ಕವಿ ಮಹಾದೇವಿ ಕೆ ಪಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಓದಿ…
ಹೊಳೆವ ಬೆಳಕಲ್ಲೂ
ಕವಿದ ಕತ್ತಲೆಯಲ್ಲೂ
ಕಾಣುತ್ತದೆ ನಿನ್ನ ಮುಖ
ಸೂಕ್ಷ್ಮದಲಿ ಇಣುಕಿದರೆ
ಕಾಣುವುದು
ತಳಾತಳದ ಅಂತರಾಳ
ಒಡೆದ ಮುತ್ತುಗಳು
ಸೆಳೆವ ಹವಳಗಳು
ಅಲ್ಲಲ್ಲೇ ಪಾಚಿಕಟ್ಟಿದ
ಚಿತ್ರವಿಚಿತ್ರ
ವಸ್ತು ವೈವಿಧ್ಯ
ಮಣ್ಣಾಂಗಟ್ಟಿ
ಇಷ್ಟರ ಮೇಲೂ
ಇಳಿಯಬಾರದು ಕೆಳಗೆ
ತಡವಿ ಕದಡಬಾರದು ತಳವ
ಕಾಣಲಾಗದ ಕಡೆ
ಉಣ್ಣಲಾಗದ ಎಡೆ
ಅಂಡಲೆವ
ದೃಷ್ಟಿ ವಂಚನೆ
ಆಕಾಶದಿಂದತ್ತತ್ತ
ಪಾತಾಳದಿಂತ್ತಿತ್ತ
ಸುಳಿಯಬೇಕೆನ್ನುತ್ತದೆ
ಸುಮ್ಮನೇ
ಕಣ್ಮುಚ್ಚಿಯೇ ಕುಳಿತು
ಕಾಣುವ ಕಲೆಗೆ
ಮುಖವೇಕೆ
ಒಳಗು ಹೊರಗುಗಳ
ಹಂಗೇಕೆ
ತಿಳಿಜಲವ ಕುಡಿಯಲು
ಸೋಸಬೇಕೇಕೆ
ಮುಳುಗಿ ಬಿಡಬೇಕು
ಸುಳಿಯ ಮಡುವಲ್ಲೂ
ತೇಲುವುದ ಕಲಿತ ಮೇಲೆ
- ಮಹಾದೇವಿ ಕೆ ಪಿ
