ಕಾಡು ನೀರವ ಮೌನದಲ್ಲಿದೆ. ಒಂದು ಪ್ರಾಣಿಯ ಸುಳಿವಿಲ್ಲ. ಕಾಡಿನ ನಡು ನಡುವೆ ಚಿಕ್ಕ ಊರುಗಳಿವೆ. ಅಲ್ಲಲ್ಲಿ “ಚಿರತೆಗಳಿವೆ ಹುಷಾರು” ಎಂಬ ಬೋರ್ಡ್ ಹಾಕಿದ್ದು ನಿಜ. ನಂದಿ ಮಾತ್ರ ಕಾಡನ್ನು ಸೀಳಿಕೊಂಡು “ಕಾಟಕುಟ” ಎಂಬ ಊರಿಗೆ ಬಂದ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಇವತ್ತಿನ ದಿನ ನರ್ಮದೆಯಲ್ಲಿ ಸ್ನಾನ , ಪೂಜೆ ಮುಗಿದ ಮೇಲೆ ಸಂಪೂರ್ಣ ದಿನ ಮಹೇಶ್ವರದ ವಿಶಿಷ್ಟ ಸ್ಥಳಗಳು ನನ್ನ ಹಿಡಿದಿಟ್ಟಿದ್ದವು. ಮನಸ್ಸು ಮಹೇಶ್ವರ ಬಿಟ್ಟು ಹೊರಡಲು ಅಣಿಯಾಗಲಿಲ್ಲ. ಇಲ್ಲಿನ ಘಾಟ್’ಗಳ ಧನಾತ್ಮಕ ಶಕ್ತಿ ನನ್ನ ಬಂಧಿಯಾಗಿಸಿತ್ತು. ನದಿಯ ಮೋಹಕ ದೃಶ್ಯ.. ಅನನ್ಯ ಆನಂದ ನೀಡುವ ರಸಾಯನ.



ಬೆಳಿಗ್ಗೆ 5 ಗಂಟೆಗೆ ಮೈ ಗಡ ಗಡ ನಡುಗಿಸುವ ಚಳಿ. ಆದರೂ ನದಿಯ ನೀರು ಬೆಚ್ಚಗೆ ಇರುತ್ತವೆ. ನದಿ ಸ್ನಾನ ಹಿತಕರ, ಆದರೆ ನೀರಿನಿಂದ ಹೊರಬಂದರೆ ಇನ್ನಷ್ಟೂ ಹೆಚ್ಚಾಗುವ ಚಳಿಗಾಳಿ. ನದಿ ಸ್ನಾನ ಮುಗಿಸಿ ಮತ್ತೆ ಹಾಸಿಗೆಗೆ ಓಡಿ ಬಂದು ಚಾದರ ಹೊದ್ದು ಕೂತೆ.
ಚುಮು..ಚುಮು.. ಬೆಳಕು ಹರಿಯುತ್ತಿದ್ದಂತೆ ನರ್ಮದೆಯಂತೆ ನನಗೆ ಊಟ ಕೊಟ್ಟು ಅನ್ನಪೂರ್ಣೆಯಾಗಿದ್ದ ತಾಯಿ ಚಹಾ ತಂದು ಕೊಟ್ಟಳು. ಅವಳ ಗಂಡ ಗೋಸ್ವಾಮಿ ರಮೇಶಗಿರಿ ಬಾಬಾ ಅಂತ. ಅವರು ಬಿಸಿ ನೀರು ತಂದು ಕೊಡುವುದು, ದೇಖರೇಖಿ ಮಾಡುತ್ತಿದ್ದರು.
ಮುಂದೆ ಹೊರಡಲು ಅಣಿಯಾಗುತ್ತಿದ್ದಾಗ.. ಮತ್ತದೆ ತಾಯಿ ಒಂದಿಷ್ಟು ಆಲೂ ಬೋಂಡಾ, ಲಡ್ಡು, ಜಿಲೇಬಿ ತಂದು ಕೊಟ್ಟರು. ಅವರ ಏನೂ ಬಯಸದೆ ಎದೆ ತುಂಬಾ ಪ್ರೀತಿ ತುಂಬಿಕೊಂಡು ಸೇವೆ ಮಾಡುತ್ತಿದ್ದರು. ಮಹೇಶ್ವರ ಬಿಟ್ಟಾಗ ಬೆಳಿಗ್ಗೆ 11 ಗಂಟೆಯಾಗಿತ್ತು. ಮಂಡಲಾ ಊರಿನತ್ತ ಹೊರಟೆ.. ಮಧ್ಯದಲ್ಲಿ “ಲಾಡವಿ” ಎಂಬ ಊರು ಬಂತು. ಅಲ್ಲಿ “ಹೋಮ ಥೆರಪಿ ಗೋಶಾಲಾ” ಎಂಬ ಕೇಂದ್ರವಿದ್ದು ಅಲ್ಲಿ “ಅಗ್ನಿಹೋತ್ರ”ದ ಬಗ್ಗೆ ಅಧ್ಯಯನ, ಸಂಶೋಧನೆ ಮತ್ತು ಟ್ರೇನಿಂಗ್ ನೀಡುವರು. ಅಲ್ಲಿ ಒಂದಿಷ್ಟು ಮಾಹಿತಿ ಪಡೆದು ಮುಂದುವರದೆ.
ನಾನು ಮಂಡಲಾ ದಾಟಿ ಮುಂದೆ ಬರುತ್ತಿದ್ದಾಗ ಗಮನಿಸುತ್ತಿದ್ದೆ.. ಇಲ್ಲಿನ ಚಿಕ್ಕ ಹೋಟೆಲುಗಳನ್ನ ಹಿಡಿದು ಬೃಹತ್ ರೆಸ್ಟೋರೆಂಟ್’ಗಳು ನರ್ಮದಾ ಪರಿಕ್ರಮ ಯಾತ್ರಿಗಳಿಗೆ ಉಚಿತ ಚಹಾ ಮತ್ತು ಉಪಹಾರದ ವ್ಯವಸ್ಥೆ ಮಾಡಿದ್ದರು. ಇನ್ನೂ 5 ರಿಂದ 8 ಕಿ.ಮೀ ಒಂದರಂತೆ ಆಶ್ರಮಗಳು, ಊರಿನ ಜನರು, ಕೆಲವು ಸಂಘಟನೆಗಳು ಊಟ, ನೀರಿನ ವ್ಯವಸ್ಥೆ ಮಾಡಿದ್ದರು.
ಇವರೆಲ್ಲರ ಈ ಸೇವೆ ವರ್ಷದ 8 ತಿಂಗಳು ಜಾರಿಯಲ್ಲಿರುತ್ತೆ. ಇವರೆಲ್ಲರದು ನರ್ಮದಾ ದೇವಿಯ ಸೇವೆ. “ನರ್ಮದೆ ಹರ್”ಎಂದು ಹೋಗುವ ಪ್ರತಿಯೊಬ್ಬರಿಗೂ ಸಂಪೂರ್ಣ ವ್ಯವಸ್ಥೆ ಮತ್ತು ಕಾಳಜಿಯಿಂದ ಇಲ್ಲಿನ ಜನರು ನೋಡಿಕೊಳ್ಳುವರು.
ಎರಡು ದಿನದಿಂದ ಸಂಪೂರ್ಣ ವಿಶ್ರಾಂತಿಯಲ್ಲಿದ್ದ ನಂದಿ ಮತ್ತೆ ರೋಡಿನಲ್ಲಿ ತನ್ನ ಓಟದ ವೇಗ ಹೆಚ್ಚಿಸಿಕೊಂಡು “ಬಡವಾಹ” ಎಂಬ ಊರಿಗೆ ಬಂದು ನಿಂತ. ನಾಳೆ “ಸೀತಾ ವನ”ದತ್ತ ಹೊರಡಬೇಕು. ‘ಬಡವಾಹ”ದಿಂದ ಬೆಳಿಗ್ಗೆ ಎದ್ದದ್ದು ತಡವಾಯಿತು.. ಅಲ್ಲಿ ಬೆಚ್ಚಗೆ ಕೋಣೆ ಸಿಕ್ಕಿದ್ದರಿಂದ 7 ಕ್ಕೆ ಎದ್ದು ಹೊರಡುವಾಗ ಸಮಯ 9 ಆಯಿತು.

ಇಲ್ಲಿಂದ ಕಾಡು ಶುರುವಾಯಿತು.. ನಾವು ಊರು ಬಿಡುವಾಗಲೆ ಜನ “ಹುಷಾರಾಗಿ ಹೋಗಿ.. ಚಿರತೆಗಳ ಹಾವಳಿ ಹೆಚ್ಚಿದೆ. ಮೊನ್ನೆ ಬಡವಾಹದ ಹೊರವಲಯದಲ್ಲಿ ಕಂಡಿವೆ” ಎಂದರು.
ಸರಿ ಎಂದು ಸ್ವಲ್ಪ ಅಳುಕಿನಲ್ಲಿಯೆ ಕಾಡಿನಲ್ಲಿ ಹಾದುಹೋಗಿದ್ದ ರಸ್ತೆಯ ಮೇಲೆ “ನಂದಿ”ಯನ್ನು ಓಡಿಸತೊಡಗಿದೆ.
ಕಾಡು ನೀರವ ಮೌನದಲ್ಲಿದೆ. ಒಂದು ಪ್ರಾಣಿಯ ಸುಳಿವಿಲ್ಲ. ಕಾಡಿನ ನಡು ನಡುವೆ ಚಿಕ್ಕ ಊರುಗಳಿವೆ. ಅಲ್ಲಲ್ಲಿ “ಚಿರತೆಗಳಿವೆ ಹುಷಾರು” ಎಂಬ ಬೋರ್ಡ್ ಹಾಕಿದ್ದು ನಿಜ. ನಂದಿ ಮಾತ್ರ ಕಾಡನ್ನು ಸೀಳಿಕೊಂಡು “ಕಾಟಕುಟ” ಎಂಬ ಊರಿಗೆ ಬಂದ.
ಸುಮಾರು 18 ಕಿ.ಮೀ ಕ್ರಮಿಸಿದ ನಂತರ ಮತ್ತೊಂದು ಕಾಡು ಸಿಗುವುದಿತ್ತು.
“ಕಾಟಕುಟ”ದಲ್ಲಿ ಟೀ ಕುಡಿದು.. ಮತ್ತೊಂದು ಕಾಡನ್ನು ದಾಟುವುದಿತ್ತು. ಅದುವೆ “ಸಿತಾವನ”.

ಅಗಸನ ಮಾತಿನಿಂದ ಘಾಸಿಗೆಗೆ ಒಳಗಾದ ರಾಮ.. ಸೀತೆಯನ್ನು ಕಾಡಿಗೆ ಬಿಟ್ಟಿದ್ದು “ಇದೇ ಕಾಡಂತೆ” ಅದಕ್ಕೆ ಸೀತಾವನ ಎಂಬ ಹೆಸರು. ಇದು ಸುಮಾರು 8 ಕಿ. ಮೀ ಇದೆ.
ಸೀತಾವನ ಘನವಾದ ಕಾಡಲ್ಲ. ಬೋಳು ಮರ ಹೊಂದಿದ ಕಾಡು. ಸುಮಾರು ಕಡೆ ಒಂದೇ ಜಾತಿಯ ಮರಗಳು ಹೇರಳವಾಗಿವೆ. ಕಾಡಿನಲ್ಲಿ “ಮಂಗ”, ನವಿಲು ಹೊರತುಪಡಿಸಿ ಬೇರೆ ಪ್ರಾಣಿಗಳ ಸುಳಿವಿಲ್ಲ. ಕಾಡಿನಿಂದ ಹೊರಗೆ ಬಂದ ತಕ್ಷಣ “ವಾಲ್ಮೀಕಿ ಮಹರ್ಷಿ ಆಶ್ರಮ”ವಿದೆ.
ವಾಲ್ಮೀಕಿ ಮಹರ್ಷಿ ಆಶ್ರಮದಲ್ಲಿಯೇ ಸೀತೆ.. ಲವ ಕುಶ ರಿಗೆ ಜನ್ಮ ನೀಡಿದ್ದು. ಇದಕ್ಕೆ ಸೀತಾ ದೇವಸ್ಥಾನ , ಲವ ಕುಶ ಜನ್ಮಸ್ಥಳ ಎಂದು ಸಾಮಾನ್ಯವಾಗಿ ಕರೆಯುವರು. ವಾಲ್ಮೀಕಿ ಮಹರ್ಷಿ ಆಶ್ರಮ ದಾಟಿ 8 ಕಿ.ಮೀ ಮುಂದೆ ಹೋದರೆ. ಘನವಾದ “ಲಕ್ಕಡಕೋಟ್” ಜಂಗಲ್ ಸಿಗುವುದಿತ್ತು. ಇನ್ನೂ ಸಮಯವಿದ್ದರಿಂದ ಸಂಜೆ 4 ಗಂಟೆಗೆ ಲಕ್ಕಡಕೋಟ್ ಜಂಗಲ್’ಗೆ ನಂದಿಯನ್ನು ನುಗ್ಗಿಸಿದೆ.
ಆಮೇಲೆ ತಿಳಿಯಿತು.. ಈ ಜಂಗಲ್’ನಲ್ಲಿ ರಸ್ತೆಯೇ ಇಲ್ಲದ ಪರಿಸ್ಥಿತಿ. ಅಲ್ಲದೆ ಈ ಕಾಡಿನ ಉದ್ದ 32 ಕಿ.ಮೀ. ದೊಡ್ಡ ದೊಡ್ಡ ಬೆಂಚು ಕಲ್ಲುಗಳು ಹರಡಿದ್ದ ಕಾಲುದಾರಿಯದು. ಸುತ್ತಲೂ ಗವ್ವ ಎನ್ನುವ ಕಾಡು. ಅಲ್ಲಲ್ಲಿ ಪ್ರಾಣಿಗಳ ಕೂಗು.

ನರಿ, ನವಿಲು, ಮಂಗ, ಕೆಲವು ಪಕ್ಷಿಗಳು ಮಾತ್ರ ದರ್ಶನಕ್ಕೆ ಸಿಕ್ಕವು. ನಂದಿ ಈ ರಸ್ತೆಯಲ್ಲಿ ಓಡಲಾರ. ನೂಕಿಕೊಂಡು ಹೊರಟೆ. ದಾರಿಯೆ ಸಾಗದು. ಕಾಡಿನ ಮಧ್ಯದಲ್ಲಿ ಕೆಲವು ನೀರಿನ ತೋರೆಗಳು ಹಾದು ಹೋಗಿವೆ. ಕಡಿದಾದ ಇಳಿಜಾರು ಇಳಿದು, ತೊರೆ ದಾಟಿ, ಏರು ಏರಿ ಮುಂದೆ ನಡೆಯಬೇಕಿತ್ತು. ಹೀಗೆಯೇ ಸುಮಾರು 5 ತೊರೆಗಳನ್ನು ದಾಟಿದ ನಂತರ ಮೈ ಹಣ್ಣು ಹಣ್ಣಾಗಿತ್ತು. ಸೂರ್ಯನು ತನ್ನ ನಿತ್ಯದ ಕೆಲಸ ಮುಗಿಸಿ ಹೊರಡುತ್ತಿದ್ದ.
ಸಂಜೆ ಕತ್ತಲು ಕವಿಯುವ ಮುಂಚೆಯೇ ಕಾಡಿನ ಮಧ್ಯದ “ಜಯಂತಿ ಮಾತಾ” ಮಂದಿರಕ್ಕೆ ಬಂದಿಳಿದೆ. ಕಾಡಿನ ಮಧ್ಯದ ಶಾಂತ ವಾತಾವರಣದಲ್ಲಿ ಜಯಂತಿ ಮಾತಾ ಮಂದಿರವಿದೆ.
ಇಲ್ಲಿಯೇ ರಾತ್ರಿ ಭೋಜನ ಮುಗಿಸಿ, ಮಲಗಿದಾಗ “ಕಾಡಿನ ಕೀಟಗಳ ಸದ್ದು ಜೋರಾಗಿತ್ತು ಇನ್ನೂ ನರಿಯ ಕೂಗು ಸುಮಾರು ಹೊತ್ತು ಕೇಳಿ ಬರುತ್ತಿತ್ತು. ನಿದ್ದೆಗೆ ಜಾರಿದ್ದೆ ತಿಳಿಯಲಿಲ್ಲ.
ಬೆಳಿಗ್ಗೆ 5 ಕ್ಕೆ ಎದ್ದಾಗ ವಿಪರೀತ ಚಳಿ. ಬೇಗನೇ ಲಕ್ಕಡಕೋಟ್ ಜಂಗಲ್ ದಾಟುವ ಅಂತ ಮತ್ತದೆ ಕಾಲುದಾರಿಯಲ್ಲಿ ನಂದಿ ನಡೆಯತೊಡಗಿದ.
ಇಡೀ ಕಾಡಿನ ತುಂಬಾ ಎಲ್ಲೂ ಕುಡಿಯುವ ನೀರಿನ ತೊರೆಗಳಿಲ್ಲ. ಕಾಡಿನ ಮಧ್ಯದಲ್ಲಿನ “ಕೈ ಬೋರು”ಸಹ ಕೆಟ್ಟು ಸಪ್ಪೆ ಮೋರೆ ಹಾಕಿಕೊಂಡು ನಿಂತಿತ್ತು. ಮೊದಲೇ ನನ್ನ ಜೊತೆ 4 ಲೀಟರ್ ನೀರು ಸಂಗ್ರಹಿಸಿಕೊಂಡಿದ್ದೆ. ಮತ್ತದೇ ಘನವಾದ ಕಾಡು, ಒತ್ತಾಗಿ ಬೆಳೆದು ನಿಂತ ಮರಗಳು, ಪ್ರಾಣಿಗಳ ಕೂಗು.. ಎದೆ ನಡುಗುವಂತ ದುರ್ಗಮ ದಾರಿ.

ಹೆಬ್ಬಾವಿನಂತೆ ಬಿದ್ದ ನಡೆಯಲು ದುಸ್ತರವಾದ ಕಾಲುದಾರಿ ಬಳಸಿಕೊಂಡು ಬೆಳಗಿನ 6,:30 ರಿಂದ 10:30 ರ ತನಕ ಏರು, ಇಳಿವು ಪಾರಾಗಿ, ಮೈ ತೊಯಿಸಿಕೊಂಡು, ನಂದಿಯನ್ನು ನುಗ್ಗೆಬ್ಬಿಸಿ ಕಾಡಿನಿಂದ ಹೊರಗೆ ಬಂದೆ. ಅಬ್ಬಬ್ಬಾ..!! ಅನಿಸಿದ ಕಾಡಿದು. ದುರ್ಗಮ ದಾರಿಯಂತು ಹೌದು. ಲಕ್ಕಡಕೋಟ್ ಜಂಗಲ್ ದಾಟಿದಾಗ ರಸ್ತೆ ಸಿಕ್ಕ ಹುರುಪಿಗೆ ನಂದಿ” 14ಕಿ.ಮೀ ದೂರದವರೆಗೂ ನಿಲ್ಲದೆ ಓಡಿದ.
ಅಲ್ಲಿ ಸಿಕ್ಕಿದ್ದು “ಧರ್ಮೇಶ್ವರ” ಎಂಬ ಊರು. ಸಿದ್ಧಿ ಕ್ಷೇತ್ರ. ಅಲ್ಲಿಯೇ ಮಧ್ಯಾಹ್ನದ ಭೋಜನ ಮುಗಿಸಿ…. ನಂದಿಯನ್ನು ತಾಯಿ ನರ್ಮದೆಯ ತಟದಲ್ಲಿ ಹಾದುಹೋಗಿದ್ದ ರಸ್ತೆಯಲ್ಲಿ ಓಡಿಸತೊಡಗಿದೆ.
ಧರ್ಮರೇಶ್ವರದಿಂದ ಸುಮಾರು 15 ಕಿ. ಮೀ ದೂರದಲ್ಲಿ “ಪುನಾಸಾ ಅಣೆಕಟ್ಪಿನ ಹಿನ್ನೀರು ತುಂಬಿಕೊಂಡಿದೆ. ಅದನ್ನು ದೋಣಿಯಲ್ಲಿ ದಾಟಿ.. ಕಲ್ಲು, ಮರಳು, ಮಣ್ಣು ಮಿಶ್ರಿತ ರಸ್ತೆಯಲ್ಲಿ “ನಂದಿಯನ್ನು ಓಡಿಸಿದೆ. ನಂದಿ ರಸ್ತೆಯಲ್ಲಿ ಹುಲಿ, ಇಂತಹ ರಸ್ತೆಗಳಲ್ಲಿ ಇಲಿ. ಕಚ್ಚಾ ರೋಡಿನಲ್ಲಿಯೇ ಒಟ್ಟು 48 ಕಿ.ಮೀ ವರೆಗೂ ಕ್ರಮಿಸಿದ್ದಾಯಿತು. ಬರುವಾಗ ಹಲವು ಮನೆಗಳಲ್ಲಿ ಚಹಾ, ಉಪಾಹಾರಕ್ಕೆ ಕರೆದರು. ಆದರೂ 3 ಮನೆಗಳಲ್ಲಿ ಬಿಸ್ಕೇಟ್ ತಿಂದು ಚಹಾ ಕುಡಿದೆ. ಚಿಕ್ಕವರು ದೊಡ್ಡವರು ರಸ್ತೆ ಬದಿಗೆ ನಿಂತು…..”ನರ್ಮದೆ ಹರ್!! ಎಂಬ ಘೋಷಣೆಯೊಂದಿಗೆ ಕೈ ಮುಗಿಯುವುದು ಅವರಲ್ಲಿನ ಭಕ್ತಿ ಭಾವನೆ ಅರ್ಥವಾಗುತ್ತೆ. ತುಂಬಾ ಸಮಯ ಇಲ್ಲಿಯೇ ಕಳೆದರೆ ಮುಂದಿನ ಪಯಣಕ್ಕೆ ಸಮಸ್ಯೆ ಎಂದು, ಕಣ್ಣಲ್ಲಿ ಬೆಳಕಿರುವಾಗಲೆ ” ನೇಮಾವರ” ಎಂಬಲ್ಲಿಗೆ ಬಂದೆ.

ನೇಮಾವರವನ್ನು “ನರ್ಮದಾ ದೇವಿಯ” ನಾಭಿ ಸ್ಥಳ ಎಂದು ಕರೆಯುವರು. ಸಂಪೂರ್ಣ ನದಿಯನ್ನು “ನರ್ಮದಾ ದೇವಿ”ಯಾದರೆ ನೇಮಾವರ ನಾಭಿ ಸ್ಥಳ. ಇಲ್ಲಿ ನಾಭಿ ಕುಂಡ ಸಹ ಇದೆ.
ಇವಾಗ “ದಂಡಿ ಸ್ವಾಮಿ ದೇವಸ್ಥಾನ”ದಲ್ಲಿ ಉಳಿದುಕೊಂಡೆ. ನಾಳೆ ಇಲ್ಲಿನ ಸ್ಥಳಗಳನ್ನು ನೋಡುವುದು ಬಾಕಿ ಇದೆ.
ನರ್ಮದೇ ಹರ್!!
ಮುಂದಿನ ಪಯಣ ನಾಳೆಗೆ.
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೬)
- ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
