ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಅಮೂಲ್ಯ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುತ್ತಿರುವ ಇಂತಹ ಜನರ ನಡೆ ನಿಜಕ್ಕೂ ಶಿಕ್ಷಾರ್ಹ ಅಪರಾಧ…ಆತ್ಮಹತ್ಯೆ ಎಂಬುದು ನಿಜವಾಗಿಯೂ ದುಷ್ಕೃತ್ಯ ವೇ ಸರಿ. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ಆತ್ಮಹತ್ಯೆ ಎಂಬ ದುಷ್ಕೃತ್ಯ, ತಪ್ಪದೆ ಮುಂದೆ ಓದಿ…
ಆತ್ಮಹತ್ಯೆ ಎಂಬ ವಿಷಯ ನಿಜಕ್ಕೂ ಗಂಭೀರವಾದದ್ದು. ವ್ಯಕ್ತಿಯೊಬ್ಬನಲ್ಲಿ ನಕಾರಾತ್ಮಕ ಚಿಂತನೆ, ಹತಾಶೆ, ನೋವು, ಖಿನ್ನತೆ ಉಂಟಾದಾಗ ತನಗೆ ತಾನೇ ಕೊಟ್ಟುಕೊಳ್ಳುವ ಶಿಕ್ಷೆ. ತನ್ನಲ್ಲಿರುವ ಜೀವ ಚೈತನ್ಯವನ್ನು ಬಲವಂತವಾಗಿ ತಾನಾಗಿಯೇ ಕೊನೆಗಾಣಿಸುವುದು…ಎಂತಹ ವಿಪರ್ಯಾಸ ನೋಡಿ….. ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಹೊತ್ತು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೆತ್ತು ಸಾಕಿ ಸಲಹಿ ಜೋಪಾನ ಮಾಡಿದ ಅಮ್ಮನ ತ್ಯಾಗ ಜೀವನಕ್ಕೆ ಇಷ್ಟೇನಾ ಬೆಲೆ…. ಹಾಗಾದರೆ. ತಮ್ಮ ಆತ್ಮವನ್ನು ತಾವೇ ಹತ್ಯೆ ಮಾಡಿಕೊಳ್ಳುವುದೆಂದರೆ ಅದೆಂತಹ ಹೇಯ ಕೃತ್ಯ….. ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪ ಗಳಿರಾ …ಎಂದ ದಾಸರ ನುಡಿಗಳಲ್ಲಿ… ಅದೆಂತಹ ಮಾರ್ಮಿಕ ತತ್ವ ಅಡಗಿದೆ. ಇತ್ತೀಚಿನ ಯುವ ಜನಾಂಗದವರಲ್ಲಿ ಇದೊಂದು ರೀತಿಯ ಮೇನಿಯಾ ಆಗಿ ಪರಿಣಮಿಸಿದೆ….ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಅಮೂಲ್ಯ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುತ್ತಿರುವ ಇಂತಹ ಜನರ ನಡೆ ನಿಜಕ್ಕೂ ಶಿಕ್ಷಾರ್ಹ ಅಪರಾಧ…ಆತ್ಮಹತ್ಯೆ ಎಂಬುದು ನಿಜವಾಗಿಯೂ ದುಷ್ಕೃತ್ಯ ವೇ ಸರಿ… ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವ ತನ್ನ ಜೀವನವನ್ನು ತನ್ನ ಕೈಯಾರೆ ಹಾಳು ಮಾಡಿ ಕೊಳ್ಳುವ ಹುಂಬತನಕ್ಕೆ ಏನನ್ನಬೇಕು….. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆ ಬಂದ ಆ ದುರ್ಬಲ ಕ್ಷಣದಲ್ಲಿ ಕೊಂಚ ತಾಳ್ಮೆ ವಹಿಸಿದರೂ ಸಾಕು… ಸಾವಿನ ದವಡೆಯಿಂದ ಪಾರಾಗಬಹುದು…. ದಿನನಿತ್ಯದ ಬದುಕಿನಲ್ಲಿ ಹಲವಾರು ಆತ್ಮಹತ್ಯೆ ಯ ಪ್ರಕರಣಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ… ಇಂದು ಬೆಳಿಗ್ಗೆ ದಿನ ಪತ್ರಿಕೆ ತಿರುವಿ ಹಾಕುತ್ತಿದ್ದಾಗ ….ಮಾಜಿ ಮಿಸ್ ಅಮೇರಿಕಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ…. ಎಂದಿತ್ತು… ಅದನ್ನು ವಿವರವಾಗಿ ಓದಿದಾಗ ಆಕೆಯ ಆತ್ಮಹತ್ಯೆ ಗೆ ಕಾರಣ ಜೀವನದಲ್ಲಿ ಜಿಗುಪ್ಸೆ ಎಂದು ಕುಟುಂಬ ವರ್ಗದವರು ತಿಳಿಸಿರುವುದಾಗಿ ಪೊಲೀಸರ ಹೇಳಿಕೆ…ಕೇವಲ ಮೂವತ್ತರ ವಯಸ್ಸಿನ ಚೆಲುವೆ ….ಅಂದಗಾತಿ.. ಚೆಸ್ಲಿ ಕ್ರಿಸ್ಟ್ 2019 ರಲ್ಲಿ ಮಿಸ್ ಯು. ಎಸ್. ಎ. ಆಗಿ ರತ್ನ ಖಚಿತ ಕಿರೀಟವನ್ನು ಮುಡಿಗೇರಿಸಿಕೊಂಡವರು.. ಅವರಿಗೆ ಅಂದ, ಐಶ್ವರ್ಯ. ಆಸ್ತಿ, ಅಂತಸ್ತು ಎಲ್ಲವೂ ಇತ್ತು… ಆದರೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ತಾಳ್ಮೆ ಇಲ್ಲವಾಯಿತು.ಹಣ ಕಾಸಿಗೇನೂ ಕೊರತೆ ಇಲ್ಲ… ಆದರೂ ಜೀವನದಲ್ಲಿ ಖಿನ್ನತೆ… ಜಿಗುಪ್ಸೆ…. ಇಂದಿನ ಯುವ ಜನತೆಗೆ ಎಲ್ಲವೂ ಕ್ಷಣಾರ್ಧದಲ್ಲಿ ದಕ್ಕಬೇಕು…. ಹಾಗಿದ್ದರೆ ಮಾತ್ರ ಜೀವನ… ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ…. ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವ ಸಹನೆ ಇಲ್ಲದಿರುವುದೇ ಇಂತಹ ದುಷ್ಕೃತ್ಯ ಕ್ಕೆ ಕಾರಣ ಎಂದು ಹೇಳಬಹುದು…

ಫೋಟೋ ಕೃಪೆ : GOOGLE
ನಾಲ್ಕೈದು ವರ್ಷಗಳ ಹಿಂದೆ ನಮ್ಮ ಪಕ್ಕದ ಮನೆಯಲ್ಲಿ ನಡೆದ ಒಂದು ಘಟನೆ.ಪಿ.ಯು.ಸಿ.ಯಲ್ಲಿ ಕ್ಲಾಸ್ ಮೇಟ್ಸ್ ಆಗಿದ್ದ ಇಬ್ಬರು ಪ್ರೇಮಿಗಳು… ವಾರ್ಷಿಕ ಪರೀಕ್ಷೆ ಮುಗಿದ ನಂತರ ಮನೆಯಲ್ಲಿ ಮದುವೆಗೆ ಒಪ್ಪದ ಕಾರಣ… ಇಬ್ಬರೂ ಒಂದೇ ಸಮಯಕ್ಕೆ ವಿಷ ಕುಡಿದು ಸಾಯಬೇಕೆಂದು ತೀರ್ಮಾನಿಸಿ…ಸಂಜೆ ಮೊಬೈಲ್ ನಲ್ಲಿ ಮಾತಾಡಿಕೊಂಡು ಅವರವರ ಮನೆಗಳಲ್ಲಿ ರಾತ್ರಿ ವಿಷ ಕುಡಿದಿದ್ದಾರೆ… ಹುಡುಗನ ಮನೆಯಲ್ಲಿ ಕೂಡಲೇ ನೋಡಿಕೊಂಡು ಆಸ್ಪತ್ರೆಗೆ ಸೇರಿಸಿದ್ದರಿಂದ ಹುಡುಗನ ಪ್ರಾಣ ಉಳಿಯಿತು… ಆದರೆ ಹುಡುಗಿ ಇದ್ದಿದ್ದು ಆಕೆಯ ಸೋದರತ್ತೆ ಮನೆಯಲ್ಲಿ… ಹಳ್ಳಿಯಲ್ಲಿ…ಮನೆಯಲ್ಲಿ ಯಾರೂ ಗಂಡಸರಿಲ್ಲ… ಅಷ್ಟು ಸರಿರಾತ್ರಿಯಲ್ಲಿ ಒಬ್ಬಂಟಿ ಹೆಂಗಸು ಪಕ್ಕದ ಮನೆಯವರ ಸಹಾಯದಿಂದ… ಆಕೆಯನ್ನು ಆಸ್ಪತ್ರೆಗೆ ಕರೆತರುವ ವೇಳೆಗೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು… ಎಂತಹ ದುರಂತ ಅಂತ್ಯ ನೋಡಿ….. ನೂರಾರು ವರ್ಷ ಬದುಕಿ ಬಾಳಬೇಕಾದ ಎಳೆಯ ಜೀವವೊಂದು ಅರಳುವ ಮುನ್ನವೇ ಮುದುಡಿ ಹೋಗುತ್ತದೆ….
ತೀರಾ ಇತ್ತೀಚೆಗೆ… ಅಂದರೆ ಹಿಂದಿನ ವಾರವಷ್ಟೇ ನಡೆದ ಘಟನೆಯೊಂದು ನೆನಪಾಗುತ್ತಿದೆ…
ನಮ್ಮ ಶಾಲೆಯಲ್ಲಿ ಹಿಂದಿನ ವಾರ ಎಸ್. ಎಸ್. ಎಲ್. ಸಿ. ಮಕ್ಕಳಿಗೆ ಜಿಲ್ಲಾ ಹಂತದ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದೆವು.. ದಿವ್ಯಾ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ… ಮೊದಲ ದಿನ ಪರೀಕ್ಷೆಗೆ ಹಾಜರಾಗಿದ್ದಳು.. ಎರಡನೇ ಮತ್ತು ಮೂರನೇ ದಿನ ಗೈರು ಹಾಜರಾದಳು..ಏಕಿರಬಹುದು ಎಂದು ಅವಳನ್ನು ಕರೆದು ವಿಚಾರಿಸಿದಾಗ ಅವಳ ಕಥೆ ಕೇಳಿ ಕಣ್ಣಂಚು ತೇವವಾಯಿತು..
ಅವಳ ತಂದೆ ಗೋಪಾಲಪ್ಪ… ರೈತನಾಗಿದ್ದು… ಜವಾಬ್ದಾರಿ ಇಲ್ಲದ… ಬಹಳ ಸೋಮಾರಿಯಾದ ವ್ಯಕ್ತಿಯಾಗಿರುತ್ತಾನೆ…ಮೂರೂ ಹೊತ್ತು ಇಸ್ಪೀಟ್ ಆಟ ಆಡಿ… ಕುಡಿದು ತೂರಾಡುತ್ತಾ… ಹೆಂಡತಿಯನ್ನು ಹೊಡೆದು ಬಡಿದು ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ… ಅಷ್ಟೇ ಅಲ್ಲದೆ ಮೈ ತುಂಬಾ ಸಾಲ ಮಾಡಿಕೊಂಡು ಸಾಲ ಕೊಟ್ಟವರು ಬಂದು ಕೇಳಿದಾಗ…. ಒಂದು ತಿಂಗಳ ಮಟ್ಟಿಗೆ ತಲೆಮರೆಸಿಕೊಂಡು ( ಅಬ್ಸ್ಕಾಂಡ್) ನಂತರ ಮನೆಗೆ ಬಂದು ಇದ್ದಕ್ಕಿದ್ದಂತೆ ವಿಷ ಕುಡಿದು ಆತ್ಮಹತ್ಯೆ ಮಾಡಿ ಕೊಳ್ಳುತ್ತಾನೆ… ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳನ್ನು ಸಾಕಿ ಸಲಹುವ… ಅವರ ಜೀವನ ರೂಪಿಸುವ ಮಹತ್ವದ ಜವಾಬ್ದಾರಿ ಆಕೆಯ ತಾಯಿಯದ್ದಾಗಿದೆ…..ಇಂತಹ ಬೇಜವಾಬ್ದಾರಿ ತಂದೆಯಿಂದ ಆ ಕುಟುಂಬ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ…. ???

ಫೋಟೋ ಕೃಪೆ : GOOGLE
ತೀರಾ ಹತ್ತಿರದ ಸಂಬಂಧಿಕರಲ್ಲಿ ಇತ್ತೀಚೆಗೆ ನಡೆದ ಒಂದು ಆತ್ಮಹತ್ಯೆ ಘಟನೆ ಮನ ಕಲಕುತ್ತದೆ…..
ನಂದನ ತುಂಬಾ ಚಂದದ ಮನಮೋಹಕ ಬೆಡಗಿ ಹಾಗೂ ಸೂಕ್ಷ್ಮ ಮನಸ್ಸಿನ ಮುಗ್ಧ ಯುವತಿ… ಪದವಿ ಮುಗಿಸಿದ ಮಗಳಿಗೆ ತಕ್ಕ ವರನನ್ನು ಹುಡುಕಿ ಮದುವೆ ಮಾಡಿ ತಂದೆ ರಂಗಪ್ಪ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ…. ನಂದನಾಳಾ ಗಂಡ ಸುಮಂತ್ ….ಸ್ಫುರದ್ರೂಪಿ ಯುವಕ… ಒಳ್ಳೆಯವನೇ…ನಂದನಾಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಅತ್ತೆ ಇಲ್ಲದ ಮನೆ… ಗಂಡ ಕೆಲಸಕ್ಕೆ ತೆರಳಿದ ನಂತರ ಮನೆಯಲ್ಲಿ ಮಾವ ಸೊಸೆ ಇಬ್ಬರೇ…. ಅತ್ಯಂತ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಮಾವನ ಬಗ್ಗೆ ನಂದನಾಗೆ ಅತೀವ ಗೌರವ…ಆದರೆ ಅದೇಕೋ… ಇತ್ತೀಚೆಗೆ ಮಾವನ ನಡವಳಿಕೆ ಅಸಂಬದ್ಧವಾಗಿತ್ತು. ಅನಾವಶ್ಯಕವಾಗಿ ಆಕೆಗೆ ಮೈ ಕೈ ತಾಕಿಸಿ ಮಾತನಾಡುತ್ತಿದ್ದ ಅನುಚಿತ ವರ್ತನೆ ಆಕೆಗೆ ಇಷ್ಟ ವಾಗುತ್ತಿರಲಿಲ್ಲ…ನಂದನಾ ಮಂಚದ ಮೇಲೆ ಒಬ್ಬಳೇ ಮಲಗಿದ್ದಾಗ… ನಿಶ್ಯಬ್ದವಾಗಿ ಬಂದು ಕದ್ದು ಮುಚ್ಚಿ ಅವಳನ್ನೇ ನೋಡುವುದು…. ಸ್ನಾನದ ಕೋಣೆಗೆ ಹೋದಾಗ.. ಕಿಟಕಿ ಮೂಲಕ ಕದ್ದು ನೋಡುವುದು… ಎಲ್ಲವನ್ನೂ ನಂದನಾ ಸೂಕ್ಷ್ಮ ವಾಗಿ ಗಮನಿಸುತ್ತಾ ಬರುತ್ತಾಳೆ… ತನ್ನ ಮಾವನ ನಡವಳಿಕೆ, ಲೈಂಗಿಕ ಕಿರುಕುಳ ಸಹಿಸದಾದಾಗ ತನ್ನ ಗಂಡನಿಗೆ ಹೇಳುತ್ತಾಳೆ. ಆದರೆ ಸುಮಂತ್ ತನ್ನ ತಂದೆಯ ಇಂತಹ ನಡವಳಿಕೆಯನ್ನು ನಂಬುವ ಸ್ಥಿತಿಯಲ್ಲಿರುವುದಿಲ್ಲ….ಮನನೊಂದ ನಂದನಾ.. ತವರು ಮನೆಗೆ ಬಂದು ತನ್ನ ಅಪ್ಪ ಅಮ್ಮನಿಗೆ ಈ ವಿಷಯ ತಿಳಿಸುತ್ತಾಳೆ… ಮತ್ತೆ ಗಂಡನ ಮನೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಾಳೆ. ಆದರೆ ಅವರೂ ಕೂಡ ಅವಳ ಮಾತನ್ನು ನಂಬುವುದಿಲ್ಲ…ಅವಳಿಗೇ ಬುದ್ಧಿ ಹೇಳುತ್ತಾರೆ…. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ… ಎಂಬಂತೆ… ನೀನು ಯಾವತ್ತಿದ್ದರೂ ಗಂಡನ ಮನೆಯಲ್ಲೇ ಇರಬೇಕು… ಕಷ್ಟವೋ… ಸುಖವೋ… ಅನುಸರಿಸಿಕೊಂಡು ಹೋಗಬೇಕು ಎಂಬುದಾಗಿ ನೀತಿ ಪಾಠ ಹೇಳುತ್ತಾರೆ…. ಸೂಕ್ಷ್ಮ ಮನಸ್ಥಿತಿಯ ನಂದನಾ ಮತ್ತೆಲ್ಲಿಗೆ ಹೋದಾಳು… ಕೊನೆಗೆ ಅವಳಿಗೆ ಆತ್ಮಹತ್ಯೆ ಯೊಂದೇ ಪರಿಹಾರವಾಗಿ ಕಾಣುತ್ತದೆ… ತನ್ನ ತವರು ಮನೆಯಲ್ಲಿ ಫ್ಯಾನ್ ಗೆ ಸೀರೆ ಕಟ್ಟಿ ನೇಣು ಹಾಕಿಕೊಳ್ಳುತ್ತಾಳೆ…. ಜೀವನದಲ್ಲಿ ಹತಾಶೆಗೊಂಡು , ಆತ್ಮಹತ್ಯೆಯ ಹೊರತಾಗಿಯೂ ಜೀವನವಿದೆ ಎಂಬ ಸತ್ಯವನ್ನು ಅರಿಯದೇ ಹೋಗುತ್ತಾಳೆ…ಕಷ್ಟಗಳನ್ನೇ ಕಾಣದೆ ಸುಕೋಮಲವಾಗಿ ಬೆಳೆದಿದ್ದ ನಂದನಾ…ಜೀವನದಲ್ಲಿ ಎದುರಾದ ಮೊದಲ ಸಮಸ್ಯೆಗೆ ಮತ್ತೆಂದೂ ಅರಳದಂತೆ ಮುದುಡಿ ಹೋಗುತ್ತಾಳೆ… ಏನೇ ಆದರೂ…. ದೇವರು ದಯಪಾಲಿಸಿದ ಈ ಅಮೂಲ್ಯ ಜೀವನವನ್ನು ಅಂತ್ಯಗೊಳಿಸಿಕೊಳ್ಳುವುದು ಮಹಾ ಪಾಪ . ಜೀವನವೆಂಬ ಸಾಗರದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ… ಈಸಬೇಕು.. ಇದ್ದು ಜೈಸಬೇಕು… ಇದೇ ಜೀವನದ ತಿರುಳು….
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೮) – ಬಸ್ ಪಾಸ್ ಪ್ರಸಂಗ.
- ‘ಚೌಚೌ ಬಾತ್’ ಅಂಕಣ (ಭಾಗ –೯) – ಸುಲಭವೇನೇ ಗೆಳತಿ
- ಸರ್ವಮಂಗಳ ಜಯರಾಂ – ಶಿಕ್ಷಕಿ. SSEA ಪ್ರೌಢಶಾಲೆ. ಗೌರಿಬಿದನೂರು.
