ಅಂಜನಾ ಹೆಗಡೆ ಅವರ ‘ಅಪ್ಪಿಗೌಡನ ಶಂಖಪುಷ್ಪ’ ಕಥಾಸಂಕಲದಲ್ಲಿ ಮಲೆನಾಡ ಜನ, ಅಲ್ಲಿಯ ಚಿತ್ರಣ, ಹಳ್ಳಿಗರ ಮನೋವಲಯವನ್ನು ಕಥೆಯಲ್ಲಿ ಕಟ್ಟುಕೊಟ್ಟಿದ್ದಾರೆ, ಅವರ ಕೃತಿಯ ಕುರಿತು ಲೇಖಕಿ ತೇಜಸ್ವಿನಿ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಅಪ್ಪಿಗೌಡನ ಶಂಖಪುಷ್ಪ (ಕಥಾಸಂಕಲನ)
ಲೇಖಕಿ: ಅಂಜನಾ ಹೆಗಡೆ
ಪಬ್ಲಿಕೆಶನ್ : ಸಾಹಿತ್ಯಲೋಕ
ಬೆಲೆ: 150/-
ಪುಟಗಳು:116
ಉತ್ತಮ ಕಥೆಗಳೆಂದರೆ ನಮ್ಮೊಳಗಿನ ಗತ ಕಾಲದ ಯಾವುದೋ ಘಟನೆಗಳನ್ನು, ವರ್ತಮಾನದಲ್ಲಿ ನಡೆಯುತ್ತಿರುವ ಸಂಗತಿಗಳನ್ನು, ಇಲ್ಲ ಭವಿಷ್ಯತ್ತಿನ ಕನಸುಗಳ ಬೀಜವನ್ನು ತಾಗಿ ಹೊರ ತೆಗೆಯುವ, ಸವರುವ, ಚಿಗುರಿಸುವ ಸಾಧನಗಳು. ಅಂಜನಾ ಹೆಗಡೆ ಅವರ ‘ಅಪ್ಪಿಗೌಡನ ಶಂಖಪುಷ್ಪ’ ಕಥಾಸಂಕಲನದೊಳಗಿನ ಹಲವಾರು ಕಥೆಗಳು ಸಶಕ್ತವಾಗಿ ನಮ್ಮೊಳಗೆ ಹೊಸ ಕಥೆಗಳನ್ನು ಹುಟ್ಟುಹಾಕಿಸಬಲ್ಲವು, ನಮ್ಮೊಳಗಿನ ಕಥೆಗಳಿಗೆ ಧ್ವನಿಯನ್ನು ನೀಡಬಲ್ಲವು!
ಇವರ ಕೆಲವೊಂದು ಕಥೆಗಳನ್ನು ಅಲ್ಲಲ್ಲಿ (ಅಂತರ್ಜಾಲ ಪತ್ರಿಕೆಗಳಲ್ಲಿ) ಓದಿದ್ದೆ, ಮೆಚ್ಚಿದ್ದೆ. ಅದೇ ಆಶಾಭಾವದೊಂದಿಗೆ ಸಂಕಲವನ್ನೋದಲು ಆರಂಭಿಸಿದೆ. ಚಿಕ್ಕಚಿಕ್ಕ ಹುಳಿ,ಸಿಹಿ ಗುಳಿಗೆಗಳನ್ನು ಮೆಲ್ಲುವ ಸುಖ ನನ್ನದಾಯಿತು. ಬಹುಮುಖ್ಯವಾಗಿ ಇಲ್ಲಿನ ಬಹುತೇಕ ಕಥೆಗಳು ನಡೆಯುವ ಮಲೆನಾಡಿನ ಪರಿಸರಕ್ಕೂ, ನನ್ನೂರಿನ ಪರಿಸರಕ್ಕೂ ಸಾಮ್ಯ ಇರುವುದರಿಂದಲೇ ನನಗೆ ಮತ್ತೂ ಹೆಚ್ಚು ಆಪ್ತ ಎನ್ನಿಸಿದವು. ಮಲೆನಾಡ ಜನರು, ಅಲ್ಲಿಯ ಚಿತ್ರಣ, ಹಳ್ಳಿಗರ ಮನೋವಲಯ ಇವೆಲ್ಲವೂ ನಮ್ಮನ್ನು ನಮ್ಮ ಹಳ್ಳಿಗೆ, ನಾವು ಬೆಳೆದ ಪರಿಸರಕ್ಕೆ ಕರೆದೊಯ್ದುಬಿಡುತ್ತವೆ.

