ಲಂಗದಾವಣಿ ಅಜ್ಜಿ ಪ್ರೀತಿಯಿಂದ ಮೊಮ್ಮಗಳಿಗಾಗಿಯೇ ಹೊಲಿಸಿದ್ದು, ನನಗೆ ಧರಿಸಿ ರೂಢಿಯಿಲ್ಲವಾದರೂ ಅಜ್ಜಿಯ ಪ್ರೀತಿಗೆ ಮಣಿದಿದ್ದೆ. ‘ಹೌದು, ಆತ ಯಾರು?!? ನಿನ್ನೆಯಿಂದ ಸುಮ್ಮನೆ ನಗುತ್ತಾನೆ! ಇಷ್ಟು ವರ್ಷಗಳ ಭಜನಾ ಕಾರ್ಯಕ್ರಮದಲ್ಲಿ ಆತನನ್ನು ನೋಡಿದಂತಿಲ್ಲ. ಮುಂದೇನಾಯಿತು ಸ್ಮಿತಾ ಬಲ್ಲಾಳ್ (ಅಸ್ಮಿತೆ) ಅವರ ಪ್ರೇಮ ಕಥನವನ್ನು ತಪ್ಪದೆ ಮುಂದೆ ಓದಿ…
‘ಯಾಕೋ ಏನೋ ನಿನ್ನೆಯಿಂದ ಯಾರೋ ನನ್ನ ಹಿಂದೆಯೇ ಬಂದಂತೆ, ನನ್ನನ್ನೇ ಗಮನಿಸಿದಂತೆ ಭಾಸವಾಗಿತ್ತು. ಒಂದೆರಡು ಸಲವಾಗಿದ್ದಲ್ಲಿ ನನ್ನ ಭ್ರಮೆಯೇನೋ ಅಂದುಕೊಳ್ಳುತ್ತಿದ್ದೆನೇನೋ! ಆದರೆ ನಾನು ಎಲ್ಲೆಲ್ಲಿ ಓಡಾಡ್ತೀನೋ ಅಲ್ಲೆಲ್ಲವೂ ಯಾಕೆ ನನಗೆ ಹಾಗನ್ನಿಸಬೇಕು!’
‘ಇಲ್ಲ… ಇದು ಭ್ರಮೆಯಲ್ಲ! ಆತ ಯಾರೋ ಗೊತ್ತಿಲ್ಲ…! ಚಿಗುರು ಮೀಸೆಯ ಹಿಂದಿನ ಆ ನಗು ಮಾತ್ರ ನಿನ್ನೆಯಿಂದ ಪರಿಚಿತ! ಇವೆಲ್ಲವೂ ನನಗೆ ಹೊಸದು. ಆದರೆ ಆತ ನಗು ಬೀರುವುದನ್ನು ನಿನ್ನೆಯಿಂದಲೂ ನೋಡುತ್ತಲೇ ಬಂದಿದ್ದೇನೆ. ಒಂದು ಕ್ಷಣ ‘ಆತನೆಡೆಗೆ ನೋಡಬೇಡ, ಉತ್ತೇಜನ ನೀಡಿದಂತಾಗಬಹುದು’ ಅಂತ ಮನಸ್ಸು ಅಂದುಕೊಂಡರೂ ನನ್ನ ಕಣ್ಣುಗಳು ಮನಸ್ಸಿನ ಮಾತು ಕೇಳದೇ ಆತನನ್ನೇ ದಿಟ್ಟಿಸುತ್ತಲೇ ಆತನೆಡೆ ನೆಟ್ಟ ನನ್ನ ಕಣ್ಣುಗುಡ್ಡೆಗಳು ಕದಲದೇ ಮುಷ್ಕರ ಹೂಡಿದ್ದವು. ಮೀಸೆಯ ಹಿಂದಷ್ಟೇ ನಗುತ್ತಿದ್ದಿಲ್ಲ….ಆತನ ಕಣ್ಣುಗಳಲ್ಲೂ ನಗುತ್ತಿದ್ದಾನೆ. ಅಬ್ಬಾ! ಆ ಕಣ್ಣುಗಳು ಎಷ್ಟು ಆಕರ್ಷಕ! ಸೂಜಿಗಲ್ಲಿನಂತೆ ನನ್ನನ್ನು ಸೆಳೆಯುತ್ತಿದೆಯಲ್ಲಾ! ಯಾಕೆ ಹೀಗೆ!’
