ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರಿಗೆ ಆಕೃತಿಕನ್ನಡದ ಶುಭಾಶಯಗಳನ್ನು ಕೋರುತ್ತಾ ಅವರ ರಚನೆಯ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮಳೆಮಳೆ ಮಳೆಮಳೆ ಮಳೆಮಳೆ ಬರಲು
ಪುಳಕದೊಳೆದ್ದೆನು ಅವಳೆದುರಿರಲು
ಚೆಲುವಿನೊಳೆನ್ನೆದೆ ಬಿರಿದಿರಲಮಲು
ಚೆಲುವೆಯ ಕಣ್ಗಳಲಾಸೆಯ ಕಡಲು
ನನ್ನೊಳಗುಳಿಯುತ ಬರಸೆಳೆದವಳು
ನನ್ನೊಳು ಹರಿದ ತರಂಗಿಣಿಯವಳು
ಎನ್ನೊಳಗೊಲವಿನ ಕದತೆರೆದವಳು
ಕೆನ್ನೆಗೆ ಮುತ್ತಿನ ಮಳೆಗರೆದವಳು
ಎದುರೆದುರವಳಿರೆ ಕಂಗಳಿಗಿಂಪು
ಮೆದುನುಡಿ ನಡೆಯೊಳು ತಂದಳು ಕಂಪು
ಹದಿಹರೆಯದ ಈ ದಾಹಕೆ ತಂಪು
ಬದುಕಿನೊಳೆಲ್ಲವು ಸುಮಧುರ ನೆನಪು
ಕಣಕಣ ಕುಣಿಸಿದ ಆಸೆಯ ಚಿಲುಮೆ
ತನತನ ತೋಂತನ ಪ್ರೀತಿಯ ಕುಲುಮೆ
ಕನಸನು ನನಸಾಗಿಸಿದಳು ಒಲಮೆ
ಹನಿಹನಿ ಜೇನಿನ ಸವಿಸವಿ ಉಳುಮೆ.
- ಚನ್ನಕೇಶವ ಜಿ ಲಾಳನಕಟ್ಟೆ.