ಇಲ್ಲಿಯ ಕಥೆಗಳಿಗೆ ಮನುಷ್ಯನೇ ಪಾತ್ರವಾಗುವ, ಪ್ರಮುಖ ಕಥೆಯಾಗಿ ಬೆಳೆಯುವ ಹಂಗಿಲ್ಲ. ಒಂದು ನೀಲಿ ಶಂಖಪುಷ್ಪದೊಳಗೆ ಬೆಸೆದು ಬಲಿಯುವ ಅನೂಹ್ಯ ಪ್ರೇಮವೇ ಕಾವ್ಯಾತ್ಮಕವಾಗಿ ನಿವೇದನೆಗೊಳ್ಳುತ್ತ ಕಥೆಯಾಗಿಬಿಡುವುದು. ಬಹುಮುಖ್ಯವಾಗಿ, ಇಲ್ಲಿ ಬರುವ ಬಹುತೇಕ ಪಾತ್ರಗಳು ಸಂಕಷ್ಟಗಳನ್ನು, ಹೋರಾಟವನ್ನು, ತಳಮಟ್ಟದ ಜೀವವನ್ನು ಪ್ರತಿನಿಧಿಸುವಂಥವು. ಆದರೆ ಈ ಪಾತ್ರಗಳ ನೋವು, ಯಾತನೆಗಳು, ಏಕಾಂತಗಳೆಲ್ಲ ನಮ್ಮಲ್ಲಿ ವಿಷಾದವನ್ನೋ, ನಿಟ್ಟುಸಿರನ್ನೋ ತುಂಬುವುದಕ್ಕಿಂತ, ಅವು ಬದುಕನ್ನು ಸವಾಲಾಗಿ ಸ್ವೀಕರಿಸಿ ಕುಗ್ಗದೇ ಬದುಕುವ ಪರಿಗೆ ಒಂದು ಬೆರಗನ್ನು, ಉತ್ಸಾಹವನ್ನು ನಮ್ಮೊಳಗೆ ತುಂಬುತ್ತವೆ. ಜೀವನ ಎಂದರೆ ಹ್ಯಾಂಗ್ ಬರೆದಿತ್ತೋ ಪ್ರಾಚೀನದಲ್ಲಿ, ಹಾಂಗೇ ಇರಬೇಕು ಸಂಸಾರದಲ್ಲಿ ಅನ್ನುವ ದಾಸರ ಕೀರ್ತನೆ ಸೋದಾರಣವಾಗಿ ಬದುಕುವ ಪಾತ್ರಗಳನ್ನಿಲ್ಲಿ ನಾವು ಕಾಣುತ್ತೇವೆ. ಅವರೆಲ್ಲ ನಿಸ್ಸಾರವಾಗಿ ಬದುಕುವುದಿಲ್ಲ. ಪಕ್ಷಿ ಅಂಗಳದಲ್ಲಿ ಬಂದು ಕೂತು, ಕ್ಷಣದಲ್ಲಿ ಹಾರಿಹೋಗುವ ನಡುವಿನ ಅರೆಕ್ಷಣವನ್ನೇ ತಮ್ಮದಾಗಿಸಿಕೊಂಡು, ತಮ್ಮ ಗತಿಗೆ, ಮತಿಗೆ ಪಳಗಿಸಿಕೊಂಡು ಜೀವಿಸಿದಂಥವು. ಆ ಮೂಲಕ ಇವರೆಲ್ಲ ಕಥಾನಕದೊಳಗೆ ಬರುವ ಇತರ ಪಾತ್ರಗಳಲ್ಲಿ, ಓದುಗರಲ್ಲಿ ಒಂದು ವಿಶೇಷ ಛಾಪು ಬಿಟ್ಟುಹೋಗುತ್ತಾರೆ.
ಅರ್ಧ ಸೀರೆ ಕತೆಯ ಗಂಗಕ್ಕ, ಒಂದು ಗುಡ್ ಮಾರ್ನಿಂಗ್ ಮೆಸ್ಸೇಸ್ ಕಥೆಯ ಜಾಮಿನಿ, ಒಂದು ಲಾಸ್ಟ್ ಬಸ್ಸು ಕಥೆಯ ರಜನಿ, ನಿನ್ನ ನಾಣಣ್ಣ ಕಥೆಯ ವಿದ್ಯಕ್ಕ, ನಾಣಣ್ಣ – ಹೀಗೆ ಇವೆಲ್ಲ ಪಾತ್ರಗಳು ಸಾಮಾನ್ಯ ಕಥಾವಸ್ತುವಾಗಿ ಅಂಕುರಗೊಂಡು, ಕಥೆ ಬೆಳೆದಂತೇ ತಮ್ಮ ಸಾಮಾನ್ಯ ಸ್ವಭಾವದೊಳಗಿನ ಅಸಾಮಾನ್ಯ ಹೊಳಪನ್ನು ಸಹಜವಾಗಿ ಚೆಲ್ಲುತ್ತ ನಮ್ಮೊಳಗಿನ ರಜನಿ, ಜಾಮಿನಿಯರನ್ನೆಲ್ಲ ತಲುಪುತ್ತಾರೆ.
ಇನ್ನು ‘ಒಮಲ್ತಿ’ ಎನ್ನುವ ಕಥೆಯಲ್ಲಿ ಬರುವ ದೆವ್ವದ ಪಾತ್ರವನ್ನು ನನ್ನಜ್ಜಿಯ ಬಾಯಲ್ಲಿ ಹಲವು ವಿಧದಲ್ಲಿ ಕೇಳಿ ಬೆಳೆದವಳಿಗೆ ಅದು ನನ್ನೂರಿನದೇ ಕಥೆ ಎನ್ನಿಸಿಬಿಟ್ಟಿತು. ನನ್ನಜ್ಜಿ ವೀಳ್ಯದೆಲೆ ದೆವ್ವ ಎಂದು ಕರೆದರೆ ಅದಿಲ್ಲಿ ಒಮಲ್ತಿ ಆಗಿದೆ. ಎಲ್ಲೋ ಒಂದು ಕಡೆ ಒಮಲ್ತಿ, ನನ್ನಜ್ಜಿಯ ವೀಳ್ಯದೆಲೆ ದೆವ್ವ ಇಬ್ಬರೂ ಒಬ್ಬರೇ ಆಗಿದ್ದಿರಬಹುದೇ ಇಲ್ಲ ಅಕ್ಕ-ತಂಗೀರೂ ಇದ್ದಿರಬಹುದು ಎಂದೂ ಅನ್ನಿಸಿತು.

ಪುರುಷ ಪ್ರಪಂಚದ ತುಮುಲ, ಹೊಯ್ದಾಟ, ಅವರೊಳಗಿನ ಸೂಕ್ಷ್ಮ ಮನಸ್ಸಿನ ಅನಾವರಣವನ್ನು ‘ಗಾಚಿ-ಗೋಚಿ, ಸಂಚಿಯ ಆತ್ಮಚರಿತ್ರೆ, ಸೀಟಿ ಸೀನಣ್ಣ’ ಕಥೆಗಳು ಕಟ್ಟಿಕೊಟ್ಟರೆ, ಮಮತೆಗೆ ತನ್ನ ಮಗು, ತಾನು ಸಾಕಿದ ಬೆಕ್ಕು ಎರಡಕ್ಕೂ ಸಮಪಾಲು ಎಂಬುದನ್ನು ಬಹಳ ಸುಂದರವಾಗಿ, ಆರ್ದ್ರ ನಿರೂಪಣೆಯ ಮೂಲಕ ತೆರೆದಿಡುತ್ತದೆ ‘ಸುಟ್ಟಗಾಯದ ಗುರುತು’ ಕಥೆ.
ಮಡಿಲಲ್ಲೊಂದು ಗೋಪಿದಂಡೆ, ಅರ್ಧಸೀರೆಯ ಸೆರಗು, ಗಣಪಿಯ ಉದ್ದಜಡೆ, ಸಂಚಿಯ ಆತ್ಮಚರಿತೆ, ಸುಟ್ಟಗಾಯದ ಗುರುತು – ಈ ಕಥೆಗಳು ಹೆಚ್ಚು ಆಪ್ತವೆನ್ನಿಸಿದವು. ಈ ಸಂಕಲನದಲ್ಲಿ ಲೇಖಕಿ ಕಥೆಗಳನ್ನು ನಿರೂಪಿಸಿದ ಶೈಲಿ, ವಿಶಿಷ್ಟವಾಗಿ ಕಟ್ಟಿಕೊಡುವ ಪಾತ್ರಚಿತ್ರಣ, ಕಥೆಗಳನ್ನು ಅಂತ್ಯಗೊಳಿಸಿದ ರೀತಿ – ಇವೆಲ್ಲವೂ ಇಷ್ಟವಾದವು.
ಈ ಸಂಕಲನದ ಮತ್ತೊಂದು ಆಕರ್ಷಣೆ ಎಂದರೆ ಸುಂದರವಾದ ಮುಖಪುಟ ವಿನ್ಯಾಸ! ನಾಗರಾಜ ವೈದ್ಯ ಅವರ ಈ ವಿನ್ಯಾಸ ಪುಸ್ತಕವನ್ನು ಹಿಡಿಯುತ್ತಿರುವಂತೇ ಮನಸ್ಸಿಗೆ ಮುದ ನೀಡುವಂತಿದೆ. ಹೀಗಾಗಿ ಮತ್ತೆಮತ್ತೆ ನೋಡುವಂತೆ ಪ್ರೇರೇಪಿಸುತ್ತದೆ. ನೀಲಿಶಂಖಪುಷ್ಟವಂತೂ ಎದ್ದು ಬಂದಿರುವಂತೆ, ಇನ್ನೂ ಬಳ್ಳಿಯಲ್ಲಿ ನಳನಳಿಸುತ್ತಿರುವಂತೆ ಕಾಣಿಸುತ್ತದೆ.
- ತೇಜಸ್ವಿನಿ ಹೆಗಡೆ
