‘ಒಟಿಪಿಯ ಅವಧಿ ಮುಗಿಯಲಿದೆ’ ಕವನ – ಬೆಂಶ್ರೀ ರವೀಂದ್ರ

ಆಚೆಯೋ ಈಚೆಯೋ ಹೆಚ್ಚು ಸಮಯವಿಲ್ಲ ಒಟಿಪಿಯ ಅವಧಿ ಮುಗಿಯಲಿದೆ… ಬೆಂಶ್ರೀ ರವೀಂದ್ರ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ…

ಈಗ ಜ್ಯಾಮಿತಿ ಬದಲಾಗಿದೆ
ನಾನು ಮತ್ತು ನಾನು ಎಂಬ ಬಿಂದುವನು ಬೆಸೆವ
ಸರಳ ರೇಖೆಯನುಳಿದು
ಸಮಾಂತರ ವಕ್ರ ಕೋನ ತ್ರಿಜ್ಯ
ಆಯತ ಚೌಕ ಪಂಚ ಷಷ್ಟಕೋನ….ಗಳಿಲ್ಲ
ವೃತ್ತ ಪ್ಯಾರಾಬೋಲಗಳ ಮಾತು ದೂರ ಉಳಿಯಿತು.

ಕಾಗುಣಿತದಲೀಗ ಪ್ರಥಮ ಪುರಷ ಮಾತ್ರಾ
ನೀನೀಗಲೆ ತೀರ್ಮಾನಿಸು
ಆಯ್ಕೆಯೊಂದೆ ಗೆರೆಯ ಆಚೆ ಅಥವಾ ಈಚೆ
ಸುವರ್ಣ ಮಧ್ಯಮವು ಈಗ ಕನಸು

ಗಂಗೆಯೆಂದೂ ದಿಟ್ಟ ನಿರಂತರ
ಗಿರಿ ಶಿಖರಗಳಲಿ ಹನಿಯಾಗಿ ಝುರಿಯಾಗಿ
ಜಟಾಜೂಟದಲಿ ಧುಮುಕಿ
ಬಟಾಬಯಲಲ್ಲಿ ಬೇಕಾಬಿಟ್ಟಿ ಹರಿದು
ಹರಡಿ ಹಾರಾಡಿ ಹದಗೆಡಿಸಿ ಹೋಗಳು ಕೊಲ್ಲಿಗೆ
ನಾನವಳ ಸ್ವಚ್ಛಗೊಳಿಸಿರುವೆ
ಅವಳ ಪಾತ್ರಗಳ ತಿದ್ದಿರುವೆ ಘಟ್ಟಗಳ‌ ಕಟ್ಟಿರುವೆ
ಇನ್ನವಳೂ ಹರಿವಳು ನೇರ ನಿರಂತರ

ಆಕಾಶದಲಿರಬಹುದು ಸಹಸ್ರರಾರು ಗ್ರಹ
ನಕ್ಷತ್ರ ನೀಹಾರಿಕೆ ತಾರಾಮಂಡಲ
ಆದರೆ ಸೂರ್ಯನೊಬ್ಬನೆ ಸತ್ಯ
ಅವನೇ ಜೀವ ಜಗವು
ಸಪ್ತದಿಕ್ಕಿಗೆಳವ ಸಪ್ತವರ್ಣದ ಸಾರೋಟಿಗೆ
ಒಬ್ಬನೆ ಸಾರಥಿ ಪಾಪ ಕುಂಟ
ಹೇಳು ಸೂರ್ಯನಿಲ್ಲದೆ ಉಂಟೆ ಬದುಕು

ಹುಣ್ಣಿಮೆಗೆ ಉಕ್ಕಿದರೂ ಕಾಳರಾತ್ರಿಗೆ ಕುಗ್ಗಿದರೂ
ಆವಿಯಾದರೂ ಮಳೆಗೆ ನೆರೆದರೂ
ಸಮುದ್ರದ ಪ್ರಮಾಣ ಹಿಗ್ಗಿ ಕುಗ್ಗುವುದೆ
ಎಂತಿರುವುದೋ ಅಂತೆ

ಸುಮ್ಮನೇಕೆ ಸಂತೆಗೆ ಹೋಗುವೆ
ಜಾಣಮೊಬೈಲ್ಗಳ ಯುಗವಿದು
ಬಟನ್ಗಳು ಬೆರಳ ತುದಿಯಲ್ಲಿ
ಅಮುಕಿ ಬೇಕಾದ್ದು ತೆಗದುಕೋ
ಅಂತರಜಾಲ ಒಳನುಗ್ಗಿದೆ ಆಳಕ್ಕೆ ಇಳಿದಿದೆ
ಫಟಾಫಟ್ ತೀರ್ಮಾನಿಸು
ನೀನು ಸರಳವೆಂಬ ಸರಳ ರೇಖೆಯ
ಆಚೆಯೋ ಈಚೆಯೋ
ಹೆಚ್ಚು ಸಮಯವಿಲ್ಲ
ಒಟಿಪಿಯ ಅವಧಿ ಮುಗಿಯಲಿದೆ.


  •  ಬೆಂಶ್ರೀ ರವೀಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading