‘ಇಲ್ಲೇ ಸ್ವರ್ಗ ತೆರೆ ಸರಿದಾಗ’ ಮಕ್ಕಳ ನಾಟಕ

ಸ್ವರ್ಗ – ನರಕ ಎಂದರೇನು? ಸತೀಶ ಕೆ ಎಸ್ ಅವರ ರಚನೆಯ ‘ಇಲ್ಲೇ ಸ್ವರ್ಗ ತೆರೆ ಸರಿದಾಗ’ ಮಕ್ಕಳ ನಾಟಕವನ್ನು ತಪ್ಪದೆ ಓದಿ…

ಪಾತ್ರಗಳ ಪರಿಚಯ

  • ಮಕ್ಕಳು
  • ಶಿಕ್ಷಕ
  • ಅಂಬಿಕ
  • ಆಕಾಶ್
  • ಬಸವರಾಜ್
  • ರಮ್ಯ
  • ಗಗನ್
  • ಸಾರಿಕಾ
  • ವಿಜಯಲಕ್ಷ್ಮಿ

ದೃಶ್ಯ 01

(ಶಾಲೆಯ ಗಂಟೆ ಬಾರಿಸಿತು. ಮೊದಲನೇ ಅವಧಿ ಪ್ರಾರಂಭವಾಯಿತು. ಶಿಕ್ಷಕರು ತರಗತಿ ಕೋಣೆ ಪ್ರವೇಶಿಸಿದ ಸನ್ನಿವೇಶ)

ಮಕ್ಕಳು : (ಓಕ್ಕೋರಲಿನಿಂದ) ಗುಡ್ ಮಾರ್ನಿಂಗ್ ಸಾರ್…

ಶಿಕ್ಷಕ : ವೆರಿ ಗುಡ್ ಮಾರ್ನಿಂಗ್…. ಸಿಟ್ ಡೌನ್. ಮಕ್ಕಳೇ ಯಾರು ಗಲಾಟೆ ಮಾಡಬಾರದು. ಹಾಜರಿ ಹಾಕ್ತಿನಿ. ಹಾಜರಿ ಹೇಳಿ.

ಮಕ್ಕಳು : (ಓಕ್ಕೋರಲಿನಿಂದ) ಆಯ್ತು ಸರ್…

ಶಿಕ್ಷಕ : ಅಂಬಿಕ

ಅಂಬಿಕ : ಎಸ್ ಸರ್

ಶಿಕ್ಷಕ : ಆಕಾಶ್

ಆಕಾಶ್ : ಪ್ರೆಸೆಂಟ್ ಸರ್

ಶಿಕ್ಷಕ : ಬಸವರಾಜ್

ಬಸವರಾಜ್ : ಎಸ್ ಸರ್

ಶಿಕ್ಷಕ : ರಮ್ಯ

ರಮ್ಯ : ಬಂದಿದ್ದೇನೆ ಸರ್

ಶಿಕ್ಷಕ : (ಹೀಗೆ ಶಿಕ್ಷಕರು ಒಬ್ಬೊಬ್ಬರ ಹೆಸರನ್ನು ಕೂಗಿ ಹಾಜರಿಯನ್ನು ಹಾಕಿ ಪೂರ್ಣಗೊಳಿಸುವರು) ಓಕೆ ಮಕ್ಕಳೇ… ಈಗ ಪಾಠ ಶುರು ಮಾಡೋಣ.

ಮಕ್ಕಳು : ಸರ್ ಹೋಂ ವರ್ಕ್ ನೋಡಿ ಸರ್.

ಶಿಕ್ಷಕ : ಸರಿ ಮಕ್ಕಳೇ. ಹೋಮ್ ವರ್ಕ್ ಕಾಫಿ ರೈಟಿಂಗ್ ಎಲ್ಲಾ ತಗೊಂಡ್ ಬನ್ನಿ. (ಎಲ್ಲಾ ಮಕ್ಕಳ ಹೋಂವರ್ಕ್ ನೋಡುವರು. ) ಗಗನ, ರಮ್ಯಾ ಯಾಕೆ ಹೋಂವರ್ಕ್ ಮಾಡಿಲ್ಲ?

ಗಗನ : ಸರ್, ನಾನು ಊರಿಗೆ ಹೋಗಿದ್ದೆ ಸರ್… ನಾಳೆ ಮಾಡ್ಕೊಂಡ್ ಬರ್ತೀನಿ

ಶಿಕ್ಷಕ : ರಮ್ಯ ನೀನ್ಯಾಕ್ ಮಾಡಿಲ್ಲ? ನೀನು ಊರಿಗೆ ಹೋಗಿದ್ದ?

