ಬಹುಮುಖ ಪ್ರತಿಭೆಯ ಅಪ್ಪಟ ಕನ್ನಡಿಗ ರಮೇಶ್ ಅರವಿಂದ್. ಓದಿದ್ದು ಮೆಕಾನಿಕಲ್ ಎಂಜಿನಿಯರಿಂಗ್ ಆದರೂ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ” ಪ್ರೀತಿಯಿಂದ ರಮೇಶ್ ” ಯಶಸ್ಸಿನ ಸರಳ ಸೂತ್ರಗಳು ಕೃತಿಯಲ್ಲಿ ಸುಮಾರು 180 ಪುಟಗಳಿದ್ದು, ಕೃತಿಯ ಕುರಿತು ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರೀತಿಯಿಂದ ರಮೇಶ್ – ಯಶಸ್ಸಿನ ಸರಳ ಸೂತ್ರಗಳು
ಲೇಖಕ : ರಮೇಶ್ ಅರವಿಂದ್
ಪ್ರಕಾಶಕರು : ಸಾವಣ್ಣ ಪ್ರಕಾಶನ
ಬೆಲೆ : 225.00
ಕನ್ನಡ ಚಿತ್ರರಂಗದಲ್ಲೇ ವಿಭಿನ್ನ ಆಲೋಚನೆಯ, ಸದಾ ಲವಲವಿಕೆಯ , ಎಂದೂ ಮಾಸದ ನಗುವಿನ, ಕ್ರಿಯಾಶೀಲತೆಯನ್ನೇ ಮೈವೆತ್ತ , ಮಾಗಿದ ಕಲಾವಿದರೆಂದರೆ ಅದು ರಮೇಶ್ ಅರವಿಂದ್. ಅವರ ದೇಹಕ್ಕೆ ವಯಸ್ಸು ಅರವತ್ತಾದರೂ ನೋಡಲು ಇನ್ನೂ ನಲವತ್ತರಂತೆ ಕಾಣುವ, ಅದಕ್ಕಿಂತಲೂ ಮುಖ್ಯವಾಗಿ ತನ್ನ ಮನಸನ್ನು, ಆಲೋಚನೆಗಳನ್ನು ಯಾವಾಗಲೂ ಆರೋಗ್ಯವಾಗಿಟ್ಟುಕೊಂಡು ಸದಾ ಹರೆಯಲ್ಲಿರುವಂತೆಯೇ ನೋಡಿಕೊಂಡಿರುವ ಬಹುಮುಖ ಪ್ರತಿಭೆಯ ಅಪ್ಪಟ ಕನ್ನಡಿಗ.
ಓದಿದ್ದು ಮೆಕಾನಿಕಲ್ ಎಂಜಿನಿಯರಿಂಗ್ ಆದರೂ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದು ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ , ನಟನಾಗಿ ನಿರ್ದೇಶಕನಾಗಿ ಕಿರುತೆರೆಯ ನಿರೂಪಕನಾಗಿ, ಭಾಷಣಕಾರನಾಗಿ ಇದೀಗ ಬರಹಗಾರನಾಗಿಯೂ ಇಂದಿಗೂ ಜೀವನೋತ್ಸಾಹದ ಚಿಲುಮೆಯಂತೆ ಆಯಾಸವೇ ಕಾಣದ ಉಲ್ಲಸಿತ ಮೊಗದೊಂದಿಗೆ ಎನರ್ಜಿಟಿಕ್ ಆಗಿದ್ದು ಇತರರಲ್ಲೂ ಸ್ಪೂರ್ತಿ ತುಂಬ ಬಲ್ಲ ವ್ಯಕ್ತಿ….ಈ ನಮ್ಮ ರಮೇಶ್.

ಅವರ ” ಪ್ರೀತಿಯಿಂದ ರಮೇಶ್ ” ಯಶಸ್ಸಿನ ಸರಳ ಸೂತ್ರಗಳು …..ಎಂಬ ಸುಮಾರು 180 ಪುಟಗಳ ಪುಸ್ತಕವನ್ನು ಈಗಷ್ಟೇ ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮಗುಚಿಟ್ಟೆ.
