ನರಸಿಂಹ ಜಯಂತಿ ವಿಶೇಷತೆ : ಸುಜಾತಾ ರವೀಶ್

ಪದ್ಮ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ನರಸಿಂಹ ಚತುರ್ದಶಿ ಎಂದು ನರಸಿಂಹ ಸ್ವಾಮಿ ಜಯಂತಿಯನ್ನು ಉಲ್ಲೇಖಿಸಲಾಗಿದೆ. ಕರ್ನಾಟಕದಲ್ಲಿ ವಿವಿಧ ನರಸಿಂಹ ಸ್ವಾಮಿ ಕ್ಷೇತ್ರಗಳಿದ್ದು, ನರಸಿಂಹ ಜಯಂತಿ ಪ್ರಯುಕ್ತ ಸುಜಾತಾ ರವೀಶ್ ಅವರು ಆ ಪುಣ್ಯ ಕ್ಷೇತ್ರಗಳ ಕುರಿತು ವಿಶೇಷ ಲೇಖನವನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ದುಷ್ಟ ಶಿಕ್ಷಣ ಶಿಷ್ಟ ಸಂರಕ್ಷಣೆಗಾಗಿ ಹರಿಯೇ ಎತ್ತಿದ ದಶಾವತಾರಗಳಲ್ಲಿ ನರಸಿಂಹ ಅವತಾರವು ನಾಲ್ಕನೆಯದು . ಲೋಕಕಂಟಕನಾದ ಹಿರಣ್ಯ ಕಶಿಪು ಎಂಬ ರಾಕ್ಷಸನು ಹರಿನಾಮ ಸ್ಮರಣೆಯನ್ನು, ಹರಿಯನ್ನು ದ್ವೇಷಿಸುತ್ತ ತನ್ನ ಮಗನನ್ನೇ ಶಿಕ್ಷೆಗೆ ಒಳಪಡಿಸುತ್ತಾನೆ. ಹರಿಯು ಎಲ್ಲರಲ್ಲಿಯೂ ಇರುವನು ಎಂಬ ಪುತ್ರ ಪ್ರಹ್ಲಾದನ ಮಾತಿಗೆ ಕೋಪಗೊಂಡು ಇಲ್ಲಿರುವನೇ ಇಲ್ಲಿರುವನೇ ಎಂದು ಒಂದು ಕಂಬವನ್ನು ತೋರಿಸಿ ಕೇಳಿದಾಗ ಎಲ್ಲೆಲ್ಲಿಯೂ ಇರುವ ಎಂಬ ಅವನ ಮಾತಿಗೆ ಹಾಗಾದರೆ ಎಲ್ಲಿ ತೋರಿಸು ಎಂದು ಕಂಬವನ್ನು ಗದೆಯಿಂದ ಪ್ರಹರಿಸಿದಾಗ ಅದರೊಳಗಿನಿಂದ ಅರ್ಧ ಮಾನವ ಅರ್ಧ ಸಿಂಹಾಕೃತಿಯ ನರಸಿಂಹನು ಬಂದು, ವಿಶಿಷ್ಟ ವರ ಪಡೆದು ಮೆರೆಯುತ್ತಿದ್ದ ಹಿರಣ್ಯಕಶಿಪುವನ್ನು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಸಂಧ್ಯಾಸಮಯದಲ್ಲಿ, ಮಾನವನೂ ಅಲ್ಲದ ಪ್ರಾಣಿಯೂ ಅಲ್ಲದ ತನ್ನ ಈ ಅವತಾರದಲ್ಲಿ ಒಳಗೂ ಅಲ್ಲದ ಹೊರಗೂ ಅಲ್ಲದ ಹೊಸ್ತಿಲ ಮೇಲೆ ಕುಳಿತು ತನ್ನ ನಖಾಗ್ರಗಳಿಂದ ಅವನನ್ನು ಸಂಹರಿಸುತ್ತಾನೆ . ಇವನನ್ನು ಕಾಲ (ಸಮಯ) ಅಥವಾ ಮಹಾಕಾಲ ಅಥವಾ ಪರಕಾಲ (ಸಮಯ ಮೀರಿ) ಎಂದೂ ಕರೆಯಲಾಗುತ್ತದೆ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಪರಕಾಲಮಠದ ಹೆಸರಿನ ಮಠವೂ ಇದೆ. ಉಗ್ರರೂಪ ತಾಳಿ ಅಸುರ ಸಂಹಾರ ಮಾಡಿದ್ದರಿಂದ ಉಗ್ರನರಸಿಂಹ ನೆಂದು ನಂತರ ಪ್ರಹ್ಲಾದನ ಸ್ತುತಿಗಳಿಗೆ ಶಾಂತನಾದ ಲಕ್ಷ್ಮೀಸಮೇತನಾದ ನರಸಿಂಹನನ್ನು ಲಕ್ಷ್ಮೀನರಸಿಂಹನೆಂದು ಕರೆಯುತ್ತಾರೆ. ಅಲ್ಲದೆ ಯೋಗದ ದೇವರು ಎಂದು ಯೋಗಾ ನರಸಿಂಹ ಎಂಬ ನಾಮೋಪಾಧಿಯೂ ಇದೆ . ರಾಮ ಹಾಗೂ ಕೃಷ್ಣ ಅವತಾರಗಳನ್ನು ಬಿಟ್ಟರೆ ನರಸಿಂಹ ಅವತಾರವೇ ತುಂಬಾ ಪ್ರಾಮುಖ್ಯತೆಯನ್ನು ಪ್ರಸಿದ್ಧಿಯನ್ನು ಪಡೆದುಕೊಂಡಿದೆ . ಭಾರತದಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಇಸ್ಕಾನ್ ಅವರಿಂದ ನರಸಿಂಹ ದೇವಾಲಯಗಳು ಸ್ಥಾಪಿತವಾಗಿವೆ.

