ಕನ್ನಡ ಲೇಖಕರು ಮತ್ತು ಪ್ರೇಮ ಮತ್ತು ಅದರಿಂದ ಆದ ಪರಿಣಾಮಗಳನ್ನು ಗುರುತಿಸುವುದು ಈ ಬರಹದ ಉದ್ದೇಶ. ಕನ್ನಡದಲ್ಲಿ ಪ್ರೇಮ ವಿವಾಹ ಪರಂಪರೆಗೆ ಸುಮಾರು ಒಂಬತ್ತು ದಶಕಗಳ ಇತಿಹಾಸ ಇದೆ. – ರಘುನಾಥ್ ಕೃಷ್ಣಮಾಚಾರ್, ತಪ್ಪದೆ ಮುಂದೆ ಓದಿ…
ನನಗೆ ತಿಳಿದಂತೆ ಇದರ ಮೊದಲ ತಲೆಮಾರಿನ ಪರಂಪರೆಯ ಪ್ರತಿನಿಧಿಯಾಗಿ ಶಿವರಾಮ ಕಾರಂತರನ್ನು ಗುರುತಿಸಬಹುದು.ತಮ್ಮ ಬಳಿಗೆ ನೃತ್ಯ ಕಲಿಯಲು ಬರುತ್ತಿದ್ದ ಲೀಲಾ ಆಳ್ವಾ ರನ್ನು ಮದುವೆಯಾದರು. ಅದೂ ನಾಗರಿಕ ವಿವಾಹ ನೋಂದಣಿ ಮಾಡಿದ ಮೊದಲಿಗರು. ಅವರನ್ನು ಅನುಸರಿಸಿ ಅವರ ಮಗಳು ಮನಃಶಾಸ್ತ್ರ ತಜ್ಞರಾದ ಮಾಲವಿಕಾ, ಕಪೂರ್ ಅವರನ್ನು ವಿವಾಹವಾದರು. ತಂದೆ ಮಗಳು ಇಬ್ಬರದು ಪ್ರೇಮ ವಿವಾಹ ಮಾತ್ರವಲ್ಲದೆ ಅಂತರ್ಜಾತಿ ವಿವಾಹ ಕೂಡ ಹೌದು. ಶಿವರಾಮ ಕಾರಂತರು ಈ ವಿವಾಹದ ಪರಿಣಾಮವಾಗಿ ಅವರ ಮನೆಯಿಂದ ಬಹಿಷ್ಕಾರವನ್ನು ಎದುರಿಸಬೇಕಾಯಿತು. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿಯವರ ಅನುಯಾಯಿಗಳಾಗಿದ್ದ ಅವರು ಬಹುತೇಕ ಅವರಿಂದಲೇ ಪ್ರೇರಣೆ ಪಡೆದಿರಬಹುದು.

ಎರಡನೇ ತಲೆಮಾರಿಗೆ ಸೇರಿದವರು ಲೇಖಕ ನಿರಂಜನ ಅವರು. ಅವರ ತಾಯಿ ಯಾರದೋ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ತಾನು ಹುಟ್ಟಿದ ಸಂದರ್ಭ ಕುರಿತು, ಅವರು ಒಂದು ಕಡೆಗೆ ದಾಖಲಿಸಿದ್ದಾರೆ. ಅವರು ವಿವಾಹ ಆಗಿದ್ದು ಅನುಪಮ ಅವರನ್ನು. ಮುಂದೆ ಅವರಿಬ್ಬರೂ ಲೇಖಕರಾಗಿ ಅಮೂಲ್ಯ ಕೊಡುಗೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವುದು ಈಗಾಗಲೇ ಪ್ರಸಿದ್ಧವಾಗಿದೆ. ಇವರಿಬ್ಬರ ನಡುವಿನ ಮಧ್ಯವರ್ತಿಯಾಗಿ ತಾನು ಪರಸ್ಪರ ಬರೆದ ಪತ್ರಗಳನ್ನು ತಲುಪಿಸುತ್ತಿದ್ದುದನ್ನು ಯು.ಆರ್.ಅನಂತ ಮೂರ್ತಿಯವರು ಒಂದು ಕಡೆಗೆ ಬರೆದಿದ್ದಾರೆ.

ಫೋಟೋ ಕೃಪೆ : bengaluru-com
ಅನುಪಮ ನಿರಂಜನರ ಮಕ್ಕಳು ಇಬ್ಬರೂ ಪ್ರತಿಭಾವಂತರು. ತಮ್ಮ ತಂದೆ ತಾಯಿಗಳ ಪರಂಪರೆಯನ್ನು ಮುಂದುವರೆಸಿಕೊಂಡು ಹೋದರು. ಮೂರನೇ ತಲೆಮಾರು ಅನುಪಮ ಮತ್ತು ನಿರಂಜನರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ ಅನಂತಮೂರ್ತಿಯವರದು . ತಮ್ಮ ವಿದ್ಯಾರ್ಥಿನಿ ಆಗಿದ್ದ ಎಸ್ತರ್ ಅವರನ್ನು ವಿವಾಹವಾಗಿ ಆ ಕಾಲದಲ್ಲಿ ಮೊದಲ ಬಾರಿಗೆ ಅಂತರ್ಧರ್ಮೀಯ ವಿವಾಹ ಎಂಬ ದಾಖಲೆಯನ್ನು ನಿರ್ಮಾಣ ಮಾಡಿದರು. ಅವರ ಮಗಳು ವಿವೇಕ್ ಶಾನಭಾಗ್ ( ಲೇಖಕ) ಅವರನ್ನು ವಿವಾಹವಾದರು . ಮಠದ ಏಜೆಂಟ್ ರಾಗಿದ್ದ ಅವರ ತಂದೆ ಯವರಿಂದ ಅನಂತಮೂರ್ತಿಯವರು ವಿರೋಧವನ್ನು ಎದುರಿಸಬೇಕಾಯಿತು. ಅವರು ಆಗ ಎದುರಿಸಿದ ತಳಮಳ ಕುರಿತು ಅವರ ಕೊನೆಯ ಕಾದಂಬರಿ ದಾಖಲಿಸುತ್ತದೆ.

ಅವರ ಸಮಕಾಲೀನರಾದ ಡಾ.ಹಂಪನಾ ಅವರು ( ಜೈನ ಧರ್ಮದ) ಕೆಳವರ್ಗದ ಕಮಲಾ ಅವರನ್ನು ತಮ್ಮ ಮನೆಯ ವಿರೋಧವನ್ನು ಎದುರಿಸಿ ವಿವಾಹ ಮಾಡಿಕೊಂಡು ಅಂತರ್ಧರ್ಮೀಯ ಎರಡನೇ ವಿವಾಹ ಎಂಬ ದಾಖಲೆ ನಿರ್ಮಿಸಿದರು. ಅವರ ಮಕ್ಕಳಾದ ಹೆಚ್.ಎನ್.ಆರತಿ ಮತ್ತು ರಾಜಶ್ರೀ ಅವರು ಲೇಖಕರಾಗಿ ಅವರ ಪರಂಪರೆಯನ್ನು ಮುಂದುವರಿಸಿದ್ದಾರೆ . ಹಂಪನಾ ದಂಪತಿಗಳು ಸಂಶೋಧನಾ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ್ದಾರೆ.

