತಿಯನ್ನು ಮೆಚ್ಚಿಯೇ ದಯಾನಂದ ಮದುವೆಯಾಗಿದ್ದ. ಅವನಿಗೆ ಉಡುಪಿಯಲ್ಲಿ ರೇಡಿಯೋ ಅಂಗಡಿ ಇತ್ತು. ಹಳ್ಳಿಯ ಜಮೀನು ನೋಡಿ ಕೊಳ್ಳಲು ನಂಬಿಗಸ್ಥ ಸಂಸಾರವೊಂದನ್ನು ಅಲ್ಲಿರಿಸಿ ಆಗಾಗ ಹೋಗಿ ಬರುತ್ತಿದ್ದ. ಅವನ ತಂಗಿ ವಿಶಾಲಿ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು.ಅಣ್ಣ ಸದಾನಂದ ಸಂಸಾರದೊಂದಿಗೆ ಡೆಲ್ಲಿಯಲ್ಲಿದ್ದ. ತಾಯಿ ವೆಂಕಮ್ಮ ಎರಡೂ ಮಕ್ಕಳಲ್ಲಿ ಸಮನಾಗಿ ಉಳಿಯುತ್ತಿದ್ದರು. ಕಲೆಗೆ ಪ್ರೋತ್ಸಾಹ ನೀಡುತ್ತಿದ್ದ ದಯಾನಂದ ಗಾಯತ್ರಿಯನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದ.
ಉಡುಪಿಯ ಮನೆಯಲ್ಲಿ ಅವಳಾಸೆಯಂತೆ ‘ಕಲಾಕುಂಜ’ ಎನ್ನುವ ನೃತ್ಯ ಶಾಲೆಯನ್ನು ತೆರೆದ ಆಕೆ ಅನೇಕ ಕಡೆ ಕಾರ್ಯಕ್ರಮ ನೀಡುತ್ತಾ ಪ್ರಸಿದ್ದಿ ಪಡೆಯ ತೊಡಗಿದ್ದಳು. ಈ ನಡುವೆ ಅವಳಿಗೆ ಸುರೇಖಾ ಮತ್ತು ಸ್ವಪ್ನ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಹೀಗಿರುವಾಗ ಇದ್ದಕ್ಕಿದ್ದಂತೆ ದಯಾನಂದ ‘ಕಲಾಕುಂಜ’ದ ಮನೆಯನ್ನು ಮಾರಿ ಹಳ್ಳಿಯಲ್ಲಿ ನೆಲೆಸುವ ತೀರ್ಮಾನ ತೆಗೆದು ಕೊಂಡಿದ್ದ. ಅವರ ಉಡುಪಿಯ ಮನೆಯನ್ನು ದಯಾನಂದನ ಆಪ್ತ ಸ್ನೇಹಿತ ವಾಮನ ಪೈ ಖರೀದಿಸಿದ್ದರು. ಅವರ ಹೆಂಡತಿ ಪ್ರಭಾ ಗಾಯತ್ರಿಯ ಮೆಚ್ಚಿನ ಗೆಳತಿಯಾಗಿದ್ದಳು.

‘ಕಟ್ಟದಮೂಲೆ’ ಹೆಸರೇ ಸೂಚಿಸುವಂತೆ ಕಗ್ಗಾಡು. ‘ಹಳ್ಳಿಯಲ್ಲಿ ಅಭ್ಯುದಯ ಸಾಧಿಸ ಬಹುದು. ನಿನಗೆ ಯಾವ ತೊಂದರೆಯೂ ಆಗದಂತೆ ನೋಡಿ ಕೊಳ್ಳುವೆ’ ಎಂದು ಭರವಸೆಯಿತ್ತು ದಯಾನಂದ ಉಡುಪಿಯಿಂದ ಅವಳನ್ನು ಇಲ್ಲಿಗೆ ಕರೆ ತಂದಿದ್ದ. ಆದರೆ ಅಲ್ಲಿ ಮಕ್ಕಳ ಶಾಲೆಯ ವಾರ್ಷಿಕೋತ್ಸವದಲ್ಲಿ ನೃತ್ಯ ಹೇಳಿಕೊಟ್ಟು ತಾನೂ ನೃತ್ಯ ಕಾರ್ಯಕ್ರಮ ಕೊಡಲು ಸಿದ್ಧಳಾಗಿದ್ದ ಗಾಯಿತ್ರಿಯನ್ನು ಬೇಡವೆಂದು ತಡೆದಿದ್ದ!!
ಇದ್ದಕ್ಕಿದ್ದಂತೆ ಗಂಡನಲ್ಲಾದ ಈ ಬದಲಾವಣೆ ಅವಳನ್ನು ದಂಗು ಬಡಿಸಿತ್ತು. ದಿನವೂ ಇದೇ ವಿಷಯಕ್ಕೆ ಅಸಹನೆ ಹೆಚ್ಚಿ ಅವರಲ್ಲಿ ವಿರಸ ಮೂಡ ತೊಡಗಿತ್ತು. ಅವಳಿದ್ದ ಕಡೆಯೆಲ್ಲಾ ತುಂಬಿದ ‘ನೂಪುರಗಾನ’ ಕೇಳಲಾಗದೇ ಅವನು ಮಕ್ಕಳ ಕಾಲಲ್ಲಿದ್ದ ಬೆಳ್ಳಿ ಕಾಲ್ಗೆಜ್ಜೆಯನ್ನೂ ಬಿಚ್ಚಿ ಪೆಟ್ಟಿಗೆಯಲ್ಲಿ ತೆಗೆದಿಟ್ಟಿದ್ದ. ಅವಳ ತಂಬೂರಿಯನ್ನು ಒಡೆದು ತಂತಿ ಕಿತ್ತಿದ್ದ.!
ಇತ್ತೀಚೆಗೆ ಗಂಡನ ದಿಗ್ಬಂಧನದಿಂದ ಗಾಯತ್ರಿಯ ನಿರ್ಧಾರ ಕದಲಿತ್ತು.ತನ್ನ ಇದುವರೆಗಿನ ಪರಿಶ್ರಮ ವ್ಯರ್ಥವಾಗಬೇಕೆ? ನೂಪುರವಿಲ್ಲದಿದ್ದರೆ ತಾನು ಸಾಧಿಸುವುದಾದರೂ ಏನನ್ನು? ಎನಿಸಿ ಗಂಡನ ಮನ ಒಲಿಸಲು ನೋಡಿ ಸೋತು, ಅವಳು ಮತ್ತೆ ಉಡುಪಿಗೆ ಹೋಗಲು ತೀರ್ಮಾನಿಸಿದಳು. ಅವಳ ನಿರ್ಧಾರದಿಂದ ಮನಸ್ಸಿಗೆ ನೋವಾದರೂ ದಯಾನಂದ ತನ್ನ ಹಠ ಬಿಡಲಿಲ್ಲ. ಮಗ ಸೊಸೆಯರ ವಿರಸದಿಂದ ಅತ್ತೆ ವೆಂಕಮ್ಮ ಸಂಕಟ ಅನುಭವಿಸಿ ಇಬ್ಬರಿಗೂ ತಮಗೆ ತಿಳಿದಂತೆ ಬುದ್ಧಿ ಹೇಳಿ ವಿಫಲರಾದರು.
ಇಲ್ಲಿ ಎಲ್ಲರೂ ಒಳ್ಳೆಯವರೇ. ಆದರೂ ಸ್ವಾಭಿಮಾನ ಮತ್ತು ಹುಚ್ಚು ಹಠ ಹೇಗೆ ಸಂಸಾರದ ನೆಮ್ಮದಿ ಕೆಡಿಸಿತು ಎನ್ನುವುದನ್ನು ಲೇಖಕಿ ಬಲು ಚೆಂದವಾಗಿ, ಮನ ತಾಕುವಂತೆ ಕಲ್ಪಿಸಿ ಬರೆದಿದ್ದಾರೆಂದರೆ ….ಇಲ್ಲೇ ಎಲ್ಲೋ ಯಾರದೋ ಮನೆಯೊಂದರಲ್ಲಿ ಹೀಗಾಗಿದೆಯೇನೋ…. ಎಂಬಂತೆ!!. ಮಕ್ಕಳು- ಮನೆಯನ್ನು ಬಿಟ್ಟುಉಡುಪಿಗೆ ಹೋದ ಗಾಯತ್ರಿ ಸ್ನೇಹಿತೆ ಪ್ರಭಾಳ ಮನೆಯಲ್ಲಿ ಕೆಲದಿನ ಆಶ್ರಯ ಪಡೆದು ತಾನೇ ಕಟ್ಟಿದ’ ಕಲಾಕುಂಜ’ದಲ್ಲಿ ನೃತ್ಯ ಶಿಕ್ಷಕಿಯಾಗಿ ಕಲಿಸುತ್ತಾ, ಅವಕಾಶಗಳನ್ನು ಬಳಸಿ ಕೊಂಡು ಪ್ರೋಗ್ರಾಂ ಕೊಡುತ್ತಾ, ನೋವು ಮರೆಯುತ್ತಾ, ಕಲೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಳು.

ಅತ್ತ ಅವಳ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಾಯಿಗಾಗಿ ಹಂಬಲಿಸಿ ಅಳುವುದು, ಅವರ ಮನಸ್ಥಿತಿ… ಅಜ್ಜಿಯ ಸಂಕಟ ವ್ಯಥೆ, ಮಕ್ಕಳನ್ನು ಒಬ್ಬನೇ ಸುಧಾರಿಸಲಾಗದೇ ಬಳಲುವ ದಯಾನಂದನ ಆಲೋಚನೆ – ಅಸಹನೆ- ಸಿಟ್ಟು ಇವೆಲ್ಲಾ ನಾನು ಹೇಳುವುದಕ್ಕಿಂತಲೂ ಓದಿದರೇ ಇನ್ನೂ ಅರ್ಥವಾಗುತ್ತದೆ.
ಒಂದೆಡೆ ‘ಕಲಾ ಜಗತ್ತು’ ಇನ್ನೊಂದೆಡೆ ‘ಕುಟುಂಬ’ ಎರಡೂ ಮುಖ್ಯವೆಂದು ಭಾವಿಸಿದ ಗಾಯತ್ರಿ ಕೊನೆಯಲ್ಲಿ ತಾನೇ ಆಯ್ದು ಕೊಂಡ ನೃತ್ಯದದಾರಿಯಲ್ಲಿ ವಿಜಯ ಸಾಧಿಸಿದರೂ… ಮಕ್ಕಳು ಮತ್ತು ಗಂಡನ ಪ್ರೀತಿಗಾಗಿ ಹಂಬಲಿಸುತ್ತಾ ನೆಮ್ಮದಿ ಕಾಣದಾದಳು. ಅತ್ತ ದಯಾನಂದನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಹೀಗಿರುವಾಗ ಕೊನೆಯಲ್ಲಿ ಇಬ್ಬರೂ ತೆಗೆದು ಕೊಂಡ ನಿರ್ಧಾರವೇನು?….
ಇಲ್ಲಿ ಗಂಡ -ಹೆಂಡತಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಸಮಾನತೆಯಿಂದ ಬದುಕಿದಲ್ಲಿ ಆ ಸಂಸಾರದಲ್ಲಿ ಸಾರವಿದೆ ಎನ್ನುವುದನ್ನು ಮನೋಜ್ಞವಾಗಿ ಲೇಖಕಿ ಬರವಣಿಗೆಯ ಮೂಲಕ ಸಾರಿದ್ದಾರೆ. ಮನ ಗೆದ್ದು ಓದಿಸಿಕೊಂಡ ಇಂದಿನ ೧೯೮೬ ರಷ್ಟು ಹಳೆಯ ಕೃತಿ ಇನ್ನೂ ಹೊಚ್ಚಹೊಸತರಂತೆ ಗೋಚರಿಸಿತು.
ಸಾಮಾನ್ಯ ಹೆಣ್ಣಿನ ಮನದ ತಲ್ಲಣಗಳನ್ನು ಇಲ್ಲಿ ಲೇಖಕಿ ಕಟ್ಟಿ ಕೊಟ್ಟ ರೀತಿ ಅತ್ಯಂತ ಸಹಜ- ಸುಂದರವಾಗಿ ಮೂಡಿದೆ.ಓದಿನ ನಂತರವೂ ಮನದಲ್ಲಿ ಉಳಿದು ಕಾಡುವ ಕಾದಂಬರಿಯನ್ನು ನೀವೂ ಓದಿ ಹೇಳಿ.
- ಮಾಲತಿ ರಾಮಕೃಷ್ಣ ಭಟ್