ಭಾರತದ ಮೂಲೆ ಮೂಲೆಗಳಲ್ಲಿಯೂ ಸಹ ನರಸಿಂಹ ದೇವರ ದೇಗುಲಗಳು ಇವೆ. ಉತ್ತರದ ತುದಿಯ ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಒರಿಸ್ಸಾ, ಉತ್ತರ ಪ್ರದೇಶ, ಮಣಿಪುರ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ರಾಜಸ್ಥಾನ ಆಂಧ್ರ ಪ್ರದೇಶ ಹೀಗೆ ಪ್ರತಿಯೊಂದು ರಾಜ್ಯಗಳಲ್ಲಿಯೂ ನರಸಿಂಹ ಆಲಯಗಳನ್ನು ಕಾಣಬಹುದು. ಆದರೆ ಎಲ್ಲಾ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯ ದೇವಾಲಯಗಳು ಕಂಡುಬರುವುದು ಕರ್ನಾಟಕದಲ್ಲಿ . ನೂರಕ್ಕೂ ಹೆಚ್ಚು ನರಸಿಂಹ ದೇವಾಲಯಗಳ ಸ್ಥಾಪನೆಯಾಗಿ ನರಸಿಂಹಮೂರ್ತಿಯನ್ನು ಆರಾಧಿಸುತ್ತಿರುವುದು ಗೋಚರವಾಗುತ್ತದೆ. ನೃಸಿಂಹ, ನರಸಿಂಹ ನರಸಿಂಗ ಎಂದೆಲ್ಲಾ ಆರಾಧಿಸಲ್ಪಡುವ ಮಹಾಮಹಿಮನ ಆಲಯಗಳು ಶಾಂತಿ ಭಕ್ತಿಯ ಕೇಂದ್ರಗಳಾಗಿದ್ದು ಭಕ್ತರ ಮನಸ್ಸಿಗೆ ನೆಮ್ಮದಿಯನ್ನೀಯುತ್ತಾ ಬಂದಿವೆ. ಪ್ರತಿಯೊಂದು ದೇವಸ್ಥಾನಗಳ ವಿವರಣೆ ನೀಡಲು ಇಲ್ಲಿ ಸಾಧ್ಯವಿಲ್ಲದಿದ್ದುದರಿಂದ ಪ್ರಮುಖವೆನಿಸಿದ ಕೆಲವೊಂದು ದೇವಸ್ಥಾನಗಳ ಬಗ್ಗೆ ಮಾತ್ರ ಹೇಳಲು ಸಾಧ್ಯ.

ಅಚ್ಚರಿಯ ಸಂಗತಿಯೇನೆಂದರೆ ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಿನೈದಕ್ಕಿಂತಲೂ ಹೆಚ್ಚು ನರಸಿಂಹ ದೇವಸ್ಥಾನಗಳಿವೆ. ಮಲ್ಲೇಶ್ವರಂನ ಪುರಾತನ ದೇವಾಲಯ ,ಬಸವನಗುಡಿಯ ಅಭಯ ಲಕ್ಷ್ಮಿನರಸಿಂಹ ದೇಗುಲ, ಹೊಸಕೆರೆಹಳ್ಳಿಯ ವರಪ್ರದ ಬಾಳೆಲೆ ಶ್ರೀಲಕ್ಷ್ಮೀನರಸಿಂಹ ದೇವಳ, ಬಳೇಪೇಟೆಯ ಲಕ್ಷ್ಮಿನರಸಿಂಹ ದೇವಾಲಯ ಹೆಸರಘಟ್ಟದ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಇವುಗಳೆಲ್ಲ ಪುರಾತನ ದೇವಸ್ಥಾನಗಳು . ಇತ್ತೀಚೆಗೆ ಇಸ್ಕಾನ್ ಅವರ ಕಟ್ಟಿಸಿದ ಹಾಗೂ ಹೊಸಕೆರೆಹಳ್ಳಿಯ ದೇವಸ್ಥಾನ ಇವುಗಳು ಸಹ ಪ್ರಖ್ಯಾತವಾಗಿವೆ.