ರಮ್ಯ : ಇಲ್ಲ ಸರ್, ನಂಗೆ ಹುಷಾರ್ ಇರಲಿಲ್ಲ. ನಾಳೆ ತೋರಿಸ್ತೀನಿ.

ಶಿಕ್ಷಕ : ಓಕೆ, ಎಲ್ಲಾ ಮಕ್ಕಳು ತಪ್ಪದೇ ಹೋಂವರ್ಕ್ ಮಾಡಬೇಕು ಮಕ್ಕಳೇ. ಒಂದೊತ್ತು ಊಟ ಬಿಟ್ರು ಹೋಂವರ್ಕ್ ಬಿಡ್ಬಾರ್ದು ಮಕ್ಕಳೇ.

ಮಕ್ಕಳು : ಆಯ್ತು ಸರ್, ಹಾಗೆ ಮಾಡ್ತೀವಿ.

ಶಿಕ್ಷಕ : ಮಕ್ಕಳೇ ನಿಮಗೆ ಸ್ವರ್ಗ- ನರಕ ಅಂದ್ರೆ ಗೊತ್ತಾ ಮಕ್ಕಳೇ?

ಮಕ್ಕಳು : ಗೊತ್ತು ಸಾರ್.

ಶಿಕ್ಷಕ : ಸರಿ ಮಕ್ಕಳೇ, ಹಾಗಾದರೆ ಸ್ವರ್ಗ – ನರಕದ ಬಗ್ಗೆ ನಿಮಗೇನು ಗೊತ್ತು? ಒಬ್ಬೊಬ್ಬರಾಗಿ ಹೇಳಿ. ಗಗನ ನೀನೆ ಹೇಳೋ.

ಗಗನ : ಸ್ವರ್ಗ – ನರಕ ಮೇಲಿರುತ್ತೆ ಸರ್. ಅಷ್ಟೇ ಸರ್ ನನಗೆ ಗೊತ್ತಿರೋದು.

ಶಿಕ್ಷಕ : ಮಕ್ಕಳೇ ಗಗನ ಸ್ವರ್ಗ – ನರಕ ಮೇಲಿರುತ್ತೆ ಅಂದ. ಆದರೆ ನಾನು ಕೇಳಿದ್ದು ಸ್ವರ್ಗ ಅಂದರೆ ಏನು? ನರಕ ಅಂದರೆ ಏನು? ಅಂತ. ನೆಕ್ಸ್ಟ್ ಯಾರು ಹೇಳ್ತೀರಾ?

ರಮ್ಯ : ಸರ್, ನಾನು ಹೇಳ್ತೀನಿ ಸಾರ್… ಸ್ವರ್ಗ ಅಂದರೆ ಮೇಲಿರುತ್ತೆ. ಯಾರು ಒಳ್ಳೆಯ ಕೆಲಸ ಮಾಡುತ್ತಾರೆ ಅವರನ್ನು ಸ್ವರ್ಗಕ್ಕೆ ಹೋಗುತ್ತಾರೆ.

ಶಿಕ್ಷಕ : ಓಕೆ ಗುಡ್… ಹಂಗಾದ್ರೆ ನರಕ ಅಂದ್ರೆ ಏನು?

ಆಕಾಶ : ಸರ್, ನರಕ ಅಂದರೆ ಭೂಮಿಯ ಮೇಲೆ ಯಾರು ತಪ್ಪು ಮಾಡುತ್ತಾರೋ ಅವರನ್ನು ಸತ್ತ ಮೇಲೆ ನರಕದಲ್ಲಿ ಎಣ್ಣೆಯಲ್ಲಿ ಬೋಂಡ ಕರೆದಂಗೆ ಕರೀತಾರಂತೆ ಸರ್. ಹಾಗಂತ ನಮ್ಮ ಅಜ್ಜಿ ಹೇಳುತ್ತೆ. ಅದ್ಕೆ ಇಲ್ಲಿ ಬದುಕಿರಬೇಕಾದರೆ ಒಳ್ಳೆಯ ಕೆಲಸ ಮಾಡಬೇಕು ಅಂತ ಹೇಳುತ್ತೆ ಸರ್.

ಶಿಕ್ಷಕ : ವೆರಿ ಗುಡ್ ಗಗನ್. ಹೌದು ಮಕ್ಕಳೇ ಸ್ವರ್ಗ-ನರಕ ಅಂದರೆ ಯಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ, ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಯಾರು ಕೆಟ್ಟ ಕೆಲಸಗಳನ್ನು ಮಾಡುತ್ತಾರೋ ಅವರಿಗೆ ನರಕ ಪ್ರಾಪ್ತಿಯಾಗುತ್ತದೆ. ಆದ್ದರಿಂದ ನಾವೆಲ್ಲ ಒಳ್ಳೆಯ ಕೆಲಸಗಳನ್ನು ಮಾಡಬೇಕು. ನೀವು ಇನ್ಮುಂದೆ ಒಳ್ಳೆಯ ಕೆಲಸಗಳನ್ನು ಮಾಡುತ್ತೀರಾ ಅಲ್ವಾ?

ಮಕ್ಕಳು : (ಓಕ್ಕೋರಲಿನಿಂದ) ಆಯ್ತು ಸರ್…

ಶಿಕ್ಷಕ : ಮಕ್ಕಳೇ ಹಾಗಾದರೆ ಈಗ ಏನಾದರೂ ನಿಮಗೆ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ ಯಾರು ಹೋಗುತ್ತೀರಾ? ಕೈ ಎತ್ತಿ ನೋಡೋಣ. ಮಕ್ಕಳೆಲ್ಲ ಒಟ್ಟಾಗಿ : ನಾನು ಸಾರ್…. ನಾನು ಸಾರ್… ಅಂತ ಕೈ ಎತ್ತಿದರು. ಆದರೆ ಕೆಲವು ಮಕ್ಕಳು ಹಾಗೆ ಕುಳಿತಿದ್ದರು.

ಶಿಕ್ಷಕ : (ಹಾಗೆ ಕುಳಿತಿದ್ದವರನ್ನು ಗಮನಿಸಿದ ಶಿಕ್ಷಕರು ) ಸರಿ ಎಲ್ಲಾ ಮಕ್ಕಳು ಕೈಯೆತ್ತಿದ್ದೀರಾ.. ಆದರೆ ಬಸವರಾಜ, ಅಂಬಿಕಾ, ಸಾರಿಕಾ, ವಿಜಯಲಕ್ಷ್ಮಿ ಯಾಕೆ ಕೈ ಎತ್ತಿಲ್ಲ? ಬಸವರಾಜ… ನೀನು ಹೇಳು ಯಾಕೆ ಕೈ ಎತ್ತಿಲ್ಲ?

ಬಸವರಾಜ : ಸರ್,  ನಮ್ಮಮ್ಮ ಎಲ್ಲೂ ಹೋಗಬೇಡ. ಸೀದಾ ಮನೆಗೆ ಬಾ… ಇವತ್ತು ಜಾಮೂನ್ ಮಾಡ್ತೀನಿ ಅಂದಿದ್ದಾಳೆ. ಸರ್. ಸ್ವರ್ಗಕ್ಕೆ ಹೋದರೆ ಜಾಮೂನು ತಿನ್ನೋಕೆ ಆಗಲ್ಲ ಸರ್ ಅದಕ್ಕೆ ನಾನು ಸೀದಾ ಮನೆಗೆ ಹೋಗ್ತೀನಿ.

ಶಿಕ್ಷಕ : ತಿಂಡಿಪೋತ…. ನಾನು ಹೇಳಿದ್ದು ಒಂದು ವೇಳೆ ಅವಕಾಶ ಸಿಕ್ಕರೆ ಯಾರಿಗೆ ಹೋಗೋ ಆಸೆ ಇದೆ ಅಂತ. ಈಗಲೇ ಹೋಗು ಅಂತ ಅಲ್ಲ ಕಣೋ… ಕುತ್ಕೋ.
ಅಂಬಿಕಾ… ನೀನು ಯಾಕೆ ಸುಮ್ಮನೆ ಕುಳಿತಿದ್ದೀಯಾ?

ಅಂಬಿಕಾ : ಸರ್…. ನಾನು ಒಬ್ಬಳೇ ಯಾವತ್ತೂ ಎಲ್ಲಿಗೂ ಹೋಗಿಲ್ಲ ಸರ್. ಅದಕ್ಕೆ ಸುಮ್ಮನೆ ಕುತ್ಕೊಂಡಿದ್ದೀನಿ ಸರ್.

ಶಿಕ್ಷಕ : ಅಂಬಿಕಾ ನಾನು ಹೇಳಿದ್ದು ಒಳ್ಳೆಯ ಕೆಲಸ ಮಾಡಿ ಯಾರಿಗೆ ಹೋಗುವ ಆಸೆ ಇದೆ ಅಂತ ಕೇಳಿದ್ದು ಅರ್ಥ ಆಯ್ತಾ?

ಅಂಬಿಕಾ : ಅರ್ಥ ಆಯ್ತು ಸರ್.

ಶಿಕ್ಷಕ : ಸಾರಿಕಾ…. ನೀನು ಯಾಕೆ ಕೈ ಎತ್ತಿಲ್ಲ ಹೇಳು?

