‘ನನ್ನ ಫೋನಿನಲಿ ಸಂದೇಶವೊಂದು ಬರುತಲಿದೆ…ಅದು ನೀನಲ್ಲವೆನ್ನುವುದು ಖಚಿತ. ಎಲ್ಲಿ, ಅದನು ತೆರೆದು ಓದುವೆ… ಒಂದೊಮ್ಮೆ, ನಿನ್ನದಿದ್ದರೂ ಇರಬಹುದಲ್ಲ!’ … ಕವಿ ಕೇಶವ ಮಳಗಿ ಅವರ ಅನುವಾದ ಕವನವನ್ನು ತಪ್ಪದೆ ಮುಂದೆ ಓದಿ…
– ಅಜ಼ರ್‌ಬೈಜಾನಿ ಕವಿ:
* ಐಸೆಲ್ ನವರೂಸ಼್
ಈ ಅಡುಗೆಮನೆಯ ಮೂಲೆಮೂಲೆಯಲಿ ಯಾತನೆ ಅಡಗಿದೆ.
ಈ ತರುಣ ಆಡುವ ಪ್ರತಿ ಮಾತು ಉದ್ವೇಗದ ಬೆಂಕಿ ಸುರಿಸುವುದು.
ಮೂರು ಬಟ್ಟಲುಗಳು ಒಡೆಯಲೆಂದೇ ಕಾದು ಕುಳಿತಿವೆ;
ಅತಿ ಪ್ರೀತಿಪಾತ್ರವಾದುದು ನನ್ನತ್ತಲೇ ನೋಡುತಿದೆ.
ಪ್ರತಿ ರಜಾಕಾಲದಲಿ ಒಲುವೆಯ ಹುಡುಗಿ
ಹೂಗುಚ್ಛ, ಬಳೆ ಇಲ್ಲವೇ ಮುತ್ತನು ಸಂಪಾದಿಸುವಳು.
ಕಳೆದ ಸೂಟಿಯಲಷ್ಟೇ ಸಿಡುಕು ಪ್ರಿಯಕರನಿಂದ
ಈ ಬಟ್ಟಲನು ಉಡುಗೊರೆ ಪಡೆದಿರುವೆ.
ಕೋಪೋದ್ರೇಕದ ಪ್ರೀತಿಯಿಂದ ಜರ್ಜರಿತಳಾದಾಗ
ನನ್ನ ನಡಗು ಕೈಗಳಿಂದ
ನೆಲಕೆ ಬಿದ್ದು, ಒಡೆದು ಚೂರು ಚೆಲ್ಲಾಪಿಲ್ಲಿಯಾಗುವುದು
ಈ ಬಟ್ಟಲಿನ ವಿಧಿಯೇ?
ನನ್ನ ಕಣ್ಣನೇ ನೋಡುತಲಿರುವ ಆ ಮೂರೂ ಬಟ್ಟಲು
ನಕ್ಕು, ಅವಮಾನಿಸುವವು.
ಆದರೂ, ನಾನು ಕಣ್ಣೀರಾಗಲಿಲ್ಲ.
ಸುಖಕರ ರಜಾದಿನಗಳಲಿ
ನನ್ನ ಸಂತಸದ ಒಡನಾಡಿಯಾಗಿದ್ದ
ಈ ಬಟ್ಟಲು ಒಡೆದಾಗ ಕಣ್ಣುಗಳು ತುಂಬಿದವು.
ನನ್ನ ಮನೆಯ ಮೂಲೆಮೂಲೆ ನೋವಿನಲಿ ನರಳುವುದು,
ಅಲ್ಲೊಂದು ಅಡುಗೆ ಕೋಣೆಯೂ ಇಹುದು;
ಈ ಅಡುಗೆ ಮನೆಯಲ್ಲಿ-
ಕಡಲ ಬಣ್ಣದ, ಹಳದಿ ಚಿತ್ತಾರಗಳ ಬಟ್ಟಲುಗಳು
ಆಗೀಗ ಒಡೆದು ಚೂರಾಗುವವು.
*
ಸಂಪರ್ಕ
ಈಚೆಗಷ್ಟೇ ದೂರವಾಣಿ ಕರೆ ಮಾಡಿದ ಪಟ್ಟಿಯಿಂದ
ನಿನ್ನ ಹೆಸರು ನಿಧನಿಧಾನ ಕೆಳಗೆ ಸರಿಯುವುದು,
ಒಲುಮೆ ಕಣ್ಮರೆಯಾಗುವುದೆಂದರೆ ಇದೇ!
ನಿನ್ನ ಫೇಸ್‌ಬುಕ್ ಆತ್ಮೀಯರ ಪಟ್ಟಿಯಿಂದ ನಿನ್ನನು
ತೆಗೆದು ಹಾಕಲಾಗುವುದು;
ನೀನು ಅಲ್ಲೇನು ಬರೆಯುತಿರುವೆ ಎಂದು
ನಾನರಿಯಲಾರೆ ಎಂದು ಬಲು ಬೇಗ ಅರಿವಾಗುವುದು.
ಇನ್ನೋಟು ಕಾಲ ಕಳೆಯುವುದು,
ನಾವೀಗ ಹೊಕ್ಕುಬಳಸಿನ ಒಡನಾಡಿಗಳಲ್ಲ.
ನೀನು ನಿನ್ನ ಪಾಸ್‌ವರ್ಡ್‌ಗಳನ್ನು ಬದಲಿಸುವೆ
ನಾನು ನಿನ್ನಲಿನ ನಂಬಿಕೆಯನು ಕಳೆದುಕೊಳುವೆ
ಎಷ್ಟೋ ವರುಷ ಭೇಟಿಯಾಗದವರೊಂದಿಗೆ
ನಗರದ ಮಧ್ಯಭಾಗದಲಿ ಕುಳಿತು ಚಹಾ ಸೇವಿಸುವೆವು.
ʻನೀನು ತೊಡಬೇಡʼ ಎಂದು ಹೇಳಿದ ಬಟ್ಟೆಗಳನು ಧರಿಸುವೆ,
ಮಾತ್ರವಲ್ಲ, ನಿನ್ನನು ಕ್ಷಮಿಸುವುದಿಲ್ಲ.
ಈ ಪ್ರೇಮದ ವಿರುದ್ಧದ ವಿಜಯೋತ್ಸದಲಿ
ನನ್ನಂತೆಯೇ ನೀನೂ ನೋವಿನ ಬಣ್ಣದಲಿ ಮುಳಿಗೇಳುವೆ.
ನನ್ನ ಫೋನಿನಲಿ ಸಂದೇಶವೊಂದು ಬರುತಲಿದೆ
ಅದು ನೀನಲ್ಲವೆನ್ನುವುದು ಖಚಿತ.
ಎಲ್ಲಿ, ಅದನು ತೆರೆದು ಓದುವೆ
ಒಂದೊಮ್ಮೆ, ನಿನ್ನದಿದ್ದರೂ ಇರಬಹುದಲ್ಲ!
- ಕೇಶವ ಮಳಗಿ