  • ಹೊಯ್ಸಳ ಶೈಲಿಯ ಪ್ರಸಿದ್ಧ 5 ಲಕ್ಷ್ಮೀನರಸಿಂಹ ದೇವಸ್ಥಾನಗಳು:

ಕನ್ನಡ ನಾಡನ್ನಾಳಿದ ಪ್ರಮುಖ ರಾಜಮನೆತನಗಳಲ್ಲಿ ಹೊಯ್ಸಳರ ವಂಶವೂ ಒಂದು. ಶಿಲ್ಪಕಲೆ ಉಚ್ಛ್ರಾಯ ಸ್ಥಿತಿಯನ್ನು ಪಡೆದದ್ದು ಹೊಯ್ಸಳರ ಕಾಲದಲ್ಲೇ. ಇವರ ಅವಧಿಯಲ್ಲಿಯೇ ಅನೇಕ ದೇವಸ್ಥಾನಗಳು ಕಟ್ಟಲ್ಪಟ್ಟು ಹೊಯ್ಸಳ ಶೈಲಿ ಎಂಬುದೇ 1ವಾಸ್ತು ಶೈಲಿಯಾಗಿ ಪ್ರಸಿದ್ಧಿ ಹೊಂದಿದೆ . ತ್ರಿಕೂಟಗಳನ್ನು ಹೊಂದಿದ್ದು 3ಪ್ರಮುಖ ದೇವತೆ ಗಳನ್ನು ಹೊಂದಿದ ದೇವಾಲಯಗಳ ಸಂಕೀರ್ಣ ಹೊಯ್ಸಳ ಶೈಲಿಯ ಮುಖ್ಯ ಅಂಶ ಹೊರಗಿನ ದೊಡ್ಡ ಪ್ರಾಕಾರ 3ಗರ್ಭಗುಡಿಗಳನ್ನು ಸೇರುವಂತೆ ಮಾಡಿದ್ದು ಹೊರಗೋಡೆಗಳ ಮೇಲೆ ಕೆತ್ತನೆಯ ಕೆಲಸ ಈ ವಾಸ್ತು ಶೈಲಿಯ ವಿಶಿಷ್ಟತೆ .ಈ 3ಅಧಿದೇವತೆಗಳಲ್ಲಿ ಲಕ್ಷ್ಮೀನರಸಿಂಹ ಒಂದಾಗಿರುವಂತೆ ಹೊಯ್ಸಳ ದೇವಸ್ಥಾನಗಳಿವೆ.

  • ನುಗ್ಗೆಹಳ್ಳಿಯ ಲಕ್ಷ್ಮೀ ನರಸಿಂಹ ದೇವಸ್ಥಾನ

ಹಾಸನ ಪಟ್ಟಣದಿಂದ ಸುಮಾರು ಐವತ್ತು ಕಿಲೋ ಮೀಟರ್ ದೂರದಲ್ಲಿ ತಿಪಟೂರು ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿರುವ ಈ ನುಗ್ಗೆಹಳ್ಳಿ ದೇವಸ್ಥಾನವು ೧೨೪೬ ರಲ್ಲಿ ಬೊಮ್ಮನ ಬೊಮ್ಮಣ್ಣದಂಡನಾಯಕನ ನಿಂದ ಕಟ್ಟಲ್ಪಟ್ಟಿದೆಯೆಂದು ಹೇಳಲ್ಪಡುತ್ತವೆ ಹದಿಮೂರನೆಯ ಶತಮಾನದ ಹೊಯ್ಸಳ ವಾಸ್ತುಶಿಲ್ಪಕ್ಕೆ ಇದು ಉತ್ತಮ ನಿದರ್ಶನವಾಗಿ ನಿಲ್ಲುತ್ತದೆ. ಈ ಪ್ರದೇಶವನ್ನು ಮೊದಲು ವಿಜಯಸೋಮನಾಥಪುರ ಎಂದು ಕರೆಯುತ್ತಿದ್ದರು .ಕಂಬಗಳ ಮೇಲೆ ಹಾಗೂ ಗೋಡೆಗಳ ಮೇಲೆ ವೈಷ್ಣವ ಧರ್ಮದ ಪುರಾಣಕಥೆಗಳನ್ನು ಕೆತ್ತಲಾಗಿದೆ .ಕೇಶವ ವೇಣುಗೋಪಾಲ ಹಾಗೂ ಲಕ್ಷ್ಮೀನರಸಿಂಹ ಇಲ್ಲಿನ ಮುಖ್ಯ 3 ದೇವರುಗಳು.

೨. ಬೆಳವಾಡಿಯ ಯೋಗಾನರಸಿಂಹ ದೇವಾಲಯ


ಬೆಳವಾಡಿ ಎಂಬ ಸಣ್ಣ ಹಳ್ಳಿಯಲ್ಲಿ ಕಟ್ಟಲ್ಪಟ್ಟ ಬೃಹತ್ ದೇವಾಲಯ ಸಂಚಯ ಇದು . ಕ್ರಿಸ್ತಶಕ ಹನ್ನೆರಡನೆಯ ಶತಮಾನದ ರಚನೆ ಪ್ರಸಿದ್ಧ ವಾಸ್ತುಶಿಲ್ಪ ಕಲೆಯ ಬೀಡಾದ ಹಳೇಬೀಡಿನ ಬಳಿ ಇರುವ ಈ ದೇವಾಲಯ ಚಿಕ್ಕಮಗಳೂರು ಜಿಲ್ಲೆ ಯಲ್ಲಿ ಇದೆ.ದೊಡ್ಡದಾದ 1 ರಂಗಮಂಟಪ ಇಲ್ಲಿನ ವಿಶೇಷತೆ . ವೀರನಾರಾಯಣ, ಗೋಪಾಲ ಮತ್ತು ಯೋಗಾನರಸಿಂಹ ಇಲ್ಲಿನ ಪ್ರಮುಖ ಅಧಿದೇವತೆಗಳು . ರಾಜ ವೀರಬಲ್ಲಾಳ ೨ ಇವನ ಕಾಲದಲ್ಲಿ ಕಟ್ಟಲ್ಪಟ್ಟದ್ದು ಎಂದು ಐತಿಹ್ಯ .ಈಗ ಇದು ರಾಜ್ಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿದೆ .

೩. ಜಾವಗಲ್ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ


ಹಾಸನ ಪಟ್ಟಣಕ್ಕೆ ಐವತ್ತು ಕಿಲೋ ಮೀಟರ್ ದೂರದಲ್ಲಿರುವ ಈ ದೇವಸ್ಥಾನ ೧೨೫೦_ ೧೨೬೦ ರಲ್ಲಿ ಮುಕ್ತಾಯವಾಯಿತು ಎಂದು ಹೇಳುತ್ತಾರೆ . ಹೊಯ್ಸಳರ ರಾಜ ವೀರಸೋಮೇಶ್ವರ ಈ ಕಟ್ಟಡವನ್ನು ನಿರ್ಮಿಸಿದನು . ಇಲ್ಲಿನ 3ಪ್ರಮುಖ ದೇವತೆಗಳು ಶ್ರೀಧರ, ವೇಣುಗೋಪಾಲ ಹಾಗೂ ಲಕ್ಷ್ಮೀ ನರಸಿಂಹ .ದೇವಸ್ಥಾನದ ಕಂಬಗಳ ಕುಸುರಿ ಕೆತ್ತನೆ ಕೆಲಸ ತುಂಬ ಮನಮೋಹಕವಾಗಿದೆ ರಾಮಾಯಣದ ದೃಶ್ಯಗಳು ಇಲ್ಲಿ ಕೆತ್ತಲ್ಪಟ್ಟಿವೆ .

೪. ಶಾಂತಿಗ್ರಾಮದ ಶ್ರೀ ವರದ ಯೋಗ ಭೋಗ ನರಸಿಂಹ ಸ್ವಾಮಿ ದೇವಸ್ಥಾನ


ಇಲ್ಲಿನ ನರಸಿಂಹಮೂರ್ತಿಯು ಯೋಗಮುದ್ರೆಯಲ್ಲಿ ಇರುವುದರಿಂದ ಇದಕ್ಕೆ ಯೋಗಾನರಸಿಂಹ ಎಂದು ಹೇಳುತ್ತಾರೆ ಚೋಳರ ಕಾಲಕ್ಕೆ ಸೇರಿದ ಮೂರ್ತಿ ಎಂದು ಹೇಳಲ್ಪಡುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಅಕಾಲ ಪ್ರಕಾಶ ಮುನಿ ಎನ್ನುವರಿಂದ ಕಟ್ಟಲ್ಪಟ್ಟಿದೆ ಎಂದು ತಿಳಿಯಲ್ಪಟ್ಟಿದೆ .ನವ ನರಸಿಂಹ ಸ್ವರೂಪಗಳು ಇಲ್ಲಿ ಛಾವಣಿಯ ಮೇಲೆ ಕೆತ್ತಲ್ಪಟ್ಟಿವೆ. ಹೊಯ್ಸಳರ ಪ್ರಸಿದ್ಧ ರಾಣಿ ಶಾಂತಲೆಯ ತಂದೆ ನರಸಿಂಗಮಯ್ಯ ಅವರು ಇದರ ನಿರ್ಮಾಣದ ರೂವಾರಿಗಳು ಎಂದು ಹೇಳಲ್ಪಡುತ್ತದೆ .

೫. ಹೊಸಹೊಳಲುವಿನ ಲಕ್ಷ್ಮೀನರಸಿಂಹ ದೇವಸ್ಥಾನ


ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಬಳಿ ಇರುವ ಹೊಸಹೊಳಲು ಗ್ರಾಮದಲ್ಲಿ ಕಟ್ಟಲ್ಪಟ್ಟ ಈ ದೇವಸ್ಥಾನವು ಹದಿಮೂರನೆಯ ಶತಮಾನದ ಎಂದು ನಂಬಲಾಗಿದೆ .ದೇವಸ್ಥಾನದ ಕಂಬಗಳು ಹಾಗೂ ಹೊರಗೋಡೆಯ ಮೇಲೆ ರಾಮಾಯಣ ಮಹಾಭಾರತ ಮತ್ತು ಭಾಗವತ ಪುರಾಣದ ದೃಶ್ಯಗಳನ್ನು ಕೆತ್ತಲಾಗಿದೆ ತುಂಬಾ ಸುಂದರ ಸುಕನಾಸಿಯ ಈ ದೇವಸ್ಥಾನ ವಿಶಿಷ್ಟವಾಗಿತ್ತು ಅದರ ಕೆತ್ತನೆ ಕೆಲಸಕ್ಕಾಗಿಯೇ ತುಂಬಾ ಪ್ರಸಿದ್ದಿ. ಹಾಗೆಯೇ ನಾಗಮಂಗಲ, ಹಾರನಹಳ್ಳಿ ಹಾಗೂ ಭದ್ರಾವತಿಯಲ್ಲಿ ಹೊಯ್ಸಳ ನಿರ್ಮಿತ ನರಸಿಂಹ ದೇವಸ್ಥಾನಗಳನ್ನು ಕಾಣಬಹುದು.

  • ಹಂಪಿಯ ನರಸಿಂಹ ದೇವಸ್ಥಾನಗಳು 

ಕರುನಾಡಲ್ಲಿ ಸುವರ್ಣಯುಗ ಎಂದೇ ವಿಜಯನಗರದ ಕೃಷ್ಣದೇವರಾಯನ ಕಾಲವನ್ನು ಹೇಳುವುದು. ಈ ವಿಜಯನಗರದ ರಾಜಧಾನಿ ಹಂಪಿ .ಇಲ್ಲಿ ಶಿಲ್ಪಕಲೆ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು ನಂತರ ಬಹಮನಿ ಸುಲ್ತಾನರ ದಾಳಿಗೀಡಾಗಿ ಈಗ ಹಾಳು ಹಂಪಿಯಾಗಿದೆ. ಇಲ್ಲಿ ೨ ನರಸಿಂಹಸ್ವಾಮಿ ದೇವಸ್ಥಾನಗಳನ್ನು ಕಾಣಬಹುದು . ಹೇಮಕೂಟ ಪರ್ವತದ ಮೇಲಿನ ಉಗ್ರ ನರಸಿಂಹನ ಬೃಹತ್ ಮೂರ್ತಿ ಇಲ್ಲಿ ಈಗ ಸ್ವಲ್ಪ ಭಗ್ನ ಸ್ಥಿತಿಯಲ್ಲಿದೆ. ಆದರೂ ಅದರ ಬೃಹತ್ ಭಂಗಿ ಮೂಕ ಚಕಿತರನ್ನಾಗಿಸುತ್ತದೆ . ಇದೊಂದು ಏಕಶಿಲಾಮೂರ್ತಿ ಎಂದು ನಂಬುವುದೇ ಕಷ್ಟವಾಗುವಷ್ಟು ಸೂಕ್ಷ್ಮ ಕುಸುರಿ ಕೆಲಸದ ಕೆತ್ತನೆ ಕಾಣಬಹುದು .ಹೊರಚಾಚಿದಂತೆ ಉಗ್ರ ಕಣ್ಣುಗಳಿರುವ ಮೂರ್ತಿ ಇದು.

ಕೃಷ್ಣದೇವರಾಯನಿಂದ ಕಟ್ಟಲ್ಪಟ್ಟ ಲಕ್ಷ್ಮೀನರಸಿಂಹ ದೇವಸ್ಥಾನ ೧೫೨೮ ರಲ್ಲಿ ನಿರ್ಮಾಣಗೊಂಡಿತು ಎಂದು ಹೇಳಲ್ಪಡುತ್ತದೆ ಇಲ್ಲಿ ಲಕ್ಷ್ಮೀದೇವಿಯನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡ ಮೂರ್ತಿ ಇದೆ .

  • ಬೆಟ್ಟದ ಮೇಲಿರುವ ನರಸಿಂಹ ಸ್ವಾಮಿ ದೇವಸ್ಥಾನಗಳು

ತುಮಕೂರಿನ ಬಳಿಯಿರುವ ಬೆಂಗಳೂರಿನಿಂದ 2 ಗಂಟೆಯ ದೂರದಲ್ಲಿರುವ ದೇವರಾಯನದುರ್ಗ ಬೆಟ್ಟದ ಮೇಲೆ ಇರುವ ಈ ದೇವಸ್ಥಾನಗಳು ಪುಣ್ಯಕ್ಷೇತ್ರವಾಗಿ ಬಹಳ ಪ್ರಸಿದ್ಧಿ ಹೊಂದಿದೆ. ಸಮುದ್ರ ಮಟ್ಟದಿಂದ ೪ ಸಾವಿರ ಅಡಿ ಮೇಲಿರುವ ಈ ಬೆಟ್ಟದ ಮೇಲೆ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟ ಭೋಗ ನರಸಿಂಹ ಸ್ವಾಮಿ ದೇವಸ್ಥಾನವಿದೆ. .ಇಲ್ಲಿಂದ ಮೇಲೆ ಸುಮಾರು ಇನ್ನೂರೈವತ್ತು ಮೆಟ್ಟಲುಗಳ ಮೇಲೆ ಮತ್ತೊಂದು ದೇವಸ್ಥಾನವಿದ್ದು ಅಲ್ಲಿ ಯೋಗಾ ನರಸಿಂಹ ಮೂರ್ತಿಯನ್ನು ಸ್ಥಾಪಿಸಲಾಗಿದೆ .

ಇಲ್ಲಿ 3 ಪುಣ್ಯತೀರ್ಥದ ಕೊಳಗಳಿದ್ದು ಅವು ನರಸಿಂಹ ತೀರ್ಥ ಪರಾಶರತೀರ್ಥ ಮತ್ತು ಪಾದತೀರ್ಥಗಳು. ಸುಂದರ ಪ್ರಕೃತಿ ದೃಶ್ಯವನ್ನು ಹೊಂದಿರುವ ಈ ಕ್ಷೇತ್ರ ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಹೊಂದಿದೆ .

  • ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಸ್ಥಾನ

ಸಮುದ್ರಮಟ್ಟದಿಂದ ೧೭೭೦ ಅಡಿ ಮೇಲಿರುವ ಈ ದೇವಸ್ಥಾನವು ಹೊಯ್ಸಳ ರಿಂದಲೇ ಕಟ್ಟಲ್ಪಟ್ಟಿದೆ .ಇಲ್ಲಿನ ಐತಿಹ್ಯದ ಪ್ರಕಾರ ಇಲ್ಲಿಯ ಮೂರ್ತಿಯನ್ನು ಪ್ರಹ್ಲಾದನು ಸ್ವತಃ ಸ್ಥಾಪಿಸಿದನು ಎಂದು ಹೇಳುತ್ತಾರೆ . ಮೈಸೂರನ್ನಾಳಿದ ಒಡೆಯರ 1 ಚಿನ್ನದ ಕಿರೀಟವನ್ನು ಇಲ್ಲಿನ ಮೂರ್ತಿಗೆ ಮಾಡಿಸಿಕೊಟ್ಟಿದ್ದಾರೆ.ಟಿಪ್ಪು ಸುಲ್ತಾನನಿಂದ ಕೊಡಲ್ಪಟ್ಟ 1ಬೃಹತ್ ಗಾತ್ರದ ನಗಾರಿ ಇಲ್ಲಿದೆ.

ವಿಸ್ಮಯ ಐತಿಹ್ಯಗಳನ್ನುಳ್ಳ ದೇವಾಲಯಗಳು:

  •  ಬಿಳ್ಳೂರಿನ ಸ್ತಂಭ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲ್ಲೂಕಿನ ಲ್ಲಿರುವ ಇಲ್ಲಿನ ಐತಿಹ್ಯ ಕುತೂಹಲಕಾರಿಯಾಗಿದೆ . ಹದಿಮೂರನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲ್ಪಟ್ಟ ಈ ದೇವಸ್ಥಾನ ಕಟ್ಟುವಾಗ ಮೂರ್ತಿ ಸ್ವಯಂಭುವಾಗಿ ತಾನಾಗಿಯೇ ಬೆಳೆಯುತ್ತಾ ಹೋಯಿತಂತೆ. ಆಗ ಆಸ್ಥಾನ ಶಿಲ್ಪಿ ಸುತ್ತಿಗೆಯಿಂದ ಮೂರ್ತಿಯ ತಲೆಯ ಮೇಲೆ ಹೊಡೆದ ಮೇಲೆ ಬೆಳವಣಿಗೆ ನಿಂತಿತಂತೆ . ಹಾಗಾಗಿ ಇದಕ್ಕೆ ಸ್ತಂಭ ನರಸಿಂಹ ಎಂಬ ಹೆಸರು ಬಂದಿದೆ . ಲಕ್ಷ್ಮೀ ಸಮೇತನಾಗಿ ಶಂಖಚಕ್ರಗಳ ಗುರುತು ಇಲ್ಲಿನ ಕಂಬದ ಮೇಲೆ ಇದೆ .

  • ಶೀಬಿ ನರಸಿಂಹಸ್ವಾಮಿ ದೇವಸ್ಥಾನ

ತುಮಕೂರಿನಿಂದ ೨೦ ಕಿಮೀ ದೂರದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಸಿಗುತ್ತದೆ. ಒಮ್ಮೆ ಒಬ್ಬ ವ್ಯಾಪಾರಿಯು ಪ್ರಯಾಣಿಸುತ್ತಿದ್ದಾಗ ಇಲ್ಲಿ ಇರುವ ಬಂಡೆಯೊಂದರ ಮೇಲೆ ಅಡುಗೆ ಮಾಡಲು ಹೋದಾಗ ಧಾನ್ಯಗಳೆಲ್ಲ ರಕ್ತದಂತೆ ಕೆಂಪಗೆ ಗೋಚರಿಸುತ್ತದಂತೆ .ನಂತರ ಆ ವ್ಯಾಪಾರಿಯ ಕನಸಿನಲ್ಲಿ ನರಸಿಂಹಸ್ವಾಮಿಯು ಬಂದು ಇದು ನನ್ನ ವಾಸಸ್ಥಳ ದೇವಸ್ಥಾನ ಕಟ್ಟು ಎಂದು ನಿರ್ದೇಶಿಸಿದನಂತೆ . ಆಗ ಇಲ್ಲಿ ಪುಟ್ಟದೊಂದು ದೇವಸ್ಥಾನ ನಿರ್ಮಾಣವಾಗಿದ್ದು ಮುಂದೆ ಹದಿನೆಂಟನೆಯ ಶತಮಾನದಲ್ಲಿ ಟಿಪ್ಪುವಿನ ದಿವಾನರಾಗಿದ್ದ ಕೃಷ್ಣಪ್ಪನವರ ಮಕ್ಕಳಾದ ಪುಟ್ಟಣ್ಣ ಹಾಗೂ ನಲ್ಲಪ್ಪ ಎನ್ನುವವರು ಈಗಿರುವ ದ್ರಾವಿಡ ಶೈಲಿಯ ದೊಡ್ಡ ದೇವಸ್ಥಾನವನ್ನು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ .

  • ತಿರುಮಕೂಡಲಿನ ಗುಂಜಾನರಸಿಂಹಸ್ವಾಮಿ ದೇವಸ್ಥಾನ

ವಿಜಯನಗರ ಅರಸರ ಕಾಲದಲ್ಲಿ ಕಟ್ಟಲ್ಪಟ್ಟ ದ್ರಾವಿಡ ಶೈಲಿಯ ದೇವಸ್ಥಾನ ಇದು ಮೈಸೂರಿನಿಂದ ಇಪ್ಪತ್ತು ಕಿಲೋ ಮೀಟರ್ ದೂರದ ಟಿ ನರಸೀಪುರ ದಲ್ಲಿದೆ. ಕಪಿಲಾ ಕಾವೇರಿ ನದಿಗಳ ಸಂಗಮದಲ್ಲಿ ಇರುವ ಇದು ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ . ಕಾಶಿ ರಾಮೇಶ್ವರ ದರ್ಶನಕ್ಕಿಂತಲೂ ಗುಲಗಂಜಿ ಗಾತ್ರದಲ್ಲಿ ಹೆಚ್ಚಿನ ಪುಣ್ಯ ಸಂಪಾದನೆ ಇಲ್ಲಿ ಎನ್ನುವುದರಿಂದ ಈ ದೇವಸ್ಥಾನಕ್ಕೆ ಗುಂಜಾ ನರಸಿಂಹ ಎಂಬ ಹೆಸರು ಬಂದಿದೆ .