ಸಾರಿಕಾ : ಸಾರ್…. ನನಗೆ ಮೇಲೆ ಎತ್ತರದ ಜಾಗಕ್ಕೆ ಹೋಗೋದು ಅಂದ್ರೆ ಭಯ ಸರ್… ಅದಕ್ಕೆ ಸುಮ್ನೆ ಕೂತ್ಕೊಂಡೆ.

ಶಿಕ್ಷಕ : ನಾನು ಕೇಳಿದ ವಿಷಯ ಯಾರಿಗೆ ಸರಿಯಾಗಿ ಅರ್ಥ ಆಗಿದೆ? ಹೇಳಿ ನೋಡೋಣ. ವಿಜಯಲಕ್ಷ್ಮಿ ನೀನ್ಯಾಕ್ ಹೋಗಲ್ಲ? ಹೇಳು ನೋಡೋಣ.

ವಿಜಯಲಕ್ಷ್ಮಿ : ಸರ್… ನಾನು ನನ್ನ ತಂದೆ-ತಾಯಿಗಳನ್ನು ಬಿಟ್ಟು ಎಲ್ಲೂ ಹೋಗಲ್ಲ. ಒಳ್ಳೆಯ ಕೆಲಸ ಮಾಡಿಕೊಂಡು ನಮ್ಮ ತಂದೆ-ತಾಯಿಗಳ ಜೊತೆನೆ ಇರ್ತೀನಿ. ನನ್ನ ತಂದೆ-ತಾಯಿಗಳು ನಾನು ಹುಟ್ಟಿದಾಗಿನಿಂದ ನನಗೆ ಬೇಕಾದ ವಸ್ತುಗಳನ್ನೆಲ್ಲ ಕೊಡಿಸಿದ್ದಾರೆ. ನನಗೆ ಶಿಕ್ಷಣ ಕೊಡಿಸಿದ್ದಾರೆ. ನನ್ನ ಆಸೆ ಆಕಾಂಕ್ಷೆಗಳನ್ನೆಲ್ಲ ಈಡೇರಿಸುತ್ತಿದ್ದಾರೆ. ಅದಕ್ಕಿಂತ ಇನ್ನೇನು ಬೇಕು ಸರ್? ನನ್ನ ತಂದೆ-ತಾಯಿಗಳೇ ಸ್ವರ್ಗಕ್ಕಿಂತ ಹೆಚ್ಚು. ನಾನು ಇಲ್ಲೇ ಇದ್ದು ಸ್ವರ್ಗದಲ್ಲಿ ಇದ್ದಷ್ಟು ಸಂತೋಷವಾಗಿದ್ದೇನೆ ಸಾರ್.

ಶಿಕ್ಷಕ : ವೆರಿ ಗುಡ್ ವಿಜಯಲಕ್ಷ್ಮಿ.

ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ-ತಾಯಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿದ್ದೀಯ. ಮಕ್ಕಳೇ, ಸ್ವರ್ಗ ಅನ್ನುವುದು ಬೇರೆಲ್ಲೂ ಇಲ್ಲ. ನಾವಿರುವ ಜಾಗದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಜೀವಿಸಿದರೆ ಇಲ್ಲೇ ಸ್ವರ್ಗ ಇದೆ. ಮಕ್ಕಳೇ ಉತ್ತಮವಾದ ಎಲ್ಲರಿಗೂ ಮಾದರಿಯಾಗೋ ಉತ್ತರ ಕೊಟ್ಟ ವಿಜಯಲಕ್ಷ್ಮಿಗೆ ಎಲ್ಲರೂ ಜೋರಾದ ಚಪ್ಪಾಳೆ ತಟ್ಟಿ ಎನ್ನುವರು.

ಮಕ್ಕಳೆಲ್ಲರೂ ಒಟ್ಟಾಗಿ : ಚಪ್ಪಾಳೆ ತಟ್ಟುತ್ತ…

ವಿಜಯಲಕ್ಷ್ಮಿ ವಿನ್… ವಿಜಯಲಕ್ಷ್ಮಿ ವಿನ್…. ವಿಜಯಲಕ್ಷ್ಮಿ ವಿನ್…. ಎಂದು ಹೇಳುತ್ತಿರುವರು.

ಮಕ್ಕಳ ಧ್ವನಿ ಕ್ಷೀಣಿಸುತ್ತಿದ್ದಂತೆ

( ರಂಗದಲ್ಲಿ ಕತ್ತಲು ಕವಿದು ಪರದೆ ಎಳೆಯುವರು. )


  • ಸತೀಶ ಕೆ ಎಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading