ವಿಶ್ವ ಅಮ್ಮಂದಿರ ದಿನಾಚರಣೆಯ ಪ್ರಯುಕ್ತ ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…ವಿಶ್ವ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು…

ಆಚಾನಕ್ಕಾಗಿ ಮನೆಗೆ ಬಂದ ಮಗಳು ಅಳಿಯ!
ಸುಖ್ಖುಗಟ್ಟಿದ ಅಮ್ಮನ ಮುಖದಲ್ಲಿ
ತುಸು ಗಾಬರಿ; ಮಂದಹಾಸ
ಎಪ್ಪತ್ತರಲ್ಲೂ ಕೊಂಚವೂ ಕುಂದದ
ಅವಳ ಚುರುಕು ಬುದ್ಧಿ ಕೂಡಲೆ ಕಾರ್ಯೊನ್ಮುಖ!
ತಟ್ಟನೆ ಅಡುಗೆ ಮನೆಯ ಅಟ್ಟದಲಿ
ಸಾಸಿವೆ ಜೀರಿಗೆ ಡಬ್ಬಗಳ ತಡಕಾಟ
ಸಿಡುಕು ಅಪ್ಪ ಆಗಾಗ ಕೊಡುತಿದ್ದ ಹಣದಲ್ಲಿ
ಉಳಿಸಿ ಕೂಡಿಟ್ಟಿದ್ದ ಪುಡಿಗಾಸಿನ ಲೆಖ್ಖ
ತಡಮಾಡದೆ ಕೈ ಚೀಲ ಹಿಡಿದು
ಹೊರಟು ಬಿಡುತ್ತಿದ್ದಳು
ತನ್ನಷ್ಟೇ ಸವಕಲಾದ ಹವಾಯಿ ಚಪ್ಪಲಿ ಮೆಟ್ಟಿ
ಶೆಟ್ಟರ ಅಂಗಡಿಯ ದಾರಿ ಹಿಡಿದು
ಹೊತ್ತು ತಂದ ದಿನಸಿಯನ್ನು ಅಳಿಯನ ಕಣ್ತಪ್ಪಿಸಿ
ಸಾಗಿಸುತಿದ್ದಳು ಅಡುಗೆಯ ಮನೆಗೆ
ಯೋಚಿಸಿ ಯೋಜಿಸಿ ಇದ್ದುದರಲೇ ಸರಿ ಹೊಂದಿಸಿ
ಮನೆತನದ ಮಾನ ಕಾಪಾಡಿ
ಅರೆ ತಾಸಲ್ಲೇ ಅಡುಗೆ ತಯಾರು
ಅಳಿಯನ ಇಷ್ಟದ ಬಿಸಿ ಬಿಸಿ ಬಿಸೀಬೇಳೆ ಬಾತು
ನೆಂಚಿಕೊಳ್ಳಲು ಒಂದಿಷ್ಟು ಭಾಳ್ಕದ ಘಾಟು!
ಪ್ರಯಾಣದಿಂದ ಬಸವಳಿದಿದ್ದ ಅಳಿಯನ
ಹಸಿವಿನ ಆಹಾಕಾರ ಮುಗಿಲು ಮುಟ್ಟುವುದೇ ತಡ
ತಟ್ಟೆಯಲಿ ಹಬೆಯಾಡುತಿತ್ತು
ಅಮ್ಮನ ಕೈ ರುಚಿಯ ಘಮ ಘಮದ
ಬಿಸಿಬೇಳೆ ಬಾತು
ರುಚಿಯ ಸ್ವಾದಕೆ ಸಂತೃಪ್ತಗೊಂಡ ಅಳಿಯ
-ನ ಹೊಟ್ಟೆಯಿಂದ ದೀರ್ಘ ತೇಗು ಬರುತಿದ್ದಂತೆಯೆ ನಿಟ್ಟುಸಿರು ಬಿಡುವ ಅಮ್ಮನ ಮುಖದಲಿ
ಸಾರ್ಥಕ ನಗೆಯ ನವಿಲು ಕುಣಿಯುತಿತ್ತು!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