ಆನಂತರದ ತಲೆಮಾರಿನ ಲೇಖಕರಾದ ತೇಜಸ್ವಿಯವರು ತಂದೆಯವರ ‘ಮನುಜಮತ ವಿಶ್ವಪಥ’ ಎಂಬುದನ್ನು ನಿಜಮಾಡಲು ರಾಜೇಶ್ವರಿ ಯರನ್ನು ವಿವಾಹವಾಗಿ ಅವರ ಮನೆಯ ಮೊದಲ ಅಂತರ್ಜಾತಿ ವಿವಾಹ ಎಂಬ ದಾಖಲೆ ನಿರ್ಮಿಸಿದರು. ತೇಜಸ್ವಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯ ಅನನ್ಯತೆ ಈಗಾಗಲೇ ದಾಖಲೆ ಆಗಿದೆ. ಅವರ ನಂತರ ಅವರ ಸಂಗಾತಿ ರಾಜೇಶ್ವರಿ ಅವರು ‘ ನನ್ನ ತೇಜಸ್ವಿ’ ಕೃತಿ ರಚನೆಯ ಮಾಡಿ ತಮ್ಮ ಸಾಂಗತ್ಯದ ದಿನಗಳನ್ನು ನಮೂದಿಸಿದ್ದಾರೆ.
ಅವರ ನಂತರದ ತಲೆಮಾರಿನ ನನ್ನ ಮೇಷ್ಟ್ರು ಸೀ.ವೀರಣ್ಣನವರು ತಮ್ಮ ಶಿಷ್ಯೆ ಆರ್.ಪೂರ್ಣಿಮಾ ಅವರನ್ನು ವಿವಾಹವಾಗಿ ಒಂದು ಪರಂಪರೆ ನಿರ್ಮಾಣ ಮಾಡಿದರು. ಅವರು ಪ್ರಸಿದ್ಧ ಪತ್ರಕರ್ತೆಯಾಗಿ ಲೇಖಕಿಯಾಗಿ ದಾಖಲೆ ನಿರ್ಮಿಸಿದರು.
ಅವರ ಇನ್ನೊಬ್ಬ ಶಿಷ್ಯರಾದ ನನ್ನ ಗುರುಗಳು ಆದ ಡಾ.ಕೆ.ವಿ.ನಾರಾಯಣ ಅವರು ತಮ್ಮ ಸಹಪಾಠಿ ಡಾ.ಎಚ್.ಎಸ್.ಶ್ರೀಮತಿ ಅವರನ್ನು ವಿವಾಹವಾದರು. ಇಬ್ಬರೂ ವಿದ್ವತ್ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ಅವರ ಶಿಷ್ಯರಾದ ಸಿದ್ದಲಿಂಗಯ್ಯ ಅವರದು ಕೂಡ ಅಂತರ್ಜಾತಿ ವಿವಾಹ. ಅದನ್ನು ಸಮರ್ಥನೆ ಮಾಡಿ ಲೇಖನ ಬರೆದರು. ಅವರು ಕನ್ನಡದ ದಂತಕಥೆಯಾದರು ತನ್ನ ಅನನ್ಯ ಕೊಡುಗೆ ಮೂಲಕ.
ಅದನ್ನು ಮುಂದುವರಿಸಿದ ಶ್ರೇಯಸ್ಸು ನನ್ನ ಇನ್ನೊಬ್ಬ ಮೇಷ್ಟ್ರು ಡಿ.ಆರ್.ಎನ್ ಅವರದು. ಅವರು ವಿವಾಹವಾದ ಗಿರಿಜಾ ನಮ್ಮ ಸಹಪಾಠಿ ಎನ್ನುವುದು ನಮಗೂ ಹೆಮ್ಮೆಯ ವಿಷಯ. ಅವರ ಸಮಕಾಲೀನರಾದ ದೇವನೂರು ಮಹಾದೇವ ತಮ್ಮ ಮೇಡಂ ಸುಮಿತ್ರಾ ಅವರನ್ನು ಮದುವೆ ಮಾಡಿಕೊಂಡು ಒಂದು ದಾಖಲೆ ನಿರ್ಮಿಸಿದರು. ಅವರ ಸಾಹಸಗಾಥೆಯನ್ನು ಅವರ ಸಂಗಾತಿ ಸುಮಿತ್ರಾ ಮೇಡಂ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ.

ಅವರ ಸಮಕಾಲೀನರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಶೋಭಾ ( ಬ್ರಾಹ್ಮಣ) ಅವರನ್ನು ವಿವಾಹವಾದರು. ಅವರ ಸಾಹಸಗಾಥೆಯನ್ನು ತಮ್ಮ ಆತ್ಮ ಚರಿತ್ರೆ’ ಕಾಗೆ ಮುಟ್ಟಿದ ನೀರು’ ಎನ್ನುವ ಕೃತಿಯಲ್ಲಿ ದಾಖಲಿಸಿದ್ದಾರೆ . ಅವರ ವಿವಾಹವನ್ನು ನೆರವೇರಿಸಿದವರು ಮುಂಬಯಿನ ಕನ್ನಡ ದೀಪಸ್ತಂಭಗಳಲ್ಲಿ ಒಬ್ಬರಾದ ರಾಮಚಂದ್ರ ಉಚ್ಚಿಲರು ಎಂಬುದು ನಮಗೆ ಹೆಮ್ಮೆಯ ಸಂಗತಿ. ಪುರುಷೋತ್ತಮ ಬಿಳಿಮಲೆಯವರು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಕನ್ನಡ ಲೇಖಕ ಲೋಕದ ಇನ್ನೊಂದು ಅಂತರ್ಧರ್ಮೀಯ ವಿವಾಹ ಸಬೀಹಾ ಭೂಮಿಗೌಡ ಅವರದು. ಲೇಖಕಿಯಾಗಿ ಆಡಳಿತಗಾರರಾಗಿ ಅವರ ಕೊಡುಗೆ ಅಪಾರ.ಅವರ ಸಮಕಾಲೀನ ಇನ್ನೊಬ್ಬ ಲೇಖಕಿ ನೇಮಿಚಂದ್ರ.ಇವರದು ಕೂಡ ಅಂತರ್ಧರ್ಮೀಯ ವಿವಾಹ.ಅವರ ವಿವಾಹ ಸಿಖ್ ಧರ್ಮಕ್ಕೆ ಸೇರಿದವರ ಜತೆಗೆ. ಲೇಖಕಿಯಾಗಿ ಅವರು ಕೊಟ್ಟ ಕೊಡುಗೆ ಅಪೂರ್ವ. ಡಿ.ಆರ್.ಎನ್ ಮತ್ತು ಗಿರಿಜಾ ಪರಂಪರೆಗೆ ಸೇರಿದ ನಾನು ಮತ್ತು ಗಿರಿಜಾ ಶಾಸ್ತ್ರೀಯವರು ೧೯೮೩ ರಲ್ಲಿ ನಾಗರಿಕ ವಿವಾಹ ನೋಂದಣಿ ಕಾಯಿದೆಯಡಿಯಲ್ಲಿ ವಿವಾಹವಾದೆವು.ನನ್ನ ಹಿರಿಯ ಮಗ ನಿಶಾಂತ ತನ್ನ ಸಹಪಾಠಿ ಗಾಯತ್ರಿಯನ್ನು( ಮರಾಠಿ) ವಿವಾಹವಾಗಿ ನಮ್ಮ ಪರಂಪರೆಯನ್ನು ಮುಂದುವರಿಸಿದ್ದಾನೆ.
ನಮ್ಮ ಸಹಪಾಠಿ ಸೂಕ್ಷ್ಮ ಬರಹಗಾರ್ತಿ ಸಿ. ಎಚ್. ಭಾಗ್ಯ ಅವರು ಕೂಡ ಪತ್ರಕರ್ತ ರಾಜನ್ ಅವರನ್ನು ಮದುವೆಯಾಗುವುದರ ಮೂಲಕ ಇದೇ ಸಾಹಸವನ್ನು ಮಾಡಿದರು.
ನಮ್ಮ ಸಮಕಾಲೀನರಾದ ಡಾ.ಸುಬ್ಬಣ್ಣ ರೈ ಮತ್ತು ಡಾ.ಸರಸ್ವತಿ ಕುಮಾರಿ ಅವರು ವಿವಾಹ ನೋಂದಣಿ ಕಾಯಿದೆ ಅಡಿಯಲ್ಲಿ ವಿವಾಹವಾದರು. ಇಬ್ಬರೂ ಕನ್ನಡ ಸಂಶೋಧನಾ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಸರಸ್ವತಿ ಕುಮಾರಿ ಅವರ ಸೊಸೆ ಸ್ವಾತಿ ತಮ್ಮ ಸಹಪಾಠಿ ಕುಮಾರ ಸ್ವಾಮಿ ಅವರನ್ನು ವಿವಾಹವಾದರು. ತಮ್ಮ ಅತ್ತೆಯ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಅವರ ಇನ್ನೊಬ್ಬ ಸೊಸೆ ಗೀತಾ ಅವರು ಕೂಡಾ ಕೇರಳ ಮೂಲದ ಅರುಣ್ ಅವರ ವಿವಾಹವಾಗಿದ್ದು , ಅವರಿಗೆ ಮುದ್ದಾದ ಮಗಳಿದ್ದಾಳೆ.

ಜಿ.ಎಸ್. ಎಸ್ ಅವರು ಗಿರಿಜಾ ಅವರ ಕವಿತಾ ಸಂಕಲನ ಬಿಡುಗಡೆಗೆ ಮುಂಬಯಿಗೆ ಬಂದಾಗ ಹೀಗೆ ಪ್ರೇಮ ವಿವಾಹವಾದ ವಿದ್ಯಾರ್ಥಿಗಳಿಗೆ ಲೆಕ್ಕವೇ ಇಲ್ಲ. ಕನ್ನಡ ವಿಭಾಗದಲ್ಲಿ ಅದರ ದೊಡ್ಡ ಪರಂಪರೆಯೇ ಇದೆ ಎಂದು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದ್ದರು.
ಮೇಲಿನ ವಿವರಗಳು ಪ್ರೇಮ ಎನ್ನುವುದು ಎರಡು ಜೀವಗಳನ್ನು ಬೆಸೆಯುವ ಸಾಧನ , ಎನ್ನುವುದರ ಜತೆಗೆ ಅದು ಎಲ್ಲಾ ರೀತಿಯ ಸೀಮೆಗಳನ್ನು ದಾಟುವ ಸಾಧನವೂ ಆಗಿ ಪರಿಣಮಿಸಿದೆ, ಎಂಬುದು ಅದರ ಸಾಮಾಜಿಕ ಸ್ವರೂಪಕ್ಕೆ ನಿದರ್ಶನವಾಗಿದೆ . ಆರೋಗ್ಯಕರ ಸಮಾಜದ ನಿರ್ಮಾಣ ಮತ್ತು ಬೆಳವಣಿಗೆಯಲ್ಲಿ ಅದರ ಪಾತ್ರ ಮಹತ್ವದ್ದು ಎಂದು ಸಿದ್ದಲಿಂಗಯ್ಯ ಅವರು ತಮ್ಮ ಅಂತರಜಾತಿ ವಿವಾಹ ಕುರಿತು ಬರೆದ ಲೇಖನದಲ್ಲಿ ಸಿದ್ದಪಡಿಸಿದ್ದಾರೆ.
ಸದ್ಯದಲ್ಲಿ ನನಗೆ ಹೊಳೆದ ಜೋಡಿಗಳನ್ನು ಮಾತ್ರ ಹೆಸರಿಸಿದ್ದೇನೆ. ನಿಮಗೆ ಗೊತ್ತಿರುವ ಸಾಹಿತಿಗಳ ವಿವರಗಳನ್ನು ಈ ಪಟ್ಟಿಗೆ ಸೇರಿಸಬಹುದು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
