ಮಾಡಿದ ಸಹಾಯ ಯಾರಿಗೂ ಗೊತ್ತಿರುವುದಿಲ್ಲ. ಸಹಾಯ ಯಾಚಿಸಿದವರು ಎಲ್ಲೂ ಹೇಳಿಕೊಳ್ಳುವುದಿಲ್ಲ. ನಿಸ್ವಾರ್ಥ ಮನದಿಂದ ಸಹಾಯ ಮಾಡುವಾಗ ಹೇಳಿಕೊಂಡು ತಿರುಗೋದೂ ಇಲ್ಲ. ಸ್ವಾರ್ಥ ಬದುಕಿನಲ್ಲಿ ನಾವು ಸ್ವಾರ್ಥಿಗಳಾಗಬೇಕೇ?. ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…
ಪ್ರಪಂಚ ಸಾಕಷ್ಟು ಬದಲಾಗಿದೆ. ಹಿಂದಿನವರಂತೆ ಇಂದು ಸಹಬಾಳ್ವೆಯ ಬದುಕಿನ ಅವಶ್ಯಕತೆ ಇಂದಿನವರಿಗೆ ಖಂಡಿತ ಇಲ್ಲ. ಹಣ ಇದ್ದರೆ ಸಾಕು, ಬದುಕು ಹೇಗೋ ಸಾಗಿ ಹೋಗುತ್ತದೆ. ಆದರೆ ಮನಸ್ಸು, ಹುಟ್ಟುವ ಭಾವನೆಗಳು, ಇವಕ್ಕೆಲ್ಲ ಇಲ್ಲಿ ಖಂಡಿತ ಬೆಲೆ ಇಲ್ಲ.
“ಯಾಕೆ ಗಾಯತ್ರಿ, ನೀನು ಈ ರೀತಿ ಮಾತನಾಡ್ತಾ ಇದೀಯಾ? ನಿಜಕ್ಕೂ ನನಗೆ ಅಚ್ಚರಿ ಆಗ್ತಿದೆ. ಯಾವಾಗ ನೋಡಿದರೂ ಪ್ರಾಮಾಣಿಕ ಬದುಕು ನಡೆಸು, ಒಂದಿಷ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಿಕೋ. ಆದಷ್ಟೂ ಹೊಂದಿಕೊಂಡು ಹೋಗುವುದನ್ನು ಕಲಿ ಎಂದೆಲ್ಲ ಬುದ್ಧಿ ಹೇಳಿ ನನ್ನನ್ನು ತಿದ್ದಲು ಪ್ರಯತ್ನ ಪಟ್ಟವಳು ನೀನೇನಾ?” ಎಂದು ಸಾಕಷ್ಟು ಅಚ್ಚರಿ ಆಗ್ತಿದೆ ನನಗೆ ಎಂಬಂತೆ, ಬಹುವರ್ಷಗಳ ನಂತರ ಸಿಕ್ಕ ತನ್ನ ಹೈಸ್ಕೂಲ್ ಗೆಳತಿಯನ್ನು ಆಶ್ಚರ್ಯದಿಂದ ತದೇಕಚಿತ್ತದಲ್ಲಿ ನೋಡತೊಡಗಿದಳು ನಯನಾ.
“ಹೂಂ ಕಣೇ. ಅದೆಲ್ಲ ಎಂದೋ ಮುಗಿದ ಕಥೆ. ಈಗಲೂ ನಾನು ಅದೇ ಗಾಯತ್ರಿ. ಆದರೆ ಬದಲಾಗಿದ್ದು ನನ್ನ ಒಳಗಿನ ಭಾವನೆಗಳು. ನನ್ನನ್ನು ಬದಲಾಗಿಸಿ, ನನ್ನ ಭಾವನೆಗಳನ್ನು ಕಲ್ಲಾಗಿಸಿದ್ದು ಕೂಡ ಇದೇ ಜಗತ್ತು ಅಂದ್ರೆ ನಂಬುತ್ತೀಯಾ?” ಎಂದಳು.
“ಯಾಕೆ ಗಾಯತ್ರಿ, ಇಷ್ಟು ಕಠಿಣ ಆಗಿರುವೆ? ನೀ ಮೊದಲು ಹೀಗಿರಲಿಲ್ಲ,” ಎಂದು ತನ್ನ ಗೆಳತಿಯ ಶಿಲೆಯಂತಾದ ಭಾವವನ್ನು ಗ್ರಹಿಸಿ, ನಂಬಿಕೆ ಬಾರದೇ ತೊಳಲಾಡಿದಳು ನಯನಾ.
“ನಿನಗೆ ಅಚ್ಚರಿ ಆಗುವುದು ಸಹಜ ನಯನಾ. ಆದರೆ ನನ್ನ ಬದುಕು, ನನ್ನ ಸುತ್ತಮುತ್ತಲಿನ ಪರಿಸರ, ನನ್ನನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.
‘ನಿನಗೆ ಕಷ್ಟನಷ್ಟದ ಬದುಕಿನ ಪರಿಚಯ ಇಲ್ಲ’ ನಯನಾ. ಯಾಕೆಂದರೆ ನೀನು ಹುಟ್ಟಿದ್ದು ಆಗರ್ಭ ಶ್ರೀಮಂತರ ಮನೆಯಲ್ಲಿ. ಇನ್ನು ಮದುವೆ ಆಗಿ ಹೋಗಿದ್ದು ಕೂಡ ಆಗರ್ಭ ಶ್ರೀಮಂತರ ಮನೆಗೆ. ಹಾಗಾಗಿ ಈ ಜಗತ್ತಿನ ಇನ್ನೊಂದು ಮುಖದ ಪರಿಚಯ ನಿನಗೆ ಆಗಿರಲಿಕ್ಕಿಲ್ಲ. ಯಾಕೆಂದರೆ ನಿನಗೆ ಅಂತಹ ತುರ್ತು ಪರಿಸ್ಥಿತಿ ಕೂಡ ಕನಸಿನಲ್ಲೂ ಬರಲಾರದು. ನನ್ನ ಬದುಕು ಬಡತನ, ಮಧ್ಯಮ ವರ್ಗದ ರೇಖೆಯಲ್ಲೇ ಅಸ್ತಂಗತ ಆಗಿದ್ದು. ಕಾಯಕವೇ ಕೈಲಾಸ ಎಂದು ಟೊಂಕ ಕಟ್ಟಿ ನಿಂತು ಜೀವನ ಕಟ್ಟಿ ನಿಲ್ಲುವುದು ಇದೆಯಲ್ಲ, ಅದೊಂದು ತಪಸ್ಸು. ಸುಲಭದ ಮಾತಲ್ಲ.
ಈ ನಡುವೆ ನಮ್ಮವರು, ನಮ್ಮ ಕುಟುಂಬ ಎಂದು ಅವರ ಕಷ್ಟನಷ್ಟ, ಅವರ ಜವಾಬ್ದಾರಿಗಳನ್ನು ನಮ್ಮ ತಲೆ ಮೇಲೆ ಹೊರಿಸಿಕೊಂಡು, ನಮ್ಮ ಜೀವನದ ಭಾರದೊಂದಿಗೆ ಹೊತ್ತು ನಿಲ್ಲುತ್ತೇವೆ ನೋಡು. ಆ ಸಂಕಷ್ಟದ ನೋವು, ಅದರ ಭಾರ, ಎಲ್ಲಾ ಹೊತ್ತವರಿಗೆ ಮಾತ್ರ ಗೊತ್ತಿರುತ್ತದೆ. ಹೊರಿಸಿದವರಿಗೂ ಅರಿವು ಇರುವುದಿಲ್ಲ.
ನಂತರ ಅವರನ್ನೆಲ್ಲ ಒಂದು ದಡ ಮುಟ್ಟಿಸಿದ ಮೇಲೆ ಭಾರ ಕಳೆದು, ನಾವೇನೋ ನಿಟ್ಟುಸಿರು ಚೆಲ್ಲಿ, ಮತ್ತೆ ನಮ್ಮ ಸಂಸಾರದ ಭಾರ ಕಳೆಯಲು ಹವಣಿಸುತ್ತೇವೆ. ಆದರೆ ಇಲ್ಲಿ ನಡೆಯುವ ಕಠೋರ ನಿಂದನೆಗಳು, ಅಪವಾದಗಳು, ಅವಮಾನಗಳ ಬಿರು ಬಾಣ ನಮ್ಮಿಂದ ಸಹಾಯ ತೆಗೆದುಕೊಂಡ ನಮ್ಮವರಿಂದಲೇ ನಮಗೆ ಚುಚ್ಚಲು ಶುರುವಾಗುತ್ತದೆ. ಅವರಿಗೆ ನಮ್ಮ ತ್ಯಾಗ ಆಗಲೀ ಅಥವಾ ನಮ್ಮ ಶ್ರಮದ ಹಿಂದಿನ ಬೆವರಿನ ಹನಿಗಳ ಲೆಕ್ಕಾಚಾರವಾಗಲಿ ಗೊತ್ತಾಗೋದೇ ಇಲ್ಲ. ಅವರು ಬದುಕಿನಲ್ಲಿ ಎದ್ದು ನಿಂತ ಮೇಲೆ ನಾವು ಯಕಃಶ್ಚಿತ್ ಆಗಿ ಕಾಣಲು ತೊಡಗುತ್ತೇವೆ. ನಮ್ಮ ಬೆನ್ನ ಹಿಂದೆ ಅನೇಕ ತುಚ್ಛ ಮಾತುಗಳನ್ನು ಕೇಳಬೇಕಾಗುತ್ತದೆ.
‘ಈಗ ನಾವೆಲ್ಲ ಇಲ್ವಾ? ಹಾಗೇ ಅವರು ಕೂಡ ದುಡಿದಿದ್ದರೆ ಇವತ್ತು ನಮ್ಮ ಹಾಗೇ ಇರ್ತಾ ಇದ್ದರು,’ ಎಂದು ತೂರಿ ಬರುವ ಬುದ್ಧಿಮಾತು. ಇಂತವರ ಮಾತನ್ನು ಕೇಳಿದ ಈ ಪ್ರಪಂಚ, ನಾವು ಬದುಕುವ ಶೈಲಿ, ನಾವು ಹಾಕುವ ಬಟ್ಟೆಗಳನ್ನು ಅಳೆದು, ಬೇಡುವ ಭಿಕ್ಷುಕರಿಗಿಂತ ಕೀಳಾಗಿ ನೋಡುತ್ತದಲ್ಲ, ಆಗ ನಮಗೆ ಖಂಡಿತ ಅನಿಸುತ್ತದೆ. ಬೇಕಿತ್ತಾ ನಮಗೆ ಈ ನಿಸ್ವಾರ್ಥ, ನನ್ನವರು, ತಮ್ಮವರು ಎನ್ನುವ ಮೋಹ, ನನ್ನ ಕರ್ತವ್ಯ ಎನ್ನುವ ಪ್ರಾಮಾಣಿಕ ನಡೆ ಎಲ್ಲಾ? ಸುಮ್ಮನೆ ನಮ್ಮ ಬದುಕು ನೋಡಿಕೊಂಡು ಹೋಗಿದ್ದರೆ ಎಲ್ಲೋ ಉತ್ತುಂಗ ಸ್ಥಿತಿಯಲ್ಲಿ ಆರಾಮವಾಗಿ ಇರಬಹುದಿತ್ತು ಎನ್ನುವ ಆಲೋಚನೆ ನಮ್ಮನ್ನು ಕುಟುಕಿ ಹಿಂಸಿಸುತ್ತದೆ.
‘ಮಾಡಿದ ಸಹಾಯ ಯಾರಿಗೂ ಗೊತ್ತಿರುವುದಿಲ್ಲ. ಸಹಾಯ ಯಾಚಿಸಿದವರು ಎಲ್ಲೂ ಹೇಳೋದಿಲ್ಲ. ನಿಸ್ವಾರ್ಥ ಮನದಿಂದ ಸಹಾಯ ಮಾಡುವಾಗ ಹೇಳಿಕೊಂಡು ತಿರುಗೋದೂ ಇಲ್ಲ. ನಂತರ ಅಡಗತ್ತರಿಯ ಬದುಕು ಮಾತ್ರ ನಮಗೆ ಕಟ್ಟಿಟ್ಟ ಬುತ್ತಿ,” ಎನ್ನುತ್ತಾ ನೋವಿನಿಂದ ತುಂಬಿದ ಕಂಗಳನ್ನು ಒರೆಸಿಕೊಂಡು ಕೂತಳು. ನಯನಾಗೆ ಈಗ ಉತ್ತರ ಸಿಕ್ಕಿತ್ತು. ಕೆಟ್ಟವರು ಒಳ್ಳೆಯವರು ಆದರೆ ಪ್ರಪಂಚಕ್ಕೆ ಒಳ್ಳೆಯದು. ಆದರೆ ಒಳ್ಳೆಯವರು ಕೆಟ್ಟವರಾದರೆ ಪ್ರಪಂಚದ ನಿರ್ನಾಮ ಖಂಡಿತ ಎನಿಸಿ ಮೈ ಝುಂ ಎಂದಿತು.
ಅದೆಷ್ಟು ಮೃದುಭಾವ, ಅದೆಷ್ಟು ಮುಗ್ಧ ಮನಸ್ಸು, ಅದೆಷ್ಟು ಕರುಣಾಪೂರಿತ ಹೃದಯ ಹೊಂದಿದ್ದ ತನ್ನ ಗೆಳತಿ ಗಾಯತ್ರಿ, ಮೋಹ ತೊರೆದು ಯಾವ ಭ್ರಮೆಯಲ್ಲಿಯೂ ಇರದೇ ಇಂತಹ ಕಠಿಣ ಮನ ತಾಳಿದ್ದಾಳೆ ಎಂದರೆ, ಅವಳ ಹೃದಯಕ್ಕೆ, ಅವಳ ಮನಸ್ಸಿಗೆ ಎಂತಹ ಗಾಯ ಆಗಿರಬಹುದು ಯೋಚನೆ ಮಾಡಲೂ ಸಾಧ್ಯವಿಲ್ಲ. ಅವಳ ಮೃದುಭಾವ, ಅವಳ ನಿಸ್ವಾರ್ಥ ಮನದ ಸಹಾಯ, ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅವಳ ಮಗುತನದ ಭಾವ ಈಗ ಎಂದೋ ಮುಗಿದ ಕಥೆ ಆಗಿತ್ತು.
ಅದಕ್ಕೆ ಕಾರಣ ಬದಲಾದ ಆಧುನಿಕತೆಯ ಮನಸ್ಸುಗಳು. ಸ್ವಾರ್ಥ ತುಂಬಿದ ಪ್ರಪಂಚ. ತಮ್ಮವರು, ತನ್ನವರು ಎನ್ನುವ ಭಾವ ಮರೆತು, ನನ್ನದು, ನಾನು ಎಂದು ಕಿರಿದಾದ ವಾಸ್ತವ ಬದುಕಿನ ಕರಾಳ ಭಾವ ಎನ್ನುವುದು ಅಷ್ಟೇ ಸತ್ಯ ಎನಿಸಿ, ಗೆಳತಿಯ ಕೈಹಿಡಿದು, “ಇನ್ನಾದರೂ ನಿನ್ನ ಸಂಸಾರ, ನಿನ್ನ ಬದುಕನ್ನು ನೋಡಿ ನಡೆ. ನಿನ್ನದೇ ಆದ ಪುಟ್ಟ ಪ್ರಪಂಚದಲ್ಲಿ, ನಿನ್ನ ಸಂಸಾರ ಸಾಗರದಲ್ಲಿ ಈಜುತ್ತಾ ಆನಂದವಾಗಿ ಇರು,” ಎಂದು ಗೆಳತಿಯನ್ನು ತಬ್ಬಿಕೊಂಡು ಸಮಾಧಾನಪಡಿಸಿದಳು ನಯನಾ.
- ಶೋಭಾ ನಾರಾಯಣ ಹೆಗಡೆ – ಕತೆಗಾರರು, ಶಿರಸಿ.
