ಸಮಯ ಪ್ರಜ್ಞೆಯಿಂದ ಎಷ್ಟೋ ಜನರ ಪ್ರಾಣ ಕಾಪಾಡಿದ ಕುರಿ ಕಾಯುವ ರಾಕೇಶ್ ಬರಿಯಾ. ಏನಿದು ಕತೆ ಮುಂದೆ ಓದಿ…
ನಿಜವಾದ ಹೀರೋ ಯಾರು? ತೆರೆಯ ಮೇಲೆ ಹಾಡಿಗೆ ನಾಲ್ಕು ಸ್ಟೆಪ್ , ನಾಲ್ಕು ಜನಕ್ಕೆ ಪಂಚ್ ಅಥವಾ ಡೈಲಾಗ್ ಪಂಚ್ ಕೊಟ್ಟವನಾ? ಅಲ್ಲ…
ಯಾರದೋ ಕಷ್ಟದಲ್ಲಿ ಎಲ್ಲಿಂದಲೋ ಪ್ರತ್ಯಕ್ಷನಾಗಿ ಒಂದು ಜೀವ ಉಳಿಸಿದರು ಸಾಕು ಆತ ನಿಜವಾದ ಹೀರೊ ಆಗುತ್ತಾನೆ. ಇತ್ತೀಚಿಗೆ ಗುಜರಾತ್ ದಹೊದ್ ಜಿಲ್ಲೆಯಲ್ಲಿ ೩೦ವರ್ಷದ ಕುರಿ ಕಾಯುವ ರಾಕೇಶ್ ಬರಿಯಾ ಎಂಬ ವ್ಯಕ್ತಿಯೊಬ್ಬ ಸಂಭವಿಸುತ್ತಿದ್ದ ರೈಲು ಅಪಘಾತವನ್ನು ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾನೆ.

ಫೆಬ್ರುವರಿ ೨೧ ರಂದು ದಹೊದ್ ಬಳಿ ರೇಲ್ವೆ ಹಳಿ ಒಂದು ಕಡೆ ಮುರಿದಿತ್ತು, ಅದನ್ನು ನೋಡಿದ ರಾಕೇಶ್ ಬರಿಯಾ ಹತ್ತಿರದ ರೇಲ್ವೆ ಸಿಬ್ಬಂದಿಗೆ ವಿಷಯ ತಿಳಿಸಲು ಪ್ರಯತ್ನಿಸಿದ, ಆದರೆ ಹತ್ತಿರದಲ್ಲಿ ಯಾವುದೇ ಸಿಬ್ಬಂದಿಗಳು ಸಿಗಲಿಲ್ಲ. ಆಗ ಯೋಚಿಸುತ್ತಾ ಕೂರದೆ ತಕ್ಷಣ ಆ ಜಾಗದಿಂದ ಸುಮಾರು ಎರಡು ಕಿಲೋಮೀಟರ್ ದೂರ ಕೆಂಪು ಬಟ್ಟೆ ಹಿಡಿದು ಓಡಿದ . ಎದುರಿಗೆ ಬರುತ್ತಿದ್ದ ಸರಕು ರೈಲನ್ನು ತನ್ನ ಕೆಂಪು ಬಟ್ಟೆ ತೋರಿಸಿ ನಿಲ್ಲಿಸಿದ.
ಆದರೆ ಈ ಹಳಿಯಲ್ಲಿ ಪ್ರತಿನಿತ್ಯ ಪ್ರಯಾಣಿಕರ ರೈಲುಗಳು ಮತ್ತು ಸರಕು ರೈಲುಗಳು ಸೇರಿ ಸುಮಾರು ೧೨೫ ರೈಲುಗಳು ಓಡಾಡುತ್ತಲೇ ಇರುತ್ತವೆ. ಸಂಭವಿಸುತ್ತಿದ್ದ ಭಾರಿ ಅನಾಹುತವನ್ನುತಪ್ಪಿಸಿ ಸಾಕಷ್ಟು ಜೀವಗಳನ್ನು ಕಾಪಾಡಿದ ನಿಜವಾದ ಹೀರೊ ರಾಕೇಶ್ ಬರಿಯಾ.
ರಾಕೇಶ್ ಅವರ ಕಾರ್ಯವನ್ನು ಗುರುತಿಸಿ ರತ್ಲಾಮ್ ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನೀತ್ ಗುಪ್ತಾ ಅವರು ೫೦೦೦ ರೂಪಾಯಿ ನೀಡಿ ಗೌರವಿಸಿದ್ದಾರೆ.
- ಆಕೃತಿ ನ್ಯೂಸ್