”ವಿಂಧ್ಯಾ” ಅಜ್ಜಿಯ ಕರೆ ಕೇಳಿದಾಗ ಒತ್ತಾಯ ಪೂರ್ವಕವಾಗಿ ಆತ ನೆಡೆಯಿದ್ದ ನೋಟವನ್ನು ಬೇರತ್ತ ತಿರುಗಿಸಿದ್ದವಳು ಅಲ್ಲಿಂದ ಓಡಿ ಮನೆಯೊಳಗೆ ಬಂದಿದ್ದೆ.
ಅಮ್ಮನ ತವರೂರಿನಲ್ಲಿ ಪ್ರತೀ ವರ್ಷ ನಡೆಯುವ ಊರ ದೇವಸ್ಥಾನದ ಜಾತ್ರೆಗೆ ನಾನು ಕಾಲೇಜಿಗೆ ರಜೆ ಹಾಕಿಯಾದರೂ ಹೋಗಿ ಬಿಡುತ್ತಿದ್ದೆ. ನನ್ನನ್ನು ಸೆಳೆಯುತ್ತಿದ್ದದ್ದು, ಆ ಸಮಯದಲ್ಲಿ ನಿತ್ಯ ನಿರಂತರ ನಡೆಯುವ ಭಜನಾ ಕಾರ್ಯಕ್ರಮ. ಬೇರೆ ಬೇರೆ ತಂಡಗಳು ದೂರದ ಊರಿಂದೆಲ್ಲಾ ತಂಡೋಪತಂಡವಾಗಿ ಬಂದು ತಮ್ಮ ಸೇವೆಯನ್ನು ಈ ಮೂಲಕ ಸಲ್ಲಿಸುತ್ತಿದ್ದರು. ಇದು ವಾರಪೂರ್ತಿ ನಡೆಯುತ್ತಿರುವಂತಹ ಕಾರ್ಯಕ್ರಮ. ಇವೇನೂ ನನಗೆ ಹೊಸದೇನಲ್ಲ.
ಚಿಕ್ಕಂದಿನಿಂದಲೂ ನಾನು ಈ ಜಾತ್ರೆಯನ್ನು ನೋಡಿದ್ದೆನಾದರೂ, ಜಾತ್ರೆಯಲ್ಲಿನ ಭಜನಾ ಕಾರ್ಯಕ್ರಮ ಮಾತ್ರ ನನ್ನ ಅಚ್ಚುಮೆಚ್ಚಿನದು. ಕಾರಣ ಭಜನೆಯ ಹೊಸ ಹೊಸ ಹಾಡುಗಳನ್ನು ಕಲಿಯುವ ಹುಚ್ಚು ನನಗೆ. ನಿನ್ನೆಯಿಂದ ಶುರುವಾಗಿತ್ತು ಭಜನಾ ಕಾರ್ಯಕ್ರಮ. ಈ ಸಲವೂ ವಾರಪೂರ್ತಿ ಕಾಲೇಜಿಗೆ ರಜೆ ಹಾಕಿ ಅಜ್ಜಿ ಮನೆಗೆ ಹೊರಟಾಗ ಅಪ್ಪ-ಅಮ್ಮ ಬೈದರೂ ಇಬ್ಬರನ್ನೂ ಪುಸಲಾಯಿಸಿ ಬಂದಿದ್ದೆ. ಅವರಿಗೂ ಗೊತ್ತು ನನ್ನ ಭಜನೆಯ ಹುಚ್ಚು. ಹಾಗಾಗಿ ಮೊನ್ನೆ ಊರಿಗೆ ಹೊರಡುವಾಗ ಅಪ್ಪನೇ ಬಸ್ಸು ಹತ್ತಿಸಲು ಬಂದಿದ್ದರು. ಅಜ್ಜಿಗೂ ನನ್ನನ್ನು ಕಂಡರೆ ತುಂಬಾ ಇಷ್ಟ.
“ಏನಜ್ಜಿ ಕರೆದ್ರಾ?” ಹೋಗಿ ಅಜ್ಜಿಯ ಪಕ್ಕ ಕೂತಿದ್ದೆ. “ಯಾರೋ ಹುಡುಗ ಆ ದೀಪದ ಹಣತೆಗಳನ್ನು ತಾನೇ ತಗೊಂಡು ಹೋಗಲು ಬಂದಿದ್ದಾನೆ. ಭಜನಾ ಕಾರ್ಯಕ್ರಮ ಆರಂಭವಾಗುವ ಮೊದಲು ಇಡ್ಬೇಕಲ್ಲಾ ಆ ಹಣತೆಗಳು. ಆಗಲೇ ತೊಳೆದಿಟ್ಟಿದ್ದೀನಿ. ಅವನ್ನು ಅವನಿಗೆ ಕೊಟ್ಬಿಡು. ಅವನ ಜತೇನೇ ಹೋಗಿ ಬಾ. ಆ ದೊಡ್ಡ ದೊಡ್ಡ ಎರಡು ಹಣತೆಗಳಲ್ಲಿ ಎಣ್ಣೆ ಬತ್ತಿ ಹಾಕಿ ದೀಪಕ್ಕೆ ಅಣಿ ಮಾಡಿ ದೇವಸ್ಥಾನದ ಚಾವಡಿಯಲ್ಲಿಡು ಮಗಳೇ. ಭಜನೆಗೆ ಸಮಯ ಆಗ್ತಾ ಬಂತು.”

ಫೋಟೋ ಕೃಪೆ :google
“ಸರಿ ಅಜ್ಜಿ” ಅನ್ನುತ್ತಲೇ ಕಾಲಿಗೇ ತೊಡರುತ್ತಿದ್ದ ನನ್ನ ಉದ್ದ ಲಂಗವನ್ನು ಸ್ವಲ್ಪ ಮೇಲಕ್ಕೇರಿಸಿ ಎತ್ತಿ ಕಟ್ಟಿ, ಆ ಎರಡು ದೊಡ್ಡ ದೊಡ್ಡ ಭಾರವಾದ ಹಣತೆಗಳನ್ನು ಎತ್ತಿ ಕೊಂಡಿದ್ದೆ. ಈ ಲಂಗದಾವಣಿ ಅಜ್ಜಿ ಪ್ರೀತಿಯಿಂದ ಮೊಮ್ಮಗಳಿಗಾಗಿಯೇ ಹೊಲಿಸಿದ್ದು, ನನಗೆ ಧರಿಸಿ ರೂಢಿಯಿಲ್ಲವಾದರೂ ಅಜ್ಜಿಯ ಪ್ರೀತಿಗೆ ಮಣಿದಿದ್ದೆ. ‘ಹೌದು, ಆತ ಯಾರು?!? ನಿನ್ನೆಯಿಂದ ಸುಮ್ಮನೆ ನಗುತ್ತಾನೆ! ಇಷ್ಟು ವರ್ಷಗಳ ಭಜನಾ ಕಾರ್ಯಕ್ರಮದಲ್ಲಿ ಆತನನ್ನು ನೋಡಿದಂತಿಲ್ಲ. ಯಾರಾದರೆ ನನಗೇನಂತೆ! ನಾನೇಕೆ ಆತನ ಬಗ್ಗೆ ಆಸಕ್ತಿ ವಹಿಸಬೇಕು?!? ನಾನಿನ್ನು ಆತನೆಡೆಗೆ ತಿರುಗಿ ನೋಡಲೇಬಾರದು, ಆತ ನೋಡಿದರೂ ನಾನು ನೋಡದಂತಿರಬೇಕು!’ ಮನದಲ್ಲೇ ದೃಢ ನಿರ್ಧಾರ ತಳೆದವಳು ಹಣತೆಗಳೊಂದಿಗೆ ಮುಂಬಾಗಿಲು ದಾಟಿದ್ದಷ್ಟೇ ಗೊತ್ತು. ಮುಂಬಾಗಿಲಲ್ಲಿ ಲಂಗಕ್ಕೆ ಕಾಲು ತೊಡರಿ ನಾನು ಮುಗ್ಗರಿಸಿದವಳು ಆ ಹಣತೆಗಳ ಜೊತೆ ಎದುರಲ್ಲೇ ನಿಂತಿದ್ದ ಆತನ ಮೇಲೇ ಹೋಗಿ ಬಿದ್ದಿದ್ದೆ. ಆತ, ನನ್ನನ್ನೂ ಹಣತೆಗಳನ್ನೂ ಬೀಳದಂತೆ ತನ್ನ ಬಲಿಷ್ಠ ತೋಳುಗಳ ಆಸರೆ ನೀಡಿದ್ದ. ಆತನ ಒಂದು ಕೈ ಎರಡು ಹಣತೆಗಳನ್ನು ಬಿಗಿಯಾಗಿ ಹಿಡಿದಿತ್ತು, ಇನ್ನೊಂದು ತೋಳು ನನ್ನ ಸೊಂಟವನ್ನು ಭದ್ರವಾಗಿ ಹಿಡಿದಿತ್ತು. ಹಣತೆಗಳನ್ನು ಆತನ ಕೈಯ್ಯಲ್ಲಿಟ್ಟು, ಮೆತ್ತಗೆ ಆತನ ತೋಳ ಹಿಡಿತದಿಂದ ಹೊರಬಂದಿದ್ದೆ. ನನಗಾದ ಇರುಸುಮುರುಸು ಆತನಿಗೆ ಅರಿವಾಗಿ ಸದ್ದಿಲ್ಲದೇ ಹಣತೆಗಳೊಂದಿಗೆ ದೂರ ನಿಂತಿದ್ದ. ‘ಅಯ್ಯೋ..ಇವನ್ಯಾಕೆ ಇನ್ನೂ ಇಲ್ಲೇ ನಿಂತಿದ್ದಾನೆ? ಆಗ್ಲೇ ಹೋಗ್ಬೇಕಿತ್ತಲ್ಲ. ಯಾಕೆ ನನ್ನ ಸುತ್ತ ತಿರುಗ್ತಿದ್ದಾನೆ? ನಾನು ಬರೋದನ್ನೇ ಕಾಯ್ತಿದ್ನಾ?’ ಅಂದುಕೊಂಡು ಆತನನ್ನು ದುರುಗುಟ್ಟಿ ನೋಡುವಷ್ಟರಲ್ಲಿ, “ಏನೇ ವಿಂಧ್ಯಾ….ಇನ್ನೂ ಹೋಗಿಲ್ವೇನೇ? ಭಜನೆಗೆ ಬೇರೆ ಸಮಯ ಮೀರುತ್ತೆ. ಹಣತೆಗಳನ್ನು ನೀನೇ ಹಿಡಿದುಕೋಪ್ಪಾ…ನಮ್ಮ ಹುಡುಗಿ ಸ್ವಲ್ಪ ಗಡಿಬಿಡಿ, ಭಾರ ತಡೀಲಾರ್ದೇ ಕೆಳಗೆ ಎತ್ತ್ ಗಿತ್ ಹಾಕ್ಬಿಟ್ರೆ ಕಷ್ಟ. ಜೊತೆಗೆ ಬಂದು ದೀಪಗಳನ್ನು ಅವಳೇ ಹಚ್ಚಿಡ್ತಾಳೆ. ಹೋಗಮ್ಮ ವಿಂಧ್ಯಾ…” ಅಜ್ಜಿ ಅಂದಾಗ ಆತನ ಕಣ್ಣುಗಳಲ್ಲಿನ ತುಂಟ ನಗು ಕಂಡು ಅಜ್ಜಿಯ ಮೇಲೆ ತಡೆಯಲಾರದ ಕೋಪ ಬಂದಿತ್ತು. “ಅಜ್ಜೀ… ನೀನು ಹೋಗು….ನೀನು ಹೇಳಿದ ಕೆಲಸ ಸರಿಯಾಗಿ ಮುಗಿಸಿದ್ರೆ ಸಾಕು ತಾನೇ? ಬೇರೆಯವರ ಮುಂದೆ ಸುಮ್ನೇ ನನ್ಮೇಲೆ ಏನೇನೋ ಹೇಳ್ಬೇಡ” ನಾನು ಮುಖ ಊದಿಸಿಕೊಂಡಾಗ “ಆಯ್ತು ನೀನು ಜಾಣೆ ಹೋಗ್ಬಾ…” ಅಜ್ಜಿ ನಗುತ್ತಲೇ ಒಳಸೇರಿದ್ದರು. ಇತ್ತ ತಿರುಗಿದಾಗ ಆತ ಒಳಗೊಳಗೇ ನಗುವುದನ್ನು ಕಂಡವಳಿಗೆ ಇನ್ನಷ್ಟು ಕೋಪ. “ಸಾಕು ನಕ್ಕಿದ್ದು ಹೋಗೋಣ…” ಎನ್ನುತ್ತಲೇ ಆತನನ್ನು ಹಿಂದೆ ಬಿಟ್ಟು ಬಿರಬಿರನೆ ನಡೆದಿದ್ದೆ.
ಮನಸ್ಸು ಪಶ್ಚಾತ್ತಾಪದಿಂದ ಬೇಯುತ್ತಿತ್ತು. ‘ಛೇ! ನನ್ನನ್ನು ಹಿಂಬಾಲಿಸುತ್ತಿದ್ದಾನೆಂದು ನಾನು ಆತನನ್ನು ತಪ್ಪಾಗಿ ತಿಳಿದಿದ್ದೆ, ಪಾಪ, ಆತ ಕೇವಲ ಹಣತೆಗಳಿಗಾಗಿ ಬಂದಿದ್ದ. ಆದರೂ ಆತ ನೋಡಲು ಸುಂದರ, ಚಿಗುರು ಮೀಸೆಯ ಚೆಲುವ. ಕಣ್ಣುಗಳಲ್ಲೇ ನಗುತ್ತಾ ಸೆಳೆಯುವವ. ಈ ಪಂಚೆ,ಶಲ್ಯದಲ್ಲಿ ಎಷ್ಟೊಂದು ಮುದ್ದಾಗಿ ಕಾಣಿಸುತ್ತಿದ್ದಾನೆ’
“ವಿಂಧ್ಯಾ ಅವರೇ, ಗದ್ದೆಯ ಬದುವಲ್ಲಿ ನಡೆಯುವಾಗ ಜೋಪಾನ, ಯಾವುದೋ ಯೋಚನೆಯಲ್ಲಿ ಗದ್ದೆಯಲ್ಲಿ ಬಿದ್ದರೆ, ಆ ಕೆಸರಲ್ಲಿ ನಿಮ್ಮ ಸುಂದರ ಲಂಗದಾವಣಿಯ ಗತಿಯೇನಾಗಬಹುದು!” ಹಿಂದಿನಿಂದ ಕೇಳಿಸಿದ ಆತನ ಧ್ವನಿಗೆ ನಾನು ಯೋಚನೆಯಿಂದ ಹೊರಬಿದ್ದೆ. ‘ಈತನಿಗೆ ನನ್ನ ಬಗ್ಗೆ ಚಿಂತೆ ಇಲ್ಲ, ನನ್ನ ಲಂಗದಾವಣಿಯ ಬಗ್ಗೆ ಚಿಂತೆ’ ಮತ್ತೆ ಆತನ ಮೇಲೆ ಕೋಪ ಬಂದಿತ್ತು. ಆದರೆ ತಿರುಗಿ ನೋಡುವ ಸಾಹಸ ಮಾಡಲಿಲ್ಲ, ಆತನ ಕಣ್ಣುಗಳ ಸೆಳೆತಕ್ಕೆ ಸೋತು ಶರಣಾಗುವೆನೆನ್ನುವ ಭಯ ನನಗೆ.
ಇನ್ನೇನು ದೇವಸ್ಥಾನ ಹತ್ತಿರವಾಗುವಷ್ಟರಲ್ಲಿ ಒಮ್ಮೆಲೇ ಆತ ನನ್ನ ಕೈಹಿಡಿದೆಳೆದು, ನನ್ನನ್ನು ತನ್ನತ್ತ ತಿರುಗಿಸಿಕೊಂಡವನು, “ವಿಂಧ್ಯಾ ಅವರೇ….ನಾನು ವಿಜಯ್ ಅಂತ. ಶ್ರೀರಾಮ ಭಜನಾ ತಂಡದವನು. ನಿಮ್ಮನ್ನು ನಾನು ಪ್ರತೀ ವರ್ಷ ನೋಡ್ತಿದ್ದೀನಿ. ನಿಮ್ಮ ನಗುವಿಗೇ ನಾನು ಯಾವತ್ತೋ ಸೋತು ಹೋದವನು. ನೀವು ಹಾಡೋದನ್ನೂ ಕೇಳಿದ್ದೀನಿ. ನಮ್ಮ ತಂಡದಲ್ಲಿ ನೀವು ಇಂದು ಜೊತೆಯಾಗಿ ಹಾಡಿದ್ರೆ ನನಗೆ ತುಂಬಾ ಖುಷಿ. ನೀವು ಇಲ್ಲಾ ಅನ್ನೋಲ್ಲ ಅನ್ನುವ ನಂಬಿಕೆ.” ಅಂತ ಒಂದೇ ಉಸಿರಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನಲ್ಲಿ ಉಸುರಿದ್ದ. ನನಗೆ ಇವೆಲ್ಲವೂ ಅನಿರೀಕ್ಷಿತವಾಗಿತ್ತು.
ಏನೊಂದೂ ಉತ್ತರಿಸದೇ ಅದೇ ಗುಂಗಲ್ಲಿ ಮುಂದೆ ನಡೆದಿದ್ದೆ. ನನ್ನ ಮೌನದಿಂದ ಆತ ಭಯಪಟ್ಟನೇನೋ ಸುಮ್ಮನಾಗಿದ್ದ. ಕೊನೆಗೂ ದೇವಸ್ಥಾನದ ಚಾವಡಿಯತ್ತ ನಡೆದಿದ್ದೆವು. ನಾನು ದೀಪಗಳನ್ನು ಹಚ್ಚಿಡುವಷ್ಟರಲ್ಲಿ ತಂಡಗಳೂ ಭಜನೆಗೆ ಸನ್ನದ್ಧವಾದವು. ಆತನ ಕಣ್ಣುಗಳೆರಡೂ ನನ್ನ ಪ್ರತಿಯೊಂದು ಚಲನವಲನಗಳನ್ನೂ ವೀಕ್ಷಿಸುತ್ತಲೇ ನನ್ನನ್ನು ಹಿಂಬಾಲಿಸುವುದರ ಅರಿವಾಗುತ್ತಿತ್ತು. ಭಜನೆ ಪ್ರಾರಂಭವಾಗಿತ್ತು. ಆತ ಮೈಕ್ ಹಿಡಿದು ಆಗಲೇ ಕೂತಿದ್ದ. ಗಣಪತಿ ಸ್ತೋತ್ರದೊಂದಿಗೆ ಹಾಡಲು ಶುರು ಮಾಡಿದ್ದ, ಆತನ ಕಂಠಸಿರಿಗೆ ಸೋತ ನಾನು ನನಗರಿವಿಲ್ಲದೇ ಆತನ ಪಕ್ಕ ಕೂತಿದ್ದೆ. ಆತನ ಹಾಡುವ ತಲ್ಲೀನತೆಗೆ ಮನಸೋತವಳು ನಾನೂ ಆತನ ಜತೆ ದನಿಗೂಡಿಸಿದ್ದೆ. ಆತ ಹಾಡುತ್ತಲೇ ನನ್ನನ್ನು ಮೆಚ್ಚುಗೆಯ ದೃಷ್ಟಿಯಿಂದ ನೋಡಿದವನು ಮತ್ತೆ ಉತ್ಸಾಹದಿಂದ ಹಾಡತೊಡಗಿದ್ದ. ನನಗರಿವಿಲ್ಲದೇ ನಾನೂ ಆತನತ್ತ ವಾಲತೊಡಗಿದ್ದೆ. ನಮ್ಮಿಬ್ಬರ ಜೊತೆಗೂಡುವಿಕೆಯಲ್ಲಿ ನಡೆದ ಭಜನಾ ಕಾರ್ಯಕ್ರಮ ಎಲ್ಲರಿಂದ ಮೆಚ್ಚುಗೆಗಳ ಜೊತೆಗೆ ಕರಾತಾಡನಗಳ ಸುರಿಮಳೆ. ಕಣ್ಣಲ್ಲೇ ಆತ ಧನ್ಯವಾದಗಳನ್ನು ಅರ್ಪಿಸಿದ್ದ.
ಬೇರೆ ತಂಡಗಳ ಭಜನಾ ಕಾರ್ಯಕ್ರಮಗಳೂ ಇದ್ದುವು. ಶ್ರೀರಾಮ ಭಜನಾ ತಂಡಕ್ಕೆ ಬೇರೊಂದು ಕಡೆ ತುರ್ತು ಆಹ್ವಾನ ಬಂದುದರಿಂದ ವಾರ ಪೂರ್ತಿ ನಿಲ್ಲುವುದಕ್ಕೆ ಸಾಧ್ಯವಾಗದೇ ಇದ್ದಾಗ, ನಮ್ಮೀರ್ವರ ಹೃದಯಗಳು ಭಾರವಾಗಿದ್ದವು. ಇಬ್ಬರೂ ಕಣ್ಣುಗಳಲ್ಲೇ ಮೌನ ಸಂಭಾಷಣೆಗಳು ನಡೆದು ಒಬ್ಬರನ್ನೊಬ್ಬರು ಬೀಳ್ಕೊಂಡಿದ್ದೆವು. ಇಬ್ಬರಲ್ಲೂ ಅಗಲುವಿಕೆಯ ನೋವಿತ್ತಾದರೂ ಫೋನ್ ನಂಬರ್ ಗಳ ವಿನಿಮಯದಿಂದ ಸಮಾಧಾನವೆನಿಸಿತ್ತು.
ಆಮೇಲಿನ ಭಜನಾ ಕಾರ್ಯಕ್ರಮಗಳಲ್ಲಿ ಯಾವುದರಲ್ಲೂ ನನಗೆ ಆಸಕ್ತಿ ಇರಲಿಲ್ಲ. ಆವತ್ತು ಮೂರನೇ ದಿನ ಅಪ್ಪ ಬಂದಿದ್ದರು. “ವಿಂಧ್ಯಾ…ಇವತ್ತೇ ಹೊರಡು, ಯಾವುದೋ ಒಂದು ಮದುವೆ ಪ್ರಸ್ತಾಪ ಬಂದಿದೆ. ಅದ್ಕೇ ನಾನು ಅರ್ಜೆಂಟಾಗಿ ಬಂದೆ” ನನಗೋ ದಿಗಿಲು. ನಾನಾಗಲೇ ವಿಜಯ್ ಗೆ ಮನಸ್ಸು ಕೊಟ್ಟಾಗಿದೆ. ಈಗ ಬೇರೆ ಮದುವೆಗೆ ಹೇಗೆ ತಾನೇ ಒಪ್ಪಲಿ?” ಮನಸ್ಸು ರೋಧಿಸುತ್ತಿತ್ತು. ಅಪ್ಪನಿಗೆ ಎದುರುತ್ತರ ನೀಡುವ ಧೈರ್ಯ ನನಗಿರಲಿಲ್ಲ. ಮೌನವಾಗಿ ಅಪ್ಪನನ್ನು ಹಿಂಬಾಲಿಸಿದ್ದೆ.

ಫೋಟೋ ಕೃಪೆ :google
ಮನೆಗೆ ಬಂದವಳು ಕೂಡಲೇ ವಿಜಯ್ ಗೆ ಕರೆ ಮಾಡಿದ್ದೆ. ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ.’ ಕೇಳಿದ ನನಗೆ ದಿಕ್ಕೇ ತೋಚಲಿಲ್ಲ. ‘ಬರೀ ವಧು ಪರೀಕ್ಷೆ ತಾನೇ? ಒಪ್ಪಿದ ಮೇಲೆ ತಾನೇ ಮುಂದಿನ ಮಾತುಕತೆ. ಅಷ್ಟರಲ್ಲಿ ವಿಜಯ್ ಗೆ ಕರೆ ಮಾಡಿ ವಿಷಯ ತಿಳಿಸಿ ಅಪ್ಪ ಅಮ್ಮನ ಜೊತೆಗೆ ಮಾತುಕತೆಗೆ ಬರಲು ಹೇಳಿದರಾಯ್ತು.’ ಅಂದುಕೊಳ್ಳುತ್ತಲೇ ಮನಸ್ಸು ನಿರಾಳವಾಗಿತ್ತು.
ಅಂತೂ ಇಂತೂ ವರನ ಕಡೆಯವರು ಬಂದುಬಿಟ್ಟಿದ್ಜರು. ನನಗ್ಯಾವುದರಲ್ಲೂ ಆಸಕ್ತಿಯೇ ಇರಲಿಲ್ಲ. ಯಾಂತ್ರಿಕವಾಗಿ ವಧು ಪರೀಕ್ಷೆ ನಡೆದಿತ್ತು. ನನಗೆ ವರನತ್ತ ನೋಡುವ ಯಾವ ಆಸಕ್ತಿಯೂ ಇರಲಿಲ್ಲ, ತಲೆತಗ್ಗಿಸಿಯೇ ಕೂತಿದ್ದೆ. “ಹುಡುಗಿ ಇನ್ನು ಹೋಗಬಹುದು, ನಮಗೆ ಹುಡುಗಿ ಒಪ್ಪಿಗೆ” ಅಂದಾಗ ತಕ್ಷಣ ರೂಮ್ ಸೇರಿದ್ದೆ. ‘ಅಪ್ಪ ಇನ್ನು ತಡ ಮಾಡಲಾರರು. ಅದಕ್ಕಿಂತ ಮೊದಲು ವಿಜಯ್ ಜೊತೆ ಮಾತಾಡ್ಲೇಬೇಕೂ.’ ಅನ್ನುತ್ತಾ ಮತ್ತೆ ವಿಜಯ್ ನಂಬರ್ ಗೆ ಕರೆ ಮಾಡಲು ಶುರು ಮಾಡಿದ್ದೆ. ರೂಮಿನೊಳಗೇ ಯಾವುದೋ ಫೋನ್ ರಿಂಗಾದಂತಾಗಿತ್ತು. ತಕ್ಷಣ ಅಚ್ಚರಿಗೊಂಡು ಹಿಂದಿರುಗಿ ನೋಡಿದರೆ ವಿಜಯ್ ನಿಂತಿದ್ದರು. ಹುಡುಗ ‘ವಿಜಯ್’ ಅನ್ನೋ ಸತ್ಯ ತಿಳಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ.
ವಿಜಯ್ ಅದೇ ತುಂಟ ನಗೆ ಬೀರುತ್ತಾ ನಿಂತಿದ್ದರು. ಮುನಿಸು ತೋರುತ್ತಲೇ ಅವರೆದೆಗೆ ಪ್ರೀತಿಯಿಂದ ಗುದ್ದುತ್ತಲೇ ಹರವಾದ ಎದೆಯೊಳಗೆ ಮೊಗವಿರಿಸಿ ಬಿಕ್ಕಿದ್ದೆ.
- ಸ್ಮಿತಾ ಬಲ್ಲಾಳ್ (ಅಸ್ಮಿತೆ)