ರಮೇಶ್ ಅರವಿಂದ್ ರ ಬದುಕಿನ ನಾನಾ ಇಂಟರೆಸ್ಟಿಂಗ್ ಘಟನೆಗಳು, ಅವರ ಬಾಲ್ಯ, ಕುಟುಂಬ, ಕಾಲೇಜು, ಕಲೆಯೆಡೆಗೆ ತಿರುಗಿದ ಅವರ ಒಲವು, ಸಿನಿಮಾಗಳು, ನಿರ್ದೇಶನ ,ನಿರೂಪಣೆ, ಭಾಷಣ…ಈ ಎಲ್ಲದರ ಬಗ್ಗೆ ಅತ್ಯಂತ ಸರಳವಾಗಿ ಈ ಪುಸ್ತಕದಲ್ಲಿ ಹೇಳಿದ್ದಾರೆ. ಅಲ್ಲದೇ ಯಶಸ್ವೀ ಬದುಕಿನ ಸರಳ ಸೂತ್ರಗಳೆಂದು ನಮ್ಮ ನಿಮ್ಮೆಲ್ಲರ ನಿತ್ಯ ಜೀವನದಲ್ಲಿ ಘಟಿಸಬಹುದಾದ ಅನೇಕಾನೇಕ ವಾಸ್ತವ ಘಟನೆಗಳು, ಅನುಭವಗಳನ್ನೇ ಉದಾಹರಣೆಯನ್ನಾಗಿ ಉಲ್ಲೇಖಿಸುತ್ತಲೇ ನಿಮಗೆಲ್ಲೂ ಬೋರ್ ಹೊಡೆಸದಂತೆ ಸಲೀಸಾಗಿ ನಿಮ್ಮ ಹೆಗಲ ಮೇಲೆ ಕೈಯಿಟ್ಟುಕೊಂಡು ಆತ್ಮೀಯವಾಗಿ ಮಾತನಾಡುತ್ತಾ ಹೋಗುವಂತೆ ಕೃತಿಯುದ್ದಕ್ಕೂ ಸರಳವಾದ ಭಾಷೆಯಲ್ಲಿ ಹೇಳಿಕೊಂಡು ಸಾಗಿದ್ದಾರೆ.
ಪಾಂಡಿಚೆರಿಯ ಬೀಚ್ ಒಂದರಲ್ಲಿ ತಮ್ಮ ಪತ್ನಿ ಜೊತೆ ಕುಳಿತಿದ್ದಾಗ ಒಬ್ಬ ಮಹಿಳೆ ಬಂದು ರಮೇಶ್ ರನ್ನು ಮಾತನಾಡಿಸಿ ಅವರ ಒಟ್ಟೂ ಭಾಷಣಗಳು, ವ್ಯಕ್ತಿತ್ವ ವಿಕಸನಕ್ಕೆಸಂಬಂಧಿಸಿದ ಮೋಟಿವೇಷನಲ್ ಮಾತುಗಳು ಎಲ್ಲವೂ ಒಂದೇ ಕಡೆ ಸಿಗಬಾರದೇಕೆ ? ಎಂದು ನೀಡಿದ ಸಲಹೆಯನ್ನೇ ಗಂಭೀರವಾಗಿ ತೆಗೆದುಕೊಂಡ ನಂತರ ಈ ಕೃತಿಯ ರಚನೆಗೆ ಕಾರಣವಾಯಿತಂತೆ.!
ಇಡೀ ಕೃತಿಯಲ್ಲಿ ಮನುಷ್ಯನ ಹೊಟ್ಟೆಗಾಗಿ ಹೋರಾಟ, ಜೀವನದ ಸುರಕ್ಷತೆಗಾಗಿ ಅವನ ಸತತ ಪ್ರಯತ್ನಗಳು ಯೋಜನೆಗಳು, ಪ್ರೀತಿ, ಸಾಧನೆ, ಯಶಸ್ಸು ಇವೇ ಮೊದಲಾದ ಬದುಕಿಗೆ ತುಂಬಾ ಸನಿಹಕ್ಕೆ ಬರುವ ವಿಷಯಗಳನ್ನು ಆರಿಸಿಕೊಂಡು ಅವುಗಳಿಗೆ ಸರಿಹೊಂದುವ ಚಿಕ್ಕಪುಟ್ಟ ಉದಾಹರಣೆಗಳನ್ನು ಕೊಡುತ್ತಾ ಓದುಗರಲ್ಲಿ ಆಸಕ್ತಿ ಕೆರಳಿಸುತ್ತಾ ಕೃತಿಯುದ್ದಕ್ಕೂ ಸಾಗುತ್ತಾರೆ. ಓದುತ್ತಾ ಹೋದಂತೆಲ್ಲಾ ಇದು ನಿಮ್ಮ ಬದುಕಿಗೂ, ನಿಮ್ಮ ವ್ಯಕ್ತಿತ್ವದ ಯಾವುದೋ ಒಂದು ಭಾಗಕ್ಕೂ ಕನೆಕ್ಟ್ ಆಗುವುದರಿಂದ ಅಲ್ಲೆಲ್ಲಾ ನಿಮ್ಮನ್ನೇ ಕಲ್ಪಿಸಿಕೊಂಡು ನೀವು ತಲ್ಲೀನರಾಗುವುದಂತೂ ನಿಜ.
ಜೀವನದಲ್ಲಿ ಗೆಲುವನ್ನೇ ಕಾಣದೇ ಸೋತು ಹೈರಾಣಾದಾಗ, ಅವಕಾಶಗಳೇ ಬತ್ತಿವೆ ಎಂಬ ಭಾವನೆ ಬಂದಾಗ, ಪ್ರೀತಿಯ ಒರತೆ – ಆಸರೆಯ ಕೊರತೆ ಎನಿಸಿದಾಗ, ಸಾಧನೆಯ ಹಾದಿ ಮುಚ್ಚಿಹೋಗಿದೆ ಎಂದು ಭ್ರಮನಿರಸನವಾದಂತಹ ಸಂಧರ್ಭದಲ್ಲಿ ಒಮ್ಮೆ ಈ ಪುಸ್ತಕವನ್ನು ತೆರೆದು ಕಣ್ಣಾಡಿಸಿದರೆ ನಿಮ್ಮೊಳಗಿನ ಉತ್ಸಾಹಕ್ಕೆ ಸ್ವಲ್ಪ ಸ್ಪಾರ್ಕ್ ಸಿಕ್ಕಂತಾಗಬಹುದು.
ಒಟ್ಟಾರೆಯಾಗಿ, ನಿಮ್ಮೊಳಗೆ ಸುಪ್ತವಾಗಿರುವ ಅಂತಃಶಕ್ತಿಯನ್ನು ಪ್ರೇರೇಪಿಸಿ ನಿಮ್ಮ ಯಂಗರ್ ವರ್ಷನ್ ಗೆ ನಿಮ್ಮನ್ನು ಕರೆದೊಯ್ದು ನಿಮ್ಮ ಬದುಕಿಗೆ ಸ್ಪೂರ್ತಿಯ ಸಿಂಚನವನ್ನು ಹರಡಬಲ್ಲ ಅಂಶಗಳನ್ನು ರಮೇಶ್ ಅತ್ಯಂತ ನವಿರಾಗಿ ಫ಼್ರೆಂಡ್ಲಿಯಾಗಿ ಕಟ್ಟಿಕೊಟ್ಟಿರುವುದರಿಂದ ಇದೊಂದು ವರ್ತ್ ರೀಡಿಂಗ್ !
ನಟ ನಿದೇಶಕ ನಿರೂಪಕ ಮಾತುಗಾರ ಭಾಷಣಕಾರನಾಗಿ ಗೆದ್ದಿರುವ ರಮೇಶ್ ಅರವಿಂದ್ ಈ ಕೃತಿ ಮೂಲಕ ತಮ್ಮೊಳಗಿನ ಒಬ್ಬ ಬರಹಗಾರನನ್ನು ಅಚ್ಚುಕಟ್ಟಾಗಿ ಅನಾವರಣ ಮಾಡಿಸಿ ಇಲ್ಲಿಯೂ ಗೆದ್ದಿದ್ದಾರೆ.

* ಮರೆಯುವ ಮುನ್ನ *
ತಾವೆಲ್ಲರೂ ಟೀವಿಯಲ್ಲಿ’ ವೀಕೆಂಡ್ವಿತ್ ರಮೇಶ್” ಕಾರ್ಯಕ್ರಮವನ್ನು ಬಹುತೇಕ ನೋಡಿರುತ್ತೀರಿ. ರಮೇಶ್ ಈ ಕಾರ್ಯಕ್ರಮವನ್ನು ಅದೆಷ್ಟು ಚೆನ್ನಾಗಿ ನಡೆಸಿಕೊಡುತ್ತಿದ್ದರೆಂದರೆ ಅವರಿಂದಲೇ ಈ ಷೋ ತುಂಬಾ ಜನಪ್ರಿಯವಾಗಿತ್ತು. ಅದಕ್ಕೆ ರಮೇಶ್ ರ ಶಿಸ್ತುಬದ್ದ ಯೋಜನೆ, ಅತಿಥಿಗಳ ಬಗ್ಗೆ ಅರಿತ ಪೂರ್ತಿ ವಿವರ, ಅವರ ಲವಲವಿಕೆಯ ನಿರೂಪಣೆ ಹಾಗೂ ಕೆಳಮಟ್ಟದಿಂದ ಬಂದು ಉನ್ನತ ಸಾಧನೆಗೈದ ಮಹಾನ್ ಸಾಧಕರ ಸ್ಪೂರ್ತಿದಾಯಕ ನುಡಿಗಳು ಕಾರಣವಾಗಿದ್ದವು. ಈ ಎಲ್ಲಾ ಮಹನೀಯರ ಬದುಕಿನ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಚೆನ್ನಾಗಿ ಮನಗಂಡ ರಮೇಶ್ ಅವರ ಅನುಭವದ ನುಡಿಗಳನ್ನೂ ತಮ್ಮ ಪುಸ್ತಕದಲ್ಲಿ ಪ್ರೇರೇಪಣೆಯಾಗಿ ಬಳಸಿಕೊಂಡಿರುವುದು ವಿಶೇಷ.
ರಮೇಶ್ ಅರವಿಂದ್ ಎಂದರೇನೇ ಒಂದು ಕಂಪ್ಲೀಟ್ ಪಾಸಿಟಿವ್ ವ್ಯಕ್ತಿತ್ವ ನಮ್ಮಕಣ್ಣೆದುರು ಬಂದು ನಿಲ್ಲುತ್ತದೆ. ಹುಡುಕಿದರೂ ಅವರಲ್ಲಿ ಒಂದಾದರೂ ನೆಗೆಟೀವ್ ಎನರ್ಜಿಯೆಂಬುದೇ ಸಿಗದು. ಇರುವ ಒಂದು ಜೀವನದಲ್ಲಿ ಎಲ್ಲರೂ ತಮಗಿರುವ ಮಿತಿಯಲ್ಲೇ ಹೇಗೆ ಖುಷಿಯಿಂದ ಇರಬಹುದು, ಯಶಸ್ಸಿನ ಕೀಲಿ ಕೈ ಯಾವುದು ಎಂಬೆಲ್ಲಾ ಪ್ರಾಕ್ಟಿಕಲ್ ಅಂಶಗಳನ್ನು ಸರಳವಾದ ಭಾಷೆಯಲ್ಲಿ ಪ್ರಸ್ತುತಿ ಪಡಿಸಿರುವ ರಮೇಶ್ ರ ಈ ಪುಸ್ತಕ ತಾನೇ ತಾನಾಗಿ ಓದಿಸಿಕೊಂಡು ಹೋಗುವ ಗುಣದಿಂದಾಗಿ ನಿಮಗೆ ತುಂಬಾ ಆಪ್ಯಾಯದ ಅನುಭವ ಕೊಡಬಲ್ಲದು.
ಇದನ್ನು ಓದಿದಾಗ ಇದು ಯಾವುದೋ ಕತೆ ಕಾದಂಬರಿಯಂತಿರದೇ ನಿಮ್ಮ ಕ್ಲೋಸ್ ಫ಼್ರೆಂಡ್ ಅಥವಾ ಬಂಧುವೊಬ್ಬರು ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡುತ್ತಿರುವ ರೀತಿಯ ಫ಼ೀಲ್ ಉಂಟಾಗಬಲ್ಲದು .
ಸಾಧ್ಯವಾದರೆ ಒಮ್ಮೆ ಓದಿ.” ಪ್ರೀತಿಯಿಂದ ರಮೇಶ್ ”
ಪ್ರೀತಿಯಿಂದ …..
- ಹಿರಿಯೂರು ಪ್ರಕಾಶ್