ಇಷ್ಟೇ ಅಲ್ಲದೆ ಮೈಸೂರಿನಲ್ಲಿ ಇತ್ತೀಚೆಗೆ ಸುದರ್ಶನ ಕ್ಷೇತ್ರ ಎಂದು ಕಟ್ಟಲ್ಪಟ್ಟ ಯೋಗಾನರಸಿಂಹಸ್ವಾಮಿ ದೇವಸ್ಥಾನ, ಮದ್ದೂರಿನ ಉಗ್ರನರಸಿಂಹ ಸ್ವಾಮಿ ದೇವಸ್ಥಾನಗಳು ಸಹ ಮುಖ್ಯವಾದುವು.

ಅಷ್ಟೇ ಅಲ್ಲದೆ ಮಳವಳ್ಳಿಯ ಮಾರೇಹಳ್ಳಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ನರಸಿಂಹ ದೇವಸ್ಥಾನ ಗೊರೂರಿನ ಲಕ್ಷ್ಮೀನರಸಿಂಹ ದೇವಸ್ಥಾನ ಕಿಕ್ಕೇರಿಯ ಲಕ್ಷ್ಮೀನರಸಿಂಹ ದೇವಸ್ಥಾನ ಗಳು ಸಹ ಪ್ರಸಿದ್ಧ ಪುಣ್ಯಕ್ಷೇತ್ರ ಗಳಾಗಿ ಪವಿತ್ರ ನರಸಿಂಹಕ್ಷೇತ್ರ ಗಳೆಂದು ಹೆಸರು ಪಡೆದಿದೆ. ಕಲ್ಲಹಳ್ಳಿಯಲ್ಲಿರುವ ಬೃಹತ್ ಭೂವರಾಹಸ್ವಾಮಿ ಭೂದೇವಿ ಹಾಗೂ ಲಕ್ಷ್ಮೀದೇವಿಯರ ಸಹಿತವಾಗಿದೆ. ಹಾಗೆಯೇ ತೊರವಿ ಹಾಗೂ ಸಿದ್ಧಾಪುರದಲ್ಲಿನ ನರಸಿಂಹ ಕ್ಷೇತ್ರಗಳು ಪುಣ್ಯದಾಯಕ .

ಇಲ್ಲಿ ಕೆಲವೇ ಕೆಲವು ನರಸಿಂಹ ಕ್ಷೇತ್ರಗಳ ಬಗ್ಗೆ ಉಲ್ಲೇಖವಾಗಿದೆ ಆದರೆ ಆ ಮಹಾಮಹಿಮನ ಕರುಣೆ ಎಲ್ಲ ಕಡೆಯೂ ವ್ಯಾಪಿಸಿದೆ. ದುಷ್ಟರನ್ನು ಅತ್ಯುಗ್ರತೆಯಿಂದ ಕರುಣೆಯಿಲ್ಲದೆ ವಧಿಸುವ ಸ್ವಾಮಿ ಶಿಷ್ಟರ ಪಾಲಿಗೆ ಭಕ್ತರ ಪಾಲಿಗೆ ಮಹಾನ್ ಶಾಂತಮೂರ್ತಿಯಾಗಿ ಯೋಗ ಮುದ್ರೆಯಿಂದ ಸಹಿತನಾಗಿ ದರ್ಶನ ಭಾಗ್ಯ ಕೊಟ್ಟು ಶಾಂತಿ ನೆಮ್ಮದಿ ಆಶೀರ್ವಾದಗಳನ್ನೀಯುತ್ತಾ ಕಾಯುತ್ತಿದ್ದಾನೆ . ಶಂಕರಾಚಾರ್ಯರು ಬೇಡಿದಂತೆ ಕರಾವಲಂಬನ ನೀಡಿ ಎಲ್ಲ ಭಕ್ತರನ್ನು ನೃಸಿಂಹನು ಅನುಗ್ರಹಿಸಲಿ.

ನರಸಿಂಹ ಗಾಯತ್ರೀ ಮಂತ್ರ
ಓಂ ನೃಸಿಂಹಾಯೇ ವಿದಾಮಹೇ ವಜ್ರಕಾಯಾ
ಧೀಮಹಿ
ತನ್ ನೋ ಸಿಂಹ ಪ್ರಚೋದಯಾತ್
ವಜ್ರನಖಾಯಾ ವಿದಾಮಹೇ ತೀಕ್ಷ್ಣ ದಂಷ್ಥ್ರಾಯ ಧೀಮಹಿ
ತನ್ ನೋ ನರಸಿಂಹ ಪ್ರಚೋದಯಾತ್
ನಾರಸಿಂಹಾಯ ನಮೋ ನಮಃ.


  • ಸುಜಾತಾ ರವೀಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading